ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಮನುಷ್ಯತ್ವ ಮರೆತ ರಾಕ್ಷಸರಿಗೊಂದು ಧಿಕ್ಕಾರವಿರಲಿ…

ನಾವು ಸಾಕಷ್ಟು ಬದಲಾಗಿದ್ದೇವೆ. ತಾಂತ್ರಿಕ ಯುಗದಲ್ಲಿದ್ದೇವೆ. ವೈಜ್ಞಾನಿಕ ಮನೋಭಾವದಿಂದ ನಾವು ಆಕಾಶದೆತ್ತರಕ್ಕೆ ಏರಿದ್ದೇವೆ. ಏನೆಲ್ಲಾ ಸಂಶೋಧನೆಗಳನ್ನು ಮಾಡಿದ್ದೇವೆ. ನಮ್ಮ ದೇಶ ಜಗತ್ತಿನಲ್ಲಿಯೇ ಅತ್ಯಂತ ಉನ್ನತ ಸ್ಥಾನದಲ್ಲಿದೆ ಎಂದು ನಾವು ಎಲ್ಲರೆದರು ಬೀಗುತ್ತೇವೆ.

ಆದರೇ…

ಎಲ್ಲೋ ಒಂದು ಕಡೆ ನಾಚಿಕೆ, ಅಪಮಾನ, ಮರ್ಯಾದೆ ಇಲ್ಲದ ಹೀನಸ್ಥಿತಿಗೆ ತಲುಪಿದೇವೆ..!! ಮನುಷ್ಯತ್ವವಿಲ್ಲದ ಕ್ರೂರ ಜಂತುಗಳಿಂದ, ದುಷ್ಟಶಕ್ತಿಗಳು ಹೆಣ್ಣು ದೌರ್ಜನ್ಯಕ್ಕೆ ಒಳಗಾಗಿರುವುದು ಹಿಂದಿನಿಂದಲೂ ಈಗಿನವರೆಗೂ ನಿರಂತರವಾಗಿ ನೆಡದಿದೆ.

ಹೆಣ್ಣು ಮಗಳೆಂದರೆ ನಮಗೆ ತಾಯಿಯಾಗಿ, ಮಗಳಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ವಾತ್ಸಲ್ಯಮಯಿ ಮಡದಿಯಾಗಿ ಇಡೀ ನಮ್ಮ ಬದುಕನ್ನು ಬೆಳಗುವ ದೇವತೆ. ಹೆಣ್ಣು ಮಗಳನ್ನು ಅತ್ಯಂತ ಪೂಜ್ಯ ಭಾವನೆಯಿಂದ ಕಂಡ ರಾಷ್ಟ್ರ ನಮ್ಮದು..!! ಇಂತಹ ರಾಷ್ಟ್ರದಲ್ಲಿ ಸಾರ್ವಜನಿಕವಾಗಿ ಯಾರ ಹೆದರಿಕೆಯಿಲ್ಲದೆಯೂ ರಾಜಾರೋಷವಾಗಿ ಗಂಡೆಂಬ ಜಾತಿ ತನ್ನ ದ್ವೇಷಕ್ಕಾಗಿ ಹೆಣ್ಣುಮಕ್ಕಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಹೀನಕೃತ್ಯ ಸಾಗುತ್ತಲೇ ಇದೆ.
ದುರಂತವೆಂದರೇ…

ನಿರ್ಭಯಳ ನೋವಿನ ಕಥೆ, ದಾನಮ್ಮಳ ದಯನೀಯ ಸ್ಥಿತಿ, ಜ್ಯೋತಿಸಿಂಗಳ ಸಂಕಟ… ಇಂತಹ ಹತ್ತು ಹಲವಾರು ಹೆಣ್ಣು ಮಕ್ಕಳನ್ನು ರಾಜಾರೋಷವಾಗಿ ಬೆತ್ತಲೆಗೊಳಿಸುವ, ದೌರ್ಜನ್ಯ ಮಾಡುವ, ದಬ್ಬಾಳಿಕೆ ಮಾಡುವ, ಕೊನೆಗೆ ಅತ್ಯಾಚಾರವೆಸಗಿ ಅಮಾನುಷವಾಗಿ ಹತ್ಯೆ ಮಾಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.

ಮಣಿಪುರದ ಘಟನೆಯನ್ನು ನೋಡಿದಾಗ ಗಂಡು ಜಾತಿಯಾಗಿರುವುದು ನಾಚಿಕೆಯನಿಸುತ್ತದೆ. ಇಬ್ಬರು ಮಹಿಳೆಯರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ, ಸಾರ್ವಜನಿಕವಾಗಿ ಮೆರವಣಿಗೆ ಮಾಡುವ ಅಮಾನುಷ ಕೃತ್ಯವನ್ನು ಕಂಡು ಸುಮ್ಮನಿರುವ ಈ ಸಮಾಜಕ್ಕೊಂದು ಧಿಕ್ಕಾರವಿರಲಿ..!! ಅವರಿಗೆ ತಮ್ಮ ತಾಯಿ, ಸಹೋದರಿ, ಮಗಳು ನೆನಪಾಗಲಿಲ್ಲವೇ..? ಎಂತಹ ಹೇಯಕೃತ್ಯ. ಇವರಿಗೆ ಮನುಷ್ಯತ್ವವೇ ಇಲ್ಲವೇ..?? ಯಾವುದೋ ಸಿದ್ಧಾಂತಕ್ಕಾಗಿ, ಧರ್ಮ, ಜಾತಿ, ಮತ – ಪಂಥಗಳ ಹೊಡೆದಾಟದಲ್ಲಿ ದ್ವೇಷವನ್ನೇ ತುಂಬಿಕೊಂಡಿರುವ ಇವರು, ಯಾರದೋ ತಪ್ಪಿಗಾಗಿ ಇಂತಹ ಅಬಲೆಯರಾದ ಹೆಣ್ಣು ಮಕ್ಕಳನ್ನು ಶೋಷಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ..? ಅದನ್ನು ಖಂಡಿಸುವ ಒಬ್ಬರೇ ಒಬ್ಬರು ವ್ಯಕ್ತಿ ಅಲ್ಲಿ ಇರಲಿಲ್ಲವೇ..?

ಹಾಗಾದರೆ..

ನಮ್ಮ ದೇಶದ ಕಾನೂನುಗಳು ಏನಾದವು..? ನಮ್ಮ ನಾಗರಿಕತೆ ಎಲ್ಲಿಗೆ ಬಂದು ನಿಂತಿದೆ..? ಇವೇಲ್ಲವನ್ನೂ ನೋಡಿದಾಗ ಒಂದು ಕ್ಷಣ ನಾವು ಎಷ್ಟೋ ವರ್ಷಗಳ ಹಿಂದೆ ಸರಿದಿದ್ದೇವೆ ಎನ್ನುವ ಯಾತನೆ ನಮ್ಮನ್ನು ಕಾಡದೇ ಇರದು.

ಇದಕ್ಕೆಲ್ಲ ಕಾರಣ ಏನು ಎನ್ನುವುದನ್ನು ಅವಲೋಕನ ಮಾಡಿದಾಗ ನಮ್ಮಲ್ಲಿರುವ ಅತ್ಯಂತ ಆಶಕ್ತ ಮತ್ತು ಸುಲಭವಾದ ಕಾನೂನುಗಳು. ಆ ಕಾನೂನುಗಳು ಬಿಗಿಗೊಳ್ಳದೆ ಇರುವುದು. ಒಂದು ಕಡೆಯಿಂದ ಅಪರಾಧಿಗೆ ಸಹಾಯ ಮಾಡುವ, ಇನ್ನೊಂದು ಕಡೆಯಿಂದ ಶಿಕ್ಷಿಸಲು ಪ್ರಯತ್ನಿಸುವ ನಾಟಕ ಮಾಡುವ ನಮ್ಮ ರಕ್ಷಣಾ ವ್ಯವಸ್ಥೆ ಇರುವುದರಿಂದಲೇ ಇಂತಹ ಘಟನೆಗಳು ಜರುಗಲು ಸಾಧ್ಯ..!!

ಗಾಂಧೀಜಿಯವರು, “ಕನಸು ಮಧ್ಯರಾತ್ರಿ 12 ಗಂಟೆಗೆ ಹೆಣ್ಣುಮಗಳೊಬ್ಬಳು ಧೈರ್ಯವಾಗಿ, ಸ್ವಾತಂತ್ರ್ಯವಾಗಿ ಓಡಾಟ ನಡೆಸಿ, ಸುರಕ್ಷಿತವಾಗಿ ತನ್ನ ಮನೆಯನ್ನು ತಲುಪಿದಾಗ ಮಾತ್ರ ನಮ್ಮ ರಾಮರಾಜ್ಯದ ಕನಸು ನನಸಾಗುತ್ತದೆ” ಎಂದಿದ್ದಾರೆ.

ಆದರೆ ಇವತ್ತು ಆಗುತ್ತಿರುವುದಾದರೂ ಏನು..??

ಸಾಮಾಜಿಕವಾಗಿ ಅತ್ಯಂತ ತುಳಿತಕ್ಕೆ ಒಳಗಾದಂತ ಹಲವು ವರ್ಗದಲ್ಲಿ ಮೊಟ್ಟ ಮೊದಲ ಸ್ಥಾನ ಹೆಣ್ಣು ಮಗಳು..!! ಅದೂ ಎಲ್ಲಾ ಜಾತಿ,ಧರ್ಮಗಳ ಹೆಣ್ಣು ಮಕ್ಕಳು..!! ನಂತರದ ಸ್ಥಾನ ದಲಿತರು, ಹಿಂದುಳಿದ ವರ್ಗಗಳು, ರೈತರು, ಎಲ್ಲಾ ಜಾತಿಯ ಬಡವರು… ಶೋಷಣೆ ಮಾಡುವ ದರ್ಪ ದೌರ್ಜನ್ಯ ಮಾಡುವ ಬಲಿಷ್ಠ ವರ್ಗಗಳು ಕಾನೂನುಗಳನ್ನು ತಮ್ಮ ಬಿಗಿ ಹಿಡಿತದಲ್ಲಿ ಇಟ್ಟುಕೊಂಡಿರುವುದು.

ಇಂದಿನ ಆಧುನಿಕ ಕಾಲದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರಗಳು ಇದ್ದಾಗಿಯೂ ಒಬ್ಬ ಪ್ರಜೆಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದೆ ಹೋದರೆ ಹೇಗೆ..? ಇದು ಕಾನೂನಿನ ಒಂದು ಮಗ್ಗುಲಾದರೆ..

ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಹೊರಟಿದೆ..? ಒಬ್ಬ ಅಬಲೆಯಾದ ಮಹಿಳೆಗೆ ಸಾರ್ವಜನಿಕವಾಗಿ ದಬ್ಬಾಳಿಕೆಯಾಗುತ್ತಿದ್ದರೂ…ಮನುಷ್ಯತ್ವ ಇರುವ ಒಬ್ಬರೂ ಅದನ್ನು ಪ್ರತಿಭಟಿಸಲಿಲ್ಲ ಎನ್ನುವುದು ವಿಷಾದನೀಯ ಸಂಗತಿ. ಅದೇ ಸಂದರ್ಭದಲ್ಲಿ ನಮ್ಮ ಮನೆಯ ಹೆಣ್ಣು ಮಕ್ಕಳಿದ್ದರೆ ನಾವು ಸುಮ್ಮನೆ ಇರುತ್ತಿದ್ದೇವೆಯೋ..? ಹೇಗೆ..? ಎನ್ನುವ ಆತ್ಮಾವಲೋಕನ ನಮ್ಮೊಳಗೆ ಬಂದಾಗ ಮಾತ್ರ ಅದನ್ನು ಪ್ರತಿಭಟಿಸಲು ಸಾಧ್ಯ.

ನಮ್ಮ ಮನಸ್ಸುಗಳು ಕಲ್ಲುಗಳಾಗಿವೆ. ನಮ್ಮ ಹೃದಯಗಳು ಬಂಡೆಗಳಾಗಿವೆ. ನಮ್ಮ ಮನುಷ್ಯತ್ವದ ನೈತಿಕತೆ ಹೆಪ್ಪುಗಟ್ಟಿದೆ. ಯಾರಿಗೆ ನೋವಾದರೆ ನಮಗೇನು..? ಅವರೇ ಅದನ್ನು ಪರಿಹರಿಸಿಕೊಳ್ಳಬೇಕು ಎನ್ನುವ ಉದಾಸೀನ ಮನೋಭಾವಕ್ಕೆ ನಾವು ಒಳಗಾಗಿದ್ದೇವೆ. ಒಬ್ಬರ ಸಂಕಟಕ್ಕೆ ಇನ್ನೊಬ್ಬರು ಆಗದಿರುವುದು ಈ ಕಾಲಘಟ್ಟದ ಅತ್ಯಂತ ಸಂಕಟದ ಪರಿಸ್ಥಿತಿ. “ನಾನು ಚೆನ್ನಾಗಿದ್ದರೆ ಸಾಕು, ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು ಎನ್ನುವ ಸ್ವಾರ್ಥಪೂರಿತ ನಿರ್ಧಾರಕ್ಕೆ ಬಂದಿರುವದು ಸಮಾಜದ ಬಹು ದೊಡ್ಡ ದೋಷ.

ಹೆಣ್ಣು ಮಕ್ಕಳನ್ನು ಪೂಜಿಸುವ ನಾವು ಅವಳಿಗೆ ಕನಿಷ್ಟ ಗೌರವ ಕೊಡುವುದು ಕಲಿಯಬೇಕಾಗಿದೆ. ಅವಳಿಗೆ ಅವಕಾಶಗಳನ್ನು ಕೊಟ್ಟರಷ್ಟೇ ಸಾಲದು. ಅವಳ ರಕ್ಷಣೆಯೂ ಕೂಡ ನಮ್ಮದು ಎನ್ನುವ ವಿಶಾಲವಾದ ಮನೋಭಾವ ನಮ್ಮೊಳಗೆ ಮೂಡಬೇಕು. ಎಲ್ಲಾ ಮನೆಯ ಹೆಣ್ಣು ಮಕ್ಕಳನ್ನು ಮನುಷ್ಯತ್ವ ಮರೆತ ರಾಕ್ಷಸರಿಂದ ರಕ್ಷಿಸಬೇಕಾಗಿದೆ.

ದೇಶದ ಆಡಳಿತವನ್ನು ನೆಡೆಸುವವರಿಗೆ ಜವಬ್ದಾರಿ ಎಷ್ಟು ಇರುವುದೋ.. ಅಷ್ಟೇ ಜವಾಬ್ದಾರಿ ನಾಗರೀಕರಾದ ನಮಗೂ ಇದೆ. ಈ ಜಗದ ಹೆಣ್ಣು ಮಕ್ಕಳು ನಮ್ಮ ಕಣ್ಣಿದ್ದ ಹಾಗೇ..!! ಎಲ್ಲಾ ಹೆಣ್ಣು ಮಕ್ಕಳಿಗೆ ಒಳಿತಾಗಲೆಂದು ಬಯಸೋಣ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

2 thoughts on “

  1. ಮನ ಮುಟ್ಟುವ ಬರೆಹ… ಕಾನೂನು ವ್ಯವಸ್ಥೆ ಬಿಗಿಗೊಳ್ಳಬೇಕು ಸರ್…. ಅಭಿನಂದನೆಗಳು ಸರ್

  2. ಸಮಯೋಚಿತ ಅರ್ಥಪೂರ್ಣ ಲೇಖನ. ಕೆಲವೊಂದಿಷ್ಟು ಗಂಡೆಂಬ ಪ್ರಾಣಿಗಳು ನರಮಾಧಮರು. ಪುರಾಣ ಕಾಲದ ರಾಕ್ಷಸರಿಗಿಂತ ಕಡೆ. ಪ್ರತಿಭಟಿಸದಿದ್ದವರು ನರಸತ್ತ ಪ್ರಾಣಿಗಳು ಅಷ್ಟೇ. ನಮ್ಮಲ್ಲಿ ಕಾನೂನುಗಳು ಇವೆ. ಅವು ನಮ್ಮ ಜೇಬಿನ ತೂಕದ ಮೇಲೆ ಕೆಲಸ ಮಾಡುತ್ತವೆ. ಬಡವರಿಗೊಂದು ನ್ಯಾಯ, ದುಡ್ಡಿದ್ದವರಿಗೊಂದು ನ್ಯಾಯ.
    ಇರಲಿ, ನಿಮ್ಮ ಲೇಖನ ಇಷ್ಟವಾಯಿತು. ಅಭಿನಂದನೆಗಳು.

Leave a Reply

Back To Top