ಪ್ರೊ. ಸಿದ್ದು ಸಾವಳಸಂಗ ಕವಿತೆ-ಮಹಿಳೆಯರಿಗೆ ನನ್ನ ನಮನ

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ಮಹಿಳೆಯರಿಗೆ ನನ್ನ ನಮನ

ನಸುಕಿನ ಐದು ಗಂಟೆಗೆ ಎದ್ದು
ಮನೆಯ ಒಳ ಹೊರಗಿನ ಕಸಗುಡಿಸಿ
ಬೆಚ್ಚನೆಯ ಚಹಾ ಮಾಡಿ, ಗಂಡ-ಮಕ್ಕಳಿಗೆ ಕುಡಿಸಿ
ಜಳಕಕ್ಕೆ ಬಿಸಿ ನೀರು ಕಾಯಿಸಿ
ರೊಟ್ಟಿ, ಚಪಾತಿ, ಪಲ್ಯ, ಅನ್ನ, ಸಾರು ಮಾಡಿ
ಗಂಡ-ಮಕ್ಕಳಿಗೆ ಬುತ್ತಿಯನ್ನು ಕಟ್ಟಿ
ಅವರವರ ಕೆಲಸಗಳಿಗೆ ಅವರನ್ನು ಕಳಿಸಿ
ಅವಳು ಚಹಾ ಕುಡಿಯುವ ವೇಳೆಗೆ
ಹೊತ್ತು ನೆತ್ತಿಯ ಮೇಲೆ ಬಂದಿರುತ್ತದೆ
ಆದರೂ ಯಾವುದೇ ಬೇಸರವಿಲ್ಲದೆ
ಮನೆಯ ಎಲ್ಲ ಕೆಲಸ-ಕಾರ್ಯಗಳನ್ನು ಮಾಡಿ


ತಾನೂ ಊಟ ಮಾಡಿ, ನೆಲಕ್ಕೆ ಬೆನ್ನು
ತಾಗಿಸುವ ಹೊತ್ತಿಗೆ, ಸೂರ್ಯ
ಪಡುವಣಕ್ಕೆ ಹೊರಳಿರುತ್ತಾನೆ
ಮತ್ತೆ ಮರಳಿ ಬಂದ ಗಂಡ-ಮಕ್ಕಳಿಗೆ
ಸಾಯಂಕಾಲದ ಚಹಾ ಮಾಡಿ, ಕುಡಿಯಲು ಕೊಟ್ಟು
ಅವರ ಯೋಗ ಕ್ಷೇಮ ವಿಚಾರಿಸುವುದರೊಳಗಾಗಿ ರವಿ ತನ್ನ ಗೂಡು ಸೇರುತ್ತಾನೆ
ಹಾಗೆ ರಾತ್ರಿಯ ಅಡುಗೆಗೆ ತಯಾರಿ ಮಾಡಿ
ಸಾಧ್ಯವಾದರೆ ಬಿಡುವಿದ್ದಾಗ ನಡುವೆ
ಧಾರಾವಾಹಿ ನೋಡಿ
ರಾತ್ರಿ ಬೇಗನೆ ಗಂಡ-ಮಕ್ಕಳಿಗೆ ಊಟ ಮಾಡಿಸಿ
ತಾನು ಊಟ ಮಾಡುವ ಶಾಸ್ತ್ರದ ವೇಳೆಗೆ
ಮಧ್ಯರಾತ್ರಿ ಹನ್ನೆರಡು ಗಂಟೆ ಮಿಕ್ಕಿರುತ್ತದೆ
ಈ ಮಧ್ಯೆ ಬರುವ ಬಂಧು-ಬಾಂಧವರನ್ನು ಚೆನ್ನಾಗಿ ನೋಡಿಕೊಳ್ಳುವ ಅವಳಿಗೆ ಬೇಸರವೆಂಬುದಿಲ್ಲ
ಗಂಡನ ಬೇಕು-ಬೇಡಿಕೆಗಳನ್ನು ಪೂರೈಸುವ
ಅವಳ ತಾಳ್ಮೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ
ಇದರ ಮಧ್ಯ ಶಾಲೆಯಿಂದ ತಂದಿರುವ ಮಕ್ಕಳ ಹೋಮ್ ವರ್ಕ್ ಅನ್ನು ಪ್ರತಿದಿನವೂ
ಪ್ರೀತಿಯಿಂದ ತಪ್ಪದೆ ಮಾಡಿಸುವ
ಅವಳ ಸಹನೆಗೆ ಯಾವುದು ಸಾಟಿ ?
ಈ ಎಲ್ಲದರ ಮಧ್ಯ
ಅವಳಿಗೆ ವಿಶ್ರಾಂತಿ ಕೇವಲ ಐದು ಗಂಟೆ ಮಾತ್ರ
ಜೀವನಪರ್ಯಂತ ಸೂಟಿ ಹಾಗೂ ಯಾವುದೇ ಪಗಾರವಿಲ್ಲದೆ ದುಡಿಯುವ ಈ ಹೆಣ್ಣಿಗೆ
ಏನೆಂದು ಕರೆಯಬೇಕು !
ಕೇವಲ ಹೆಂಡತಿ, ತಾಯಿ ಎಂದರೆ ಆಯಿತೆ ?
ಅಥವಾ
ಸಹನಾ ಮೂರ್ತಿ ಎನ್ನಬೇಕೆ ?
ತ್ಯಾಗಮಯಿ ಎನ್ನಬೇಕೆ ?
ಭೂಮಿ ತೂಕದ ಹೆಣ್ಣು ಎನ್ನಬೇಕೆ ?
ಕ್ಷಮಯಾ ಧರಿತ್ರಿ ಎನ್ನಬೇಕೆ ?
ಪಾರೋಪಕಾರಿ ಜೀವ ಎನ್ನಬೇಕೆ ?
ದೇವತೆ ಎಂದು ಕರೆಯಬೇಕೆ ?
ಧರೆಗಿಳಿದ ನಕ್ಷತ್ರ ಎನ್ನಬೇಕೆ ?
ಅದು ಅವಳ ಹಣೆಬರಹ ಎನ್ನಬೇಕೆ ?
ಹೆಣ್ಣಾಗಿ ಹುಟ್ಟಿದ್ದಕ್ಕೆ ಶಾಪಯೆನ್ನಬೇಕೆ ?
ಗೊತ್ತಿಲ್ಲ ನೀವಾದರೂ ಉತ್ತರಿಸಿ !!

ಪ್ರೊ. ಸಿದ್ದು ಸಾವಳಸಂಗ, ತಾಜಪುರ

One thought on “ಪ್ರೊ. ಸಿದ್ದು ಸಾವಳಸಂಗ ಕವಿತೆ-ಮಹಿಳೆಯರಿಗೆ ನನ್ನ ನಮನ

Leave a Reply

Back To Top