ಸುಭಾಷ ಚವ್ಹಾಣರವರ ಕೃತಿ ‘ಜಗವೆಲ್ಲ ನಗುತಿರಲಿ’ ಅವಲೋಕನ ಡಾ. ಹಸೀನಾ ಎಚ್. ಕೆ. ಅವರಿಂದ

ಪುಸ್ತಕ ಸಂಗಾತಿ

ಸುಭಾಷ ಚವ್ಹಾಣ

‘ಜಗವೆಲ್ಲ ನಗುತಿರಲಿ’

ಡಾ. ಹಸೀನಾ ಎಚ್. ಕೆ.

”ಜಗವೆಲ್ಲ ನಗುತಿರಲಿ” ಕವನ ಸಂಕಲನದ ಕವನಗಳು ರೋಮಾಂಚನಗೊಳಿಸಿ ಹೃದಯ ವೈಶಾಲ್ಯತೆ ಪರಿಮಳಿಸುತ್ತದೆ

(ಜಗವೆಲ್ಲ ನಗುತಿರಲಿ’ ಕವನ ಸಂಕಲನ ಕನ್ನಡ ಕಾವ್ಯಲೋಕದ ಅಪರೂಪದ ಕೃತಿಗಳಲೊಂದು; ಇಲ್ಲಿನ ಪ್ರತಿಯೊಂದು ಕವಿತೆಗಳು ಆದ್ರಭಾವವನ್ನು ಉದ್ದೇಪಿಸುತ್ತದೆ)

                      ‘ಸುಹೇಚ’ ಕಾವ್ಯನಾಮದೊಂದಿಗೆ ಕಾವ್ಯ ರಚನೆಯಲ್ಲಿ ತೊಡಗಿರುವ ಕವಿ ಸುಭಾಷ್ ಹೇಮಣ್ಣಾ ಚವ್ಹಾಣ ರವರು ತಮ್ಮ ತಾಯಿಯವರ ಹೆಸರಿನ ‘ಸೀತಾಮಾತಾ ಪ್ರಕಾಶನ’ ಪರಮವಾಡಿಯಿಂದ ೨೦೧೫ರಲ್ಲಿ ಪ್ರಕಟಿಸಿರುವ ಚೊಚ್ಚಲ ಕೃತಿ ‘ಜಗವೆಲ್ಲ ನಗುತಿರಲಿ’ ಕವನ ಸಂಕಲನ ‘ಕನ್ನಡ ಕಾವ್ಯ ಲೋಕದ ಅಪರೂಪದ’ ಕೃತಿಗಳಲೊಂದು ಎಂದೇ ಹೇಳಬೇಕು. ೪೧ ಕವಿತೆಗಳನ್ನು ಒಳಗೊಂಡಿರುವ ‘ಜಗವೆಲ್ಲ ನಗುತಿರಲಿ’ ಕವನ ಸಂಕಲನ ತನ್ನ ಶೀರ್ಷಿಕೆಯಿಂದಲೇ ಓದುಗರನ್ನು ತನ್ನತ್ತ ಸೆಳೆಯುತ್ತದೆ. ‘ಜಗವೆಲ್ಲ ನಗುತಿರಲಿ, ಜಗದಳವು ನನಗಿರಲಿ’ ಎಂಬ ಕವಿ ‘ಈಶ್ವರ ಸಣಕಲ’ರ ಕವಿತೆಯ ಉದಾತ್ತ ಸಾಲು ನೆನಪಿಸುವ ಈ ಪುಸ್ತಕದ ಶೀರ್ಷಿಕೆ ಮತ್ತು ಇಲ್ಲಿಯ ಕವನಗಳು ರೊಮಾಂಚನಗೊಳಿಸಿ ಹೃದಯ ವೈಶಾಲ್ಯ ಪರಿಮಳಿಸುತ್ತದೆ. ಈ ಕೃತಿಯು ತನ್ನ ಒಡಲಾಳದಲ್ಲಿಟ್ಟುಕೊಂಡ ಪ್ರತಿಯೊಂದು ಕವಿತೆಯೂ ಸಹ ‘ಆದ್ರ ಭಾವ’ವನ್ನು ಉದ್ದೀಪಿಸುತ್ತದೆ. ಸಂಕಲನವು ಸಾಮಾಜಿಕ, ಸಾಂಸ್ಕೃತಿಕ, ದೇಶಪ್ರೇಮ, ಸಾಂಸಾರಿಕ, ಪ್ರೇಮ, ಕೌಟುಂಬಿಕ ಹೀಗೆ ಹತ್ತು ಹಲವು ವಿಷಯಗಳನ್ನು ಒಳಗೊಂಡ ಕವಿತೆಗಳು ಇಲ್ಲಿವೆ. ಒಂದಕ್ಕಿಂತ ಮತ್ತೊಂದು ಕವಿತೆ ಓದುಗನನ್ನು ಹಿಡಿದಿಡುತ್ತವೆ. ಕವಿ ಕಾವ್ಯ ರಚನೆಗಳನ್ನು ಮಾಡುವಾಗ ವಿಷಯ, ವಸ್ತು ನಿಷ್ಠತೆ, ಪ್ರಖರತೆ, ಕಾವ್ಯ ಶಿಲ್ಪಕ್ಕೆ ಜೀವವನ್ನು ತುಂಬಿದ್ದಾರೆ. ಹೀಗಾಗಿಯೇ ಇಲ್ಲಿನ ಕವಿತೆಗಳು ಸಹಜವಾಗಿ ಮತ್ತು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ.

                  ‘ಕವಿಗೊಂದು ಕಾವ್ಯ ನಮನ’ ಎಂಬ ಕವಿತೆ ಕನ್ನಡ ನೆಲ ಕಂಡ ಅಪರೂಪದ ದಾರ್ಶನಿಕ ಬರಹಗಾರರಾದ ಶ್ರೀಕುವೆಂಪು ಅವರ ಕುರಿತು ಕವಿ ನಮನ ಸಲ್ಲಿಸುವ ಕವಿತೆಯಾಗಿದೆ.


“ಕನ್ನದಲ್ಲಿ ಕಾವ್ಯಸುಧೆಯ ಹರಿಸಿ/ ಕರುನಾಡಿಗರೆದೆಯಲ್ಲಿ ಕನ್ನಡದೊಲವು ಮೂಡಿಸಿ
ಶ್ರೀರಾಮಾಯಣ ಮಹಾಕಾವ್ಯ ಅರಳಿಸಿ/
ಕನ್ನಡಾಂಬೆಗೆ ಜ್ಞಾನಪೀಠ ಕಿರೀಟ ತೊಡಿಸಿದ
ನಿಮಗಿದೊ ನನ್ನೆದೆ ಬಾಂದಳದ ನಮನ”

ಎಂಬ ಸಾಲುಗಳನ್ನು ಓದುತ್ತಿದ್ದಂತೆ ಓದುಗರ ಮನದಲ್ಲಿ ಕವಿ ಕುವೆಂಪುರವರ ಚಿತ್ರ ಮೂಡುತ್ತದೆ, “ನಿಮಗಿದೊ ನನ್ನೆದೆ ಬಾಂದಳದ ನಮನ” ಎಂಬ ಸಾಲು ಬರುತ್ತಿದ್ದಂತೆ ಎಂತಹವರೂ ಕೂಡ ಆ ಧೀಮಂತ ಕವಿಗೆ, ಅವರ ಕವಿತ್ವ, ವಿಶ್ವ ಮಾನವತ್ವ ಸಾರಿದ ಆ ಹೃದಯಕ್ಕೆ ನಮಿಸಿದ ಭಾವ ಮೂಡುತ್ತದೆ.

                   ಇನ್ನೂ ಕವನ ಸಂಕಲನದ ಮೊದಲ ಕವನ ‘ಎನ್ನ ಕಾಯಕ’ ಎಂಬ ಕವಿತೆಯನ್ನು ಓದುತ್ತಿದ್ದಂತೆ ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆಯನ್ನು ಎದುರುಗೊಂಡ ಭಾವ ಮನದಲ್ಲಿ ಸುಳಿಯುತ್ತದೆ. “ಕಬ್ಬಿಗ ನಾ ಕನ್ನಡದ್ಹಾಡ/ ಹಾಡುವುದೆನ್ನ ಕಾಯಕ/ ಹೊನ್ನ ಮಣ್ಣಿನ ಕರುನಾಡ/ ಪೂಜಿಸುವುದೆನ್ನ ಕಾಯಕ”.. ಎಂಬ ಸಾಲುಗಳನ್ನು ಓದುತ್ತಿದ್ದಂತೆ ಕನ್ನಡ – ನುಡಿ ಕುರಿತು ಮಾತಾಡುವುದೇ ಹಾಡೊಂದನ್ನು ಹಾಡಿದಂತೆ ಎಂಬ ಭಾವ ನಮ್ಮಲ್ಲಿ ಬರುತ್ತದೆ. ಕನ್ನಡ ನುಡಿಯ ಸವಿ, ಕನ್ನಡ ನಾಡಿನ ಸಿರಿಯನ್ನು ಈ ಕವಿತೆಯಲ್ಲಿ ಕಾಣಬಹುದು. ಹೀಗೆ ಸಂವೇದನಾಶೀಲತೆಯಿಂದ ಸರಾಗವಾಗಿ ಓದಿಸಿಕೊಂಡು ಹೋಗುವ ಹೆಚ್ಚುಗಾರಿಕೆ ಈ ಕೃತಿಗಿದೆ.

                 ‘ಬದುಕು ದೊಡ್ಡದು’ ಎಂಬ ಶೀರ್ಷಿಕೆಯ ಕವಿತೆ ಮನುಷ್ಯರಲ್ಲಿ ಬದುಕಿನ ಬಗೆಗಿನ ಜೀವನ ಪ್ರೀತಿಯನ್ನು ಪ್ರತಿಪಾದಿಸುತ್ತದೆ.


ಪ್ರೀತಿ ಬಾಳಗೀತೆಯಾಗಿ ಉಲಿಯಲಿ/
ಮನವು ನೀತಿ ನಡೆಯಲಿ ಸಾಗಲಿ/
ಎದೆ ತಂತಿ ಭಾವ ಮೀಟಿ ಹಾಡಲಿ/
ರಾಗದೊಲುಮೆ ಜೀವ ಬೆಸೆಯಲಿ”..

ಆಹ್ ಜೀವನದ ಹಿರೆಮೆಯನ್ನು ಸಾರುವ ಎಂತಹ ಅಪರೂಪದ ಸಾಲುಗಳು ನೋಡಿ. ಇದನ್ನು ಓದಿದ ಯಾವುದೇ ವ್ಯಕ್ತಿಯ ಮನಸ್ಸಿನಲ್ಲಿರುವ ನಿರಾಶೆ ತನ್ನಷ್ಟಕ್ಕೆ ತಾನೇ ಕರಗಿ ಹೋಗುವುದಂತೂ ಖಚಿತ. ಕವಿ ಇಲ್ಲಿ ಕವಿತೆಯ ಮೊದಲ ಸಾಲುಗಳಲ್ಲೇ ಓದುಗರ ಹೃದಯದಾಳಕ್ಕೆ ಇಳಿದು ಬಿಡುತ್ತಾರೆ. ಕವಿತೆಯ ಆರಂಭವೇ ನಿಮ್ಮನ್ನು ಪಕ್ಕಂತ ಹಿಡಿದಿಟ್ಟುಕೊಂಡು ಬಿಡುತ್ತದೆ. ಇನ್ನು ಮೂರನೇ ಚರಣದ ಸಾಲುಗಳು ಹೀಗಿವೆ..


ತ್ಯಾಗ ಪ್ರೀತಿ ಕರುಣೆ ಹರೆಯ ಮರೆಯದೆ/
ಅರಿತು ಬಾಳನೆಳೆಯಲಿ/
ತಾನು ತನ್ನದೆಂಬ ಸ್ವಾರ್ಥ ಅಳಿದು/
ಜೀವನವೆಲ್ಲ ಸಾರ್ಥಕವಾಗಲಿ”

ಎಂದು ಹೇಳುವ ಮೂಲಕ ಕವಿ ಮನುಷ್ಯನ ಬದುಕಿನಲ್ಲಿ ಉತ್ಸಾಹ, ಪ್ರೀತಿಯು ಅವಶ್ಯಕ ಎಂದು ಹೇಳುತ್ತಲೇ ಜೀವನ ಪ್ರೀತಿ ಎಂಬುದು ಸ್ವಾರ್ಥದ ರೂಪ ಪಡೆಯದಂತೆ ಎಚ್ಚರ ವಹಿಸುವುದನ್ನು ಸೂಚಿಸುತ್ತಾರೆ. ಮನದ ಕಿರಿಕಿರಿ, ಬೇಗುದಿ ತೆಗೆದು ಮನೋ ಚೈತನ್ಯ ನೀಡುತ್ತದೆ.

           ‌‌‌‌‌‌        ಹಾಗೇಯೇ ‘ಸ್ಫೂರ್ತಿ’ ಎಂಬ ಕವಿತೆಯಲ್ಲಿ


ದಿನವಿಡಿ ನಿನ್ನ ಗಂಧದಗಾನ
ಅದುವೆ ಎನನೆ ದವನ
ಅನುಕ್ಷಣ ನಿನ್ನ ಅಂದದತಾನ
ಅಪದುವೆ ನನಗೆ ಜೀವನ*  

ಪ್ರೇಯಸಿಯನ್ನು ಕುರಿತಂತೆ ತನ್ನ ಆತ್ಮಾನುಸಂಧಾನ ಮಾಡಿಕೊಂಡಂತೆ ಕಾಣುವ ಈ ಕವಿತೆಯ ಸಾಲುಗಳು ಓದುಗನನ್ನು ತನ್ನಷ್ಟಕ್ಕೆ ತಾನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಇವೆ. ಬದುಕುವ ರೀತಿಗೆ ನೀತಿಗೀತೆಯಾಗಿದೆ ಈ ಕವಿತೆಯ ಹಾದಿ. ಸಾಮಾಜಿಕ ಜವಾಬ್ದಾರಿ, ಪರಿಸರ ರಕ್ಷಣೆ, ಪರೋಪಕಾರ ತತ್ವ ಸಾಕಾರವಾಗಿದೆ. ಈ ಕವಿತೆಯಲ್ಲಿ ಕವಿ ‘ದವನ’ದ ಎಂದು ಬಳಸಿದ್ದಾರೆ. ‘ದವನ’ ಎಂದು ಏನೆಂದು ಈಗಿನ ಯುವಕ ಯುವತಿಯರಿಗೆ ಕೇಳಿದರೆ ಬಹುಶಃ ಉತ್ತರ ಸಿಗುವುದು ಕಷ್ಟ. ‘ದವನ’ ಎಂಬುದು ಒಂದು ಸಸ್ಯ. ಈ ಸಸ್ಯ ದವನದ ಹುಣ್ಣಿಮೆಯ ಹೊತ್ತಿಗೆ ಬೆಳೆಯುತ್ತದೆ. ಹೂವು, ಸುಗಂಧ ಸಸ್ಯಗಳಲ್ಲಿ ಪ್ರಮುಖವಾದ ಮತ್ತು ಅತ್ಯಂತ ಪುರಾತನವಾದ ಸಸ್ಯ ಇದು. ಇದರ ವಿಶೇಷತೆ ಏನೆಂದರೆ ಇಡೀ ಸಸ್ಯವೇ ಸುಗಂಧ ಭರಿತವಾಗಿರುತ್ತದೆ. ಸಾಮಾನ್ಯವಾಗಿ ಯಾವುದೇ ಹೂವಿನ ಸಸ್ಯದ ಹೂವುಗಳು ಸುಗಂಧ ಬೀರಿದರೆ ದವನ ಇಡೀ ಸಸ್ಯವೇ ಘಮಘಮಿಸುತ್ತದೆ. ಅಂತಹ ರೂಪಕಗಳನ್ನು ಕವಿಗಳು ಬಳಸಿದಾಗ ನಮ್ಮ ನಾಡಿನ ಸಸ್ಯ ಸಂಪತ್ತು, ಸಿರಿ, ಮಣ್ಣ ವಾಸನೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯ ಎನ್ನಬಹುದು.

                   ಸುಭಾಷ್ ಅವರು ಕೇವಲ ಹರೆಯದ ಪ್ರೀತಿ, ಪ್ರೇಮದ ಕವಿತೆಗಳಿಗೆ ಸೀಮಿತರಾಗದೇ ಪ್ರೌಢ ಪ್ರೆಮ, ಪಕ್ವ ಪ್ರೇಮ ಹಾಗೂ ಅವರು ಸಾಮಾಜಿಕ ಕಳಕಳಿಯನ್ನೂ ಹೊಂದಿದ ಕವಿ ಎಂಬುದನ್ನು ಈ ಕವನ ಸಂಕಲನದ ಮೂಲಕ ಸಾಬೀತು ಪಡಿಸಿದ್ದಾರೆ. ‘ಎಲ್ಲಿದೆ ನೆಮ್ಮದಿ’? ಎಂಬ ಕವಿತೆಯಲ್ಲಿ ಅವರು ಪರಿಸರದ ಮೇಲಾಗುವ ಮನುಷ್ಯನ ದೌರ್ಜನ್ಯವನ್ನು ಕಟ್ಟಿ ಕೊಟ್ಟಿದ್ದಾರೆ..


ಈ ಗಾಳಿ ವಿಶುದ್ಧಿಗೊಳಿಸಿದವರ್ಯಾರು?/
ಈ ನೀರು ಕಲುಷಿತ ಮಾಡಿದವರ್ಯಾರು? /
ಈ ಭೂಮಿಯ ಉದರ ಸೀಳಿದವರ್ಯಾರು?/
ಈ ಹಸಿರ ಬರಿದಾಗಿಸಿದವರ್ಯಾರು?/

ಎಂಬ ಪ್ರಶ್ನೆಯನ್ನು ಕೇಳುತ್ತಲೇ, ಮಾನವ ನಾಗರೀಕತೆಯ ದುರಾಸೆಯನ್ನು ಖಂಡಿಸುತ್ತಾರೆ. ಹೀಗೆಯೇ ನಡೆದರೆ ವಿನಾಶವಿದೆ ಎಂಬ ನೇರ ಎಚ್ಚರಿಕೆಯನ್ನು ಕವಿ ಇಲ್ಲಿ ಮಾನವ ಕುಲಕ್ಕೆ ನೀಡುತ್ತಾರೆ. ಈ ಮೂಲಕ ಕವಿಯಾದವರ ಜವಾಬ್ದಾರಿ ಏನೆಂದು ತೋರಿಸಿದ್ದಾರೆ.

                        ತೊಟ್ಟಿಲೂರಿನ ಕವಿ ‘ಎಂ. ಎಂ.  ಪುರದನಗೌಡರ’ ಅರ್ಥವತ್ತಾದ ಮುನ್ನುಡಿ ಬರೆದಿರುವ, ಹಿರಿಯ ಬಂಡಾಯ ಕವಿ ‘ಸತೀಶ ಕುಲಕರ್ಣಿ’ ನ್ಯಾಯಪರವಾದ ಬೆನ್ನುಡಿ ಬರೆದಿರುವ, ಏಲಕ್ಕಿ ನಾಡಿನ ಕವಿ ‘ಗಮನ’ ಚನ್ನುಡಿ ಮತ್ತು ವೈಚಾರಿಕ ಕವಯತ್ರಿ ಸುನಂದಾ ಕಡಮೆಯವರ ಆಶಯನುಡಿ ಹೊಂದಿರುವ ‘ಜಗವೆಲ್ಲ ನಗುತಿರಲಿ” ಕೃತಿ ರಚನಾಕಾರರ ಜ್ಞಾನವು ಉತ್ತುಂಗಕ್ಕೇರಿದೆ ಏಕೆಂದರೆ ಕವಿಯ ಭಾಷೆಯ ಪ್ರೌಢಿಮೆಯನ್ನು ಕೂಡ ಮೆಚ್ಚುವಂತಹದ್ದು. ಅವರು ಬಳಸಿರುವ ಪದಗಳು, ರೂಪಕಗಳು, ಸಂಕೇತಗಳು, ಹೋಲಿಕೆಗಳು ಅವರ ಜ್ಞಾನದ ಮಟ್ಟ ಏನೆಂಬುದಕ್ಕೆ ಸಾಕ್ಷಿ. ನಾಡಿನ ಅನೆಕ ಪತ್ರಿಕೆ ಮತ್ತು ಬಾನುಲಿಯಲ್ಲಿ ಪ್ರಸಾರವಾಗಿರುವ ಇಲ್ಲಿಯ ಹಲವು ಕವಿತೆಗಳು ಗಮನ ಸೆಳೆಯುತ್ತವೆ. ಆಶಯ, ನುಡಿ ದೀಪ, ರೈತರ ಪಾಡು, ಹೂವು ಕುಸುಮಿಸಲಿ, ಜೀವಗಣಿ, ಮಮತಾಮಯಿ, ವಚನ ಧರ್ಮ ಈ ಸಂಕಲನದಲ್ಲಿ ಹಲವು ಕವಿತೆಗಳು ಮನ ನಾಟುತ್ತವೆ.

                           ಭಾವಗೀತೆ ಶೈಲಿಯ ಹಾಡು ಗಬ್ಬವಾಗಿರುವ ಈ ಚೊಚ್ಚಲು ಕವನ ಸಂಕಲನದ ಕವಿ ಸುಹೇಚರವರನ್ನು ಉದಯೋನ್ಮುಖ ಕವಿಗಣದಲ್ಕಿ ಮುಂಚೂಣಿ ಸ್ಥಾನದಲ್ಲಿದೆ ನಿಲ್ಲಿಸುತ್ತದೆ. ಕವನ ಸಂಕಲನದ ಬೆಲೆ ಕೇವಲ ೮೦ ₹ ಮಾತ್ರ. ಈ ಕೃತಿಯನ್ನು ಕೊಂಡು ಓದಿ ಕಾವ್ಯಾಸ್ವಾಧನೆ ಮಾಡುವಲ್ಲಿ ಹಿಂದೇಟು ಹಾಕದಿರಿ ಎಂಬ ಕಳಕಳಿಯಿಂದ ಸುಹೇಚ ಅವರು ಇನ್ನೂ ಹತ್ತಾರು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡುವಂತಾಗಲಿ. ಅವರು ಕಾವ್ಯ ಪ್ರಕಾರದಲ್ಲಿ ಇನ್ನಷ್ಟು ಸೃಜನಶೀಲ ರಚನೆಗಳನ್ನು ಮಾಡುವ ಮೂಲಕ ಕನ್ನಡ ಕಾವ್ಯ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸಲಿ ಎಂದು ಹಾರೈಸುತ್ತೇನೆ.


ಡಾ. ಹಸೀನಾ ಹೆಚ್. ಕೆ.  

2 thoughts on “ಸುಭಾಷ ಚವ್ಹಾಣರವರ ಕೃತಿ ‘ಜಗವೆಲ್ಲ ನಗುತಿರಲಿ’ ಅವಲೋಕನ ಡಾ. ಹಸೀನಾ ಎಚ್. ಕೆ. ಅವರಿಂದ

  1. ನೀನು ಹೀಗೆ ಇನ್ನೂ ಉತ್ತಮ ಕೃತಿಗಳನ್ನು ರಚಿಸುತ್ತ ಅದರ ಪರಿಮಳ ಸೂಸುತಿರು
    ಜಗದಗಲ ಬಾನಿನಗಳ ನಿನ್ನ ಮತ್ತು ನಿನ್ನ ಮಾತಾಪಿತರ ನಾಮ ಹರಡಲಿ ಶುಭವಾಗಲಿ

  2. ಒಂದೊಂದು ಕವನವನ್ನೂ ಓದಿ ಮನ ಮುಟ್ಟುವಂತೆ ವಿಶ್ಲೇಷಣೆ ಮಾಡುತ್ತಾ ಕವನಗಳನ್ನು ಓದದವರ ಮನಸ್ಸಿನಲ್ಲಿ ಕುತೂಹಲ ಮೂಡುವಂತೆ ಮಾಡಿದ್ದೀರಾ..
    ಅಭಿನಂದನೆಗಳು ಮೇಡಂ.

Leave a Reply

Back To Top