ಇಂದು ಮದುವೆ ನಾಳೆ ವಿಚ್ಛೇದನ-ಅಮರಾವತಿ ಹಿರೇಮಠ

ಲೇಖನ

ಇಂದು ಮದುವೆ ನಾಳೆ ವಿಚ್ಛೇದನ

ಅಮರಾವತಿ ಹಿರೇಮಠ

ಮದುವೆ” ಮಾಡಿ ಕೊಂಡು ಮೂರು ದಿನ ಬಾಳ್ವೆ ಮಾಡದೆ
ವಿಚ್ಛೇದನ ಪಡೆಯುವುದು ಸರ್ವೇ ಸಾಮಾನ್ಯವಾಗಿದೆ .
ಏಕೆಂದರೆ ?
ವಾಟ್ಸಪ್ , ಫೇಸ್ಬುಕ್, ಆಫೀಸ್
ಪಾರ್ಕ್, ಕಾಲೇಜುಗಳಲ್ಲಿ ಹುಟ್ಟಿದ ಪ್ರೀತಿ ಇರುವುದರಿಂದ
ಬರೀ ಆಕರ್ಷಣೆಯ ಪ್ರೀತಿ ಪ್ರೇಮ ಪ್ರಣಯ ಹೊರತು , ಅಂತರಾಳದಿಂದ ಬಂದದ್ದು ಅಲ್ಲ .
ಒಂದು ಸಲ ಮನಸ್ಸು ಕೊಟ್ಟರೇ ಕೊನೆಯತನಕ ಉಳಿಸಿಕೊಂಡು ಹೋಗಬೇಕು.
ಅದು ನಿಜವಾದ ಪ್ರೀತಿ .
ಒಬ್ಬರಿಗಾಗಿ ಒಬ್ಬರು ತ್ಯಾಗ ಮಾಡುವುದು ನಿಜವಾದ ಪ್ರೀತಿ.
ಮದುವೆ ಆದ ಮೇಲೆ ಸಹನೆ ತಾಳ್ಮೆ ತ್ಯಾಗ ಇದ್ದಾಗಲೇ ದಾಂಪತ್ಯದ ಜೀವನಕ್ಕೆ ಅರ್ಥ .
ಜನ್ಮ ಕೊಟ್ಟ ಹೆತ್ತು ಹೊತ್ತು ಸಾಕಿದ ತಂದೆ ತಾಯಿಯರ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಇಂದಿನ ಯುವ ಪೀಳಿಗೆ ನಾಲ್ಕು ದಿನದ ಪ್ರೀತಿಗೆ ಮಾರುಹೋಗಿ ತಮ್ಮ ಸರ್ವಸ್ವವನ್ನೂ ಒಪ್ಪಿಸಿ ಬರಿದಾದ ಹೃದಯಗಳ ಜೊತೆಗೆ ಸಂಸಾರ ಮಾಡುವುದು.
ಹೃದಯವೇ ಇಲ್ಲದ ಮೇಲೆ ಒಳ್ಳೆಯ ಚಿಂತನೆಗಳು ಎಲ್ಲಿ ಹುಟ್ಟಬೇಕು .
ಹೀಗಾಗಿಯೇ ಕಲಹಕ್ಕೆ ದಾರಿಗಳು.

ಮದುವೆ ಎನ್ನುವುದು ಮಕ್ಕಳಾಟ ಅಲ್ಲ .
ಆದರೆ ಇಂದಿನ ಮಕ್ಕಳಿಗೆ ಮದುವೆ ಎನ್ನುವುದು ಮಕ್ಕಳಾಟ ಆಗಿದೆ .
ಬೇಕಾದಾಗ ಸಂಬಂಧ ಇಟ್ಟು ಕೊಳ್ಳುವುದು. ಬೇಡವೆಂದಾಗ ವಿಚ್ಛೇದನ ಪಡೆಯುವುದು .
ಸಾಮರಸ್ಯ ದಾಂಪತ್ಯದ ಜೀವನಕ್ಕೆ ಅರ್ಥವೇ ಇಲ್ಲದಂತಾಗಿದೆ .
ಏಕೆಂದರೆ ?
ಹಿಂದಿನ ಕಾಲದಂತೆ ಈಗಿಲ್ಲ . ಹಿಂದೆ ಎಲ್ಲಾ ಹಿರಿಯರು ಒಪ್ಪಿದ ಸಂಬಂಧದ ಮದುವೆಯಾಗಿತ್ತು . ಹುಡುಗ ಹುಡುಗಿ ಒಬ್ಬರನೊಬ್ಬರು ನೋಡದೆ , ಅವರುಗಳ ತಂದೆ ತಾಯಿ ಅಜ್ಜ ಅಜ್ಜಿ ನೋಡಿದ ಹುಡುಗಿಯನ್ನು ಒಪ್ಪುವುದು.
ಹುಡುಗಿಯು ಅಷ್ಟೇ ಮನೆಯ ಎಲ್ಲಾ ಸದಸ್ಯರು ನೋಡಿದ ಹುಡುಗನನ್ನು ಮದುವೆಯಾಗಲು ಒಪ್ಪಿದ ನಂತರ ಎರಡು ಕಡೆಯ ಮನೆಯವರು ‌ಅದ್ಧೂರಿಯಾಗಿ ಮದುವೆ ಮಾಡುವುದು .
ಆ ಮದುವೆಗೆ ಅರ್ಥವಿತ್ತು.ಸಾಮರಸ್ಯದ ಬದುಕಿತ್ತು . ಬದುಕಿನುದ್ದಕ್ಕೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುತ್ತಿದ್ದರು .ಆದರೆ ಈಗ ಹಾಗಲ್ಲ. ಹುಡುಗ ಹುಡುಗಿ ಒಬ್ಬರಿಗೊಬ್ಬರು ಇಷ್ಟ ಪಟ್ಟ ಮೇಲೆಯೇ ಮನೆಯವರಿಗೆ ಪ್ರವೇಶ . ಮನೆಯವರು ಒಪ್ಪಿದರೆಷ್ಟು ಬಿಟ್ಟರೆಷ್ಟು ತಾವು ನಿರ್ಧಾರ ಮಾಡಿದ ಮೇಲೆ ಮದುವೆ ಆಗಲೇಬೇಕು .
” ಮಕ್ಕಳ ಇಚ್ಛೆಯಂತೆ ಹಿರಿಯರು ತಮ್ಮ ಸ್ವಾಭಿಮಾನ ಬಿಟ್ಟು ಮುಂದೆ ನಿಂತು ಮದುವೆ ಮಾಡುವುದು .
ಮಕ್ಕಳಿಗೆ ಅನುಕೂಲಕ್ಕಾಗಿ ಏನೇನೆಲ್ಲಾ ಬೇಕು ಅದನೆಲ್ಲಾ ಒದಗಿಸಿ ಕೊಡುವುದು.
ಮಕ್ಕಳು ಸುಖವಾಗಿ ಇರಲೆಂದು .
ಮಕ್ಕಳ ಮನಸ್ಸಿಗೆ ನೋವಾದ್ರೆ ಹೇಗೆ ಎಂದು ಯೋಚಿಸುತ್ತಾ ತಮ್ಮ ಮನೆಯ ಸಂಪ್ರದಾಯಗಳು ಒಂದೊಂದೇ ಮೂಲೆಗೆ ಸೇರಿಸಿ ಬಿಡುವುದು.ಆದರೂ ಮನೆಯಲ್ಲಿ ಮೊದಲಿನ ವಾತಾವರಣ ಇಲ್ಲ .

ದಾಂಪತ್ಯ ದೇಗುಲಕ್ಕೆ ಅಧಿದೇವತೆಯಾದ ಸತಿ ( ಧರ್ಮಪತ್ನಿ )ಯಾದವಳು ಮನೆಗೆ ಮಹಾಲಕ್ಷ್ಮಿಯಾಗಿ ಬಂದು ಸಹನಾ ಶಕ್ತಿಯಾಗಿ , ಕುಟುಂಬಕ್ಕೆ ಆಧಾರ್ ಸ್ತಂಭವಾಗಿ ಸಂಸಾರದ ನೊಗ ಹೊತ್ತ ಸಾಗುವ ಭೂತಾಯಿಯ ಸ್ಥಾನ ತುಂಬಿದರೆ ಸಂಸಾರ ಸುಖ ಸಾಗರ .ಅದೇನೊ ನಿಜ . ಆದರೆ ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಲ್ಲಿ ತಾಳ್ಮೆಯೆನ್ನುವುದು ಕಡಿಮೆ ಆಗಿದೆ. ಮೂಗಿನ ಮೇಲೆ ಕೋಪ . ಸಾಕಷ್ಟು ಪುಸ್ತಕಗಳು ಓದಿರುವುದೇನು ಸರಿ . ಆದರೆ ಇನ್ನೊಬ್ಬರ ಮನಸ್ಸುಗಳು ಓದಲು ಬರುವುದಿಲ್ಲ . ಸ್ಪಂದಿಸುವ ಗುಣ ಮೊದಲೇ ಇರುವುದಿಲ್ಲ .”
ಗಂಡನ ಮನೆ ನನ್ನದು .ಇಲ್ಲಿ ಇರುವ ಜೀವಗಳು ನನ್ನ ಅಂತರಾತ್ಮದ ಆತ್ಮಗಳು ಎನ್ನುವ ಭಾವ ಇರಬೇಕು .ನನ್ನ ಗಂಡನ ಮನೆ ಅಂದ್ರೆ ದೇವಲಾಯ‌ ಇಲ್ಲಿಯೇ ನನ್ನ ಬದುಕಿದೆ ಭವಿಷ್ಯ ಇದೆ ಎಂಬ
ಮನೋಭಾವ ಇದ್ದರೆ ಒಳ್ಳೆಯದು . ಇಂತಹ ಸದ್ಗುಣಗಳನ್ನು ತುಂಬಿದ ಹೆಣ್ಣು ಸಿಗುವುದು ಅಪರೂಪ . ಏಕೆಂದರೆ ಅವರಲ್ಲಿ ಸ್ವಾರ್ಥದ ಭಾವನೆಗಳು ಇರುವುದರಿಂದ ಗಂಡನ ಮನೆಯವರನ್ನು ತಮ್ಮ ವೈರಿಗಳಂತೆ ಕಾಣುತ್ತಾರೆ . ಅಲ್ಲದೆ ತಮ್ಮ ತಾಯಿಯ ಸ್ವಲ್ಪವಾದರೂ ಗುಣಗಳು ಬಂದಿರುತ್ತವೆ . ಅದಕ್ಕೆ ಪೂರ್ವಜರು ಹೇಳುತ್ತಿದ್ದರು .” ನೂಲಿನಂತೆ ಸೀರೆ , ತಾಯಿಯಂತೆ ಮಗಳು “ಹೆಣ್ಣು ತರಬೇಕು ಅಂದ್ರೆ ಅವರ ಮನೆತನ ನೋಡುತ್ತಿದ್ದರು .
ಈಗ ಯಾವುದು ನೋಡುವುದಿಲ್ಲ . ಹುಡುಗಿಯ ರೂಪ ಬಣ್ಣ ನೋಡುತ್ತಾರೆ . ಹುಡುಗಿ ಓದಿರಬೇಕು ವರದಕ್ಷಿಣೆ ತರುವಂತೆ ಇರಬೇಕು . ಇಷ್ಟೇಲ್ಲಾ ಇರುವ ಹೆಣ್ಣು ಮಕ್ಕಳು
ತಮ್ಮ ತವರು ಮನೆಯಲ್ಲಿ ಹಾರಾಡುವ ಹಕ್ಕಿಯಂತೆ ಹಾರಾಡುತ್ತಿದ್ದ ಮನಸ್ಸುಗಳು ಬೇರೆಯೊಂದು ಗೂಡು ಸೇರಿದಾಗ ಸದ್ದಿಲ್ಲದೆ ಅವರಲ್ಲಿ ಬದಲಾವಣೆ ಕಂಡು ಬರುತ್ತದೆ .
ಈ ಬದಲಾವಣೆಯಿಂದ ತುಂಬಿದ ಕುಟುಂಬದಲ್ಲಿ ಅರ್ಥಕ್ಕೆ ಅನರ್ಥಗಳು ಹುಟ್ಟುತ್ತಾ ಕಲಹಗಳು ತಲೆ ಎತ್ತಿ ನಿಲ್ಲುತ್ತವೆ .
ಗಂಡಂದಿರು ತಮ್ಮ ಮಾತು ಕೇಳಿದರೆ ಬೇರೆ ಮನೆ ಮಾಡಿ ಹೋಗುವುದು . ಗಂಡ ಮಾತು ಕೇಳಲಿಲ್ಲಾಂದ್ರೆ ತವರು ಮನೆಗೆ ಹೋಗಿ ಕುಳಿತು ಆಟ ಆಡಿಸುವುದು . ಹೀಗಾದರೆ ದಾಂಪತ್ಯ ಜೀವನಕ್ಕೆ ಅರ್ಥ ಉಂಟೆ.

ದಾಂಪತ್ಯ ಎಂಬುದು ಪವಿತ್ರವಾದ ಬಂಧನ. ನಾಲ್ಕು ಗೋಡೆಗಳ ಮಧ್ಯೆಯೇ ರಹಸ್ಯವಾಗಿ ಇರಬೇಕಾದ ಗುಟ್ಟುಗಳು ಇಂದು ಬೀದಿ ರಂಪವಾಗಿವೆ . ಒಬ್ಬರನೊಬ್ಬರು ಅರ್ಥೈಸಿಕೊಂಡು ಹೊಂದಾಣಿಕೆಯಿಂದ ಸಂಸಾರ ಮಾಡಬೇಕು.
ಮನೆ ಅಂದ ಮೇಲೆ ನಾಲ್ಕು ಮಾತುಗಳು ಬರುತ್ತವೆ ಹೋಗುತ್ತವೆ . ಅದನ್ನು ಅಲ್ಲಿಯೇ ಬಿಟ್ಟು ಮುನ್ನಡೆಯಬೇಕು .
ಗಂಡನ ಮನೆಯ ವಿಷಯಗಳು ತವರು ಮನೆಯಲ್ಲಿ ಹೇಳಬಾರದು.
ತವರು ಮನೆಯ ವಿಷಯಗಳು ಗಂಡನ ಮನೆಯಲ್ಲಿ ಹೇಳಬಾರದು .
ಒಂದು ಹೆಣ್ಣಿಗೆ ಗಂಡನ ಮನೆ ಮತ್ತು ತವರು ಮನೆ ತನ್ನ ಎರಡು ಕಣ್ಣುಗಳು ಇದ್ದಂತೆ , ಒಂದಕ್ಕೆ ಪೆಟ್ಟಾದರೂ ಇನ್ನೊಂದು ಕಣ್ಣಲ್ಲಿ ನೀರು ಬರುತ್ತದೆ.
ಹೀಗಿರುವಾಗ ; ತನ್ನ ಬುದ್ಧಿವಂತಿಕೆಯಿಂದ ಎರಡು ಮನೆತನದ ಮಾನ ಮರ್ಯಾದೆ ಕಾಪಾಡಿಕೊಂಡು ಎಲ್ಲರ ಪ್ರೀತಿ ಗಳಿಸಿಕೊಳ್ಳುವುದು ಹೆಣ್ಣಿನ ಧರ್ಮ ಮತ್ತು ಕರ್ತವ್ಯವಾಗಿದೆ.
“ಹಾಗಂತ”ಹೆಣ್ಣಿನದೆ ತಪ್ಪು ಅಂತ ಹೇಳುವುದಿಲ್ಲ.
ಇಲ್ಲಿ ಪುರುಷನಾದವನು ಮದುವೆ ಆದ ಹೆಂಡತಿ ಮತ್ತು ತಾಯಿ ಇಬ್ಬರಿಗೂ ಸರಿಸಮಾನವಾದ ಪ್ರೀತಿ ನೀಡಬೇಕು. ಯಾರ ಮಾತೂ ಅವರ ಹತ್ತಿರವೇ ಇಟ್ಟು ನಡೆಯಬೇಕು .
ಹೆಣ್ಣು ಕೊಟ್ಟ ಅತ್ತೆ ಮಾವನವರನ್ನು ತಂದೆ ತಾಯಿಯಂತೆ ಗೌರವ ಪ್ರೀತಿ ಕೊಡಬೇಕು .
ಆಗ ಹೆಂಡತಿಗೂ ಸಮಾಧಾನ ಆಗುವುದು .
ಯಾರೇ ಆಗಿರಲಿ ಮನಸ್ಸು ಕೊಟ್ಟು ಮನಸ್ಸು ಪಡೆಯಬೇಕು.
ಇಲ್ಲಿ ಹೊಂದಾಣಿಕೆ ಮುಖ್ಯವಾಗಿರುತ್ತದೆ .
ಏಳೇಳು ಜನ್ಮದ ಅನುಬಂಧದ ಸಂಬಂಧ ಬೆಸೆದಿರುತ್ತದೆ .
ಮದುವೆ ಎನ್ನುವುದು ಹುಡುಗಾಟ ಅಲ್ಲರೀ .
ಎರಡು ಆತ್ಮಗಳ ಮಿಲನವಾಗಿ .
ದೇಹವು ಒಂದಾಗಿರುತ್ತದೆ .
” ದಾಂಪತ್ಯ ಎಂಬ ದೇಗುಲಕ್ಕೆ
‌ಸರಸ ವಿರಸಗಳೆಂಬ ಎರಡು ಬಾಗಿಲುಗಳನ್ನು ಹಚ್ಚಿ .
ಪ್ರೀತಿಯೇ ಆರಾಧ್ಯದೈವವಾಗಿ ಪೂಜಿಸಿದರೆ ದಾಂಪತ್ಯಕ್ಕೆ ಒಂದು ಅರ್ಥ “
ಇಲ್ಲಿ ಯಾರು ಮೇಲಲ್ಲಾ ಯಾರು ಕೀಳಲ್ಲ್ . ಇಬ್ಬರೂ ಸರಿಸಮಾನರು .
ಸಂಸಾರದ ರಥಕ್ಕೆ ಎರಡು ಚಕ್ರಗಳಿದಂತೆ .

ಇದೇ ಮಧುರವಾದ ಬಾಂಧವ್ಯ ಬೆಸೆಯುವ ಅನುಬಂಧದ ಸಂಬಂಧವೇ ದಾಂಪತ್ಯ .


ಅಮರಾವತಿ ಹಿರೇಮಠ

One thought on “ಇಂದು ಮದುವೆ ನಾಳೆ ವಿಚ್ಛೇದನ-ಅಮರಾವತಿ ಹಿರೇಮಠ

Leave a Reply

Back To Top