ಕಥಾ ಸಂಗಾತಿ
ರಾಧಿಕಾ ಗಣೇಶ್
‘ಮನೆ’
ಪತಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದರು ಮಕ್ಕಳು ಎಲ್ಲಾದರೂ ಹೊರಗೆ ಹೋಗೋಣ ಎಂದಾಗ ನಾಳೆ ಸಮುದ್ರ ತೀರಕ್ಕೆ ಹೋಗೋಣ ಎಂದೆ
ಮಕ್ಕಳು ಈಗಿನಿಂದಲೇ ನಾಳೆ ಸಮುದ್ರದ ಮರಳಲ್ಲಿ ಆಟ ಆಡಲು ಬೇಕಾದ ಆಟಿಕೆಗಳನ್ನು ಒಟ್ಟುಗೂಡಿಸಿ ಇಟ್ಟುಕೊಂಡರು
ಕೊಟ್ಟ ಮಾತಿನಂತೆ ಸಮುದ್ರ ತೀರ ತಲುಪಿದರೂ ಇನ್ನೂ ಬಿಸಿಲಿನ ಝಳ ಕಮ್ಮಿ ಆಗಿರಲಿಲ್ಲ ಅದಕ್ಕಾಗಿ ಅವರನ್ನು ಅಲ್ಲೇ ಮರದ ನೆರಳಲ್ಲಿ ಆಡಿಕೊಂಡಿರಿ ಆಮೇಲೆ ನೀರಿಗೆ ಇಳಿಯೋಣ ಎನ್ನುತ್ತಾ ನಾನೂ ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತು ಫೋನ್ ನೋಡ ತೊಡಗಿದೆ
ಮಕ್ಕಳು ಮರಳಿನಲ್ಲಿ ಆಟ ಆಡ್ತಾ ಕೊನೆಗೆ ಮನೆ ಕಟ್ಟುವ ಯೋಜನೆ ತಯಾರಿಸಿದರು
ಆಗ ಅವರಿಬ್ಬರೂ ಪ್ರತ್ಯೇಕ ಮನೆ ಕಟ್ಟುವುದೆಂದು ತೀರ್ಮಾನವಾಯಿತು
ಫೋನ್ ನೋಡುತ್ತಿದ್ದರೂ ಗಮನವೆಲ್ಲಾ ಮಕ್ಕಳ ಮೇಲಿತ್ತು
ಮಗ ತನಗೆ ಬೇಕಾದ ಸ್ಥಳ ಆಯ್ದುಕೊಂಡು ಇನ್ನೇನೂ ಶುರು ಮಾಡಬೇಕು ಅನ್ನುವಾಗ ಮಗಳು ಒಂದಷ್ಟು ದೂರದಲ್ಲಿ ತನ್ನ ಮನೆಗಾಗಿ ಸ್ಥಳ ಮಾಡಿಕೊಂಡಿದ್ದನ್ನು ನೋಡಿ ಅವನು ಅವಳಿಗೆ ನೀನು ನಿನ್ನ ಮನೆ ಅಷ್ಟು ದೂರ ಮಾಡ್ಬೇಡ ಪಪ್ಪ ಅಮ್ಮನಿಗೆ ಮೀಟ್ ಮಾಡೋಕೆ ಕಷ್ಟ ಆಗುತ್ತೆ ಅಂದಾಗ ಅವಳು ಹೋ…..ಹೌದಲ್ವಾ ನನಗೆ ಗೊತ್ತೇ ಆಗಿಲ್ಲ ಎನ್ನುತ್ತಾ ಸ್ವಲ್ಪ ಹತ್ರಕ್ಕೆ ಬಂದು ಇಲ್ಲಿ ಕಟ್ಟಲಾ ಇಷ್ಟು ಹತ್ರ ಸಾಕಾ ಎನ್ನುವಾಗ ಛಟೀರ್ ಎಂದು ಕೆನ್ನೆಗೆ ಬಾರಿಸಿದಂತಾಯ್ತು
ಫೋನ್ ಬ್ಯಾಗ್ ನೊಳಗಿಟ್ಟು ಒಂದು ನಿಮಿಷ ಕಣ್ಣು ಮುಚ್ಚಿ ಕೂತುಬಿಟ್ಟೆ
ವರ್ಷಗಳ ಹಿಂದೆ ನಡೆದ ಘಟನೆಗಳು ಸುರುಳಿ ಬಿಚ್ಚಿಕೊಂಡವು
ಮಾವ ಸರ್ಕಾರಿ ಉದ್ಯೋಗದಲ್ಲಿದ್ದಾಗ ತಾವಿರುವ ಮನೆಯ ಜೊತೆಗೆ ಇನ್ನೊಂದು ಸೈಟ್ ಕೊಂಡು ಕೊಂಡಿದ್ದರು
ಮೊನ್ನೆ ಅವರ ಮಗಳಿಗೆ ಏನೋ ಸ್ವಲ್ಪ ಹಣಕಾಸಿನ ತೊಂದರೆ ಅಂತ ತಿಳಿದಾಗ ಅದರ ಒಂದು ಭಾಗ ಮಾರಾಟ ಮಾಡಿ ಬಂದ ಹಣವನ್ನು ಅವಳಿಗೆ ಕೊಟ್ಟಿದ್ದರು
ಅದು ನನಗೂ ಇವರಿಗೂ ಇಷ್ಟವಾಗಿರಲಿಲ್ಲ
ಮುಂದೆ ಆಸ್ತಿ ಪಾಲು ಮಾಡುವಾಗಲೂ ಅವಳಿಗೆ ಸರಿ ಅರ್ಧ ಭಾಗವನ್ನು ನೀಡಿದ್ದರು
ಅಂದಿನಿಂದ ನಾನು ನಾದಿನಿಯ ಬಳಿ ಸ್ವಲ್ಪ ಬಿಗುವಾಗಿಯೇ ಇದ್ದೆ
ಮುಂದೆ ಒಮ್ಮೆ ಅತ್ತೆಗೆ ಅನಾರೋಗ್ಯ ಕಾಡಿದಾಗ ನಾನು ರಜೆ ಸಿಗಲ್ಲ ಎಂಬ ನೆಪ ಒಡ್ಡಿ ಅವರನ್ನು ಮಗಳ ಮನೆಗೆ ಸಾಗ ಹಾಕಿದ್ದೆ
ಅಂದಿನಿಂದ ಮಾವ ಸ್ವಲ್ಪ ವಿಚಲಿತರದಂತೆ ಕಂಡು ಬಂದಿತ್ತು
ಮುಂದೆ ಅತ್ತೆ ಗುಣ ಮುಖರಾಗಿ ಮನೆಗೆ ಬಂದಾಗ ನೇರವಾಗಿ ಹೇಳಿಬಿಟ್ಟಿದ್ದೆ
ಆಸ್ತಿಯಲ್ಲಿ ಸಮಪಾಲು ಹೇಗೋ ಹಾಗೆಯೇ ಹಿರಿಯರ ಜವಾಬ್ದಾರಿಯಲ್ಲಿಯೂ ಸಮಪಾಲು ಇರಲಿ
6 ತಿಂಗಳು ಅತ್ತೆ ನಿಮ್ಮಲ್ಲಿ ಇರಲಿ ಮುಂದಿನ 6 ತಿಂಗಳು ಮಾವನನ್ನು ನೋಡಿಕೊಳ್ಳಿ ಎಂದು (ಥೇಟ್ ಹಿಂದಿ ಚಲನಚಿತ್ರ
ಬಾಗ್ ಬನ್ ಮಾದರಿಯಲ್ಲಿ)
ಮಗಳಿಗೆ ಎಷ್ಟೆಂದರೂ ಹೆತ್ತವರು ತಾನೇ ಮರುಮಾತಿಲ್ಲದೇ ಒಪ್ಪಿಕೊಂಡಳು
ಆದರೆ ಹಿರಿಯರ ಮಾನಸಿಕ ಸ್ಥಿತಿ ಅರಿತುಕೊಳ್ಳಲು ನಾವು ಪ್ರಯತ್ನ ಮಾಡಲೇ ಇಲ್ಲ
ಇಬ್ಬರೂ ಫೋನ್ ಮೂಲಕ ಮಾತನಾಡುತ್ತಿದ್ದರೂ ಪರಸ್ಪರ ಸಾಂಗತ್ಯ ವಂಚಿತರಾಗಿ ಒಂಟಿತನ ಅನುಭವಿಸುತ್ತಿದ್ದದ್ದು ನಮ್ಮ ಗಮನಕ್ಕೆ ಬಂದರೂ ನಾವು ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ
ಮಕ್ಕಳ ಬಳಿ ಪರಸ್ಪರ ಬಗ್ಗೆ ಹೇಳಿಕೊಳ್ಳುತ್ತಿದ್ದುದು ಅವರಿಗೂ ಅರ್ಥ ಆಗಿತ್ತು
ಅದಕ್ಕೆ ಅವರು ಇಂದು ಆಟದ ಸಮಯದಲ್ಲೂ ಅದನ್ನು ನೆನಪಿಟ್ಟುಕೊಂಡಿದ್ದರು
ಯಾಕೋ ಮನಸು ತುಂಬಿ ಬಂತು ಪಶ್ಚಾತಾಪದಿಂದ ಮನಸ್ಸು ಕುಗ್ಗಿ ಹೋಯ್ತು
ಅಲ್ಲಿಂದಲೇ ಪತಿಗೆ ಫೋನಾಯಿಸಿದೆ ಅವರು ಬೆಳಿಗ್ಗೆ ಮನೆಗೆ ಬರುವೆ ಎಂದರು
ವಿಷಯ ಏನೆಂದು ಹೇಳಲಿಲ್ಲ
ನೇರ ನಾದಿನಿಗೆ ಕರೆ ಮಾಡಿ ನಾಳೆ ಮಧ್ಯಾಹ್ನದ ಊಟಕ್ಕೆ ಎಲ್ಲರೂ
ಬನ್ನಿ ಎಂದು ಆಹ್ವಾನಿಸಿದೆ
ಮರುದಿನ ನಾನು ಮಕ್ಕಳಿಂದ ಕಲಿತ ಪಾಠದ ಬಗ್ಗೆ ಯಾವುದೇ ಸಂಕೋಚವಿಲ್ಲದೆ ಹೇಳಿಕೊಂಡೆ
ಹಿರಿಯರನ್ನು ಬೇರ್ಪಡಿಸಿ ಅವರನ್ನು ಒಂಟಿಯಾಗಿ ಮಾಡುವ ಹಕ್ಕು ನಮಗಿಲ್ಲ ಅವರು ಸದಾ ಜೊತೆಗೆ ಇರಲಿ
2-2 ತಿಂಗಳಿಗೊಮ್ಮೆ ಮನೆ ಬದಲಾವಣೆ ಮಾಡಿಕೊಳ್ಳಲಿ ಎಂದಾಗ ನನ್ನ ಮಾತಿಗೆ ಎಲ್ಲರ ಸಹಮತವಿತ್ತರು
ಅಂದಿನ ಸರಳವಾದ ಊಟ ಎಂದಿಗಿಂತ ರುಚಿಯಾಗಿತ್ತು
ರಾಧಿಕಾ ಗಣೇಶ್
ಚೆಂದದ ಕಥೆ ಮೇಡಂ. ಥ್ಯಾಂಕ್ಯೂ.
ಧನ್ಯವಾದಗಳು