ವಚನ ಸಂಗಾತಿ
ಶರಣ ಹೂಗಾರಮಾದಯ್ಯ
ದಾನಮ್ಮ ಝಳಕಿ
ವಚನನಿಧಿ ಜನರಿಂದ ಜನರಿಗಾಗಿ ಹುಟ್ಟಿ ಜನರ ಮಧ್ಯದಲ್ಲಿಯೇ ಬಾಳಿದ ಸಾಹಿತ್ಯ. ಬಸವಣ್ಣನ ಕಾಲ, ಕಾಯಕ ದಾಸೋಹ ಎಂಬ ಪರಿಕಲ್ಪನೆಗಳನ್ನು ಲೋಕಕ್ಕೆ ಪರಿಚಯಿಸಿದ ಕಾಲವದು. ಕಾಯಕದ ಮೂಲಕ ತಮ್ಮ ಅಂತರಂಗದಲ್ಲಿಯ ದೇವರು ಅಂದರೆ ಚೈತನ್ಯದೊಂದಿಗೆ ಸಂವಾದ ನಡೆಸಿದ ಕಾಲವದು. ಸಂವಾದದ ಮೂಲಕ ಗಟ್ಟಿಯಾದ ನಿಲುವನ್ನು ಕಂಡುಕೊಂಡು ಆ ದಿಶೆಯಲ್ಲಿ ಬಾಳಿ ಬದುಕಿ ಸಮಸಮಾಜವನದನ್ನು ಕಟ್ಟಿದವರು ಶರಣರು. ಕೈಲಾಸವನ್ನು ನಿರಾಕರಿಸಿ ಕಾಯಕದಲ್ಲಿ ಕೈಲಾಸ ಕಂಡವರು ಶರಣರು. 770 ಅಮರಗಣಂಗಗಳಲ್ಲಿ ಕೆಲವರು ವಚನಗಳನ್ನು ರಚಿಸದೇ ಇದ್ದರೂ ಅವರ ನಡೆನುಡಿಯೇ ಶರಣ ತತ್ವವನ್ನು ತಿಳಿಸುತ್ತಿತ್ತು. ಹೀಗೆ ಬಾಳಿ ಬದುಕಿದವರಲ್ಲಿ ಹೂಗಾರ ಮಾದಯ್ಯ ಅವರು ಸಹ ಒಬ್ಬರಾಗಿದ್ದಾರೆ.
ವಿಶ್ವಗುರು ಬಸವಣ್ಣ ಅವರ ನೇತೃತ್ವದಲ್ಲಿ ನಡೆದ ವಚನ ಚಳವಳಿಯಲ್ಲಿ ಹೂಗಾರ ಮಾದಯ್ಯನವರು ಬಸವಣ್ಣ ಅವರ ಶಿಷ್ಯರಾಗಿ ಬಿಲ್ವಪತ್ರೆ, ಲಿಂಗಪೂಜೆ, ಶಿವಪೂಜೆಗೆ ಹೂ ಕಟ್ಟುವ ಕಾಯಕ ಮಾಡುತ್ತಿದ್ದರು.
ಹೂಗಾರ ಸಮಾಜದವರು ಹೂವಿನ ಮನಸ್ಸು ಹೊಂದಿದವರು. ಹೂಗಾರ ಸಮಾಜದವರ ಮನಸ್ಸು ಸಮಾಜವನ್ನು ಅರಳಿಸುವ ಕೆಲಸ ಮಾಡುತ್ತಿದೆ. 12 ನೇ ಶತಮಾನದಲ್ಲಿ ರಾಜನಾದ ಸಕಲೇಶ ಮಾದರಸ ಹಾಗೂ ಹೂಗಾರ ಮಾದಯ್ಯನವರು, ಕಾಯಕದಲ್ಲಿಮುಕ್ತಿ ಮಾರ್ಗವಿದೆ ಎಂದು ಜಗತ್ತಿಗೆ ಸಾರಿದ್ದಾರೆ. ಕಾಯಕ ಜೀವಿಯಾಗಿದ್ದ ಶರಣ ಮಾದಯ್ಯ ಯಾರ ಮನಸ್ಸಿಗೂ ನೋವು ಮಾಡಿದವರಲ್ಲ. ಇವರು ವಚನ ರಚಿಸಲಿಲ್ಲ̤. ಆದರೆ ಜನಪದರ ಹೃದಯದಲ್ಲಿ ಮನೆಮಾಡಿದವರು. ಇವರ ಜೀವನ ಚರಿತ್ರೆಯ ಇನ್ನೂ ಬಗ್ಗೆಯೂ ಸಂಶೋಧನೆಗಳಾಗಬೇಕಿದೆ. ಆದಾಗ್ಯೂ ಜನಪದರಿಂದ ಬಂದ ಹಾಡುಗಳ ಪ್ರಕಾರ ಕೆಲವು ವಿಷಯಗಳನ್ನು ಅರಿಯಬಹುದಾಗಿದೆ.
ಬಾದಾಮಿ ಹತ್ತಿರದ ಒಂದು ಶಿವ ದೇವಾಲಯದಲ್ಲಿ ಮಹಾದೇವ ಎನ್ನುವ ಶಿವ ಭಕ್ತ ಅರ್ಚಕ ವೃತ್ತಿಯನ್ನು ಮಾಡುತ್ತಿದ್ದ. ಐಹೊಳೆಯ ಪಟ್ಟಣದಲ್ಲಿ ವೇದಭಾಸ್ಕರ ಗುಣವತಿ ಎಂಬ ರಾಜ ರಾಣಿಯಾರು ಇರುತ್ತಾರೆ. ಇವರ ಮಗ ಶಿವಯೋಗಿ ಮಲ್ಲರಸ ( ಮಾದರಸ ) ಮುಂದೆ ತರುಣ್ಯಕ್ಕೆ ಬಂದಾಗ ಕಲಕುರ್ಕಿಯ ಅರಸರಾಗುತ್ತಾನೆ. ಬಾದಾಮಿ ಹತ್ತಿರವಾದ ಕಾರಣ ಶಿವಯೋಗಿ ಮಲ್ಲರಸರು ಆಗಾಗ ಮಹಾದೇವ ಪೂಜಿಸುತ್ತಿದ್ದ ಶಿವ ದೇವಾಲಯಕೆ ಭೇಟೆ ಕೊಡುತ್ತಿದ್ದರು. ಹಾಗಾಗಿ ಮಲ್ಲರಸರಿಗೂ ಮಹಾದೇವರಿಗೂ ಆತ್ಮೀಯ ಸ್ನೇಹ ಉಂಟಾಗುತ್ತದೆ.
ಅನಂತಣ ಹುಣ್ಣಿಮೆಯಂದು ಮಹಾದೇವನಿಗೆ ಮಗ ಹುಟ್ಟುತ್ತಾನೆ. ಮಹಾದೇವನಿಗೆ ಶಿವನಲ್ಲಿ ಅಪಾರವಾದ ಶ್ರದ್ದೆ ಭಕ್ತಿ ಇದ್ದ ಕಾರಣ ಅವನಿಗೆ ಮಹಾದೇವ ಎಂದೇ ಹೆಸರಿಡುತ್ತಾನೆ. ತಂದೆ ಮಗನ ಹೆಸರು ಒಂದೇ ಆದ ಕಾರಣ ಊರಿನ ಜನ ಮಗನಿಗೆ ಚಿಕ್ಕ ಮಾದೇವ ಎಂದು ಕರೆಯುತ್ತಾ ಮುಂದೆ ಚಿಕ್ಕ ಮಾದಣ್ಣ ಎಂದು ಕರೆಯುತ್ತಾರೆ.
ಪ್ರತಿದಿನ ಚಿಕ್ಕ ಮಾದಣ್ಣನು ಹೂವು ಪತ್ರೆಗಳನ್ನು ತಂದು, ತಂದೆ ಪೂಜಿಸುತ್ತಿದ್ದ ದೇವಾಲಯದ ಶಿವಲಿಂಗಕ್ಕೆ ಹೂವಿನ ಅಲಂಕಾರವನ್ನು ಮಾಡುತ್ತಿದ್ದ. ಜನರ ಕಣ್ಮನ ಸೆಳೆಯುವಂತೆ ಬಹಳ ಸುಂದರವಾಗಿ ಅಲಂಕರಿಸುವುದನ್ನು ಕರಗತ ಮಾಡಿಕೊಂಡಿದ್ದ. ಬಹಳ ಶ್ರದ್ದೆ ಭಕ್ತಿಯಿಂದ ಹೂವು ಪತ್ರೆಗಳಿಂದ ಹಾರ ಮಾಡುವುದು, ಅಲಂಕರಿಸುವುದು ಮಾದಣ್ಣನ ಕಾಯಕವಾಗಿ ಮುಂದುವರೆಯುತ್ತದೆ. ಭಕ್ತರು ಮಾದಣ್ಣ ಮಾಡುವ ಪತ್ರೆ ಪುಷ್ಪಗಳ ಅಲಂಕಾರವನ್ನು ನೋಡಲೆಂದೆ ಬರುತ್ತಿದ್ದರಂತೆ. ಹಾಗಾಗಿ ಚಿಕ್ಕ ಮಾದಣ್ಣನನ್ನು ಊರಿನ ಜನ, ಅಂದಿನಿಂದ ಹೂಗಾರ ಮಾದಣ್ಣ ಎಂದು ಕರೆಯಲಾರಂಭಿಸುತ್ತಾರೆ. ಇವರ ಹಿರಿಮೆ ಗರಿಮೆಯನ್ನು ಇವರ ಕಾಯಕದಿಂದ ಹಾಗೂ ಜನಪದರ ವಾಣಿಯಿಂದ ಅರಿಯಬಹುದು.
ಬಾದನಿಗೆ ಬಾಸಿಂಗ ಭೂಮಿತಾಯಿಗೆ ದಂಡೆ
ಸಾಲ ಶರಣರಿಗೆ ಸರಮಾಲೆ,
ಸಾಲಶರಣರಿಗೆ ಸರಮಾಲೆ ಕಟಿಕೊಂಡು
ಮಾದಯ್ಯ ಗೆದ್ದ ಕೈಲಾಸ
ಹೀಗೆ ಮಾದಯ್ಯ ಕೈಲಾಸವನ್ನೇ ಗೆದ್ದ ಇಲ್ಲಿ ಮಾದಯ್ಯನೆಂದರೆ ಹೂಗಾರ ಮಾದಯ್ಯನೇ ಎನ್ನಬಹುದು, ಬೆಳವಲದ ಸುಗ್ಗಿಯಲ್ಲಿ ಕಣಕ್ಕೆ ಹೂ ಪತ್ರಿಯನ್ನು ಮಾದಯ್ಯ ನೀಡುತ್ತಿದ್ದ, ಭೂಮಿತಾಯಿಗೆ ದಂಡೆ ಅಂದರೆ ಹೂ. ಸಾಲ ಶರಣರು ಎಂದರೆ ಸುಗ್ಗಿಯ ಕಾಲದಲ್ಲಿ ಬಳಸುತ್ತಿದ್ದ ಗುಂಟೆ, ರಾಗೋಲು, ಕರಿಬಂಟು, ಬಿಳಿಬಂಟು ಇತ್ಯಾದಿ. ಇವುಗಳಿಗೆ ಪತ್ರಿ ಹೂ ನಿಂದ ಪೂಜೆ ಸಲ್ಲಿಸುತ್ತಿದ್ದರು. ಹೀಗೆ ಮೊದಲು ಕಮ್ಮಾರ,ಕುಂಬಾರ, ಬಡಗಿ, ಹೂಗಾರ ಇತ್ಯಾದಿ ಕಾಯಕದ ಮಾಡುತ್ತಿದ್ದ ಜನರಿಗೆ ರೈತರು ಉತ್ಪನ್ನಗಳ ಪಾಲು ನೀಡುತ್ತಿದ್ದರು. ಇವರಿಗೆ ಆಯಗಾರರು ಎಂದೂ ಕರೆಯುತ್ತಿದ್ದರು. ಈ ಜನಪದ ಹಾಡಿನಿಂದ ಹೂಗಾರ ಮಾದಯ್ಯನ ಪರಿಚಯ ಆಗುತ್ತದೆ. ಮಲ್ಲರಸನ ಶಿಷ್ಯನೇ ಮಾದರಸ. ಮಾದರಸನ ಶಿಷ್ಯನೇ ಈ ಮಾದಯ್ಯ, ಮಾದಣ್ಣ ಅಥವಾ ಚಿಕ್ಕ ಮಾದಯ್ಯ, ಮಹಾದೇವ ಎನ್ನಬಹುದು ಇವರೇ ಹೂಗಾರ ಮಾದಯ್ಯನವರಾಗಿರಬಹುದು. ಇವರ ಗುರು ಸಕಲೇಶ ಮಾದರಸ. ಹೂಗಾರ ಮಾದಯ್ಯನವರು ಮಹಾಮನೆಯ ಎಲ್ಲ ತತ್ವಸಿದ್ಧಾಂತಗಳಿಗೆ ಬದ್ಧರಾಗಿ ಸಕಲೇಸ ಮಾದರಸರಿಂದ ಲಿಂಗದೀಕ್ಷೆ ಪಡೆಯುತ್ತಾರೆ.
ಸಕಲೇಶ ಮಾದರಸು ಭಕುತಮಾದಯ್ಯನಿಗೆ
ನಿಕಟಗುರು ಲಿಂಗ ಜಂಗಮನು I ಕಾಯಕದ
ನಿಕಸ ಮಂಟಪಕೆ ಮುಗುತಿಯೂ
ಎಂದು ಜನಪದರು ಹೇಳುತ್ತಾರೆ
ಕಲಕುರ್ಕಿಯ ಅರಸರಾದ ಶಿವಯೋಗಿ ಮಾದರಸರಿಗೂ ಒಬ್ಬ ಮಗ ಇರುತ್ತಾನೆ, ಅವನೇ ಸಕಲೇಶ ಮಾದರಸ. ತಂದೆಯೊಂದಿಗೆ ಸಕಲೇಶ ಮಾದರಸರು ಶಿವನ ದೇವಸ್ಥಾನಕ್ಕೆ ಹೋಗುತ್ತಿದ್ದರು. ಆದ್ದರಿಂದ ಹೂಗಾರ ಮಾದಯ್ಯನವರಿಗು – ಸಕಲೇಶ ಮಾದರಸರಿಗೂ ಸಂಪರ್ಕ ಹೆಚ್ಚಾಗುತ್ತಾ ಹೋಗುತ್ತದೆ. ಮಾದಣ್ಣನಿಗೆ ಸಕಲೇಶ ಮಾದರಸರು ಬಸವಣ್ಣನವರ ವಿಚಾರಗಳನ್ನು ಸಿಕ್ಕಾಗಲೆಲ್ಲ ತಿಳಿಸುತ್ತಾ ಹೋಗುತ್ತಾರೆ. ಆದ್ದರಿಂದ ಹೂಗಾರ ಮಾದಯ್ಯನವರಿಗೆ ಕಲ್ಯಾಣಕ್ಕೆ ಹೊಗಲು, ಬಸವಣ್ಣವರನ್ನು ನೋಡಲು ಕಾತುರತೆ ಹೆಚ್ಚಾಗುತ್ತದೆ. ಸಕಲೇಶ ಮಾದರಸರಿಂದ ಎಲ್ಲಾ ಮಾಹಿತಿಗಳನ್ನು ಪಡೆದು ದಂಪತಿಗಳು ಕಲ್ಯಾಣಕ್ಕೆ ಹೋಗಿ ಬರುವುದಾಗಿ ನಿಶ್ಚಯಿಸಿ, ಕಲ್ಯಾಣಕ್ಕೆ ಬರುತ್ತಾರೆ.
ಹಡಪದ ಅಪ್ಪಣ್ಣನವರಲ್ಲಿ ತಮ್ಮ ಪರಿಚಯಗಳನ್ನೆಲ್ಲಾ ಹೇಳಿಕೊಂಡು ಬಸಣ್ಣನವರನ್ನು ಕಾಣುತ್ತಾರೆ. ಎಲ್ಲಾ ಶರಣ ಸಂಕುಲವನ್ನು ಕಂಡು ಆನಂದವಾಗಿ ಸತೃಪ್ತರಾಗಿ, ನಾವು ಕಲ್ಯಾಣದಲ್ಲೇ ಇರುತ್ತೇವೆ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.
ಕಲ್ಯಾಣದ ನಿಯಮದಂತೆ, ಶರಣನಾದವನು ಮೊದಲು ಕಾಯಕ ಮಾಡಬೇಕು ಅದರಂತೆ ಮಾದಣ್ಣನವರು ತಾವು ಮಾಡುತ್ತಿದ್ದ ಹೂ ಪತ್ರೆಯ ಕಾಯಕವನ್ನೇ ಪ್ರತಿದಿನ ಶರಣರ ಲಿಂಗಪೂಜೆಗೆ ಹೂಪತ್ರಿಗಳನ್ನು ತಂದು ಕೊಡುವ ಕಾಯಕವನ್ನು ಮಾಡುತ್ತಿದ್ದರು.
“ಹೂವು ಪತ್ರೆ ದವಣಗಳು ಆಪು ಶಿವ ಪೊಜೆಗೆನೆ
ತಾಪ ಸಂಸಾರ ನೀಗುವುದಕೆ I ಮಾದಣ್ಣ
ಮಾಪರಿತನದರ ಕಾಯಕವ”
ಹೂಗಾರ ಮಾದಣ್ಣ ಬೇಗುದಯಹರಿಯುವದಕ
ಹೋಗಿ ಹೂ ಪತ್ರಿ ಬನದೊಳಗೆ Iಎತ್ತರಲು
ಜೋಗಿ ಜಂಗಮರ ಶಿವಪೂಜೆ
ಹೀಗೆ ಹೂಗಾರ ಮಾದಣ್ಣ ಶರಣ ಹೂಗಾರ ಮಾದಯ್ಯನಾದ
ಇವರ ಜನ್ಮ ಹಾಗೂ ಕಾಲದ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಇವರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಹೂ ಪತ್ರಿ ನೀಡುತ್ತಿದ್ದರು ಆದ್ದರಿಂದ ಇವರು ಬಸವಣ್ಣನವರ ಸಮಕಾಲೀನರು ಎನ್ನಬಹುದು. ಇವರ ತಂದೆ ಹೆಸರು ಮಹಾದೇವ. ಇವರು ಬಾದಾಮಿಯ ಶಿವ ದೇವಾಲಯದ ಅರ್ಚಕರಾಗಿದ್ದರು. ಹಾಗಾಗಿ ಇವರು ಬದಾಮಿಯ ಸಮೀಪದವರೇ ಇರಬಹುದು. ಇವರು ಎಂ ಜಾಲಿಹಾಳವರು ಎಂಬ ಅಭಿಪ್ರಾಯವಾಗಿದೆ ಅದು ಮಲ್ಲನಾರ ಜಾಲಿಹಾಳವೇ ಅಥವಾ ಭದ್ರನಾಯಕನ ಜಾಲಿಹಾಳವೇ ಎಂಬುದು ಸ್ಪಷ್ಟತೆ ಇಲ್ಲ. ಇದರ ಕುರಿತು ಇನ್ನೂ ಸಂಶೋಧನೆ ಆಗಬೇಕಿದೆ. ಬಾಲಕನಾಗಿದ್ದ ಮಾದಯ್ಯ ತಂದೆಯೊಂದಿಗೆ ಪೂಜಾರಿ ಕಾಯಕ್ಕಾಗಿ ಹೊಂಡ,ಹೊಳೆ, ವನಕ್ಕೆ ಹೋಗಿ ಹೂ ಪತ್ರಿಯನ್ನು ತಂದು ತಂದೆಯ ಕಾಯಕದಲ್ಲಿ ಸಹಾಯ ಮಾಡುತ್ತಿದ್ದ. ಹೂಗಾರ ಮಾದಯ್ಯನ ಹೆಂಡತಿ ಹೆಸರು ಶರಣೆ ಮಾಹಾದೇವಿ. ಅಪ್ಪಟ ಶಿವಭಕ್ತೆ. ಸತಿಪತಿ ಒಂದಾಗಿದ್ದ ಭಕ್ತಿ ಹಿತವಾಗಿಪ್ಪದು ಶಿವಂಗೆ ಎನ್ನುವಂತೆ ಹೂಗಾರ ದಂಪತಿಗಳಿಬ್ಬರು ಸತ್ಯ ಶುದ್ಧ ಕಾಯಕ ಮಾಡುತ್ತಿದ್ದರು. ಬೆಳಗಾಗುತ್ತಲೇ ಎದ್ದು, ವನಕ್ಕೆ ಹೋಗಿ ಹೂ ಪತ್ರಿ ತಂದು, ಶರಣರ ಶಿವಪೂಜಿಗೆ ಒದಗಿಸುವುದೇ ಇವರ ಕಾಯಕವಾಗಿತ್ತು. ಆದ್ದರಿಂದಲೇ ಇವರಿಗೆ ಹೂಗಾರ ಮಾದಯ್ಯ ಎನ್ನುತ್ತಿರಬಹುದು ಹೀಗೆ ಈ ದಂಪತಿಗಳು ಸದಾ ದಾಸೋಹ ಹಾಗೂ ಜಂಗಮ ಸೇವೆ ಮಾಡುತ್ತಾ ಜೀವನ ನಿರ್ವಹಿಸುತ್ತಿದ್ದರು.
ಹಿಗ್ಗದೇ ಹಣ ಬರಲು
ಕುಗ್ಗದಲೇ ಬರದಿರಲು
ಎಗ್ಗಿಲ್ಲದ ಮಾಡಿ ಕಾಯಕವಾ
ಎಗ್ಗಿಲ್ಲದ ಮಾಡಿ ಕಾಯಕವಾ ಮಾದಯ್ಯ
ಬುಗ್ಗೆ ಪಡೆದಂತೆ ದಾಸೋಹ
ಮಾದಯ್ಯನಿಗೆ ಪತ್ರಿ ಕೊಡವಾ ಬಂದ ಎಂದು ವ್ಯಂಗ್ಯ ಮಾತನಾಡುತ್ತಿದ್ದರು ಕೆಲವರು ಹಣ ಕೊಡುತ್ತಿದ್ದರು ಇನ್ನು ಕೆಲವರು ಕೊಡುತ್ತಿರಲಿಲ್ಲ. ಅವರಿಗೇಕೆ ಹಣ ಕೊಡಬೇಕು? ಅವರೇನು ಹಣ ಕೊಟ್ಟು ತಂದಿದ್ದಾರೆಯೇ? ಗಿಡದಿಂದ ತಂದಿದ್ದಾರೆ ಅಷ್ಟೇ, ಎಂದು ಕೆಲವರು ಹಣ ನೀಡುತ್ತಿರಲಿಲ್ಲವಂತೆ. ಆದಾಗ್ಯೂ ಬಂದಂತ ಪುಡಿಗಾಸನ್ನು ತೆಗೆದುಕೊಂಡು, ದಾಸೋಹ ಸೇವೆಯನ್ನು ನಿರ್ವಹಿಸುತ್ತಿದ್ದರು. ಆದರೆ ದುರಾದೃಷ್ ವಶಾತ್ ಹೂಗಾರ ಮಾದಯ್ಯನವರ ಬಗ್ಗೆ ಯಾವುದೇ ಆಧಾರ, ವಿವರಣೆ ಲಭ್ಯ ಇಲ್ಲ. ಇವರ ವಚನ ಅಥವಾ ಅಂಕಿತವಾದರೂ ಈವರೆಗೆ ಸಿಕ್ಕಿಲ್ಲ. ಇವರು ಕೇವಲ ಹೂ ಮಾರುವ ಶರಣರು ಎಂಬುದನ್ನು ಮಾತ್ರ ಜನಪದ ಸಾಹಿತ್ಯದಿಂದ ಮಾತ್ರ ಕಾಣಬಹುದು. ಅಷ್ಟೇ ಅಲ್ಲದೇ ಭೀಮಕವಿಯ ಬಸವಪುರಾಣ, ಸಿದ್ದಯ್ಯ ಪುರಾಣಿಕವರ ಶರಣ ಚರಿತಾಮೃತ, ಸೋಮನಾಥ ಎಳವ ಅವರ ವಚನಾಮೃತ ಹಾಗೂ ಅಕ್ಕ ಅನ್ನಪೂರ್ಣ ಅವರ ಜಾನಪದದಲ್ಲಿ ಶರಣರು ಎಂಬ ಲೇಖನದಲ್ಲಿಯೂ ಕೂಡ ಇವರ ಉಲ್ಲೇಖವಿದೆ. ಆದರೆ ನಿಖರಾದ ಮಾಹಿತಿ ಇಲ್ಲವಾದರೂ ಸಹ ಜನಪದದಲ್ಲಿ ಕೆಲವು ಮಾಹಿತಿ ಸಿಗುತ್ತದೆ. ಮಾದಯ್ಯನಿಗೆ ಒಬ್ಬ ಮಗನಿದ್ದ ಅವನ ಹೆಸರು ಲಿಂಗಣ್ಣ ಎಂಬುದನ್ನು ಜನಪದರು ಹಾಡುತ್ತಾರೆ.
ಕಲ್ಯಾಣದ ಮನೆ ಆಯ್ತು
ಎಲ್ಲ ಶಿವಶರಣರಿಗೆ
ಮಲ್ಲೆ ಮಾದೇವಿ ಲಿಂಗಣ್ಣ
ಮಲ್ಲೆ ಮಾದೇವಿ ಲಿಂಗಣ್ಣ ಮಗನೊಡನೆ
ಉಲ್ಲಸದಿಂದಿದ್ದ ಮಾದಣ್ಣ
ಈ ಮೇಲಿನ ಜನಪದದ ಹಾಡಿನಿಂದ ಹೂಗಾರ ದಂಪತಿಯ ಮಗನೇ ಲಿಂಗಣ್ಣ ಎಂಬುದು ತಿಳಿಯುತ್ತದೆ. ಈತ ತಂದೆಯ ಕಾಯಕದಲ್ಲಿ ಸಹಾಯ ಮಾಡುತ್ತಿದ್ದ. ಒಂದು ಸಾರಿ ಚಳಿಗಾಲದಲ್ಲಿ ರವಿ ಮೂಡುವ ಮೊದಲು ಹೂ ಪತ್ರಿ ತರಲು ಕಾಡಿಗೆ ಹೋಗಿದ್ದ. ಎಲ್ಲ ಅರಳಿದ ಹೂಗಳು ತಾಮುಂದೆ ತಾಮುಂದೆ ಎನ್ನುವಂತಿದ್ದವು. ಮಾದಯ್ಯನವರು ಹೂವು ಪತ್ರೆಗಳನ್ನು ತರುವುದರಲ್ಲೂ ಒಂದು ವಿಶೇಷತೆ ಇತ್ತು ಎಂದು ಹೇಳುತ್ತಾರೆ ಜನಪದಕಾರರು.
ಬಸವಭಕ್ತನಿಗಾಗಿ ಎಸಳೆಂಟು ಒಡೆದಿರುವೆ
ಹಸನಾದ ಹೂ ಮಲ್ಲಿಗೆ
ಹಸನಾದ ಹೂ ಮಲ್ಲಿಗೆಯು ನಾನಿರುವೆ ನೊಸಲಗಣ್ಣಿಗೆ ನೀಸಲಹು
ಬಾರೋ ಬಾ ಮಾದಯ್ಯ ಬೇರೊಂದು ಬಗೆಯದಲಿ
ಹಾರೋ ಗುಂಗಿಗಳು ಮುಟ್ಟಿಲ್ಲ
ಹಾರೋ ಗುಂಗಿಗಳು ಮುಟ್ಟಿಲ್ಲ ಹೊನ್ನಾವರೀ
ಬೂರಿ ಕೊಯ್ದದ್ದು ಶರಣರಿಗೆ
ಅತ್ತ ಕಡೆ ಕರಿಕೆ ಹೇಳುತ್ತದೆ.
ಕರಿಕೆ ದವಣದ ಕೊನರು ನೆರೆತು ಮೈಮರತಾಡಿ
ಕರೆಯುವವು ಬೀಸಿ ಚಳಿಗಾಳಿ
ಬೆಳಿಗ್ಗೆ ಎದ್ದು ಹೂವು ಪತ್ರೆಗಳನ್ನು ತರಲು ವನಕ್ಕೆ ತೆರಳಿದಾಗ ಹೂವು ಪತ್ರೆಗಳು ಮಾತನಾಡುವಂತೆ ಭಾಸವಾಗುತ್ತಿತ್ತಂತೆ. ಬಾ ಮಾದಯ್ಯ ನಾನು ಬಸವಣ್ಣನವರಿಗೆ, ಬಸವಣ್ಣನ ಭಕ್ತರಿಗೆ, ಶರಣರ ಲಿಂಗ ಪೂಜೆಗೆ ಬರತೀನಿ, ನನ್ನನ್ನು ಇನ್ನು ದುಂಬಿ ಬಂದು ಮುಟ್ಟಿಲ್ಲ, ಆನಂದವಾಗಿ ಅರಳಿರುವೆ, ಶರಣರ ಲಿಂಗದ ಮುಡಿಗೆ ಏರಿ ನನ್ನ ಜೀವನ ಸಾರ್ಥಕ ಮಾಡು ಎನ್ನುತ್ತಿದ್ದವಂತೆ. ಅದಕ್ಕೆ ಪೂರಕವೆಂಬಂತೆ ಮಾದಯ್ಯನವರು ನೀವಲ್ಲದೆ ಮತ್ತೆ ಯಾರನ್ನು ಕರೆದೊಯಲ್ಲಿ ಬನ್ನಿ ಬನ್ನಿ ಎಂದು ಭಕ್ತಿ ಭಾವದಿಂದ ಸಂಭಾಷಣೆ ಮಾಡುತ್ತಾ ಹೂವು ಪತ್ರೆಗಳನ್ನು ಎತ್ತಿಕೊಳ್ಳುತ್ತಿದ್ದರಂತೆ.
ಹೀಗೆ ಹೂಗಾರ ಮಾದಯ್ಯನವರು ತಮ್ಮ ಕಾಯಕವನ್ನು ಸಹ ಬಹಳ ಭಕ್ತಿ ಶ್ರದ್ದೆ ಮಾಡುತ್ತಿದ್ದರು.
ಶರಣರು ಶರಣರ ಜೀವನವು ಸುಂದರ ಹೂ ಇದ್ದಂತೆ. ಮಾದಯ್ಯನವರು ಅದರಂತೆ ಶರಣರಿಂದ ಅರಿವು ಎನ್ನುವ ಮಕರಂದವನ್ನು ಹೀರಿಕೊಂಡು, ತಮ್ಮೊಳಗೆ ಇಟ್ಟುಕೊಳ್ಳುತ್ತಾ ಅನುಭಾವವೆಂಬ ಜೇನುತುಪ್ಪವನ್ನು ಸವಿದವರು, ಅನುಭಾವದ ಸುದೆಯನ್ನು ಕಲ್ಯಾಣದಲ್ಲಿ ಹಂಚಿದವರು. ಕಲ್ಯಾಣದಲ್ಲಿ ಅರಿವಿನ ಪರಿಮಳವನ್ನು ಸೂಸಿದರು ಶರಣ ಹೂಗಾರ ಮಾದಯ್ಯನವರು.
ಎಂದಿನಂತೆ ಮಾದಣ್ಣನಿಗೆ ಹೇಳುತ್ತವೆ ಬಸವಣ್ಣನಿಗಾಗಿ ನಾವು ಅರಳಿದ್ದೇವೆ ಎಂದು ಸಕಲ ಜೀವಿಗಳಿಗೆ ಲೇಸನ್ನೇ ಬಯಸುವನಿಲುವನ್ನು ಆ ದೇವನಿಂದ ಸೃಜಿಸುವ ಹೂವಿಗೂ ಆ ಮನಸ್ಥಿತಿ, ಭಾವ ಇತ್ತು ಪ್ರತಿಯೊಂದು ಚರಾಚರ ಕೂಡ ಶರಣರ ಕಾಯಕ ದಾಸೋಹ ತತ್ವ ಅನುಸರಿಸುತ್ತಿದ್ದವು ಎನ್ನಬಹುದು. ಹೀಗೆ ಮಾದಣ್ಣ ಕಾಯಕವನ್ನು ಭಕ್ತಿಯ ರೂಪದಲ್ಲಿ ಸದಾ ಮಾಡುತ್ತ, ಜಂಗಮಕ್ಕೆ ಸಲ್ಲಿಸುತ್ತಿದ್ದ ಎನ್ನಬಹುದು.
ಶಿವನೂ ಸಹ ಇವನ್ನು ಮೆಚ್ಚಿದ್ದನಂತೆ, ಒಂದು ಸಾರಿ ಶಿವ ಜಂಗಮ ವೇಷದಲ್ಲಿ ಬರುತ್ತಾನಂತೆ
ಚಳಿಗೆ ಬಣವೇ ನಡುಗಿ ಬಳಲುತ್ತಿದೆ ಮಾದಯ್ಯ
ಚಳಿಗಂಜಿ ಹೊನಲ ಕೆಚ್ಚಿಟ್ಟು
ಚಳಿಗಂಜಿ ಹೊನಲ ಕೆಚ್ಚಿಟ್ಟು ಬಣಕಾಸಿ
ಸುಳಿಹೊಗೆಯ ಮಂಜು ನೋಡಲ್ಲಿ
ಶರಣರೆಲ್ಲರೂ ಕೂಡಿ ಕರುಣೆಯಿಲ್ಲದ ನಿನ್ನ
ತರಲು ಹೂ ಪತ್ರಿ ಕಳಿಸಿದರು
ನಿನ್ನೊಡಿ ಮರಗುವೆ ಎದೆ ಕರಗಿ
ಹೀಗೆ ಶಿವ ಅವರನ್ನು ಪ್ರಶ್ನಿಸುತ್ತಾ, ಮಾದಯ್ಯ ನೀನ್ಯಾಕ ಜಡಮತಿಗಳ ಸಹವಾಸ ಬಿಟ್ಟು ನನ್ನಜೊತೆ ಕೈಲಾಸಕ್ಕೆ ಬರಬಾರದು ಎಂದು ಕೇಳುವನು ಅಲ್ಲಿ ನೀನು ಸದಾ ಕಾಲ ಸುಖವಾಗಿರಬಹುದು ಎನ್ನುತ್ತಾನೆ ಎಂದು ಜನಪದರು ಈ ಕೆಳಗಿನಂತೆ ಹಾಡುಗಳಲ್ಲಿ ಹಾಡುತ್ತಾರೆ..
ನಡೆ ನಾವು ಹೋಗೋಣ ಜಡಮತಿಗಳನು ಬಿಟ್ಟು
ಮೃಡನ ಕೈಲಾಸ ಬವಣಕ್ಕೆ
ಮೃಡನ ಕೈಲಾಸ ಬವಣಕ್ಕೆ ಮಾದಯ್ಯ
ಎಂದಾಗ, ಮಾದಯ್ಯ ಪ್ರತ್ಯುತ್ತರವಾಗಿ ಹೀಗೆ ಹೇಳುತ್ತಾನೆಂದು ಜನಪದರ ಹಾಡಿನಲ್ಲಿವೆ.
ಸುಡಲಿ ಬೇಡ ಎನಗೆ ನಿನ್ನ ಕೈಲಾಸ
ಕಾಯಕವೇ ಕೈಲಾಸ ಮಾಯೆ ಕೊಲ್ಲುವ ಕೆಲಸ
ಆಯು ಬೆಸವುದಕ್ಕೆ ಸಾಹಸವು ಜಗದೊಳಗೆ
ಹೇಯ ಸಂಸಾರ ಬೀಗುವದಕೆ
ಮಾದಯ್ಯ ಶಿವನಿಗೆ ದಿಟ್ಟವಾಗಿ ಹೀಗೆ ಹೇಳುತ್ತಾನೆ. ನಾನು ಕಾಯಕದಲ್ಲಿಯೇ ಕೈಲಾಸ ಕಂಡಿರುವೆ ಎನ್ನುತ್ತಾ ಹೋಗಯ್ಯ ಹೋಗು ಎನ್ನುತ್ತಾನೆ. ಆಗ ಶಿವ ಮಾದಯ್ಯನಿಗೆ ನನ್ನ ಶ್ರೇಷ್ಠ ಘನ ಪದವಿ ಕೊಡುವೆ ಬಾ ಎಂದು ಕರೆಯುತ್ತಾನೆ, ಆಶೆಯನ್ನು ತೋರಿಸುತ್ತಾನೆ. ಆಗ ಮಾದಯ್ಯನ ಉತ್ತರ ಅತ್ಯದ್ಭುತವಾಗಿದೆ
ಶಿವನೀನು ಹರಿಸಿದರೆ ಭವದೊಳಗೆ ಹೆಚ್ಚಿನದೇ
ಶಿವಪಥಕೆ ಮಿಗಿಲು ಕಾಯಕವು
ಶಿವಪಥಕೆ ಮಿಗಿಲು ಕಾಯಕವು ಜಗದೊಳಗೆ
ಶಿವಮಥಕೆ ಮಾಡೋ ದಾಸೋಹ
ನಿನ್ನ ಸಗ್ಗಕೆ ಹೆಚ್ಚು ನನ್ನ ಕಾಯಕ ಶಿವನೇ
ನನ್ನಿಯಲಿ ಸೇವೆ ಶರಣರಿಗೆ ಸಲ್ಲಿಸಲು
ಹೊನ್ನೇ ಬೆಳೆ ಜಗದೋಳು
ಲಿಂಗಮತ್ತಕ್ಕಾಗಿ ಮಾಡಿದ ದಾಸೋಹ ಸೇವೆ ಕೈಲಾಸದಲ್ಲಿಲ್ಲ. ಹೀಗೆ ದೇವರಿಗೂ ಸಹ ಕಾಯಕದ ಮಹತ್ವ ತೋರಿದವರು ಹೂಗಾರ ಮಾದಯ್ಯ ಎನ್ನಬಹುದು. ಆಗ ಶಿವನು
ಕೇಳಿ ಮಾದನವನಾದ ತಾಳಿ ಶಿವ ತಾ ಮೌನ
ಹೇಳಲದೇ ನಾಚಿ ಬಯಲಾದ ಜಗದೊಳಗೆ
ಕೋಲು ಮಿಂಚಾಗಿ ಮಳೆ ಸುರಿಸಿದ ಜಗದೊಳಗೆ
ಎಂದು ಜನಪದರು ಜನಪದದಲ್ಲಿ ಹಾಡುತ್ತಾರೆ. ಹೀಗೆ ಈ ಸಂವಾದದ ಮೂಲಕ ಶರಣ ಮಾದಯ್ಯನ ಕಾಯಕ ದಾಸೋಹ ನಿಷ್ಠೆ ನೋಡಬಹುದು
ಶರಣರ ಬಳಗದೊಳ ಒಂಟಿಗನು ಮಾದಯ್ಯ
ಕಾಯಕಕೆ ಬಂಟಿಗನು ಎಂದು ಕೊಂಡಾಡಿದನು
ಕಲ್ಯಾಣದ ಹೊಸಮತವ ಸಾರುವ ಗಂಟೆ ಈತನೆಂದು
ಹೀಗೆ ಜನಪದರಲ್ಲಿ ಕಾಯಕದ ಬಂಟ ಮಾದಯ್ಯನೆಂದು ಹೇಳಿದ್ದಾರೆ. ಇಲ್ಲಿ ಮಾದಣ್ಣ ಮತ್ತು ಶಿವನ ನಡುವಿನ ಕಾಲ್ಪನಿಕವಾದರೂ ಅಲ್ಲಿಯ ಸಂಧೇಶವನ್ನು ನೋಡಬೇಕು. ಪುರಾಣ ಪುಣ್ಯಕಥೇಗಳು ವೈಭವೀಕರಿಸುವ ನಿಟ್ಟಿನಲ್ಲಿ ಅನೇಕ ಕಥೆಗಳನ್ನು ಕಟ್ಟಿರಬಹುದು. ಆದರೆ ಅದರ ಹಿಂದಿನ ಆಶಯಗಳನ್ನು ಮಾತ್ರ ಇಲ್ಲಿ ಪರಿಗಣಿಸಿ ಉಳಿದೆಲ್ಲವನ್ನೂ ಗೌಣವಾಗಿಸುವುದು ಒಳಿತು.
ಬೆಳಗಾಗುತ್ತಲೇ ಹೂಗಾರ ಮಾದಣ್ಣ ಸುರ್ಯೋದಯ ಪೂರ್ವದಲಿ ಕಲ್ಯಾಣದ ಸರ್ವ ಶರಣರಿಗೆ ಲಿಂಗಪೂಜೆಗೆ ಬೇಕಾದ ಪುಷ್ಪ ಪತ್ರಿಯನ್ನು ತಂದುಕೊಡುವ ಕಾಯಕದವನಾಗಿದ್ದರಿಂದ ಕೇತಯ್ಯನ ಮನೆಗೂ ಸಹ ಹೋಗುತ್ತಿದ್ದ. ಒಂದು ಸಾರಿ ಹೂ ಪತ್ರಿಯನ್ನು ಕೊಡಲು ಕೇತಯ್ಯನ ಮನೆಗೆ ಹೋದಾಗ ಅಲ್ಲಿ ಕೇತಯ್ಯನ ಸಾವಿನ ಸುದ್ದಿ ಕೇಳಿ, ಅದನ್ನು ಕಲ್ಯಾಣದ ಸರ್ವ ಶರಣರಿಗೆ ಹೇಳಿದನು, ಸುದ್ದಿಯನ್ನು ಮುಟ್ಟಿಸುವುದು ಹೂಗಾರ ಮಾದಣ್ಣನ ಕಾಯಕವೂ ಆಗಿತ್ತು.
ಒಂದು ಸಾರಿ ಹೂಗಾರ ಮಾದಯ್ಯನ ಪ್ರಾಣ ಪಕ್ಷಿ ಹಾರಿ ಹೋದಾಗ, ಹೆಂಡತಿ ಮಾದೇವಿ ಶರಣರಿಗೆ ಮಹಾನವಮಿ ಎಂದು ಶರಣರಿಗೆ ಹೇಳುತ್ತಾ, ಇದು ಶಿವನ ಆಜ್ಞೆ ಎಂದು ಪಾದೋದಕದಿಂದ ಪತಿಯ ಕಳೆಬರಹವನ್ನು ತೊಳೆದು, ಭಸ್ಮ ಹಚ್ಚಿ ಕೂಡಿಸಿ. ತಾನೇ ಕ್ರಿಯಾ ಸಮಾಧಿಯನ್ನು ಅಗೆಯುತ್ತಿರುತ್ತಾಳೆ ಆಗ ಮಲಗಿದ ಮಗ ಎದ್ದು ಲಿಂಗಣ್ಣ ಏನು ಮಾಡುತ್ತಿರುವೆ ಅಮ್ಮಾ ಎಂದು ಕೇಳಿದಾಗ, ಬೆಳಗ್ಗೆ ಮೀಸಲು ನೀರು ಬೇಕು ನಿನ್ನ ತಂದೆಗೆ, ಅದಕ್ಕೆ ಅಗೆಯುತ್ತಿರುವೆ, ಎಂದಾಗ, ಮಗನಿಗೆ ಏನೋ ತಿಳಿಯುವದಿಲ್ಲ, ಒಮ್ಮೆ ತಂದೆ ಹಾಗೂ ಒಮ್ಮೆ ತಾಯಿ ಮುಖ ನೋಡಿದಾಗ, ನಿನಗೆ ತಿಳಿಯದು ನೀನು ಮಲಗು ಎಂದು ತಾಯಿ ನುಡಿವಳು ಆ ಮಾತನ್ನು ಕೇಳಿದಾಗ ಏನೋ ಕಸಿವಿಸಿಯಾಗಿ ಹೆದರಿ, ವಟುಗಳತ್ತ, ಗುರುಗಳತ್ತ ಲಿಂಗಣ್ಣ ಓಡಿ ಹೋದನು.
ಸಕಲ ಮಠಕುಲ ಗುರವೇ ಸಕಲೇಶ ಮಾದರಸ
ನಕಲಿ ಮಾತಲ್ಲ ಅಯ್ಯಯ್ಯೋ
ನಕಲಿ ಮಾತಲ್ಲ ಅಯ್ಯಯ್ಯೋ ತಂದೆಯೇ
ಅಕಟ ನನ್ನಪ್ಪ ಮುನಿದಿರುವಾ
ಅಕಟ ನನ್ನಪ್ಪ ಮುನಿದಿರುವಾ ಬಿರೆಂದು ಬಿಕ್ಕೊಂಡು
ಗುರ್ರೆಂದು ಅವ್ವನಿಗೆ, ಕಿರ್ರೆಂದು ನಾನು ಕೂಗಿದರೂ
ಸುಮ್ಮನಿರುವ, ಜರ್ರೆಂದು ಜರೆದು ಮುಸುಕಿನೋಳ್
ನೀವೇ ಬಂದು ಆತನನ್ನು ಎಬ್ಬಿಸಬೇಕು, ಸಿಟ್ಟನ್ನು ಕಡಿಮೆ ಮಾಡಬೇಕು ಎಂದು ಕೇಳುತ್ತಾನೆ. ಆಗ, ಸಕಲಮಾದರಸ ಈ ಶಿವಯೋಗ ನಿದ್ರೆ ಮುದ್ರೆಯಲ್ಲಿದ್ದ ಮಾದಯ್ಯನನ್ನು ನೋಡಿ,
ಏಳೇಳು ಮಾದಯ್ಯ ಏಳು ಲಿಂಗಾರ್ಚನೆಗೆ
ಕೋಳಿ ಕೂಗುದಕ ಜಾವವಿಲ್ಲ
ಕಾಯಕಕೆ ಏಳು ಕಲ್ಯಾಣ ಶರಣರಿಗೆ
ಹೋಗಿ ತರುವವರ್ಯಾರು ಮಾಗಿಯೋಳ್ ಹೂ ಪತ್ರಿ
ಚಾಗಿ ಮಾದಯ್ಯ ಹೋಗೇಳು
ಎನ್ನುತ್ತಾರೆ. ಎಂದಿನಂತೆ ಕಾಯಕ ಮರೆತರೆ ಶರಣರಿಗೆ ನ್ಯಾಯವೇ ಎಮದು ಪ್ರಶ್ನಿಸುತ್ತಾರೆ. ಮೃತನಾದ ಮಾದಯ್ಯ ಮಲಗಿದ್ದವನು ನಿದ್ರೆಯಿಂದ ಎಚ್ಚರವಾದಂತೆ
ಏಳೇಳು ಕಾಯಕಕೆ ಕೇಳಿ ಮಾದನ ಜೀವ
ಗಾಳಿಯೋಳ್ ಬಂದು ಕಳೆ ತುಂಬಿ
ಗಾಳಿಯೋಳ್ ಬಂದು ಕಳೆ ತುಂಬಿ, ಹುಸಿದೇಹ ತಾಳಿ
ಹೊಸಬೆಳಕು ಕಣ್ ತೆರೆದು
ಹೀಗೆ ಮಾದಯ್ಯ ಲವಲವಿಕೆಯಿಂದ ಎದ್ದು ಕಾಯಕದಲ್ಲಿ ನಿರತನಾಗುತ್ತಾನೆ. ತದನಂತರ ಮಲಗಿದ್ದ ಜಗವು ಏಳುತ್ತದೆ ಎಂದು ಮಹಿಮೆಯನು ಜನಪದರ ಮೂಲಕ ಕಂಪನ್ನು ತಂಪನ್ನು ಬೀರುತ್ತದೆ. ಮಾದೇವಿ ತೊಡಿದ ವರತೆ ಕದಳಿವನವಾಯಿತು ಎಂಬ ಪ್ರತೀಕ ಇದೆ. ಇದನ್ನು ಜನಪದರ ಹಾಡು ದೃಢೀಕರಿಸುತ್ತದೆ.
ಹದಿಬದೆಯು ತೊಡಿರುವ ಎದೆಯಿದ್ದ ಶಿವಗಣಿಯು
ಪೋದ ಪೋದಳಿದಾ ವರತೆ ಕಲ್ಯಾಣದ ಪುರದೊಳಗೆ
ಕದಳಿಬನವೆಂದು ಹೆಸರಾಯಿತು.
ಇದಾದ ಮೇಲೆ ಮಾದಯ್ಯ ಮಾದೇವಿ ಲಿಂಗಣ್ಣವರು ಕಲ್ಯಾಣದಲ್ಲಿ ಶರಣರ ಇಷ್ಠಾರ್ಚನೆ, ಶರಣರ ಪೂಜೆ ಬಜನೆ ಪವಿತ್ರ ಕಾರ್ಯದಲ್ಲಿ ತಲ್ಲೀನರಾಗುತ್ತಾರೆ. ಹೀಗೆ ಸಮರಸ ಭಕ್ತಿಯನ್ನು ತೋರಿ ಕಾಯಕದ ಯೋಗಿಯಾದ. ಕಾಯಕ ನಿಷ್ಟೆಯಿಂದ ಅಂತರಂಗದ ಚೈತನ್ಯವನ್ನರಳಿಸಿದವರು ಶರಣ ಮಾದಯ್ಯ ಹಾಗೂ ಶರಣೆ ಮಾದೇವಿ ಶರಣ ದಂಪಂತಿಗಳು.
ಕಾಯಕ ಭಕ್ತ ಶಿವಶರಣ
ಕ್ರಿಯೆಯಲಿ ಬಯಲಾದ
ಕಾಯಕ ಅಧಿಕವೆಂದು ಮಾದಯ್ಯ ಸಾರಿದನು
ಕಾಯಕಕ್ಕಂಜಿ ಶಿವ ಹರಿಸಿದನು
ಹೀಗೆ ಲಿಂಗನುಡಿಯನೇ ಸಾರಿ ಲಿಂಗದಲಿ ಬಯಲಾದ ಮಾದಯ್ಯ. ಈ ಕ್ರಿಯಾ ಭಕ್ತ ಶಿವಶರಣ ಕ್ರಿಯೆಯಲ್ಲಿ ಬಯಲಾದ. ಕಾಯಕ ಜೀವಿ ಕಾಯಕದಲ್ಲಿ ಬಯಲಾದ. ಹೀಗೆ ಈ ಶರಣರ ಚಿಂತನೆಯನ್ನು , ಸತ್ಯದ ನೆಲೆಯನ್ನು ನಾವು ಶರಣರ ಕಾಯಕದ ಮುಖಾಂತರ ವಿವಿಧ ಮಗ್ಗಲುಗಳನ್ನು, ಮಜಲುಗಳನ್ನು ಅರ್ಥೈಸಿಕೊಳ್ಳಲು ಈ ಶರಣ ಸಂಸ್ಕೃತಿ ಅತ್ಯವಶ್ಯಕ ಎನ್ನಬಹುದು.
ಒಟ್ಟಾರೆ ಹೂಗಾರ ಮಾದಯ್ಯನವರು ಕಾಯಕ ನಿಷ್ಠರು, ತತ್ವಕ್ಕಾಗಿ ನಿಷ್ಠುರವಾದಿಗಳು,ಆತ್ಮವಿಶ್ವಾಸ ತುಂಬುವ ಶರಣದಂಪತಿಗಳು, ವೀರಗಣಾಚಾರಿಗಳು, ಏಕದೇವ ನಿಷ್ಠ ಜಂಗಮರು, ವಚನಗಳ ಪ್ರಸಾರಕರು, ರಕ್ಷಕರು, ನಿತ್ಯ ಪರಾಯಣ ಮಾಡುವ ಯೋಗಿಗಳು, ಹಾಗೂ ಮೂಢನಂಬಿಕೆ ಅಜ್ಞಾನ ಅಳಿಯಬೇಕು ಎನ್ನುವ ಛಲವುಳ್ಳ ದಿಟ್ಟ ಶರಣರಾಗಿದ್ದರು. ಇಂತಹ ಶರಣರ ಬಗ್ಗೆ ಇನ್ನೂ ಸಂಶೋಧನೆಗಳು ಆಗಬೇಕು.
ಆಧಾರ ಗ್ರಂಥಗಳು
1. https://janathavani.com/davanagere/articles/117985/
2. https://e-suddi.com/?p=9452 – ಜನಪದವು ಕಂಡ ದಿಟ್ಟ ಶರಣ ಮೇದಾರ ಕೇತಯ್ಯ – ಡಾ ಶಶಿಕಾಂತ ಪಟ್ಟಣ
3. https://www.lingayatreligion.com/Galary/Hugaara-Maadayya
4. http://www.nationalpublicnews.in.net/2023/09/blog-post_27.html – ಸಂಪಾದನೆ : ಶಿವಪ್ರಸಾದ ಕರ್ಜಗಿ, ದಾವಣಗೆರೆ
5. https://www.youtube.com/watch?v=8tTmMr0nP3Q
6. https://www.youtube.com/watch?v=sAEtRIOLFoE
————————————————–
ಡಾ.ದಾನಮ್ಮ ಝಳಕಿ
ಅರ್ಥಪೂರ್ಣ ಲೇಖನ ಮೇಡಂ ಧನ್ಯವಾದಗಳು
ಸಮಗ್ರವಿಷಯ ಸಂಗ್ರಹ ದೊಂದಿಗೆ ಅರ್ಥಪೂರ್ಣವಾದ ಲೇಖನ ಮೇಡಂ. ಧನ್ಯವಾದಗಳು
ಇತಿಹಾಸದ ಪುಟಗಳಲ್ಲಿ ಕಾಣದೇ ಹೋದ ಶರಣರ ಜೀವನ ಚರಿತ್ರೆ ಹುಡುಕಿ ಮನ ಮುಟ್ಟುವ ಹಾಗೆ ಎಳೆ ಎಳೆ ಯಾಗಿ ಬಿಚ್ಚಿಟ್ಟದ್ದಕ್ಕೆ ಶರಣು ಶರಣಾಥಿ೯ಗಳು
ಅಭಿನಂದಿಸಿ, ಪ್ರೋತ್ಸಾಹಿಸಿದಕ್ಕೆ ಅನಂತ ಅನಂತ ಧನ್ಯವಾದಗಳು ಸರ್
ಅಭಿನಂದಿಸಿ, ಪ್ರೋತ್ಸಾಹಿಸಿದ ಸಹೋದರಿಯರಾದ ಡಾ ಮೀನಾಕ್ಷಿ ಪಾಟೀಲ ಹಾಗೂ ಸುಶೀಲಾ ಗುರವ ಅವರಿಗೆ ಅನಂತ ಅನಂತ ಧನ್ಯವಾದಗಳು
ತುಂಬಾ ಸೊಗಸಾಗಿದೆ ಮೇಡಂ!