‘ಬಾಡಿದ ಸುಮಾ’ಶಾಲಿನಿ ಕೆಮ್ಮಣ್ಣು ಅವರ ಸಣ್ಣಕತೆ

 ಸುಮಾ ಹಾಗೂ ಸುಧಾಕರ ದಂಪತಿಗಳ ಸಂಸಾರ ಸುಂದರವಾಗಿಯೇ ಇತ್ತು.ಸುಧಾಕರ ದುಬೈಯಲ್ಲಿ ಕೆಲಸದಲ್ಲಿದ್ದ.  ಮನೆಯಲ್ಲಿ ಹಳೆ ಸಂಪ್ರದಾಯದ ಅಮ್ಮ  ಮತ್ತು ಅವನ ತಮ್ಮ ಸಂದೀಪ ಪ್ರಾಯದಲ್ಲಿ 10 ವರ್ಷ ಚಿಕ್ಕವನಾಗಿದ್ದ  ಬೆಂಗಳೂರಿನಲ್ಲಿ ಇಂಜಿನಿಯರ್. ವರ್ಕ್ ಫ್ರಂ ಹೋಮ್ ಆದ್ದರಿಂದ ಮನೆಯಲ್ಲಿ ಇರುತ್ತಿದ್ದ. ಚಿಕ್ಕ ಮಗ ಸಂದೀಪನನ್ನು ತಂದೆ ತಾಯಿಯ ಅತಿ ಮುದ್ದಿನಿಂದ ಸಾಕಿದ್ದರು.ಸುಧಾಕರನೂ ತಮ್ಮನನ್ನು ಸ್ವಂತ ಮಗನಂತೆ ನೋಡುತ್ತಿದ್ದ.
ಸುಮಾ ಮತ್ತು ಸುಧಾಕರನಿಗೆ ತುಂಬಾ ವರ್ಷ ಮಕ್ಕಳಾಗಲಿಲ್ಲ. ಎಲ್ಲಾ ರೀತಿಯ ಪರೀಕ್ಷೆಗಳು ಚಿಕಿತ್ಸೆಗಳು ಪೂಜೆ ಪುನಸ್ಕಾರಗಳು ಮಾಡಿದರು ಯೋಜನವಾಗಲಿಲ್ಲದಾಗ ದೈವ ಸಂಕಲ್ಪವೇನೋ ಎಂಬಂತೆ ಮದುವೆಯಾಗಿ 12 ವರ್ಷಗಳ ಬಳಿಕ ಅವರ ಮಡಿಲಿಗೆ ಬೆಳಕಿನ ದೇವತೆಯಂತೆ ಹೆಣ್ಣು ಮಗುವಿನ ಜನನವಾಯಿತು. ಸುಧಾಕರನ ತಾಯಿ ಮಗುವಿಗೆ ಲಕ್ಷ್ಮಿ ಎಂದು ನಾಮಕರಣ ಮಾಡಿದರು. ಲಕ್ಷ್ಮಿ ಯ ಆಗಮನದಿಂದ ಮನೆಯಲ್ಲಿ ಹೊಸ ಕಳೆ ಸಂಭ್ರಮ ಸಡಗರದ ವಾತಾವರಣ. ಸುಧಾಕರನಿಗೆ ಹೆಂಡತಿ ಮೇಲೆ ಪ್ರೀತಿ ಅಕ್ಕರೆ ಇನ್ನು ಜಾಸ್ತಿ ಆಯ್ತು. ಲಕ್ಷ್ಮಿ ಬೆಳೆಯುತ್ತಾ ಅತಿ ಚುರುಕಾಗಿ ಎಲ್ಲರ ಆಕರ್ಷಕ ಕಣ್ಮಣಿಯಾದಳು. ಸುಮಾಳಿಗಂತೂ ಮಗಳೇ ಪ್ರಪಂಚ. ಲಕ್ಷ್ಮಿಗೆ ನಾಲ್ಕು ವರ್ಷ ತುಂಬುತಿದ್ದಂತೆ ಶಾಲೆಗೆ ಸೇರಿಸಿದರು. ಈಗ ಮಗಳನ್ನು ಶಾಲೆಗೆ ಕಳಿಸುವ ಸಂಭ್ರಮ ಸುಮಾಳ ಪಾಲಾಯಿತು. ಒಂದು ದಿನ ಬೆಳಿಗ್ಗೆ ಸುಮಾ 8 ಗಂಟೆಗೆ ಮಗಳನ್ನು ಶಾಲೆಯ ವಾಹನಕ್ಕೆ ಬಿಟ್ಟು ಬಂದು ಮನೆಗೆಲಸ ಮುಗಿಸಿ ಪೇಟೆಗೆ ಹೋಗಲೆಂದು ಹೊರಡುವಷ್ಟರಲ್ಲಿ ಲಕ್ಷ್ಮಿಯ ಶಾಲೆಯಿಂದ ಬಂದ ಫೋನ್ ಬಂತು. ನಿಮ್ಮ ಮಗಳು ಇಂದು ಶಾಲೆಗೆ ಬರಲಿಲ್ಲ ಎಂದು. ಸುಮಾ ಗಾಬರಿಗೊಂಡು ಮನೆಯಿಂದ ಹೊರಟು ವಿಚಾರಿಸುತ್ತಾ ಶಾಲೆಗೆ ಹೋಗುವ ಎಲ್ಲಾ ಮಾರ್ಗ ಗದ್ದೆಗಳನ್ನು ಅಲೆಯುತ್ತ ವಿಚಾರ ತಿಳಿಯದಾಗ ಕಂಗೆಟ್ಟ ಸುಮಾಗೆ ಲಕ್ಷ್ಮಿಯ ಒಂದು ಶೂ, ಸಾಕ್ಸ್ ಮತ್ತು ಚೀಲ ರಸ್ತೆಯ ಮಧ್ಯೆ ಬಿದ್ದಿರುವುದು ಖಂಡಿತು. ದಿಗ್ಭ್ರಾಂತಳಾಗಿ ಅಳುತ್ತಾ, ಏನು ಮಾಡಲಿ? ಗಂಡನಿಗೆ ಏನೆಂದು ಹೇಳಲಿ? ಪೊಲೀಸ್ ಕಂಪ್ಲೇಂಟ್ ಮಾಡಲೇ ಎಂದು ಯೋಚಿಸುತ್ತ ತುಸು ದೂರ ರಸ್ತೆ ಇಳಿದು ನಡೆಯುತ್ತಿರುವಾಗ ದೂರದಿಂದ ಲಕ್ಷ್ಮಿ  ಓಡಿ ಬರುತ್ತಿರುವುದು ಕಂಡಿತು. ಒಂದು ಕ್ಷಣಕ್ಕೆ ಹೋದ ಜೀವ ಬಂದಂತಾದರೂ ತಲೆಯಲ್ಲಿ ಅನೇಕ ಪ್ರಶ್ನೆಗಳು ಕಾಡಿದವು. ಏನಾದರೂ ಅಪಾಯವಾಗಿರಬಹುದೇ ಎಂದುಕೊಂಡು  ಆತಂಕದಿಂದ ಮಗುವನ್ನು ಬಿಟ್ಟ ಕಣ್ಣುಗಳಿಂದ ದಿಟ್ಟಿಸುತ್ತಿದ್ದ  ಸುಮಾಳ ಕಣ್ಣೀರ ಕೋಡಿ ಹರಿಯಿತು, ಮತ್ತೆ ಅಪ್ಪಿಕೊಂಡು ಮುದ್ದಾಡಿ ಏನೂ ಮಾತಾಡದೆ ಮನೆ ಕಡೆ ನಡೆದಳು. ಲಕ್ಷ್ಮಿಯ ಮುಖದಲ್ಲಿ ಗಾಬರಿ,ಕಸಿವಿಸಿ ಏನೂ ಕಾಣಲಿಲ್ಲ. ಲಕ್ಷ್ಮಿ ಅಮ್ಮನನ್ನು ” ಅಮ್ಮ ನನ್ನನ್ನು ಯಾಕೆ ವಾಪಸ್ ಕರೆಸಿದೆ? ನಾನು ಬಸ್ಸಿಂದ ಇಳಿದು ಶಾಲೆಗೆ ನಡೆಯುತ್ತಿದ್ದಾಗ ನನ್ನ ಬ್ಯಾಗ್ ತಕೊಂಡು ನನಗೆ ಹೊಸ ಚಪ್ಪಲ್ ಕೊಟ್ಟು ಅಲ್ಲಿವರೆಗೆ ಬಿಟ್ಟು ಹೋದವರು ಯಾರು?” ಎಂದೆಲ್ಲ ಕೇಳುತ್ತಿದ್ದಾಗ ಲಕ್ಷ್ಮಿಗೆ ಏನು ತಲೆಗೆ ಹೊಳೆಯುತ್ತಿರಲಿಲ್ಲ. ದಾರಿಯ ಬದಿಯಲ್ಲಿ ಅರಳಿದ ಬಿಳಿ ಹೂಗಳೆಲ್ಲ ಸುಮಾಳ ಆತಂಕಕ್ಕೆ ಬಾಡಿಹೋದಂತೆ ಕಾಣಿಸುತ್ತಿತ್ತು.ಮನೆಗೆ ಹೋಗಿ ಎಲ್ಲಾ ವಿಷಯ ತಿಳಿಯೋಣವೆಂದುಕೊಂಡು ಮನೆ ಕಡೆ ಬರುತಿದ್ದಂತೆ ಸಂದೀಪನು ಅವರನ್ನು ಹಿಂಬಾಲಿಸಿ ಮನೆಯೊಳಗೆ ಬಂದ. ಬಂದವನೇ ಅತ್ತಿಗೆಯನ್ನು ಕರೆದು ಮಗುವನ್ನು ಏನೂ ಪ್ರಶ್ನಿಸಬೇಡ. ನಿನ್ನ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಮತ್ತೆ ನಾನೇ ಕೊಡುತ್ತೇನೆ ಎಂದ. ಸುಮಾ ಲಕ್ಷ್ಮಿಗೆ ಊಟ ಕೊಟ್ಟು ಬೇಗ ಮಲಗಿಸಿದಳು. ವಿಷಯವೇನೆಂದು ತಿಳಿಯದೆ ಸಂದೀಪನನ್ನು ತರಾಟೆಗೆ ತೆಗೆದುಕೊಂಡಳು. ಸಂದೀಪ ಕುಹಕದ ನಗೆಯಿಂದ ಸುಮಾಳನೊಮ್ಮೆ ನೋಡಿ ನೀನು ನೇರವಾಗಿ ದಾರಿಗೆ ಬಾರದ ಕಾರಣ ಇದೊಂದು ವಾರ್ನಿಂಗ್ ಕೊಟ್ಟೆ. ನನಗೆ ನೀನು ಬೇಕು ಎನ್ನುತ್ತಾ ಅವಳ ಕೈಗಳನ್ನು ಎಳೆದು ಬಲವಂತದಿಂದ ಅವಳನ್ನು ತನ್ನ ತೋಳುಗಳಲ್ಲಿ ಬಂಧಿಯಾಗಿಸಿ  ಅವಳ ಕೆನ್ನೆ ತುಟಿಗಳನೆಲ್ಲ ಕಚ್ಚುತ್ತಾ ಚುಂಬಿಸ ತೊಡಗಿದ. ಮೌನಕ್ಕೆ ಶರಣಾದ ಸುಮಾ ಏನು ಪ್ರತಿಕ್ರಿಯಿಸಲಿಲ್ಲ. ರಾತ್ರಿ ಮತ್ತೆ ಸಿಗುತ್ತೇನೆ ಎಂದು  ಫೋನ್ ನಲ್ಲಿ ಮಾತಾಡುತ್ತಾ, ಹೊರಗೆ ಹೋದ. ಸಂಜೆ ಸುಮಾ ಮಗಳನ್ನು ಕರೆದುಕೊಂಡು ತನ್ನ ತವರಿಗೆ ತೆರಳಿದಳು. ಟೆರೇಸ್ ಮೇಲೆ ತಂಗಿ, ಅವಳ ಮಕ್ಕಳು ಹಾಗೂ ಲಕ್ಷ್ಮಿಯೊಂದಿಗೆ ಆಟವಾಡುತ್ತಾ ಮೆಟ್ಟಿಲಿಂದ ಕೆಳಗೆ ಬಿದ್ದ ಸುಮಾಳ ಪ್ರಜ್ಞೆ ತಪ್ಪಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿದ ಡಾಕ್ಟರ್ ಸುಮಾ ಕೋಮದಿಂದ ಹೊರಬರಲಾರದ ಸ್ಥಿತಿಯಲ್ಲಿದ್ದಾಳೆ ಎಂದರು. ಸುಮಾ ಶಾಶ್ವತವಾಗಿ ಮುದುಡಿದಳು. ಕಣ್ಣಿಗೆ ಕಟ್ಟಿದ ಬಟ್ಟೆಯ ಮರೆಯಲ್ಲಿ ಸುಮಾಳ ಸತ್ಯ ಕಾನೂನಿಗೆ ಕಾಣದಾಯಿತು.


Leave a Reply

Back To Top