ಸಂಗಾತಿ ವಾರ್ಷಿಕ ವಿಶೇಷಾಂಕ

ಎಲ್ಲಾ ಕಾಲಕ್ಕೂ ಕಾಡುವ ಜಿ.ಎಸ್. ಶಿವರುದ್ರಪ್ಪನವರ ಕವಿತೆಗಳು….ಹುಳಿಯಾರ್ ಷಬ್ಬೀರ್

ಹುಳಿಯಾರ್ ಷಬ್ಬೀರ್

ಎಲ್ಲಾ ಕಾಲಕ್ಕೂ ಕಾಡುವ ಜಿ.ಎಸ್. ಶಿವರುದ್ರಪ್ಪನವರ ಕವಿತೆಗಳು….

ನವ್ಯಕ್ಕೂ ಸೈ ,ನವೋದಯಕ್ಕೂ ಸೈ
ಎಂಬ ಗತಿ ಬಿಂಬದ ಮೇಷ್ಟ್ರೇ..?
ನೀವು ಕುವೆಂಪು ಪರಂಪರೆಯ
ಕೊನೆಯ ಕೊಂಡಿ…

ಮಲೆನಾಡಿನ ಹಕ್ಕಿಯಾಗಿ
ಕಾಡಿನ ಕತ್ತಲಲ್ಲಿ
ದೀಪದ ಹೆಜ್ಜೆಯನಿಟ್ಟು
ಚೆಲುವು ಒಲವಾಗಲೆಂದು
ಸಾಮಗಾನವ ಹಾಡಿ…

ಕಾರ್ತಿಕದ ಬೆಳಕಿಗೆ ಹಂಬಲಿಸಿ
ನನ್ನ ನಿನ್ನ ನಡುವೆ
ದೇವ ಶಿಲ್ಪವ ನಿಲ್ಲಿಸಿ
ಪ್ರೀತಿ ಇಲ್ಲದ ಮೇಲೆ
ಏನೂ ಇಲ್ಲವೆಂದು
ಮರು ಪರಾಮರ್ಶಿಸಿ
ತೆರೆದ ಹಾದಿಯ ತೋರಿಸಿ..

ಕಾವ್ಯದ ಮೂಲಕ
ಕಾವ್ಯಾರ್ಥ ಚಿಂತನೆಯ ಕಟ್ಟಿ
ಎಲ್ಲಿ ಹೋಗುವಿರಿ ನಿಲ್ಲಿ..!
ಮೋಡಗಳೇ.. ಎಂದು
ಎದೆ ತುಂಬಿ ಹಾಡಿದ ಈಸೂರಿನ
ಸೌಂದರ್ಯ ಸಮೀಕ್ಷೆಯ ಕಬ್ಬಿಗ
ಕಾಣದ ಕಡಲಲ್ಲಿ ವೇದಾಂತಿಯಾದ
ರಾಷ್ಟ್ರಕವಿ ನೀವು ಎಂದೆಂದಿಗೂ
ಸದಾ ಎಂದು ಮಾಸದ
ಮಿನುಗುವ ಕವಿ…

     ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ನೂರು ಕಾಲಘಟ್ಟದ ಸಾಹಿತ್ಯ ಮಾರ್ಗದ ಸಂದರ್ಭಗಳನ್ನು ಆವಾಯಿಸಿಕೊಂಡು ಸಾಹಿತ್ಯ ಪರಂಪರೆಯ ಗಾಢ ಅರಿವಿನೊಂದಿಗೆ ಕಾವ್ಯ ಮತ್ತು ಕಾವ್ಯಮೀಮಾಂಸೆಯ ಕ್ಷೇತ್ರಗಳಲ್ಲಿ ಜಿ.ಎಸ್.ಎಸ್. ರವರ ಹಾದಿ ಎಂದೆಂದಿಗೂ ಅಸಾಧಾರಣ ಹಾಗೂ ಅನನ್ಯಲೋಕ.

ಒಟ್ಟು 591 ಕವಿತೆಗಳು 39 ಅನುವಾದಿತ ಕವಿತೆಗಳು 15 ಕವನ ಸಂಕಲನಗಳು ಇವರ ಕಾವ್ಯ ಪ್ರೀತಿಗೆ ಹಿಡಿದ ಕೈಗನ್ನಡಿಯಾಗಿದೆ. ಕಾವ್ಯವು ಸಮುದಾಯದ ಆಶಯಗಳಿಗೆ ದನಿಯಾಗುವ ಮೂಲಕ ಮೂಲಕ ಸಮುದಾಯದೊಟ್ಟಿಗೆ ಸಂವಾದವನ್ನು ಬೆಳೆಸುವ ಕಾರಣದಿಂದಲೇ ಹೆಚ್ಚೆಚ್ಚು ಆಪ್ತವಾಗುತ್ತವೆ. ಜನರ ಬದುಕು ,ಬವಣೆ ,ನಂಬಿಕೆ ,ನಡವಳಿಕೆಗಳನ್ನು ಅತಿ ಹತ್ತಿರದಿಂದ ಹಾಗೂ ಕುತೂಹಲದಿಂದ ಗಮನಿಸುತ್ತಾ ಜೀವನದ ಮೌಲ್ಯಗಳನ್ನು ವಿಮರ್ಶೆ ಗೊಳಪಡಿಸುತ್ತಾ ಕಟು ವಾಸ್ತವದ ನಡುವೆ ಆಸೆಯ ಹಂಬಲವನ್ನು ಚಿಗುರಿಸುವುದರಿಂದ ಇವರ ಕವಿತೆಗಳು ಹೆಚ್ಚು ವಿಶಿಷ್ಟವೆನಿಸುತ್ತವೆ.

ನಾನು ಬರೆಯುತ್ತೇನೆ
ಸುಮ್ಮನಿರಲಾರದ್ದಕ್ಕೆ
ನನ್ನ ವೇದನೆ ಸಂವೇದನೆಗಳನ್ನು
ಕ್ರಿಯೆ ಪ್ರಕ್ರಿಯೆಗಳನ್ನು
ದಾಖಲು ಮಾಡುವುದಕ್ಕೆ
ನಿಂತ ನೀರಾಗದೆ ಮುಂದಕ್ಕೆ
ಹರಿಯುವುದಕ್ಕೆ
ಎಲ್ಲರ ಜೊತೆ ಬೆರೆಯುವುದಕ್ಕೆ

ಬರವಣಿಗೆಯ ಅವರ ಆಶಯ ಅಸ್ತಮಾನದಲ್ಲೂ ಉದಯಿಸುವ ತವಕ ಇದ್ದೇ ಇರುತ್ತದೆ. ಇದು ನಿಂತ ನೀರಾಗದೆ ಮುಂದಕ್ಕೆ ಹರಿಯುತ್ತಲೇ ಇರುತ್ತದೆ ಎಲ್ಲರ ಜೊತೆ ಬೆರೆಯುವುದರೊಂದಿಗೆ.

ಪ್ರೀತಿ ಇಲ್ಲದ ಮೇಲೆ
ಹೂವು ಅರಳೀತು ಹೇಗೆ..?
ಮೋಡ ಕಟ್ಟೀತು ಹೇಗೆ..?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ..?

ಈ ಕವಿತೆ ಯಾವ ಕಾರ್ಯಕ್ಕೂ ಮೊದಲು ಅದರಲ್ಲಿ ಪ್ರೀತಿಯ ಮೊಳಕೆ ಚಿಗುರಿದಾಗ ಮಾತ್ರ ಹೊಸ ಹೊಸ ಆಶಯಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದೆಂದು ನಿಲುವಾಗಿದೆ.

ವಯಸ್ಸಾಗುವುದು ಕವಿಗೆ
ಕವಿತೆಗಳಿಗಲ್ಲ
ಹಲ್ಲು ಹೋಗಿ ಬೆನ್ನು ಬಾಗಿ
ಕವಿ ಸಂಜೆ ಆಕಾಶವನ್ನು ಹೊದ್ದು
ಕೆಮ್ಮುತ್ತ ಮೂಲೆಗೆ ಮುದುರಿ ಕೂತಾಗಲು
ಕವಿತೆಯ ಮುಖದಲ್ಲಿ
ಆಯಾಸದ ಗುರುತೇ ಇಲ್ಲ..!

ಈ ಕವಿತೆ ಎಲ್ಲಾ ಕಾಲಕ್ಕೂ ಅನ್ವಯವಾಗುವುದರಿಂದ ಅವರ ಕವಿತೆಗಳಿಗೆ ವಯಸ್ಸೇ ಆಗುವುದಿಲ್ಲ. ಓದುಗರಿಗೆ ಮಾತ್ರ ವಯಸ್ಸಾಗುತ್ತದೆ. ಆದ್ದರಿಂದ ಅವರ ಕವಿತೆಗಳು ಅನುಗಾಲದ ಅನನ್ಯ ಸಾಹಿತ್ಯದ ಆಸ್ತಿ.

ವೇದಾಂತಿ ಹೇಳಿದನು
ಹೊನ್ನೆಲ್ಲ ಮಣ್ಣು
ಕವಿ ಒಬ್ಬ ಹಾಡಿದನು
ಮಣ್ಣೆಲ್ಲ ಹೊನ್ನು..!

ಇವರು ಕೆಲವೊಮ್ಮೆ ದಾರ್ಶನಿಕನಂತೆ ಮತ್ತೆ ಒಮ್ಮೊಮ್ಮೆ ಕವಿಯಾಗಿ, ಮಾನವ ಸಹಜತೆಯ ಆಸೆಯ ಜೀವಂತಿಕೆಯಾಗಿ ಕಾವ್ಯ ಕುಸುರಿತನ ಈ ಕವಿತೆಯಲ್ಲಿ ತಿಳಿಸಿದ್ದಾರೆ.

ನೀನು ಮುಗಿಲು ನಾನು ನೆಲ
ನಿನ್ನ ಒಲುವೆ ನನ್ನ ಬಲ
ನಮ್ಮಿಬ್ಬರ ಮಿಲನದಿಂದ
ಉಲ್ಲಾಸವೇ ಶ್ಯಾಮಲ..!

ನಾನು ಎಳವೆ ನೀನು ಮಣಿವೆ
ನಾನು ಕರೆವೆ ನೀನು ಸುರಿವೆ
ನಮ್ಮಿಬ್ಬರ ಒಲುಮೆ ನಲುಮೆ
ಜಗತ್ತಾಯಿತು ಹುಣ್ಣಿಮೆ..!

ನಾನಚಲದ ತುಟಿಯೆತ್ತುವೆ
ನೀ ಮಳೆಯಲು ಮುತ್ತನಿಡುವೆ
ನಿನ್ನಿಂದಲೇ ತೆರೆವುದೆನ್ನ
ಚೈತನ್ಯದ ಕಣ್ಣೆವೆ..!

ಈ ಕವಿತೆಯಲ್ಲಿ ಪ್ರಣಯವು ಎಲ್ಲಾ ಕಾಲದಲ್ಲೂ ಗಂಡು ಹೆಣ್ಣಿನ ನಡುವೆ ಸಲ್ಲುವ ಆಪ್ತ ಸಲ್ಲುವಿಕೆಯನ್ನು ಕವಿತೆಯಾಗಿ ಹಿಡಿದಿಟ್ಟಿದ್ದಾರೆ.

ನಾನು ಬರೆಯುತ್ತೇನೆ
ಕಾಳರಾತ್ರಿಗಳಲ್ಲಿ ಬಂದು ಕದ ತಟ್ಟುವ
ಧ್ವನಿಗಳನ್ನು ಕುರಿತು

ನಾನು ಬರೆಯುತ್ತೇನೆ
ಬಿರುಗಾಳಿಯಲ್ಲಿ ಕಡಲಿನ ಮೇಲೆ
ಹೊಯ್ದಾಡುವ ದೋಣಿಗಳನ್ನು ಕುರಿತು

ನಾನು ಬರೆಯುತ್ತೇನೆ
ನೆಲದಾಳಗಳಲ್ಲಿ ಮಲಗಿರುವ ಮೂಳೆಗಳ
ನಿಟ್ಟುಸಿರನ್ನು ಕುರಿತು

ನಾನು ಬರೆಯುತ್ತೇನೆ
ಸಂಜೆ ಗತ್ತಲಿನಲ್ಲಿ ಕರಗುತ್ತಿರುವ
ಉಜ್ಜಲವಾದ ಹಗಲುಗಳನ್ನು ಕುರಿತು

ನಾನು ಬರೆಯುತ್ತೇನೆ
ಶತಮಾನಗಳ ಕತ್ತಲನ್ನೊಡೆದು
ಮೆತ್ತಗೆ ತಲೆಯೆತ್ತುವ ಮೊಳಕೆಗಳನ್ನು ಕುರಿತು

ನಾನು ಬರೆಯುತ್ತೇನೆ
ಕೊನೆಯಿರದ ಬೀದಿಗಳ ಮೇಲೆ
ಕೀರ್ತಿಗೆ ಕಚ್ಚಾಡುವವರನ್ನು ಕುರಿತು

ಅರಳುವ ಕನಸುಗಳನ್ನು ಕುರಿತು
ಉರುಳುವ ಚಕ್ರಗಳನ್ನು ಕುರಿತು
ನಾನು ಬರೆಯುತ್ತೇನೆ ನನ್ನ
ಒಂದೊಂದು ಎಲೆಯುದುರಿ
ನಾನು ಬೋಳಾಗುವುದನ್ನು ಕುರಿತು.

ಹೀಗೆ ಅಂದಿನಿಂದ ಇಂದಿನವರೆಗೂ ವಿಶ್ವ ಮಾನವತೆಯನ್ನು ರೂಪಿಸಲು ಬೇಕಾದ ಮಹಾ ಶಕ್ತಿಯಾಗಿ ಏಳು ದಶಕದ ಕಾವ್ಯ ಸೃಷ್ಟಿಯು ಇವರ ಶ್ರದ್ಧೆ ಸರಸ್ವತಿಯ ಕೃಪೆ ಸಜ್ಜನಿಕೆಯು ಕಾವ್ಯಗಳಲ್ಲಿಯೂ ಅಡಗಿರುವುದರಿಂದ ಎಲ್ಲರೂ ಎಲ್ಲವೂ ಪ್ರೀತಿಯಿಂದ ಇವರ ಸಾಹಿತ್ಯ ಸಾಮಾನ್ಯನಿಗೂ ಹಿತ ಕೊಡುತ್ತಿರುವುದು. ಇಹನಿಷ್ಠೆಯ ಕಾವ್ಯಧರ್ಮ ಪ್ರಾಮಾಣಿಕತೆ ಗಂಡು ಹೆಣ್ಣಿನ ಮಾನವೀಯ ಬಾಂಧವ್ಯ ,ವಾಸ್ತವ ಪ್ರಜ್ಞೆಯ ಹೊಳವು, ಎಲ್ಲಾ ಧರ್ಮ, ಪಂಥ ,ಜಾತಿಗಳಿಂದ ಬಯಲ ಬೆಳಕಿನೆಡೆಗೆ ಬದುಕಲ್ಲಿ ಬದುಕನ್ನು ಕಲಿಸುವುದು ಹೇಗೆ..? ಮತ್ತು ಏನನ್ನು..? ಎಂಬ ತೀರ್ಮಾನಿಸುವ ಆಶಯ ಇವರ ಕವಿತೆಗಳಲ್ಲಿ ದಟ್ಟವಾಗಿ ಹರಡಿದೆ. ಇವರ ಪ್ರತಿ ಕಾವ್ಯವು, ಕವಿತೆಯು ಪುಟ್ಟ ಹಣತೆಯಂತೆ ಒಂದು ರೀತಿಯ ಬೆಳಕಿನ ವಿಶ್ವಾಸವನ್ನು ಉಂಟು ಮಾಡಿ ಪ್ರತಿಯೊಬ್ಬರಲ್ಲೂ ಪುಟ್ಟ, ಪುಟ್ಟ ಹಣತೆಗಳಂತೆ ಬೆಳಗುತ್ತಿವೆ, ಬೆಳಗಿವೆ ,ಬೆಳಗಿಸುತ್ತಲೇ ಇವೆ ಎಂಬುದರಲ್ಲಿ ಅನುಮಾನವಿಲ್ಲ.


ಹುಳಿಯಾರ್ ಷಬ್ಬೀರ್

Leave a Reply

Back To Top