ಪುಸ್ತಕ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಬಸಮ್ಮ ಸಜ್ಜನ ಸಂಪಾದಕತ್ವದ
“ಗಜಲ್ ನಾದಲೋಕ
( ನೂರು ಗಜಲ್ ಕವಿಗಳ ಸಂಕಲನ)”


ಪುಸ್ತಕ ಪರಿಚಯ
*ಗಜಲ್ ನಾದಲೋಕ* ( ನೂರು ಗಜಲ್ ಕವಿಗಳ ಸಂಕಲನ)
ಸಂಪಾದಕರು..ಬಸಮ್ಮ ಸಜ್ಜನ
ಪ್ರಕಟಿತ ವರ್ಷ …. ೨೦೨೪
——–
ನೂರು ಗಜಲ್ ಕುಸುಮಗಳ ಕಂಪು ಆಸ್ವಾದಿಸೋಣ
ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಪ್ರತಿಯೊಂದು ಪ್ರಾಂತವು ತನ್ನದೇ ಆದ ಆಡಳಿತ ಸಂಸ್ಕೃತಿ ,ಪರಂಪರೆ ಬೆಳೆಸಿಕೊಂಡು ಬಂದದ್ದು ತಿಳಿಯುತ್ತದೆ .ಆ ಸಂಸ್ಕೃತಿ ಪರಂಪರೆ ಜನಸಾಮಾನ್ಯರ ಹೃದಯದಲ್ಲಿ ಉಳಿದಿರುತ್ತದೆ.ಈ ನಿಟ್ಟಿನಲ್ಲಿ ನಾವು ನೋಡಿದರೆ ಆಯಾ ಪ್ರಾಂತವು ತಮ್ಮ ಸಾಹಿತ್ಯದ ಪರಂಪರೆ ಉಳಿಸಿ ಕೊಂಡು ಬೆಳೆಸಿಕೊಂಡು ಬಂದಿದ್ದು ಕಾಣುತ್ತೇವೆ ಅರಬ್ ಮತ್ತು ಇರಾನ್ ದೇಶದಿಂದ ಭಾರತಕ್ಕೆ ವಲಸೆ ಬಂದ ಗಜಲ್ ಸಾಹಿತ್ಯವು ಫಾಸಿ೯ಯ ಮೂಲವಾದರೂ ಭಾರತಕ್ಕೆ ಬಂದ ಈ ಸಾಹಿತ್ಯವು ದಖನಿ ಉದು೯ವಿನಲ್ಲಿ ಬೆಳೆಯಿತು.ಮುಸ್ಲೀಮ್ ಅರಸರ ಆಸ್ಥಾನದಲ್ಲಿ ಸ್ಥಾನಪಡೆದು ಅರಸರ ಮನ ಸೂರೆಕೊಂಡು ಬೆಳೆಯಿತು. ಕೆಲವು ಮುಸ್ಲೀಮ್ ಅರಸರು ಸ್ವತಃ ಗಜಲ್ ಗಳನ್ನು ರಚಿಸಿ ಆಸ್ಥಾನದಲ್ಲಿ ಪ್ರಸ್ತುತ ಪಡಿಸುತ್ತಿದ್ದರು. ಭಾರತಕ್ಕೆ ಬಂದ ಗಜಲ್ ಸಾಹಿತ್ಯಇಲ್ಲಿಯ ನೆಲ ಜಲ ಸಂಸ್ಕೃತಿಯನ್ನು ತನ್ನದಾಗಿಸಿಕೊಂಡು ದೇಶದ ತುಂಬಾ ಹರಡಿತು.ಮೊದಮೊದಲು ಇದು ಆಸ್ಥಾನದ ಸಾಹಿತ್ಯವಾಗಿ ಉದು೯ ಕಾವ್ಯ ಸಾಹಿತ್ಯದ ರಾಣಿಯಾಗಿ ಮೆರೆಯಿತು.,ಮುಂದೆ ಮಿಜಾ೯ಗಾಲಿಬ್ ಅವರು ಈ ಸಾಹಿತ್ಯವನ್ನು ಜನ ಸಾಮಾನ್ಯರ ಕಡೆ ತೆಗೆದುಕೊಂಡು ಬಂದರು.ಅಂದಿನಿಂದ ಜನ ಸಾಮಾನ್ಯರ ಹೃದಯವನ್ನು ಆಳುತ್ತಾ ಬಂದಿದೆ. ಗಜಲ್ ಸಾಹಿತ್ಯ ಮುಸ್ಲೀಮ್ ರಾಜರ ಆಳಿಕೆಯಲ್ಲಿದ್ದ ಪ್ರಾಂತದಲ್ಲಿ ಹೆಚ್ಚು ಜನ ಪ್ರಿಯವಾಗಿ ಬೆಳೆದಿದ್ದು ಇಂದಿಗೂ ಆ ಪ್ರಾಂತಗಳಲ್ಲಿ ತನ್ನ ಸ್ಥಾನ ಮಾನ ಉಳಿಸಿಕೊಂಡಿದ್ದು ಅಲ್ಲಿ ಜನರ ಹೃದಯದಲ್ಲಿಯೂ ಸ್ಥಾನ ಪಡೆದಿದ್ದು ನಾವು ಇಂದಿಗೂ ಕಾಣ ಬಹುದು.
ಸ್ವತಂತ್ರ ಪೂರ್ವದಲ್ಲಿ ಭಾರತದ ಅನೇಕ ಪ್ರಾಂತಗಳು ಮುಸ್ಲೀಮ್ ಅರಸರ ಆಳಿಕೆಯಲ್ಲಿದ್ದವು.ಆ ಪ್ರಾಂತಗಳಲ್ಲಿ ಉದು೯ ಮಾಧ್ಯಮದಲ್ಲಿ ಎಲ್ಲರೂ ಅಭ್ಯಾಸ ಮಾಡಬೇಕಾಗಿತ್ತು. ಹೈದ್ರಾಬಾದ ನಿಜಾಮರ ಆಳಿಕೆಯಲ್ಲಿದ್ದ ಬೀದರ ,ಗುಲಬಗಾ೯,ರಾಯಚೂರು ,ಹಾಗೂ ಬಳ್ಳಾರಿ ಜಿಲ್ಲೆಯ ಕೆಲವು ಭಾಗದ ಜನ ಉದು೯ ಕಲಿಯುವುದು ಕಡ್ಡಾಯವಾಗಿತ್ತು. ಇಲ್ಲಿಯ ವಿದ್ಯಾವಂತರು ಉರ್ದು ಸಾಹಿತ್ಯ ಅಭ್ಯಾಸ ಮಾಡುತ್ತಿದ್ದರು ಮತ್ತು ಜನಸಾಮಾನ್ಯರು ಉದು೯ಗಜಲ್ ಗಾಯನಕ್ಕೆ ಮೋಹಿತರಾಗಿದ್ದರು.ರಾಯಚೂರಿನ ಡಾ.ಶಾಂತರಸರು ಉದು೯ ಗಜಲ್ ಸಾಹಿತ್ಯಕ್ಕೆ ಮೋಹಿತರಾಗಿ ಈ ಸಾಹಿತ್ಯವನ್ನು ಕನ್ನಡಕ್ಕೆ ಏಕೆ ತರಬಾರದೆಂದು ಯೋಚಿಸಿ ಪ್ರಯತ್ನಪಟ್ಟು ಕನ್ನಡಕ್ಕೆ ಹೊಂದುವಂತಹ ಗಜಲ್ ಛಂದಸ್ಸನ್ನು ಕಂಡುಹಿಡಿದು ಕನ್ನಡ ಗಜಲ್ ಗಳನ್ನು ಬರೆದರು . ಅವರು ತೋರಿಸಿದ ಮಾರ್ಗದಲ್ಲಿಯೇ ಇಂದು ಎಲ್ಲರೂ ಕನ್ನಡ ಗಜಲ್ ಗಳನ್ನು ಬರೆಯುತ್ತಿದ್ದೇವೆ . ಡಾ. ಶಾಂತರಸರು ಕನ್ನಡ ಗಜಲ್ ಪಿತಾಮಹಾ ಎಂದು ಹೇಳಬಹುದು. ಇಂದು ಗಜಲ್ ಗಳು ಭಾರತದ ಎಲ್ಲಾ ಭಾಷೆಯಲ್ಲಿ ರಚನೆಯಾಗುತ್ತಿವೆ.
ಗಜಲ್ ಎಂದರೆ ಹೃದಯ ನೋವು ನಲಿವುಗಳ ತೀವ್ರತೆಯನ್ನು ಅನುಭವಿಸಿ ಅದನ್ನು ಮೃದು ಮಧುರ ಭಾಷೆಯಲ್ಲಿ ಪಿಸುಮಾತುಗಳ ಮೂಲಕ ಹೇಳುವ ಅನುಭಾವದ ಸಾಹಿತ್ಯವೆಂದು ಹೇಳ ಬಹುದು. ಗಜಲ್ ದ ಸ್ಥಾಯಿ ಗುಣವಾದ ಪ್ರೀತಿ ,ಪ್ರೇಮ,ವಿರಹ,ಮೋಹ, ಅನುರಾಗ, ಧ್ಯಾನ,ಅನುಸಂಧಾನ ಗಳಾಗಿದ್ದು ಯುವ ಕವಿಗಳಿಗೆ ಮರುಳುಮಾಡಿದ ಸಾಹಿತ್ಯ. ಇಂದು ಕನ್ನಡ ಗಜಲ್ ಸಾಹಿತ್ಯ ರಚನೆ ಕನಾ೯ಟಕದ ಎಲ್ಲಾ ಭಾಗದ ಕವಿಗಳನ್ನು ಆಕಷಿ೯ಸಿದ್ದು ಕನ್ನಡ ಗಜಲ್ ರಚನೆ ಭರದಿಂದನಸಾಗಿದೆ. ಇಂದಿನ ಕವಿಗಳು ಲಿಂಗ ಭೇದವಿಲ್ಲದೆ ವಯಸ್ಸಿನ ಹಂಗಿಲ್ಲದೆ ಎಲ್ಲರೂ ಗಜಲ್ ಗಳನ್ನು ರಚಿಸುತ್ತಿದ್ದಾರೆ. ಗಜಲ್ ದ ಸ್ಥಾಯಿ ಗುಣಗಳ ಜೊತೆಗೆ ಇಂದಿನ ಕವಿಗಳು ಸಮಾಜದಲ್ಲಿನ ಸುಡುವ ತಲ್ಲಣಗಳಿಗೆ ಸಾಂತ್ವನ ಹೇಳುತ್ತಾ ಅವುಗಳಿಗೆ ಮುಲಾಮು ಹಚ್ಚುವ ಮತ್ತು ಸಮಾಜದ ಅನಿಷ್ಟ ಪದ್ದತಿಗಳಾದ ಶೋಷಣೆ ಹಾಗೂ ತುಳಿತಕ್ಕೆ ಒಳಗಾದ ಜನಾಂಗಿಯ ನೋವುಗಳ ಬಗ್ಗೆ ಶೀತಲ ಬಂಡಾಯವನ್ನು ವ್ಯಕ್ತ ಪಡಿಸುತ್ತಾ,ಮಹಿಳಾ ಸಂವೇದನೆ,ಜಾತಿ ಧರ್ಮಗಳ ದಳ್ಳುರಿ,ಹೀಗೆ ಸಮಾಜ ಮುಖಿಯಾದ ಗಜಲ್ ಗಳು ರಚನೆಮಾಡುತ್ತಿದ್ದಾರೆ.
ಗಜಲ್ ಮೂಲತಃ ಒಂದು ಹಾಡುಗಬ್ಬವಾಗಿದ್ದು ಮನಸಿನ ತಳಮಳ ಹೊಯ್ದಾಟವನ್ನು ನಿಯಂತ್ರಿಸುವ ಸೂಫಿ ಸಂತರ ಅನುಭಾವದ ಸಾಹಿತ್ಯವಾಗಿ ಹೃದಯಗಳನ್ನು ಬೆಸೆಯುವ ಒಂದು ಅದ್ಭುತವಾದ ಮಾಂತ್ರಿಕ ಶಕ್ತಿ ಹೊಂದಿದೆ. ಜಾತಿ ,ಧರ್ಮ,ಮೇಲು ,ಕೀಳು ಗಂಡು ಹೆಣ್ಣು ಎಂಬ ಭೇದಭಾವಗಳನ್ನು ಹರಿದು ಸರ್ವರನ್ನು ಸಮನಾಗಿ ಕಾಣುತ್ತಾ ಮಾನವೀಯತೆಯನ್ನು ಬೆಸೆಯುವ ಪ್ರೇಮ,ಕರುಣೆ,ಸ್ನೇಹ,ಸೌಹರ್ದತೆ ಬೆಳೆಸುವ,ದೇವರನ್ನು ತೋರಿಸುವ ಧ್ಯಾನ,ಹೃದಯವನ್ನು ಧ್ಯಾನದ ಸ್ಥಿತಿಗೆ ಕರೆದುಕೊಂಡು ಹೋಗುತ್ತದೆ.ಲೌಕಿಕ ಪ್ರೀತಿಯಿಂದ ಅಲೌಕಿಕ ಪ್ರೀತಿಯಲ್ಲಿ ಕೊನೆಗೊಳಿಸುವುದು. ನಿರಾಕಾರನಾದ ಭಗವಂತನನ್ನು ಧ್ಯಾನಿಸುತ್ತಾ ಮೈ ಮರೆಸುವ,ಅಮಲೇರಿಸುವ ಸಾಹಿತ್ಯ ಗಜಲ್ ಆಗಿದೆ.ನಿಜಗುಣ ಶಿವಯೋಗಿಗಳು ಹೇಳುವಂತೆ “ಅವರವರ ಭಾವಕ್ಕೆ ಅವರವರ ಭಕ್ತಿಗೆ ವಿವಿಧ ರೂಪದಲ್ಲಿ ಭಗವಂತ ಕಾಣಿಸುತ್ತಾನೆಂಬಂತೆ” ಗಜಲ್ ಸಾಹಿತ್ಯ ಸಹ ಅವರವರ ಭಾವಕ್ಕೆ ತಕ್ಕಂತೆ ಹೊಳಹುಗಳನ್ನು ತೋರಿಸುತ್ತದೆ.
ಹೈದ್ರಾಬಾದ ಕನಾ೯ಟಕ ಅಥವಾ ಈಗಿನ ಕಲ್ಯಾಣ ಕನಾ೯ಟಕದ ಜನರ ಮನದಲ್ಲಿ ಗಜಲ್ ಒಂದು ವಿಶಷ್ಟ ಸ್ಥಾನ ಪಡೆದಿದ್ದು ಇಂದಿಗೂ ಅಲ್ಲಿ ಗಜಲ್ ಗಳ ಮೆಹಫಿಲ್ ಗಳು ನಡೆಯುತ್ತಿರುತ್ತವೆ . ಹಾಗೂ ಈ ಪ್ರಾಂತದಲ್ಲಿ ಗಜಲ್ ರಚಿಸುವುವರ ಸಂಖ್ಯೆಯು ಗಣನೀಯವಾಗಿದಿದ್ದು ಕಂಡು ಬರುತ್ತದೆ.ದಿನಾಂಕ ೨೫-೮-೨೦೨೪ ರಂದು ಅಖಿಲ ಕನಾ೯ಟಕ ಪ್ರಥಮ ಕನ್ನಡ ಗಜಲ್ ಸಾಹಿತ್ಯ ಸಮ್ಮೇಳನವನ್ನು ಅಖಿಲ ಕನಾ೯ಟಕ ಗಜಲ್ ಅಕಾಡೆಮಿ ಬೆಂಗಳೂರು ಇವರು ಆಯೋಜಿಸಿದ್ದರು.ಸಮ್ಮೇಳನದ ಸವಿ ನೆನಪಿಗಾಗಿ *ಗಜಲ್ ನಾದಲೋಕ*ಎಂಬ ನೂರು ಕವಿಗಳ ನೂರು ಗಜಲ್ ಗಳ ಸಂಕಲನವನ್ನು ಲೋಕಾರ್ಪಣೆ ಮಾಡಲಾಯಿತು.ಈ ಕೃತಿ ನಾಡಿನ ಅನೇಕ ಹಿರಿಯ ಮತ್ತು ಕಿರಿಯ ಗಜಲ್ ಕಾರರ ಗಜಲ್ ಗಳನ್ನು ಒಳಗೊಂಡಿದ್ದು ಬಹು ವಿಶಿಷ್ಟವಾದ ವೈವಿದ್ಯಮಯ ವಿಷಯ ವಸ್ತುಗಳಿಂದ ತುಂಬಿದ ಇಲ್ಲಿನ ಗಜಲ್ ಗಳು ಓದುಗರನ್ನು ಮತ್ತೆ ಮತ್ತೆ ತನ್ನತ್ತ ಸೆಳೆಯುತ್ತವೆ. ಇಂಥಹ ವಿಶಿಷ್ಟವಾದ ಗಜಲ್ ಸಂಕಲನವನ್ನು ಪ್ರಕಟಿಸಲು ಉತ್ಸಾಹಿ ಯುವ ಲೇಖಕಿ ಶ್ರೀಮತಿ ಬಸಮ್ಮ ಸಜ್ಜನ ಅವರು ಸ್ವಪ್ರೇರಣೆಯಿಂದ ಸಂಪಾದಕಿಯರಾಗಿ ತಮ್ಮ ಶ್ರಮದ ದುಡಿಮೆಯ ಸ್ವಂತ ಹಣದಿಂದ ಕೃತಿಯನ್ನು ಪ್ರಕಟಿಸಿದ್ದಾರೆ.ಇದು ಅವರ ಗಜಲ್ ದ ಪ್ರೀತಿಯ ಕಾಣಿಕೆಯನ್ನ ಬಹುದು.
ಕಲ್ಬುರ್ಗಿಯ ನಿವಾಸಿಯಾದ ಬಸಮ್ಮ ಸಜ್ಜನವರು ಬಿಕಾಂ ಪದವಿಧರೆ ಹಾಗೂ ಗ್ರಹಿಣಿ ಮತ್ತು ನೀರಾವರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಇವರು ಪ್ರವೃತ್ತಿಯಲ್ಲಿ ಸಾಹಿತಿಗಳು ಕಥೆ ಕವನ ಜಾನಪದ ಗೀತೆ ಚುಟುಕುಗಳು ಗಜಲ್ ಹೇಗೆ ವಿವಿಧ ಪ್ರಕಾರದಲ್ಲಿ ಸಾಹಿತ್ಯ ರಚಿಸುವುದು ಇವರ ಹವ್ಯಾಸವಾಗಿದೆ . ಇವರಿಗೆ ಪ್ರಿಯವಾದ ಸಾಹಿತ್ಯವೆಂದರೆ ಜಾನಪದ ಗೀತೆ ಮತ್ತು ಗಜಲ್ ಪ್ರಕಾರ.ಇವರ *ನೆನಪಿನ ಅಲೆಗಳು* ಕವನ ಸಂಕಲನ ಲೋಕಾರ್ಪಣೆಯಾಗಿದೆ ರಾಜ್ಯದ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ .ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾತಂಡ ( ರಿ) ಚಿತ್ರದುರ್ಗ ಇವರು ” ಕರುನಾಡ ಸಾಹಿತ್ಯ ಸಿರಿ “ಪ್ರಶಸ್ತಿ ನೀಡಿದ್ದಾರೆ ಮತ್ತು ರಾಯಚೂರಿನಲ್ಲಿ ನಡೆದ ಬೆಳಕು ಸಾಹಿತ್ಯ ಸಮ್ಮೇಳನ ವತಿಯಿಂದ ” ಸಾಧನ ಶ್ರೀ ” ಪ್ರಶಸ್ತಿಯು ಕೂಡ ಇವರಿಗೆ ಲಬಿಸಿದೆ. ನೂರಾರು ಗಜಲ್ ಕಾರರ ಸಹಕಾರದಿಂದ ಅವರಿಂದ ಒಂದೊಂದು ಗಜಲ್ ತರಿಸಿಕೊಂಡು ಅವುಗಳನ್ನು ಅಚ್ಚುಕಟ್ಟಾಗಿ ಕರಡು ಪ್ರತಿ ಸಿದ್ಧಪಡಿಸಿ ಶ್ರೇಷ್ಠ ಗಜಲ್ ಕಾತಿ೯ಯಾದ ಡಾ. ಪ್ರೇಮ ಹೂಗಾರ್ ಅವರಿಂದ ಮೌಲಿಕವಾದ ಮುನ್ನುಡಿಯನ್ನು ಬರೆಸಿ ಕೊಂಡು ಜೊತೆಗೆ ವಿಮರ್ಶಕರು ಆದ ಅಬ್ದುಲ್ ಹೈ ತೋರಣಗಲ್ಲು ಅವರಿಂದ ಆಶಯ ನುಡಿ ಬರೆಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಶ್ರೇಷ್ಠ ಗಜಲ್ ಕಾರರಾದ ಡಾ. ಸಿದ್ದರಾಮ ಹೊನ್ಕಲ್ ಅವರಿಂದ ತಲುನಾತ್ಮಕವಾದ ಬೆನ್ನುಡಿಯನ್ನು ಬರೆಸಿದ್ದಾರೆ. ಪತ್ರಕರ್ತರು ಹಾಗೂ ಸಂಘಟಕಾರರು ಮತ್ತು ಗಜಲ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಗಳು ಆದ ಮಹಿಪಾಲರೆಡ್ಡಿ ಮುನ್ನೂರ್ ಹಾಗೂ ಅಬ್ದುಲ್ ಹೈ ತೋರಣಗಲ್ಲು ಇವರು ಈ ಕೃತಿಯ ಪ್ರಧಾನ ಸಂಪಾದಕರಾಗಿದ್ದಾರೆ .ಗೌರವ ಸಲಹ ಸಂಪಾದಕ ಮಂಡಳಿಯಲ್ಲಿ ಪ್ರಭಾವತಿ ಎಸ್ ದೇಸಾಯಿ, ರಂಗಸ್ವಾಮಿ ಬೆಂಗಳೂರು,ನಂರುಶಿ ಕಡೂರು ಅವರು ಇರುವುದು ಹೆಮ್ಮೆಯ ವಿಷಯವಾಗಿದೆ.
*ಗಜಲ್ ನಾದಲೋಕ* ಗಜಲ್ ಸಂಕಲನದಲ್ಲಿ ಒಟ್ಟು ನೂರು ಜನ ಗಜಲ್ ಕಾರರ ನೂರು ಗಜಲ್ ಗಳಿವೆ .ಪ್ರತಿಯೊಬ್ಬರ ಗಜಲ್ ತಮ್ಮದೇ ಆದ ವಿಶೇಷ ಅರ್ಥ ಕೊಡುವ ಗಜಲ್ ಗಳಾಗಿವೆ ಹಿರಿಯರ ಮತ್ತು ಕಿರಿಯರ ಗಜಲ್ ಗಳಿವೆ ಎಲ್ಲಾ ಗಜಲ್ ಗಳು ಓದಿಸಿಕೊಂಡು ಹೋಗುತ್ತವೆ . ಗಜಲ್ ದ ಸ್ಥಾಯಿ ಗುಣವಾದ ಪ್ರೀತಿ, ಪ್ರೇಮ ,ವಿರಹದ ಗಜಲ್ ಗಳ ಜೊತೆಗೆ ಸಮಾಜದ ತಲ್ಲಣಗಳ ಗಜಲ್ ಕೂಡ ಇವೆ.ಮುರದ್ದಫ್ ಗಜಲ್,ಗೈರ್ ಮುರದ್ದಫ್ ಗಜಲ್,ತರಹೀ ಗಜಲ್,ಜುಲ್ ಕಾಫಿಯಾ ಗಜಲ್ ಗಳು ಇವೆ.
*ಗೆರೆ ಕೊರೆದು ಆಟವಾಡುವ ಎಳೆ ವಯಸಿನ ಹಸುಗೂಸು ಈ ಬಾಲೆ*
*ಮೈಯಲಿ ಕಾಮುಕರು ಪರಚಿದ ಗಾಯ ರಕ್ತದಿ ಬೆಂದವಳು ಇವಳು*
( ನಂರುಶಿ ಕಡೂರ)
ಗಜಲ್ ದ ಮೇಲಿನ ವಿಶ್ರಾವನ್ನು ಓದಿದಾಗ ಗಜಲ್ ಕಾರರು ಇಂದು ಸಮಾಜದಲ್ಲಿ ದಿನನಿತ್ಯ ಕಾಣುವ ಮತ್ತು ಕಾಡುವ ವಿಷಯವಾದ ಮಹಿಳಾ ದೌರ್ಜನ್ಯದ ಬಗ್ಗೆ ಬರೆದಿದ್ದು ತಿಳಿಯುತ್ತದೆ. ಇಂದು ಸಮಾಜದಲ್ಲಿ ಕಾಮುಕತನ ಹೆಚ್ಚಾಗಿದ್ದು ತಮ್ಮ ಕಾಮದಾಹವನ್ನು ತೀರಿಸಿಕೊಳ್ಳಲು ಮಹಿಳೆ ವೃದ್ಧೆ ಬಾಲಕಿ ಎಂಬ ಅಂತರವನ್ನು ಮರೆತು ಹೆಣ್ಣಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು ದಿನ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ನಾವು ಸುದ್ದಿ ಓದುತ್ತಿದ್ದೇವೆ ಮತ್ತು ಕೇಳುತ್ತಿದ್ದೇವೆ . ಎಳೆ ವಯಸ್ಸಿನ ಹೆಣ್ಣು ಮಗುವಿನ ಮೇಲೆ ಮಾಡಿದ ಲೈಂಗಿಕ ದೌರ್ಜನ್ಯವನ್ನು ವಸ್ತುವಾಗಿ ಇಟ್ಟುಕೊಂಡು ರೂಪಕಗಳೊಂದಿಗೆ ಆ ಮಗುವಿಗಾದ ಹಿಂಸೆಯ ಬಗ್ಗೆ ಗಜಲ್ಕಾರರು ಗಜಲ್ ರಚಿಸಿದ್ದಾರೆ. ಈ ಕಾಮುಕ ಮೃಗತ್ವ ಎಂದು ಕೊನೆಯಾಗುವುದು ತಿಳಿಯದಾಗಿದೆ ಮನುಷ್ಯ ಮೃಗತ್ವವನ್ನು ತೊರೆದು ಮಾನವನಾಗಿ ಜಗದಲ್ಲಿ ಬಾಳಲೆಂದು ಗಜಲ್ ಕಾಲರು ಆಶಿಸುತ್ತಾರೆ .
*ಮಗನಿಗೆ ಕೂಲಿ ಹಚ್ಚಬೇಡ ಒಂದು ತುತ್ತಿಗಾಗಿ ಹಾಳಾಗುತ್ತದೆ ಬಾಳು*
*ಕೈಯೊಳಗೆ ಅಕ್ಷರ ಪದಗಳು ತಪ್ಪಿಸಬೇಡ ಶವವಾಗಿ ಹೋಗುತ್ತದೆ ಬಾಳು*
(ಡಾ. ಜಯದೇವಿ ಗಾಯಕವಾಡ)
ಮೇಲಿನ ಮತ್ಲಾ ಓದಿದಾಗ ನಮ್ಮ ಸುತ್ತಮುತ್ತ ಇರುವ ಬಡ ಕುಟುಂಬಗಳ ಬದುಕು ಕಣ್ಣ ಮುಂದೆ ತೇಲಿ ಬರುತ್ತದೆ. ಗಜನ್ ಕಾರ್ತಿಯವರು ಬಡ ಕೂಲಿ ಜನರಿಗೆ ಮಕ್ಕಳನ್ನು ಕೂಲಿ ಕೆಲಸಕ್ಕೆ ಹಚ್ಚಬೇಡಿ ಅವರನ್ನು ವಿದ್ಯಾವಂತರಾಗಿ ಮಾಡಿ ಅವರ ಭವಿಷ್ಯ ಉಜ್ವಲವಾಗಲಿ ಅವರಿಗೆ ವಿದ್ಯೆ ಕೊಡಿಸುವುದನ್ನು ತಪ್ಪಿಸಿ ಅವರ ಬಾಳು ಹಾಳು ಮಾಡಬೇಡಿ ಎಂದು ಬುದ್ಧಿವಾದ ಹೇಳುವ ರೀತಿಯಲ್ಲಿ ಗಜಲ್ ನ್ನು ಹಣೆದಿದ್ದಾರೆ. ಬಡತನದಿಂದಾಗಿ ಕ್ಷಣಿಕ ಸುಖಕ್ಕಾಗಿ ಚಿಕ್ಕ ಚಿಕ್ಕ ಮಕ್ಕಳನ್ನು ಕೆಲಸಕ್ಕೆ ಹಚ್ಚುವುದು ಇಲ್ಲವೇ ಸಿರಿವಂತರ ಮನೆಯಲ್ಲಿ ಮಕ್ಕಳನ್ನು ಜೀತಕ್ಕೆ ಹಚ್ಚುವುದು ಹೆಚ್ಚಾಗಿ ಕಂಡು ಬರುತ್ತಿದ್ದು ಅದನ್ನೇ ಗಜಲ್ ಕಾರ್ತಿ ಖಂಡಿಸಿ ಗಜಲ್ ನ್ನು ಬರೆದಿದ್ದಾರೆ .
*ಒಣ ಇರುಳ ವಿರಹದ ಕುಲುಮೆಯಲಿ ದಹಿಸಿ ಸಾಕಾಗಿದೆ*
*ನಿನ್ನ ಕಣ್ಣಲಿ ಅರಳುವ ಕೇದಗೆಯ ಮಿಡಿತ ಬೇಕಾಗಿದೆ*
(ಡಾ .ದಸ್ತಗಿರಿ ಸಾಬ್ ದಿನ್ನಿ )
ಗಜಲ್ ದ ಸ್ಥಾಯಿ ಗುಣವಾದ ವಿರಹದ ಗಜಲ್ ಇದಾಗಿದೆ. ಪ್ರೀತಿಯ ನಲ್ಲೆ ಜೊತೆಗೆ ಇಲ್ಲದೆ ಒಣ ಇರುಳು ಕಳೆಯುವುದು ಬಹಳ ಕಷ್ಟವಾಗಿದೆ . ಅವಳಿಲ್ಲದ ವಿರಹದ ಏಕಾಂಗಿ ರಾತ್ರಿಯು ಕುಲುಮೆಯಾಗಿ ನನ್ನ ಧಹಿಸುತ್ತಿದೆ . ಈ ಉರಿ ಸಹಿಸಲಾಗುತ್ತಿಲ್ಲವೆಂದು ಹೇಳುತ್ತಾ ಅವಳ ಕಣ್ಣಲ್ಲಿ ಅರಳುವ ಕೇದಿಗೆಯ ಹೊಳಪು ಮತ್ತು ಕಂಪು ಮನ ಮಿಡಿಯಬೇಕೆಂದು ಗಜಲ್ ಕಾಲರು ತಮ್ಮ ಗಜಲ್ ದಲ್ಲಿ ವಿರಹದ ಬೇಗೆಯನ್ನು ವಿವಿದ ರೂಪಗಳೊಂದಿಗೆ ವಿವರಿಸಿದ್ದಾರೆ . ನಿನ್ನನ್ನು ನೆನೆಯುತ್ತಾ ಮಾವಿನ ಕೆರೆಯ ದಂಡೆಯ ಮೇಲೆ ಅಲಿಯುತ್ತಿದೆ ಮನಸ್ಸು ,ಕೊಳಲ ನಾದ ರಿಂಗಣ ಮತ್ತು ಕಣ್ಣ ಸನ್ನೆಯ ಭಾಷೆ ಯಾಕೋ ಒಗಟಾಗಿದೆಂದು ಮನದಲ್ಲಿ ಪ್ರಿಯಕರ ಹಳಹಳಿಸುತ್ತಾನೆ . ಒಟ್ಟಾರೆಯಾಗಿ ಹೇಳುವುದಾದರೆ ಇದು ವಿರಹದ ಗಜಲಾಗಿದ್ದು ಉತ್ತಮ ರೂಪಗಳೊಂದಿಗೆ ಗಜಲ್ ನ್ನು ಹೆಣೆದಿದ್ದಾರೆ.
*ನನ್ನ ಮೌನದಲಿ ಅನಂತಾನಂತ ಮಾತುಗಳಿದ್ದವು ನಿನಗೆ ತಿಳಿಯಲಿಲ್ಲ*
*ನನ್ನ ಅಶ್ರುವಿನಲಿ ಸಾವಿರಾರು ಬಯಕೆಗಳಿದ್ದವು ನಿನಗೆ ತಿಳಿಯಲಿಲ್ಲ*
(ಅನಸೂಯಾ ಜಹಗೀರದಾರ)
ಎರಡು ಹೃದಯಗಳ ಒಂದಾಗಿ ಪ್ರೀತಿಸಿದಾಗ ಆ ಪ್ರೇಮ ಎನ್ನುವುದು ಕೊಂಡುಕೊಳ್ಳುವ ಕೊಡವ ವ್ಯವಹಾರವಲ್ಲ . ಅದು ಗುಪ್ತವಾಗಿ ಒಂದು ಹೃದಯದಿಂದ ಇನ್ನೊಂದು ಹೃದಯಕ್ಕೆ ಹರಿದು ಬರುತ್ತದೆ . ಪ್ರತಿಯೊಬ್ಬರು ತಮ್ಮ ಪ್ರೇಮಿಯ ಹೃದಯದ ಮಾತನ್ನು ಮೌನದಲ್ಲಿಯೇ ಅರ್ಥ ಮಾಡಿಕೊಂಡಾಗ ಅದು ನಿಜ ಪ್ರೇಮವಾಗಿ ಪ್ರೇಮಿಗಳಾಗಿ ಬೆಸಗೊಳ್ಳುತ್ತಾರೆ .ಇಲ್ಲಿ ಗಜಲ್ ಕಾತಿ೯ ತನ್ನ ಪ್ರಿಯತಮನಿಗೆ ಕೇಳುತ್ತಾಳೆ ನನ್ನ ಮೌನದಲ್ಲಿ ಅದೆಷ್ಟೋ ಮಾತುಗಳಿದ್ದವು ನಿನಗೆ ತಿಳಿಯಲಿಲ್ಲ ,ನನ್ನ ಕಂಬನಿಯಲ್ಲಿ ಅದೆಷ್ಟೋಷ ಬಯಕೆಗಳಿದ್ದವು ನೀನು ಅರ್ಥಮಾಡಿಕೊಳ್ಳಲಿಲ್ಲ ವೆಂದು ಹೇಳುತ್ತಾಳೆ . ಅದೆಷ್ಟೋ ಪ್ರೇಮಿ (ಪ್ರಿಯತಮ )ತನ್ನ ಪ್ರಿಯತಮೆಯ ಮನದ ಬಯಕೆಗಳನ್ನು ಅರ್ಥಮಾಡಿಕೊಳ್ಳಲಾಗದೆ ಅಸಹಾಯಕನಾಗುತ್ತಾನೆ. ಅವನ ಅಸಹಾಯಕತೆ ಬಗ್ಗೆ ಗಜಲ್ ಕಾರ್ತಿ ರೂಪಕಗಳೊಂದಿಗೆ ಗಜಲ್ ದಲ್ಲಿ ಸುಂದರವಾಗಿ ವಿವರಿಸಿದ್ದಾರೆ ಎಲ್ಲಾ ಪ್ರೇಮಿಗಳಿಗೆ ಕಾಡುವ ಗಜಲ್ ಇದೆಂದು ಹೇಳಬಹುದು .
*ಸುಂದರ ಬೊಟ್ಟರಿಸಿ ಮೆಲ್ಲನೆ ಮುತ್ತಿಟ್ಟಳು ಅಮ್ಮ*
*ಚಂದಮಾಮನ ತೋರಿ ಸಣ್ಣನೆ ತುತ್ತಿಟ್ಟಳು ಅಮ್ಮ*
(ನಬೀಲಾಲ್ ಮಕಾನ್ದಾರ್ ಅಮ್ಮಾಪುರ)
ತಾಯಿ ಬಾಲ್ಯದಲ್ಲಿ ಮಕ್ಕಳನ್ನು ಹೇಗೆ ಬೆಳೆಸುತ್ತಾಳೆಂದು ಗಜಲ್ ಕಾರು ತಮ್ಮ ಬಾಲ್ಯವನ್ನು ನೆನೆಸಿಕೊಂಡು ಗಜಲ್ ರಚನೆ ಮಾಡಿದ್ದಾರೆ. ಮಗು ಚಿಕ್ಕದಿದ್ದಾಗ ಅಮ್ಮ ಮಗುವಿಗೆ ಸ್ನಾನ ಮಾಡಿಸಿ ಹಣೆಗೆ ಕಪ್ಪು ತಿಲಕವಿತ್ತು ಮೆಲ್ಲನೆ ಮುತ್ತ ನೀಡುತ್ತಾಳೆ . ಅದೇ ತಾಯಿ ಸಂಜೆ ಮಗುವಿಗೆ ಬಾನ ಚಂದಿರನನ್ನು ತೋರಿಸುತ್ತಾ ಪ್ರೀತಿಯಿಂದ ಬಾಯಿಗೆ ತುತ್ತು ಇಡುತ್ತಾಳೆ. ತಾಯಿ ಮಗುವಿನ ಸರ್ವತೋಮುಖ ಅಭಿವೃದ್ಧಿಗಾಗಿ ಮಗುವಿನ ಬೆಳವಣಿಗೆಯಾಗಿ ತುತ್ತ ನೀಡುವುದು ಸುಖವಾಗಿ ನಿದ್ರೆ ಮಾಡಲೆಂದು ಲಾಲಿ ಹಾಡುತ್ತಾಳೆಂದು ಗಜಲ್ ಕಾರರು ತಾಯಿ ಮಗುವಿನ ಸಂಬಂಧದ ಬಗ್ಗೆ ಸುಂದರವಾದ ರೂಪಗಳೊಂದಿಗೆ ಗಜಲ್ ರಚಿಸಿದ್ದಾರೆ .
*ಅವನು ಬರುವನೆಂದು ಕಂಗಳಲಿ ತಿಂಗಳನ ಬೆಳದಿಂಗಳನು ಮುಚ್ಚಿಟ್ಟಿರುವೆ*
*ಮೊಗದ ಮುಗುಳ್ನಗೆಯಲಿ ಎದೆ ತರಿವ ನೋವುಗಳನು ಬಚ್ಚಿಟ್ಟಿರುವೆ*
(ಇಂದಿರಾ ಮೂಟೆಬೆನ್ನೂರು)
ಗಜಲ್ ದ ಸ್ಥಾಯಿ ಗುಣವಾದ ಕಾಯುವಿಕೆಯ ಗಜಲ್ ಇದಾಗಿದೆ. ಪ್ರಿಯತಮೆ ತನ್ನ ಪ್ರಿಯಕರನು ಬರವನೆಂಬ ನಿರೀಕ್ಷೆಯಲ್ಲಿ ಏನೆಲ್ಲ ಮಾಡುತ್ತಾಳೆಂದು ಗಜಲ್ ಕಾರ್ತಿ ಗಜಲ್ ದಲ್ಲಿ ವಿವರಿಸಿದ್ದಾರೆ . ಪ್ರಿಯತಮ ಬರುವನೆಂದು ತನ್ನ ಕಂಗಳಲ್ಲಿ ಬೆಳದಿಂಗಳನ್ನು ಮುಚ್ಚಿಟ್ಟಿರುತ್ತಾಳೆ, ಪ್ರಿಯತಮನಿಗೆ ಸಂತೋಷ ಪಡಿಸಲು ಬೆಳದಿಂಗಳನ್ನು ಹಿಡಿದಿಟ್ಟಿದ್ದಾಳೆ. ಮನದಲ್ಲಿ ಎಷ್ಟೇ ನೋವಗಳಿದ್ದರೂ ಅವನಿಗೆ ಗೊತ್ತಾಗಬಾರದೆಂದು ಮೊಗದಲ್ಲಿ ಮುಗುಳ್ನಗೆ ತಂದುಕೊಂಡು ಸಂತೋಷದಿಂದ ಇರುವೆನೆಂದು ತೋರಿಸಲು ತನ್ನ ನೋವುಗಳನ್ನು ಎದೆಯಲ್ಲಿ ಬಚ್ಚಿಡುತ್ತಾಳೆ. ಅವನು ಬರುವ ಹಾದಿಗೆ ಹೂ ಹಾಸಿ ಎದೆ ಕದವ ತೆರೆದಿಟ್ಟಿದ್ದಾಳೆ, ಹಿತ್ತಲದಲ್ಲಿ ಅರಳಿದ ಮಲ್ಲಿಗೆ ಮುಡಿದು ಅವನ ಬರವನ್ನು ಕಾಯುತ್ತಾಳೆ. ಹೀಗೆ ಗಜಲ್ ಕಾತಿ೯ ಅವನಿಗಾಗಿ ಕಾಯುವ ಪರಿಯನ್ನು ರೂಪಕಗಳೊಂದಿಗೆ ಸುಂದರವಾಗಿ ಗಜಲ್ ದಲ್ಲಿ ಹೆಣೆದಿದ್ದಾರೆ .
*ಅವನನು ಪ್ರೀಮಿಸಲು ಮೌನವನೇ ಆಯ್ದುಕೊಂಡೆ*
*ಮನದಲಿ ಆರಾಧಿಸುತ ದೂರವನೇ ಆಯ್ದುಕೊಂಡೆ*
( ಪಾರ್ವತಿ ಎಸ್ ಬೂದೂರು)
ಇದು ಒಂದು ಪ್ರೇಮ ಆರಾಧನೆಯ ಗಜಲ್ ಆಗಿದ್ದು ,ಈ ಗಜಲ್ ಭಕ್ತಿ ದೇವಾರ್ಪಿತವಾಗಿದೆ. ಪ್ರೀತಿ ಎನ್ನುವುದು ಪವಿತ್ರ ದೇವರನ್ನು ಪೂಜಿಸುವ ಆರಾಧನೆಯಾಗಿದೆ ಯಾವ ರೀತಿಯಾಗಿ ಅಕ್ಕಮಹಾದೇವಿ ಮಲ್ಲಿಕಾರ್ಜುನನ್ನು ಆರಾಧಿಸಿದಂತೆ (ಪ್ರೀತಿಸಿದಂತೆ) ,ಮೀರಾ ಮಾಧವನನ್ನು ಪೂಜಿಸಿದಂತೆ , ರಾಧೆ ಕೃಷ್ಣನನ್ನು ಪ್ರೀತಿಸಿದಂತೆ , ಗಜಲ್ ಕಾರ್ತಿ ಗಜಲ್ ನ್ನು ಆಧ್ಯಾತ್ಮಿಕ ನಿಲುವಿನಲ್ಲಿ ಹೆಣೆದಿದ್ದಾರೆ . ದೇವರನ್ನು (ಅವನನ್ನು ) ಪ್ರೇಮಿಸಲು ಮೌನವನೇ ಆಯ್ದುಕೊಂಡಿದ್ದಾರೆ ,ಮನದಲ್ಲಿ ಅವನನ್ನು ಆರಾಧಿಸುತ್ತಾ ಅವನಿಂದ ದೂರ ಉಳಿದಿದ್ದಾರೆ. ನಿಸರ್ಗದ ವಸ್ತುವಿನಲ್ಲಿ ಅವನನ್ನು ಕಾಣುತ್ತಾ ಅದನ್ನೇ ತನ್ನ ಸಂಗಾತಿಯಾಗಿ ಮಾಡಿಕೊಂಡಿರುವೆನೆಂದು ಹೇಳುವರು ಪ್ರಕೃತಿಯ ವಸ್ತುಗಳನ್ನೇ ರೂಪಕವಾಗಿರಿಸಿಕೊಂಡು ಸುಂದರವಾದ ಅಧ್ಯಾತ್ಮಿಕ ಗಜಲ್ ರಚಿಸಿದ್ದಾರೆ .
*ಹಾದಿ ಬೀದಿಯೊಳು ಆಯ್ದು ತಿನ್ನುತ್ತಿವೆ ರಣ ಹದ್ದುಗಳು*
*ಆಕಾಶದೆತ್ತರದ ಆಸೆಯ ಬಿತ್ತಿ ಮುಕ್ಕುತ್ತಿವೆ ರಣಹದ್ದುಗಳು*
(ಚಂದ್ರಶೇಖರ್ ಎಸ್ ಭಂಗಿ)
ಇದು ಒಂದು ಸಾಮಾಜಿಕ ಕಳಕಳಿಯ ಮತ್ತು ವಿಡಂಬಾತ್ಮಕ ರಾಜಕೀಯ ಗಜಲ್ ಆಗಿದೆ. “ರಣಹದ್ದುಗಳು”ಎಂಬ ರದೀಪ್ ಇಂದಿನ ರಾಜಕೀಯ ಮುಖಂಡರನ್ನು ಕಲ್ಪಿಸುವ ರೂಪಕವಾಗಿದೆ ಇಂದಿನ ರಾಜಕೀಯ ಮುಖಂಡರು ಪ್ರತಿಯೊಂದು ಕಾರ್ಯದಲ್ಲಿ ಭ್ರಷ್ಟಾಚಾರವನ್ನು ಎಸೆಗುತ್ತಾ ಯಾವುದೇ ಪ್ರಗತಿಯ ಕಾರ್ಯಗಳನ್ನು ಮಾಡದೆ ಮಾಡುವ ಕೆಲಸಗಳಿಗೆ ಲಂಚ ಪಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದ್ದು ಕೇವಲ ಆಶ್ವಾಸನೆಗಳನ್ನು ತೋರಿಸುತ್ತಾ ಕಾಲವನ್ನು ದುಡುತ್ತಿರುವುದನ್ನು ಗಜಲ್ ಕಾಲರು ರೂಪಕಗಳೊಂದಿಗೆ ಗಜಲ್ ದಲ್ಲಿ ನಿರೂಪಿಸಿದ್ದಾರೆ .
ಬಸಮ್ಮ ಸಜ್ಜನ್ ಅವರು ಸಂಪಾದಿಸಿದ *ಗಜಲ್ ನಾದಲೋಕ* ಕೃತಿಯಲ್ಲಿ .ನೂರು ಗಜಲ್ ಕಾರರ ನೂರು ಗಜಲ್ ಗಳಿದ್ದು ವಿಷಯಗಳು ವೈವಿಧ್ಯಮಯವಾಗಿದವೆ. ಹಿರಿಯರ ಗಜಲ್ ಕಾರರು ಗಜಲ್ ರಚನಾ ನಿಯಮವನು ಪಾಲಿಸಿ ಗಜಲ್ ರಚಿಸಿದ್ದಾರೆ . ಕಿರಿಯರು ಗಜಲ್ ಕಾರರು ಗಜಲ್ ರಚನೆ ಬಗ್ಗೆ ಅಧ್ಯಯನ ಮಾಡಬೇಕಾಗಿದೆ ಗಜಲ್ ನಿಯಮಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಛಂದಸ್ಸನ್ನು ಅರಿತು ಹೃದಯದ ಭಾಷೆವನ್ನು ಅರಿತು ಗಜಲ್ ರಚಿಸಿದರೆ ಉತ್ತಮವೆಂದು ನನ್ನ ಅಭಿಪ್ರಾಯ . ಬಸಮ್ಮ ಸಜ್ಜನವರು ಹೀಗೆ ಇನ್ನೂ ಹಲವಾರು ಸಂಕಲನಕ್ಕೆ ಸಂಪಾದಕರಾಗಿ ಇನ್ನು ಅನೇಕ ಕೃತಿಗಳನ್ನು ಪ್ರಕಟಿಸಲೆಂದು ಶುಭ ಹಾರೈಸುತ್ತ ನನ್ನ ಬರಹಕ್ಕೆ ವಿರಾಮ ಕೊಡುತ್ತೇನೆ .
*ಮತ್ತೆ ನನ್ನ ಮನಸ್ಸು ಅಶಾಂತಿಗೀಡಾಗಿದೆ*
*ಹೃದಯ ಪ್ರೇಮದ ಆಳವಾದ ಗಾಯ ಹುಡುಕುತಿದೆ*
( ಮೂಲ….ಮಿರ್ಜಾ ಗಾಲಿಬ್ )
(ಅನುವಾದ….. ಪಂಜಾಕ್ಷರಿ ಹಿರೇಮಠ.)
ಪ್ರಭಾವತಿ ಎಸ್ ದೇಸಾಯಿ

ಅತ್ಯುತ್ತಮ ವಿಮರ್ಶೆ. ಗಜಲಗಳ ಸಮರ್ಪಕ ವಿಶ್ಲೇಷಣೆ. ಸಂಕಲನದ ಸಂಪಾದಕರಿಗೂ, ವಿಮರ್ಶಕರಿಗೂ ಅಭಿವಂದನೆಗಳು.
ನರಸಿಂಗರಾವ್ ಹೇಮನೂರ