ಕಾವ್ಯ ಸಂಗಾತಿ
ಎ. ಹೇಮಗಂಗಾ-
ಗಾಂಧೀಜಿಗೆ
ಆಂಗ್ಲರಾಳಿಕೆಯ ಬೇಗುದಿಯಲಿ
ಬೆಂದ ಬಾಳಿಗೆ ತಂದೆ ನೀ ವಸಂತ
ದಿಟ್ಟ ನಡೆಯಲಿ ಗಟ್ಟಿ ನುಡಿಯಲಿ
ಇಟ್ಟ ಗುರಿ ತಲುಪಿದ ಓ ಸಂತ !
ರಾಷ್ಟ್ರ ಭವಿಷ್ಯದ ಪುಟಪುಟಗಳಲಿ
ಹೊಸ ಭಾಷ್ಯ ಬರೆದ ನೇತಾರ ನೀನು
ನವಮನ್ವಂತರಕೆ ಭದ್ರ ಬುನಾದಿಯ
ಹಾಕಿದ ನಿಜ ಹರಿಕಾರನೇ ನೀನು
ದಶಕಗಳು ಉರುಳಿದರೇನು
ದಾಸ್ಯದ ಕತ್ತಲು ಕಳೆದ ಬಳಿಕ?
ನೈತಿಕ ಮೌಲ್ಯಗಳವಸಾನದಲಿ
ಸ್ವೇಚ್ಛೆಯೇ ಸ್ವಾತಂತ್ರ್ಯವೀ ತನಕ
ಹಿಂಸೆ ಪ್ರತಿಹಿಂಸೆ ವಿಜೃಂಭಿಸಿದೆ
ನಾಡಲ್ಲಿ ಓ ಅಹಿಂಸಾವಾದಿಯೇ!
ಅರಾಜಕತೆ ಬೇರು ಬಿಟ್ಟಿದೆ
ಓ ಶಾಂತಿ ಮಂತ್ರದ ಪ್ರವಾದಿಯೇ !
ಒಂಟಿ ಹೆಣ್ಣು ನಿರ್ಭಯಳಾಗಿ
ನಡೆವುದೆಂತು ನಡುರಾತ್ರಿಯಲಿ ?
ನೂರಾರು ‘ ನಿರ್ಭಯ’ರ ಬಲಿಯಾಗಿದೆ
ಪ್ರತಿದಿನ ಕಾಮದಗ್ನಿಕುಂಡದಲಿ
ರಕ್ಷಣೆ ಎಲ್ಲಿದೆ ಹೆಣ್ಣು ಜೀವಕೆ
ಜನ್ಮದಾತನೇ ಕೀಚಕನಾಗಿರಲು ?
ಮನೆಬೆಳಕದು ನಂದದಿಹುದೇ
ಬೇಲಿಯೇ ಎದ್ದು ಹೊಲ ಮೇಯಲು ?
ಮರೀಚಿಕೆ ಇಂದು ಸಮಾನತೆಯು
ಸಿಲುಕಿ ಜಾತಿ ವೈಷಮ್ಯದಲಿ
ಅಸುನೀಗಿವೆ ಸತ್ಯ ನ್ಯಾಯಗಳು
ಮತಾಂಧರ ಕಾಳಗದಲಿ
ನನಸಾಗಲಿಲ್ಲ ರಾಮರಾಜ್ಯದ
ಕನಸು ಓ ರಾಷ್ಟ್ರಪಿತನೇ ..!
ಮಾನವತೆ ಸತ್ತ ಸೂತಕದಲಿ
ಕೊನೆಗಾಣಲಿಲ್ಲ ಬಾಳ ಯಾತನೆ
—————[
ಎ. ಹೇಮಗಂಗಾ
ತುಂಬಾ ಚಂದವಾಗಿದೆ ಅಕ್ಕಾ ಕವನ… ತಮಗಿದೋ ನೂರು ನಮನ..!
ಸವಿರಾಗಗಳ ಸುಖಸ್ವಪ್ನಗಳ ಶುಭರಾತ್ರಿ ಅಕ್ಕಾ..!