ಬಸವರಾಜ ಕಟ್ಟೀಮನಿಯವರ ಜನ್ಮದಿನಕ್ಕೆ ಲೇಖನ-ಎಲ್. ಎಸ್. ಶಾಸ್ತ್ರಿ

ಸ್ಮರಣೆ ಸಂಗಾತಿ

ಬಸವರಾಜ ಕಟ್ಟೀಮನಿಯವರ ಜನ್ಮದಿನಕ್ಕೆ ಲೇಖನ-ಎಲ್. ಎಸ್. ಶಾಸ್ತ್ರಿ

 ಕತ್ತಿ- ಮೊನಿಯಾಗಿದ್ದ ಕಟ್ಟೀಮನಿ
( ನನ್ನ ಪರಿಚಯ ಪ್ರಪಂಚ)


  ಕನ್ನಡದ ಖ್ಯಾತ ಕಾದಂಬರಿಕಾರರಾಗಿದ್ದ ಬಸವರಾಜ ಕಟ್ಟೀಮನಿಯವರನ್ನು ನಾನು ಮೊದಲು ಸಂಪರ್ಕಿಸಿದ್ದು ೧೯೬೬ ರಲ್ಲಿ ಕಲಬುರ್ಗಿಯ ನವಕಲ್ಯಾಣ ಸಾಪ್ತಾಹಿಕದಲ್ಲಿದ್ದಾಗ. ನಮ್ಮ ಪತ್ರಿಕೆಗೆ ಒಂದು ಧಾರಾವಾಹಿ ಕಾದಂಬರಿ ಕೊಡಿ ಎಂದು ವಿನಂತಿಸಿಕೊಂಡಿದ್ದೆ. ಅದಕ್ಕೆ ಅವರು ಒಪ್ಪಿ ಬಸವಣ್ಣನವರ ಕುರಿತಾದ ಒಂದು ಐತಿಹಾಸಿಕ ಕಾದಂಬರಿಯ ಹಸ್ತಪ್ರತಿ ಕಳಿಸಿದ್ದರು.  
    ಮುಂದೆ ೧೯೭೯ ರಲ್ಲಿ ನಾನು ಗೋಕಾಕಕ್ಕೆ ಬಂದಾಗ ಮತ್ತೆ ಅವರ ಹತ್ತಿರದ ಸಂಪರ್ಕ ಬಂತು. ಅಲ್ಲಿಂದ ಬಹಳ ವರ್ಷಗಳತನಕ ಅದು ಮುಂದುವರಿಯಿತು.
      ೧೯೮೨ -೮೩ ರಲ್ಲಿ ನಾನು ಕೃಷ್ಣಮೂರ್ತಿ ಪುರಾಣಿಕರ ಎರಡು ಸಾಹಿತ್ಯ ಯಾತ್ರೆಗಳ ನಂತರ ಮೂರನೆಯ ಸಾಹಿತ್ಯ ಯಾತ್ರೆಗಾಗಿ ಬಸವರಾಜ ಕಟ್ಟೀಮನಿಯವರನ್ನು ಕೇಳಿದ್ದೆ ಮತ್ತು ಅವರೂ ಬರಲು ಒಪ್ಪಿಗೆ ಸೂಚಿಸಿದ್ದರು. ಆದರೆ  ಒಮ್ಮೆಲೆ ಅವರ ಆರೋಗ್ಯದ  ತೊಂದರೆ ಉಂಟಾದ್ದರಿಂದ ಕೊನೆಗೆ ನಾನು ನನ್ನ ವಿದ್ಯಾಗುರುಗಳೂ ಹಿರಿಯ ಸಾಹಿತಿಗಳೂ ಆದ ಡಾ. ರಾ. ಯ. ಧಾರವಾಡಕರ ಅವರನ್ನು ಕರೆದುಕೊಂಡುಹೋಗಬೇಕಾಯಿತು.
        ಬ. ಕ. ಎಂದೇ ಸಾಹಿತ್ಯದ ಓದುಗರಿಗೆ ಪರಿಚಿತರಿರುವ ಕಟ್ಟೀಮನಿಯವರು  ಹುಟ್ಟಿದ್ದು ೧೯೧೯ ರ ಅಕ್ಟೋಬರ್  ೫ ರಂದು ಗೋಕಾಕದಲ್ಲಿ. ತಂದೆ ಅಪ್ಪಣ್ಣ ಮತ್ತು ತಾಯಿ ಬಾಳವ್ವ ಇಬ್ಬರೂ ಅನಕ್ಷರಸ್ಥರು. ಬಡತನದಲ್ಲೇ ಬಾಲ್ಯ ಕಳೆದರು. ತಂದೆ ಪೋಲೀಸ ಪೇದೆ ಕೆಲಸ ಮಾಡುವಾಗ ಅಲ್ಲಿ ಇಲ್ಲಿ ವರ್ಗವಾಗುತ್ತಿತ್ತು. ಆದರೂ ಬಸವರಾಜರು ಶಿಕ್ಷಣ ಬಿಡಲಿಲ್ಲ. ಹದಿಹರೆಯದವರಿದ್ದಾಗಲೇ ತಂದೆ ತೀರಿಕೊಂಡರು. ಮ್ಯಾಟ್ರಿಕ್ ಶಿಕ್ಷಣ ಅರ್ಧಕ್ಕೇ ಉಳಿಯಿತು. ಆಗ ಬೆಳಗಾವಿಯಲ್ಲಿ ಆರಂಭವಾದ ಸಂಯುಕ್ತ ಕರ್ನಾಟಕ ಪತ್ರಿಕೆ ಸೇರಿಕೊಂಡರು. ಪುಸ್ತಕ ಓದುವ ಹವ್ಯಾಸ‌ ಇತ್ತು. ಕತೆಕವನ ಬರೆಯುತ್ತಿದ್ದರು.
       ೧೯೪೨ ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು.ಜೈಲಿಗೂ ಹೋದರು.  ಒಲವು ಬೆಳೆಯಿತು. ೪೪ ರಲ್ಲಿ ವಿವಾಹವಾಯಿತು. ೪೯ ರತನಕ ಬೆಂಗಳೂರಿನ ” ಸ್ವತಂತ್ರ ” ಎಂಬ ಪತ್ರಿಕೆಯಲ್ಲಿ ಕೆಲಸ ಮಾಡಿದರು. ಆದರೆ ಅವರ ಕಟುವಾದ ಶೈಲಿಯ ಬರೆಹಗಳಿಂದ ಪತ್ರಿಕಾ ಮಾಲಕರು  ಸಿಟ್ಟಿಗೆದ್ದರು. ಸ್ವಾಭಿಮಾನಿಗಳಾದ ಬ.ಕ. ಕೆಲಸ ಬಿಟ್ಟು ಧಾರವಾಡಕ್ಕೆ ಬಂದು ಕತೆ ಕಾದಂಬರಿ ಬರವಣಿಗೆಗೆ ತೊಡಗಿದರು. ಮತ್ತೆ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದರು.
  ೧೯೪೩ ರಲ್ಲಿ ಅವರ ಮೊದಲ ಕಥಾಸಂಕಲನ ಪ್ರಕಟವಾಯಿತು. ಮೊದಲ ಕಾದಂಬರಿ                          ” ಸ್ವಾತಂತ್ರ್ಯದೆಡೆಗೆ”  ೪೬ ರಲ್ಲಿ ಹೊರಬಂತು. ಬ. ಕ. ಕಾದಂಬರಿಕಾರರಾಗಿ ಹೆಸರು ಪಡೆದದ್ದು ೧೯೫೦ ರಲ್ಲಿ ಹೊರಬಂದ ” ಮಾಡಿ ಮಡಿದವರು ” ಎಂಬ ಕಾದಂಬರಿಯಿಂದ. ಮುಂದೆ ಅದು ಚಲನಚಿತ್ರವೂ ಆಯಿತು. ಸ್ವಾತಂತ್ರ್ಯ ಹೋರಾಟ, ರಾಷ್ಟ್ರಭಕ್ತಿಗಳೇ ಅದರ ವಿಷಯ.


       ಬ. ಕ.  ೪೨ ಕಾದಂಬರಿಗಳನ್ನು ಬರೆದರು. ೧೦ ಕಥಾಸಂಕಲನ, ೨ ಕವನ ಸಂಕಲನ, ೨ ಜೀವನ ಚರಿತ್ರೆ, ೨ ಮಕ್ಕಳ ಕೃತಿ, ೧ ನಾಟಕ, ೧ ಅನುವಾದಿತ ಕೃತಿ, ಪ್ರವಾಸ ಕಥನ, ಆತ್ಮಕಥೆಗಳ ಸಹಿತ ಸುಮಾರು ೬೩ ಕೃತಿಗಳನ್ನು ರಚಿಸಿದರು.
         ಕನ್ನಡದಲ್ಲಿ ನಿರಂಜನರಂತೆ ಬ.ಕ. ಅವರೂ ಶೋಷಿತರ ಮತ್ತು ಮಾಲಕರ ನಡುವಿನ ಸಂಘರ್ಷ, ಬಡ ರೈತಕೂಲಿಕಾರರ ಬದುಕಿನ ಬವಣೆಗಳನ್ನೇ ತಮ್ಮ ಕಾದಂಬರಿಗಳ ವಸ್ತುವಾಗಿ ಬಳಸಿದರು. ಸಮಾಜದ ಡಾಂಭಿಕತನ, ಕಪಟ, ವಂಚನೆಗಳ ವಿರುದ್ಧ ತಮ್ಮ ಕಟುಲೇಖನಿ ಬಳಸಿದರು. ಅವರ ” ಜ್ವಾಲಾಮುಖಿಯ ಮೇಲೆ”  ಕಾದಮಬರಿ ವರ್ಗಸಂಘರ್ಷ ,ಕಾರ್ಮಿಕ ಹೋರಾಟಗಳ ಮೇಲೇ ಇದೆ. ಅದು ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆಯಿತು. ಸೋವಿಯತ್ ರಷ್ಯಾ ನೆಹರೂ ಪ್ರಶಸ್ತಿಯನ್ನೂ ಪಡೆಯಿತು. (೧೯೬೮) .
            ಕ್ರಾಂತಿಕಾರಿ ಬರೆಹಗಾರರೆಂದೇ ಖ್ಯಾತಿವೆತ್ತ.   ಬ. ಕ. ಅವರು ಬರೆದ ” ಜರತಾರಿ ಜಗದ್ಗುರು, ” ಮೋಹದ ಬಲೆಯಲ್ಲಿ ” ಮತ್ತು ” ಸಾಕ್ಷಾತ್ಕಾರ ” ಎಂಬ ಕಾದಂಬರಿಗಳು ಕಪಟ ಸನ್ಯಾಸಿಗಳ ಮತ್ತು ವಿಕೃತ ಮನಸ್ಸಿನ ಜನರ ಆಷಾಢಭೂತಿತನವನ್ನು ಹೊರಗೆಳೆದು  ಕೆಲವೊಂದು ವಲಯದಲ್ಲಿ ತೀವ್ರ ಪ್ರತಿಭಟನೆಗೂ‌ ಕಾರಣವಾದವು. ಬ.ಕ. ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಅವರ ಜೀವವೂ ಅಪಾಯದಲ್ಲಿ ಸಿಲುಕಿತ್ತು. ಅವರೆಡೆಗೆ ಗುಂಡು ಹಾರಿಸಲಾಗಿತ್ತು.
       ‌ ನೀ ನನ್ನ ಮುಟ್ಟಬೇಡ, ಹರಿಜನಾಯಣ, ಜನಿವಾರ ಶಿವದಾರ, ಬೀದಿಯಲ್ಲಿ ಬಿದ್ದವಳು , ಪಾತರಗಿತ್ತಿ, ಮಣ್ಣು ಮತ್ತು ಹೆಣ್ಣು, ಗೋವಾದೇವಿ ಮೊದಲಾದ ಅವರ ಕಾದಂಬರಿಗಳೆಲ್ಲ ಜನಪ್ರಿಯವಾದವು. ಕೆಲವು ರಾಜಕೀಯ ಮತ್ತು ಐತಿಹಾಸಿಕ ಕಾದಂಬರಿಗಳನ್ನೂ ಬರೆದರು. ಅಕ್ಕಮಹಾದೇವಿಯ ಕುರಿತು ಬರೆದ ಗಿರಿಯ ನವಿಲು , ರಾಣಿ ಚೆನ್ನಮ್ಮ ಸಂಗೊಳ್ಳಿ ರಾಯಣ್ಣ, ಬಸವಣ್ಣನವರ ಕುರಿತೂ ಕಾದಂಬರಿ ಬರೆದರು.
         ೧೯೫೨ ರಲ್ಲಿ ಅವರು ಬರೆದ ” ಹಾಲ ತೊರೆಗೆ ಬೆಲ್ಲದ ಕೆಸರು” ಎಂಬ ಕೃತಿ ೧೫೦ ವಚನ ಮತ್ತು ಅದಕ್ಕೆ ಅವರ ಟಿಪ್ಪಣಿಗಳನ್ನೊಳಗೊಂಡಿದೆ. ಇಂದಿರಾ ಗಾಂಧಿ, ಲೆನಿನ್  ಕುರಿತೂ  ಕೃತಿ ರಚಿಸಿದ್ದು, ” ಕಾದಂಬರಿಕಾರನ ಕಥೆ” ಎಂಬುದು ಅವರ ಆತ್ಮಚರಿತ್ರೆ. ಅದು ೬೦೦ ಕ್ಜೂ ಹೆಚ್ಚು ಪುಟ ಹೊಂದಿದೆ.
       ಬದುಕಿನ ಪೂರ್ವಾರ್ಧವನ್ನು ಪತ್ರಕರ್ತರಾಗಿ ಉತ್ತರಾರ್ಧವನ್ನು ಕಾದಂಬರಿಕಾರರಾಗಿ ಕಳೆದ ಬ.ಕ. ಅವರನ್ನು ೧೯೬೮ ರಲ್ಲಿ ವಿಧಾನ ಪರಿಷತ್ತಿಗೆ ನಾಮಕರಣ ಸದಸ್ಯರನ್ನಾಗಿ‌ಮಾಡಲಾಯಿತು.
       ೧೯೮೦ ರಲ್ಲಿ ಬೆಳಗಾವಿಯಲ್ಲಿ ಜರುಗಿದ ೫೨ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ದೊರಕಿತು. ಅವರನ್ನು  ಜನರು ” ಬೆಳವಲದ ಭಾರ್ಗವ” ಎಂದು ಕರೆದರು. ( ಕಾರಂತರನ್ನು ಕಡಲತೀರದ ಭಾರ್ಗವ ಎಂದ ಹಾಗೆ). ಒಮ್ಮೆ ರೈತಕಾರ್ಮಿಕ ಪಕ್ಷ ಎಂಬ ರಾಜಕೀಯ ಸಂಘಟನೆಯನ್ನೂ ಕಟ್ಟಿದ್ದರು. ಮರಾಠಿಗರ ವಿರುದ್ಧ ದನಿಯೆತ್ತಲು ಹದಿಹರೆಯದಲ್ಲೇ ಬೆಳಗಾವಿಯಲ್ಲಿ ನಾಡನರಿಗಳ ಸಂಘ ಎಂಬ ಸಂಘಟನೆ ಮಾಡಿದ್ದರು..  
         ಬ.ಕ. ಬಗ್ಗೆ ಬರೆಯುತ್ತ ಹಾಮಾ ನಾಯಕರು ” ಮೂಲತಃ ” ಕಟ್ಟೀಮನಿಯವರೇ ಒಂದು ಜ್ವಾಲಾಮುಖಿ” ಎಂದರೆ,  ಎಸ್ವಿಪಿ ಅವರು ಅವರನ್ನು      ” ಕತ್ತಿಮೊನಿ” ಎಂದು ಬಣ್ಣಿಸಿದರು.
            ಬ. ಕ. ಧಾರವಾಡದಲ್ಲಿ  ಕಾದಂಬರಿಯಿಂದ ಬಂದ ಹಣದಿಂದ ಒಂದು ಮನೆ ಕಟ್ಟಿಕೊಂಡು ಸ್ವಲ್ಪ ಕಾಲ ಇದ್ದರೂ ಅವರ ಮೂಲ ಊರಾದ ಮಲಾಮರಡಿಯೇ ಅವರಿಗೆ ಹೆಚ್ಚು ಪ್ರಿಯವಾಗಿತ್ತು. ನಾನೂ ಅನೇಕ ಸಲ ಅಲ್ಲಿಗೆ ಹೋಗಿದ್ದೇನೆ. ಅಡಿಗರು ಹೇಳಿದ ಹಾಗೆ ಬ. ಕ. ಎಂದರೆ ಶುದ್ಧವಾದ ಮನಸ್ಸಿನ ಮಗುವಿನ ನಿಷ್ಕಲ್ಮಷ ಹೃದಯದ ವ್ಯಕ್ತಿ. ನ್ಯಾಯದ ಹಟ, ಸತ್ಯದ ಛಲ , ಉದಾರವಾದ ಭಾವೋದ್ವೇಗ ಅವರ ಗುಣವಿಶೇಷ‌”
          ಸಾಕಷ್ಟು ಕಷ್ಟದ ಜೀವನ ನಡೆಸಿದರೂ ಬ. ಕ.  ತಮ್ಮ ಬರವಣಿಗೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ.  ಅವರನ್ನು ಅತಿ ಹತ್ತಿರದಿಂದ ನಾನು ಬಲ್ಲೆ. ಆ ವಿಷಯದಲ್ಲಿ ಅವರೇ ನನಗೆ ಮಾದರಿ. ನಾನು ಗೋಕಾಕದ  ಒಂದು ಪತ್ರಿಕೆಗೆ ಬರೆಯುತ್ತಿದ್ದ ” ಢಂ ಢಂ ಡಿಗಾ ಡಿಗಾ ” ಎಂಬ ಅಂಕಣವನ್ನು ಖಾಯಂ ಓದುತ್ತಿದ್ದ ಅವರು ಅದರ ಬಗ್ಗೆ ನಾನು ಭೆಟ್ಟಿಯಾದಾಗೆಲ್ಲ ಮೆಚ್ಚುಗೆ ವ್ಯಕ್ರಪಡಿಸುತ್ತಿದ್ದರು. ಕಿರಿಯರ ಬಗ್ಗೆ ಅವರ ಪ್ರೀತಿ ಹಾಗಿತ್ತು. ಅಂತಹವರ ಒಡನಾಟವೇ ನಮ್ಮಂಥವರ ಬದುಕಿನ ಮಧುರ ಕ್ಷಣಗಳಾಗಿವೆ. ಬೆಂಗಳೂರಿನ   ಹೇಮಂತ ಸಾಹಿತ್ಯಕ್ಕಾಗಿ  ಅವರ ಬಗ್ಗೆ ಒಂದು ಕಿರು ಜೀವನ ಚರಿತ್ರೆ ಬರೆಯುವ ಅವಕಾಶ ನನಗೆ ದೊರಕಿತು. ೨೦೧೩ ರಲ್ಲಿ ಅದು‌ ಪ್ರಕಟವಾಗಿದೆ.
        ೨೦೧೯ ರಲ್ಲಿ ಅವರ ಜನ್ಮ ಶತಾಬ್ದಿ ಕಾರ್ಯಕ್ರಮ ನಡೆಯಿತು.

———————————–


‌   ಎಲ್. ಎಸ್. ಶಾಸ್ತ್ರಿ

Leave a Reply

Back To Top