ಬದುಕಿನ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವೇ?-ಲೇಖನ-ಡಾ.ಸುಮತಿ ಪಿ. ಕಾರ್ಕಳ

ವಿಶೇಷ ಬರಹ

ಬದುಕಿನ ಸಮಸ್ಯೆಗಳಿಗೆ

ಆತ್ಮಹತ್ಯೆ ಪರಿಹಾರವೇ?

ಡಾ.ಸುಮತಿ ಪಿ. ಕಾರ್ಕಳ

ದಿನಬೆಳಗಾದರೆ ಪತ್ರಿಕೆ, ಟಿವಿ, ಇಂಟರ್ನೆಟ್ಟು ಎಲ್ಲೇ ನೋಡಲಿ `ಒಂದಲ್ಲ ಒಂದು ಆತ್ಮಹತ್ಯೆಯ ಘಟನೆ ಕಣ್ಣಿಗೆ ಬಿದ್ದೆ ಬೀಳುತ್ತದೆ .ಅದು ಚಿತ್ರ ತಾರೆಯರಿರಬ‌ಹುದು, ಖ್ಯಾತ ಉದ್ಯಮಿಗಳಾಗಿರಬಹುದು, ಹದಿಹರೆಯದ ಯುವಕ ಯುವತಿಯರೇ ಇರಬಹುದು,ಅಥವಾ ಇಳಿಪ್ರಾಯದವರೂ ಆಗಿರಬಹುದು .ಇಲ್ಲಿ ವಯಸ್ಸು,, ಅಂತಸ್ತಿನ ಲೆಕ್ಕವಿಲ್ಲ‌. ಬಡವನಿಗೆ ಬದುಕು ಭಾರವಾದರೆ ಸಿರಿವಂತನಿಗೆ ಬದುಕು ಬರಡು. ತನ್ನಲ್ಲಿ ಇರುವುದನ್ನು ಬಿಟ್ಟು ಇಲ್ಲದುದರ ಬಗ್ಗೆ ಚಿಂತಿಸುವುದು ಮನುಜನ ಸಹಜ ಗುಣ. ಆಸೆಗಳು ಈಡೇರಿಸಿಕೊಳ್ಳುವಲ್ಲಿ ಸೋಲು ಸಹಜ.ಸೋಲನ್ನು ಸ್ವೀಕರಿಸಲು ಮನಸ್ಸು ಸಿದ್ಧವಿರದಾಗ, ಹತಾಶೆ, ನೋವು ಕಾಡುತ್ತಿರುತ್ತದೆ.ಕೊನೆಗದು ಆತ್ಮಹತ್ಯೆಯವರೆಗೂ ಸಾಗುತ್ತದೆ.

   ಪ್ರಸ್ತುತ ಸಮಾಜದಲ್ಲಿ ಬಹಳ ಗಂಭೀರವಾದ ಸಮಸ್ಯೆಗಳಲ್ಲಿ ಆತ್ಮಹತ್ಯೆಯೂ ಒಂದು. ಇತ್ತೀಚಿನ ದಿನಗಳಲ್ಲಂತೂ ಆತ್ಮಹತ್ಯೆಗೈಯುವವರ  ಸಂಖ್ಯೆ ಹೆಚ್ಚುತ್ತಲೇ ಇರುವುದು ಬಹಳ ಕಳವಳಕಾರಿ ಸಂಗತಿಯಾಗಿದೆ.  ಹೈಸ್ಕೂಲ್ ವಿದ್ಯಾರ್ಥಿಗಳಿಂದ ಹಿಡಿದು,ಮಧ್ಯವಯಸ್ಕರು ,ಮುದಿ ವಯಸ್ಸಿನವರು ಆತ್ಮಹತ್ಯೆ ಮಾಡಿಕೊಳ್ಳುವುದು,ಅದರಲ್ಲೂ  ಟೀನ್ ಏಜಿನ ಯುವಕಯುವತಿಯರೇ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

  *ಆತ್ಮಹತ್ಯೆ ಮಹಾಪಾಪ*
ಆತ್ತಹತ್ಯೆಯೆಂಬುವುದು ಮಹಾಪಾಪ ಎನಿಸಲ್ಪಡುತ್ತದೆ.
ಸಾಮಾನ್ಯ ಜನರು ಅದರಲ್ಲೂ ಬುದ್ಧಿಸ್ವಾಸ್ಥ್ಯವುಳ್ಳವರು ಸಾಲ, ಪ್ರೇಮವೈಫಲ್ಯ, ಅನಾರೋಗ್ಯ,ನೋವು ಮುಂತಾದ ಕಾರಣಗಳಿಂದಾಗಿ ಮಾಡಿಕೊಳ್ಳುವ ಆತ್ಮಹತ್ಯೆಯು ಅಪಮೃತ್ಯು ಎನಿಸುವುದು. ಸ್ವಪ್ರೇರಣೆಯಿಂದ ಪ್ರಾಣವನ್ನು ಕಳೆದುಕೊಳ್ಳುವ ಈ ಕ್ರಿಯೆಯನ್ನು ಜಗತ್ತಿನ ಬಹುತೇಕ ಧರ್ಮಗಳು ನಿಷೇಧಿಸಿವೆ. ಭಾರತೀಯ ದಂಡ ಸಂಹಿತೆಯಲ್ಲಿ ಆತ್ಮಹತ್ಯೆಯೆನ್ನುವುದು ನೈತಿಕ, ಧಾರ್ಮಿಕ ಮತ್ತು ಸಾಮಾಜಿಕ ಅಪರಾಧವೆಂದು ಹೇಳಲಾಗಿದೆ. ಆತ್ಮಹತ್ಯೆ ಮಾಡಿಕೊಂಡವರಿಗೆ ಯಾವ ಶಿಕ್ಷೆಯನ್ನು ವಿಧಿಸಲೂ ಸಾಧ್ಯವಾಗುವುದಿಲ್ಲ. ಆದರೆ ಆತ್ಮಹತ್ಯೆಯಲ್ಲಿ ವಿಫಲನಾದ ವ್ಯಕ್ತಿ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಸಹಕರಿಸುವ, ಪ್ರಚೋದಿಸುವ ವ್ಯಕ್ತಿಯು ಖಂಡಿತವಾಗಿ ಕಾನೂನಿನನ್ವಯ ಅಪರಾಧಿ ಎನಿಸುವನು.

ಜನ್ಮಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಟವಾದದ್ದು.ಅಂತದರಲ್ಲಿ ತಮ್ಮ ಅಮೂಲ್ಯವಾದ ಬದುಕನ್ನು ಕ್ಷುಲ್ಲಕ ಕಾರಣಗಳಿಗಾಗಿ ಕಳೆದುಕೊಳ್ಳುವ ಪ್ರವೃತ್ತಿ ದಿನೇದಿನೇ ಹೆಚ್ಚುತ್ತಿದೆ ಅಂದರೆ ಬುದ್ಧಿ ಜೀವಿಗಳು ಆಲೋಚನೆ ಮಾಡಬೇಕಾಗಿರುವುದೇ !.ಆತ್ಮಹತ್ಯೆ ಮಹಾಪಾಪ,ಅದು ಮನುಜನ ಮೂರ್ಖತನವನ್ನು ಸೂಚಿಸುತ್ತದೆ.ಪ್ರಾಜ್ಞರು ಆತ್ಮಹತ್ಯೆಯನ್ನು ಖಂಡಿಸಿದ್ದಾರೆ. ಅವರ ದೃಷ್ಟಿಯಲ್ಲಿ ಆತ್ಮಹತ್ಯೆಗಿಂತ ಹೇಯಕೃತ್ಯ ಮತ್ತೊಂದಿಲ್ಲ.
” ಹೆದರದಿರು ಮನವೆ,ಹೆದರಿ ಹಿಮ್ಮೆಟ್ಟದಿರು ಮನವೆ, ಹಿಡಿದ ಛಲವ ಬಿಡದಿರು ಮನವೆ, ಜರಿದರೆಂದು ಝಂಕಿಸಿದರೆಂದು
 ಶಸ್ತ್ರ ,ಸಮಾಧಿ ,ನೀರು ,ನೇಣು ವಿಷ ಔಷಧದಲ್ಲಿ ಘಟವ ಬಿಡದಿರಬೇಕು”
ಎಂಬ ಶರಣರ ಮಾತಿನಂತೆ, ಶಸ್ತ್ರಗಳಿಂದ ಇರಿದುಕೊಂಡು, ನೀರಿನಲ್ಲಿ ಮುಳುಗಿ, ನೇಣುಹಾಕಿಕೊಂಡು ಅಥವಾ ವಿಷಪ್ರಾಶನ ಮಾಡಿ ಪ್ರಾಣತ್ಯಾಗ ಮಾಡಬಾರದು. ಆತ್ಮಹತ್ಯೆ ಮಾಡಿಕೊಂಡವರು ಏಳೇಳು ಜನ್ಮದಲ್ಲಿಯೂ ಪಾಪಿಗಳು ಎನ್ನುತ್ತಾರೆ ಬಲ್ಲವರು. ಆತ್ಮಹತ್ಯೆ ಮಹಾಪಾಪ ಎನ್ನುತ್ತದೆ ಧರ್ಮ.
ಮಾನಸಿಕ ದೌರ್ಬಲ್ಯ, ಆಶಾಭಂಗ, ದ್ವೇಷ, ಮಾತ್ಸರ್ಯ, ಸೇಡು, ಹತಾಶೆ, ಬೇರೆಯವರ ಒತ್ತಡ ಇತ್ಯಾದಿ ಯಾವ ಕಾರಣದಿಂದಲೇ ಆಗಲಿ ಆತ್ಮಹತ್ಯೆ ಮಾಡಿಕೊಂಡರೆ ಅದು ಪಾಪವೆಂದೇ ಹೇಳಬಹುದು.  ‘ಮಾನವ ಜನ್ಮ ಬಲು ದೊಡ್ಡದು ಅದನ್ನು ಹಾನಿ ಮಾಡಿಕೊಳ್ಳಬೇಡಿರೊ ಹುಚ್ಚಪ್ಪಗಳಿರಾ’ ಎಂದು ಪುರಂದರ ದಾಸರು ಹೇಳಿದ್ದಾರೆ.ಆತ್ಮಹತ್ಯೆ ಮಹಾಪಾಪ ಎಂದರೂ, ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವುದೇ ಅಪರಾಧವಾದರೂ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯೇನೂ ಆಗಿಲ್ಲ.  

ಆಧುನಿಕತೆಯ ಅಬ್ಬರದಲ್ಲಿ,ಶೋಕಿ ಜೀವನದ ಸೋಗಿನಲ್ಲಿ,ಬಣ್ಣದ ಬದುಕಿಗೆ ಸೆಳೆದು, ಮುಖವಾಡದ ಬದುಕಿನ ಬಲೆಯೊಳಗೆ ಸಿಲುಕಿ,ಸತ್ಯ ಅರಿಯುವಾಗ,ಕಾಲ ಮಿಂಚಿ ಹೋಗಿ , ಏನೂ ಮಡಲಾಗದು ಎನ್ನುವ ಸ್ಥಿತಿಯಲ್ಲಿ  ಜೀವನದಲ್ಲಿ ಸೋತು, ಕೊನೆಗೆ ಅದಕ್ಕೆ ಜನ ಕಂಡುಕೊಳ್ಳುತ್ತಿರುವ ಪರಿಹಾರ ಆತ್ಮಹತ್ಯೆ. ಯುವಜನಾಂಗ ಇಂದು ಹುಚ್ಚು ಕನಸುಗಳ ಹಿಂದೆ ಓಡುತ್ತಾ, ತಮ್ಮ  ಕನಸುಗಳು ಈಡೇರದೇ ಇದ್ದಾಗ, ಮನಸಿಗೆ ಆಗುವ ಆಘಾತ ದಿಂದ ಹೊರಬರಲಾಗದೆ, ಹತಾಶೆ,ನೋವುಗಳನ್ನು ಸಹಿಸಲೂ ಸಾಧ್ಯವಾಗದೆ, ಮನಸ್ಸು ಬಿಚ್ಚಿ ಹೇಳಲೂ ಹೋಗದೆ, ಆತ್ಮಹತ್ಯೆಯಂತಹ ಹೇಯಕೃತ್ಯದ ದಾರಿಯನ್ನು ಹಿಡಿಯುತ್ತಿರುವುದು ನಿಜಕ್ಕೂ ಭಯ ಹುಟ್ಟಿಸುತ್ತದೆ.

ದೇಶದಲ್ಲಿ ಇಪ್ಪತ್ತೈದು ವರ್ಷದೊಳಗಿನ ಜನರ ಸಾವಿಗೆ ಕಾರಣಗಳಲ್ಲಿ ಎರಡನೇ ಅತೀ ದೊಡ್ಡ ಕಾರಣ ಆತ್ಮಹತ್ಯೆ ಎಂಬುವುದು ಬಹಳ ಕಳವಳಕಾರಿ ಅಂಶವಾಗಿದೆ.ವಿಶ್ವದಾದ್ಯಂತ ಪ್ರತಿ ವರ್ಷ  ಸುಮಾರು 8 ಲಕ್ಷ ಜನರು ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ ಎಂಬುದು ವರದಿಯಾದ ವಿಚಾರ. ಇತ್ತೀಚೆಗಂತೂ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯು ಅತ್ಯಧಿಕವಾಗಿದೆ. ಆತ್ಮಹತ್ಯೆ ಒಂದು ದೊಡ್ಡ ದುರಂತವಾಗಿ ಪರಿಣಮಿಸುತ್ತಿದೆ.

*,ಆತ್ಮಹತ್ಯೆಗೆ ಕಾರಣಗಳು:*

ಒಬ್ಬ ವ್ಯಕ್ತಿಯು ಆತ್ಮಹತ್ಯೆಯಂತಹ ನಕಾರಾತ್ಮಕ ಹೆಜ್ಜೆಯನ್ನು ತೆಗೆದುಕೊಳ್ಳಲು ಕಾರಣವನ್ನು  ಊಹಿಸುವುದು ತುಂಬಾ ಕಷ್ಟ.
ಪ್ರತಿಯೊಂದು ಆತ್ಮಹತ್ಯೆಯ ಹಿಂದೆ ವಿಭಿನ್ನವಾದ ಕಾರಣಗಳಿರುತ್ತವೆ.
ಮೇಲ್ನೋಟಕ್ಕೆ ಕಂಡು ಬರುವ ಕಾರಣಗಳಲ್ಲಿ ಮಾನಸಿಕ ಅಸ್ವಸ್ಥತೆ, ಆರೋಗ್ಯ ಸಮಸ್ಯೆಗಳು, ಯುವಕರಲ್ಲಿ ನಿರುದ್ಯೋಗ, ಪ್ರೀತಿ ವೈಫಲ್ಯ, ಕೌಟುಂಬಿಕ ಸಮಸ್ಯೆ, ಒಂಟಿತನ, ಮಾದಕದ್ರವ್ಯ ಸೇವನೆಯಂತಹ ದುಶ್ಚಟಗಳು, ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಕೆ,ಸೋಲಿನ ಭೀತಿ, ಮಾನಸಿಕ ಖಿನ್ನತೆ ಮುಂತಾದುವು ಜನರನ್ನು ಆತ್ಮಹತ್ಯೆಗೆ ಪ್ರೇರೇಪಿಸುವುದು ಗೋಚರಿಸುತ್ತದೆ. ಆಳವಾದ ಭಾವನಾತ್ಮಕ ನೋವು,ಆಘಾತ, ಬೆದರಿಸುವಿಕೆ, ಲೈಂಗಿಕ ಕಿರುಕಳ,ನಿಂದನೆ,ಆರ್ಥಿಕ ತೊಂದರೆ, ನಿಕಟ ವ್ಯಕ್ತಿಯನ್ನು ಕಳೆದುಕೊಳ್ಳುವುದು ಮುಂತಾದುವು ಕೂಡ ಆತ್ಮಹತ್ಯೆಗೆ ಕಾರಣ ವಾಗುವುದನ್ನು ಕಾಣಬಹುದು. ಮಾನಸಿಕ ಪರಿಸ್ಥಿತಿ,ಖಿನ್ನತೆ, ಆಘಾತ, ಒತ್ತಡ, ಕೌಟುಂಬಿಕ ಹಿಂಸೆ, ಸಂಬಂಧಿಕರು, ಸ್ನೇಹಿತರ ನಡುವಣ ಬಾಂಧವ್ಯದಲ್ಲಿ ಬಿರುಕು,ಸಮಸ್ಯೆ ನಿಭಾಯಿಸಲು ಬೇಕಾದ ಜೀವನ ಕೌಶಲ್ಯಗಳ ಕೊರತೆ ಆತ್ಮಹತ್ಯೆಗೆ ಪ್ರಚೋದಿಸುತ್ತದೆ.ಇನ್ನು ಹಿರಿಯ ನಾಗರಿಕರಲ್ಲಿ ಅನಾರೋಗ್ಯ, ಒಂಟಿತನ,ಅನಾಥ ಭಾವ,ಮಕ್ಕಳಿಂದ ಹಾಗು ಸಂಗಾತಿಯಿಂದ ದೂರವಾಗುವಿಕೆ ಕೂಡ ಆತ್ಮಹತ್ಯೆಗೆ ಪ್ರಚೋದನೆ ಆಗಬಹುದು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಒತ್ತಡದ, ಧಾವಂತದ ಬದುಕಿನಲ್ಲಿ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಅದಕ್ಕೆ ಸ್ವಲ್ಪ ಘಾಸಿಯಾದರೂ ಅದು ಸಹಿಸಿ ಕೊಳ್ಳುವುದಿಲ್ಲ. ದುರ್ಬಲಗೊಂಡ ಮನಸ್ಸು ಸದಾ ಸಾವಿನ ಬಗ್ಗೆಯೇ ಆಲೋಚಿಸುತ್ತಿರುತ್ತದೆ. ಸಾಯಲು ಇಂತಹದೇ ಕಾರಣಗಳು ಬೇಕಿಲ್ಲ. ಎಷ್ಟೋ ಸಲ ಕ್ಷುಲ್ಲಕವೆನಿಸಬಹುದಾದ ಘಟನೆಗಳು ಸಾವಿಗೆ ಕಾರಣವಾಗಿರುವುದನ್ನು ನಾವಿಂದು ಗಮನಿಸಬಹುದಾಗಿದೆ. “ಮೊಬೈಲ್ ಬಿಟ್ಟು ಓದು ಎಂದರೆ” ಆತ್ಮಹತ್ಯೆಯೊಂದು ನಡೆಯುತ್ತಿದೆ ಎಂದಾದರೆ ನಾವಿಂದು ಎಲ್ಲಿದ್ದೇವೆ?ನಮ್ಮ ಮಕ್ಕಳು ಯಾವ ರೀತಿ ಬೆಳೆಯುತ್ತಿದ್ದಾರೆ ?ಹಿರಿಯರಾದ ನಾವು ಅವರಿಗೆ ಯಾವ ರೀತಿಯ ಸಂಸ್ಕಾರ ಕಲಿಸಿಕೊಡುವ ಮೂಲಕ,ಜೀವನದ ಪಾಠ ಹೇಳಿಕೊಡುವ ಮೂಲಕ, ಮನಸ್ಸಿನ ಗಟ್ಟಿತನ ನೀಡಿದ್ದೇವೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಾದ  ಅಗತ್ಯತೆ ಇದೆ .

ಹದಿಹರೆಯದವರಲ್ಲಿ ಆತ್ಮಹತ್ಯೆಗೆ ಆತಂಕ, ಖಿನ್ನತೆ, ನಿದ್ರಾಹೀನತೆ, ಪ್ರೀತಿ ವೈಫಲ್ಯ,ಬೆದರಿಕೆ,ಅವಮಾನ, ಲೈಂಗಿಕ ಕಿರುಕಳ,ಮಾದಕ ವಸ್ತುಗಳ ಸೇವನೆ, ಕೌಟುಂಬಿಕ ಪರಿಸ್ಥಿತಿ ಇವೆಲ್ಲ ನೈಜ ಕಾರಣಗಳಾಗಿವೆ.ಯೌವನದ ಕಾಲದಲ್ಲಿ ಮನಸ್ಸು ತುಂಬಾ ಸೂಕ್ಷ್ಮ.ಅದಕ್ಕೆ ಸ್ವಲ್ಪ ಘಾಸಿಯಾದರೂ ಉಂಟಾಗುವ‌ ಪರಿಣಾಮವು ದೊಡ್ಡದು.ತುಂಬಾ ಸೂಕ್ಷ್ಮ ಮನಸ್ಸಿಗೆ ಸಣ್ಣ ಕಾರಣವೂ ಕೂಡ ಸಾವಿಗೆ ಶರಣಾಗುವಂತೆ ಮಾಡುವುದನ್ನು ನಾವಿಂದು ಕೇಳುತ್ತಿದ್ದೇವೆ ,ಕಣ್ಣಾರೆ ಕಾಣುತ್ತಿದ್ದೇವೆ. ಮನಸ್ಸಿನ ತೊಳಲಾಟ, ವಿಪರೀತ ನೋವು ಹತಾಶೆಯಿಂದಾಗಿ ಮನಸಿನಲ್ಲಿ ಭಾವನೆಗಳೇ ಭಾರವಾದಾಗ, ಭವಿಷ್ಯದ ಬಗ್ಗೆ ಜಿಗುಪ್ಸೆ ಹುಟ್ಟಿ, ಬದುಕೇ ಯಾತನಾಮಯವಾದಾಗ, ತಮ್ಮ ಅಸ್ತಿತ್ವವೇ ಅರ್ಥಹೀನವೆನಿಸಿ ಆತ್ಮಹತ್ಯೆಯಂತಹ ಕೆಲಸಕ್ಕೆ ಮುಂದಾಗುತ್ತಾರೆ.
ಇತ್ತೀಚಿನ ದಿನಗಳಲ್ಲಂತೂ ಮಕ್ಕಳು ಹಾಗೂ ಯುವಜನತೆೆ ಹೆಚ್ಚು ಹೆಚ್ಚು ಈ ಆತ್ಮಹತ್ಯೆಗೆ ಮುಂದಾಗುತ್ತಿರುವುದು,ನಮ್ಮ ಕೌಟುಂಬಿಕ ಹಾಗೂ ಸಾಮಾಜಿಕ ಪರಿಸ್ಥಿತಿಯ ದುಸ್ಥಿತಿ  ಎಂದರೂ ತಪ್ಪಾಗಲಾರದು. ಇಂದಿನ ವೇಗದ ಧಾವಂತದ, ಸ್ಪರ್ಧಾತ್ಮಕ ಮತ್ತು ಯಾಂತ್ರಿಕ ಬದುಕಿನಲ್ಲಿ ಎಲ್ಲವೂ ಕಣ್ಣು ಮಿಟುಕಿಸುವುದರೊಳಗೆ ಆಗಿ ಹೋಗುತ್ತದೆ. ಆತಂಕ, ಖಿನ್ನತೆ, ಅತಿಯಾದ ಒತ್ತಡ, ಡೈವೋರ್ಸ್, ವರದಕ್ಷಿಣೆ, ಕೌಟುಂಬಿಕ ಹಿಂಸೆ, ಪ್ರೀತಿ ಪ್ರೇಮದ ವೈಫಲ್ಯ, ವ್ಯಾಪಾರದಲ್ಲಿ ನಷ್ಟ, ವಿವಾಹೇತರ ಸಂಬಂಧಗಳು, ಆರ್ಥಿಕ ಅಡಚಣೆ, ವಿದ್ಯಾಭ್ಯಾಸದಲ್ಲಿ ಅನುತ್ತೀರ್ಣ, ನಿರುದ್ಯೋಗ, ಕಾಡುವ ಕಾಯಿಲೆ, ಮಕ್ಕಳಾಗದ ಕೊರಗು ಹೀಗೆ ನೂರಾರು ಕಾರಣಗಳು ಆತ್ಮಹತ್ಯೆಗೆ ಪ್ರಚೋದನೆ ನೀಡಲೂಬಹುದು.

ಇತ್ತೀಚಿನ ದಿನಗಳಲ್ಲಿ ನಡೆದಂತಹ ಆತ್ಮಹತ್ಯೆಯ ಘಟನೆಗಳನ್ನು ಪರಾಮರ್ಶಿಸಿದರೆ
ಎಂಟನೇ ತರಗತಿಯ ಹುಡುಗನೊಬ್ಬ
ಮೊಬೈಲ್ ತೆಗೆದಿಟ್ಟರು ಎಂಬ ಕಾರಣಕ್ಕೆ ಆತ್ಮಹತ್ಯೆ, ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ
“ಬೆಳಿಗ್ಗೆ ಎದ್ದು ಓದು”ಎಂದು ಗದರಿಸಿ ದಕ್ಕೆ ಆತ್ಮಹತ್ಯೆ.ಅಪ್ಪನ ಕುಡಿತದ ಚಟಕ್ಕೆ ಬೇಸತ್ತು ಪಿ.ಯು.ಸಿ ಓದುತ್ತಿದ್ದ ಮಗ ನೇಣಿಗೆ ಶರಣು. ಒಂದೇ ಎರಡೇ!ಅಬ್ಬಾ ಯೋಚಿಸಲು ಕಷ್ಟ ಆಗುತ್ತದೆ.

ಆತ್ಮಹತ್ಯೆ ಮಾಡಿಕೊಳ್ಳುವ ಸೂಚನೆ,ಅಥವಾ ಸುಳುಹು ಸಿಕ್ಕಿದರೆ ಅಂತಹ ವ್ಯಕ್ತಿಗಳನ್ನು ಗುರುತಿಸಿ , ಒಂದೆರಡು ಸಾಂತ್ವನದ ನುಡಿ ಹೇಳಿ ಸಂತೈಸಿದಲ್ಲಿ ಒಂದು ಕ್ಷಣದ ಅಚಾತುರ್ಯವನ್ನು ತಡೆಯಬಹುದು. ಸಾಯಲು ನೂರು ಮಾರ್ಗವಿದ್ದರೆ ಬದುಕಲು ಸಾವಿರ ಮಾರ್ಗವಿದೆ ಎಂಬ ಸತ್ಯವನ್ನು ಯುವಜನರು ಅರ್ಥಮಾಡಿಕೊಳ್ಳಬೇಕು. ಬದುಕಿ, ಸಾಧಿಸಿ ತೋರಿಸಬೇಕಾದ ಹೊತ್ತಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಸಾವಿಗೆ ಶರಣಾಗುವ ಹೇಡಿಗಳಾಗುವ ಬದಲು, ಛಲದಿಂದ ಜೀವನದ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಜೀವನದಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಗಟ್ಟಿತನವನ್ನು ಯುವಜನರು ಮೈಗೂಡಿಸಿಕೊಳ್ಳಬೇಕು.ಹಾಗಾದಲ್ಲಿ ಮಾತ್ರ ಸುಂದರ ಸುದೃಢ ಸಮಾಜ ನಿರ್ಮಾಣವಾಗಬಹುದು.

ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಯ ಪ್ರಸಂಗಗಳನ್ನು  ತಡೆಗಟ್ಟುವಲ್ಲಿ ತಂದೆ ತಾಯಿಗಳು ಹಾಗೂ ಗುರುಹಿರಿಯರ ಗುರುತರ ಜವಾಬ್ದಾರಿಯಿದೆ. ಇಂದು ಅವಿಭಕ್ತ ಕುಟುಂಬಗಳೇ ಜಾಸ್ತಿ.ತಂದೆ,ತಾಯಿ ಇಬ್ಬರೂ ಉದ್ಯೋಗಿಗಳಾದರೆ ಮಕ್ಕಳು ಅನಾಥರಂತೆ.ಮಗುವನ್ನು ಕೆಲಸದಾಕೆಯ ಕೈಯಲ್ಲೋ,ಮಕ್ಕಳ ಆರೈಕೆ ಕೇಂದ್ರಗಳಲ್ಲೋ ಬಿಟ್ಟು ಹೋದರೆ ಮಕ್ಕಳಿಗೆ ತಂದೆತಾಯಿಗಳ ಪ್ರೀತಿ,ಮಮತೆ ಸಿಗುವುದಾದರೂ ಹೇಗೆ? ಮಕ್ಕಳು ಸುಮ್ಮನೆ ಇರಲಿ ಎನ್ನುವ ಉದ್ದೇಶದಿಂದ ಮೊಬೈಲ್ ಕೊಟ್ಟು ಬಿಟ್ಟರೆ ಮಕ್ಕಳಿಗೆ ಅವರದೇ ಪ್ರಪಂಚ.ಶಾಲೆಗಳಲ್ಲೂ ಬೈದು, ಹೊಡೆದು ಬುದ್ಧಿ ಹೇಳುವಂತಿಲ್ಲ.ಮಕ್ಕಳಿಗೆ ಸಿಗಬೇಕಾದ ಪ್ರೀತಿ,ಆಪ್ತತೆಯು ಮನೆಯಲ್ಲಿ ಸಿಗದೇ ಇದ್ದಾಗ ಹೊರಗಡೆ ಹುಡುಕ ಹೊರಟು ದಾರಿತಪ್ಪುವವರೆಗೂ ತಿಳಿಯದೆ, ಪರಿಸ್ಥಿತಿ ಕೈಮೀರಿ ಹೋದ ಮೇಲೆ ಏನೂ ಮಾಡಲಾಗದ ಪರಿಸ್ಥಿತಿ.ಆದ್ದರಿಂದ ನಾವು ಹೆತ್ತವರು ನಮ್ಮ ಮಕ್ಕಳ ಮನಸ್ಸನ್ನು ಅರ್ಥೈಸುವ ,ದಾರಿ ತಪ್ಪಿದ್ದಲ್ಲಿ ತಿದ್ದುವ, ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿ ನಿರ್ವಹಿಸುವಲ್ಲಿ ಎಡವದಂತೆ ಜಾಗರೂಕರಾಗಿರಬೇಕು.ಮಕ್ಕಳೇ ನಮ್ಮ ಆಸ್ತಿ.ಮುಗ್ಧ ಮನಸಿನ, ಮಣ್ಣಿನ ಮುದ್ದೆಯಂತಿರುವ ಮಕ್ಕಳಲ್ಲಿ ನೀಡಿದ್ದೆಲ್ಲಾ ಅಂಟಿಕೊಳ್ಳುವುದು.ಹಾಗಾಗಿ ಮಕ್ಕಳಲ್ಲಿ ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಮಕ್ಕಳು ನಾವು ಹೇಳಿದಂತೆ ಮಾಡುವುದಕ್ಕಿಂತ ನಾವು ಮಾಡಿದ್ದನ್ನು ಅನುಕರಿಸುವುದು ಹೆಚ್ಚು. ಮಕ್ಕಳಿಗೆ ತಂದೆ ತಾಯಿಗಳು, ಗುರುಹಿರಿಯರು ಆದರ್ಶಪ್ರಾಯರಾಗಿರಬೇಕು.
ಮನೆಯಲ್ಲಿ ಉತ್ತಮ ಸಂಸ್ಕಾರ ಸಿಕ್ಕಿದರೆ,ಶಾಲೆಗಳಲ್ಲಿ ಯೋಗ್ಯ ಶಿಕ್ಷಣ ಪಡೆಯುತ್ತಾರೆ,ಸಮಾಜದಲ್ಲಿ ನಿಯತ್ತಿನ ವ್ಯಕ್ತಿಗಳಾಗಿ ಬದುಕುತ್ತಾರೆ.ಮನಸಿನ ಪಕ್ಟತೆಯ ಅನುಭವಗಳನ್ನು ನೀಡಿದರೆ,ಗಟ್ಟಿ ಮನಸ್ಸಿನಿಂದ ಬದುಕಿನ ಕಷ್ಟಗಳನ್ನು ದಿಟ್ಟವಾಗಿ ಎದುರಿಸಲು ಶಕ್ತರಾಗುತ್ತಾರೆ.ಉತ್ತಮ ಯುವಶಕ್ತಿಯಾಗಿ ಬೆಳೆಯುತ್ತಾರೆ.ಆದ್ದರಿಂದ ಮಕ್ಕಳು ದಾರಿ ತಪ್ಪದಂತೆ ,ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಸೋಲದಂತೆ,ಎಚ್ಚರಿಕೆ ವಹಿಸುತ,ಉನ್ನತ ಜೀವನ ಸಂಸ್ಕಾರದ ಮೂಲಕ ಮಕ್ಕಳ ಮನಸ್ಸನ್ನು ಗಟ್ಟಿಗೊಳಿಸೋಣವೇ?


ಡಾ.ಸುಮತಿ ಪಿ. ಕಾರ್ಕಳ


.

Leave a Reply

Back To Top