ಅಂಕಣ ಬರಹ

ಪುಸ್ತಕ ಪ್ರಪಂಚ

ವೈ.ಎಂ.ಯಾಕೊಳ್ಳಿ

ವೀಣಾ ಕಲ್ಮಠ ಅವರ

‘ಜೀವದೊಡತಿಯ ಗೈರು ಹಾಜರಿಯಲ್ಲಿ’

ಜೀವದೊಡತಿಯ ಗೈರು ಹಾಜರಿಯಲ್ಲಿ
ಲೇಖಕರು -ವೀಣಾ ಕಲ್ಮಠ
ಪ್ರಕಾಶಕರು -ಬೆನಕ ಬುಕ್ಸ್ ಬ್ಯಾಂಕ್,ಯಳಗಲ್ಲು,ಕೋಡೂರು ಅಂಚೆ, ಶಿವಮೊಗ್ಗ
ಪುಟಗಳು -75
ಬೆಲೆ-75

 ಕವಿತೆ ಅವರವರ ಭಾವಗಳ ಅಬಿವ್ಯಕ್ತಿ  ಮನದ ತಹತಹವನ್ನು ಮಾತಿಗಿಳಿಸಿ ಆಕಾರ ರೂಪ ಕೊಡುವ ಸಾಧನ. ಎಷ್ಟು ಜನ ಕವಿಗಳಿದ್ದಾರೋ ಅಷ್ಟು ಕಾವ್ಯ ರೂಪುಗೊಳ್ಳಬಹುದು. ಮೂಲತ: ಕವಿತೆಯ ಸಂವಿಧಾನ ಒಂದೆಯಾದರೂ ಅದು ಅಭಿವ್ಯಕ್ತಗೊಳ್ಳುವ ವಿಧಾನ ಬೇರೆ ಬೇರೆ. ಅವರವರ ಅನುಭವ ಅವರವರ ಅಭಿವ್ಯಕ್ತಿಯನ್ನು ನಿರೀಕ್ಷಿಸುತ್ತದೆ. ಅಂತೆಯೆ ನಮ್ಮ ಹಿರಿಯರು ಶೈಲಿಯೆ ಮನುಷ್ಯ ಎಂದು ಕರೆದರು. ( Style is the man)

  ಅದೆಷ್ಟು ಮನಸ್ಸುಗಳು ನೇರ ಮಾತಿನಲ್ಲಿ ಹೇಳಲಾಗದ ಎಲ್ಲವನ್ನು ಕಾವ್ಯಕೋ, ಕುಂಚಕೋ, ಹಾಡಿಗೋ, ನರ್ತನಕೋ ಅಳವಡಿಸಿ ವ್ಯಕ್ತ ಮಾಡುತ್ತ ಬಂದಿವೆ. ಅದಕ್ಕೆ  ಕಲೆಗೆ ಇಷ್ಟು ಮಹತ್ವ  ಮನುಕುಲದ ಇತಿಹಾಸ ದಲ್ಲಿ ದೊರಕಿದ್ದು ಎಂದು ತೋರುತ್ತದೆ. ಮಹಿಳೆ ತನ್ನ ನೋವನ್ನು ಅಭವ್ಯಕ್ತಿಸಲು ಪ್ರಧಾನವಾಗಿ ಆಶ್ರಯಿಸಿದ್ದು ಕಾವ್ಯವನ್ನೇ.


ನೋಡಾಕ ಬಂದವರು ಹಾಡಂತ ಹೇಳ್ತಾರ
ಹಾಡೆಂದರೇನು ಹಾಡಲಿ /ಹಾಡಲ್ಲ
ಹಾಡಲ್ಲ ನನ್ನ ಒಡಲುರಿ

ಎಂದು ನಮ್ಮ ಜನಪದ ಮಹಿಳೆ ಸಾವಿರಾರು ವರುಷಗಳ ಹಿಂದೆ ತನ್ನ ಮನದ ತಲ್ಲಣವನ್ನು ಕವಿತೆ ಯಾಗಿಸಿದ್ದಳು. ಮಹಿಳೆಯ ಈ ಪ್ರತಿಭಟನಾತ್ಮಕ  ಕಾವ್ಯಾಭಿವ್ಯಕ್ತಿ ನಿರಂತರವಾಗಿ ನಡದು ಬಂದಿದೆ. ಕನ್ನಡದಲ್ಲಿಯಂತೂ ಅದಕ್ಕೆ ಸಾವಿರ ವರ್ಷಗಳ ಇತಿಹಾಸವೇ ಇದೆ. .’ನಾನು ಕೇವಲ ಹೆಣ್ಣಲ್ಲ’ ಎಂದು ಸಾರಿದ ವಚನಕಾರ್ತಿಯರಿಂದ ಹಿಡಿದು ‘ಹೆಣ್ಣಲ್ಲವೇ ಪೆತ್ತವಳು’ ಎಂದು ಪ್ರಶ್ನಿಸಿದ ಸಂಚಿಯ ಹೊನ್ನಮ್ಮನ  ಮೂಲಕ ಸ್ತ್ರೀ ಸಂವೇದನೆ ಹರಿದು ಬಂದು ‘ನಾವು ಹುಡುಗಿಯರೇ ಹೀಗೆ’ ಎಂದು ಧೈರ್ಯವಾಗಿಯೇ  ಪ್ರತಿಫಲಿತವಾಗಿದೆ.

ನಮಗೀಗ ತಂತ್ರಗಳ ತಂತ್ರದ
ಬೇರುಗಳು ಗೊತ್ತಗಿವೆ
ಅ ಬೇರುಗಳನ್ನು ನೀರಿನಲ್ಲಿ ಓಣಗಿಸುವ ವಿದ್ಯೆ ನಮ್ಮದಾಗಿದೆ

ಅವರಿಗೆ ಅವರನ್ನು ಉತ್ತರಿಸುವ  ಬಾಯಿ ಬುದ್ದಿಗಳಿವೆ (ಉತ್ತರೆ! ನಾವೀಗ)

ಎಂದು ಸ್ತ್ರೀ ಸಂವೇದನೆ ಹೊಸ ಮಜಲುಗಳನ್ನು ದಿಟ್ಟವಾಗಿಯೆ ಸಾರಿದ ಕವಿಯತ್ರಿ ಬಾಗಲಕೋಟೆಯ ವೀಣಾ ಕಲ್ಮಠ ಅವರು . ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿರುವ ಇವರು ಪ್ರಕಟಿಸಿದ ಮೊದಲ ಸಂಕಲನ ‘ಜೀವದೊಡತಿಯ ಗೈರು ಹಾಜರಿಯಲ್ಲಿ’ .ಈ ಸಂಕಲನ ‘ಬೆನಕ ಬುಕ್ಸ ಬ್ಯಾಂಕ್’ ಬೆಂಗಳೂರು ಇವರಿಂದ ೨೦೨೨ ರಲ್ಲಿ ಪ್ರಕಾಶಿತವಾಗಿದೆ.

      ಇಡೀ ಸಂಕಲನದ ತುಂಬ ಕಾಣಿಸುವ ಮಹತ್ವದ ಸಂವೇದನೆ ಅದು ಸ್ತಿçÃಯ ಒಳಮನದ ಕಾವು ಮತ್ತು ನೋವು .ಕವಯಿತ್ರಿಯ ಮಾತುಗಳಲ್ಲಿ ಹೇಳುವದಾದರೆ “ನನ್ನೊಳಗಿನ ಸ್ತ್ರೀ ನನಗೆ ಗೊತ್ತಿಲ್ಲದೆ ಹಲವು ಕಡೆ ಬೇರೆ ಬೇರೆ ಪರಿವೇಷ ತೊಟ್ಟು ಕಾಣಿಸಿಕೊಂಡಿದ್ದಾಳೆ. ಸಾಮಾಜಿಕ ವ್ಯವಸ್ಥೆಯ ಮಧ್ಯೆ ಎಲ್ಲ ಸಮಾನ ಅವಕಾಶಗಳನ್ನು ಪಡೆದಾಗಲೂ ನನ್ನ ಅಂತರಾಳದಲ್ಲಿ ಮೂಡಿದ ಪ್ರಶ್ನೆಗಳಿಗೆ ಪ್ರತಿಯಾಗಿ ಕವಿತೆ ಕಟ್ಟುವ ಕೆಲಸ ಮಾಡಿದ್ದೇನೆ” ಎನ್ನುತ್ತಾರೆ. ಅಂದರೆ ಸ್ತ್ರೀ ಇಂದು ಎಲ್ಲ ನೆಲೆಗಳಲ್ಲಿ ತನ್ನ ಅವಕಾಶಗಳನ್ನು ಬಾಚಿಕೊಂಡರೂ ಇನ್ನೂ ಅವಳಿಗೆ ದೊರೆಯಬೇಕಾದ ಅವಕಾಶ  ದೊರೆಯದೇ ಹಾಗೆಯೇ ಉಳಿದಿದೆ ಎನ್ನುವ ನೋವು ಸ್ಪಷ್ಟವಾಗಿಯೆ ಕವಿಯತ್ರಿಯ ಮನದಲ್ಲಿ ಉಳಿದಿದೆ. ಅದೇ ಕವಿತೆಗಳ ರೂಪ ಧರಿಸಿದೆ.  ‘ಕಲಿಯುಗದ ರಾಧೆ’, ‘ಕಲ್ಲಾಗದ ಅಹಲ್ಯೆ’, ‘ಜೀವದೊಡತಿಯ ಗೈರು ಹಾಜರಿಯಲ್ಲಿ’ , ‘ಉತ್ತರೇ ! ನಾವೀಗ’ .. ಹೀಗೆ ಈ ಸಂಕಲನದ ಬಹುತೇಕ ಕವಿತೆಗಳು ಸ್ತ್ರೀಯ ಮನದ ಭಾವಗಳನ್ನು, ಅವಳ ಹೊಸ ಪರಿವೇಷವನ್ನು ಬಿತ್ತರಿಸುವ ಕಾರ್ಯ ಮಾಡಿವೆ.

    ಇಲ್ಲಿರುವವಳು ಕಲಿಯುಗದ ರಾಧೆ. ದ್ವಾಪರದ ರಾಧೆಯಲ್ಲ, (ಮೊದಲ ಕವಿತೆಯೆ ಕಲಿಯುಗದ ರಾಧೆ) ಬಾರದ ಕೃಷ್ಣನಿಗಾಗಿ ಏಕೆ ಬಂದಿಲ್ಲವೆಂದು ಪರಿತಪಿಸುವ ಧೈರ್ಯವಂತೆ. ಎಂದೊ ಒಮ್ಮೆ ಬಂದು ಹೋದ ಕೃಷ್ಣ ಇಂದು ಕಾಣೆಯಾಗಿದ್ದಾನೆ. ಅವನು ಬಂದು ತನ್ನ ಬಾಳಿಗೆ ಬಣ್ಣ ತುಂಬಲಿ ಎಂದು ಅವಳ ಆಸೆ.

ಇಲ್ಲೋರ್ವ ರಾಧೆ ಕಾಯುತ್ತಿದ್ದಾಳೆ
ನಿನಗಾಗಿ..
ತನ್ನ ಬದುಕಿಗೆ ಬಣ್ಣ ತುಂಬುವನೆಂದು

ಕನಸುಗಳ ಕಸಿಗೆ ನೀರರೆಯುವನೆಂದು
ಬಾಳ ನೌಕೆ ಗೆ ನಾವಿಕನಾಗುವನೆಂದು  (ಕಲಿಯುಗ ದ ರಾಧೆ)

     ಹೀಗೆ ಇಂದಿನ ಕಾಲದ ಕೃಷ್ಣರ ಹುಸಿ ಬರವಸೆಗಳ, ಮಾತುಗಳ ನಂಬಿ ಅದೆಷ್ಟು ಜನ ರಾಧೇಯರು ಕಾಯುತ್ತಿದ್ದಾರೆ ಎಂಬುದೇ ಕವಿಯ ಮನದೊಳಗಿನ ಪ್ರಶ್ನೆ. ಮಾತು ಕೊಟ್ಟು ಮೋಸ ಮಾಡುವ, ಬಾರದೇ ರಾಧೆಗೆ ನಿರಾಶೆ ಮಾಡುವ ಕೃಷ್ಣರತ್ತ ಕವಿಯತ್ರಿಯ ಪ್ರಶ್ನೆ ಇದೆ. ಮಹತ್ವದ ಮಾತೆಂದರೆ ಕವಿಯತ್ರಿಗೆ ಪುರಾಣದ ಕ್ರಷ್ಣನ ಬಗ್ಗೆ ಯಾವುದೇ ಅತೃಪ್ತಿಯಿಲ್ಲ, ಇರುವದು ಆದುನಿಕ ಕಾಲದ ಕೃಷ್ಣರ ಬಗ್ಗೆ. ನಿಜವಾದ ಬೇಡಿಕೆ ಬರುವ ಕೃಷ್ಣ “ಮುಖವಾಡವಿರದ ಭಾವಗೆಡದ ನಿರ್ವಾಜ ಪ್ರೇಮವ ನೀಡಲಿ” ಎಂಬುದೇ ಆಗಿದೆ. ಈ ರಾಧೆಗೆ ಕೃಷ್ಣನಿಗಾಗಿ ಕಾಯುವದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಆಕೆ ಕಲಿಯುಗದ ರಾಧೆ. ಅವನಿಂದ  ಬಯಸುವದು “ತಂತ್ರದಿ ತಂತ್ರಜ್ಞಾನವ ತರುವನೆಂದು, ಅವಳರಿವ ಗೌರವಿಸುವನೆಂದು.. ನಿಷ್ಪೃಹ ಒಲವ ನೀಡುವನೆಂದು, ನಿರ್ಮಲ ಭಾವದ ಗೆಳೆಯನಾಗುವನೆಂದು” ಗಂಡು ಹೆಣ್ಣಿನ  ನಡುವೆ ಇಂದು ಇರುವದು ಕೇವಲ ದೈಹಿಕ ಬಂಧನವಲ್ಲ. ಅದನ್ನು ಮೀರಿದ ಸ್ನೇಹ, ಅವಳ ಅರಿವನ್ನು ಗೌರವಿಸಿ ಅವಳಿಗೆ ಕೊಡಬೇಕಾದ ಅವಕಾಶವನ್ನು ಕೊಡುವ, ಗೌರವಿಸುವ ಸಂಬಂಧ .ಕವಿತೆ ಕೃಷ್ಣ ರಾಧೆಯರ ಪ್ರಶ್ನೆಯಲ್ಲಿಗೇ ನಿಲ್ಲುವದಿಲ್ಲ. ಆಧುನಿಕ ಕಾಲದ ವೃತ್ತಿ ಬದುಕಿನ ಸನ್ನಿವೇಶಗಳಿಗೂ ಪ್ರವೇಶಿಸುತ್ತದೆ.  
 .
   ಅಂತೆಯೇ ಇಲ್ಲಿ ರಾಮಾಯಣದ ಕಥೆಯೂ ಭಿನ್ನಭಾವದಿಂದಲೇ ನೋಡಲ್ಪಡುತ್ತದೆ. ಕವಿಯತ್ರಿಯ ಪ್ರಕಾರ ಅಹಲ್ಯೆ ಕಲ್ಲಾಗಲೇ ಇಲ್ಲ. ಅವಳನ್ನು ಕಲ್ಲಾಗಿಸಲಾಯಿತು. ತುಂಬ ಸಶಕ್ತವಾದ ಮತ್ತು ಸೂಕ್ಷö್ಮ ವ್ಯಂಗ್ಯದ ನೆಲೆಯಲ್ಲಿ ವೀಣಾ ಅವರು ಹೆಣೆಯುವ ಕವಿತೆ ಅತ್ಯತ್ತಮ ಅಭಿವ್ಯಕ್ತಿಯಾಗುವದು ಇದೇ ಕಾರಣಕ್ಕೆ .

ಗೌತಮನಾದಿಯಾಗಿ ಅವರಾರಿಗೂ ಅರಿವಿಲ್ಲ
ತಾವು ಬದುಕುತ್ತಿರುವದು ಭ್ರಮೆಯಲೆಂದು
ಅವರಿಗೇನು ಗೊತ್ತು
ನೀನು ಕಲ್ಲಾಗಲಿಲ್ಲವೆಂದು..
ನಾವೂ ಕೂಡಾ..

ಕಡೆಯ ಸಾಲಿನಿಂದ(ನಾವೂ  ಕೂಡಾ..) ಕವಿತೆಗೊಂದು ತಿರುವು ಪ್ರಾಪ್ತವಾಗಿ ಬಿಡುತ್ತದೆ. ಅಹಲ್ಯೆಯ ಕಥೆ ವರ್ತಮಾನದ ಪ್ರಶ್ನೆಯೂ ಆಗಿ ಬಿಡುವದು “ ನಾವೂ ಕೂಡ ..” ಎಂಬ ಎರಡೇ ಪದಗಳು ಕವಿತೆಯ ಕೊನೆಯಲ್ಲಿರುವದರಿಂದ. ಅಂದರೆ ಸ್ಪಷ್ಟವೇ ಇದೆ. ಕವಿತೆ ಕೇವಲ ರಾಮಾಯಣದ ಅಹಲ್ಯೆಯ ಪ್ರಶ್ನೆಗೆ ನಿಂತಿಲ್ಲ ಎಂದು.  

   ‘ಉತ್ತರೆ  ನಾವೀಗ’ ಉತ್ತರಿ ಮಳೆಯ ಜನಪದ ಕಥೆಯನ್ನು  ಹಿನ್ನೆಲೆಯಾಗಿ ಇರಿಸಿಕೊಂಡು ಸ್ವಂತಿಕೆಗಾಗಿ ಜೀವ ಕೊಟ್ಟ ಅವಳ ಬದುಕನ್ನು ಹೇಳುತ್ತಲೇ ಅವಳ ಬಲಿದಾನದ ಹಿಂದಿರುವ ಪುರುಷಪ್ರಧಾನ ಕುಟಿಲತೆಯನ್ನು ವಿರೋಧಿಸುತ್ತದೆ. ಉತ್ತರೆಯಂಥವರಿಂದ ಈ ಕಾಲದ ಸ್ತ್ರೀ ಪಡೆಯುವ ಪ್ರೇರಣೆ ಕವಿತೆಯ ಕೊನೆಯಲ್ಲಿದೆ. ಉತ್ತರೆಗೆ ಕವಿಯತ್ರಿ ಹೇಳುತ್ತಾರೆ.
.
ಈಗ ನಮ್ಮ ಮಾತುಗಳು ಅವರ ಲೋಕದ ಅನುಕರಣೆಯಲ್ಲ
ನಮ್ಮ ಲೋಕದವು
ನಮಗಾವ ಕುರುಹುಗಳೂ ಬೇಡ
ನಮ್ಮ ಕೈ-ಬಾಯಿ- ಬುದ್ದಿ -ಬಲಗಳ
ಒಪ್ಪಿ ನಂಬಿದ್ದೇವೆ.
ನಾವಿಗ ಅವರ ಚರಿತ್ರೆಯಲಿ ಹೊಸ ಇತಿಹಾಸ

ಬಹಳ ಸ್ಪಷ್ಟವಾಗಿ ಪುರುಷಪ್ರಧಾನ ವ್ಯವಸ್ಥೆಯ  ಅನ್ಯಾಯಕ್ಕೆ ಸ್ತ್ರೀ ಕೊಡುವ ದಿಟ್ಟ ಉತ್ತರ ರೂಪವಾಗಿ ಈ ಸಾಲಯಗಳನ್ನು ಪರಿಭಾವಿಸಬೇಕಾಗಿದೆ. ‘ಪುರುಷರು ಬರೆದ ಇತಿಹಾಸದಲಿ ನಾವೀಗ ಹೊಸ ಚರಿತ್ರೆ’ ಎನ್ನುವ ಸಾಲುಗಳೆ ಸಾಕು, ಕವಿಯತ್ರಿಯ ಆಲೋಚನೆಯ ಪಥ ಗುರುತಿಸಲು. ‘ಅ-ಶೋಕ  ಸುಂದರಿ’ ಕವಿತೆಯನ್ನೂ ಇದೇ ನೆಲಯಲ್ಲಿ ನೋಡಬಹುದು. ಇತಿಹಾಸದ ಸೀತೆ ಊರ್ಮಿಳೆ ಅಹಲ್ಯೆ, ಶೂರ್ಪನಖಿ ಎಲ್ಲರಿಂದಲೂ ತನ್ನ ಬದುಕನ್ನು ಇಂದಿನ ಕಾಲದ ಸ್ತ್ರೀ ರೂಪಿಸಿಕೊಳ್ಳಬೇಕಿದೆ ಎನ್ನುವ ಸೂಚನೆಯನ್ನು ಅವರ ‘ಕನಸರಂಗದ ಮೇಲೆ’ ದಂತಹ ಕವಿತೆಗಳು ಸೂಚಿಸುತ್ತವೆ.

      ಸಂಕಲನದ ಮಹತ್ವದ ಕವಿತೆಗಳಲ್ಲಿ ‘ಅಂಗೈ ರೇಖೆಗಳು’ ಎನ್ನುವದು ಒಂದು .ಅಂಗೈ ಗೆರೆಗಳನ್ನು ಭವಿಷ್ಯ ಸೂಚಿಸುವ ಸೂಚಕಗಳು ಎನ್ನುವ ಪಾರಂಪರಿಕ ಅರ್ಥದಲ್ಲಿ ಮಾತ್ರ ನೋಡದೇ ಸ್ತ್ರೀವಾದಿ ನೆಲೆಯಲ್ಲಿಯೆ ನೋಡುವ ಕವಯಿತ್ರಿ ಆ ಗೆರೆಗಳು ಹೆಣ್ಣಿಗೆೆ ಹೇಗೆ  ಭಯಾನಕ ಅನುಭವ ನೀಡುತ್ತವೆ ಎನ್ನುವದನ್ನು

ಬರಿ ಗೆರೆಗಳಲ್ಲಿ ಇವು
ಅವಳ ಅಂಗೈಯಲ್ಲಿಯೆ ಇದ್ದು
ಸದಾ ಅನುಮಾನದ ಹುತ್ತzಲ್ಲಿ
ವಿಷ ಉಣಿಸುವ ನಯವಂಚಕರು

ಎಂದು ವ್ಯಾಖ್ಯಾನಿಸುತ್ತಾರೆ. ಅಂದರೆ ಅಂಗೈ ಗೆರೆಗಳನ್ನು ನೋಡಿಯೆ ಅವಳ ಭವಿಷ್ಯ ನಿರ್ಧರಿಸುವ ಲೋಕವನ್ನು ತರಾಟೆಗೆ ತಗೆದುಕೊಳ್ಳುತ್ತಾರೆ. ಬದುಕಿನ ಪ್ರತಿಯೊಂದು ಅಂಗುಲದಲ್ಲಿಯೂ ಪುರುಷನ ನೆರಳಾಗದೇ ತಾನು ತಾನಾಗುವ ತಹತಹವನ್ನು ಅವರ ಕವಿತೆಗಳು ಅಭಿವ್ಯಕ್ತಿಸುತ್ತವೆ.  ‘ಅವನು-ನಾನು’ ಕವಿತೆಯ ಈ ಸಾಲು ನೋಡಿ. ದಾರಿ ಬೇರೆಯೇ ಆದ ಜೊತೆಯೊಂದರ ಅನುಭವದಂತೆ ಕಾಣಿಸುವ ಸಾಲುಗಳು ಕೊನೆಯಲ್ಲಿ ಅವರ ದಾರಿ ಬೇರೆಯಾಗಿ

ಅವನು
ತನ್ನಂತೆ ತಾನಾದರೆ ನಾನು ಏನು?
ನಾನು
ನನ್ನಂತೆ ನಾನಾಗುವಾಸೆ ಮೂಡಿತ್ತು (ಅವನು-ನಾನು)

   ಹೀಗೆ ವೀಣಾ ಕಲ್ಮಠರ ಕವಿತೆಗಳು ಹೆಣ್ಣು ಕಷ್ಟ ಪಟ್ಟು ರೂಪಿಸಕೊಂಡ ಸ್ವತಂತ್ರ ದಾರಿಯೊಂದರ ಅಭಿವ್ಯಕ್ತಿಯಾಗಿ ಕಾಣಿಸುತ್ತವೆ. ಹೆಣ್ಣು ಏನೆಲ್ಲ ತ್ಯಾಗ ಮಡಿದರೂ ಮನೆಯ ಎಲ್ಲರಿಗೂ ಸಮಜಕ್ಕೂ ಕೊನೆಗೂ ‘ಅರ್ಥವಾಗದ ಕವಿತೆಯಾಗಿ’ ಉಳಿಯುವ ದು:ಖವನ್ನು ಅವರ ಕವಿತೆ ಅನುಭವಿಸಿದೆ.

     ಇತಿಹಾಸದ ಸ್ಮಾರಕಗಳನ್ನು ಹೊಸ ರೀತಿಯಲ್ಲಿ ನೋಡುವ ಕವಿಯತ್ರಿಯ ವಿಶೇಷ ಸಂವೇದನೆ ಗೆ ಸಾಕ್ಷಿ ‘ಬಾರಾ.. ಕಮಾನು’ ದಂತಹ ಪದ್ಯಗಳು. ಅದು ಸೋತ ಮನಸ್ಸಿಗೆ ಮತ್ತೆ ಪುಟಿದೇಳಲು ಪ್ರೇರಣ ನೇಡುವ ಸ್ಮಾರಕವಾಗಿ ಕಾಣಿಸುತ್ತದೆ.

ಅಪ್ಪನಾ..ಮೀರಲು ಹೊರಟ
ಮಗನ ಹಾದಿಯಲಿ
ಸೋಲದೇ ಸಾದಿಸಿದ ಅದ್ಭುತವು ನೀನು
ಲೋಕಕ್ಕೆ  ನೀ ಬರಿದಾದ ಬಾರ ಕಮಾನು

ನಿನ್ನೆಡೆಯಲಿ ಕೂರಲು ಅರಘಲಿಗೆ
ತೋರುವೆ ಎನಗೆ ಮಗುವ ಓಲೈಸುವ ತಾಯಿಯಂತೆ
ಸೋತ ಬದುಕಲಿ
ಗೆಲ್ಲುವ ಛಲ ತುಂಬಿ ತಂದೆಯಂತೆ. (ಬಾರಾ..ಕಮಾನು)

     ಇತಿಹಾಸವನ್ನು ನಾವು ನೋಡಬೇಕಾದ ಹೊಸ ದೃಷ್ಟಿಕೋನವನ್ನೆ ಕವಿತೆ ನಮಗೆ ಒದಗಿಸುತ್ತದೆ. ಕೇವಲ ಒಂದು ಸ್ಮಾರಕ ಇಂದಿನ ಸಂವೇದನಶೀಲ ಮನಸುಗಳಿಗೆ ತುಂಬುವ ಹೊಸತನದ ಪ್ರತೀಕ ಈ ಕವಿತೆ.

    ಸಂಕಲನದಲ್ಲಿ ಭಿನ್ನಭಾವದ ಕವಿತೆಗಳಿಲ್ಲವೆಂದಲ್ಲ ದಾಂಪತ್ಯದ ಹೊಸತನ, ಸಂಭ್ರಮ, ಮಗು ಬದುಕಿಗೆ ಬಂದಾಗ ಆಗುವ ಸಂತಸ, ಅಪ್ಪನ ಚಿತ್ರ ಅವ್ವನ ತ್ಯಾಗ, ಯುಗಾದಿ ದೀವಳಿಗೆಗಳ ಸಂಭ್ರಮ ಇವೆಲ್ಲವೂ ಇಲ್ಲಿ  ಬೇರೆ ಬೇರೆ ಕವಿತೆಗಳಾಗಿರುವದನ್ನು ಗಮನಿಸಬಹುದು. ಮಗಳಾಗಿ, ಹೆಂಡತಿಯಾಗಿ, ಅವ್ವನಾಗಿ ಅನುಭವಿಸಿದ ಸಂತೋಷ  ಈ ಜೀವ ಪ್ರೀತಿ ಕೂಡ ಅಲಲ್ಲಿ  ಜಿನುಗಿದೆ.

      ಕನ್ನಡದಲ್ಲಿ ಬರುತ್ತಿರುವ ಸಂಕಲನಗಳಿಗೆನೂ ಕೊರತೆಯಿಲ್ಲ. ಅದರೆ ಅದದೇ ಶೈಲಿಯ ಅದದೇ ನಿರೂಪಣೆಯ ಹೊಸತನವಿಲ್ಲದ ಕವಿತೆಗಳನ್ನು ಓದಿ ಓದಿ ಕವನ ಸಂಕಲನದ ಪುಟ ತೆರೆಯಲೂ ಅನುಮಾನಿಸಬೇಕಾದ ಇಂದಿನ ಸಂದರ್ಭದಲ್ಲಿ ಹೊಸ ಅಭಿವ್ಯಕ್ತಿ , ರೂಪಕಗಳನ್ನು ನವೀನ ರೀತಿಯಿಂದ ದುಡಿಸಿಕೊಳ್ಳುವ ಸ್ವಂತಿಕೆ, ನಿರೂಪಣೆಯ ಹೊಸತನದಿಂದಾಗಿ  ಮೊದಲ ಸಂಕಲನದಲ್ಲಿಯೆ ಗಮನ ಸೆಳೆದಿರುವ ವೀಣಾರವರನ್ನು ಅಭಿನಂದಿಸಲೇಬೇಕು. ಮುನ್ನುಡಿ ಬರೆದ ಕೆ.ಗಣೇಶ ಕೋಡೂರು ಅವರು ಹೇಳುವ ಈ ಸಾಲುಗಳು ಎಲ್ಲ ಕಾಲಕ್ಕೂ ಮಾನ್ಯವಾಗುವಂಥವು. “ಹೇಳಬೇಕಿರುವದನ್ನು ಹೇಗೆ ಹೇಳಬೇಕು ಎನ್ನುವದನ್ನು ತಿಳಿದವರು ಒಳ್ಳೆಯ ಭಾಷಣಕಾರರಾಗುತ್ತಾರೆ. ಅದೇರೀತಿ ಬರೆಯಬೇಕಿರುವದನ್ನು ಹೇಗೆ ತಲುಪಿಸಬೆಕು ಎನ್ನುವದನ್ನು ಅರಿತವರು ಒಳ್ಳೆಯ ಬಹಗಾರರಾಗುತ್ತಾರೆ” ಎಲ್ಲ ಕಾಲದ ಬರಹಗಾರರಿಗೂ ಮಾರ್ಗದರ್ಶಕವಾಗುವ ಸಾಲುಗಳನ್ನು ಬರೆದ ಅವರು ಮುಂದುವರಿದು ವೀಣಾ ಕಲ್ಮಠ ಅವರ ಕಾವ್ಯದ ಬಗ್ಗೆ ಹೇಳುತ್ತ “ವೀಣಾ ಕಲ್ಮಠ ಅವರಿಗೆ ಕವಿತೆ ಕಟ್ಟುವದು ಪದಗಳ ಪೋಣಿಸುವಿಕೆ ಅಲ್ಲ .ಅದು ಬದುಕಿನ ಭಾವತಂತು ಅಷ್ಟೇ. ಆ ತಂತುವನ್ನು ಹೇಗೆ ಮೀಟಬೆಕು, ಎಷ್ಟು ಮೀಟಬೆಕು ಮತ್ತು ಎಲ್ಲಿ ಮೀಟಬೆಕು ಎನ್ನುವದು ಅವರಿಗೆ ಚೆನ್ನಾಗಿ ಗೊತ್ತಿದೆ ಆದ್ದರಿಂದಲೇ ಈ ಸಂಕಲನದ ಪ್ರತಿಯೊಂದು ಕವಿತೆಗಳು ಸರಳವಾಗಿ ಕಾಣಿಸಿದರೂ ಅದರೊಳಗಿನ ಅರ್ಥ ಮತ್ತು ಭಾವನೆಗಳು ಅಷ್ಟು ಸರಳವಾಗಿ ಕಾಣಿಸುವದಿಲ್ಲ .ಈ ಕಾರಣದಿಂದಲೇ ‘ಜೀವದೊಡತಿಯ ಗೈರು ಹಾಜರಿಯಲ್ಲಿ’ ಸಂಕಲನ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿತವಾದ ಒಂದು ಅಪರೂಪದ ಕವನ ಸಂಕಲನ ಎಂದು ನಿಸ್ಸಂಶಯವಾಗಿ ಹೇಳಬಹುದು.” ಎನ್ನುವ ಸಾಲುಗಳು ಕವಿತೆಗೆ ನಿಜವಾದ ನ್ಯಾಯ ಒದಗಿಸಿವೆ. ಮತ್ತು ನಾವೂ ಹೇಳಬೇಕಾಗಿರುವ ಮಾತುಗಳನ್ನು ಒಳಗೊಂಡಿವೆ.

    ಇಲ್ಲಿನ ಬಹುತೆಕ ಕವಿತೆಗಳ ಓದು ನಮ್ಮನ್ನು ಇವು ‘ಅವಳ ಕವಿತೆಗಳು’ ಎಂದು ವಿಶ್ಲೇಷಿಸಲು ಪ್ರೇರಣೆ ನೀಡುತ್ತದೆ. ಇತಿಹಾಸದಲ್ಲಿ ನೋವುಂಡ, ಪರಂಪರೆಯಲ್ಲಿ ಶೋಷಣೆ ಅನುಭವಿಸಿದ, ಅದರೆ ಆಧುನಿಕ ಕಾಲಕ್ಕೆ ಸ್ವಂತ ವಿಚಾರಗಳ ಮೇಲೆ , ಸ್ವಂತ ಕಾಲ ಮೇಲೆ ನಿಂತ ಹೆಣ್ಣೊಬ್ಬಳ ಸ್ವತಂತ್ರ ಮನೋವೃತ್ತಿಯ ಪ್ರತೀಕವಾಗಿ ಈ ಕವಿತೆಗಳು ಒಟ್ಟಂದದಲ್ಲಿ ಕಾಣಿಸುತ್ತವೆ.

     ಏನು ಮಾಡುವದು? ಇಂದು ನಮ್ಮ ನಡುವೆ ನಿಜವಾದ ಕವಿತೆ ಯಾವುದು? ಟೊಳ್ಳು ಕವಿತೆ ಯಾವುದು? ಎಂದು ಬೆಲೆಗಟ್ಟಬೇಕಾದ ಮನಸ್ಸುಗಳೆ ಕಡಿಮೆಯಾಗುತ್ತಿವೆ. ವಿಮರ್ಶೆ ಕೂಡ ಪಕ್ಷಗಳ ವಕ್ತಾರಿಕೆಯಗುತ್ತಿರುವ ಕೆಟ್ಟ ಸಂದರ್ಭವನ್ನು ಎದುರಿಸಿಯೇ ಇಂಥ ಕವಿತಗಳಿಗೆ ಗೌರವ ಸಲ್ಲಬೇಕಿದೆ. ಉತ್ತಮ ಕವಿತೆಗಳನ್ನು ಓದಿಸಿದ ವೀಣಾ ಕಲ್ಮಠ ಅವರನ್ನು ಅಭಿನಂದಿಸುತ್ತ ಅವರ ಈ ಕಾವ್ಯದ ಸ್ರೋತ ಕ್ರಷ್ಣೆಯಾಗಿ ಹರಿಯಲಿ ಎಂದು ಆಶಿಸುತ್ತೇನೆ. ಕೃಷ್ಣೆಯಾಗುವದು ಅವರ ಕನಸೂ ಕೂಡಾ. ಅವರ ನಿರೀಕ್ಷೆಯಂತೆಯೆ
ಹರಿವ ಕೃಷ್ಣೆ ನೋಡಿದಾಗಲೆಲ್ಲ
ನನ್ನಂತರಾಳದ ಬಯಕೆಯೂ
ನದಿಯಾಗಿ ದುಮ್ಮಿಕ್ಕುತ್ತದೆ

ಎನ್ನುವ ಸಾಲುಗಳು ವೀಣಾ ಕಲ್ಮಠ ಅವರ ಅಭೀಪ್ಸೆಗೆ ಸಾಕ್ಷಿಯಾಗಿವೆ. ಇದು ಓದುಗರ ಅಭೀಪ್ಸೆಯೂ ಆಗಿದೆ. ಇಂಥದೊಂದು ಕವನ ಸಂಕಲನ ಪ್ರಕಟಿಸಿದ ಬೆಂಗಳೂರಿನ ಬೆನಕ ಬ್ಯಾಂಕ್ ಪ್ರಕಾಶನಕ್ಕೂ ಅನಂತ ವಂದನೆಗಳು.


ಡಾ.ವೈ.ಎಂ.ಯಾಕೊಳ್ಳಿ

ಸಮಕಾಲಿನ ಸಂದರ್ಭದ ಮಹತ್ವದ ಕವಿ,ವಿಮರ್ಶಕರಾಗಿರುವ ಇವರು ಕಾವ್ಯ,ವಿಮರ್ಶೆ,ಸಂಶೋಧನೆ,ಸಂಪಾದನೆ ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ೪೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಸದ್ಯಕ್ಜೆ ಬೆಳಗಾವಿ ಜಿಲ್ಲೆಯ ಸವದತದತಿ ತಾಲೂಕಿನ ಯಕ್ಕುಂಡಿ ಸರಕಾರಿ ಪದವಿ‌ಪೂರ್ವ ಕಾಲೆಜಿನಲ್ಲಿ ಪ್ರಾಚಾರ್ಯರರಾಗಿದ್ದಾರೆ.೧೯೯೨ ರಲ್ಲಿ ಮೊದಲ ಸಂಕಲನ ನಿಟ್ಟುಸಿರು ಬಿಡುತ್ತಿದೆ ಕವಿತೆ ಕವನ ಸಂಕಲನ ಪ್ರಕಟಿಸಿದ ಇವರು ಏಳು ಕವನ ಸಂಕಲನ ಒಂದು ಕಥಾ ಸಂಕಲನ ಹತ್ತಕ್ಕು ಹೆಚ್ಚು ವಿಮರ್ಶಾಕೃತಿಗಳು ,ಪ್ರಾಚೀನ ಕನ್ನಡ ಸಂಕಲನ ಕಾವ್ಯಗಳು ಸಂಶೋಧನ ಮಹಾ ಪ್ರ ಬಂಧಮೊದಲಾದ ಕೃತಿಗಳನ್ನು ಹೊರತಂದಿದ್ದಾರೆ.
ಸಂಚಯ,ಸಂಕ್ರಮಣ ಕಾವ್ಯ ಪ್ರಶಸ್ತಿ,ಡಾ ಹಿರೆಮಲ್ಲೂರು ಈಶ್ವರನ್ ಪುರಸ್ಕಾರ,ಕರ್ನಾಟಕ ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿ,ಇನ್ನು ಅನೇಕ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.ಈಗಲೂ ನಾಡಿನ ಹಲವು ಪತ್ರಿಕೆ,ಸಾಮಾಜಿಕ ಜಾಕತಾಣಗಳಲ್ಲಿ ನಿರಂತರ ಬರವಣಿಗೆಯಲ್ಲಿ ತೊಡಗಿದ್ದಾರೆ.

                                         

Leave a Reply

Back To Top