ಸಣ್ಣವರಾಗುವ ಬಗೆ-ಡಾ. ಮೀನಾಕ್ಷಿ ಪಾಟೀಲ್

ಲೇಖನ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ್

ಸಣ್ಣವರಾಗುವ ಬಗೆ

ಮೂಡಣದ ಅರುಣೋದಯವನ್ನು ಆರಾಧಿಸುತ್ತ ಅದನ್ನು ಸೂರ್ಯೋದಯದ ಕವನಗಳ ಮುಖಾಂತರ ಬಿಂಬಿಸಿದೆ ಕವಿಯೋರ್ವನ ಹಾಡೊಂದನ್ನು ಶಾಲಾ ಚಿಣ್ಣರ ಕನ್ನಡ ಪಠ್ಯ ಒಂದರಲ್ಲಿ ಅಳವಡಿಸಲಾಗಿತ್ತು. ಅದರೊಳಗೆ ಅಡಗಿದ ಅರ್ಥ ಶ್ರೀಮಂತಿಕೆಯ ಕಾರಣದಿಂದ ಅದು ನಾ ಬೆಳೆದಂತೆ ನನ್ನಲ್ಲಿ ಬಿಚ್ಚಿಕೊಳ್ಳುತ್ತಲೇ ಬಂತು.

ಮೂಡುವನು ರವಿ ಮೂಡುವನು
ಮೂಡಣ ರಂಗಸ್ಥಳದಲಿ
ನೆತ್ತರ ಸುರಿಸುವನು

……………..
ಮೇಲೇರುವನು ರವಿ ಮೇಲೇರುವನು
ಮೇಲೇರುತ ಚಿಕ್ಕವನಾಗುವನು
ಮೇಲೇರಿದ ಮೇಲೆ ತಾ ಚಿಕ್ಕವನಾಗಲೇಬೇಕೆಂಬ ಸತ್ಯವ ಸಾರುವನು

ಇದಕ್ಕಿಂತ ಸರಳ ಕಂದನ ಕಾವ್ಯ ಮತ್ತೊಂದು ಇರಲಿಕ್ಕಿಲ್ಲವೆನಿಸುತ್ತದೆ. ನಿತ್ಯ ಸತ್ಯದ ಈ ಹಾಡು ನೆನಪಿನಲ್ಲೂ ಉಳಿಯಲು ಹೆಚ್ಚು ತಿಣುಕುವುದು ಸಹ ಬೇಕಿಲ್ಲವೇನಿಸುತ್ತದೆ.
ಕವಿ ಮಕ್ಕಳ ಹೊರಗಣ್ಣು ಮತ್ತು ದೊಡ್ಡವರ ಒಳಗಣ್ಣುಗಳೆರಡು ವಿಶ್ವಾಸ ಒಂದರ ಮೇಲೆ ಬೆಳಕು ಚೆಲ್ಲುತ್ತಾನೆ. ಆ ಬೆಳಕಿನಲ್ಲಿ ಒಂದು ಬಹಿರಂಗ ಇನ್ನೊಂದು ಅಂತರಂಗದ ಭಾವ ಚಿತ್ರಿಸಲ್ಪಡುತ್ತದೆ. ಸೂರ್ಯ, ಸೂರ್ಯನ ನಡೆಯ ಆ ಹೊರ ಮುಖವನ್ನು ಹೊರಗಣ್ಣು ಇರುವವರೆಲ್ಲರೂ ಕಾಣಲು ಸಾಧ್ಯವಿರುವ ಕಾರಣ, ಇಲ್ಲಿ ಒಳ ಮುಖವನ್ನು ನೋಡುವುದು ಕವಿಗೆ ಮಾತ್ರ ಉಳಿದುಕೊಳ್ಳುತ್ತದೆ.
ಈ ಹಾಡನ್ನು ಯಾವ ಶಬ್ದಾಡಂಬರವಿಲ್ಲದೆ ಸುಲಲಿತ ಅಲಂಕಾರ ಶೈಲಿಯಲ್ಲಿ ಮಕ್ಕಳ ಮನೋರಂಜನೆಗಾಗಿ ಕವಿ ಬರೆದಿದ್ದರೂ ಕೂಡ ಅದರಲ್ಲಿ ಅಡಗಿದ ತತ್ವವು ಅರ್ಥೈಸುವವನ ವ್ಯಾಖ್ಯಾನಗಳನ್ನು ಮೀರಿ ನಿಲ್ಲುವಂಥದ್ದು ಆಗಿದೆ. ಆದಾಗಿಯೂ ನೋಡುವವರ ದೃಷ್ಟಿಕೋನದ ನೆಲೆಗೆ ಭಿನ್ನವಾದ ಗ್ರಹಿಕೆಗೆ ಒಳಪಡುವಂಥದ್ದು. ವೈಜ್ಞಾನಿಕತೆ ವಾಸ್ತವತೆ, ಭೌತಿಕತೆ, ನಿತ್ಯತೆ, ದಾರ್ಶನಿಕತೆ  ಈ ಎಲ್ಲವನ್ನು ಒಳಗೊಂಡಂತೆ ಒಂದೇ ಬಾರಿಗೆ ಹಲವು ದೃಷ್ಟಿಕೋನಗಳಿಂದ ನೋಡಿದಷ್ಟು ಅರ್ಥಶೃಂಗ ಕಾಣಿಸಿಕೊಳ್ಳುತ್ತವೆ.ಮಗುವಿನಿಂದ ಹಿಡಿದು ಎಲ್ಲ ವಯೋಮಾನದವರ ಚಿಂತನೆಗೆ ಒಂದೊಂದು ರೀತಿಯ ಗ್ರಾಸ ಒದಗಿಸುತ್ತ, ಈ ಕವನದ ಸಾಲುಗಳಲ್ಲಿನ ಅರ್ಥಗಳು ಸ್ಪುರಿಸುತ್ತವೆ.
ಸೂರ್ಯ ವಿಜ್ಞಾನ ಸತ್ಯದಂತೆ ಸರ್ವಶಕ್ತಿಯ ಮೂಲ. ಭೂ ಗ್ರಹದ ಮೇಲಿನ ಎಲ್ಲ ಸಂಗತಿ ಘಟನೆಗಳಿಗೆ ಆತನೇ ಆಧಾರ. ಹಾಗಾಗಿ ಎಲ್ಲ ವಿಚಾರದಿಂದಲೂ ಭಾಸ್ಕರ ದೈತ್ಯಕಾಯ. ತಾನು ನಿರ್ವಹಿಸುವ ನಿತ್ಯ ಕಾಯಕದಿಂದಲೂ ಆತ ದೊಡ್ಡವನು. ಹೀಗಿರುವಾಗ ದಿನವೂ ಜನಿಸಿ ಮರಣಿಸಿದಂತೆ ಪಡುವಣದತ್ತ ಸಾಗುವಲ್ಲಿ ಮಹತ್ತರವನ್ನು ಬಿತ್ತರಿಸುತ್ತಾ ಔನ್ನತ್ಯದ ತುತ್ತ ತುದಿಯಲ್ಲಿರುವಾಗಲೇ ಸಣ್ಣವನಾಗಿ ತೋರುತ್ತಾನೆ. ಹಾಗೆ ಚಿಕ್ಕವನಾದುದರ ತತ್ವ ಏನೆಂಬುದನ್ನು ಒಳಗಣ್ಣಿನಿಂದ ಗುರುತಿಸಿದ ಕವಿ ಅದನ್ನೇ ಯಥಾರ್ಥವಾಗಿ ಹಾಡಾಗಿಸುವಲ್ಲಿ ಯಶಸ್ವಿಯಾಗುತ್ತಾನೆ .

 ಈ ಹಿನ್ನೆಲೆಯಲ್ಲಿ ಮನುಷ್ಯರು ನಾವು ಹೊಂದುವ ಉನ್ನತಿಗಳು ಸೇವಕನ ಶ್ರೇಷ್ಠ ಕಾಯಕತನವನ್ನು ಮಾತ್ರ ಅವು ಸೂಚಿಸುತ್ತವೆ. ಆ ತುದಿಗೆ ಏರುವ ನಾವೂ ಸಣ್ಣವರೇ ಆಗುವ ಅವಕಾಶಗಳನ್ನು ಒದಗಿಸುತ್ತದೆ . ಒಂದೊಮ್ಮೆ ತುತ್ತ ತುದಿಯಲ್ಲಿದ್ದು ಇನ್ನೂ ದೊಡ್ಡವರೆ ಎಂಬ ಭಾವನೆ ಮಾತ್ರ ಉಳಿದುಕೊಂಡರೆ ನೆಲವ ಬಿಟ್ಟು ಎತ್ತರದ ಸ್ಥಿತಿಯಲ್ಲಿದ್ದೇವೆ ಎಂಬ ಎಚ್ಚರ ತಪ್ಪಿ ಹೋಗುತ್ತದೆ.

ಇಂಥ ವಿವೇಚನೆಯನ್ನು ಹೊಂದಿರಬೇಕಾದ ನಾವು ವಿಶ್ವ ಮಾನ್ಯ ಬಸವಣ್ಣನವರ ಸೂಳ್ನುಡಿ ಒಂದನ್ನು ಸ್ಮೃತಿಗೆ ತಂದುಕೊಳ್ಳ ಬೇಕಾಗುತ್ತದೆ.”ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ”ಎಂಬ ಆ ಮಾತಿನ ಅರ್ಥವನ್ನು ಬಿಚ್ಚಿಕೊಳ್ಳುತ್ತಾ ಹೋದಾಗ ಬಸವಣ್ಣನವರ ಆ ಕಿರಿತನ ಮುಟ್ಟಲು ಅವರು ಮೆಟ್ಟಿದ ಹಾದಿ ಕಾಯಕ ಮಾರ್ಗದ ಪಾರಮಾರ್ಥಿಕತನದ್ದು. ಬಸವಣ್ಣನವರ ಮಟ್ಟದಲ್ಲಿ ಸಣ್ಣವರಾಗುವುದು ಅವರಿಂದಲೇ ಮಾತ್ರ ಸಾಧ್ಯವಿತ್ತು.

ಹಾಗೆಯೇ ಫಲ ಬಿಟ್ಟ ಮರವು “ಮಾಗಿದ ಭಾರ” ದಿಂದ ಬಾಗಿಕೊಂಡಿರುತ್ತದೆ. ಸುಳಿ ಹೊಡೆದು ಬೀಸುವ ಹುಸಿಗಾಳಿ ಹಾಯ್ದರೂ ಸಾಕು ಬುಡಮೇಲಾಗುತ್ತದೆ.

ಜೇಕಿ (ಹುಲ್ಲು) ನೊಡನೆ ಬೆಳೆದ ಜಾಲಿಯ ಮರ ತಾ ದಾಂಡಿಗನೆಂದು ಪ್ರವಾಹಕ್ಕೆ ಎದುರಾಗಿ ನಿಲ್ಲುವುದನ್ನು ಕಂಡು ಮರುಗಿದ ಹುಲ್ಲು, ಎಮ್ಮಗಿಂತಲೂ ಬಲಿಷ್ಠರಾದ ವರೆದು ಬಾಗುವುದು ಬಾಳ್ವೆಯ ಗುಟ್ಟೆಂದು ಪಿಸು ನುಡಿದಾಗಲೂ ಮೊಂಡು ಮರ ಬುಡಮೇಲಾಗುವ ತನಕ ಬಡಿವಾರದಲ್ಲೇ ಇತ್ತು .ಕೊನೆಗೊಮ್ಮೆ ಅಂತ್ಯಕಂಡ ಅದರ ಸ್ಥಿತಿಗೆ ಮರಗುತ್ತಲೇ ಇದ್ದ ಜೇಕು ಸಣ್ಣವರ ಕಥೆ ಹೇಳುತ್ತಲೇ ಬಾಳುತ್ತಿತ್ತಂತೆ.

ತಾತ್ಪರ್ಯವಿಷ್ಟೆ–”ತೆನೆ ಬಿಟ್ಟ ಭತ್ತ ಬಾಗುವುದು
ಗೊನೆ ಬಿಟ್ಟ ಬಾಳೆ ಬಾಗಲೇಬೇಕು ಬಾಗುವುದೇ ಬದುಕು ಬೀಗುವುದು ಅಲ್ಲ”ಎಂಬ ಹಿರಿಯರ ಮಾತಿನಂತೆ ಫಲ ಬಿಟ್ಟು ಬಾಗಿಕೊಂಡಿದ್ದ ಮರದಂತೆ, ಸರ್ವ ಶಕ್ತಿಯಾಗಿ ತುದಿಗೇರುವ ಸೂರ್ಯ ಸಣ್ಣವನಾದಂತೆ, ಶಿವನೆಂಬ ಪದಕ್ಕೆ ಸರಿಸಾಟಿಯಾಗಿ ನಿಂತ ಬಸವಣ್ಣ ತಾನು ಕಿರಿಯನೆಂದುಕೊಂಡಂತೆ, ತಾಳಿ ಬಾಳಬೇಕೆನ್ನುವ ಜೇಕಿನಂತೆ (ಹುಲ್ಲು )ಅರಿವಿನ ಜನ್ಮದಲ್ಲಿ ಅವತರಿಸಿದ ಮಾನವ ದೃಷ್ಟಾಂತಗಳನ್ನು ಇತಿಹಾಸವನ್ನು, ಚರಿತ್ರೆಗಳನ್ನು ಅರಿತು ವರ್ತಮಾನ ,ಭವಿಷ್ಯಗಳನ್ನು ಸಾರ್ಥಕಪಡಿಸಿಕೊಳ್ಳಬೇಕು. ನಿಜವಾಗಿಯೂ ದೊಡ್ಡವರಾಗುವ ಬಗೆ ಸಣ್ಣವರಾಗುವ ದೊಡ್ಡತನದಲ್ಲಿದೆ ಎಂಬ ತತ್ವವನ್ನು ತಿಳಿಯುವ ಪ್ರಯತ್ನಕ್ಕೆ ಮುಂದಾಗಬೇಕು . ಮನೆ ಅಥವಾ ಊರು ಅಥವಾ ದೇಶದ ಯಾವ ಮುಖಂಡನೆ ಆಗಿರಲಿ ತಿಳಿದು ಬದುಕುವುದರಲ್ಲಿ ಸಾರ್ಥಕವಿದೆ.


ಡಾ. ಮೀನಾಕ್ಷಿ ಪಾಟೀಲ್ 

2 thoughts on “ಸಣ್ಣವರಾಗುವ ಬಗೆ-ಡಾ. ಮೀನಾಕ್ಷಿ ಪಾಟೀಲ್

  1. ದೊಡ್ಡವರಾಗುವ ಬಗೆ… ಸಣ್ಣವರಾಗುವ ದೊಡ್ಡತನದಲ್ಲಿದೆ… ಎನ್ನುವ ನಿಮ್ಮ ಲೇಖನದ
    ತಿರುಳು ಬಹಳ ಇಷ್ಟವಾಯ್ತು… ಅದೂ ನಮ್ಮ
    ಬಸವಣ್ಣನವರ ಸೂಳ್ನುಡಿಯೊಂದಿಗೆ ಅರ್ಥ
    ವತ್ತಾಗಿ ಮೂಡಿ ಬಂದಿದೆ

    ಸುಶಿ ( ಸುಧಾ ಶಿವಾನಂದ )

Leave a Reply

Back To Top