ಪುಸ್ತಕ ಸಂಗಾತಿ
ಗೊರೂರು ಅನಂತರಾಜು
ʼಶ್ರೀವಿಜಯಾವರ ಮಕ್ಕಳ ಕವಿತೆಗಳ
“ಗುಬ್ಬಿ ಗೂಡು”
ಸಂಕಲನದ ಅವಲೋಕನ


ಹಾಸನದ ಕವಯಿತ್ರಿ ಶ್ರೀವಿಜಯ ಅವರ ಗುಬ್ಬಿಗೂಡು ಮಕ್ಕಳ ಕವನ ಸಂಕಲನ. 57 ಕವಿತೆಗಳಿವೆ. ವೃತ್ತಿಯಲ್ಲಿ ಶಿಕ್ಷಕಿಯಾಗಿ ಈಗ ನಿವೃತ್ತರಾಗಿರುವ ಸಹಜವಾಗಿಯೇ ಆಗ ಮಕ್ಕಳ ಒಡನಾಟದಲ್ಲಿದ್ದು ಪಾಠ ಮಾಡುವಾಗಿನ ಶಾಲಾ ಪಠ್ಯಗಳ ಪದ್ಯಗಳು ಇವರ ನೆನಪಿನಾಳದಲ್ಲಿ ಪ್ರಭಾವ ಬೀರಿ ಆ ದಿಶೆಯಲ್ಲಿ, ಕೆಲವು ಶಿಶುಗೀತೆಗಳು ರಚನೆಗೊಂಡಿವೆ.
ಹಗಲಲ್ಲಿ ಸೂರ್ಯನ ಇರುಳಲಿ ಚಂದ್ರನ ಇಟ್ಟವನಾರಮ್ಮ
ಕಪ್ಪನೆ ಮುಗಿಲಲಿ ಹನಿ ಹನಿ ಮಳೆಯೂ ಇಟ್ಟವನಾರಮ್ಮ
ತಾಯಿ ಮಗುವಿನ ಸಂಭಾಷಣೆ ಮಗುವಿನ ಮುಗ್ದ ಪ್ರಶ್ನೆಗಳಿಗೆ ತಾಯಿಯ ಜಾಣ್ಮಿಯ ಉತ್ತರ ಸರಳ ಸಾಲುಗಳಲ್ಲಿ ರಚಿಸುವುದು ಮೇಲ್ನೊಟಕ್ಕೆ ಸುಲಭವೆಂದುಕೊಂಡರೂ
ಪ್ರಾಸಬದ್ದತೆಯಲ್ಲಿನ ರಚನೆ ಅಷ್ಟೇ ತ್ರಾಸವೂ ಹೌದು. ಶಿಶು ಕಾವ್ಯ ರಚನೆಗೆ ಪದಕೌಶಲ್ಯವೂ ಬೇಕು. ಮಗು ಕೇಳುವ
ಜಗದ ಕೌತುಕದ ಪ್ರಶ್ನೆಗೆ ತಾಯಿ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾಳೆ.
ಹೂವಿಂದ ಹೂವಿಗೆ ಹಾರುವ
ಚಿಟ್ಟೆಗೆ ಬಣ್ಣ ಬಳಿದವನಾರಮ್ಮ
ತಾಯಿಯ ಹೃದಯದಿ ಮಮತೆ
ಪ್ರೀತಿಯ ಇಟ್ಟವನಾರಮ್ಮ
ರಾತ್ರಿ ಆಕಾಶ ತೋರಿಸಿ ಮನೆಯ ಮಹಡಿಯಲ್ಲಿ ತುತ್ತು ತಿನಿಸುತ್ತಿರುವ ತಾಯಿ ಮಗುವಿನ ಪ್ರಶ್ನೆಗಳ ಸರಮಾಲೆಗೆ ತತ್ತರಿಸಿ ಉತ್ತರದ ಹುಡುಕಾಟದಲ್ಲಿ ಆಕಾಶ ನೋಡಿದ್ದಾಳೆ ಪಾಪ. ಇನ್ನೂ ನಮ್ಮ ಮನೆಯಲ್ಲೊಂದು ಪುಟ್ಟ ಪಾಪವಿರುವುದು ಎಂಬ ಶಿಶು ಕಾವ್ಯ ನೆನಪಿಸುತ್ತದೆ ಈ ಪದ್ಯದ ಸಾಲು
ನಮ್ಮ ಮನೆಗೆ ಒಂದು ಪುಟ್ಟ ಪಾಪು ಬಂದಿತು.
ಎತ್ತಿಕೊಳ್ಳಲು ಹೋದರೆ ಅಮ್ಮ ಬಂದು ತಡೆದಳು
ಪ್ರೀತಿಯಿಂದ ಪಾಪು ಅಪ್ಪಿ
ಮುತ್ತು ಕೊಟ್ಟಳು
ಇನ್ನೂ ನೀನ್ಯಾರಿಗಾದೆಯೋ ಎಲೆ ಮಾನವ.. ಎಂಬ ಗೋವಿನ ಹಾಡಿನ ಮಾದರಿಯ ಈ ಪದ್ಯದಲ್ಲಿ ಪರಿಸರ ಕಾಳಜಿಯಿದೆ.
ಮರ ನಾನು ಹೆಮ್ಮರ
ನಾನೆಂದೂ ಅಮರ
ನೀನಾರಿಗಾದೆಯೋ ಪಾಮರ..
ಈಗ ಬೇಸಿಗೆ ರಜೆ ಮುಗಿದು ಮಕ್ಕಳು ಶಾಲೆಗೆ ಹೊರಡಬೇಕಿದೆ. ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಮೇಡಂ ಬನ್ನಿ ಮಕ್ಕಳೇ ಶಾಲೆಗೆ
ಎಂದು ಕಿರು ಪದ್ಯದಲ್ಲಿ ಕರೆ ನೀಡುತ್ತಾರೆ
ರಜೆಯು ಮುಗಿಯಿತು
ಶಾಲೆ ತೆರೆಯಿತು
ಬನ್ನಿ ಮಕ್ಕಳೆ ಶಾಲೆಗೆ
ಶಾಲೆ ನಮ್ಮ ದೇಗುಲ
ಗುರುಗಳಮ್ಮ ದೇವರು..
ನಾವು ಬಾಲ್ಯದಲ್ಲಿ ಕಂಡ ನಮ್ಮ ಹಂಚಿನ ಮನೆಯ ಸೂರಿನಲ್ಲಿ ಗೂಡು ಕಟ್ಟುತ್ತಿದ್ದ ಗುಬ್ಬಚ್ಚಿ ಗೂಡನ್ನು ಇಂದು ಕಾಣುವುದು ಅಪರೂಪ.
ನಮ್ಮ ಮನೆಯ ಸೂರಿನಲ್ಲಿ
ಗುಬ್ಬಿ ಗೂಡು ಕಟ್ಟಿತು
ಪುಟ್ಟ ಪುಟ್ಟ ಮರಿಗಳೊಡನೆ
ಅಲ್ಲಿ ವಾಸ ಮಾಡಿತು
ಗಾಳಕ್ಕೆ ಸಿಕ್ಕ ಮೀನೊಂದು ಭೇಟೆಗಾರನಲ್ಲಿ ತನ್ನ ಪ್ರಾಣ ಭಿಕ್ಷೆ ಬೇಡುವುದು ಮರುಕ ಹುಟ್ಟಿಸುತ್ತದೆ.
ಒಂದು ದಿನ ಸಂಜೆ ನಾನು
ಗಾಳ ಹಾಕಿ ಹಿಡಿದೆ ಮೀನು
ದೀನವಾಗಿ ನನ್ನ ನೋಡಿ
ಪ್ರಾಣ ಭಿಕ್ಷೆ ಬೇಡಿತು
ಇನ್ನೂ ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋಗುವ ಮಜವೇ ಬೇರೆ. ಆ ಅಜ್ಜ ಸುಡುಗಾಡು ಹಳ್ಳಿಯಲ್ಲೇ ಇರಲಿ ಅಲ್ಲಿಗೆ ರಜೆಯಲ್ಲಿ ಓಡುವದೇ ಮಜ. ಹಳ್ಳಿಯ ಗಿಡ ಮರ, ಕೆರೆ ಬಯಲು ಅಜ್ಜನ ತೋಟದ ಮನೆ ಮದ್ಯೆ ಸ್ವಚ್ಛಂದ ವಿಹಾರ ಯಾವ ಮಗುವಿಗೆತಾನೇ ಖುಷಿ ನೀಡುವುದಿಲ್ಲ.
ತೋಟದ ನಡುವೆ ಕಟ್ಟಿದ ಮನೆಯಿದು
ಸುತ್ತಲೂ ಮೇಯುವ ಹಸುಕರು
ಕೇಳುವರಾರು ನಮಗಿಲ್ಲಿ
——————-
ಗೊರೂರು ಅನಂತರಾಜು
