ಇಂದಿರಾ ಮೋಟೆಬೆನ್ನೂರ ಕವಿತೆ,ನೀನಾದೆ ಸಂಗಾತಿ

ಕಾವ್ಯಸಂಗಾತಿ

ಇಂದಿರಾ ಮೋಟೆಬೆನ್ನೂರ

ನೀನಾದೆ ಸಂಗಾತಿ

ಎದೆಯ ತಳಮಳವೆಲ್ಲ
ಪದಗಳಲಿ ಹರಿದು..
ಮುದದ ಭಾವಗಳೆಲ್ಲ
ಕದವ ತೆರೆದು..
ಸಂಗಾತಿಯ ಸೇರಲು
ತವಕಿಸುವಾಗ…
ಸಂಗಾತಿಯೇ
ನೀನಾದೆ ಸಂಗಾತಿಯೇ..

ಗೆಳೆಯ ಹೃದಯ
ಮಿಡಿಯಲು..
ಗೆಳತಿ ಒಲವ
ನುಡಿಯಲು…
ಮಿಡಿದ ಜೀವಗಳ
ಸ್ನೇಹ ಪ್ರೀತಿ
ಕವನ ದವನ
ಸಂದೇಶ ವಾಹಕ
ಮೇಘದೂತ
ನೀನಾದೆ ಸಂಗಾತಿಯೇ…

ಅಂಚೆಯ ಅಣ್ಣ
ಸಂದೇಶ ವಾಹಕ..
ಚಿತ್ರ ಬಿಡಿಸುವ
ಚಿತ್ರಕಾರ…
ಪತ್ರ ಮಿತ್ರ
ಹೃದಯ ಹೃದಯ
ಸುರಮ್ಯ ಸೇತುವೆ
ನೀನಾದೆ ಸಂಗಾತಿಯೇ….

ದೂರ ದಾರಿಯ
ಪಯಣದ ಸವಿ ನೆನಪ
ಬುತ್ತಿಯ ….
ದೂರು ದುಮ್ಮಾನ
ಹಲವು ಕನಸು
ಮಿಡಿವ ಮನಸು
ತುಡಿವ ಹೃದಯಗಳ
ಬೆಸೆವ ತಂತಿ
ನೀನಾದೆ ಸಂಗಾತಿಯೇ…

ಬಿರಿದ ಸುಮಧುರ
ಮನ ಮಕರಂದ
ಸವಿ ಅನುಬಂಧ
ಅಲರುಣಿ ಆಲಾಪ
ಮಧುವನರಸುತ ಬಂದ
ದುಂಬಿ ಝೇಂಕಾರ ಸಲ್ಲಾಪ
ನಲಿವ ರಾಯಭಾರಿ
ನೀನಾದೆ ಸಂಗಾತಿಯೇ

ಮೌನದಲಿ ಬಿಕ್ಕುತಲೇ
ಪ್ರೀತಿ ಸ್ವಾತಿಮಳೆಗೆ
ಮಾತು ಮುತ್ತಾಗಿ
ಬಿತ್ತಿದ ಭಾವವದು
ಪಡಲೊಡೆದು ಕಡಲಾಗೆ
ಒಡಲೆಲ್ಲ ಭೋರ್ಗರೆದು
ಧುಮ್ಮಿಕ್ಕಿ ಉಕ್ಕುವ
ಭಾವತರಂಗದಿ
ತೇಲುವ ದೋಣಿಯ
ನಾವಿಕನ ಹರಿಗೋಲು
ನೀನಾದೆ ಸಂಗಾತಿಯೇ….

ಶಶಿ ಮೂಡಿ ಹೃದಯದಿ
ಸ್ನೇಹ ಬೆಳದಿಂಗಳಲಿ
ಇಂದು ಮಿಂದಿರಲು…
ಕರಿಕಪ್ಪು ಕಾರ್ಮೋಡ
ಕಂಗಳ ಮುಸುಕಿ
ಬೆಳಕು ಕಂದಿರಲು…
ಎದೆಯು ಬೆಂದಿರಲು
ಕುದಿಯೆಸರ ಚೆಲ್ಲಲು
ಜೀವ ಭಾವ ನೊಂದಿರಲು
ದುಃಖ ಉಮ್ಮಳವು
ನೇಯಲು ನೋವಿನೆಳೆ
ನೀನಾದೆ ಸಂಗಾತಿಯೇ..


ಇಂದಿರಾ ಮೋಟೆಬೆನ್ನೂರ

One thought on “ಇಂದಿರಾ ಮೋಟೆಬೆನ್ನೂರ ಕವಿತೆ,ನೀನಾದೆ ಸಂಗಾತಿ

  1. ವ್ಹಾ ತುಂಬ ಭಾವನಾತ್ಮಕ ಸುಂದರ ಶಬ್ದಗಳ ಮಾಲೆ
    ಅನ್ನಪೂರ್ಣ ಸಕ್ರೋಜಿ

Leave a Reply

Back To Top