ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ಕವಿತೆಯಲ್ಲ ಮನೆ-ಮನೆ ಕಥೆ.!
ಹೊಟ್ಟೆ ತುಂಬಿದ ಹುಂಬಮಕ್ಕಳಿಗೆ
ಅಮ್ಮನ ಕರಗಳ ಮೇಲಿನ
ಸುಟ್ಟಕಲೆಗಳು ಕಾಣುವುದೆ ಇಲ್ಲ!
ಒಂದು ತುತ್ತು ಕಡಿಮೆಯಾದರೂ
ರೇಗಿ ರಂಪ ಮಾಡುವ ಹೈಕಳಿಗೆ
ತಿನ್ನಲಿಲ್ಲದೆ ಖಾಲಿ ಹೊಟ್ಟೆಯಲಿ
ಬಿಕ್ಕುತ ಹೊದ್ದು ಮಲಗಿದ ಅವ್ವನ
ಹಸಿವು ಸಂಕಟ ಗೋಚರಿಸುವುದಿಲ್ಲ.!
ಬೇಡಿಕೆ ಇಡುವ ಹಠಮಾರಿಮಕ್ಕಳಿಗೆ
ಅಪ್ಪನ ದಣಿದ ಕಾಲಿನ
ಒಡೆದಹಿಮ್ಮಡಿಗಳು ಕಾಣುವುದಿಲ್ಲ.!
ಸೂಟು ಬೂಟು ಕೊಡಿಸಿದರೂ
ತೃಪ್ತಿಯಿರದೆ ಸಿಡುಕುವ ಹೈಕಳಿಗೆ
ಹರಿದು ಕಿತ್ತುಹೋದ ಚಪ್ಪಲಿಯಲಿ
ಕಾಲೆಳೆದುಕೊಂಡು ಕುಂಟುವ ಅಪ್ಪನ
ಕಷ್ಟ ಕೋಟಲೆ ಅರ್ಥವಾಗುವುದೇ ಇಲ್ಲ.!
ಮನೆ ಬಿಡುವೆವೆಂದು ಬೆದರಿಸುವವರಿಗೆ
ಸಾಯುತ್ತೇವೆಂದು ಹೆದರಿಸುವವರಿಗೆ
ಪಾಲಕರ ನರಳಿಕೆ ತಟ್ಟುವುದೇ ಇಲ್ಲ.!
ಮೀಸೆ ಮೂಡಿದ ಹುಡುಗರಿಗೆ
ಹರೆಯ ಬಂದ ಹುಡುಗಿಯರಿಗೆ
ಹೆತ್ತವರ ಭೀತಿ ಬೇಗುದಿ ತಿಳಿವುದಿಲ್ಲ
ಅಮ್ಮನ ದಣಿವು, ಅಪ್ಪನ ಶ್ರಮವು
ಅದೇಕೋ ಅರಿವಾಗುವುದೇ ಇಲ್ಲ.!
ವಿದ್ಯೆ ಉದ್ದಿಮೆಯಾಗಿ ಬದಲಾಗುತ
ಶಾಲೆ ಕೇವಲ ಕಾರ್ಖಾನೆಯಾದ ಮೇಲೆ
ಅಂತರ್ಜಾಲದ ಇಂದಿನ ಪೀಳಿಗೆಯಲಿ
ಅರಿವು ಅಂತಃಕರಣಗಳೇ ಅರಳುತಿಲ್ಲ
ಅಂಕಪಟ್ಟಿ ಹಿಡಿದು ಬೀಗುವ ಅಕ್ಷರಸ್ತರಲಿ
ಅಕ್ಕರೆ ಸಂಸ್ಕಾರ ಸೌಜನ್ಯಗಳೇ ಕಾಣುತಿಲ್ಲ.!
ಎ.ಎನ್.ರಮೇಶ್.ಗುಬ್ಬಿ.
Super sir