ಅಂಕಣ ಬರಹ

ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು

ದಿಟ್ಟ ಶರಣ ಕಾಯಕ ಜೀವಿ

ಮೇದಾರ ಕೇತಯ್ಯ.

ಮಹಾ ಶರಣ ಮೇದಾರ ಕೇತಯ್ಯಾ 12 ನೆಯ ಶತಮಾನದ ಅಪ್ಪ ಬಸವಣ್ಣನವರ ಸಮಕಾಲೀನ ಸಾಧಕ .ಆತನ ಊರು ಕಸಬು ಮತ್ತು ಸಿದ್ಧಾಂತದ ಬಗ್ಗೆ ಜನಪದ ಕವಿಗಳು ಅತ್ಯಂತ ಸ್ಪಷ್ಟವಾಗಿ ವಿವರಿಸಿದ್ದಾರೆ.

            ಮಲೆನಾಡಗುಡಿಯೊಳಗೆ I ಈ ಉಳಿಮೆI

           ಬೆಟ್ಟದ ಕೆಳಗೆ I ಬೇಲೂರ ಕೇತ ಮೇದಾರ .

           ಕಾಡೊಳಗೆ ಬೆಳೆದಾಡಿ ಕಲೆತ ಶಿವ ಮತವII.

ಈ ಜನಪದ ನುಡಿಯಿಂದಾ ಕೇತಯ್ಯನು ಮಲೆನಾಡಿನ  ಬೇಲೂರನವನಾಗಿದ್ದನು ಎಂದು ತಿಳಿದು ಬರುತ್ತದೆ .ಅಲ್ಲದೆ ಆತನು ಕಲ್ಯಾಣಕ್ಕೆ ಬರುವ ಪೂರ್ವದಲ್ಲಿ ಶಿವ ಭಕ್ತನಾಗಿದ್ದನು .ದಟ್ಟ ಕಾಡಿನೊಳಗೆ ಅಲೆಯುತ್ತ ಸ್ವಾಭಿಮಾನಿ ಜೀವನ ನಡೆಸಿದನು ಕೇತಯ್ಯ .

ಮೇದಾರ ಕೇತಯ್ಯನ ವಚನಾಂಕಿತ ” ಗವರೇಶ್ವರ ” ಸುಮಾರು ಹದಿನಾಲ್ಕು ವಚನಗಳು ಲಭ್ಯವಾಗಿವೆ (14 ).ಗವರಗಯೆಂದರೆ ಬಿದಿರು ಕಾಯಕ,ಮೊರ, ಬುಟ್ಟಿ,ತೊಟ್ಟಿಲು ,ನಿಚ್ಚಣಿಕೆ  ಮುಂತಾದ ಬಿದಿರಿನಿಂದ ಉತ್ಪನ್ನವಾಗುವ ಸಿದ್ಧ ವಸ್ತುಗಳು.  ಕೇತಯ್ಯ ತನ್ನ ವಚನಗಳಲ್ಲಿ ಬಸವಣ್ಣ ಪ್ರಭುದೇವ ಚೆನ್ನಬಸವಣ್ಣ ಘಟ್ಟಿವಾಳಯ್ಯ ,ಸಿದ್ಧರಾಮ,ಶಂಕರ ದೇವಾ ಮಡಿವಾಳ ಮಾಚಿದೇವ. ಮುಂತಾದ ಶರಣರನ್ನು ಸ್ಮರಿಸುತ್ತಾನೆ.ತಾನು ಮಾಡುವ ಕಾಯಕದ ಮೂಲಕ 

ತನ್ನ ಲಿಂಗಾಂಗ ಸಾಮರಸ್ಯ ಕಂಡುಕೊಂಡ ಶ್ರೇಷ್ಠ ಶರಣ. 

                       ಕೇತಯ್ಯ ನಿನ್ನ ಮಡದಿ I ಸಾತವ್ವಳೆ೦ಬವಳು .I

                      ಜಾತಿ ಮೇದರದು ಕಸುಬಿನಲಿ I ನಾಡೊಳಗೆ

                         ನೀತಿ  ಶಿವಮತದ ಒರೆಗಲ್ಲುII .

ಕೇತಯ್ಯನ ಮಡದಿ ಸಾತವ್ವ ಮತ್ತು ಅವರ ಮೂಲ ಕಸುಬು ಮೇದರದು ಅಂದರೆ ಕಾಡಿನೊಳಗೆ ಬಿದಿರಿನ ಮರ ಕಡಿದು ಒಣಗಿಸಿ ಬಿದಿರಿನ ಬುಟ್ಟಿ ನಿಚ್ಚಣಿಕೆ ಮುಂತಾದ ಅಡುಗೆ ಮನೆಗೆ ಉಪಯುಕ್ತವಸ್ತುಗಳನ್ನು  ಮತ್ತು ಕೃಷಿ ಕಾಯಕಕ್ಕೆ ಬೇಕಾದ ಗಳೆ, ಕೂರಗಿ , ಮತ್ತಿತರ ವಸ್ತುಗಳ ಸಿದ್ದ ಪಡಿಸುವದು.

             ಶರಣ ಮೇದಾರ ಕೇತಯ್ಯಾ ತುಂಬಾ ಕುಶಲ ಕರ್ಮಿ ನಿಪುಣನಾಗಿದ್ದನು .ಗಟ್ಟಿಯಾದ ಬಿದಿರು ಎಳೆಯ ಹೂವಿನ ಬಂಗಾರದ ತೇರನ್ನು ಅವನು ಮಾಡುತ್ತಿದ್ದನು  ಎಂದು ಈ ಕೆಳಗಿನ ಜನಪದ ಪದ್ಯದಿಂದ ತಿಳಿದು ಬರುತ್ತದೆ .

         ಬತ್ತಿಸರಾಗದೊಳು I ಸುತ್ತು ಹಾಡಿದ

         ಬಿದಿರುI.ಹೊತ್ತೊಯ್ವ ಕಂಬಿ ಪರುವತಕೆ

        ಮಾಗಡದ ಸತ್ಯುಳ್ಳ   ತೇರು ಬೆಳವಲಕ  !

ಶರಣ ಮೇದಾರ ಕೇತಯ್ಯ ಕಾಡಿನಲ್ಲಿ ಶರಣರ ವಚನಗಳ ಹಾಡುತ್ತಾ ಬತ್ತಿಸರಾಗವನ್ನು ನುಡಿಸುತ್ತಾ ಬಿದಿರನ್ನು  ಕಡಿದು ಪರ್ವತ ಪ್ರದೇಶಕ್ಕೆ ಒಯ್ದು ಬೆಳುವಲದ ಊರಾದ ಮಾಗಡ  ಎಂಬ ಗ್ರಾಮದಲ್ಲಿ ಸತ್ಯುಳ್ಳ ತೇರನ್ನು ( ರಥ ) ಮಾಡಿದರು.

                                                           ಚೆನ್ನಂಗಿ ಬಿದಿರೆಳೆಯ I  ನುಣ್ಣ ಮಾಟದ ತೇರ

                                                            ಹೊನ್ನ ಮಾಗಡದ ಹೂದೇರ I ಮೇದಾರ ಅಣ್ಣಂದಿ

                                                            ರಂದು  ಕಟ್ಟಿದರು.I

ಚೆನ್ನಂಗಿ ಬಿದಿರಿನ ಮರದಿಂದ ಅಂದವಾದ ಸುಂದರವಾದ   ಉತ್ತಮ ಮಾಟದ  ಹೂದೇರನ್ನು ಅಣ್ಣ ಕೇತಯ್ಯ ಮಾಗಡ ಗ್ರಾಮಕ್ಕೆ ಕಟ್ಟಿ ಕೊಟ್ಟನು ಎಂದು ಜನಪದಿಗರು ಹೇಳಿದ್ದಾರೆ. ಕಾಯಕ ಕೇತಯ್ಯನವರ ಉಸಿರಾಗಿತ್ತು 

 ಕೇತಯ್ಯ ಮತ್ತು ಸಾತವ್ವ ತಮ್ಮ ಲಿಂಗ ಪೂಜೆ ಜಂಗಮ ಸೇವೆ ಕಾಯಕ ದಾಸೋಹದಿಂದಾ ಅರಿವು ಆಚಾರ ಹುರಿಗೊಳಿಸಿ ಕಲ್ಯಾಣಕ್ಕೆ ಹೋಗಲು ಪುಣ್ಯ ದಂಪತಿಗಳು ಸಿದ್ದಗೊಳ್ಳುತ್ತಾರೆ.ಕಲ್ಯಾಣದ ಶರಣರನ್ನು ಕೂಡಿಕೊಳ್ಳಲು ತಮ್ಮ ಬದುಕನ್ನು ಕೃತಾರ್ಥ ಮಾಡಿಕೊಳ್ಳಲು ಹ೦ಬಲ ಹೆಚ್ಚಾಯಿತು.

                    ಬಸವಾದಿ ಪ್ರಮಥರ ಶರಣ ಪಥಕ್ಕೆ ಹೆಜ್ಜೆ ಹಾಕಲು ನಿರ್ಧರಿಸಿದರು . ಬಸವಣ್ಣನವರ ಬಗ್ಗೆ ಕೇಳಿ ತಿಳಿದಿದ್ದ ಕೇತಯ್ಯ ಸಾತವ್ವ ದಂಪತಿಗಳು  .ಬಸವಣ್ಣನವರನ್ನು ಪ್ರತ್ಯಕ್ಷವಾಗಿ ಕಂಡಾಗ   ಆದ ಸಂತೋಷ ಆನ೦ದ ಅಷ್ಟಿಷ್ಟಲ್ಲ .ಕೇತಯ್ಯ ತನ್ನ ತನು ಮನ ಭಾವ ಬುದ್ಧಿ ಸೂಕ್ಷ್ಮ ಸ್ಥೂಲ ಮನಜ್ಞಾನಕ್ಕೆ ಲಿಂಗಸ್ವಾರೂಪಿಯಾದ ಬಸವಣ್ಣನವರನ್ನು ಕಂಡು ಸುಖಿಯದೆನು ಎಂದು ಹೇಳಿದನು ಕೇತಯ್ಯ .

        ” ಎನ್ನ ಚಿತ್ತಕ್ಕೆ ಆಚಾರಲಿಂಗವಾದಾತ, ಎನ್ನ ಬುದ್ಧಿಗೆ ಗುರು ಲಿಂಗವಾದಾತ,ಎನ್ನ ಅಹಂಕಾರಕ್ಕೆ ಶಿವಲಿಂಗವಾದಾತ, ಎನ್ನ ಮನಕ್ಕೆ ಜಂಗಮ ಲಿಂಗವಾದಾತ, ಎನ್ನ ಜ್ಞಾನಕ್ಕೆ ಪ್ರಸಾದ ಲಿಂಗವಾದಾತ,  ಎನ್ನ ಭಾವಕ್ಕೆ ಮಹಾಲಿಂಗವಾದಾತ,ಎನ್ನ ಸ್ಥೂಲ ತನುವಿಂಗೆ ಇಷ್ಟಲಿಂಗವಾದಾತ, ಎನ್ನ ಸೂಕ್ಷ್ಮ ತನುವಿಂಗೆ ಭಾವಲಿಂಗವಾದಾತ ,  ಇಂತು ಅನಂತ ಕಾಯ ಗುಣಗಳಿಗೆ .   ಅನಂತ ಲಿಂಗವಾದಾತ ಬಸವಣ್ಣ .        ಇಂತು ಇವನರಿದವನಾಗಿ ಗೌರೆಶ್ವರ ಲಿಂಗದಲ್ಲಿ ಸುಖಿಯಾದೆನು “(ಕೇತಯ್ಯನ ವಚನ)

 ಕಾಯಕದಲ್ಲಿ ನಿರತರಾದ  ದಂಪತಿಗಳು  ತಮ್ಮ ಇಷ್ಟಲಿಂಗ ಪೂಜೆ ಜಂಗಮ ದಾಸೋಹದಲ್ಲಿ ಸಕ್ರೀಯರಾದರು  . ಬಿದಿರು ಬುಟ್ಟಿ ಹೆಣಿಕೆ  ಕೆಲಸದಲ್ಲಿ ತೃಪ್ತಿ  ಹೊಂದಿದರು ಕೇತಯ್ಯ ಸಾತವ್ವ ಕಾಯಕದ ಜೊತೆಗೆ ದಾಸೋಹ ಪ್ರಚುರ  ಪಡಿಸಿದರು.          

      ನಿತ್ಯ ಕಾಡಿನಲ್ಲಿ ಅಲೆದು ಬಿದಿರು ಸೀಳಿ ಬುಟ್ಟಿ ಹೆಣೆದು  ಮಾರುಕಟ್ಟೆಯಲ್ಲಿ ಮಾರಿ ಬಂದ ಹಣದಲ್ಲಿ ದಾಸೋಹ ಮಾಡುವ ಕೇತಯ್ಯ ಬಲು ಬೇಗನೆ ಕಲ್ಯಾಣ ರಾಜ್ಯದಲ್ಲಿ ಜನಪ್ರಿಯವಾಗ ತೊಡಗಿದನು . ಅದನ್ನು ಜನಪದ ಕವಿಗಳು ಹೀಗೆ ವರ್ಣಿಸಿದ್ದಾರೆ.

                    ದಿನ ದಿನಕೆ ಕೇತಯ್ಯ ಕನಕಾದ 

                 ಶರಣರಿಗೆ I ಜನಕಾದ ಕೇತ ನಿಚ್ಚಣಿಕೆ I

                  ನಿಜಪದಕೆ ಹೊನಲಾದ I .ಹೊಲಸು ತೊಳೆಯುದಕ .

ಕೇತಯ್ಯ ಮತ್ತು ಸಾತವ್ವ ಕಲ್ಯಾಣದಿ ಬಲು ಬೇಗ ಜನಪ್ರೀತಿ ಕಂಡರು. ಕನಕದಂತಾದರು.

 ತಮ್ಮ ನಿತ್ಯ ಸೇವೆ ಮಾಡಿ ಜಂಗಮ ಪ್ರಸಾದ ಮುಗಿಸಿ ಕೇತಯ್ಯ ಮತ್ತು ಸಾತವ್ವ ಕುಳಿತಿರಲು ಜಂಗಮನೊಬ್ಬ ಇವರ ಮನೆಗೆ ಪ್ರಸಾದಕ್ಕೆ ಬರಲು ಮನೆಯಲ್ಲಿ ಏನು ಇರದ ಹಿನ್ನೆಲೆಯಲ್ಲಿ ,ಗಂಡ ಕೇತಯ್ಯ ಮಡದಿ ಸಾತವ್ವಳಿಗೆ ಕೇಳಿದಾಗ .ಸಾತವ್ವ ಕೇತಯ್ಯನಿಗೆ ಬಿದಿರು ಕಡಿದು ಬುಟ್ಟಿ  ಹೆಣೆದು ಮಾರಿ ಬಂದ  ಹಣದಿಂದ ದಾಸೋಹ ಕೈಗೊಳ್ಳಲು ಸಲಹೆ ನೀಡುತ್ತಾಳೆ. ತನ್ನ ಕಾರ್ಯದಲ್ಲಿ ನಿರತಳಾಗಿ  ಸೌದೆ ತಂದು ಪ್ರಸಾದಕ್ಕೆ ಪಾತ್ರೆ ಸಜ್ಜು ಮಾಡುತ್ತಾಳೆ.

  ಇತ್ತ ಬಿದಿರಿನ ಮೇಳೆ (ಕಾಡು) ಹುಡುಕಿಕೊಂಡು ದಟ್ಟವಾದ ಅರಣ್ಯದಲ್ಲಿ ಅಲೆಯುತ್ತಾನೆ.ಉತ್ತಮ ಬಿದಿರು ಕಾಣದಾಗುತ್ತದೆ. 

                        ಮೇಳೆ ಮೇಳೆ ತಿರುಗಿದರೂ I ಗಳವೊಂದು

                   ಬಿದಿರಿಲ್ಲಾ I ಮೇಳೆ ತುಂಬಾ ನೋಡಿ ಮುತ್ತು ಮಣಿ I.

                  ಮಾಣಿಕವ  ಮಳ ಮಳಸಿ ತಿಳಿದ ಹೊಲೆಯೆಂದ.II

ಮರಗಳಲ್ಲಿ ಮುತ್ತು ರತ್ನಗಳೇ ಕಾಣುವುದು ಕಾಡೆಲ್ಲಾ ತಿರುಗಿದರೂ ಒಳ್ಳೆಯ   ಬಿದಿರು ದೊರೆಯದೆ ಮರ ಮರ ಮರುಗಿ ಚಿಂತಿಸಿದನು .ಎಲ್ಲಿ ತನ್ನ ದಾಸೋಹ  ತಪ್ಪಿ ಹೋಗುವುದೋ ಅಂತಾ ಕಳವಳಗೊಂಡನು. ಆಗ ಮುಗಿಲು ಮುಟ್ಟುವ ಸುಂದರ ಗಟ್ಟಿಯಾದ ಬಿದಿರು ಒಂದು ಕಾಡಿನಲ್ಲಿ ಕಂಡಿತು .ಪುಳುಕಿತಗೊಂಡ ಕೇತಯ್ಯ ಲಗು ಬಗೆಯಿಂದ ಬಿದಿರಿನ ಮರ ಹತ್ತ ತೊಡಗಿದ .

        ಗಗನವೇ ಮುದ್ದಿಡುತ I. ಸೊಗಸಿಯಿತು  ಬಿದಿರೊಂದುಈ 

         ಮಿಗೆ ಬೆಳೆದು ನಿಂತು ಕಾಡೊಳಗೆ I

          ಕೇತಯ್ಯ ಬಗೆದವನೇ ಕೊಯ್ದು  ಚೆಲ್ಲುದರೆ II

ಕೇತಯ್ಯ ಬಿದಿರಿನ ಕೊಂಬೆ ಕಡೆಯುವಾಗ ಕಾಲು ಜಾರಿ ಮರದ ಚೂಪಾದ ಸಿಬಿರು ಆಯ ತಪ್ಪಿದ ಶರಣ ಕೇತಯ್ಯನ ಎದೆಗೆ ನೆಟ್ಟಿತು. ರಕ್ತ ಚಿಮ್ಮಿತು ಅಗಾದ  ನೋವ ಸಹಿಸಿಕೊಂಡು ಕೊಂಬೆಗಳನ್ನು ಕತ್ತರಿಸಿ ಮೆಲ್ಲನೆ ಕೆಳಗಿಳಿದನು. ಎದೆಯಿಂದ  ರಕ್ತದ ಮಡುವು ಲೆಕ್ಕಿಸದೆ ಎಲ್ಲಿ ತನ್ನ ದಾಸೋಹ ತಪ್ಪಿ ಹೋಗುವದೆಂದು ಬಿದಿರುಗಳನ್ನು ಹೊತ್ತುಕೊಂಡು ತನ್ನ ಗುಡಿಸಲಿಗೆ ಕೇತಯ್ಯ ನಡೆದನು.ದಾಸೋಹ ಮುಗಿಸದೆ ದೇಹವ ಬಿಡಬಾರದೆಂದು ನಿರ್ಧರಿಸಿದನು. ದಾರಿಯಲ್ಲಿ ನಡೆದು ಬರುವಾಗ  ಮುಳುಗುವ  ಸೂರ್ಯನ ಕಂಡು ವಿನಂತಿಸುತ್ತಾನೆ.  ಕೈಗೊಂಡ ದಾಸೋಹ ಮುಗಿಯುವವರೆಗೆ ,ಮುಳುಗದಿರು ಸೂರ್ಯನೇ ಎಂದು   ಗೋಗೊರೆಯುತ್ತಾನೆ.

       ಹಾರದಿರು ಪಡುಗಡಲI ಏರಿ ಇಳಿಯುವ ರವಿಯೆ  I,

      ಮಾರ ಹರನಾಣೆ ಯೆನ್ನಾಣೆ   I 

      ಶಿವಶರಣ ಧೀರ ಕಾಯಕದ ಆಣೆ  ಮನದಾಣೆ II

ಸೂರ್ಯನೇ ನೀನು ಬೇಗ ಪಡುಗಡಲ ಹಾರಿ ಮುಳುಗದಿರು .ನಿನಗೆ ಶಿವನಾಣೆ ಶಿವ ಶರಣರು ಮಾಡುವ ಧೀರ ಕಾಯಕದಾಣೆ ತನ್ನ ಮನದಾಣೆ .ನೋಡಿ  ಕೇತಯ್ಯನ ಬಿನ್ನಹದಲ್ಲಿ ಎಂತಹ ಗಾಂಭೀರ್ಯ ಚಿಂತನೆ ಕಾಳಜಿ ದಾಸೋಹ ಪ್ರಜ್ಞೆ ಇದೆ ಎನ್ನುವದು ಅರ್ಥವಾಗುತ್ತದೆ.ಹೀಗೆ ಸೂರ್ಯನಿಗೆ ಆಣೆಯಿಟ್ಟು,ರಕ್ತ ಸೋರಿಸುತ್ತಲೇ ನಡೆದು ಮನೆಗೆ ಬಂದ ಕೇತಯ್ಯ. ಬಿದಿರು  ಕೆತ್ತಿ ಬುಟ್ಟಿ ಹೆಣೆದು ಹೆಂಡತಿ ಸಾತವ್ವಳನ್ನು ಕರೆಯಲು ,ಸಾತವ್ವ ಕೇತಯ್ಯನ ಸ್ಥಿತಿ  ಕಂಡು ಭಯಗೊಂಡು ಗಲಿಬಿಲಿಗೊಂಡಳು. ಕೇತಯ್ಯ ಬೇಗನೆ ಹೋಗಿ ಬುಟ್ಟಿ ಮಾರಿ ಬಂದ ಹಣದಿಂದ ಜಂಗಮರಿಗೆ ದಾಸೋಹ ಮಾಡಲು ಸೂಚಿಸಿ ತಾನು ಸ್ವಲ್ಪ ವಿರಮಿಸುವದಾಗಿ ಹೇಳಿ ಅಲ್ಲಿಯೇ ಮಲಗುವನು.

ಮಡದಿ ಸಾತವ್ವಳು ಧೈರ್ಯದಿಂದ ಮರ ಬುಟ್ಟಿ ಒಯ್ದು ಮಾರುಕಟ್ಟೆಯಲ್ಲಿ ಮಾರಿ  ಬಂದ ಹಣದಲ್ಲಿ ಜಂಗಮ ಪ್ರಸಾದ ಸೇವೆ ಮಾಡಿ ಬಂದ ಜಂಗಮರಿಗೆ   ಸಂತೈಸಿ ಕಳಿಸುತ್ತಾಳೆ .ಕೇತಯ್ಯ ತನ್ನ ಎದೆಯ ಗೂಡಿನಲ್ಲಿ ಸಿಲುಕಿರುವ ಸಿಬಿಕೆಯನ್ನು ಕೀಳಲು ಹೇಳುತ್ತಾನೆ. ಒಲ್ಲದ ಮನದಿಂದ ಅಧೈರ್ಯಗೊಂಡ ಸಾತವ್ವಳಿಗೆ ಕೇತಯ್ಯ ಧೈರ್ಯ ತುಂಬಿ ಬಿದಿರಿನ ಸಿಬಿರು ಕೀಳಲು ಹೇಳುತ್ತಾನೆ .

                     ಶಿವನೆಂದು ಎದೆ ನೋಡಿ I. ತವಕದಲಿ ಕಿತ್ತೊಗೆಯ ಈ

                      ಶಿವ ಶಿವನೆ ಮುಗಿಯಿತು ಕಾಯಕವು.I

                     ಎಂದೆನುತ ಶಿವಯೋಗ ರವಿಯು ಮುಳುಗಿದನು.II    

       ಜನಪದಿಗರು ಕೇತಯ್ಯನ ದಾಸೋಹ ಸೇವೆ ಕೃತಾರ್ಥ ಭಾವವನ್ನು ವ್ಯಕ್ತ ಪಡಿಸುತ್ತಾ ಇತ್ತ ಕೇತಯ್ಯನ ಪ್ರಾಣ ಪಕ್ಷಿ ಹಾರಿ ಹೋದರೆ ಅತ್ತ ಸೂರ್ಯ ಪಡುವಲ ದಿಕ್ಕಿನಲ್ಲಿ ಮುಳುಗುತ್ತಾನೆ. ಮಹಾ ಶಿವ ಶರಣ ಮೇದಾರ ಕೇತಯ್ಯನ ಸಂಕಟ ವೇದನೆಯನ್ನು ಸೂರ್ಯ ನೋಡಲಾರದೆ ಶಿವಯೋಗದ ರವಿತೇಜನ ಸಾವಿನಿಂದಾ  ಮಮ್ಮಲು ಮರಗಿ   ಕಣ್ಣಿರಿತ್ತು ಸೂರ್ಯ ಮುಳುಗಿದನು ಎಂದು ಜನಪದ ಕವಿಗಳು ವರ್ಣಿಸಿದ್ದಾರೆ  .

                                       ನೋಡಲಾರದೆ ರವಿಯು I ಪಾಡ ಶಿವ ಶರಣರಿಗೆ I

                                        ಹೂಡುವದು ಆಟ ಕತ್ತಲೆಯು  ತಂದೆಂದು

                                       ಬಾಡಿತಾಕಾರ ಕಣ್ಮುಚ್ಚಿ  II

     ಶರಣರ ಕಷ್ಟವನ್ನು ನೋಡಲಾರದೆ ಅವರ ಪಾಡನ್ನು ಸಹಿಸಲಾರದೆ  ಸೂರ್ಯನು ಬೆಳಕು ಅಳಿಸಿ ಕತ್ತಲೆಯ ಆಟದಲ್ಲಿ ಶೋಕ ಸೂಚಿಸಿದನು. ಗಂಡನನ್ನು ಕಳೆದು ಕೊಂಡ ಸಾದ್ವಿ  ಸಾತವ್ವಳಿಗೆ ಎಲ್ಲಿ ತನ್ನ ದಾಸೋಹ ಜಂಗಮ ಸೇವೆ ನಿಂತು ಹೋಗುವುದು ಅಂತಾ ಭಯಗೊಂಡು ರೋಧಿಸಿದಳು ಆಕ್ರಂದಿಸಿದಳು.

                                       ಪತಿಯೆ ಲಿಂಗಾಗಿದ್ದ ಈ ಸತಿ ಶರಣೆ

                                        ನಾನಿದ್ದೆI .ರತುನ ಕಾಯಕದ ಶಿವಪೂಜೆ I

                                      ಇಂದ್ಹೋತು,ಜತುನೇಕೆ ಇನ್ನು ಬಾಳುದಕೆ ? II

ಸಾತವ್ವಳಿಗೆ ತನ್ನ ಪತಿಯೆ ಲಿಂಗ ಸ್ವರೂಪಿಯಾಗಿದ್ದ ,ಸಾತವ್ವಳಿಗೆ ಕೇತಯ್ಯನಿಲ್ಲದ ಬದುಕು ಬೇಡವಾಯಿತು .ಜೋಡಿ ಹಕ್ಕಿಗಳಂತಿದ್ದ ಜೀವಗಳು ಸಾತವ್ವ ಕೇತಯ್ಯ .

                        ಕಲ್ಯಾಣ ಮಂಟಪವು I.ನಿಲ್ಲದಲೇ ಕೂಡೆದ್ದುI

                       ತಲ್ಲಣಿಸಿ ಬಂತು ಆ ಮನಿಗೆ ಈ ಕೇತನಿಗೆ

                       ಸಲ್ಲಿಸಲು  ನಮನ ಭಕ್ತಿಯಲಿ  ಈ

ಎಲ್ಲಾ ಶರಣರು ಈ ಸುದ್ಧಿಯನ್ನು ಕೇಳುತ್ತಲೇ ಧಾವಿಸಿ ಕೇತಯ್ಯನ ಮನೆಗೆ ಬಂದು ಭಕ್ತಿ ಭಾವದಿಂದ ಅಂತಿಮ ನಮನ ಸಲ್ಲಿಸಲು ಮುಂದಾದದರು.ಮರಣವೇ ಮಹಾನವಮಿ ಎಂದು ನಂಬಿದ್ದ ಶರಣರು ಕೇತಯ್ಯನ ಅಗಲುವಿಕೆಯಿಂದಾ ದಾಸೋಹ ಕ್ರಿಯೆಯ ಉತ್ತಮ ನಿದರ್ಶನ ಅಂತ್ಯ ಗೊಂಡಿತು ಎಂದು ಶರಣರು ಖಿನ್ನರಾದರು.

ಕೇತಯ್ಯನ ದಾಸೋಹ ಲಿಂಗ ನಿಷ್ಠೆ ,  ಶರಣರ ಪಾಲಿನ ದಾಸೋಹ ಮೂರ್ತಿ ಕಾಯಕಯೋಗಿ ದಿಟ್ಟ ಶರಣನನ್ನು ಜನಪದಿಗರು ಕೊಂಡಾಡಿದ್ದಾರೆ.

                                          ಶರಣ ಶಿವ ಕಾಯಕವ Iಒರೆಗೆ ಹಚ್ಚುವರಾರು I 

                                           ಹರ ಸಹಿತ ಸೋತು ಬದುಕಿಸಿದ I

                                          ಮೇದಾರ ವರಕೇತ ನಿನಗೆ ಸರಿಯಾರುII

                   ಸಾವು  ಬಂದರೂ ಎದುರಿಸಿ ಮರಣ ಗೆದ್ದ ಮಹಾನುಭಾವ ಮೇದಾರ ಕೇತಯ್ಯ .ದಾಸೋಹ ಮುಗಿಸಿ ಹರುಷದಲಿ   ಪ್ರಾಣವನ್ನು ತೆತ್ತ ಕೇತಯ್ಯ ಜನಪದ ಸಾಹಿತ್ಯವು ಕಂಡ ಶ್ರೇಷ್ಟ ಶರಣ.


ಡಾ ಶಶಿಕಾಂತ .ಪಟ್ಟಣ -ರಾಮದುರ್ಗ

ಡಾ ಶಶಿಕಾಂತ ಪಟ್ಟಣ – ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸ್ವಾತಂತ್ರ ಹೋರಾಟದ ಮನೆತನದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಸೈನಿಕ ಶಾಲೆವಿಜಯಪುರದಲ್ಲಿ ಪೂರೈಸಿದರು. ವೃತ್ತಿಯಲ್ಲಿ ಔಷಧ ವಿಜ್ಞಾನಿ ಪ್ರವೃತ್ತಿಯಲ್ಲಿ ಸಾಹಿತಿ ವಿಮರ್ಶಕ ಸಂಶೋಧಕ ಮತ್ತು ಹೊರಾಟಗಾರರು. ಇವರು ಇಲ್ಲಿಯವರೆಗೆ 37 ಪುಸ್ತಕಗಳನ್ನು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಇವರ ಗಾಂಧಿಗೊಂದು ಪತ್ರ ಡಾ ಡಿ ಎಸ ಕರ್ಕಿ ಸಾಹಿತ್ಯ ಪ್ರತಿಷ್ಠಾನದ 2022 ಶಾಲಿನ ಶ್ರೇಷ್ಠ ಕವನ ಸಂಕಲನ ಪ್ರಶಸ್ತಿ ಪಡೆದಿದ್ದಾರೆ. ಜನೆವರಿ 2023 ರಲ್ಲಿ ಡಾ ಎಂ ಎಂ ಕಲಬುರ್ಗಿ ಅವರ ಸಮಗ್ರ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಪ್ರಸಕ್ತ ಸಂಗಾತಿಯಲ್ಲಿ ಸಾವಿಲ್ಲದ ಶರಣರು ಎಂಬ ಮಾಲಿಕೆಯಲ್ಲಿ ಪ್ರತಿ ವಾರ ತಮ್ಮ ಲೇಖನವನ್ನು ಪ್ರಕಟಿಸುವರು, ಅವರ ಜ್ಞಾನ ವಿದ್ವತ್ತು ಅನುಭವಗಳನ್ನು ಮುಂಬರುವ ದಿನಗಳಲ್ಲಿ ಓದಿ ಆನಂದಿಸಿರಿ

4 thoughts on “

  1. ಮೇಧಾರ ಕೇತಯ್ಯನವರ ಬಗೆಗೆ… ಅರ್ಥಪೂರ್ಣವಾದ ಮತ್ತು ವೈಚಾರಿಕತೆಯಿಂದ ಕೂಡಿದ ಲೇಖನ… ಸರ್

    ಸುಶಿ

Leave a Reply

Back To Top