ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಕನ್ನಡ ಕುಲ ಬಾಂಧವರ ಸ್ವಾಗತಗೀತೆ

ಕನ್ನಡದ ಸೊಡರಿನ ಮತ್ತೊಂದು ಕಿರಣ ಹೊತ್ತು ನಿಮ್ಮ ಮುಂದೆ ಬಂದಿರುವೆ .

ಕನ್ನಡಿಗರ ನಿರಭಿಮಾನ ಸಹಿಷ್ಣುತೆಯ ಅತಿರೇಕ ಗಳ ಬಗ್ಗೆ ಬಹಳ ಕವಿಗಳು ಬರೆದಿದ್ದಾರೆ . ಆದರೆ ವ್ಯಂಗ್ಯವಾಗಿ ಈ ಸ್ವಭಾವವನ್ನು ವಿವರಿಸುವ ಜಿ ಎಸ್  ಶಿವರುದ್ರಪ್ಪ ಅವರ ಈ ಕವನದ ಕಡೆ ಸ್ವಲ್ಪ ಗಮನ ಹರಿಸೋಣ.  “ಗೋಡೆ” ಕವನ ಸಂಕಲನದಿಂದ ಆಯ್ದಿರುವುದು ಇದು .

ಕನ್ನಡಿಗರು ಪರಭಾಷಿಗರನ್ನು ಸ್ವಾಗತಿಸಿ ಹೇಗೆ ಉಪಚರಿಸುತ್ತಾರೆಂದು ನೋಡಿ ಬನ್ನಿ.  ಇದೆಲ್ಲವೂ ನಿಮ್ಮದೇ ಎಂದು ಎದೆಯ ಮೇಲೆ ಬಿಲ್ಲೆ (ಡವಾಲಿ) ಹಾಕಿಕೊಂಡ ಪರಿಚಾರಕ ತಲೆಬಗ್ಗಿಸಿ ಸ್ವಾಗತಿಸುವಂತೆ ಆಹ್ವಾನಿಸುತ್ತಾರೆ.  ಅವರ ಹಾಸಿಗೆ ಪೆಟ್ಟಿಗೆಗಳನ್ನು ಹೊರುವ, ಇಲ್ಲದಿದ್ದರೆ ತಮ್ಮದನ್ನೇ ಕೊಟ್ಟು ತಾವೇ ಮೂಲೆಯಲ್ಲಿ ನಿಲ್ಲುವ ಶ್ರೇಷ್ಠ ಆತಿಥೇಯರು ಎಂದು ಹಾಸ್ಯ ಮಾಡುತ್ತಾರೆ.  

ನಾವು ದಾಸರ ಪದಗಳ ವೇದಾಂತ ನಂಬಿದವರು. ಲೌಕಿಕದ ಆಸೆ ಕನ್ನಡಿಗರಿಗೆ ಇಲ್ಲ ಎಂದು ಸೂಚ್ಯವಾಗಿ ನಮ್ಮ ಹೇಡಿತನದ ಪ್ರತಿಪಾದನೆಯಾಗುತ್ತದೆ ಇಲ್ಲಿ .

ಅಲ್ಲದೆ ನಾವು ಎಲ್ಲರ ಜತೆಗೂ ಅವರವರ ಭಾಷೆ ಕಲಿತು ಮಾತನಾಡುವ ಶೂರರು.  ಬೇರೆಯವರೇಕೆ ಕನ್ನಡ ಕಲಿಯಬೇಕು? ಬಿಡಿ  ಅದರ ಪಾಡಿಗೆ ಅದು ಇರುತ್ತದೆ.   ಮತ್ತೆ ಪರಭಾಷೆಯವರಂತೆ ನಾವು ಭಾಷೆ ಭಾಷೆ ಎಂದು ಹೊಡೆದಾಡುವವರಲ್ಲ.  ತುಂಬಾ ಔದಾರ್ಯವಂತರು.  

ಅಲ್ಲದೆ ಗಡಿಯಂಚಿನ ರಾಜ್ಯಗಳಿಗೆ ಏನು ಬೇಕೋ ಕೇಳಿ ಗೌರವದಿಂದ ತಟ್ಟೆಯಲ್ಲಿಟ್ಟು ಸಮರ್ಪಿಸಿ ಬಿಡುತ್ತೇವೆ ಎನ್ನುವಂತಹ ಉದಾರಿಗಳು ನಾವು.  ತಣ್ಣಗೆ ಬದುಕಿದವರು: ಶಾಂತಿಪ್ರಿಯರು . “ಯಾವ ಕೆಚ್ಚಲಾದರೇನು ಮೂತಿ ಇಕ್ಕುತ್ತೇವೆ”  ನಮ್ಮ ಕನ್ನಡಮ್ಮನೇ ಬೇಕು ಎಂಬುದಿಲ್ಲ .

ಆದರೆ ನಮ್ಮದು ಒಂದೇ ಬಿನ್ನಹ.  ನಾವು ತಬ್ಬಲಿಗಳು . ನಮ್ಮ ಮೇಲೆ ದಬ್ಬಾಳಿಕೆ ಬೇಡ ಆಹಾ !ದೈನ್ಯತೆಯೇ ಮೂರ್ತಿವೆತ್ತಂತೆ… ಇದನ್ನೋದಿದ ಯಾರಿಗೆ ಆದರೂ ನಮ್ಮ ನಿಷ್ಕ್ರಿಯತೆಯ ಮುಖ ಕನ್ನಡಿಯ ಮುಂದಿನ ಬಿಂಬದಂತೆ ಕಣ್ಣೆದುರು ಬರುತ್ತದೆ.

ಪುಣ್ಯಕೋಟಿಯು ತನ್ನ ಕಂದನನ್ನು ಬೇರೆ ಹಸುಗಳಿಗೆ ವಹಿಸಿಹೋಗುವಂತೆ ಕನ್ನಡದ ಕರುವನ್ನು ನಾವು ನಮ್ಮ ಅತಿ ಧಾರಾಳದ ಸ್ವಭಾವದಿಂದ ಅನಾಥವಾಗಿಸುತ್ತಿದ್ದೇವೆ ಎಂದೆನಿಸುವುದಿಲ್ಲವೇ? ಕೆಲವೊಮ್ಮೆ ನಯವಾದ ಬುದ್ಧಿ ಮಾತುಗಳು ಗೋರ್ಕಲ್ಲ ಮೇಲೆ ಮಳೆ ಯಾಗುತ್ತವೆ ಮತ್ತೆ ಹಲವೊಮ್ಮೆ ಬೈದರೆ ಹಗ್ಗ ಜಗ್ಗಿ ಕಡಿದು ತುಂಡಾಗುತ್ತದೆ.  ಈ ರೀತಿಯ ಅಣಕ ವ್ಯಂಗ್ಯಗಳು ಮಾತ್ರ ಕೂರಂಬುಗಳಾಗಿ ಮರ್ಮಸ್ಥಾನಕ್ಕೆ ತಾಗಿ ಅಪೇಕ್ಷಿತ ಪರಿಣಾಮವನ್ನು ಉಂಟು ಮಾಡುವಲ್ಲಿ ಯಶಸ್ಸು ಸಾಧಿಸುತ್ತವೆ. ಕವಿಗಳು ಇಲ್ಲಿ ಅನುಸರಿಸಿರುವುದು ಅದೇ ತಂತ್ರ . ಇದು  ೧೯೬೬ರಿಂದ  ೧೯೭೨ರ ಕಾಲಘಟ್ಟದಲ್ಲಿ ಬರೆದ ಪದ್ಯ . ನಲವತ್ತು ವರ್ಷವಾದರೂ ಪರಿಸ್ಥಿತಿ ಕಿಂಚಿತ್ತೂ ಬದಲಾಗಿಲ್ಲ ಎಂದರೆ ತುಂಬಾ ಶೋಚನೀಯ.  ಇನ್ನಾದರೂ ಎಚ್ಚೆತ್ತುಕೊಳ್ಳೋಣ ನಮ್ಮ ಕನ್ನಡ ಗೋವಿನ ಮುದ್ದು ಕರು ಬಲಿಯಾಗದಂತೆ ನೋಡಿಕೊಳ್ಳೋಣ .ಬನ್ನಿ ಎಲ್ಲರೂ ಕೈಜೋಡಿಸಿ. ಕವಿತೆಯ ಪೂರ್ಣ ಪಾಠ ನಿಮಗಾಗಿ .

ಕನ್ನಡ ಕುಲ ಬಾಂಧವರ ಸ್ವಾಗತ ಗೀತೆ

ಸ್ವಾಗತ ಸುಸ್ವಾಗತ ಒಳಗೆ ದಯಮಾಡಿಸಿ, ಇದೆಲ್ಲವೂ ನಿಮ್ಮದೇ ಮಹಾಸ್ವಾಮಿ.
ನಾವು ಕನ್ನಡಿಗರು, ಯಾರು ಬಂದರು ಹೀಗೇ  ಅಭ್ಯಾಸವಾಗಿದೆ ನಡುಬಗ್ಗಿಸುವ ಡವಾಲಿ

ನಿಮ್ಮ ಹಾಸಿಗೆ ಬಟ್ಟೆಗಳನ್ನು ನಾವೇ ಹೊತ್ತು ತರುತ್ತೇವೆ_  ಅದರಲ್ಲೇನು ಮಹಾ,
ಬನ್ನಿ, ಹಾಗೆಯೇ ಏನೂ ತರದೆ ಬಂದಿರಾ
ಇದ್ದೇ ಇವೆ ನಮ್ಮ ಹಾಸಿಗೆ ಹೊದಿಕೆ.
ನಿಮ್ಮ ಕಾಲೊತ್ತಿ, ನಾವು ಮೂಲೆಯಲ್ಲೇ ನಿಂತು ಉಪಚಾರ ಮಾಡುತ್ತೇವೆ_ನಾವು ಕನ್ನಡಿಗರು.

ನಮಗೆ ನಮ್ಮದೆನ್ನುವುದೇನೂ ಬೇಡಿ,
ನಾವು ಅಲಕ್ ನಿರಂಜನರು.
ಅಯ್ಯೋ ಈ ಜೀವನವೇನು ಮಹಾ, ಈ
ಲೌಕಿಕ ಭೋಗಗಳೆಲ್ಲ ನಶ್ವರ ;ಹೀಗೆಂದು
ಹಾಡಿ ಹರಿಸಿದ್ದಾರೆ ತಂಬೂರಿದಾಸರು
ನಾವು ವಿರಕ್ತರು _ ಈ ಕನ್ನಡಿಗರು

ಹೇಳಿ ಯಾವ ಭಾಷೆಯನ್ನಾದರೂ ನಾವು
ಕಲಿಯಲು ತಯಾರು, ನಮ್ಮದಿರುತ್ತದೆ_
ಶತಮಾನಗಳಿಂದ ಇದ್ದೇ ಇದೆ, ಬಿಡಿ
ನಮ್ಮ ಔದಾರ್ಯ ನೀವು ಕಾಣಿರಿ ಸ್ವಾಮಿ: ನಿಮ್ಮಂತೆ ಭಾಷೆ ಭಾಷೆಯೆಂದು ಬಡಕೊಂಡು ಸಾಯುವವರಲ್ಲ _ ನಾವು ಕನ್ನಡಿಗರು

ನಮ್ಮದರಲ್ಲಿ ನಿಮಗೆ ಯಾವುದು ಬೇಕು? ತಟ್ಟೆಯಲ್ಲಿಟ್ಟು ನೆಟ್ಟಗೇ ಕೊಟ್ಟುಬಿಡುತ್ತೇವೆ ಯಾವ ಕಾಲಕ್ಕೂ ನಾವು ತಣ್ಣಗೆ ಬದುಕಿದ ವರಪ್ಪ
ಯಾವ ಕೆಚ್ಚಲಾದರೇನು, ಮೂತಿ ಇಕ್ಕುತ್ತೇವೆ ನಮ್ಮ ಪ್ರಾರ್ಥನೆ ಇಷ್ಟೇ
ಹಿಂದೆ ಬಂದರೆ ಒದೆಯಬೇಡಿ
ಮುಂದೆ ಬಂದರೆ ಹಾಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಜಿ ಎಸ್ ಶಿವರುದ್ರಪ್ಪ
ಗೋಡೆ ಕವನ ಸಂಕಲನದಿಂದ


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂaಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

Leave a Reply

Back To Top