ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಪಿಸುಗುಡುವ ಕನಸುಗಳು…

ಅವಳಿಗೆ,
ಅಕ್ಕಪಕ್ಕದಲ್ಲಿ ಕುಳಿತುಕೊಂಡು ಅವನ ಹೆಗಲಿಗೆ ತಲೆಯಾನಿಸಿ ಕಿಟಕಿಯಿಂದ ಬೀಸುವ ತಂಗಾಳಿಗೆ ಮುಖಮಾಡಿ…ನವಿರಾದ ನಿಸರ್ಗ ಸೌಂದರ್ಯ ಸವಿಯುವ ಸುಖ…ಅಹ್ಹಾ..!! ಎಂತಹ ಸೊಗಸು..

ಇವನಿಗೆ,
 ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಹತ್ತುವಾಗ ಅವಳನ್ನು ರೇಗಿಸುತ್ತಾ…ಕೈಹಿಡಿದೆಳೆದುಕೊಂಡು ಅವಳ ತುಸು ಮೆಲ್ಲನ ಪಿಸುಮಾತುಗಳಿಗೆ ಕಿವಿಯಾಗುವ ತವಕ…!! ಅವನಿಗೋ ಅವಳ ಪ್ರತಿ ಪಯಣದಲ್ಲಿ ಹೆಜ್ಕೆ ಹಾಕುವ ಸಂಭ್ರಮ…!!

ಈ ಮೇಲಿನ ಎರಡು ಸನ್ನಿವೇಶಗಳು ಬಹುತೇಕ ಎಲ್ಲಾ ಹೆಣ್ಣುಮಕ್ಕಳ, ಗಂಡು ಮಕ್ಕಳ ಕನಸಿನ ಅಭಿಲಾಷೆಯಾಗಿರುತ್ತದೆ. ಅವನೊಂದಿಗೆ ಹೆಜ್ಜೆ ಹಾಕಬೇಕು. ಕೈ ಕೈ ಹಿಡಿದು ಮೆಲ್ಲಗೆ ಪ್ರಕೃತಿಯಲ್ಲಿ ಒಂದಾಗಬೇಕು. ಅವಳು ಅವನೊಳಗೆ ; ಅವನು ಇವಳಳೊಗೆ ಬೆರೆತು ಹೋಗಬೇಕೆನ್ನುವಷ್ಟು ಹುಚ್ಚು ಪ್ರೀತಿ..!! ಇಂತಹ  ಜೋಡಿಗಳು ಸಣ್ಣ ಸಣ್ಣ ಆಶಾಗೋಪುರ ಕಟ್ಟಿಕೊಂಡಿರುತ್ತಾರೆ.

ಆದರೇ…

ಬದುಕು ಕೆಲವು ಸಲ ಅನಿವಾರ್ಯಗಳ ಗೂಡಾಗಿಬಿಡುತ್ತದೆ..!!  ಏನೋ ಅಂದುಕೊಂಡರೇ ಇನ್ನೇನೋ ಆಗಿಬಿಡುತ್ತದೆ. ಅದು ಬಾಳ ಜಂಜಾಟದಲ್ಲಿ ಸಹಜವಾದುದು.

ಅವಳಿಗೆ…

ಶುಭ್ರ ಆಕಾಶದಲ್ಲಿ ಅವನೊಂದಿಗೆ ಜೊತೆಯಾಗಿ  ಗುಡ್ಡ ಬೆಟ್ಟಗಳನ್ನು ನೋಡಬೇಕು. ಜಲಪಾತಗಳ ನೀರಿನ ನಾಟ್ಯವನ್ನು ಹತ್ತಿರದಿಂದ ಕಣ್ಣ ತುಂಬಿಕೊಳ್ಳಬೇಕು. ದೇವಾಲಯಗಳ ದೇವರನ್ನು ನೋಡದಿದ್ದರೂ ಚಿಂತೆಯಿಲ್ಲ ವಾಸ್ತುಶಿಲ್ಪಗಳ ವೈಭವವನ್ನು ನೆನಪಿನಾಳಕ್ಕಿಳಿಸಬೇಕು. ಕಾಡು ಸುತ್ತುತ್ತಾ… ಸುತ್ತುತ್ತಾ ಕೋಗಿಲೆಯ ಇಂಪಾದ ಹಾಡು, ನವಿಲಿನ ನಾಟ್ಯ, ಹುಲಿ ಸಿಂಹಗಳ ಗಂಭೀರ ನಡೆಗೆ, ಪಕ್ಷಿಗಳ ಕಲರವ….ಎಲ್ಲವನ್ನೂ ಮನಸೋ ಇಚ್ಛೆ ಸಡಗರ ಸಂಭ್ರಮದಿಂದ ಅನುಭವಿಸಬೇಕು…!!

ಅವನೊಂದಿಗೆ ಕನಸುಗಳನ್ನು ಹರವಿದಾಗ…ಹುಂ ಹೋಗೋಣ…ಎನ್ನುವ ನಿರಸ ಉತ್ತರ.

ನಾಳೆ ಹೋದರಾಯಿತು..ಮತ್ತೆ ಮುಂದೆ ಹೋದರಾಯಿತು..
ಹೀಗೆಯೇ ರಾಜಕಾರಣಿಗಳನ್ನು ಮೀರಿಸುವ ಅವನ ಆಶ್ವಾಸನೆಗಳು ಗಾಳಿ ಚೆಲ್ಲಿದ ಬಲೂನಗಳಾದಾಗ ಮತ್ತೆ ಅದೇ ನಿರಾಸೆಯ ಕತ್ತಲು…!!

ಮದುವೆ, ಮಕ್ಕಳು, ಉದ್ಯೋಗ, ಮನೆಗೆಲಸ,ತವರು ಮನೆ, ಗಂಡನ ಮನೆ, ಸಂತೆ, ಜಾತ್ರೆ….”ಗುಂಪಿನೊಳಗೆ ಗೋವಿಂದ” ಎನ್ನುವ ಹಾಗೇ ಖಾಸಗಿತನವಿಲ್ಲದ ಕ್ಷಣಗಳು ಎಷ್ಟಿದ್ದರೂ ನಿರಸವೇ ಎನಿಸಿಬಿಡುತ್ತವೆ..!!

 ಯಾರೂ ಇಲ್ಲದೇ ಅವನ  ಹೆಜ್ಜೆಯ ಮೇಲೆ ಹೆಜ್ಜೆ ಹಾಕುವ ಕನಸು ಬಾಳೆಂಬ ಚಕ್ರದೊಳಗೆ ಸಿಕ್ಕು ಪುಡಿ ಪುಡಿಯಾಗಿ ಬಿಡುತ್ತದೆ…!!

ಅವನಿಗೂ ಅಷ್ಟೇ…

ಮಡದಿಯನ್ನು ಎಲ್ಲಿಗಾದರೂ ಕರೆದುಕೊಂಡು ಹೋಗಬೇಕು. ಅವಳೊಡನೆ ಒಂದಾಗಿ ಪಿಸುಗುಟ್ಟುವ ಅವಳ ಮಾತಿಗೆ ಕಿವಿಯಾಗಬೇಕು. ಬಾಳ ಪಯಣದಲ್ಲಿ ಹೆಗಲಿಗೆ ಅವಳ ತಲೆಯಾನಿಸಿದಾಗ ಗಮ್ ಎನ್ನುವ ಮಲ್ಲಿಗೆಯ ಪರಿಮಳ ಮೂಗಿಗೆ ಜೊತೆಯಾಗಬೇಕು…
ಎಂದುಕೊಳ್ಳುತ್ತಲೇ ಅವಳ ಸಾಂಗತ್ಯದ ಪಯಣಕ್ಕೆ ಕೈ ಚಾಚಿದಾಗ ನೂರೆಂಟು ವಿಘ್ನಗಳು…!! ಜವಬ್ದಾರಿಯನ್ನು ಹೊತ್ತವನಿಗೆ  ಸಮಸ್ಯೆಗಳ ಕಾಟ ತಪ್ಪಿದಲ್ಲ… ಹೊರಗಿನವರಿಂದ, ಒಳಗಿನವರಿಂದ ಗೊತ್ತಾಗದಂತೆ ಬೀಳುವ ಹೊಡೆತಗಳನ್ನು ತಡೆಯಲಾಗದೆ, ತತ್ತರಿಸಿ ಹೋಗುವದರಲ್ಲಿಯೇಹೈರಾಣಾಗಿರುತ್ತಾನೆ..!!

“ನನ್ನವಳ ಕನಸನ್ನು ಈಡೇರಿಸಾಗಲಿಲ್ಲವಲ್ಲ ಎನ್ನುವ ಕೊರಗು ಸದಾ ಕಾಡುತ್ತಿರುತ್ತದೆ”.

ಆದರೂ..

ಏನು ಹೇಳಲಾರದ ಚಿಂತೆ. ಹೇಳಿದರೂ ಕೇಳದಷ್ಟು ನಂಬಿಕೆಯನ್ನು ಕಳೆದುಕೊಂಡವನ ಚಡಪಡಿಕೆ, ಸಂಕಟ, ನೋವು, ಯಾತನೆ…ಯಾರಿಗೆ ಬೇಡ..!!

ನಮ್ಮಿಬ್ಬರ ಪಯಣದ ಹಾದಿಯಲ್ಲಿ ಕಳೆದುಕೊಂಡ ರಸನಿಮಿಷದ ಕ್ಷಣಗಳನ್ನು ನೆನಪಾದಾಗ ಕೆಂಪಾಗುವ ಅವಳ ಕಣ್ಣುಗಳು..!!

ಹೆಜ್ಜೆಯೊಳಗೆ ಪಿಸುಗುಡುವ ನೆನಪುಗಳಿಗೆ ತಣ್ಣೀರೆರಚಿದ ಆ..ಕ್ಷಣಗಳು…

ಮಕ್ಕಳ ಶಿಕ್ಷಣ, ಹಬ್ಬಗಳು, ಅವ್ವ, ಅಪ್ಪ ಅಕ್ಕ, ತಂಗಿಯರ ಆಗುಹೋಗುಗಳ ಜತನದ ಕಾಪಾಡುವಿಕೆಯಲ್ಲಿ ಸಾಲ…ಸಾಲ…!! ಮಧ್ಯಮ ಕುಟುಂಬಗಳ ಅನಿವಾರ್ಯತೆಗಳಿಗೆ ಬಡ್ಡಿ ಸಾಲದಲ್ಲಿ ಮುಳುಗಿ ಹೋಗುವ ನಾವುಗಳು… ಬ್ಯಾಂಕ್‌ಗಳ ಪ್ರತಿ ವರ್ಷದ ಆದಾಯದಲ್ಲಿ ಬಹುತೇಕ ಅದಾಯ ಮಧ್ಯಮ ವರ್ಗದ ಜನರದ್ದೇ ಅಂದರೂ ತಪ್ಪಲ್ಲ…!!  ಬಡ್ಡಿ ಕಟ್ಟುವ ಧಾವಂತದಲ್ಲಿ ಮನದಾಳದ ಕನಸುಗಳು ನುಚ್ಚುನೂರಾಗುತ್ತವೆ..!!   ನಮ್ಮಂತಹವರು ಮತ್ತೇನು ಮಾಡಲು ಸಾಧ್ಯ…??

ಕ್ಷಮಿಸು ಮನದನ್ನೇ..

ಬದುಕ ಪಯಣದಲ್ಲಿ ಬರೀ ಜಂಜಾಟದಲ್ಲಿ ಮುಳುಗಿರುವ ನನ್ನ ಹಾಗೂ  ನನ್ನಂತಹವರ ಮಧ್ಯಮ ಕುಟುಂಬದ ಪಾಡು ಇದು.. ಬಾಳ ಪಯಣದ ಒಲುಮೆಯಲಿ ಸಂಗಾತಿಯಾಗಿ ಕೈಹಿಡಿದ ನಿಮ್ಮ ಕನಸುಗಳನ್ನು ಈಡೇರಿಸಲು ಮತ್ತೆ ಮತ್ತೆ  ಪ್ರಯತ್ನಪಡುತ್ತಲೇ ವಿಫಲರಾಗುತ್ತೇವೆ.

ಸ್ವಚ್ಛಂದ ಜೀವನದ ಪಯಣದ ಹೆಜ್ಜೆಯಲ್ಲಿ ನಿಮ್ಮಾಸೆಗಳನ್ನು ಈಡೇರಿಸುವ ಬಲವು ನಮಗೆ ಬರಲಿ…ಒಲವಧಾರೆಯ ಪಯಣದಲ್ಲಿ ಕನಸುಗಳ ಪಿಸುಗುಡುವ ನೆನಪುಗಳು ಸದಾ ಎದೆಯೊಳಗೆ ಹಸಿರಾಗಿರಲಿ….ಎದೆಯ ತುಂಬಾ ಪ್ರೀತಿ ತುಂಬಿದ ನಿಮ್ಮಂತಹ ಸಂಗಾತಿಗಳ ಒಲವು ಬದುಕಿಗೆ ಹೆಚ್ಚಾಗಲೆಂದು ಹಾರೈಸಬಲ್ಲೆ…


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

One thought on “

  1. ಬಹಳಷ್ಟು ಜೋಡಿಗಳ ಕನಸುಗಳನ್ನು ತುಂಬಾ ಸೊಗಸಾಗಿ ಹೆಣೆದಿದ್ದೀರಿ. ಜೀವನದಲ್ಲಿ ಅಂದುಕೊಡ್ಡಿದ್ದೆಲ್ಲವೂ ಕೈಗೂಡುವುದಿಲ್ಲ. ನಿರಾಶರಾಗುವುದಕ್ಕಿಂತ ಇದ್ದುದರಲ್ಲೇ ಜೀವನ ಸವಿ ಅನುಭವಿಸಬೇಕು.
    ಅಭಿನಂದನೆಗಳು.

Leave a Reply

Back To Top