ಕಾವ್ಯಸಂಗಾತಿ
ದೇವರಾಜ M ಭೋಗಾಪುರ-
ಕರ್ಣನಂತಾಗದಿರಿ ಕನ್ನಡಿಗರೆ…
ಕರ್ಣನಂತಾಗದಿರಿ ಕನ್ನಡಿಗರೆ
ನಾವು ಸೂತರೂ ಅಲ್ಲ,ಶಾಪಗ್ರಸ್ಥರೂ ಅಲ್ಲ
ಇಂದ್ರನ ಮೋಸದ ವೇಷವಿಲ್ಲ
ಅನ್ಯ ಮಾತೆಗೆ ಭಾಷೆಯನಿಕ್ಕಿಲ್ಲ
ಅಧರ್ಮಿಗಳ ಮೈತ್ರಿ ಇಲ್ಲವೇ ಇಲ್ಲ
ಮತ್ತಾವುದರ ಪಾಪಕೆ ಕನ್ನಡವನೇ-
ದಾನಕೊಟ್ಟು ಕರ್ಣನಂತಾಗುತಿವೆವು
ಬಂದವರನ್ನೆಲ್ಲ ಮಮತೆಯಲಿ ಕರೆದು
ನೆಲ, ಜಲ, ಗಾಳಿಯನವರಿಗೆರೆದು
ಅವರ ನುಡಿಯಲೇ ಬೋರ್ಡು ಬರೆದು
ಕನ್ನಡವನದರಲಿ ಕಿರಿದಾಗಿ ತುರುಕಿದರೆ
ಉಳಿದೀತಾದರೂ ಹೇಗೆ?ಕನ್ನಡ ಬೆಳೆದೀತಾದರೂ ಹೇಗೆ?
ಕನ್ನಡ ನುಡಿವ ಬಾಯ್ಗಳಿಗೆ
ಹಿಂದಿ ಆಂಗ್ಲಗಳ ಬೇಲಿ ಯಾಕೆ?
ಕೊಡುವುದನ್ನು ಕಲಿಸಿದ ಕೈಗಳಿಗೆ
ಬೇಡುವ ಗಳಿಗೆ ಬಂದಿತೇಕೆ?
ಸಹಸ್ರ ವರ್ಷಗಳ ಮೀರಿದ ಇತಿಹಾಸ
ಸರ್ವರೂ ಎಮಗೆ ಮಾಡುತಿಹರು ಮೋಸ
ಕಾವೇರಿ ಮಹದಾಯಿ ಬೆಳಗಾವಿ ನೋವು
ಕೇರಳದ ಕಾಸರವಿರದ ಬೇಸರ
ಕೇಳಿದ್ದೆಲ್ಲ ಕೊಟ್ಟರ ನಮಗ್ಯಾರು ಆಸರ?
—————————-
ದೇವರಾಜ M ಭೋಗಾಪುರ-