ಪ್ರೇಮಾ ಟಿ.ಎಂ.ಆರ್. ಕನ್ನಡ ನಾಡು ನುಡಿ

ವಿಶೇಷ ಬರಹ

ಪ್ರೇಮಾ ಟಿ.ಎಂ.ಆರ್.

ಕನ್ನಡ ನಾಡು ನುಡಿ

ಸಹ್ಯಾದ್ರಿಯ ಹಚ್ಚ ಹಸುರಿನ ತೋಳುಗಳಲ್ಲಿ ಹಬ್ಬಿನಿಂತ ಕನ್ನಡ ನಾಡು ಅರಬಿಯ ಸಾಗರದೊಡಲ ಗಡಿಯೊಳಗೆ ಸಂಪನ್ನವಾದ ನಾಡು.. ಹಿಂದೊಮ್ಮೆ ಕಾವೇರಿಯಿಂದ ಮಾ ಗೋದಾವರಿಯ ತನಕ ಪಸರಿಸಿದ ಕನ್ನಡ ನಾಡು  ಕುರಿತೋದದೆಯೂ ಕಾವ್ಯ ಪ್ರಯೋಗ ಪರಿಣಿತ ಮತಿಗಳ ಬೀಡಾಗಿತ್ತು. ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಕನ್ನಡಕ್ಕಾಗಿ ಕೊರಳೆತ್ತು ನಿನ್ನ ದನಿ ಪಾಂಚಜನ್ಯವಾಗುತ್ತದೆ ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು ಅದು ಗೋವರ್ಧನ ಗಿರಿಯಾಗುತ್ತದೆ ಎಂದಿದ್ದಾರೆ ಕನ್ನಡ ನಾಡು ನುಡಿಯ ಬಗ್ಗೆ ಅನನ್ಯವಾದ ಪ್ರೀತಿಯನ್ನ ಎದೆಯೊಳಗಿಟ್ಟುಕೊಂಡಿದ್ದ ರಾಷ್ಟ್ರಕವಿ ಕುವೆಂಪು. ಕನ್ನಡದಲ್ಲಿ ದೊರೆತ ಮೊದಲ ಗ್ರಂಥ ಕವಿರಾಜ ಮಾರ್ಗ ದ ಕರ್ತೃ ಶ್ರೀ ವಿಜಯನಿಂದ ಹಿಡಿದು ಪಂಪ ರನ್ನ ಪೊನ್ನರಾದಿಯಾಗಿ ಬೇಂದ್ರೆ  ಕುವೆಂಪು ನಮ್ಮ ನಿಸಾರಹಮದ್ ರ ವರೆಗಿನ ಎಲ್ಲ ಕವಿಗಳು  ತಾವು ಕಂಡ ಕನ್ನಡ ನಾಡಿನ ಪೃಕರ್ತಿ  ಸೌಂದರ್ಯವನ್ನು ನಾಡು ಕಂಡ ಸಂಪದ್ಭರಿತ ಸುವರ್ಣ ಯುಗವನ್ನು   ಇಲ್ಲಿನ ಅದ್ಭುತವಾದ ಶಿಲ್ಪಕಲೆ ಸಾಹಿತ್ಯ ಸಂಗೀತದ ಸಂಸ್ಕೃತಿಗಳನ್ನು   ಪೃಕರ್ತಿ ಸೌಂದರ್ಯ ದಿಂದ ತುಂಬಿ ತುಳುಕಿ ಕಂಗೊಳಿಸುವ ಕನ್ನಡ ನಾಡಿನ ವರ್ಣನೆಯನ್ನು ತಮ್ಮಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇಂತಿರ್ಪ ಕನ್ನಡ ನಾಡು ಇಂದು ಹೇಗಿದೆ ಎಂಬುದನ್ನ ಮೇಲ್ನೋಟಕ್ಕೆ ಗಮನಿಸಿದರೂ ಕೂಡ ಕನ್ನಡ ನಾಡು ನುಡಿಯ ವೈಭವ ಎಲ್ಲೋ ಕಳೆದುಹೋಗಿದೆಯೆಂಬುದನ್ನು ನಾವು ಗಮನಿಸಬಹುದು. ಕನ್ನಡ ನಾಡು ಜಾತಿ ಮತ ಪಂಥಗಳ ವೈಷಮ್ಯಗಳಿಗೆ ಸಿಕ್ಕು ನಲುಗುತ್ತಿದ್ದರೆ,

ಕನ್ನಡ ನುಡಿ ಹತ್ತಾರು ದಿಕ್ಕುಗಳಿಂದಲೂ ಒತ್ತಿ ಬರುತ್ತಿರುವ ಪರಭಾಷಾ ಹಕ್ಕೊತ್ತಾಯಗಳಿಂದ ನಲುಗುತ್ತಿದೆ. ಒಂದು ಅತ್ಯಂತ ವಿಷಾದನೀಯವಾದ ವಿಚಾರವೇನೆಂದರೆ  ಕನ್ನಡ ನಾಡು ನುಡಿ ತನ್ನ ಕಂದಮ್ಮಗಳಾದ ಕನ್ನಡಿಗರಿಂದಲೇ ಅಸಡ್ಡೆಗೆ ದೌರ್ಜನ್ಯಕ್ಕೆ  ಒಳಗಾಗುತ್ತಿದೆ. ಪಟ್ಟಣಿಗರು ಕನ್ನಡ ಉಳಿಸುವ ಕರ್ತವ್ಯ ಹಳ್ಳಿಗರದು ಎಂದುಕೊಂಡರೆ ಹಳ್ಳಿಗರು ತಮ್ಮ ಮಕ್ಕಳು ಅವಕಾಶ ವಂಚಿತರಾಗಕೂಡದು ಎಂಬ ಛಲದಿಂದ ಮಕ್ಕಳನ್ನು ಮುಂದಿಟ್ಟುಕೊಂಡು ಇಂಗ್ಲೀಷ್ ಸ್ಕೂಲುಗಳಿರುವ ಪಟ್ಟಣದ ಕಡೆ ಮುಖಮಾಡಿ ಓಡುತ್ತಿದ್ದಾರೆ. ಕನ್ನಡ ಶಾಲೆಗಳು ಮಕ್ಕಳ ಸಂಖ್ಯೆಯ ಕೊರತೆಯಿಂದ ಮುಚ್ಚುವ ಸ್ಥಿತಿಗೆ ಬಂದಿದೆ.  ತಾನು ವಿಶ್ವ ಭಾಷೆಯಾಗುವ ಹೆಬ್ಬಯಕೆಯೊಂದಿಗೆ ಮಲೆತು ನಿಂತಿರುವ ಇಂಗ್ಲೀಷ್ ಅಷ್ಟೇ ಅಲ್ಲ ವಲಸಿಗಳಾಗಿ ಬಂದ ಹಿಂದಿ ತೆಲಗು ತಮಿಳು ಬಂಗಾಳಿ ಹೀಗೆ ಹಲವು ಭಾಷೆಗಳು ಸುತ್ತುಗಟ್ಟಿ ಕನ್ನಡದ ಉಸಿರುಗಟ್ಟಿಸುತ್ತಿವೆ. ಕನ್ನಡದ್ದೇ ಆದ ಸಂಸ್ಕೃತಿ ಕನ್ನಡದ ಸಂಸ್ಕಾರ ಕನ್ನಡದ ಆಚಾರ ವಿಚಾರಗಳು ಅಳಿವಿನಂಚಿಗೆ ನಿಂತಿವೆ.   ಕನ್ನಡ ನಾಡಿನ ನಿತ್ಯ ಹರಿದ್ವರ್ಣದ ಸಹ್ಯಾದಿಯು ಕನ್ನಡಿಗನ ಸ್ವಾರ್ಥ ಕ್ಕೆ ಬೋಳಾಗುತ್ತಿದೆ..  ಮಹಾಲಿಂಗರಂಗನೆಂಬ ಕಾವ್ಯನಾಮದ ಕವಿ ಶ್ರೀರಂಗ ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೇ…  ಸಂಸ್ಕೃತದಲ್ಲಿನ್ನೆನು? ಎಂದಿದ್ದು ಹದಿನೇಳನೆಯ ಶತಮಾನದಲ್ಲಿ .

ಅಂದೇ ಕನ್ನಡದ ಕವಿಗಳು ಅನ್ಯ ಭಾಷೆಯ ಪ್ರಯೋಗವನ್ನು ವಿರೋದಿಸಿದ್ದನ್ನು ನಾವು ಕಾಣುತ್ತೇವೆ. ಕನ್ನಡದಲ್ಲಿ ಹರಿ ಬರೆಯುವದನ್ನ ಕನ್ನಡದಲ್ಲಿ ಹರ ತಿಯುದನ್ನ ಕಂಡ, ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ನಿತ್ಯೋತ್ಸವವನ್ನು ಕಂಡ, ಕನ್ನಡದ ಸವಿನುಡಿಗಳಲ್ಲಿ ಹಾಲಿನ ಹೊಳೆಯನ್ನು ಜೇನಿನ ಮಳೆಯನ್ನು ಅಮೃತವನ್ನು ಕಂಡುಂಡ , ಕನ್ನಡಕೆ ಹೋರಾಡೆಂದು ಜೋಗುಳದ ಹರಕೆ ಕಟ್ಟಿದ, ಭಾರತದ ತನುಜಾತೆಯನ್ನು ತಲೆಯ ಮೇಲೆ ಹೊತ್ತು ಕನ್ನಡ ದೀಪವನ್ನು ಹಚ್ಚಿದ ಕವಿಗಳು ಇಂದು ಜೀವಂತವಾಗಿದ್ದರೆ ಕನ್ನಡದ ನಾಡು ನುಡಿಯ  ಇಂದಿನ ಸ್ಥಿತಿಗತಿಗಳನ್ನು ಅವರು ಕಂಡಿದ್ದರೆ ಅದೆಷ್ಟು ಕರಗಿ ಮರುಗುತ್ತಿತ್ತು ಅವರೆದೆ ಭಾವಗಳು… ಭಾವುಕತೆಯನ್ನು ಕಳೆದುಕೊಂಡ ಕನ್ನಡಿಗರೆದೆ ಮತ್ತೆ ನಾಡುನುಡಿಯೆಡೆಗೆ ಕರಗಿ ಹರಿಯುವ ಕಾಲಕ್ಕಾಗಿ ಕಾಯುವ  ನಾನು ಕನ್ನಡತಿ ನನ್ನದು ಕನ್ನಡ ನುಡಿ ವಂದನೆಗಳು


ಪ್ರೇಮಾ ಟಿ.ಎಂ.ಆರ್

Leave a Reply

Back To Top