ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಮಳೆ -ಇಳೆ
ಆಷಾಢ ಕಳೆದು ಜಿನುಗಿತು ಸೋನೆಯ ಮಳೆ
ಮತ್ತೆ ತಂಪಾಯ್ತು ಇಳೆ
ಹಸಿರ ಅಬ್ಬರದ ಕಳೆ
ಸರಿಸಾಟಿ ಇರದ ಚೆಲುವೆ
ಸುಡುವ ರವಿಯನು ತಣಿಸುವವಳು ಇವಳೇ
ಹಸಿರು ಹೊದ್ದು ಜೀವನಾಡಿಗೆ ಉಸಿರ ಬಡಿಸುವಳು
ಕಾರ್ಮೋಡಗಳ ಮರೆಯಲಿ ತಂಪಾಗುವಳು
ಲೀಲೆಯಲಿ ಪ್ರಿಯತಮನ ಪೀಡಿಸಲು
ಪ್ರೇಯಸಿಯ ಕಾಣುವ ತವಕದಿ ನೇಸರ
ಮೇಘ ರಾಶಿಯ ಸಂಧಿಯಲಿ
ಪ್ರೇಮ ರಶ್ಮಿಯ ತಾ ಬೀರಿ
ಸರಸದಿ ಕಾವಿನ ಕಚಕುಳಿ ಇಡಲು
ಪ್ರಿಯಕರನ ಮಧುರ ಸ್ಪರ್ಶಕೆ
ಪುಳಕಿತಳಾಗಿ ಧರಿತ್ರಿ
ಹಸಿರ ಸೆರೆಗಿನಡಿ ನಾಚುವ ವೇಳೆ
ನವರಸದ ಪ್ರಜ್ವಲನ ಜಗಕಾಯ್ತು ಆಗಲೇ
ಥಳುಕುವ ಮೈಯಗಲದೆ ತುಂಬಿ ತುಳುಕುವ ನಿತ್ಯ ಸುಂದರಿಯ
ನಯನ ಮನೋಹರ ಅಸದಳ ಸೊಬಗಿಗೆ
ಬೆಚ್ಚನೆ ಹೊಂಗಿರಣಗಳಿಂದ ಸೂರ್ಯ
ಚಿತ್ತಾರ ಬರೆಯುವ ಸಮಯವು
ಬಾನಂಗಳದಿ ಚೆಲ್ಲಿತು ನಾಕದ ವರ್ಣ ವೈವಿಧ್ಯವು
ಸೃಷ್ಟಿಗಾಯಿತು ಸಿಂಗಾರ ಮಾಧುರ್ಯದ ಸವಿಯು
ಶಾಲಿನಿ ಕೆಮ್ಮಣ್ಣು