ಸಂಗಾತಿವಾರ್ಷಿಕೆ ವಿಶೇಷಾಂಕ
ಎಸ್ ನಾಗಶ್ರೀ ಅಜಯ್
ಪಾರ್ಲರ್ ತಿಥಿ
ಸೋಮವಾರದ ಬೆಳಗು. ಇನ್ನೇನು ಮಧ್ಯಾಹ್ನವೆನ್ನಲು ಒಂದು ಗಂಟೆ ಬಾಕಿ ಇತ್ತು. ಗಂಡ- ಮಗಳನ್ನು ಹೊರಗೆ ಕಳಿಸಿದ ಮೇಲೆ, ತುರ್ತಿನ ಕೆಲಸ ಯಾವುದೂ ಬಾಕಿಯಿಲ್ಲವೆಂಬ ನಿರಾಳ ಸ್ಥಿತಿಯಲ್ಲಿ ಒಂದು ಚಹಾ ಕುಡಿಯುವ ಉಮೇದು ಹುಟ್ಟಿತು. ಬೆಳಗಿನ ಗಡಿಬಿಡಿಯಲ್ಲಿ, ಗುಟುಕು ಗುಟುಕಾಗಿ ಆಸ್ವಾದಿಸುವ ಬಿಡುವು ದೊರೆಯುತ್ತಿರಲಿಲ್ಲ. ಸಂಜೆಯ ಹೊತ್ತಿಗೆ ಹೈರಾಣಾದ ದೇಹ ಮನಸ್ಸಿಗೆ ಚಹಾ ಔಷಧಿಯಂತೆ. ಬಿಡುವಿನ ಈ ಘಳಿಗೆಯಲ್ಲಿ ಮಾತ್ರ ಅಕ್ಷರಶಃ ಅಮೃತ. ಸುಧಾ ತನ್ನ ಪಾಲಿನ ಅಮೃತ ಹಿಡಿಯುವ ಮುಂಚೆ ಫೋನನ್ನು ಸೈಲೆಂಟ್ ಮೋಡ್ ಗೆ ಹಾಕಿ ದೂರವಿಟ್ಟು, ಹಾಗೆಯೇ ನೆಲದ ಮೇಲೆ ಕಾಲು ಚಾಚಿ ಕುಳಿತು ಒಂದೊಂದೇ ಹನಿ ಸುಡುವ ಚಹಾ ಗುಟುಕರಿಸುತ್ತಿದ್ದಳು. ಆ ಹೊತ್ತಿನಲ್ಲಿ ಯಾರೂ ಮನೆ ಬಾಗಿಲಿಗೆ ಬಾರದಿದ್ದರೆ ಸಾಕೆನಿಸುತ್ತಿತ್ತು ಅವಳಿಗೆ. ತನ್ನೊಂದಿಗೆ ತಾನಷ್ಟೇ ಇರುವ ನಿರಭ್ರ ಶಾಂತಿಯನ್ನು ಆಗ ಅನುಭವಿಸಿದರೆ, ಆಮೇಲೆ ದಿನಪೂರ್ತಿ ಓಟಕ್ಕೆ ಸಿಲುಕಿದರೂ ಆಯಾಸವೆನಿಸುತ್ತಿರಲಿಲ್ಲ. ಕಿಟಕಿಗೆ ಇಳಿಬಿಟ್ಟ ಪರದೆಯ ಹೂಬಳ್ಳಿ ಚಿತ್ತಾರ, ತನ್ನ ಉಂಗುರದ ಬೆರಳಿಗೆ ತೊಡಿಸಿದ ಮಾಣಿಕ್ಯದೊಳಗೆ ಕಾಣುವ ಗೆರೆಗಳು, ಮಗಳು ಬಿಡಿಸಿರುವ ಮೂಗಿಲ್ಲದ ಗೊಂಬೆ ಚಿತ್ರ ಹೀಗೆ ಏನನ್ನೋ ದಿಟ್ಟಿಸಿ ನೋಡುತ್ತಾ ಹಾಗೆಯೇ ಅರ್ಧಗಂಟೆ ಕಳೆದುಬಿಡುವ ಸುಧಾಗೆ ಇವತ್ತು ಅಮ್ಮನ ಫೋನ್ ಇನ್ನೂ ಬಂದಿಲ್ಲ ಎನ್ನುವುದು ನೆನಪಾಗಿದ್ದೇ ತಡ, ಏಕಿರಬಹುದು ಎಂಬ ಪ್ರಶ್ನೆಯೊಂದಿಗೆ ಮಿಕ್ಕ ಚಹಾವನ್ನು ಎರಡು ಗುಟುಕಲ್ಲೇ ಮುಗಿಸಿ, ಎದ್ದಳು.
ಸೈಲೆಂಟ್ ಮೋಡಿನಲ್ಲಿದ್ದ ಮೊಬೈಲ್ ಗೆ ಅಮ್ಮನ ಕಾಲ್ ಆಗಷ್ಟೇ ಬರಲು ಶುರುವಾಯಿತು. “ಹಲೋ …” ಎಂದಿದ್ದೇ ತಡ. ಏನು ಎತ್ತ ವಿಚಾರಿಸದೆ, ಒಂದೇ ಉಸಿರಿನಲ್ಲಿ ಹೇಳಿ ಮುಗಿಸುವ ಆತುರದಲ್ಲಿ ಅಮ್ಮ ಭೂತ, ಭವಿಷ್ಯ, ವರ್ತಮಾನಗಳನ್ನು ಒಂದು ಮಾಡುತ್ತಿದ್ದಳು.
” ಸುಧಾ…. ಬೆಳಿಗ್ಗೆ ಅದಿತಿ ಬಂದಿದ್ದಳು. ಅದೇ ನಿಂಗೊತ್ತಲ್ಲ. ಭಾಗಮ್ಮನೋರ ಸೊಸೆ. ಇನ್ನೇನು ಮುಂದಿನ ವಾರ ಭಾಗಮ್ಮನ ವರ್ಷಾಂತಿಕ. ಎಲ್ಲಾ ಕೆಲಸ ಪಾಪ ಅದಿತಿ ಮತ್ತವಳ ಗಂಡಂದೇ. ಅವರ ಮಾವ ಗೊತ್ತಲ್ಲ.ಸಿಡಸಿಡಸಿಡ ಅಂತಿರ್ತಾರೆ. ಸೀಮೆಗಿಲ್ಲದ ಮಡಿ, ಆಚಾರ ವಿಚಾರ ಅಂತ ಈಗಿನ ಚಿಕ್ಕಪುಟ್ಟ ಹುಡುಗರ ತಲೆತಿಂದ್ಕೊಂಡು… ಬಿಡು. ಅದಲ್ಲ ನಾನು ಹೇಳಬೇಕಿರೋ ಸಮಾಚಾರ. ನಿಂಗೆ ನಮ್ಮವರ ಹೆಂಗಸು, ಬ್ಯೂಟಿ ಪಾರ್ಲರ್ ಗೆ ಹೋಗೋರು ಗೊತ್ತೇನೆ?”
ಅಮ್ಮನ ಧ್ವನಿಯಲ್ಲಿ ಆತುರ, ಸಡಗರ.
ಅಂತೂ ಒಂದು ಪ್ರಶ್ನೆಯಾದರೂ ನಿಲುಗಡೆ ಬಿಂದುವಿಗೆ ತಂದು ನಿಲ್ಲಿಸಿದೆಯಲ್ಲ ಎಂದು ಖುಷಿಯಾದರೂ, ಇದೊಂದು ಪ್ರಶ್ನೆ ಇನ್ನು ಯಾವ ಯಾವ ಮೂಲೆಗಳಿಗೆ ಎಳೆದೊಯ್ಯುವುದೋ ಎಂಬ ಸಣ್ಣ ಚಿಂತೆಯೂ ಮುತ್ತಿ,
” ಈ ಕಾಲಕ್ಕೆ ಬ್ಯೂಟಿ ಪಾರ್ಲರ್ ಗೆ ಹೋಗದೆ ಇರೋ ಹೆಂಗಸರು ಯಾರಿದ್ದಾರಮ್ಮ? ಕಡೇಪಕ್ಷ ಐಬ್ರೋ, ಅಪ್ಪರ್ ಲಿಪ್ಸ್, ಫೇಷಿಯಲ್ ಅಂತಾದ್ರೂ ಮಾಡಸ್ಕೊತಾರೆ. ಈ ಮಾತು ಯಾಕೆ ಬಂತು ಹೇಳು…” ಹೊಸ ಕಥೆ ಕೇಳಲು ತಯಾರಾಗುತ್ತಾ ಸುಧಾ ಪ್ರಶ್ನಿಸಿದ್ದಳು.
” ಅದೇ ಅದಿತಿ ಬಂದಿದ್ದಳಲ್ಲ. ಅವರ ಅತ್ತೆ ಕಥೆ ನಿಂಗೆ ಗೊತ್ತಿರೋದೇ. ಅವರ ಮಗನ ಮದುವೆ ಹಿಂದಿನ ದಿನ ಕಾಣೆಯಾಗಿ ಬಿಟ್ಟಿದ್ರಲ್ಲ. ಆಮೇಲೆ…”
ಅಮ್ಮ ಸಾವಿರದ ಐನೂರ ಮುವ್ವತ್ತೊಂದನೇ ಬಾರಿ ಆ ಹಳೆಕಥೆಯನ್ನು ಜೀವಿಸುತ್ತಾ, ವಾಚಿಸುವುದು ರೇಜಿಗೆಯೆನಿಸಿ,
“ಹೋ…ಆ ಕಥೆ ಈಗ ಬೇಡಮ್ಮ. ಗೊತ್ತು ಗೊತ್ತು.” ಅಂತಿದ್ದ ಹಾಗೆ ಅಮ್ಮ ನೇರ ವಿಷಯಕ್ಕೆ ಬಂದಿದ್ದಳು.
” ಭಾಗಮ್ಮನ ತಿಥಿ ಮಾಡಿಸೋಕೆ ಬಂದ ಪುರೋಹಿತರು ಹೇಳಿದ್ದಾರಂತೆ. ಕಾಲವಾದವರ ಆಸೆ, ಆಕಾಂಕ್ಷೆ ಪ್ರಕಾರ ದಾನಧರ್ಮ ಮಾಡೋಕೆ ಇದು ಪ್ರಶಸ್ತವಾದ ಸಮಯ. ಬಂದ ಮುತ್ತೈದೆಯರಿಗೆ ನಿಮ್ಮ ಶಕ್ತ್ಯಾನುಸಾರ ಸೀರೆ, ರವಿಕೆ ಕಣ, ಅರಿಶಿನ ಕುಂಕುಮ, ಬಳೆ, ಹಣ್ಣು, ಕಾಯಿ ದಕ್ಷಿಣೆ ಸಮೇತ ಕೊಡಿ. ಅವರಿಗಿಷ್ಟದ ಅಡುಗೆಯನ್ನು ವೈಕುಂಠ ಸಮಾರಾಧನೆಗೆ ಮಾಡಿಸಿ. ಪಿತೃಗಳು ತೃಪ್ತರಾದರೆ, ನಿಮ್ಮ ಅಭೀಷ್ಟಗಳೆಲ್ಲ ನೆರವೇರತ್ತೆ ಅಂತ. ಅದಕ್ಕೆ ಈ ಹುಡುಗಿ ಮನಸ್ಸಿಗೆ ಅವರತ್ತೆ ಆಸೆಪಟ್ಟು ತಿಂಗಳು ತಿಂಗಳು ಮಾಡಿಸ್ಕೊಳ್ತಿದ್ದ ಪಾರ್ಲರ್ ಸೇವೆನೂ ಮಾಡಿಸಿಬಿಡಬೇಕು ಅಂತ ಬಂದಿದೆ.”
ಇದನ್ನು ಕೇಳುತ್ತಲೇ ಸುಧಾಗೆ ತಲೆ ಚಚ್ಚಿಕೊಂಡು ಓಡಿ ಹೋಗಬೇಕೆನಿಸಿತು. ಅರವತ್ತು ದಾಟಿದ ಮೇಲೆ ಅಪ್ಪ- ಅಮ್ಮನಿಗೂ, ಅತ್ತೆ-ಮಾವನಿಗೂ ಅಂತಹ ವ್ಯತ್ಯಾಸವಿರಲ್ಲ. ಮಕ್ಕಳ ಹಾಗೆ ಆಡ್ತಾರೆ. ಮಕ್ಕಳಿಗಾದರೂ ಬೈದು ಬುದ್ಧಿ ಹೇಳಬಹುದು.ಇವರನ್ನು ಬೈಯುವ ಹಾಗಿಲ್ಲ. ಸಹಿಸೋದು ಸಹನೆಯ ಪರೀಕ್ಷೆ. ಪುರುಸೊತ್ತಾಗಿ ಕೂತು, ಇಂತಹ ತಲೆಬುಡವಿಲ್ಲದ ಸಮಸ್ಯೆಗಳನ್ನು ಪರಿಹರಿಸಲು ಹೆಣಗಾಡುವ ಅಮ್ಮನ ಬಗ್ಗೆ, ಆ ಕಗ್ಗಂಟಲ್ಲಿ ತನ್ನನ್ನೂ ಸಿಲುಕಿಸುವ ಅವಳ ಅಮಾಯಕತೆಯ ಬಗ್ಗೆ ರೋಸಿ ಹೋಗಿ,
” ಇದೆಂಥ ಹುಚ್ಚು! ಊಟಕ್ಕೆ ಕರೆದು ಮುತ್ತೈದೆಗೆ ಸೀರೆ, ಹಣ್ಣು, ಕಾಯಿ ಕೊಡೋದು ನೋಡಿದ್ದೀನಿ. ಪಾರ್ಲರ್ ಗೆ ಹೋಗು ಅಂತ ಹೇಗೆ ಹೇಳೋಕಾಗತ್ತಮ್ಮ? ಅವಳು ಕುಣಿತಾಳೆ ಅಂತ ಅವಳ ಸಮಕ್ಕೆ ನೀನೂ ಹುಚ್ಚುಚ್ಚು ಕೆಲಸಕ್ಕೆ ಕುಮ್ಮಕ್ಕು ಕೊಟ್ಟುಕೊಂಡು…ಥೋ. ನಂಗೆ ಕೆಲಸ ಇದೆ. ಆಮೇಲೆ ಮಾತಾಡ್ತೀನಿ.” ಎನ್ನುತ್ತಾ ಮಾತು ಮುಗಿಸಲು ನೋಡಿದಳು. ಅವಳ ಧ್ವನಿಯಲ್ಲಿ ಇಣುಕಿದ ತಾತ್ಸಾರ, ಅಮ್ಮನ ‘ ಬುದ್ಧಿ ಹೇಳುವ’ ತಂತುವನ್ನು ಬಡಿದೆಚ್ಚರಿಸಿ, ಇನ್ನಷ್ಟು ಭಾವಪೂರ್ಣವಾಗಿ ಸಂದರ್ಭ ವಿವರಿಸಲು ಕಾರಣವಾಯಿತು.
” ಸುಧಾ… ಹಂಗೆಲ್ಲ ಉಚಾಯಿಸಿ ಮಾತಾಡಬೇಡ. ಪಾಪ ಆ ಹುಡುಗಿ ಯಾರ ಜೊತೆಗೂ ಅಷ್ಟು ಮಾತಾಡಲ್ಲ. ಮದುವೆಯಾಗಿ ಆರೆಂಟು ವರ್ಷ ಆಗಿರಬೇಕು. ಮಕ್ಕಳಿಲ್ಲ. ನಮ್ಮ ಜನ ಏನು ಕಡಿಮೆ ಕೊಂಕು ಮಾತಾಡ್ತಾರಾ ಹೇಳು. ಈಗ ದೊಡ್ಡವರ ಆಶೀರ್ವಾದ ಬಲದಿಂದಾದ್ರೂ ಮಕ್ಕಳಾಗಲಿ. ಅವರತ್ತೆ ಇದ್ದಾಗ, ಅವರ ಸಮಕ್ಕೂ ಕಷ್ಟಪಟ್ಟಿದೆ. ಭಾಗಮ್ಮಂಗೆ ಕಡೆಕಡೆಗೆ ಅಲಂಕಾರದ ಹುಚ್ಚು ಎಷ್ಟಾಗಿತ್ತು ಅಂತ ಗಂಡನ ಮನೇಲಿರೋ ನಿಂಗೆಲ್ಲಿ ಗೊತ್ತಾಗಬೇಕು? ದಿನಾ ಮುಖ ನೋಡ್ತಿದ್ದ ನಮಗೆ ಗೊತ್ತು. ಅದಿತಿ ಹೇಳೋದು ಒಂದಲ್ಲ. ನನಗೂ ಪಾರ್ಲರ್ ಸೇವೆ ಮಾಡಿಸಿದರೇನೆ ಅವರ ಆತ್ಮಕ್ಕೆ ತೃಪ್ತಿ ಅಂತ ಮನಸ್ಸಿಗೆ ಬಂದಿದೆ. ನಿನಗೆ ಆಗಲ್ಲ ಅಂದ್ರೆ ಪಾರ್ಕಲ್ಲಿ ವಾಕಿಂಗ್ ಫ್ರೆಂಡ್ಸ್ ಇದ್ದಾರಲ್ಲ. ಅವರ ಹತ್ತಿರ ವಿಚಾರಿಸ್ತೀನಿ ಬಿಡು. ಕಷ್ಟ ಅಂತ ಬಂದವರಿಗೆ ಸಹಾಯ ಮಾಡುವ ಬುದ್ಧಿಯನ್ನು ನನ್ನ ಮಕ್ಕಳಿಗೆ ಕಲಿಸಿದ್ದೀನಿ ಅಂದುಕೊಂಡಿದ್ದೆ. ಆದರೆ, ತಾನುಂಟು ಮೂರು ಲೋಕವುಂಟು ಅನ್ನೋ ಮಗಳು ನನಗೆ ಅಂತ ಈಗ ಗೊತ್ತಾಗ್ತಿದೆ” ಅಮ್ಮ ಒಂದೊಂದೇ ಅಸ್ತ್ರ ಪ್ರಯೋಗಿಸಲು ಮುಂದಾದಳು. ಅಮ್ಮನ ಹಠದ ಅರಿವಿದ್ದ ಸುಧಾ, ಕೆಣಕದೆ, ಕೆರಳಿಸದೆ ಕೆಲಸ ಮುಗಿಸುವುದೇ ಮೇಲು ಅಂದುಕೊಂಡಂತೆ,
“ನನಗೂ ವಾರದಿಂದ ಪುರುಸೊತ್ತಿಲ್ಲಮ್ಮ. ಇವತ್ತೇ ರಿಸರ್ಚ್ ವರ್ಕ್ ಮುಗಿಸಿ, ಒಂದು ಡ್ರಾಫ್ಟ್ ಕಳಿಸೋದಿದೆ. ಮಗು ಮನೆಗೆ ಬರೋಕೆ ಮುಂಚೆ ಆ ಕೆಲಸ ಆಗಬೇಕು. ನೀನು ಇದ್ಯಾವುದೋ ತಿಥಿ ವಿಷಯ ತೆಗೆದು, ನನ್ನ ಮೇಲೆ ಹಾರಾಡ್ತೀಯ. ಸಿಟ್ಟು ಬರಲ್ವಾ ಹೇಳು? ಈಗ ಸರಿಯಾಗಿ, ನಾನೇನು ಸಹಾಯ ಮಾಡಬೇಕು ಅಂತ ಹೇಳಿಬಿಡು. ಹೇಗಾದ್ರೂ ಮಾಡ್ತೀನಿ.” ಎಂದಳು.
” ನೀನು ಪುರುಸೊತ್ತಿದ್ದಾಗ ಕಾಲ ಕಳೆದುಬಿಡ್ತೀಯ. ಆಮೇಲೆ ಕುತ್ತಿಗೆಗೆ ಬಂದಾಗ ಆತಂಕಪಟ್ಕೊಂಡು , ಎಲ್ಲರ ಮೇಲೆ ಹಾರಾಡ್ತೀಯ. ಹೊಟ್ಟೆ ಹಸಿವಾಗಿರಬೇಕು. ಮೊದಲು ಏನಾದ್ರೂ ತಿಂದು, ಆಮೇಲೆ ಫೋನ್ ಮಾಡು. ಸಮಾಧಾನವಾಗಿ ಮಾತಾಡಬಹುದು. ಇಡಲಾ? ” ಎಂದು ಅಮ್ಮ ಕರೆ ತುಂಡರಿಸಿಯೇಬಿಟ್ಟಳು.
ಬೆಳಗಿನ ಕೆಲಸದ ನಡುವೆ, ತಿಂಡಿ ತಿನ್ನಲು ಸಮಯವಾಗದೆ, ಮಧ್ಯಾಹ್ನ ಒಟ್ಟಿಗೆ ಊಟ ಮಾಡಿದರಾಯಿತು ಎಂದು ನಾಲ್ಕಾರು ಗೋಡಂಬಿ, ಎರಡು ದ್ರಾಕ್ಷಿ ಬಾಯಿಗೆ ಹಾಕಿಕೊಂಡಿದ್ದಳು. ಅದೇನಿದ್ದರೂ ಬೇಸರ ಕಳೆಯಲು, ಬಾಯಾಡಲು ಸರಿಯಷ್ಟೇ. ಕ್ಯಾಲೊರಿ ಎಷ್ಟೇ ಇರಲಿ. ಲಕ್ಷಣವಾಗಿ ತಟ್ಟೆ ಮುಂದೆ ಕುಳಿತು ತಿಂದ ತೃಪ್ತಿ ಕೊಡುವುದಿಲ್ಲ. ಬೆಳಿಗ್ಗೆ ಗಂಡನಿಗೆಂದು ಮಾಡಿದ ತರಕಾರಿ ಉಪ್ಪಿಟ್ಟು ಮಿಕ್ಕಿತ್ತು. ಮಗಳು ಉಪ್ಪಿಟ್ಟು ತಿನ್ನಲ್ಲ ಎಂದಿದ್ದಕ್ಕೆ ಮಾಡಿದ್ದ ಬ್ರೆಡ್ ಟೋಸ್ಟ್ ಕೂಡ. ಉಪ್ಪಿಟ್ಟಿಗೆಂದು ಒಗ್ಗರಣೆಯಲ್ಲಿ ಬಾಡಿಸಿದ್ದ ಟೊಮೇಟೋ,ಈರುಳ್ಳಿ, ಬಟಾಣಿ, ಕ್ಯಾರೆಟ್, ದಪ್ಪಮೆಣಸಿನಕಾಯಿಯನ್ನೇ ಸ್ವಲ್ಪ ತೆಗೆದಿರಿಸಿ, ಕಾವಲಿಯ ಮೇಲೆ ಬ್ರೆಡ್ ಗೆ ತುಪ್ಪ ಸವರಿ ರೋಸ್ಟ್ ಮಾಡಿ, ಅದರ ಮೇಲೆ ಈ ಪಲ್ಯ ಹರಡಿ, ಅಲಂಕಾರವಾಗಿ ಪ್ರೆಸೆಂಟ್ ಮಾಡಿ ಮಗಳಿಗೆ ತಿನ್ನಿಸಿದ್ದು ನೆನಪಾಗಿ ನಗು ಬಂತು. ಒಂದು ಟೋಸ್ಟ್, ಸ್ವಲ್ಪ ಉಪ್ಪಿಟ್ಟು, ಪಕ್ಕದಲ್ಲೇ ಮೊಸರು ತಂದಿಟ್ಟುಕೊಂಡು ತಿಂದ ಶಾಸ್ತ್ರ ಮುಗಿಸಿದಳು. ಅಮ್ಮ ಹೇಳಹೊರಟಾಗ, ತಾನು ಬಾಯಿ ಹಾಕಿ ಅರ್ಧಕ್ಕೆ ನಿಲ್ಲಿಸಿದ್ದ ಭಾಗಮ್ಮನ ಕಥೆ ತಾನಾಗಿಯೇ ತಲೆಯಲ್ಲಿ ಪೂರ್ಣವಾಗುವ ತನಕ ಓಡುತ್ತಿತ್ತು.
*
ಭಾಗಮ್ಮನವರ ನಿಜನಾಮ ಭಾಗ್ಯಲಕ್ಷ್ಮಿ ಅಂತೆ. ಭಾಗಿ, ಭಾಗಿ ಅಂತ ಅವರಮ್ಮ ಕರೆಯೋರು. ವಯಸ್ಸಾದ ಕಾಲಕ್ಕೆ ಭಾಗಮ್ಮ ಆಗಿರಬೇಕು. ಸದಾಗಪ್ಪು ಬಣ್ಣ, ಸ್ಥೂಲ ಕಾಯ, ಗುಂಗುರು ಕೂದಲಿನ ಭಾಗಮ್ಮ ಸುಂದರಿಯಲ್ಲದಿದ್ದರೂ, ಕಳೆಕಳೆಯಾಗಿದ್ದ ಹೆಂಗಸು. ಒಬ್ಬನೇ ಗಂಡು ಮಗ. ಗಂಡ ಮಾತ್ರ ಕೋಪಿಷ್ಟ ಅಂತಲೇ ಊರಿಗೆಲ್ಲ ಪ್ರಖ್ಯಾತಿ.ಸಾಲದ್ದಕ್ಕೆ ಜಿಪುಣ ಬೇರೆ. ಕಾಸಿಗೆ ಕಾಸು ಕೂಡಿಟ್ಟು, ಹೊಟ್ಟೆ ಬಟ್ಟೆ ಕಟ್ಟಿ ಮೂರಂತಸ್ತಿನ ಮನೆ ಕಟ್ಟಿದ ಮೇಲೆ ಕೂಡ, ಅರೆಕಾಸು ಯಾರೊಬ್ಬರಿಗೂ ಬಿಚ್ಚುತ್ತಿರಲಿಲ್ಲ. ಹೆಂಡತಿಗೆ ಸೀರೆ, ಒಡವೆ, ಇನ್ನಿತರೆ ಖರ್ಚಿಗೆ ಅಂತ ಕೊಡುವ ಬಾಬತ್ತಿಲ್ಲ. ಭಾಗಮ್ಮ ದುಡಿಯುವ ಕಾಲದಲ್ಲಿ ಧಾರಾಳವಾಗಿ ಮನೆ ನಡೆಸಿದಾಕೆ. ಆಕೆ ಕೆಲಸ ಮಾಡುತ್ತಿದ್ದ ಕಚೇರಿ ಮುಚ್ಚಿದ ಮೇಲೆ, ಮನೆಯಲ್ಲೇ ಇರುವಂತಾಯಿತು. ತಾನು ಕೂಡಿಟ್ಟ ಹಣದಲ್ಲಿ ಕದ್ದುಮುಚ್ಚಿ ದಾನಧರ್ಮ ಮಾಡುತ್ತಿದ್ದ ಭಾಗಮ್ಮನ ಒಬ್ಬನೇ ಮಗನ ಮದುವೆಯ ಸಮಯದಲ್ಲಿ ಒಂದು ಪ್ರಸಂಗವಾಯಿತು. ” ಬೀಗಿತ್ತಿ ಅಂದ್ರೆ ಹೇಗಿರಬೇಕು? ನೀನು ಹೇಗಿದ್ದೀಯ! ಹುಡುಗಿ ತಾಯಿ ಒಳ್ಳೆ ರಾಣಿ ಇದ್ದಂಗೆ ಇದ್ದಾಳೆ. ಒಳ್ಳೆ ಬಣ್ಣ, ಕಪ್ಪು ಕೂದಲು, ಸಣ್ಣಗೆ ಹೇಗೆ ಬಾಡಿ ಮೇಂಟೇನ್ ಮಾಡಿದ್ದಾಳೆ. ಲಗ್ನಪತ್ರಿಕೆ ದಿನ ನೀನು ಸ್ಟೂಲ್ ಮೇಲೆ ಕೂತರೆ, ಆಕೆ ನೋಡು..ನೆಲದ ಮೇಲೆ ಚಕ್ಕಂಬಕ್ಕಳ ಹಾಕಿ ಎಷ್ಟು ಆರಾಮಾಗಿ ಕೂತು, ಎದ್ದು ಮಾಡಿದಳು. ಸೀರೆ, ಒಡವೆ, ಅಲಂಕಾರ ಎಲ್ಲದರಲ್ಲೂ ಎಷ್ಟು ಒಪ್ಪ ಓರಣ. ನಿನ್ನ ನೋಡಿದರೆ, ತದ್ವಿರುದ್ಧ. ಆ ನಯ ನಾಜೂಕು ಈ ಜನ್ಮಕ್ಕೆ ನಿಂಗೆ ಬರಲ್ಲ.” ಎಂದು ದಿನಂಪ್ರತಿ ಮಗ ಆಫೀಸಿಗೆ ಹೋದ ಮೇಲೆ ಭಾಗಮ್ಮನ ಮೂತಿ ತಿವಿಯುತ್ತಿದ್ದ ಗಂಡ. ಮಾತಾಡಿದರೆ, ಒಂದಕ್ಕೆ ನಾಲ್ಕು ವಿಪರೀತಾರ್ಥ ಕಲ್ಪಿಸಿ, ಅನ್ನದ ತುತ್ತು ಗಂಟಲಿಗಿಳಿಯದಂತೆ ಹೀಯಾಳಿಸಿ, ತಲೆಕೆಟ್ಟರೆ ಕಪಾಳಕ್ಕೆ ಬೀಸುವಾತನ ಹತ್ತಿರ ಮೌನವಾಗಿದ್ದಷ್ಟೂ ಕ್ಷೇಮ. ಮದುವೆಯಾಗಿ ಮುವ್ವತ್ತೈದು ವರ್ಷ ಹಾಗೆಯೇ ಕಳೆದಾಯಿತು. ಇನ್ನು ಉಳಿದ ವರ್ಷಗಳಷ್ಟೋ? ಬೇಗ ಈ ಲೌಕಿಕದ ಆಟ ಮುಗಿಸಿ, ದೇವರ ಪಾದ ಸೇರಿದರೆ ಸಾಕೆನಿಸುತ್ತಿತ್ತು ಭಾಗಮ್ಮನಿಗೆ. ಮುವ್ವತ್ತಕ್ಕೆ ಮದುವೆಯಾಗಿ, ಇನ್ನು ಮಕ್ಕಳಾಗುವುದಿಲ್ಲವೇನೋ ಎಂದುಕೊಂಡಾಗ ಮುವ್ವತ್ತೆಂಟಕ್ಕೆ ಬಸುರಾಗಿ, ಒಂದೊಂದು ದಿನವನ್ನೂ ಜೀವ ಹಿಡಿಮಾಡಿಕೊಂಡು, ಜೋಪಾನವಾಗಿ ಕಳೆದು, ಹುಟ್ಟಿದ ಮಗ ‘ಅನಂತ’. ಅವನ ಮದುವೆಯ ಸಂಭ್ರಮವನ್ನೂ ಪೂರ್ತಿಯಾಗಿ ಎದೆಗಿಳಿಸಿಕೊಳ್ಳದಂತೆ ಕುಟುಕುವ ಗಂಡನ ಮಾತು. ಮದುವೆಯ ಹಿಂದಿನ ದಿನ ಭಾಗಮ್ಮ ಅಡುಗೆ-ತಿಂಡಿ ಮಾಡಿಟ್ಟವರೇ, ಕಾಣೆಯಾಗಿಬಿಟ್ಟರು. ಮನೆಯಲ್ಲಿ ಹತ್ತಿರದ ನೆಂಟರಿಷ್ಟರು ನೆರೆದಾಗಿತ್ತು. ಸರಭರ ಓಡಾಟದಲ್ಲಿ, ಮೂರಂತಸ್ತಿನ ಮನೆಯ ಯಾವ ಮೂಲೆಯಲ್ಲಿ ಭಾಗಮ್ಮನಿದ್ದಾರೋ, ಯಾರಿಗೆ ತಿಳಿಯಬೇಕು? ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಕೋಲಾಹಲವೆದ್ದಿತು. ಭಾಗಮ್ಮ ಕಾಣ್ತಿಲ್ಲ ಎಂದು ಒಬ್ಬೊಬ್ಬರು ಒಂದೊಂದು ಕಡೆಗೆ ಫೋನು ಹಚ್ಚಿ, ರಸ್ತೆ ರಸ್ತೆ ತಿರುಗಿ ಕೇಳುತ್ತಾ, ಹುಚ್ಚರಂತೆ ಅಲೆಯತೊಡಗಿದರು. ರಾಯರ ಕೋಪಿಷ್ಟ ಸ್ವಭಾವದ ಅರಿವಿದ್ದ ನೆಂಟರು, ದಿನಂಪ್ರತಿ ಅವರ ಜೋರುಗಂಟಲಿನ ಮೂದಲಿಕೆ ಕೇಳಿ ಗೊತ್ತಿದ್ದ ನೆರೆಯವರು, ಭಾಗಮ್ಮ ನೊಂದುಕೊಂಡು ಏನು ಅವಾಂತರ ಮಾಡಿಕೊಂಡರೋ? ಎಲ್ಲಿ ದೇಶಾಂತರ ಹೊರಟುಬಿಟ್ಟರೋ? ಎಂದು ರಾಯರ ಎದೆಗೆ ನಾಟುವಂತೆ ಮಾತಾಡಿಯೇ ಆಡಿದರು. ಮದುವೆಯ ಚಪ್ಪರ ಹಾಕಿದ್ದ ಮನೆ ಬಿಕೋ ಎನ್ನತೊಡಗಿತು. ರಾತ್ರಿ ಏಳರ ಸುಮಾರಿಗೆ ಭಾಗಮ್ಮ ಮನೆಗೆ ಬಂದರು. ನೆರೆತಿದ್ದ ಕೂದಲು ಕಪ್ಪಗೆ ಮಿಂಚುತ್ತಿತ್ತು. ಅರಿಶಿನ ಹಚ್ಚಿ ಹಚ್ಚಿ ಮೂಲಬಣ್ಣ ಮರೆತಿದ್ದ ಕೆನ್ನೆಗಳು ಹೊಳೆಯುತ್ತಿತ್ತು. ಉಗುರಿಗೆ ಹಚ್ಚಿದ್ದ ನೇಲ್ ಪೇಂಟ್, ಕಾಮನಬಿಲ್ಲಿನಂತೆ ಬಾಗಿದ್ದ ಹುಬ್ಬು, ಗೆರೆಕೊಯ್ದಂತೆ ನೆರಿಗೆ ಹಿಡಿದು ಉಟ್ಟ ಸೀರೆ, ಎಂದಿನಂತಲ್ಲದೆ ಸ್ವಲ್ಪ ಸಣ್ಣ ಸೈಜಿನ ಹಣೆಬೊಟ್ಟು ತೊಟ್ಟ ಭಾಗಮ್ಮನನ್ನು ಎವೆಯಿಕ್ಕದೆ ನೋಡಿದರು ರಾಯರು. ಬೇರೆ ಸಮಯದಲ್ಲಾಗಿದ್ದರೆ ಕಿರುಚಾಡಿ, ಕಪಾಳಕ್ಕೆ ಬೀಸುತ್ತಿದ್ದರೇನೋ. ಅಂದು ಬಹಳ ಮೆಲ್ಲಗೆ, “ಎಲ್ಲಿ ಹೋಗಿದ್ಯೇ ಭಾಗಿ?” ಎಂದರು. ” ಬ್ಯೂಟಿ ಪಾರ್ಲರ್ ಗೆ” ಎಂದವರೇ ಸೀದಾ ಕೈಕಾಲು ತೊಳೆದು, ಬಟ್ಟೆ ಬದಲಿಸಿ ಬಂದು, ಏನೂ ಆಗಿಲ್ಲವೆಂಬಂತೆ ಜನರೊಡನೆ ಬೆರೆತರು. ಕೇಳಿದರೆ ಹೇಗೋ ಏನೋ. ಸದ್ಯ ಜೋಪಾನವಾಗಿ ಮನೆ ಸೇರಿದಳಲ್ಲ ಎನ್ನುವ ಸಮಾಧಾನದಲ್ಲಿ ಯಾರೊಬ್ಬರೂ ಉಸಿರೆತ್ತಲಿಲ್ಲ. ಮಾರನೆಯ ದಿನ ಬೀಗರಿಗೆ ಕಳುಹಿಸಿದ ಬಸ್ಸಿಗೆ ಭಾಗಮ್ಮನ ಕಡೆಯಿಂದ ಒಬ್ಬ ಹುಡುಗಿಯೂ ಹತ್ತಿದಳು. ಮದುವೆಮನೆಯಲ್ಲಿ ಭಾಗಮ್ಮನಿಗೆ ನೀಟಾಗಿ ಸೀರೆಯುಡಿಸಿ, ತೆಳ್ಳಗೆ ಮೇಕಪ್ ಮಾಡಿ, ಸೀರೆಗಳಿಗೆ ಹೊಂದುವ ಆಭರಣ ಹಾಕಿ ತಯಾರು ಮಾಡಿದಳು. ಜನ ಗುಸುಗುಸು ಎಂದರೇ ಹೊರತು ಭಾಗಮ್ಮನನ್ನು ಪ್ರಶ್ನಿಸಲಿಲ್ಲ. ಇವೆಲ್ಲಾ ಅಮ್ಮನ ಬಾಯಿಂದ ಕೇಳಿ ಕಂಠಸ್ಥವಾಗಿತ್ತು ಸುಧಾಗೆ. ಅನಂತ ಅದಿತಿಯರ ಮದುವೆಯಾದ ಮೇಲಿನ ಸಂಗತಿ, ಆಗೀಗ ಅಮ್ಮನ ಬಾಯಿಂದ ಕಿವಿಗೆ ಬಿದ್ದರೂ, ಅಷ್ಟಾಗಿ ಲಕ್ಷ್ಯ ಕೊಟ್ಟಿರಲಿಲ್ಲ. ಒಟ್ಟಿನಲ್ಲಿ ಅರವತ್ತೈದನೇ ವಯಸ್ಸಿನಲ್ಲಿ ಬ್ಯೂಟಿ ಪಾರ್ಲರ್ ಮೆಟ್ಟಿಲೇರಿದ ಭಾಗಮ್ಮನವರು, ಆಮೇಲೆ ತಿಂಗಳಿಗೊಮ್ಮೆ ಪಾರ್ಲರ್ ವಿಸಿಟ್ ತಪ್ಪಿಸಲಿಲ್ಲ. ಸಭೆ ಸಮಾರಂಭಗಳಿಗೆ ಬರುವಾಗ ತೆಳುಮೇಕಪ್ ಮಾಡಿ, ನೀಟಾಗಿ ಸೀರೆಯುಟ್ಟು, ಮ್ಯಾಚಿಂಗ್ ಆಭರಣ ತೊಟ್ಟು ಬರುವುದನ್ನು ಕಲಿತರು. “ಇವಕ್ಕೆಲ್ಲ ಹಣ ಸುರಿಯೋದು ಯಾಕೆ? ಈ ವಯಸ್ಸಲ್ಲಿ ನಿನ್ನ ಅಂದ ಚೆಂದ ಯಾರು ಮೆಚ್ಚಬೇಕು? ಮನೆಗೆ ಸೊಸೆ ಬಂದ ಕಾಲಕ್ಕೆ ಹೀಗೆ ಊರು ತಿರುಗುವ ಚಟ ಹಚ್ಚಿಕೊಂಡ್ಯಲ್ಲೇ..” ಎಂದು ರಾಯರು ರಂಪ ಎಬ್ಬಿಸಿದರೂ, ಮೌನವಾಗಿ ಉಪೇಕ್ಷಿಸುತ್ತಲೇ ಭಾಗಮ್ಮ ತಮ್ಮ ಹಠ ತಾವು ನಡೆಸಿಕೊಂಡರು.
ಅದಿತಿಯಂತೂ ಮದುವೆಯಾದಾಗಿನಿಂದ ಅತ್ತೆಯ ಈ ಪರಿಯನ್ನೇ ಕಂಡಿದ್ದರಿಂದ, ಜೊತೆಗೆ ಪಾರ್ಲರ್ ಗೆ ಹೋಗುವ ದಿನದ ಅವರ ಸಂಭ್ರಮ, ಸಂತೋಷದ ಅರಿವಿದ್ದಿದ್ದರಿಂದ, ಯಾರಾದ್ದಾದರೂ ಪಾರ್ಲರ್ ಖರ್ಚು ವಹಿಸಿಕೊಂಡರೆ ಅವರ ಆತ್ಮಕ್ಕೆ ತೃಪ್ತಿಯಾಗುತ್ತದೆ ಎಂದುಕೊಂಡಿದ್ದಳು. ಹೊಟ್ಟೆಗೆ ಬಿದ್ದ ಮೇಲೆ, ಎಷ್ಟು ಪ್ರಶಾಂತವಾಗಿ ಸಮಯ, ಸಂದರ್ಭ, ಸನ್ನಿವೇಶ ಅರ್ಥವಾಗತ್ತೆ ಎನ್ನಿಸಿತು ಸುಧಾಗೆ.
ಇದೇ ನೆಮ್ಮದಿಯಲ್ಲಿ ಅಮ್ಮನಿಗೆ ಫೋನ್ ಮಾಡಿ ವಿಷಯ ತಿಳಿದುಕೊಂಡರಾಯಿತು ಎನ್ನಿಸಿ ಕರೆ ಮಾಡಿದಳು.
” ನೋಡು.. ಊಟವಾದ ಮೇಲೆ ನಿನ್ನ ಧ್ವನಿ ಎಷ್ಟು ಪ್ರಸನ್ನವಾಗಿದೆ. ಹೆಚ್ಚು ಮಾತಾಡಿ ತಲೆ ತಿನ್ನಲ್ಲ.ವಿಷಯ ಇಷ್ಟೇ. ತೀರಾ ಚಿಕ್ಕ ಹುಡುಗಿಯರು ಬೇಡ. ನಲ್ವತ್ತು ನಲವತ್ತೈದು ವಯಸ್ಸಿನವರಾದ್ರೆ ಸಾಕು. ತಿಥಿ ದಿನಕ್ಕೂ ಮುಂಚೆ ಅದಿತಿ ಅವರನ್ನು ಕಂಡು, ಸೀರೆ, ರವಿಕೆಕಣ ಇಂತಹದ್ದೆಲ್ಲ ಕೊಟ್ಟಿರ್ತಾಳೆ. ತಿಥಿ ದಿನ ಅವರು ಪಾರ್ಲರ್ ಗೆ ಹೋಗಿ ಅವರ ಮನಸ್ಸಿಗೆ ತೋಚಿದ ಯಾವುದಾದರೂ ಸೇವೆ ಮಾಡಿಸ್ಕೊಂಡು ಬರಲಿ. ದುಡ್ಡಿನ ಬಗ್ಗೆ ಯೋಚನೆ ಮಾಡಬೇಕಿಲ್ಲ. ಅದಿತಿ ಕೊಡ್ತಾಳೆ. ಮಾರನೇ ದಿನ, ವೈಕುಂಠ ಸಮಾರಾಧನೆಗೆ ಕರೆದಿರ್ತಾಳೆ. ಅವಳು ಕೊಟ್ಟಿರುವ ಹೊಸ ಸೀರೆಯುಟ್ಟುಕೊಂಡು ಹೋಗಿ, ಊಟ ಮಾಡ್ಕೊಂಡು ಬರೋದು. ಅಷ್ಟೇ ಅವರ ಕೆಲಸ. ನಿನಗೆ ಯಾರಾದರೂ ಗೊತ್ತಿದ್ರೆ ಹೇಳು.” ಅಮ್ಮ ವಿವರ ತಿಳಿಸಿದಳು.
*
ಮುಂದಿನದದ್ದೆಲ್ಲ ಸಲೀಸಾಗಿ ನಡೆದು ಹೋಯಿತು. ಯಾಕೆ?ಏನು?ಇದೆಂತಹ ಶಾಸ್ತ್ರ? ಎಂದು ತಲೆ ಕೊರೆಯದ ಒಬ್ಬಾಕೆಯನ್ನು ಹಿಡಿದು ಪಾರ್ಲರ್ ಸೇವೆ ಮಾಡಿಸಿ, ಸೀರೆಯುಡಿಸಿ, ಊಟ ಮಾಡಿಸಿ ಭಾಗಮ್ಮನವರ ಆತ್ಮಕ್ಕೆ ಶಾಂತಿ ಲಭಿಸಿತೆಂದು ಸಮಾಧಾನಗೊಂಡರು. ಇದಾಗಿ ಆರು ತಿಂಗಳಿರಬೇಕು. ಮತ್ತೊಂದು ಗಡಿಬಿಡಿಯ ದಿನದಂದು, ಅಮೃತ ಚಹಾ ವಿರಾಮದಲ್ಲಿ ನಾನಿರುವಾಗ ಅಮ್ಮ ಫೋನ್ ಮಾಡಿದಳು.
” ನೋಡೇ… ಅವತ್ತು ಆಡಿಕೊಂಡೆಯಲ್ಲ. ಇದೆಂತಹ ಶಾಸ್ತ್ರ? ಹುಚ್ಚುಚ್ಚು ಆಟಗಳು ನಿಮ್ಮದು ಅಂತ. ಅದಿತಿಗೆ ಮೂರು ತಿಂಗಳಂತೆ. ಮನೆಗೆ ಬಂದು ಸ್ವೀಟ್ಸ್ ಕೊಟ್ಟು, ಹೇಳಿ ಹೋಯಿತು ಹುಡುಗಿ. ಅತ್ತೆ ಹೋದ ಮೇಲೆ ಮಾವನ ಅಬ್ಬರ ಇಳಿದಿದೆಯಂತೆ. ಆಗೀಗ ಸಿಡಿಮಿಡಿ ಮಾಡಿದ್ರೂ, ಮುಂಚಿನಷ್ಟು ಪ್ರತಾಪ ತೋರಿಸೋಲ್ಲ ಅಂದಳು. ಈಗೆಲ್ಲಾ ಐವಿಎಫ್ ಅಂತ ಮಾಡ್ತಾರಲ್ಲ. ಅದನ್ನು ಮಾಡಿಸಿಕೊಂಡಳಂತೆ. ಮೊದಲ ಸಲಕ್ಕೇ ಗರ್ಭ ಕಚ್ಚಿದೆ. ಎಲ್ಲಾ ನಮ್ಮತ್ತೆ ಆಶೀರ್ವಾದ ಅಂದಳು. ಮನೆಗೆ ಬರುತ್ತಾ ಇರು. ನಿಮ್ಮತ್ತೆ ಇದ್ದಿದ್ರೆ ಸಂಭ್ರಮಪಟ್ಟು, ಮುಚ್ಚಟೆಯಿಂದ ಮಾಡಿ ಹಾಕ್ತಿದ್ರು. ಪಾಪ… ಚಿಕ್ಕ ವಯಸ್ಸಿಗೇ ಯಜಮಾನಿಯಾಗಿಬಿಟ್ಟೆ. ನಮ್ಮನೆಗೆ ಬಂದರೆ ಕೈಲಾದ್ದು ಮಾಡಿಕೊಡ್ತೀನಿ. ಬಸುರಿ ಬಯಕೆ ಏನಿದ್ರೂ ಮುಚ್ಚಿಡಬೇಡ. ನನ್ನ ಕೇಳು. ಅಂದಿದ್ದೀನಿ.” ಅಮ್ಮ ಹೇಳುತ್ತಲೇ ಇದ್ದಳು. ಪಾರ್ಲರ್ ಖರ್ಚು ವಹಿಸಿಕೊಂಡರೆ ಮಕ್ಕಳಾಗತ್ತೆ ಎಂಬ ವದಂತಿ ಹಬ್ಬಿ,ಅದೊಂದು ಮೂಢನಂಬಿಕೆಯಾಗದಿದ್ದರೆ ಸಾಕೆನ್ನಿಸಿತು. ಬಾಯಿ ಬಿಟ್ಟು ಆ ಮಾತನಾಡಿ ಅಮ್ಮನ ಮುಗ್ಧ ಸಂತೋಷ ಹಾಳುಮಾಡಬಾರದು. ಹಾಗೆಂದು ಸುಮ್ಮನಿರಲೂ ಬಾರದು.
” ಅಮ್ಮಾ…ಅದಿತಿಗೆ ನನ್ನ ಕಡೆಯಿಂದ ಶುಭಾಶಯ ತಿಳಿಸಿಬಿಡು. ಆ ಹುಡುಗಿಗೆ ಮನೆಯಲ್ಲಿ ಈಗ ನೆಲೆಸಿರುವ ನೆಮ್ಮದಿಯ ವಾತಾವರಣ, ನನ್ನ ಕರ್ತವ್ಯ ನಾನು ಚೆನ್ನಾಗಿ ನೆರವೇರಿಸಿದೆ ಎನ್ನುವ ಸಂತೃಪ್ತ ಭಾವ, ಹಿರಿಯರ ಆಶೀರ್ವಾದ ಲಭಿಸಿದೆ ಎನ್ನುವ ನಂಬಿಕೆ ಎಲ್ಲಾ ಸೇರಿ ಒಳ್ಳೆಯ ಫಲ ಸಿಕ್ಕಿದೆ. ಮೆಂಟಲ್ ಬ್ಲಾಕ್ಸ್ ನಿವಾರಣೆಯಾದರೆ, ಈ ರೀತಿಯ ಬದಲಾವಣೆಗಳು ಜರುಗುತ್ತೆ. ಪಾರ್ಲರ್ ಒಂದು ನೆಪ ಅಷ್ಟೇ. ಏನಂತೀಯ?” ಅಂದೆ.
“ಒಳ್ಳೆಯದೋ…ಕೆಟ್ಟದ್ದೋ…ಯಾಕಾಯ್ತು? ನಮಗೇ ಯಾಕಾಯ್ತು? ಅಂತ ನಾವು ಕೂದಲು ಸೀಳುತ್ತಾ ಕೂರಬಾರದು ಕಣೆ. ಆ ಹೊತ್ತಿಗೆ ತೋಚಿದ್ದು, ನಮಗೆ ಸರಿಯೆನ್ನಿಸಿದ್ದು ಮಾಡಿ ಕೈಮುಗಿಯೋದು. ಮುಂದಿನದ್ದು ವಿಧಿ ನಡೆಸಿದ ಹಾಗೆ. ಎಲ್ಲಕ್ಕೂ ಕಾರಣ ಹುಡುಕೋದು ನೀವು. ನಮಗೆ ನೆಮ್ಮದಿ ಮುಖ್ಯ.” ಅಮ್ಮ ಮಾತು ಮುಗಿಸಿದ್ದಳು.
……————————————————
ಎಸ್ ನಾಗಶ್ರೀ ಅಜಯ್
ಚೆನ್ನಾಗಿದೆ ನಾಗಶ್ರೀ
ನಿರೂಪಣೆ ಶೈಲಿ ನಿಜಕ್ಕೂ ತುಂಬಾ ಚೆನ್ನಾಗಿದೆ. ಒಂದೊಂದೂ ಸಾಲು ಅದ್ಭುತ … ನಾಗಶ್ರೀ ಮೇಡಂ ಜಿ…ನಿಮ್ಮ ಬಗ್ಗೆ ಅಪಾರ ಗೌರವ ನನಗೆ… ನಿಮ್ಗೆ ಒಳ್ಳೆದಾಗಲಿ ಮೇಡಂ ಜಿ
.. ಇನ್ನೂ ನಿಮ್ಮ ಬರವಣಿಗೆ ಯಶಸ್ಸು ಕಾಣಲಿ
Thank you
ಥ್ಯಾಂಕ್ಯೂ
ಚೆಂದಿದೆ ಕತೆ ನಾಗಶ್ರೀ -ಸ್ಮಿತಾ ಅಮೃತರಾಜ್
ಥ್ಯಾಂಕ್ಯೂ ಸ್ಮಿತಾ
Super…. nice and different story
Thank you
Nice story
Thank you
Very fresh and thought provoking story. Thanks for this amazing story Nagashree.
Thank you so much