ಸಿಂದು ತಾಯಿ ಸಪ್ಕಾಳ್ ಜೀವನ-ಜಯದೇವಿ.ಆರ್.ಯದಲಾಪೂರೆ

 ಸಿಂದು ತಾಯಿ ಸಪ್ಕಾಳ್

ಜಯದೇವಿ.ಆರ್.ಯದಲಾಪೂರೆ

ಬಡತನದ ಬೆಂಕಿಯಲ್ಲರಳಿ
ಧುಮುಕಿ ಸಂಸಾರದ ಕಡಲಲ್ಲಿ
ಒಡಲಲ್ಲಿ ಮೊಗ್ಗು ಮೂಡಿರಲು
ಸಂಗಾತಿಯ ಸಂಶಯ ಕಿಚ್ಚಿಗೆ ಬಲಿಯಾಗಿ
ಮಾನ ರಕ್ಷಣೆಗಾಗಿ ಸ್ಮಶಾನದಲ್ಲಿ ನೆಲಸಿ
ಶಿವನಿಶ್ಚಯ ರುದ್ರಭೂಮಿ ತನ್ನದಾಗಿಸಿಕೊಂಡಳು
ತಾನೆ ಭಿಕ್ಷುಕಿಯಾದರು ಸಾವಿರಾರು ಅನಾಥ ಮಕ್ಕಳಿಗೆ ಪ್ರೀತಿಯ ಸೆರಗು ಹೊದಿಸಿ ಪೋಷಿಸಿ
ಮಹಾತಾಯಿಯಾದ ಸಿಂಧುತಾಯಿ ಕಾರ‍್ಯ ವೈಖರಿ ನೋಡಾ! ಜರಪ್ರಿಯ ಬಸವೇಶಾ.

ಸಿಂಧುತಾಯಿ ಬಾಲ್ಯದಿಂದಲೇ ಬಡತನದಿಂದ ಬೆಂದು ನೊಂದು ಗಟ್ಟಿ ಮನಸ್ಸಿನಿಂದ ದಿಟ್ಟ ಹೋರಾಟಗಾರ‍್ತಿಯಾಗಿದ್ದಳು. ಅಲ್ಲದೆ ಬಡವರ ದುರ್ಬಲರ ಬಂಧುವಾಗಿದ್ದಳು. ತನ್ನ ಬಿಚ್ಚು ಮನಸ್ಸಿನಿಂದ ಅನೇಕ ಸಮಾಜೋದ್ದಾರಕ ಕಾರ‍್ಯಗಳನ್ನು ಕೈಗೊಳ್ಳುತ್ತಿದ್ದಳು .ಇವಳು ಎಂಥ ವಿನಯ ಶೀಲ ಮನಸ್ಸಿನವಳೆಂದರೆ ಕಲ್ಲು ಮನಸ್ಸಿನಂತ ಹೃದಯವುಳ್ಳವರನ್ನು ತನ್ನ ನಯವಾದ ಮಾತಿನಿಂದ ಹೂವಿನಂತೆ ಅರಳಿಸುವಂತ ಸಂಪನ್ನಳು. ತನ್ನ ಉತ್ತಮ ಕೆಲಸ ಕಾರ‍್ಯಗಳಿಂದ ಉನ್ನತ ಭಾಷ಼ಣ ,ಹಾಡು ಹಾಗು ಶಾಯಿರಿಗಳಿಂದ ಪ್ರತಿಯೊಬ್ಬರ ಮನ ಮನೆಯಲ್ಲಿ ಪ್ರೀತಿಯ ಹಣತೆ ಹಚ್ಚಿದ ಗುಣವಂತೆ. ಸಮಾಜದಲ್ಲಿ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಭಿಕ್ಷೆ ಬೇಡುವವರನ್ನ ನಾವು ನೋಡಿದ್ದೇವೆ. ಕಂಡಿದ್ದೇವೆ. ಆದರೆ ತನಗೆ ವಾಸಕ್ಕೆ ಒಂದು ಸೂರು ಇಲ್ಲದೆ ಒಂದ್ದೂತ್ತು ಊಟಕ್ಕು ಗತಿಯಿಲ್ಲದೆ ತಾನೆ ಭಿಕ್ಷುಕಿಯಾಗಿ ಹೊಟ್ಟೆ ತುಂಬಿಕೊಳ್ಳುತ್ತಿದ್ದಳು. ಆದರೆ ಬಸ್ ನಿಲ್ದಾಣದಲ್ಲಿ ,ರೈಲ್ವೆ ನಿಲ್ದಾಣದಲ್ಲಿ ಗುಡಿಗುಂಡಾರಗಳ ಮುಂದೆ ಹಸಿವಿನ ದಾಹದಿಂದ ನರಳುವ ಅನಾಥ ಮಕ್ಕಳಿಗೆ ಪ್ರೀತಿಯ ಸೆರಗು ಹೊದೆಸಿದಳು.ಹಗಲಿರುಳು ಭಿಕ್ಷೆ ಬೇಡಿ ಅನಾಥ ಮಕ್ಕಳ ಹೊಟ್ಟೆ ತುಂಬಿಸಿದ್ದಲ್ಲದೆ ಅವರಿಗೆ ವಿದ್ಯೆ ಕಲಿಸುವ ಜವಾಬ್ದಾರಿ ಹೊತ್ತು ಮಹಾತಾಯಿಯಾದಳು.
 ಇಂಥ ಮಹಾನ್ ತಾಯಿ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪಿಂಪ್ರಿ ಮೇಘೇ ಎಂಬ ಪುಟ್ಟ ಹಳ್ಳಿಯಲ್ಲಿ ಅಭಿಮನ್ನುಸಾಠೆ ದಂಪತಿಗಳ ಉದರದಲ್ಲಿ ೧೮/೧೧/೧೯೪೫ರಲ್ಲಿ ಜನಿಸಿದಳು. ಇವಳು ಹೆತ್ತವರಿಗೆ ಬೇಡವಾದ ಮಗುವಾಗಿದ್ದಳು. ಏಕೆಂದರೆ ಮನೆ ತುಂಬ ಮಕ್ಕಳಿದ್ದು ತೀರ ಬಡತನದಿಂದ ಅವರ ಹೊಟ್ಟೆ ತುಂಬಿಸುವುದೇ ಕಷ್ಟವಾಗಿತ್ತು. ಆದರಿಂದ ಆ ಸಮಯದಲ್ಲಿ ಹೆಣ್ಣಾಗಿ ಜನಿಸಿರುವ ಸಿಂಧುತಾಯಿ ಬೇಡವಾದ ಮಗುವಾಗಿದ್ದಳು . ಕಾರಣ ಮನೆಯವರೆಲ್ಲರು ಸಿಂಧುಗೆ ಚಿಂದಿ ಎಂತಲೆ ಕರೆಯುತ್ತಿದ್ದರು. ಆದರೆ ಮುಂದೆ ಒಂದು ದಿನ ಚಿಂದಿಯಾದವಳು ಸಿಂಧುವಾಗಿ ಅನಾಥರ ಬಡವರ ಬಂಧುವಾದುದು ಆಶ್ರ‍ಯವಾದಳು.
 ಸಿಂಧು ಬಾಲ್ಯದಿಂದಲೂ ಚುರುಕು ಸ್ವಭಾವದವಳು .ಓದು ಬರೆಯುವುದೆಂದರೆ ಇವಳಿಗೆ ತುಂಬಾ ಇಷ್ಟ.ತಾಯಿಗೆ ಮಗಳಿಗೆ ಓದಿಸುವುದು ಇಷ್ಟವಿರಲಿಲ್ಲ.ಮನೆಯ ಕೆಲಸ ಮಾಡಿಕೊಂಡಿದ್ದರೆ ಸಾಕು ಎನ್ನುತ್ತಿದ್ದಳು. ಮಗಳು ಓದಬೇಕೆಂಬ ಇಂಗಿತವನ್ನರಿತ ಅಭಿಮನ್ನು ಸಾಠ ತನ್ನೊಂದಿಗೆ ದನ ಕಾಯಲಿಕ್ಕೆ ಕರೆದುಕೊಂಡು ಹೋಗುತ್ತೇನೆಂದು ಹೆಂಡತಿಗೆ ಸುಳ್ಳು ಹೇಳಿ ದಾರಿ ಮಧ್ಯೆಯಿರುವ ಶಾಲೆಗೆ ಕಳುಹಿಸಿ ಪುನ: ಸಾಯಂಕಾಲ ತನ್ನೊಂದಿಗೆ ಮಗಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದನು.ಹೀಗೆ ಓದಿ ನಾಲ್ಕನೆ ತರಗತಿಯವರೆಗೆ ಕಲಿತಳು. ಅಂದು ಬಾಲ್ಯ ವಿವಾಹ ಪದ್ದತಿ ಜಾರಿಯಲ್ಲಿರುವದರಿಂದ ಹೆಂಡತಿಯ ಒತ್ತಾಯದ ಮೇರೆಗೆ ೧೨ ವರ್ಷದ ಸಿಂಧುಗೆ ೩೨ ವರ್ಷದ ಹಿರಿಯವರಾದ ಶ್ರೀಹರಿ ಸಪ್ಕಾಳ್ ಎಂಬುವನಿಗೆ ಕೊಟ್ಟು ಮದುವೆ ಮಾಡಿ ಕೈತೊಳೆದುಕೊಂಡರು. ಏನು ಅರಿಯದ ಮುಗ್ದ ಜೀವ . ಬಾಲ್ಯದಲ್ಲೆ ಬೇರೆಯವರ ಸ್ವತ್ತಾಗಿ ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿತ್ತು. ಸಿಂಧುತಾಯಿಗೆ ಅತ್ತೆ, ಮಾವ , ಗಂಡ ,ಭಾವ , ಮೈದುನ , ನಾದನಿಯರ ಬೈಗುಳ ಸುರಿತ ಹೊಡೆತ ಎಲ್ಲವುಗಳನ್ನು ಸಹಿಸುತ್ತಾ ಬದುಕಬೇಕಾಗಿತ್ತು. ಚಿಕ್ಕ ವಯಸ್ಸಿನಲ್ಲೆ ಮೂರು ಗರ್ಭಪಾತವಾಗಿಇ ನಾಲ್ಕನೆ ಮಗುವಿಗೆ ಗರ‍್ಭವತಿಯಾದಳು .ನೊಂದು ಬೆಂದು ಗಟ್ಟಿಗಿತ್ತಿಯಾದ ಸಿಂಧು ಸಂಘಟನಾ ಜೀವಿಯಾಗಿ ಹೊರಹೊಮ್ಮಿದಳು.ಅನ್ಯಾಯವಾಗುವುದನ್ನು ಕಂಡು ಸುಮ್ಮನೆ ಕೂಡುತ್ತಿರಲ್ಲಿಲ್ಲ. ನ್ಯಾಯಕ್ಕಾಗಿ ಹೋರಾಡುತ್ತಿದ್ದಳು.ಆದರಿಂದ ಇವಳ ಬದುಕಿನಲೊಂದು ದುರ‍್ಘಟನೆ ನಡೆಯುತ್ತದೆ.
 ಊರ ಜನರೆಲ್ಲರು ಸೇರಿ ದನಗಳ ಸಗಣಿ ಸಂಗ್ರಹಿಸುತ್ತಾರೆ.ಅದನ್ನು ಒಬ್ಬ ವ್ಯಾಪಾರಿಗೆ ಮಾರುತ್ತಾರೆ. ಆ ವ್ಯಾಪಾರಿ ಜನರಿಂದ ಸಂಗ್ರಹಿಸಿದ ಸಗಣಿಯಿಂದ ಅಧಿಕ ಲಾಭ ಪಡೆದು ಜನರಿಗೆ ಒಂದಿಷ್ಟು ಹಣ ಕೊಟ್ಟು ಮೋಸಗೊಳಿಸುತ್ತಿದ್ದನು. ಇದನ್ನರಿತ ಸಿಂಧುತಾಯಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ಟು ವ್ಯಾಪಾರಿ ವಿರುದ್ದ ಹೋರಾಟಕ್ಕಿಳಿಯುತ್ತಾಳೆ. ಇದರಿಂದ ಕುಪಿತನಾದ ದಾಮಾಜಿ ಅಸತ್ಕರ್ ಇವಳಿಗೆ ಸುಮ್ಮನೆ ಬಿಟ್ಟರೆ ಊರ ಜನರನ್ನು ಎಚ್ಚರಗೊಳಿಸುತ್ತಾಳೆ. ಇದರಿಂದ ನನ್ನ ವ್ಯಾಪಾರ ನಿಂತು ಹೋಗಬಹುದು .ಅದಕ್ಕಾಗಿ ಅವಳ ವಿರುದ್ದ ಷಡ್ಯಂತ್ರ ರಚಿಸುತ್ತಾನೆ. ಆಕೆಯ ಗಂಡನಿಗೆ ಅವಳು ನೀತಿಗೆಟ್ಟವಳು.ಆಕೆಯ ಗರ್ಬದಲ್ಲಿನ ಮಗು ನಿನ್ನದಲ್ಲ ಅದು ನನ್ನದು ಅದಕ್ಕೆ ನಾನೆ ಸಾಕ್ಷಿ ಅಂತ ಚಾಡಿ ಮಾತು ಹೇಳುತ್ತಾನೆ. ವ್ಯಾಪಾರಿ ಚಾಡಿ ಮಾತನ್ನೆ ನಂಬಿದ ಶ್ರೀಹರಿ ತುಂಬು ಗರ್ಬಿಣಿ ಹೆಂಡತಿಯನ್ನು ಹೊಡೆದು ಬಡಿದು ದನದ ಕೊಟ್ಟಿಗೆಗೆ ತಳ್ಳಿದನು.ಅಲ್ಲೆ ಪ್ರಸವದ ಬೇನೆ ಎದ್ದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಎಂಥ ವಿಚಿತ್ರ ಎಂದರೆ ಗಂಡನ ಹೊಡೆತ ಹೆರಿಗೆಯ ನೋವಿಂದ ನರಳಿ ಸುಸ್ತಾದಳು. ಆದರೂ ಮಗುವಿನ ಹೊಕ್ಕಳ ಬಳ್ಳಿಯನ್ನು ಕಲ್ಲಿನಿಂದ ಜಜ್ಜಿ ಬೇರ‍್ಪಡಿಸುತ್ತಾಳೆ. ಆ ದನದ ಕೊಟ್ಟಿಗೆಯಲ್ಲಿ ತಾಯಿ ಮಗು ಬದುಕುಳಿದುದೆ ಒಂದು ಪವಾಡವೆಂದು ಹೇಳಬಹುದು. ಸಾಯಂಕಾಲದ ಹೊತ್ತು ದನಕರುಗಳು ಓಡಿ ಬಂದು ಕೊಟ್ಟಿಗೆ ಸೇರಿಕೊಳ್ಳುವ ಸಮಯ. ಆ ದನಗಳ ಕಾಲ್ತುಳಿತಕ್ಕೆ ಇವೆರಡು ಜೀವ ಉಳಿಯುತ್ತಿರಲಿಲ್ಲ.ದೇವರ ದಯೆವೇನೋ ಎಂಬಂತೆ ಒಂದು ಆಕಳು ಬಂದು ಎಚ್ಚರ ತಪ್ಪಿದ ಸಿಂಧುತಾಯಿಗೆ ಅಡ್ಡಲಾಗಿ ನಿಂತುಕೊಂಡಿತು.ಆಕಳು ಅಂಬಾ ಎನ್ನುವ ಅವಾಜ ಹಾಕಿದಾಗ ಸಿಂಧು ತಾಯಿ ಎಚ್ಚರಗೊಂಡು ಕಂಕುಳಲ್ಲಿ ಮಗುವನ್ನು ಎತ್ತುಕೊಂಡು ಆಕಳ ಬೆನ್ನ ಮೇಲೆ ಕೈಯಾಡಿಸಿ ನನ್ನನು ಪುನರ್ಜನ್ಮ ಕೊಟ್ಟ ತಾಯಿ ನೀನು ಎಂದು ನಮಸ್ಕರಿಸಿ ಹೊರಟಳು.


 ಆದರೆ ಒಂಟಿ ಹೆಣ್ಣು ಆಗತಾನೆ ಜನಿಸಿದ ಹಸುಗೂಸು ಎಲ್ಲಿಗೆ ಹೋಗುವುದೆಂದು ವಿಚಾರಿಸಿ ತವರಿನ ಹಾದಿ ಹಿಡಿದಳು. ಇತ್ತ ಮಗಳ ವಿಷಯ ಅರಿತ ತಾಯಿ ಮಗಳು ಮನೆಗೆ ಬಂದಾಗ ಮನೆ ಒಳಗೆ ಸೇರಿಸಿಕೊಳ್ಳದೆ “ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ “ ಎಂದು ಕದ ಮುಚ್ಚಿಕೊಂಡಳು.ಕಷ್ಟದ ಕಾಲದಲ್ಲಿ ಹೆತ್ತವಳೆ ಆಸರೆಯಾಗದನ್ನು ಕಂಡು ಸಿಂಧು ತಾಯಿಗೆ ಜೀವನವೆ ಬೇಸರವಾಯಿತ್ತು.ನನ್ನವರ‍್ಯಾರು ಇಲ್ಲದ ಮೇಲೆ ಬದುಕು ಯಾಕೆ ಬೇಕು ? ಆದರಿಂದ ಸಾಯಬೇಕೆಂದು ನಿರ‍್ಧರಿಸಿ ರೈಲು ಹಳಿಗೆ ಹೋಗಿ ತಲೆ ಕೊಟ್ಟು ಮಲಗಿದಳು .ಇನ್ನೇನು ರೈಲು ಬರಬಹುದೆಂಬ ನಿರೀಕ್ಷೆಯಲ್ಲಿದ್ದ ಸಿಂಧುತಾಯಿಗೆ ಒಂದು ಮಗು ಜೋರಾಗಿ ಅಳುವುದನ್ನು ಕಿವಿಗೆ ಬೀಳುತ್ತದೆ. ಸದಾ ಪರರ ಸಹಾಯಕ್ಕಾಗಿ ಚಿಂತಿಸುತ್ತಿರುವ ಸಿಂಧುತಾಯಿ ಮನಕುಲಕಿ ಮಗುವಿನ ಸಹಾಯಕ್ಕೆ ಬರುತ್ತಾಳೆ. ವಿಪರೀತ ಜ್ವರ ಹಾಗು ಹಸಿವಿನಿಂದ ಚಡಪಡಿಸುವ ಮಗುವಿಗೆ ತಾನು ಭಿಕ್ಷೆ ಬೇಡಿ ತಂದಿರುವ ರೊಟ್ಟಿಯನ್ನು ಕೊಟ್ಟಾಗ ಮಗು ತಿಂದು ಶಾಂತವಾಗುತ್ತದೆ.ಈ ಘಟನೆ ಸಿಂಧುತಾಯಿ ಸಾಯಬೇಕೆನ್ನುವ ನಿಲುವನ್ನು ಬದಲಾಯಿಸುತ್ತದೆ.ಇನ್ನು ನಾನು ಸಾಯಬಾರದು ಹಸಿವಿನಿಂದ ಬಳಲುತ್ತಿರುವ ಅನಾಥ ಮಕ್ಕಳ ಹಸಿವನ್ನು ನೀಗಿಸಬೇಕು. ಅವರ ಪಾಲನೆ ಪೋಷಣೆ ಮಾಡಬೇಕೆಂದು ನಿರ‍್ಧರಿಸುತ್ತಾಳೆ .
 ಊರೂರು ಅಲೆಯುತ್ತ ಅಮರಾವತಿ ಜಿಲ್ಲೆಯ ಚಿಕ್ಕಲ್ದಾರಾ ರೇಲ್ವೆ ಸ್ಟೇಷನಿಗೆ ಬರುತ್ತಾಳೆ .ಅಲ್ಲಿ ಬರುವ ಹೋಗುವ ರೈಲುಗಳಲ್ಲಿ ಭೀಕ್ಷೆ ಬೇಡಿ ಅನಾಥ ಮಕ್ಕಳ ಹಸಿವನ್ನು ನೀಗಿಸುತ್ತಿದ್ದಳು. ಹೀಗೆ ಸಿಂಧುತಾಯಿಗೆ ಹಸಿವಿಗೆನೋ ಭೀಕ್ಷೆ ಸಿಕ್ಕಿತ್ತು .ರಾತ್ರಿ ಮಲಗುವ ಚಿಂತೆಯಾಯಿತ್ತು. ಯೌವನದ ಹೆಣ್ಣಿಗೆ ಬೀದಿ ಕಾಮುಕರ ಕಾಟವೆಂದು ತಿಳಿದು ಸ್ಮಶಾನ ಆಯ್ಕೆ ಮಾಡಿಕೊಂಡಳು. ಏಕೆಂದರೆ ಹಗಲ ಹೊತ್ತಿನಲ್ಲೆ ಸ್ಮಶಾನದತ್ತ ಹೊಗಲು ಜನರು ಹೆದರುವಾಗ ರಾತ್ರಿ ಹೊತ್ತಿನಲ್ಲಿ ಯಾರು ಬರುವುದಿಲ್ಲ ಎಂಬುದು ಅರಿತು ಸ್ಮಶಾನದಲ್ಲಿ ನೆಲೆಸಿದ್ದಳು. ಮಳೆ ಛಳಿಗಾಗಿ ಶವದ ಮೇಲಿನ ಹೊದಿಕೆ ಹಸಿದ ಹೊಟ್ಟೆಗೆ ಶವಕ್ಕಿಟ್ಟ ಎಡೆ ಪ್ರಾಣಿ ಪಕ್ಷಿಗಳೊಂದಿಗೆ ತಾನು ತಿಂದಳು. ಇದು ಸಿಂಧುತಾಯಿಯ ಧೈರ‍್ಯ ಮೆಚ್ಚಲೇಬೇಕು. ಮೌಢ್ಯತೆಯಿಂದ ಭೂತ ಪಿಶಾಚಿಗಳ ಕಾಟವೆಂದು ಭಯ ಪಡುವ ಮಾನವರಿಗೆ ಸ್ಮಶಾನದಲ್ಲಿ ಯಾವುದೇ ಆತ್ಮಗಳು ತೊಂದರೆ ಕೊಡುವುದಿಲ್ಲ ಎಂಬುದಕ್ಕೆ ಸ್ಮಶಾನ ನೆಲೆ ಮಾಡಿಕೊಂಡ ಸಿಂಧು ತಾಯಿಯೇ ಸಾಕ್ಷಿ.
 ಸಿಂಧು ತಾಯಿ ಸಾಮಾನ್ಯ ಸರಳ ಮೊಗಲಾಯಿ ಹೆಣ್ಣಾಗಿರಬಹುದು.ಕೇವಲ ನಾಲ್ಕನೆ ತರಗತಿಯವರೆಗೆ ಅಕ್ಷರಜ್ಞಾನ ಪಡೆದರೂ ಒಬ್ಬ ದೊಡ್ಡ ಸಂಘಟನಾಗಾರ್ತಿ ಹೋರಾಟಗಾರ್ತಿ ಎಲ್ಲಕ್ಕಿಂತಲೂ ಹೆಚ್ಚು ಶ್ರಮಜೀವಿ ಅಂತ ಹೇಳಬಹುದು.ಮೊದಲು ಒಂದು ಸಂಸ್ಥೆ ತೆರೆದು ಅದರ ಅಡಿಯಲ್ಲಿ ಆರು ಅನಾಥಾಶ್ರಮಗಳು ತೆರೆದಳು.ಬೀದಿ ಬೀದಿಯಲ್ಲಿ ಅಲೆಯುತ್ತಿದ್ದ ಅನಾಥ ಮಕ್ಕಳನ್ನು ದತ್ತು ಪಡೆದಳು .ಸರಕಾರದಿಂದ ಯಾವುದೇ ಸಹಾಯ ಪಡೆಯದೆ ತಾನೆ ಸ್ವತಃ ಭಿಕ್ಷೆ ಬೇಡಿ ದಾನಿಗಳಿಂದ ಹಣ ಸಂಗ್ರಹಣೆ ಮಾಡುತ್ತಿದ್ದಳು. ಭಾಷಣದಲ್ಲಿ ಉತ್ತಮ ವಾಗ್ಮಿಯಾಗಿರುವದರಿಂದ ಅನೇಕ ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುತಿದ್ದಳು.ಆದರೆ ಇಲ್ಲಿಯು ಪುಕ್ಕಟೆ ಭಾಷಣ ನೀಡುತ್ತಿರಲಿಲ್ಲ.ಏಕೆಂದರೆ ತಾನು ಪುಕ್ಕಟೆ ಭಾಷಣ ಮಾಡುತ್ತ ಹೋದರೆ ಅನಾಥ ಮಕ್ಕಳು ಹಸಿವಿನಿಂದ ಬಳಲುತ್ತಾರೆಂದು ತಿಳಿದು ಇಂತಿಷ್ಟು ಸಂಬಾವನೆ ಪಡೆದು ಅದರಿಂದ ಮಕ್ಕಳ ಊಟದ ವ್ಯವಸ್ಥೆಗಾಗಿ ಬಳಸುತ್ತಿದ್ದಳು.
 ಸಿಂಧುತಾಯಿಯ ಅನಾಥಾಶ್ರಮ ಒಂದು ರೀತಿಯಲ್ಲಿ ಭಿನ್ನ ಏಕೆಂದರೆ ಬೇರೆ ಅನಾಥಾಶ್ರಮಗಳಲ್ಲಿ ಕೇವಲ ಹದಿನೆಂಟು ವರ‍್ಷದವರೆಗೆ ನೋಡಿಕೊಳ್ಳುತ್ತಾರೆ.ಆದರೆ ಸಿಂಧುತಾಯಿ ಅನಾಥಾಶ್ರಮದಲ್ಲಿ ಅವರಿಗೆ ಉದ್ಯೋಗ ವ್ಯಾಪಾರ ದೊರೆಯುವವರೆಗೆ ನೋಡಿಕೊಳ್ಳುತ್ತಾಳೆ.ಕೆಲವರಂತು ಸಿಂಧುತಾಯಿಯ ಅಕ್ಕರೆಯ ಪ್ರೀತಿಯಿಂದ ಮಕ್ಕಳಾದರು ಸಹ ಸಿಂಧುತಾಯಿಯನ್ನು ತೊರೆದು ಹೋಗಲಿಲ್ಲ ಅವಳಿಗೆ ಸಹಾಯಕವಾಗಿ ಅಲ್ಲೆ ಉಳಿದುಕೊಂಡಿದ್ದರು. ಇದು ಅವಳ ಘನ ವ್ಯಕ್ತಿತ್ವ ಎದ್ದು ತೋರಿಸುತ್ತದೆ. ಸಿಂಧುತಾಯಿಗೆ ಓದಬೇಕೆಂಬ ಆಸೆ ಇದ್ದರು ಬಡತನದಿಂದ ಓದಲಿಕ್ಕಾಗಲಿಲ್ಲ. ಆ ನೋವು ಅವಳಿಗಿತ್ತು ಆದರಿಂದ ಅನೇಕ ವಿದ್ಯಾರ‍್ಥಿಗಳು ಚನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್, ಶಿಕ್ಷಕ, ವ್ಯಾಪಾರಿ ಮೊದಲಾದ ಹುದ್ದೆಗಳನ್ನಲಂಕರಿಸಿ ದೇಶದ ನಾನಾ ಕಡೆ ಸೇವೆ ಸಲ್ಲಿಸುತ್ತಿದ್ದಾರೆಂದರೆ ಸಾಮಾನ್ಯ ಮಾತಲ್ಲ.
 ಸಿಂಧುತಾಯಿಯ ಇನ್ನೊಂದು ವಿಶೇಷತೆ ಬಗ್ಗೆ ಹೇಳಲೇಬೇಕು ಅದೆನೆಂದರೆ ಸ್ವಂತ ಮಗಳು ಮಮತಾಗೆ ಅನಾಥಾಶ್ರಮದ ಮಕ್ಕಳೊಂದಿಗೆ ಬೆಳೆಸಿದರೆ ತನ್ನ ಮೋಹ ಮಗಳ ಮೇಲೆ ಅಧಿಕವಾಗಬಹುದೆಂದು ತಿಳಿದು ಪುಣೆಯ ಶ್ರೀಮಂತ್ ದಗ್ಡು ಸೇಟ್ ಹಲ್ವಾಯಿ ಅನಾಥಾಶ್ರಮಕ್ಕೆ ಕೊಟ್ಟು ತನ್ನ ತಾಯಿತನವೆ ಮರೆತು ಸುಮಾರು ೧೫೦೦ ಅನಾಥ ಮಕ್ಕಳ ಸೇವೆ ಮಾಡಿದ ತ್ಯಾಗಮಯಿ ಎಂದು ಹೇಳಲಿಕ್ಕೆ ಹೆಮ್ಮೆ ಎನಿಸುತ್ತದೆ..
 ಅನಾಥ ಮಕ್ಕಳ ಸೇವೆಗಾಗಿ ಸಿಂಧುತಾಯಿ ಪ್ರತಿನಿತ್ಯ ರೈಲು ನಿಲ್ದಾಣ,ಬಸ್ಸ ನಿಲ್ದಾಣ ,ಜಾತ್ರೆ ಸಂತೆ ,ದೇವಸ್ಥಾನ ಮೊದಲಾದ ಜನ ಕಿಕ್ಕರಿದ ಜಾಗದಲ್ಲಿ ಹಾಡಿದ್ದು ಬೇಡಿದ್ದು ಅಪಮಾನ ಅವಮಾನಗೊಂಡಿದ್ದು ಪರದಾಡಿದ ನೋವು ಅಷ್ಟಿಷ್ಟಲ್ಲ .ಆದರೂ ಎದೆಗುಂದದೆ ನಿಂದನೆ ಬೈಗಳಿಗೂ ಶಂಕೆಗಳಿಗೂ ಕುಗ್ಗದೆ ಧ ಅಚಲ ಶೃದ್ದೆ ಮತ್ತು ವಿಶ್ವಾಸದಿಂದ ಪರಿಶ್ರಮಗಳಿಂದ ಮುನ್ನಡೆದಳು.ಅವಳು ನಡೆದ ದಾರಿಯೇ ಅಗಲವಾಗಿ ಬೆಳೆಯಿತು. ಅವಳ ಕಾರ‍್ಯಕ್ಕೆ ಸನ್ಮಾನ ಪ್ರಶಸ್ತಿಗಳು ಹುಡುಕಿ ಬಂದವು.ಒಮ್ಮೆ ಕಾರ‍್ಯಕ್ರಮಕ್ಕೆಂದು ತಮ್ಮ ಹುಟ್ಟೂರಿನ ಬಳಿ ಹೋದಾಗ ಯಾವ ಗಂಡ ಶ್ರೀಹರಿ ಸಪ್ಕಲ್ ಸಿಂಧುತಾಯಿಗೆ ಅನೈತಿಕ ಸಂಬಂದ ಪಟ್ಟ ಕಟ್ಟಿ ಮನೆ ಹೊರ ಹಾಕಿದನೋ ಅವನೇ ಕ್ಷಮೆ ಕೇಳುತ್ತಾನೆ.ತನ್ನಿಂದ ತಪ್ಪಾಯಿತು. ನಾನು ನಿನ್ನೊಂದಿಗಿದ್ದು ನಿನ್ನ ಸಮಾಜ ಕಾರ‍್ಯಕ್ಕೆ ಸಹಾಯ ಮಾಡುತ್ತೆನೆಂದು ಹೇಳುತ್ತಾನೆ.ಆವಾಗ ನಾನು ಕ್ಷಮಿಸಿದ್ದೆಎನೆ .ನೀನು ನನ್ನ ಹತ್ತಿರ ಇರಬಹುದು .ಆದರೆ ಗಂಡನಾಗಿ ಅಲ್ಲ ಒಬ್ಬ ಅನಾಥನಾಗಿ ಅಂತ ಹೇಳಿದ್ದಳು ಕ್ಷಮಯಾಧರಿತ್ರಿ.
 ಒಂದು ಎರಡು ಮಕ್ಕಳ ಹೊಟ್ಟೆ ತುಂಬಿಸಲು ಕಷ್ಟವಾದ ಕಾಲದಲ್ಲಿ ಓರ್ವ ಹೆಣ್ಣು ಹದಿನೈದನೂರು ಮಕ್ಕಳನ್ನು ಸಾಕಿದ್ದು ಸಾಮಾನ್ಯ ಮಾತಲ್ಲ.ಹಣವುಳ್ಳ ಶ್ರೀಮಂತರೇನೊ ಸಾಕಬಹುದು ಆದರೆ ಒಬ್ಬ ನಿರ್ಗತಿಕ ಮಹಿಳೆ ಸಾಕುವುದೆಂದರೆ ಅದೊಂದು ಪವಾಡಸದೃಶವೆಂದು ಹೇಳಬಹುದು,ಸಾವಿರಾರು ಮಕ್ಕಳಿಗೆ ತಾಯಿಯಾಗಿ , ಗುರುವಾಗಿ, ಅಕ್ಕನಾಗಿ,ತಂಗಿಯಾಗಿ ಸೇವೆ ಮಾಡಿದ್ದು ನೋಡಿದರೆ ಸರಕಾರ ವಿಶ್ವವಿದ್ಯಾಲಯ ಮಠ ಮಾನ್ಯಗಳ ಶ್ರೀಮಂತರು ಮಾಡದ ಕೆಲಸ ಓರ‍್ವ ಅನಕ್ಷರಸ್ಥ ಹೆಣ್ಣು ಮಗಳು ಮಾಡಿ ಸ್ತ್ರೀ ಕುಲಕ್ಕೆ ಆದರ್ಶ ಪ್ರಾಯವಾಗಿ ಕಂಗೊಳಿಸಿದ್ದಳು.
 ಅನಾಥ ಮಕ್ಕಳ ಸೇವೆಯಲ್ಲೆ ನಿರತಳಾದ ಸಿಂಧುತಾಯಿಗೆ ಒಮ್ಮೆ ಸಂಘಟನಾ ಜೀವಿಯಾಗಿ ಹೋರಾಟ ಮಾಡಬೇಕಾದ ಅನಿವಾರ‍್ಯ ಬಂದೋದಗಿತ್ತು.ಅದೇನೆಂದರೆ ಚಿಕಲ್ಬರಾ ಊರಿಗೆ ಸಮೀಪದ ಕಾಡನ್ನು ಹುಲಿ ಸಂರಕ್ಷಣಾ ತಾಣವೆಂದು ಸರಕಾರ ಘೋಷಣೆ ಮಾಡಿತ್ತು .ಇದರಿಂದ ಗ್ರಾಮಗಳ ಆದಿವಾಸಿಗಳು ನಿರಾಶ್ರಿತರಾದರು. ಸಿಂಧುತಾಯಿ ಗಂಡನ ಮನೆಯಿಂದ ಹೊರ ಬಿದ್ದಾಗ ಕೆಲವು ಕಾಲ ಆದಿವಾಸಿಗಳೊಂದಿಗೆ ಕಾಲ ಕಳೆದಿದ್ದಳು. ಆದಿವಾಸಿಗಳನ್ನು ಒಟ್ಟುಗೂಡಿಸಿಕೊಂಡು ಜಿಲ್ಲಾ ಕಛೇರಿಗೆ ಕರೆದೊಯ್ದು ಅಂದಿನ ಅರಣ್ಯ ಸಚಿವರಾದ ಛೇದಿಲಾಲ್ ಗುಪ್ತರನ್ನು ಭೇಟಯಾಗಿ ಆದಿವಾಸಿಗಳು ಅನುಭವಿಸುತ್ತಿರುವ ನೋವುಗಳನ್ನು ಸರಕಾರದ ಮುಂದಿಟ್ಟಳು.ಕಾಡಿ ಬೇಡಿ ಸರಕಾರದ ಮನಪರಿವರ್ತಿಸಿ ಪುನರ‍್ವಸತಿ ಕಲ್ಪಿಸುವಂತೆ ಮಾಡಿ ಆದಿವಾಸಿಗಳ ತೊಂದರೆ ದೂರು ಮಾಡಿ ಸಂಘಟನಾ ದೊರೆಯಾದಳು.


 ಸುಮಾರು ಆರೇಳು ಸಂಸ್ಥೆಗಳನ್ನು ಕಟ್ಟಿ ಸಮಾಜ ಕಾರ‍್ಯದಲ್ಲಿ ತೊಡಗಿ ಸಂಘಟನಾ ಜೀವಿಯೆಂದು ಹೋರಾಟಗಾರ‍್ತಿಯಾದ ಸಿಂಧುತಾಯಿಗೆ ಪ್ರಶಸ್ತಿ ಹಾಗು ಗೌರವ ಸನ್ಮಾನಗಳು ಮುಡಿಗೇರಿದವು. ಸಿಂಧುತಾಯಿಯನ್ನು ಕುರಿತು ೨೦೧೦ ರಲ್ಲಿ “ ಮಿ ಸಿಂಧುತಾಯಿ ಸಪ್ಕಾಳ್” ಎಂಬ ಮರಾಠಿ ಭಾಷೆ ಚಿತ್ರ ಅವಳ ಜೀವನದ ಏಳು ಬೀಳುಗಳ ಯಶೊಒಗಾಥೆಯನ್ನು ೫ ನೇ ಲಂಡನ್ ಫಿಲ್ಮ ಫೇಸ್ಟಿವಲ್‌ನಲ್ಲಿ ಪ್ರಥಮ ಪ್ರದರ್ಶನಕ್ಕಾಗಿ ಆಯ್ಕೆಯಾಗಿತ್ತು .ಡಾ|| ಡಿ.ವಾ ಪಾಟಿಲ ಕಾಲೇಜ್ ಆಫ್ ಇಂಜಿನಿಯರಿಂಗ್ ಪುಣೆಯ ವಿಶ್ವವಿದ್ಯಾಲಯದವರು ೨೦೧೬ ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು .ನಂತರ ೨೦೧೭ ರಲ್ಲಿ ಭಾರತದ ರಾಷ್ಟ್ರ ಪತಿಗಳಿಂದ “ ನಾರಿಶಕ್ತಿ “ ಪುರಸ್ಕಾರ ದೊರೆಯಿತು. ೨೦೨೧ ರಲ್ಲಿ ಸಮಾಜ ಸೇವೆ ಕಾರ‍್ಯ ವಿಭಾಗದಲ್ಲಿ ರಾಷ್ಟಪತಿಗಳಾದ ಅಂದಿನ ಶ್ರೀ ರಾಮನಾಥ ಕೋವಿಂದ “ ಅವರಿಂದ “ ಪದ್ಮಶ್ರೀ ಪ್ರಶಸ್ತಿ “ ಹಾಗು “ ಮದರ್ ಥೆರಿಸ್ಸಾ “ಪ್ರಶಸ್ತಿಗಳು ಸಿಂಧುತಾಯಿ ಮುಡಿಗೇರಿದವು.ಇದು ಅಲ್ಲದೆ ಸರಕಾರದಿಂದ ಹಾಗು ಅನೇಕ ಸಂಘ ಸಂಸ್ಥೆಗಳಿಂದ ಏಳನೂರಕ್ಕು ಅಧಿಕ ಪ್ರಶಸ್ತಿಗಳು ಲಭಿಸಿವೆ.
 ೨೩ಆಗಸ್ಟ ೨೦೧೯ ಕೌನ್ ಬನೆಗಾ ಕರೊಡಪತಿ  ಕಾರ‍್ಯಕ್ರಮದಲ್ಲಿ ವಿಶೇಷ ಅತಿಧಿ ಸ್ಪರ್ಧಾಳುವಾಗಿ ಮಗಳು ಮಮತಾಳೊಂದಿಗೆ ಭಾಗವಹಿಸಿ ಅಧಿಕ ಹಣ ಗೆದ್ದುದು ವಿಶೇಷ ಅಂತ ಹೇಳಬಹುದು.ಇಂಥ ಮಹಾನ ಸಾದ್ವಿ ಕೈಕೊಳ್ಳುವ ಸಮಾಜ ಕಾರ‍್ಯಕ್ಕೆ ಸರಕಾರ ಯಾವುದೇ ರೀತಿಯ ಸಹಾಯ ಮಾಡದಿದ್ದರು ಅವಳ ಬದುಕಿನ ಕೊನೆಯ ಗಳಿಗೆಯಲ್ಲಿ ಅವಳಿಗೆ ಪದ್ಮಶ್ರೀ ನೀಡಿರುವುದು ಸಮಧಾನಕರ ಸಂಗತಿ ಅಂತ ಹೇಳಬಹುದು.ಇನ್ನು ಪತ್ರಕರ‍್ತರು ಹಾಗು ಮಾಧ್ಯಮ ಮಿತ್ರರನ್ನು ಕುರಿತು ಹೇಳಬೇಕೆಂದರೆ ಒಬ್ಬ ಸೆಲೆಬ್ರೇಟಿ ಅಥವಾ ರಾಜಕೀಯ ನಾಯಕ ಕುಳಿತದ್ದು ಎದ್ದದು ಸಣ್ಣ ಕಾರ‍್ಯ ಮಾಡಿದರು ಇಡಿ ದಿವಸ ಎಲ್ಲ ಚಾನಲಗಳಲ್ಲಿ ಅವರದೆ ಪ್ರಚಾರ ಪದೇ ಪದೇ ಮಾಡುತ್ತಾರೆ .ಆದರೆ ಅಪೂರ‍್ವ ಸಾಧಕಿಯನ್ನು ಮಾಧ್ಯಮದವರು ಹೆಚ್ಚಿನ ಬೆಳಕಿಗೆ ತರದಿರುವುದು ವಿಷಾದನೀಯ ಸಂಗತಿ.
 ಯಾವುದೇ ಪ್ರಚಾರಕ್ಕೆ ಬಯಸದೆ ಎಲೆ ಮರೆಯ ಕಾಯಂತಿದ್ದ ಸಿಂಧುತಾಯಿ ತನ್ನ ಇಳಿವಯಸ್ಸಿನಲ್ಲೂ ಹಗಲು ಇರುಳು ಎನ್ನದೆ ಅನಾಥ ಮಕ್ಕಳ ಸೇವೆಯಲ್ಲಿ ತೊಡಗಿದ್ದಳು.ಇವಳು ಎಲ್ಲಿಯೂ ತೋರಿಕೆಯ ಬಿಲ್ಡಪ್ ಕೊಡಲಿಲ್ಲ.ಆದರಿಂದ ಇಂತ ಮಹಾತಾಯಿಯ ಪರಿಚಯ ಅವಳ ಗಟ್ಟಿ ವ್ಯಕ್ತಿತ್ವ ಹೋರಾಟದ ಬದುಕಿನ ಬಗ್ಗೆ ಇಂದಿನ ಮಕ್ಕಳಿಗೆ ಪರಿಚಯಿಸಬೇಕಾಗಿದೆ.ಆದರೆ ಮಹಾರಾಷ್ಟ್ರದ ಸರಕಾರ ಅವಳು ಬದುಕಿರುವಾಗ ಆ ಕಾರ‍್ಯ ಮಾಡಲಿಲ್ಲ. ಈಗಲಾದರೂ ಎಚ್ಚೆತ್ತು ಕೊಂಡು ಮಕ್ಕಳು ಓದುವ ಪಠ್ಯ ಪುಸ್ತಕದಲ್ಲಿ ಸಿಂಧುತಾಯಿ ಗಟ್ಟಿ ತನದ ಬದುಕಿನ ಪಠ್ಯ ಸೇರಿಸಿದರೆ ಸಮಾಜ ಸೇವೆ ಮಾಡಬೇಕೆಂದು ಮಿಡಿಯುವ ಕೆಲವು ಮನಸ್ಸುಗಳಿಗೆ ಇವಳ ಸೇವೆ ಪ್ರೇರಕ ಶಕ್ತಿಯಾಗಬಹುದು.ಇತಿಹಾಸ ಅರಿಯದೆ ಇತಿಹಾಸ ನಿರ‍್ಮಿಸಲು ಸಾದ್ಯವಿಲ್ಲವೆಂಬುದು ಘನಸರಕಾರ ಅರಿತುಕೊಂಡು ಮುಂದಿನ ಸುಗಮದಾರಿ ನಿರ್ಮಾಣ ಮಾಡಬೇಕು.
 ಸಿಂಧುತಾಯಿಯ ಘನವ್ಯಕ್ತಿತ್ವದ ಬಗ್ಗೆ ಹೇಳಬೇಕೆಂದರೆ ಸಾಮಾನ್ಯವಾಗಿ ಭಿಕ್ಷುಕರನ್ನು ಅನಾಥರನ್ನು ಕಂಡರೆ ಸ್ವಲ್ಪ ಹಣ ನೀಡಿ ಕೈ ತೊಳೆದುಕೊಳ್ಳುತ್ತೇವೆ.ನಾವ್ಯಾರು ಅಂಥ ವ್ಯಕ್ತಿಗಳ ಬಗ್ಗೆ ಯೋಚಿಸುವುದಿಲ್ಲ.ಆದರೆ ಸಿಂಧುತಾಯಿ ತನ್ನೆಲ್ಲ ಬಂಧು ಬಾಂಧವ್ಯ ಕುಟುಂಬದವರಿಂದ ದೂರವಾಗಿ ನಿರ‍್ಗತಿಕಳಾದರೂ ಇನೊಂದು ಅನಾಥ ಜೀವಕ್ಕಾಗಿ ಅವಳ ಹೃದಯ ಮಿಡಿಯುತ್ತಿತ್ತು ಕಳವಳಿಸುತ್ತಿತ್ತು. ಅದಕ್ಕೆ ಭಿಕ್ಷೆ ಬೇಡಿಯಾದರು ಹದಿನಾಲ್ಕು ನೂರು ಮಕ್ಕಳನ್ನು ಸಾಕಿ ಮಹಾತಾಯಿಯಾದಳು.ಇಷ್ಟೆ ಅಲ್ಲ ತನ್ನ ಜೀವನದ ಕೊನೆಯಗಳಿಗೆಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಒಳಗಾಗಿದರೂ ಅಂಥ ಅನಾರೋಗ್ಯ ಸಂಧರ‍್ಭದಲ್ಲೂ ಅನಾಥ ಮಕ್ಕಳಿಗಾಗಿ ಅವಳ ಜೀವ ತಳಮಳಿಸುತ್ತಿತ್ತು. ಆ ಕಾರಣಕ್ಕಾಗಿ ಸಿಂಧುತಾಯಿ ತನ್ನ ಮರಣದ ನಂತರ ಈ ಅನಾಥ ಮಕ್ಕಳಿಗೆ ಯಾವುದೇ ಸಮಸ್ಯೆ ಆಗಬಾರದೆಂದು ತನ್ನೆಲ್ಲ ಆಸ್ತಿ ಮತ್ತು ಸಂಸ್ಥೆ ಅನಾಥ ಮಕ್ಕಳ ಸೇವೆಗಾಗಿಯೇ ಸದುಪಯೋಗ ಪಡಿಸಬೆಕೆಂದು ಉಯಿಲು ಬರೆದಿಟ್ಟು ೦೪/೦೧/೨೦೨೨ ರಂದು ಬಯಲಲ್ಲಿ ಬಯಲಾದಳು ಮಹಾಸಾದ್ವಿ.


ಜಯದೇವಿ.ಆರ್.ಯದಲಾಪೂರೆ

Leave a Reply

Back To Top