ಅಂಕಣ ಬರಹ
ಸಂವೇದನೆ-
ಭಾರತಿ ನಲವಡೆ
ಖಿನ್ನತೆ
ಕಾಮಾಕ್ಷಮ್ಮ ಕೆಲಸಕ್ಕೆ ಹೋಗುವ ಸೊಸೆ ಪ್ರತಿಭಾಳ ಕುರಿತು ಸದಾ ವಟವಟ ಮಾತನಾಡುತ್ತಿದ್ದಳು.ಅವಳಿಲ್ಲದ ಹೊತ್ತಿನಲ್ಲಿ “ಏನೂಂತ ಕಟ್ಕೊಂಡೆ ಸುರೇಶ, ಇವಳಿಗೆ ಸರಿಯಾಗಿ ಅಡುಗೆ ಕೂಡ ಮಾಡಲು ಬರಲ್ಲಾ ಎಲ್ಲಾ ನನ್ನ ಕರ್ಮ, ನಯ ನಾಜೂಕಾಗಿ ಕೆಲಸ ಮಾಡುವದಂತೂ ಗೊತ್ತೇ ಇಲ್ಲ”ಎಂದು ಆಗತಾನೆ ಮದುವೆಯಾದ ಇನ್ನೂ ಹಸಿಬಿಸಿ ಎಂತಿದ್ದ ಸುರೇಶನಿಗೆ ಸೊಸೆಯ ಚಾಡಿಯನ್ನು ಹೇಳತೊಡಗಿದಾಗ” ಅಮ್ಮಾ ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿದೆ ನಿಧಾನವಾಗಿ ಹೊಂದಿಕೊಳ್ಳುತ್ತಾಳೆ ಬಿಡು, ನಿನ್ನ ಕೈಲಾದಷ್ಟು ಮಾಡು ಬಟ್ಟೆಯನ್ನಂತೂ ವಾಷಿಂಗ ಮಿಷನ್ ಗೆ ಹಾಕು, ಕಸ ಮುಸುರೆಗೆ ಆಳು ಹುಡುಕಿದರಾಯಿತು,ಎಂದು ಮಾತು ಮುಗಿಸುವಷ್ಟರಲ್ಲಿ “ಆಳು ಮಾಡಿದ್ದು ಹಾಳು, ನನಗೆ ಸರಿಬರಲ್ಲ ನಿನ್ನ ಹೆಂಡತಿಗೆ ತಿಳಿಸಿ ಹೇಳು, ಸೊಸೆ ಬಂದರೂ ನನಗೆ ಮಾತ್ರ ಕೆಲಸ ತಪ್ಪಿದಲ್ಲ ಎಂದು ಗೊಣಗುತ್ತ ಕೆಲಸ ಮಾಡುತ್ತಿದ್ದಳು. ಪ್ರತಿಭಾ ಪಕ್ಕದ ಬಸವನಗರದ ನಿವಾಸಿ ಬ್ಯಾಂಕ್ ಉದ್ಯೋಗದಲ್ಲಿದ್ದ ಸುರೇಶನಿಗೆ ಹೆಣ್ಣು ನೋಡಲು ಕಾಮಾಕ್ಷಮ್ಮ ಮಾಡದ ಪೂಜೆ, ವೃತಗಳೇ ಇಲ್ಲ . ಗುಡ್ಡ ಸುತ್ತಿ ಮೈಲಾರಕ್ಕೆ ಹೋಗು ಎಂಬಂತೆ ದೂರದ ಊರುಗಳಿಗೂ ಏಜೆಂಟರೊಂದಿಗೆ ಹೆಣ್ಣು ಹುಡುಕಿದ್ದು ಕಾಮಾಕ್ಷಮ್ಮನಿಗೆ ಇಷ್ಟವಾದರೆ ಸುರೇಶನಿಗೆ ಇಷ್ಟವಾಗುತ್ತಿರಲಿಲ್ಲ. ಹೀಗೆ ಸಾಗಿತ್ತು ವಧುಗಳ ಬೇಟೆ. ಇಬ್ಬರು ದುಡಿದರೆ ಮಾತ್ರ ಮುಂದೆ ಸುಖಜೀವನ ನಡೆಸಬಹುದೆಂಬುದು ಸುರೇಶನ ಅಂಬೋಣ.ತಾಯಿಯ
ದೂರದ ಸಂಬಂಧಿಯೊಬ್ಬರಿಂದ ಪ್ರತಿಭಾಳ ಬಯೋಡಾಟ ಪಡೆದು ಅವಳನ್ನು ನೋಡಲು ಹೋಗಿದ್ದು ಅವರ ಮನೆಯ ತುಸು ಮುಂದಿನ ಬಸವನಗರ ಬಡಾವಣೆಗೆ.ಖಾಸಗಿ ಪದವಿಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಳು.ತಕ್ಕಮಟ್ಟಿಗೆ ಸಂಬಳ ಕೂಡ ಇತ್ತು.ಹೀಗೆ ಕುದುರಿದ ಮದುವೆ ಅದ್ದೂರಿಯಾಗೆ ನೆರವೇರಿತು. ಸದಾ ಪುಸ್ತಕದ ಒಡನಾಟದಿಂದ ಇದ್ದ ಪ್ರತಿಭಾಳಿಗೆ ಅತ್ತೆಯ ಸುಪ್ರಭಾತ ದಿನಂಪ್ರತಿ ಕಿರಿ ಕಿರಿ ಎನಿಸತೊಡಗಿತು.ಕ್ರಮೇಣ ಪತಿ ಕೂಡ ತಾಯಿಯ ವಕಾಲತ್ತನ್ನು ವಹಿಸಿ ಮಾತನಾಡತೊಡಗಿದಾಗ ಸಪ್ತಪದಿ ತುಳಿದು ಸಂಗಾತಿಯಾಗಿ ಬಂದವಳ ಮನವನರಿಯದೇ ಇದ್ದ ಸುರೇಶನ ಬಗ್ಗೆ ಬೇಸರವೆನಿಸತೊಡಗಿತು. ಆದರೂ ಹೆತ್ತವರ ಗೌರವಕ್ಕೆ ಆದ್ಯತೆ ನೀಡುವ ಸಲುವಾಗಿ ತನ್ನ ಆಧುನಿಕ ಜೀವನಶೈಲಿಯಿಂದ ಸಾಂಪ್ರದಾಯಿಕತೆಗೆ ನಿಧಾನವಾಗಿ ಹೊಂದಿಕೊಳ್ಳತೊಡಗಿದಳು. ಇಷ್ಟಾದರೂ ನೆಂಟರಿಷ್ಟರ ಮುಂದೆ ನೆರೃಹೊರೆಯವರ ಮುಂದೆ “ಇವಳಿಗೆ ಸರಿಯಾಗಿ ಅಡುಗೃ ಬರಲ್ಲ, ಉಪವಾಸ ವೃತಗಳಿಲ್ಲ”ಎಂದಾಗ ಮನನೊಂದು ಪತಿಗೆ ತಿಳಿಸಿದಾಗ ತಿಂಗಳ ಅವಳ ಸಂಬಳ ಎಣಿಸುತ್ತಿದ್ದ ಪತಿ ತಾಯಿಯ ಈ ನಡೆಯ ಕುರಿತು ಪತ್ನಿಗೆ ಅವಳು ಹಳೆಯ ಕಾಲದೋಳು ನೀನೆ ಅನುಸರಿಸಿಕೊಂಡು ಹೋಗು ಎಂದು ಸ್ವಲ್ಪ ಕೂಡ ಆತ್ಮಿಯವಾಗಿ ನುಡಿಯದ ಪತಿಯ ಮನೋಧೋರಣೆಯಿಂದ ಖಿನ್ನತೆಗೆ ಒಳಗಾದಳು ಹೆತ್ತವರಿಗೆ ಬೇಸರವಾಗುವದೆಂದು ಈ ವಿಷಯ ತಿಳಿಸಲಿಲ್ಲ. ಇತ್ತ ಕೆಲಸದಲ್ಲೂ ಆಸಕ್ತಿ ಇರದೇ ಸದಾ ಸಮಾಧಾನ ಶಾಂತಿಗಾಗಿ ಹಾತೊರೆವ ಮನ ರೆಕ್ಕೆ ಕತ್ತರಿಸಿದ ಹಕ್ಕಿಯಂತಾಯ್ತು. ಹಬ್ಬಕ್ಕೆ ತವರುಮನೆಗೆ ಹೋದಾಗ ಮಂಕುಕವಿದಂತಿರುವ ಅವಳ ನಡೆಯನ್ನು ಗಮನಿಸಿದ ಅವಳ ತಾಯಿ ಮತ್ತು ಅಣ್ಢ ಅವಳನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ಯುವ ಪ್ರಸಂಗ ಬಂದಿತು. ಹುಟ್ಟಿದ ಮನೆಯನ್ನು ಹೆತ್ತವರನ್ನು ತೊರೆದು ಬಂದ ಹೆಣ್ಣು ತನ್ನ ಗಂಡನ ಮನೆಯ ಪರಿಸರಕ್ಕೆ ಹೊಂದಿಕೊಳ್ಳಲು ತುಸು ಸಮಯ ಬೇಕು.ಮನೆಯ ಸದಸ್ಯರು, ಅವರ ಸಂಪ್ರದಾಯ ,ಊಟ ಹೀಗೆ ಪ್ರತಿಯೊಂದನ್ನು ತಿಳಿದು ಕಲಿತು ನಡೆಯುವಲ್ಲಿ ತಪ್ಪುಗಳಾಗುವದು ಕೂಡ ಸಹಜ.ಇದನ್ನೆ ಚುಚ್ಚಿ ಚುಚ್ಚಿ ಅವಳ ಮನವನ್ನು ಘಾಸಿಗೊಳಿದರೆ ಮನಸಿಗೆ ಆಗುವ ಖೇದದ ಬಗ್ಗೆ ಆ ಸ್ಥಾನದಲ್ಲಿದ್ದು ವಿಚಾರಿಸಿ ಪರಾಂಬರಿಸುವ ಅವಶ್ಯಕತೆಯಿದೆ. ಮತ್ತೆ ಕೆಲವೊಮ್ಮೆ ಇನ್ನೂ ಸರಿಯಾಗಿ ಹೊಂದಿಕೊಳ್ಳುತ್ತಿರುವಾಗ ಗರ್ಭಧರಿಸಿದರಂತೂ ತಮ್ಮ ಆರೋಗ್ಯ ಜೊತೆಗೆ ವೃತ್ತಿ ಮತ್ತು ಕುಟುಂಬದ ಒಂದು ಭಾಗವಾಗಿ ಕೆಲಸ ಮಾಡಲು ಪರಿತಪಿಸೀವ ಪರಿ ದೇವರೇ ಬಲ್ಲ!
ಹೆಣ್ಣು ಬಾಲ್ಯದ ನಂತರ ಹದಿಹರಯಕ್ಕೆ ಕಾಲಿಡುತ್ತಿರುವಾಗಲೆ ಹಾರ್ಮೋನುಗಳಿಂದುಂಟಾಗುವ ಬದಲಾವಣೆಗೆ ತಕ್ಷಣ ಹೊಂದಿಕೊಳ್ಳಲಾಗದು,ಆದರ ನಂತರದ ಪ್ರೌಢಾವಸ್ಥೆಯ ನಂತರ ಹುಡುಗರೊಂದಿಗೆ ಬೆರೆಯಕೂಡದು,ಸಂಜೆ ಯಾವ ಗೆಳತಿಯರ ಮನೆಗೆ ಹೋಗಲು ವಹಿಸಿದ ನಿರ್ಬಂಧ, ಉಡುಪುಗಳ ಧರಿಸುವಿಕೆ,ಆಟ ಕುರಿತ ಬದಲಾವಣೆಗಳೂ ಕೂಡ ಮಾನಸಿಕ ಖಿನ್ನತೆಗೆ ಒಳಪಡುವಂತೆ ಮಾಡುತ್ತವೆ.ಹೆಣ್ಣಾದ್ದರಿಂದ ಮನೆಯಲ್ಲಿ ನೀಡುವ ದ್ವಿತೀಯ ದರ್ಜೆಯ ಸ್ಥಾನ ಕೂಡ ಮನದ ಚೈತನ್ಯವನ್ನೇ ಕುಗ್ಗಿಸುತ್ತದೆ.
ಒಂದು ಅಧ್ಯಯನದ ಪ್ರಕಾರ ಮಾನಸಿಕ ಶುಶ್ರೂಷಾ ಕೇಂದ್ರಕ್ಕೆ ಹೋಗುವ ಮಹಿಳೆಯರು ಸಾಧಾರಣ 30 ರಿಂದ 35 ವಯಸ್ಸಿನವರಲ್ಲಿ ಹೆಚ್ಚಾಗಿದೆ.ಮದುವೆಯ ನಂತರದ ಹೊಂದಾಣಿಕೆಯ ಸಮಸ್ಯೆ ದೀರ್ಘವಾದಾಗ ಖಿನ್ನತೆಯಾಗುತ್ತದೆ.
ಮೊನ್ನೆಯಷ್ಟೇ ಪತ್ರಿಕೆಯಲ್ಲಿ ಓದಿದ ಸುದ್ಧಿ ಸಿಡಿಲು ಬಡಿದಂತಾಯಿತು, ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ತಾನು ದಪ್ಪವಾಗಿದ್ದೇನೆ ಎಂಬ ಕಾರಣದಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮರೆಯಲಾಗದು.ಸ್ವಲ್ಪ ತಾಳ್ಮೆಯನ್ನು ತೆಗೆದುಕೊಂಡಿದ್ದರೆ ತನ್ನ ಉಜ್ವಲ ವೈದ್ಯಳಾಗುವ ಗುರಿಯನ್ನು ನೆನಪಿಸಿಕೊಂಡಿದ್ದರೆ ಒಬ್ಬ ಉತ್ತಮಮಾನವಸಂಪನ್ಮೂಲವಾಗುವ ಭರವಸೆ ಇತ್ತು. ಮೊಬೈಲ್ನ ಅತಿಯಾದ ಬಳಕೆ ಕೂಡ ಖಿನ್ನತೆಯ ಹೆಚ್ಚಳಕ್ಕೆ ಕಾರಣವಾಗಿದೆ.
ಹೆಣ್ಣು ಪ್ರೌಢಾವಸ್ಥೆ ತಲುಪಿದಾಗ ಎಲ್ಲರೂ ನೋಡುವ ವಿಭಿನ್ನ ದೃಷ್ಟಿಕೋನ, ಬಾಲ್ಯದಲ್ಲಿ ಅವಳ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಲಾಗದ ಹತಾಶಭಾವನೆ ಮತ್ತು ಪ್ರಸವದ ನಂತರ ಬಾಣಂತಿ ಸನ್ನೆ ,45ರ ನಂತರ ಮೆನೊಪಾಸ್ ಅವಧಿಯಲ್ಲಿ ಕೂಡ ಈ ಖಿನ್ನತೆ ಕಾಡುವುದಿದೆ.ತಮಗೆ ವಯಸ್ಸಾಗಿದೆ ಆಕರ್ಷಣೆ ಕಡಿಮೆಯಾಗುತ್ತಿದೆ ಎಂದು ಬ್ಯುಟಿ ಪಾರ್ಲರ್ ಹಾಗೂ ಕಿಟೋ ಡಯಟ್ಗೆ ಮೊರೆಹೋಗಲು ಹಾತೊರೆದ್ದದ್ದಿದೆ. ಆಕಸ್ಮಿಕವಾಗಿ ಗಂಡನನ್ನು ಕಳೆದುಕೊಂಡ ವಿಧವೆ ಆಸ್ತಿ ನೀಡದೇ ಅತ್ತೆ ಮನೆಯಿಂದ ಹೊರದಬ್ಬಿದ ಘಟನೆಗಳು ಕೂಡ ಎಂದೂ ಮನೆ ಬಿಟ್ಟು ಹೊರ ಜಗತ್ತನ್ನು ನೋಡದೇ ಕೇವಲ ಅಡುಗೆ ಮಾಡಿ ಬಡಿಸಿ ಮನೆಯವರ ಕ್ಷೇಮ ಕಾಯುವ ಗೃಹಿಣಿ ಏನೊಂದು ತೋಚದೇ ಇತ್ತ ಹೆತ್ತವರಿಗೂ ಭಾರವಾಗಲು ಬಯಸದೇ ತನ್ನ ಮಕ್ಕಳಿಗೋಸ್ಕರ ಕೆಲಸಕ್ಕಾಗಿ ಅಲೆದು ಬಳಲಿ ಬೆಂಡಾಗಿ ಕೊನೆಗೆ ಯಾರ ಬೆಂಬಲ ಸಿಗದೇ ಶೋಷಣೆಗೆ ಒಳಗಾಗಿ ತಾನೆಂದೂ ಕಲ್ಪಿಸದ ಈ ಕ್ಷಣಗಳ ನೆನೆದು ಖಿನ್ನತೆಯ ಕೂಪಕ್ಕೆ ಜಾರುವ, ಕೀಳರಿಮೆ ನಕಾರಾತ್ಮಕಭಾವದಿಂದ ನರಳುವ ಸನ್ನಿವೇಶ ಇಲ್ಲವೆಂದಿಲ್ಲ.
ಈ ಖಿನ್ನತೆ ಎಂಬುದು ನಮ್ಮ ದಿನ ನಿತ್ಯದ ಕಾರ್ಯ ಚಟುವಟಿಕೆಗಳನ್ನು ಸಂತೋಷದಾಯಕವಾಗಿ ಹಾಗೂ ಶೃದ್ಧೆಯಿಂದ ಮಾಡಲಾಗದ ಸದಾ ದುಃಖ ಬೇಸರದಿಂದ ಇರುವ ಮನಸ್ಥಿತಿಯಾಗಿದೆ.
ನಮ್ಮ ಅತ್ಮೀಯರನ್ನು ಕಳೆದುಕೊಂಡಾಗ ಮರೆಯಲಾಗದೆ ಅವರ ನೆನಪುಗಳಲ್ಲಿ ಕಳೆದುಹೋಗುತ್ತೆವೆ.ಊಟ,ನಿದ್ರೆ,ಸೇರದೇ ಮೌನದಿಂದ ಅಂತರಮುಖಿಗಳಾಗಿಬಿಡುತ್ತೇವೆ.
ವಯಸ್ಸಾದಾಗ ವೃದ್ದಾಪ್ಯದ ದಿನಗಳಲ್ಲಿ ಇಳಿಸಂಜೆಯಲ್ಲಿ ದಿನಕಳೆವ ಹಿರಿಜೀವ ವಾತ್ಸಲ್ಯ,ಕಾಳಜಿಯನ್ನು ಬಯಸುತ್ತದೆ.ಇದರ ಕೊರತೆಯಾದಾಗ ಕೂಡ ಮುಂದೆ ಹತ್ತಾರು ವರ್ಷ ಬದುಕುವ ಜೀವ ಖಿನ್ನತೆಯ ಪರಿಣಾಮವಾಗಿ ಚಿಂತೆ ಎಂಬ ಚಿತೆಯ ಮೇಲೆ ಮಲಗಿಸಿ ಆನಂದವನ್ನು ಬತ್ತಿಸುತ್ತದೆ. ಸಾಮಾಜಿಕ ಜಾಲತಾಣದ ಅತಿಯಾದ ಬಳಕೆ ಕೂಡ ಖಿನ್ನತೆಗೆ ಕಾರಣ.
ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಪ್ ಮೆಂಟಲ್ ಹೆಲ್ತ್ ಪ್ರಕಾರ ಅಂದಾಜು 14.8 ಮಿಲಿಯನ್ ವಯಸ್ಕರು 2020ರಲ್ಲಿ ತೀವ್ರ ದುರ್ಬಲತೆಯಾಗಿ ಖಿನ್ನತೆಗೆ ಜಾರಿ ಮಾನಸಿಕ ಚಿಕಿತ್ಸೆಗೆ ಒಳಗಾಗಿದ್ದರು. ಒಂದು ಸಮೀಕ್ಷೆಯ ಪ್ರಕಾರ 60% ರಷ್ಟು ಜನ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ.ಮಾನಸಿಕ ಅಸ್ವಸ್ಥತೆಗಳ ರೋಗ ನಿರ್ಣಯ ಮತ್ತು ಅಂಕಿ ಅಂಶಗಳ ಕೈಪಿಡಿ DSM-5ಪ್ರಕಾರ ಕೆಲವೊಮ್ಮೆ ಖಿನ್ನತೆಯು ಕುಟುಂಬದ ವಂಶವಾಹಿಗಳ ಮೂಲಕ ಬರುವ ಸಾಧ್ಯತೆ ಇರುತ್ತದೆ.ಖಿನ್ನತೆಯು ಹಲವಾರು ಕಾಯಿಲೆಗಳ ತವರು. ಅದು ಬರದಂತಿರಬೇಕಾದರೆ ಅತೀಯಾಗಿ ಯೋಚಿಸುವದು,ದುಃಖ,ಆಗಿ ಹೋದ ಕೆಟ್ಟ ಘಳಿಗೆಯನ್ನು ಮರೆತು ಯೋಗ,ಧ್ಯಾನ,ನಡಿಗೆಯಂತಹ ದಿನಚರಿಯೊಂದಿಗೆ ಅಧ್ಯಾತ್ಮದ ಒಲವು ನಮ್ಮ ತಾಳ್ಮೆ ನಿಷ್ಠೆಗೆ ಬಲವಾಗುವಲ್ಲಿ ಸಂಶಯವಿಲ್ಲ.ನಾವು ಸದಾ ಕ್ರಿಯಾಶೀಲರಾದಾಗ ನಮ್ಮಲ್ಲಿ ಸಕಾರಾತ್ಮಕಭಾವನೆಗಳು ಭಾವದೀಪ್ತಿಯನ್ನು ಬೆಳಗಲು ಸಾಧ್ಯ.
ಅದರ ಲಕ್ಷಣಗಳನ್ನರಿತು ಸೂಕ್ತ ಕಾಲದಲ್ಲಿ ಚಿಕಿತ್ಸೆ ಪಡೆಯಬೇಕು.ಒಬ್ಬಳು ಸ್ತ್ರೀ ಒಂದು ಕುಟುಂಬದ ಕಣ್ಣು ಅಷ್ಟೇ ಅಲ್ಲ ಸುಶಿಕ್ಷಿತ ಸಂಸ್ಕಾರಯುತ ಸಮಾಜದ ಶಿಲ್ಪಿ, ಅವಳು ಕುಟುಂಬದ ಸುಖಕ್ಕಾಗಿ ನೀಡುವ ವೇಳೆಯ ನೆನೆದು ಅವಳಿಗಾಗಿ ಸಮಯ ನೀಡಿ. ಆರೋಗ್ಯಕರವಾದ ದೇಹದಲ್ಲಿ ಆರೋಗ್ಯಕರವಾದ ಮನಸ್ಸು ಇರುವಂತೆ ಆರೋಗ್ಯಕರವಾದ ಸದಾ ಸಂತಸದಿಂದ ಇರುವ ಮಹಿಳೆಯೇ ಆ ಮನೆಯ ಸಂತುಷ್ಟ ಲಕ್ಷ್ಮಿ. “ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೇ…
ಸ್ತ್ರೀ ಅಂದರೆ ಅಷ್ಟೇ ಸಾಕೆ”
ಎಂಬ ಕವಿ ಜಿ.ಎಸ್. ಶಿವರುದ್ರಪ್ಪನವರ ನಲ್ನುಡಿಯಂತೆ ಸತಿಯಾಗಿ,ಮಗಳಾಗಿ,ಸೊಸೆಯಾಗಿ,ತಾಯಾಗಿ,ಸಹೋದರಿಯಾಗಿ ಬದ್ಧತೆಯ ಕಾಯಕಯೋಗಿನಿಗೆ ನಿಮ್ಮ ಮಮತೆ.ಕರುಣೆ.ಸಹಕಾರ.ಸ್ಪಂದನೆ ಇದ್ದಷ್ಟೂ ಬಾಳು ನಂದನವನವಾಗುತ್ತದೆ.
ಭಾರತಿ ನಲವಡೆ
ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ