ಸಂಗಾತಿ ವಾರ್ಷಿಕವಿಶೇಷಾಂಕ

ರುಕ್ಮಿಣಿ ನಾಯರ್

ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಹೆಣ್ಣುಮಕ್ಕಳ ಕೊಡುಗೆ ಗಣನೀಯವಾಗಿ ಹೆಚ್ಚಲು ಮುಖ್ಯ ಕಾರಣಗಳೇನು.

ಸಾಹಿತ್ಯ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ತೊಡಗಿಸಿ ಕೊಳ್ಳುತ್ತಾ ಇರುವುದು ನಮ್ಮ ಸಮಾಜದ ಬೆಳವಣಿಗೆಗೆ ಹಾಗೂ ಏಳಿಗೆಯೆಡೆಗೆ ಇಟ್ಟ ಬಹು ಮುಖ್ಯ ಹೆಜ್ಜೆಯಾಗಿದೆ. 

ಕನ್ನಡ ಸಾಹಿತ್ಯಕ್ಕೆ ಹೆಣ್ಣುಮಕ್ಕಳ ಕೊಡುಗೆ ಗಣನೀಯವಾಗಿ ಹೆಚ್ಚಲು ಕಾರಣ ಹೆಣ್ಣು ಮಕ್ಕಳಿಗೆ ದೊರಕುತ್ತಾ ಇರುವ ಗುಣ ಮಟ್ಟದ ವಿದ್ಯಾಭ್ಯಾಸ.  ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯೇ ಹೇಳುತ್ತಿದೆ ಹೆಣ್ಣು ವಿದ್ಯಾವಂತೆಯಾದರೆ ಅದರಿಂದ ಆಗುವ ಅನುಕೂಲಗಳು ಎಷ್ಟೆಂದು. ವಿದ್ಯಾಭ್ಯಾಸದಿಂದ ಓದುವುದನ್ನು ಕಲಿತ ಹೆಣ್ಣು ಮಕ್ಕಳು ಹಲವಾರು ಬರಹಗಾರರು ಬರೆದ ಪುಸ್ತಕಗಳನ್ನು ತಮ್ಮ ಅಭಿರುಚಿಗೆ ತಕ್ಕಂತೆ ಓದಿ ಮನನ ಮಾಡಿಕೊಳ್ಳುತ್ತಾರೆ ಹಾಗೂ ತಮ್ಮಲ್ಲಿ ಉಂಟಾಗುವ ವಿಚಾರ ಧಾರೆಯನ್ನು ಬರೆಯುವ ಮೂಲಕ ಹೊರ ಜಗತ್ತಿಗೆ ಅರುಹಲು ಇಚ್ಛಿಸಿ ಬರೆವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ವಿದ್ಯಾರ್ಜನೆಗಾಗಿ ಹೊರ ಜಗತ್ತಿಗೆ ತೆರೆದುಕೊಳ್ಳುವ ಹೆಣ್ಣು ಮಕ್ಕಳು ಪ್ರಪಂಚದ ಆಗು ಹೋಗುಗಳ ಬಗ್ಗೆ ಹೆಚ್ಚಿಗೆ ತಿಳಿದು ಕೊಳ್ಳುವ ವಾತಾವರಣ ಸೃಷ್ಟಿಯಾಗುತ್ತಿದೆ. ಮನೆಯಲ್ಲಿ ಇದ್ದು ತಿಳಿದುಕೊಳ್ಳಲಾರದ ಎಷ್ಟೋ ವಿಷಯಗಳನ್ನು ಹೊರ ಜಗತ್ತಿಗೆ ಕಾಲಿಡುವ ಹೆಣ್ಣು ಗಮನಿಸಲು ಪ್ರಾರಂಭಿಸುತ್ತಿದ್ದಾಳೆ. ತನ್ನ ಸುತ್ತಲೂ ಘಟಿಸುವ ಅನೇಕ ಸಂಗತಿಗಳು ಅವಳನ್ನು ಆಕರ್ಷಿಸಿ ಬರೆಯಲು ಪ್ರೇರಣೆ ನೀಡುತ್ತಿದೆ.  ಹಾಗೆಯೇ ಭಾಷಾ ಕಲಿಕೆಗಳು ಬರೆಯುವ ರೀತಿಯನ್ನು ಕಲಿಯಲು ಬಹಳ ಉಪಯುಕ್ತವಾಗಿ ಮಾರ್ಪಾಡಾಗುತ್ತಿದೆ. ಬರವಣಿಗೆಯ ವಿಧಗಳನ್ನು ಕಲಿತ ಹೆಣ್ಣುಮಕ್ಕಳು ತಮಗಿಷ್ಟವಾದ ವಿಚಾರಗಳನ್ನು ಶೈಲಿಗಳನ್ನು ರೂಢಿಸಿಕೊಂಡು ಬರೆಯಲು ಸಹಾಯಕವಾಗಿ ಸುಲಭವಾಗಿ ಇರುವುದರಿಂದ ಹೆಚ್ಚು ಹೆಚ್ಚು ಬರವಣಿಗೆಯಲ್ಲಿ ತೊಡಗಿಕೊಳ್ಳಲು ಅವಕಾಶ ದೊರೆತಂತೆ ಆಗಿದೆ. 

ಆಧುನಿಕ ಉಪಕರಣಗಳ ಆವಿಷ್ಕಾರದಿಂದಾಗಿ ಅವಳ ಕೆಲಸಗಳು ಸುಗಮಗೊಳ್ಳುತ್ತಿದೆ. ಕೆಲಸಗಳು ಬೇಗ ಮುಗಿದಂತೆ ವಿಶ್ರಾಂತಿಯ ಸಮಯ ಹೆಚ್ಚುತ್ತಿದೆ. ಇದರಿಂದಾಗಿ ಸಮಯ ಕಳೆಯಲು ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ಯಾವುದಾದರೂ ಹವ್ಯಾಸಗಳನ್ನು ರೂಢಿಸಿಕೊಳ್ಳುವತ್ತ ಯೋಚನೆ ಮಾಡುತ್ತಾರೆ. ಆಗ ಕೆಲವರು ಬರವಣಿಗೆಯತ್ತ ಒಲವು ತೋರಿಸಲು ಪ್ರಾರಂಭಿಸಿದ್ದಾರೆ. ಬರವಣಿಗೆಯಲ್ಲಿ ನಿರತರಾದಾಗ ಸಮಯ ಹೋಗುವುದೇ ತಿಳಿಯುವುದಿಲ್ಲ ಹಾಗೂ ಇಲ್ಲ ಸಲ್ಲದ ಆಲೋಚನೆಗಳೂ ಹತ್ತಿರ ಸುಳಿಯದು. ಹಾಗಾಗಿ ಮಾನಸಿಕವಾಗಿ ಬರವಣಿಗೆಯಲ್ಲಿ ನೆಮ್ಮದಿ ಕಂಡು ಕೊಳ್ಳುವ ಹೆಣ್ಣು ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.  ಸುಮ್ಮನೆ ಯೋಚನೆ ಮಾಡಿ ಕಾಲ ಹರಣ ಮಾಡದೆ ಉಪಯುಕ್ತ ಲೇಖನಗಳನ್ನು ಬರೆಯುವುದರಿಂದ ಮನಸ್ಸಿಗೆ ಉಲ್ಲಾಸದ ಅನುಭವ ಆಗುವುದರಿಂದ ಬರೆಯುವ ಹುಮ್ಮಸ್ಸು ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿದೆ.

ಇನ್ನು ಹೊರಗೆ ಕಛೇರಿಯಲ್ಲಿ ದುಡಿಯುವ ಹೆಣ್ಣು ಮಕ್ಕಳು

ಕೂಡಾ ತಮ್ಮ ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ ಬೆಳೆಸಿಕೊಳ್ಳುತ್ತಾ ಇದ್ದಾರೆ. ತಮ್ಮ ಸುತ್ತಲಿನ ಆಗು ಹೋಗುಗಳನ್ನು ಗಮನಿಸುತ್ತಾರೆ  ಹಾಗೂ ತಾವೂ ಕೂಡಾ ಕೆಲಸದ ಜೊತೆಗೆ ಬರೆವಣಿಗೆಯ ಮುಖಾಂತರ ಕೆಲಸದಲ್ಲಿ ಉಂಟಾಗುವ ಒತ್ತಡಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಲು ಸಣ್ಣ ಕಥೆಗಳು ಲೇಖನ ಕಾವ್ಯ ಬರೆಯುವ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳುತ್ತಾ ಇದ್ದಾರೆ.

ಓದುವವರಿಂದ ಸಿಗುವ ಪ್ರೋತ್ಸಾಹ ಪ್ರಶಂಸೆಗಳು ಕೂಡಾ ಹೆಣ್ಣುಮಕ್ಕಳಲ್ಲಿ ಸಾಹಿತ್ಯದ ಕಡೆಗೆ ಒಲವನ್ನು ಹೆಚ್ಚಿಸಿದೆ. ಈ ಆಧುನಿಕ ಯುಗದಲ್ಲಿ ಹೆಣ್ಣು ಮಕ್ಕಳಿಗೆ ಬರವಣಿಗೆ ಪ್ರಿಯವೆನಿಸಿದೆ. ತಾವೂ ಕೂಡಾ ಉತ್ಸಾಹದ ಚಿಲುಮೆಯಾಗಿ ಇತರರನ್ನು   ಕೂಡಾ ತಮ್ಮಂತೆ ಲವಲವಿಕೆಯಿಂದ ಇರುವಂತೆ ಮಾಡುವ ಪ್ರಯತ್ನವೂ ಬರವಣಿಗೆ ಮುಖಾಂತರ ನಡೆದಿದೆ.

ಸಾಮಾಜಿಕ ಕಾಳಜಿ ಕೂಡಾ ಹೆಣ್ಣುಮಕ್ಕಳಲ್ಲಿ ಹೆಚ್ಚಾಗುತ್ತಾ ಇರುವ ಕಾರಣ ಸಾಮಾಜಿಕ ಕಳಕಳಿಯ ಬರಹಗಳು ಹೆಚ್ಚುತ್ತಿವೆ. ಸಮಾಜದಲ್ಲಿನ ಹಲವಾರು ಮೂಢ ನಂಬಿಕೆಗಳು ಇಲ್ಲ ಸಲ್ಲದ ಆಚರಣೆಗಳ ವಿರುದ್ಧ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತ ಪಡಿಸಲು ಅವಕಾಶ ಸಿಗುತ್ತಿರುವುದು ಬರೆವಣಿಗೆಯಲ್ಲಿ ತೊಡಗಿಸಿಕೊಳ್ಳಲು ಕಾರಣವಾಗಿದೆ. ಒಂದು ಕಾಲದಲ್ಲಿ ಹೆಣ್ಣುಮಕ್ಕಳು ಬರೆಯುವ ಲೇಖನಗಳು ಕಥೆಗಳು ಕವನಗಳು ಇತ್ಯಾದಿ ಪುರುಷರ ಹೆಸರುಗಳಲ್ಲಿ ಪ್ರಕಟಗೊಳ್ಳುತ್ತಾ ಇದ್ದವು. ಅವರ ಸ್ವಂತಿಕೆಗೆ ಅಲ್ಲಿ ಬೆಲೆ ಇರುತ್ತಿರಲಿಲ್ಲ.  ಈಗ ಕಾಲ ಬದಲಾಗಿದೆ. ಹೆಣ್ಣು ಮಕ್ಕಳಿಗೂ ಸಾಹಿತ್ಯದಲ್ಲಿ ತೊಡಗುವ ಅವಕಾಶಗಳು ವಿಪುಲವಾಗಿವೆ. ಮಹಿಳಾ ಸಾಹಿತಿಗಳಿಗಾಗಿಯೇ ವೇದಿಕೆಗಳು ಕೂಡಾ ಸೃಷ್ಟಿಯಾಗುತ್ತಿವೆ. ಉತ್ತಮ ಮಹಿಳಾ ಬರಹಗಾರರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಉತ್ತಮ ಕೆಲಸಗಳು ನಡೆಯುತ್ತಿವೆ. 

ಪತ್ರಿಕೆಗಳಲ್ಲಿಯೂ ಮಹಿಳಾ ಸಾಹಿತಿಗಳಿಗಾಗಿ ವಿಶೇಷವಾದ ಅವಕಾಶ ಮಾಡಿಕೊಡಲಾಗುತ್ತಿದೆ. ಅವರಿಗಾಗಿ  ವಿಶೇಷ ಅಂಕಣಗಳನ್ನು ಹೊರ ತರುತ್ತಿದ್ದಾರೆ ಪತ್ರಿಕೆಯವರು.

ಆದ ಕಾರಣ ಮಹಿಳೆಯರು ತಮಗೆ  ದೊರೆತ ಸದವಕಾಶವನ್ನು ಉಪಯೋಸಿಕೊಳ್ಳಲು ಉತ್ಸುಕರಾಗಿದ್ದಾರೆ. ಮಹಿಳೆಯರು ತಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಅನಾವರಣ ಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೂಡಾ ಹಲವು ವಿಶೇಷ  ಕಾರ್ಯಕ್ರಮಗಳನ್ನು ಮಹಿಳಾ ಸಾಹಿತ್ಯ ಕಮ್ಮಟಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಮಹಿಳಾ ಸಾಹಿತಿಗಳು ಬರೆದ ಪುಸ್ತಕಗಳು ಪ್ರಕಟವಾಗಿ ಓದುಗರ ಕೈಗೆ ಸುಲಭ ರೂಪದಲ್ಲಿ ಸಿಗುತ್ತಿದೆ.  ಹೀಗೆ ಅನೇಕ ಕಾರಣಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಕೊಡುಗೆ ಗಣನೀಯವಾಗಿ ಹೆಚ್ಚಲು ಬಹು ಮುಖ್ಯ ಪಾತ್ರ ವಹಿಸಿದೆ.


ರುಕ್ಮಿಣಿ ನಾಯರ್

One thought on “

Leave a Reply

Back To Top