ಡಾ. ಶಶಿಕಾಂತ ಪಟ್ಟಣರವರ ಕೃತಿ ‘ಮಾಟ ಕೂಟವೆಂಬ ತೆಪ್ಪವ ಮಾಡಿ’ ಒಂದು ಅವಲೋಕನ ಡಾ.ದಾನಮ್ಮ ಝಳಕಿ

ಪುಸ್ತಕ ಸಂಗಾತಿ

ಡಾ. ಶಶಿಕಾಂತ ಪಟ್ಟಣ

ಮಾಟ ಕೂಟವೆಂಬ ತೆಪ್ಪವ ಮಾಡಿ’

ಒಂದು ಅವಲೋಕನ

ಡಾ.ದಾನಮ್ಮ ಝಳಕಿ

ಮಾಟ ಕೂಟವೆಂಬ ತೆಪ್ಪವ ಮಾಡಿ
ಲೇಖಕರು :- ಡಾ. ಶಶಿಕಾಂತ ಪಟ್ಟಣ
ಪ್ರಕಾಶಕರು :- ಈಶ್ವರಿ ಪ್ರಕಾನ, ಮೈಸೂರು
ಬೆಲೆ – 156/-

ಪುಟಗಳು: 152 (iv+152=156)

ವೃತ್ತಿಯಲ್ಲಿ ಔಷದೀಯ ವಿಜ್ಞಾನಿ ಆದರೂ ಪ್ರವೃತ್ತಿಯಲ್ಲಿ ಸಂಶೋಧಕ, ವೈಚಾರಿಕ ಚಿಂತಕ, ಪ್ರಗತಿಪರ ಸಾಹಿತಿಗಳು, ಬುದ್ಧ ಬಸವ ಅಂಬೇಡ್ಕರ ಅವರ ತತ್ವಗಳನ್ನು ಮೈಗೂಡಿಸಿಕೊಂಡು ಶರಣರ ತತ್ವ, ಆಶಯಗಳನ್ನು ಬಿತ್ತಿ ಬೆಳೆಯುತ್ತಾ ಸದಾ ಸಾಮಾಜಿಕ ಪರಿವರ್ತನೆಯ ಕನಸು ಕಾಣುತ್ತಿರುವ ಡಾ ಶಶಿಕಾಂತ ಪಟ್ಟಣ ಅವರ ಮಾಟಕೂಟವೆಂಬ ತೆಪ್ಪವ ಮಾಡಿ ಎಂಬ ಗ್ರಂಥ ಅತ್ಯಂತ ವೈಚಾರಿಕ ಹಾಗೂ ಸಂಶೋಧನಾತ್ಮಕ ನೆಲೆಯಲ್ಲಿರುವ  ಮನೋಜ್ಞವಾದ ಗ್ರಂಥವಾಗಿದೆ.
“ ಮಾಟ ಕೂಟವೆಂಬ ಗ್ರಂಥ” ಆಕರ್ಷಣೀವಾದ ಮುಖ ಪುಟ ಹೊಂದಿದ್ದು, ಈಶ್ವರಿ ಪ್ರಕಾಶನ ಮೈಸೂರು ಅವರಿಂದ ಪ್ರಕಟನೆಯಾಗಿದೆ. 2021 ರಲ್ಲಿ ಮೊದಲ ಮುದ್ರಣ ಕಂಡ ಈ ಗ್ರಂಥ ಒಟ್ಟು 156  ಅರ್ಥಪೂರ್ಣ ಪುಟಗಳನ್ನು ಹೊಂದಿದೆ. ಲೇಖಕರ ಕಾರ್ಯವನ್ನು ಅತ್ಯಂತ ಪ್ರಶಂಸನೀಯವಾದ ನುಡಿಗಳ ಮೂಲಕ ಡಾ ಪಿ ಜಿ ಕೆಂಪಣ್ಣವರ ಅವರು  ಮುನ್ನುಡಿ ಹಾಗೂ ಬೆನ್ನುಡಿಯಲ್ಲಿ ತಮ್ಮ ಅಂತರಾಳದ ಭಾವದಲ್ಲಿ ತೆರೆದಿಟ್ಟಿದ್ದಾರೆ.
ವಚನಗಳನ್ನು ನಿರಂತರವಾಗಿ ವೈಜ್ಞಾನಿಕ ಹಿನ್ನೆಲೆಯಲ್ಲಿ ಅನುಸಂಧಾನ ಮಾಡುತ್ತಾ ಅನುಭಾವದ ನೆಲೆಯಲ್ಲಿ, ಅಂತರಂಗದ ಗಟ್ಟಿಯಾದ ಧ್ವನಿಗಳಲ್ಲಿ ವಿವರಿಸಿರುವುದು ಮೌಲಿಕವಾಗಿದೆ. ಒಟ್ಟು40 ವಚನಗಳ ಅನುಸಂಧಾನ ಈ ಗ್ರಂಥದಲ್ಲಿ ಕಾಣಸಿಗುತ್ತದೆ. ಪ್ರತಿಯೊಂದು ವಚನಗಳ ಅನುಸಂಧಾನದಲ್ಲಿ ಎಳೆ ಎಳೆಯಾಗಿ ಒಳ ಅರ್ಥಗಳ ಹರಿವನ್ನು ವಿಸ್ತರಿಸುತ್ತಾ ವೈಚಾರಿಕತೆಯನ್ನು ಕಟ್ಟಿಕೊಡುವ ಈ ಗ್ರಂಥ ಎಲ್ಲರೂ ಓದಲೇಬೇಕಾದ ಗ್ರಂಥವಾಗಿದೆ.
ಮೊದಲನೇಯ ವಚನವಾದ ಕಾಣಬಾರದ ಲಿಂಗ ಎಂಬ ಅಲ್ಲಮ ಪ್ರಭುದೇವರ ವಚನ ವಿಶ್ಲೇಷಣೆಯನ್ನು ಒಳಗೊಂಡಿದೆ.  ಶಿವನೆಂಬುದು ಚೈತನ್ಯದ, ಅರಿವು, ಜ್ಞಾನ, ಮಂಗಳ ಎಂಬ ಪಾರಿಭಾಷಿಕ ಶಬ್ದಗಳ ಅನಾವರಣ ಇಲ್ಲಿ ಮಾಡಿದ್ದಾರೆ. ಈ ವಚನದ ಪ್ರತಿಯೊಂದು ಸಾಲುಗಳಲ್ಲಿಯ ತಾತ್ವಿಕ ಚಿಂತನೆಯನ್ನೊಳಗೊಂಡ ಶ್ರೇಷ್ಠ ಚಿಂತನೆಯನ್ನು ಇಲ್ಲಿ ಕಾಣಬಹುದು.

ಕಾಣಬಾರದ ಗುರು ಕಣ್ಗೆ ಗೋಚರವಾದಡೆ;
ಹೇಳಲಿಲ್ಲದ ಬಿನ್ನಪ್ಪ ಮುಟ್ಟಲಿಲ್ಲದ
ಹಸ್ತಮಸ್ತಕಸಂಯೋಗ.
ಹೂಸಲಿಲ್ಲದ ವಿಭೂತಿಯ ಪಟ್ಟ
ಕೇಳಲಿಲ್ಲದ ಕರ್ಣಮಂತ್ರ.
ತುಂಬಿ ತುಳುಕದ ಕಲಶಾಭಿಷೇಕ
ಆಗಮವಿಲ್ಲದ ದೀಕ್ಷೆ
ಪೂಜೆಗೆ ಬಾರದ ಲಿಂಗ
ಸಂಗವಿಲ್ಲದ ಸಂಬಂಧ.
ಸ್ವಯವಪ್ಪ ಅನುಗ್ರಹ
ಅನುಗೊಂಬಂತೆ ಮಾಡಾ ಗುಹೇಶ್ವರಾ.


ಈ ವಚನದ ಅನುಸಂಧಾನಲ್ಲಿ ಶರಣ ಮಾರ್ಗ, ಗುರುವಿನ ಅರ್ಥ, ಲಿಂಗಧರ್ಮ, ಭೌದ್ಧಿಕ ಜ್ಞಾನದ ಏಳಿಗೆಗಾಗಿರುವ ದೀಕ್ಷೆ,  ಹೀಗೆ ಅನೇಕ ಪರಿಕಲ್ಪನೆಗಳನ್ನು  ಅತ್ಯಂತ ಅದ್ಬುತವಾದ ವಿವರಣೆಯನ್ನು ಲೇಖಕರು ನೀಡಿದ್ದಾರೆ. ತಾನೇ ಗುರು ಲಿಂಗ ಜಂಗಮವಾದ ಮೇಲೆ ಹೊರಗೆ ನಡೆಯುವ ಅಧ್ಯಾತ್ಮಿಕ ಕ್ರಿಯೆಗಳು ಶಬ್ದದ ಲಜ್ಜೆ ಶಬ್ದ ಸಂತೆ ಎಂಬ ಅಲ್ಲಮರ ವಿಡಂಬಣೆಯನ್ನು ಲೇಖಕರು ಅತ್ಯಂತ ಅತ್ಯದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ.
ಶರಣರು ಉರಿಯುಂಡ ಕರ್ಪುರ ಶಿಶುಕಂಡ ಕನಸಿನ  ತಾತ್ವಿಕ ಸಿದ್ಧಾಂತಗಳಿಗೆ ಬದ್ಧರಾದವರು. ಇನ್ನಾದರೂ ಲಿಂಗಾಯತ ಧರ್ಮದಲ್ಲಿ ದೀಕ್ಷೆ ಪೂಜೆ ಗುರು ಕಾರುಣ್ಯ ಮುಂತಾದ ಮೌಢ್ಯ ವಿಚಾರಗಳಿಗೆ ತಿಲಾಂಜಲಿ ಹೇಳುವುದು ಅನಿವಾರ್ಯ ಹಾಗೂ ಅಗತ್ಯ ಕ್ರಮ ಎಂದು  ಅತ್ಯಂತ ಕಾಳಜಿಪೂರ್ವಕವಾಗಿ ಹೇಳುವುದರ ಮೂಲಕ ನಿಜವಾದ ಶರಣ ಧರ್ಮವನ್ನು  ಹಾಗೂ ಅದರ  ಆಶಯವನ್ನು ತಿಳಿಸುವ ಪ್ರಯತ್ನವನ್ನು ಇಲ್ಲಿ  ಕಾಣಬಹುದಾಗಿದೆ.
ಎರಡನೇಯ ವಚನವಾದ  ಮಹಾ ಅನುಭವಿ ಗಜೇಶ ಮಸಣಯ್ಯನವರ  ಅಪರೂಪದ ವಚನದಲ್ಲಿ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳು ತನ್ನ ಬದುಕಿನಲ್ಲಿ ಹೇಗೆ ಅಳವಡಿಸಿಕೊಂಡನು ಎಂಬುದನ್ನು ಲೇಖಕರು ಅತ್ಯಂತ ಸುಂದರವಾಗಿ ಸಾದರಪಡಿಸಿದ್ದಾರೆ. ಕರಸ್ಥಲದಿಂದ ಕಾಯಕ ಮಾಡಿ ದಾಸೋಹ ಮಾಡುವ ತತ್ವವ ನೀಡಿದ ಬಸವಣ್ಣ ತನ್ನ ನಿಜದ ಅರಿವಿನ ಗುರು ಎಂಬ ಭಾವವನ್ನು ಸಾದರಪಡಿಸುವ ಪರಿ ಅತ್ಯದ್ಭುತವಾಗಿದೆ.

ಎನ್ನ ಕರಸ್ಥಲವೇ ಬಸವಣ್ಣನಯ್ಯಾ.
ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯಾ.
ಎನ್ನ ಭಾವಸ್ಥಲವೇ ಪ್ರಭುದೇವರಯ್ಯಾ.
ಇಂತೆನ್ನ ಕರ ಮನ ಭಾವಂಗಳಲ್ಲಿ
ಇಷ್ಟ ಪ್ರಾಣ ಭಾವಂಗಳು ತಲ್ಲೀಯವಾಗಿ
ಮಹಾಲಿಂಗ ಗಜೇಶ್ವರಾ,
ನಿಮ್ಮ ಶರಣರ ಘನವನು
ಎನ್ನ ಸರ್ವಾಂಗದಲಿ ಕಂಡು ಪರಮಸುಖಿಯಾಗಿರ್ದೆನು.


ಈ ವಚನದ ಅನುಸಂಧಾನ ಮಾಡುತ್ತಾ ಲೇಖಕರು ಇಷ್ಟಲಿಂಗ ಸಾಧಕನ ಗಟ್ಟಿ ಮುಟ್ಟಾದ ಸಂಕೇತ ಅರಿವಿನ ಕುರುಹು ಅದನ್ನು ಕೊಟ್ಟ ಬಸವಣ್ಣ ಸಮಗ್ರ ಪಯಣದ ಚಿಂತನೆಗಳು ಆರಂಭಿಕ ಸೂದ್ರಧಾರ. ಇಷ್ಟಲಿಂಗವು ನಿತ್ಯ ಯೋಗಕ್ಕೆ ಸಾಧನ ಹಾಗೂ ಬಹುಮುಖ್ಯ ಸಾಧನೆಯ ಮೆಟ್ಟಿಲು. ಇಷ್ಟಲಿಂಗದ ಯೋಗದೊಳು ಹೊಕ್ಕು ನಿರಂತರವಾಗಿ ವಿಕಸಿತವಾಗಿ ಭಾವಹೊಂದುತ್ತದೆ ಅದು ಮುಂದೆ ಭಾವಕ್ಕೆ ತಲುಪಿ ಮನವು ಪ್ರಸನ್ನ ಭಾವವಾಗುವುದನ್ನು ಲೇಖಕರು ಅತ್ಯಂತ ವೈಚಾರಿಕ ಹಿನ್ನೆಲೆಯಲ್ಲಿ ಎಳೆ ಎಳೆಯಾಗಿ  ಈ ವಚನದಲ್ಲಿ ವಿವರಿಸಿದ್ದಾರೆ.


ಮೂರನೇಯ ವಚನದಲ್ಲಿ ಅಲ್ಲಮ ಪ್ರಭುಗಳ ವಚನ ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ ಎಂಬ ವಚನವನ್ನು ಲೇಖಕರು ಅನುಸಂಧಾನ ಮಾಡುತ್ತಾ,  ಲಿಂಗವೆನ್ನುವುದು ಜ್ಞಾನ ಸಮಷ್ಠಿಯ ಭಾವ ಕಾಣಲಾಗದ ಅನುಪಮ ಅವಿರಳ ಅವ್ಯಕ್ತ ಪ್ರಜ್ಞೆ ಅದು ಕಾಣಲಾಗದು ಅದು ಕೇವಲ ಭಕ್ತನ ಮನುಷ್ಯನ ಅರಿವಿಗೆ ಬರುವ ಸೂಕ್ಷ್ಮ ಭಾವ ಎಂಬುದನ್ನು ಅನುಭಾವದ ನೆಲೆಯಲ್ಲಿ  ವಿವರಿಸಿದ್ದಾರೆ.


ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ
ಎನಗಿದು ಸೋಜಿಗ ಎನಗಿದು ಸೋಜಿಗ!
ಅಹುದೆನಲಮ್ಮೆನು ಅಲ್ಲೆನಲಮ್ಮೆನು
ಗುಹೇಶ್ವರ ಲಿಂಗವು ನಿರಾಳ ನಿರಾಕಾರ ಬಯಲು. – ಅಲ್ಲಮ ಪ್ರಭು


ಈ ಮೇಲಿನ ವಚನದ ಒಳನೋಟವನ್ನು ಲೇಖಕರು ಎಳೆ ಎಳೆಯಾಗಿ ವಿವರಿಸುತ್ತಾ,ಜಗತ್ತಿನ ಅತ್ಯಂತ ಉತೃಷ್ಟವಾದ ಉದಾತ್ತೀಕರಣ(Sublimatio) ಅನುಭಾವವು ಕರಸ್ಥಲದ ಇಷ್ಟಲಿಂಗವನ್ನು ಸಂಪೂರ್ಣವಾಗಿ ತಿರಸ್ಕರಿಸದೇ ಅದರ ಹಿಂದಿನ ಆಶಯಕ್ಕೆ ಮುಖ ಮಾಡಲು ಭಕ್ತನಿಗೆ ಸೂಚಿಸಿದಂತೆದೆ ಎಂಬುದನ್ನು ವಿರ್ಶಾತ್ಮಕವಾಗಿ ವಿವರಿಸುವಂತಿದೆ.
ಇನ್ನು ನಾಲ್ಕನೇಯ ವಚನವಾದ ಉದಕದೊಳಗೆ ಕಿಚ್ಚು ಹುಟ್ಟಿ ಸುಡುತಿರ್ದುದ ಕಂಡೆ ಎಂಬ ಅಲ್ಲಮ ಪ್ರಭುವಿನ ವಚನದ ವಿಶ್ಲೇಷಣೆಯನ್ನು ಲೇಖಕರ ಮಾಡುತ್ತಾ, ಜೀವ ಕಳೆ ಮತ್ತು ಬಾಹ್ಯ ಪ್ರಪಂಚದ ಸಂಬಂಧಗಳು ಅವುಗಳ ವಿಕಾಸ ಬೆಳವಣೆಗೆ ಪ್ರಪಂಚದಲ್ಲಿ ಅಡಗಿರುವ ಅನೇಕ ಸತ್ಯಗಳ ಅನಾವರಣ ಮಾಡಿದ್ದಾರೆ.

ಉದಕದೊಳಗೆ ಕಿಚ್ಚು ಹುಟ್ಟಿ ಸುಡುತಿರ್ದುದ ಕಂಡೆ
ಗಗನದ ಮೇಲೆ ಮಾಮರನ ಕಂಡೆ
ಪಕ್ಕವಿಲ್ಲದ ಹಕ್ಕಿ ಬಯಲ ನುಂಗಿತ್ತ ಕಂಡೆ ಗುಹೇಶ್ವರಾ.


ಈ ವಚನದ ಅನುಸಂಧಾನ ಮಾಡುತ್ತಾ ನೀರಿನಲ್ಲಿ ಬೆಂಕಿ ಅನ್ವೇಷಣೆ ಅನಿವಾರ್ಯ ಅಗತ್ಯ. ಗಗನದಲ್ಲಿ ಮಾಮರ ನೆಡುವುದು ಬೆಳವಣೆಗೆ. ಆದರೆ ದುರಾತ್ಮ ಪಕ್ಷಿಯು ಭೂಮಿಯ ಬಯಲ ನುಂಗುವುದು ಆತಂಕದ ವಿಷಯ. ಆತಂಕವನ್ನು ಕಳೆದು ಆನಂದವನ್ನು ಹೆಚ್ಚಿಸುವ ಪರಿಯನ್ನು ವೈಜ್ಞಾನಿಕವಾಗಿ ಅನಾವರಣ ಮಾಡಿದ ಲೇಖಕರ ಕಾರ್ಯ ಅತ್ಯಂತ ಶ್ಲಾಖನೀಯವಾಗಿದೆ.
ಇನ್ನು ಉದಕದ ಬಾಯಾರಿ ಬಳಲುತ್ತಿದೆ  ಎಂಬ ವಚನದಲ್ಲಿ  ಜೀವ ಚೈತನ್ಯವನ್ನು ಅರಿಯದೆ ಜಡ ಶರೀರಕ್ಕೆ, ಶರೀರದ ಅರಿಷ್ವರ್ಗಗಳು ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ತಾಪಕ್ಕೆ ಬಳಲಿರುವವರು ಹಾಳಾಗಿ ಹೋಗುವವರು ಎಂಬುದನ್ನು ಲೇಖಕರು ಅತ್ಯಂತ ಮಾರ್ಮಿಕವಾಗಿ ಈ ಕೃತಿಯಲ್ಲಿ  ವಿವರಿಸಿದ್ದಾರೆ.
ಬೆಳೆಯ ಭೂಮಿಯಲ್ಲೊಂದು ಪ್ರಳಯಸದ ಕಸ ಹುಟ್ಟಿ ಎಂಬ ಬಸವಣ್ಣನವರ ವಚನ ವಿಶ್ಲೇಷಣೆಯಲ್ಲಿ ಕೃಷಿಕಾಯಕದ ಮಹತ್ವವನ್ನು ಅರ್ಥಪೂರ್ಣವಾಗಿ ಲೇಖಕರು ವಿಶ್ಲೇಷಿಸಿದ್ದಾರೆ. ಶರಣರು ಕೃಷಿ ಪ್ರಧಾನ ಕಾಯಕವನ್ನು ನಂಬಿಕೊಂಡು ಬಂದವರು ಲಾಲಗೊಂಡರು ನೊಣಂಬರು, ಗೊಲ್ಲಾಳರು ಒಕ್ಕಲಿಗ ಮುದ್ದಣ್ಣ ಹೀಗೆ ಶರಣರ ಕೃಷಿ ಕಾಯಕದ ಜೊತೆಗೆ ತಮ್ಮ ಅನುಭಾವದ ಹರಿವನ್ನು ವಿಸ್ತರಿಸುವ ಲೇಖಕರ ಬಗೆ ಅತ್ಯದ್ಭುತವಾಗಿದೆ.
ಅದೇ ರೀತಿ ಈ ಕೃತಿಯಲ್ಲಿ 7 ನೇಯ ವಚನವಾದ ದೇಹಭಾವವಳಿದಲ್ಲದೆ ಜೀವಭಾವವಳಿಯದು ಎಂಬ ಅಲ್ಲಮಪ್ರಭುದೇವರ ವಚನವನ್ನು ಲೇಖಕರು ವಿಶ್ಲೇಷಣೆ ಮಾಡುತ್ತಾ, ಪಾರಮಾರ್ಥಿಕ ಮೋಕ್ಷದ ಸರಳ ಮಾರ್ಗಗಳನ್ನು ತೆರೆದಿಡುತ್ತಾ, ಪ್ರಪಂಚದ ಬದುಕನ್ನು ಸರಳಗೊಳಿಸುತ್ತಾ ನಂತರ ಅರಿವಿನ ಮೂಲಕ ಪಾರಮಾರ್ಥಿಕ ಬದುಕಿಗೂ ಜೋತು ಬೀಳದೇ, ಕುರುಹು ನಷ್ಟಮಾಡಿ ಅರಿವಿನ ಮೂಲಕ ಸಮಷ್ಠಿಯ ಅರಿಯಲು ಸಾಧ್ಯ ಎಂಬುದನ್ನು ಸ್ಪಷ್ಟವಾಗಿ ನೇರವಾಗಿ ತಿಳಿಸಿದ್ದಾರೆ.

೮ ನೇಯ ವಚನದಲ್ಲಿ ಸರ್ವಶೂನ್ಯ ಆದಿ ಅನಾದಿ ಭಕ್ತಸ್ಥಳ ಎಂಬ ಅಲ್ಲಮ ಪ್ರಭುದೇವರ ವಚನ ಅನುಸಂಧಾನ ಮಾಡುತ್ತಾ,  ಅರುಹುವಿಲ್ಲ ಕುರುಹು ಇಲ್ಲ ತನಗೆ ತಾನಿಲ್ಲ ಎಂಬ ಉದಾತ್ತೀಕರಣದ ಆಶಯಗಳನ್ನು ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ.
ಹೀಗೆ ತ್ರಿವಿಧವನರಿಯದೇ ಕೆಟ್ಟು ಹೋದರು, ಗುಹೇಶ್ವರನೆಂಬ ಘನನೆಲೆಯ ಬಲ್ಲಡೆ, ಉಳಿಮುಟ್ಟದ ಲಿಂಗ, ಬೇರೊಂದು ಕುರುಹುವಿಡಿದು ಅರಿಯಲೇಕಯ್ಯ, , ಶರಣರ ಘನ ಸರ್ವಾಂಗದಲ್ಲಿ ಕಂಡು ಪರಮಸುಖಿಯಾದೆನು, ನಿಜ ಶರಣನ ಮಹಾಬೆಳಗಿನ ಗೋಚರ ದರ್ಶನ, ಸತಿಯ ಕಂಡು ಬೃತಿಯಾದ ಬಸವಣ್ಣ, ಶಿವ ಗುರುವೆಂದು ಬಲ್ಲಾತನೇ ಗುರು, ಕವಿಸಾಧಕರೆಲ್ಲರು ಸ್ವಯಂ ಲಿಂಗವಾದ ಕಾರಣ   ಮತ್ತು  ಪ್ರಾಣಲಿಂಗವೆಂವ ಶಬ್ದಕ್ಕೆ ನಾಚಿತ್ತು ಮನ ನಾಚಿತ್ತು, ಎಂಬ ಅಲ್ಲಮಪ್ರಭುದೇವರ ವಚನಗಳನ್ನು, ಹಾಗೂ  ಪ್ರಸಾದವ ಮುಟ್ಟಬೇಕೆಂಬವರ ಮುಖವ ನೋಡಲಾಗದು, ಶಿಶು ಕಂಡ ಕನಸು, ಲಿಂಗ ಸಂಗವಿಲ್ಲದ ವೃತಿಗೇಡಿ ಕಿಲ್ಬಿಷ,  ಹಗಲು ನಾಲ್ಕು ಜಾವ ಆಸನಕ್ಕೆ ಕುದಿವರು ಎಂಬ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ವಚನಗಳು, ತಾನೆಂಬುದೇನೂ ಕುರುಹುದೋರದು ಎಂಬ ಶಿರ್ಷಿಕೆಯಲ್ಲಿರುವ ಮನಸಂದ ಮಾರಿತಂದೆ ಯವರ ವಚನ, ಶರಣರು ನಿರ್ದೇಹಿಗಳು ಎಂಬ ಆದಯ್ಯನವರ ವಚನ, ಹಸಿದು ಎಕ್ಕೆಯ ಮೆಲಬಹುದೇ?, ಶರಣನೆದ್ದು ಕುಳಿತಡೆ ಶಿರಾತ್ರಿ ಕಾಣಿರೋ,  ಭಕ್ತಿ ಎಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜುಂಕುರಿಸಿ ಮತ್ತು ಕಲ್ಲನಾಗರ ಕಂಡು ಹಾಲನೆರೆಯೆರೆಂಬರು ಎಂಬ ಬಸವಣ್ಣನವರ ವಚನಗಳು, ಅಂಗದಲ್ಲಿ ಆಚಾರವ ತೋರಿದ ಆ ಆಚಾರವೇ ಲಿಂಗವೆಂದರುಹಿದ ಪ್ರಾಣದಲಿ ಅರಿವ ನೆಲೆಗೊಳಿಸಿದ  ಅರಿವೆ ಜಂಗಮ ಎಂದು ತೋರಿದ ಎಂಬ ಅಕ್ಕಮಹಾದೇವಿಯರ ವಚನ, ಬಂಧನದಲ್ಲಿ ಸಾಯುತ್ತಿದೆ ಅಂಗ ಎಂಬ ವೈದ್ಯ ಸಂಗಣ್ಣನ ವಚನ, ಮಾಟ ಕೂಟವೆಂಬ ತೆಪ್ಪವ ಮಾಡಿ ಎಂಬ ಕದಂಬ ಮಾರಿತಂದೆ ವಚನ, ಎನ್ನಕಾರವೇ ನೀನಯ್ಯ ಬಸವಣ್ಣ ಎಂಬ ಕೋಲ ಶಾಂತಯ್ಯಗಳ ವಚನ, ಬಸವನರಿವು ನಿರಾಧಾರರವಾಯಿತ್ತು ಎಂಬ ನೀಲಮ್ಮನವರ ವಚನ, ಒಂದು ಹಾಳಭೂಮಿಯ ಹುಲಿಬಂದು ಎಂಬ ಗಂಗಾಂಬಿಕೆ ವಚನ, ಬ್ರಹ್ಮನ ಹೆಂಡಿರ ಮಕ್ಕಳ ಹಿಡಿತಂದು ಎಂಬ ಮಡಿವಾಳ ಮಾಚಿದೇವರ ವಚನಗಳನ್ನು ಅರ್ಥಪೂರ್ಣವಾಗಿ ವೈಚಾರಿಕವಾಗಿ ವೈಜ್ಞಾನಿಕ ದೃಷ್ಠಿಕೋನದಲ್ಲಿ ಈ ಎಲ್ಲ ವಚನಗಳನ್ನು ಅನುಸಂಧಾನ ಮಾಡುತ್ತಾ ವಚನಗಳ ಆಶಯಗಳನ್ನು ಸರಳವಾಗಿ ಎಲ್ಲರ ಮನಮುಟ್ಟುವಂತೆ ಲೇಖಕರು ವಿಶ್ಲೇಷಿಸಿದ್ದಾರೆ.
ಅಲ್ಲದೇ ಪ್ರಸಾದಿಗಳು ಕಲ್ಯಾಣದ ಶರಣರು, ಶರಣ ಭರಿತ ಲಿಂಗವಾದನು ಬಸವಣ್ಣ, ವಚನಗಳು ಜಗತ್ತಿನ ಮೊದಲ ದೇಸಿ ಸಾಹಿತ್ಯ ಮತ್ತು ಮರದ ಬಾಯಿ ಬೇರು ಲಿಂಗದ ಬಾಯಿ ಜಂಗಮ ಎಂಬ ವೈಚಾರಿಕ ಲೇಖನಗಳು ಅತ್ಯಂತ ಪ್ರಬುದ್ಧವಾಗಿ ಮೂಢಿಬಂದಿವೆ.
ಒಟ್ಟಾರೆ ಈ ಪುಸ್ತಕದಲ್ಲಿ ಶರಣರ ವಚನಗಳ ಆಶಯಗಳನ್ನು ಎಳೆ ಎಳೆಯಾಗಿ ಸಂಶೋಧನಾತ್ಮಕದ ನೆಲೆಯಲ್ಲಿ ಮೂಢಿಬಂದಿದ್ದು ಎಲ್ಲರೂ ಓದಲೇಬೇಕಾದ ಅತ್ಯದ್ಭುತವಾದ ಕೃತಿಯಾಗಿದೆ. ಲೇಖಕರು ಎಲ್ಲ ವಚನಗಳನ್ನು ಅನುಭಾವದ ನೆಲೆಯಲ್ಲಿ ಅನುಸಂಧಾನ ಮಾಡುತ್ತಾ, ವಿಶ್ಲೇಷಿಸಿರುವುದು ಅತ್ಯಂತ ಗಮನ ಸೆಳೆಯುವ ಅಂಶವಾಗಿದೆ.
ಇಂತಹ ವೈಚಾರಿಕ, ವೈಜ್ಞಾನಿಕ ತಳಹದಿಯ ಮೂಲಕ ಎಲ್ಲ ವಚನಗಳ ವಿಶ್ಲೇಷಣೆಯ ಕೃಷಿ  ಲೇಖಕರ ಮೂಲಕ ನಡೆಯಲಿ ಎಂಬ ಆಶಯ ವ್ಯಕ್ತಪಡಿಸುತ್ತಾ, ಈ ಕೃತಿ ಪರಿಚಯ ಅತ್ಯಂತ ಖುಷಿ ತಂದಿದೆ ಹಾಗೂ ಎಲ್ಲರೂ ವಚನಗಳನ್ನು ಪಚನ ಮಾಡಿಕೊಳ್ಳಲು, ವಚನಗಳ ಒಳನೋಟಗಳ ಸವಿ ಸವಿಯಲು ಈ ಕೃತಿಯನ್ನು ಓದಲೇ ಬೇಕು ಎಂದು ವಿನಯಪೂರ್ಣವಾಗಿ ಎಲ್ಲ ಶರಣ ಮನಸ್ಸುಗಳಿಗೆ ನಿವೇದನೆ ಮಾಡುತ್ತೇನೆ. ಎಲ್ಲ ಶರಣು ಬಂಧುಗಳಿಗೆ  ಶರಣು ಶರಣಾರ್ಥಿಗಳು.


 ಡಾ ದಾನಮ್ಮ‌ ಝಳಕಿ

23 thoughts on “ಡಾ. ಶಶಿಕಾಂತ ಪಟ್ಟಣರವರ ಕೃತಿ ‘ಮಾಟ ಕೂಟವೆಂಬ ತೆಪ್ಪವ ಮಾಡಿ’ ಒಂದು ಅವಲೋಕನ ಡಾ.ದಾನಮ್ಮ ಝಳಕಿ

  1. ಅದ್ಭುತವಾದ ವೈಚಾರಿಕತೆಯ ಚಿಕಿತ್ಸಕ ನುಡಿಗಳು ಮೇಡಂ ಬಹಳ ಉತ್ತಮವಾಗಿ ಕೃತಿ ವಿಶ್ಲೇಷಣೆ ಮಾಡಿದ್ದೀರಿ ಮೇಡಂ

    1. Publisher address
      ESHWARI PRAKASHANA
      #285/F-6, Ist floor,5th West Cross,
      Uttaradhimutt Road, Mysure

  2. ಅರ್ಥಪೂರ್ಣ ಚಿಂತನೆ ಮತ್ತು ವಿಶ್ಲೇಷಣೆ ತಾವು ಡಾ ಶಶಿಕಾಂತ ಪಟ್ಟಣ ಇವರ ಸಮಗ್ರ ಶರಣರ ಕೃತಿಗಳನ್ನು ವಿಮರ್ಶೆ ಮಾಡಿದರೆ ಓದುಗರಿಗೆ ಸಹಾಯವಾಗುತ್ತದೆ

  3. Amazing critical Analysis madam
    Please keep writing your analysis of Dr Shashi Pattan which helps us to know

  4. ಮೇಡಂ ತುಂಬ ಚನ್ನಾಗಿ ಅವಲೋಕನ ಮಾಡಿದ್ದಿರಿ. ನಿಜವಾಗಿಯು ಓದುವಂತಿದೆ. ಸಾಹಿತಿ ಶಶಿಕಾಂತ ಅವರಿಗೂ ತಮಗೂ ಅಭಿನಂದನೆಗಳು

    1. ಅಭಿಮಾನದ ಅಭಿನಂದನೆಗೆ ಧನ್ಯವಾದಗಳು ಮೇಡಂ

  5. ನಾನು ಈ ಪುಸ್ತಕ ಓದಿದ್ದೇನೆ ಮೇಡಂ ಸರ್ ಮಾಡಿದ ವಚನ ವಿಶ್ಲೇಷಣೆ ಉಪಯುಕ್ತ ಮಾಹಿತಿಯುಳ್ಳ ದ್ದು ಅದನ್ನು ತಾವು ಚೆನ್ನಾಗಿ ಪರಿಚಯ ಮಾಡಿದ್ದೀರಿ

  6. ಅರ್ಥಪೂರ್ಣ ವಿಶ್ಲೇಷಣೆಯೊಂದಿಗೆ ಸಿಂಹಾ ವಲೋಕನ ಕ್ರಮದ ಅವಲೋಕನ ಮಾಡಿದ್ದಿರಿ ಮೇಡಂ ಓದುಗರಿಗೆ ಪೂರ್ಣ ಪುಸ್ತಕದ ಓದಿದ ಅನುಭವವಾಗುತ್ತದೆ ಅಭಿನಂದನೆಗಳು, ಮೇಡಂ

  7. ಪ್ರಬುದ್ಧವಾದ ವಚನ ಚಿಂತನೆ ಮತ್ತು ವಿಶ್ಲೇಷಣೆ… ಮೇಡಂ… ಡಾ || ಶಶಿಕಾಂತ ಪಟ್ಟಣ ಸರ್ ಅವರ ಶರಣರ ಕೃತಿಗಳನ್ನು ಎಲ್ಲರೂ
    ಖಂಡಿತವಾಗಿ ಓದಲೇಬೇಕು…

    1. ತಮ್ಮ ಅಭಿಮಾನಕ್ಕೆ ಹೃದಯಪೂರ್ವಕ ಧನ್ಯವಾದಗಳು ಮೇಡಂ

  8. ಈ ಪುಸ್ತಕ ಓದಿದ್ದೇನೆ ಮೇಡಂ ಶಶಿಕಾಂತ ಸರ್ ಮಾಡಿದ ವಚನ ವಿಶ್ಲೇಷಣೆ ಉಪಯುಕ್ತ ಮಾಹಿತಿಯುಳ್ಳ ದ್ದು ಅದನ್ನು ತಾವು ಚೆನ್ನಾಗಿ ಪರಿಚಯ ಮಾಡಿದ್ದೀರಿ

  9. Excellent description about the book authored by Dr Shashikant Pattan my best old friend since 1976

Leave a Reply

Back To Top