ಕಾವ್ಯ ಸಂಗಾತಿ
ವಾಣಿ ಭಂಡಾರಿ ಕವಿತೆ
“ಮುಖವಾಡ”
ಎಲ್ಲ ನೋಯಿಸಿದವರೇ
ಆಗಲೂ ಈಗಲೂ
ಈಗ ಅದೇ ಗಜಡು ಕೈಯಲ್ಲಿ
ಕಣ್ಣೀರು ಒರೆಸಲು
ನಾ ಮುಂದು ತಾ ಮುಂದೆ
ಎಂಬಂತೆ ಮತ್ತೆದೆ ಸೋಗು,,
ಅಲ್ಲೂ ಅವಶ್ಯಕತೆಗಳ ಅಂಬಾರಿ.
ಖಾಲಿ ಕಣಜ ಹೊತ್ತೆ ಬರುವುದು
ಬಂದ ಕೈಗೆ ಮತ್ತೆ ಸುಂಕ ತೆಗೆದು
ಕೊಂಡೆ ಹೊರಡುವ ಯೋಜನೆ.
ಕಣ್ಣೀರು ಒರೆಸುವ ನೆಪವಷ್ಟೆ
ಉತ್ಸವ ಮೂರ್ತಿ ಮಾಡಿ
ಮೆರೆಸುವ ಹುನ್ನಾರ.
ಮತ್ತೆ ಜಗಮಗಿಸುವ
ದೀಪದ ಬೆಳಕಿನಲಿ
ಕತ್ತಲೆಯ ಕಳ್ಳಾಟಕ್ಕೊಂದಿಷ್ಟು
ಪ್ರೇರಣೆ ದಕ್ಕಿತೆಂಬ
ಮನದ ಹಾಲಾಹಲ.
ಮೆರವಣಿಗೆಯ ಸಡಗರ
ಮುಗಿದ ಮೇಲೆ ನೀರಿನೊಳಗೆ
ಮುಳುಗಿಸುವುದು ಇದ್ದೆ ಇದೆಯಲ್ಲ
ಅನಾದಿಯಿಂದ.
ಅದೆ ಮುಖವಾಡಗಳು
ಎಷ್ಟೆಂದು ಕಳಚುವುದು
ಬಣ್ಣ ಬಳಿಯುತ್ತಲೇ ಇವೆ
ನಿನ್ನೆ ನರಿ ಇಂದು ಮೊಸಳೆ
ಹೀಗೆ ನಾನಾ ತರದ ಹಗಲುವೇಷಗಳು
ಕರಡಿ,ಸಿಂಹ,ಹೆಬ್ಬಾವು
ಹುಲಿ ಇತ್ಯಾದಿ.
ಇಷ್ಟೆ ಈ ಮುಖವಾಡಗಳ ಎಂದೂ
ಮುಗಿಯದ ಆಟ!
ವಾಣಿ ಭಂಡಾರಿ
Its very true….. through out history we have witnessed it