ಅಂಕಣ ಬರಹ
ಕ್ಷಿತಿಜ
ಭಾರತಿ ನಲವಡೆ
ಮನಸೆಂಬ ಮರ್ಕಟ
“ನಾನು ಎಷ್ಟೇ ಮನಸು ಕೊಟ್ಟು ಓದಿದರೂ ನೆನಪಿನಲ್ಲಿ ಉಳಿಯುವುದೇ ಇಲ್ಲ. ಓದಲು ಪ್ರಾರಂಭಿಸಿದರೆ ಮನಸು ಅಲ್ಲಿ ಇಲ್ಲಿ ಓಡುತ್ತದೆ. ಮುಂದಿನದನ್ನು ಓದಲು ಆಗುವದೇ ಇಲ್ಲ “ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಳ್ಳುವದುಂಟು.
ಯಾವ ಕೆಲಸವನ್ನಾದರೂ ಅಚ್ಚುಕಟ್ಟಾಗಿ, ತಪ್ಪಾಗದಂತೆ ಸಮಾಧಾನದಿಂದ, ಸಂತಸದಿಂದ ಮಾಡಿದರೆ ಆ ಕೆಲಸ ಯಶಸ್ವಿಯಾಗುವಲ್ಲಿ ಸಂದೇಹವೇ ಇಲ್ಲ. ಹಾಗಾದರೆ ಸಂತಸ, ಸಮಾಧಾನಗಳು ಮನಸಿನಲ್ಲಿ ತುಂಬಿ ಆತ್ಮವಿಶ್ವಾಸ ಹೊರಹೊಮ್ಮಿದಾಗ ಅದು ಉತ್ತಮವಾದ ಫಲಿತಾಂಶವನ್ನು ನೀಡಲು ಸಾಧ್ಯ.
ಒಮ್ಮೆ ಸ್ವಾಮಿ ವಿವೇಕಾನಂದರ ದೇಹ ಸ್ಥಿತಿ ಅಷ್ಟು ಚನ್ನಾಗಿರಲಿಲ್ಲ, ಆ ಸಮಯದಲ್ಲಿ ಅವರು ‘ಬ್ರಿಟಿಷ್ ಕಲಾ ಭಂಡಾರ ‘ಎಂಬ ದೊಡ್ಡ ಪುಸ್ತಕವನ್ನು ಒಂದೇ ದಿನದಲ್ಲಿ ಓದಿ ಹಿಂತಿರುಗಿಸಿದರು. ಪುಸ್ತಕವನ್ನು ಪಡೆದುಕೊಂಡವರು ಆಶ್ಚರ್ಯಪಟ್ಟರು.”ಇಷ್ಟು ಬೇಗ ಓದಿ ಮುಗಿಸಿಬಿಟ್ಟೆ ಎಂದು ಸಂದೇಹ ಪಡ್ತಿದ್ದೀರಾ?”ಎಂದು ಸ್ವಾಮಿ ವಿವೇಕಾನಂದರವರು ಕೇಳಿದರು. ಬಂದವರು ಉತ್ತರಿಸುವುದರಲ್ಲಿ,”ಯಾವ ಭಾಗದಲ್ಲಿ ಬೇಕಾದ್ರೂ ಪ್ರಶ್ನೆ keli”ಎಂದರು.ಅವರು ಪ್ರಶ್ನೆ ಕೇಳುತ್ತಿದ್ದಂತೆ ಪೂರ್ತಿ ಆ ಭಾಗವನ್ನೇ ಒಪ್ಪಿಸಿಬಿಟ್ಟರು.
ನಾವೆಲ್ಲರೂ ಇದ್ದಕಿದ್ದಂತೆ ಸ್ವಾಮಿ ವಿವೇಕಾನಂದರಾಗಲು ಸಾಧ್ಯವಿಲ್ಲವಿರಬಹುದು. ಆದರೆ ದುಡಿಮೆಯ ಮೂಲಕ, ಪ್ರಯತ್ನದ ಮೂಲಕ, ಅಭ್ಯಾಸದ ಮೂಲಕ ನಮ್ಮ ಬುದ್ಧಿ ಮಟ್ಟವನ್ನು ಹೆಚ್ಚಿಸಿಕೊಂಡು ಹೋಗಲು ಸಾಧ್ಯ.
ನಾವು ಮಾಡುವ ಕೆಲಸದ ಕುರಿತು ಮಾತ್ರ ಯೋಜನೆ ಯೋಚನೆ ಮಾಡುತ್ತ ಅದರಲ್ಲೇ ಮುಳುಗಬೇಕು. ಸುತ್ತಮುತ್ತಲಿನ ಪ್ರಪಂಚವನ್ನೇ ಮರೆಯುವಷ್ಟರ ಮಟ್ಟಿಗೆ ಕೆಲಸದಲ್ಲಿ ಮಗ್ನರಾಗಬೇಕು.
ಓದಿನಲ್ಲಿ ಪೂರ್ಣ ಮಗ್ನನಾಗಲು ಆಗುತ್ತಿಲ್ಲವಲ್ಲ ಎಂದು ಬೇಸರ ಪಟ್ಟುಕೊಳ್ಳುವ ವಿದ್ಯಾರ್ಥಿಗಳು ಅದರ ಕಾರಣವನ್ನು ಕಂಡುಹಿಡಿದು ತೊಂದರೆಗಳನ್ನು ನೀಗಿಸಿಕೊಳ್ಳಬೇಕು.’ಈ ಸಾರಿ ಇಲ್ಲದಿದ್ದರೆ ಮುಂದಿನ ಸಾರಿ ನೋಡೋಣ ‘ಎಂಬ ಅಭಿಪ್ರಾಯ ಮನಸ್ಸಿನ ಯಾವುದಾದರೊಂದು ಮೂಲೆಯಲ್ಲಿದ್ದರೂ ನಮ್ಮಿಂದ ಓದಲು ಆಗುವದಿಲ್ಲ. ಕಷ್ಟವಾದ ವಿಷಯದಲ್ಲಿ ಪ್ರತಿದಿನ ಅರ್ಧಗಂಟೆ ಹೊತ್ತು ವಿಶೇಷ ಗಮನ ಹರಿಸಿ ಓದಿದರೆ ಆಸಕ್ತಿ ಬರುತ್ತದೆ. ಮುಂದೆ ಸುಲಭವಾಗುತ್ತದೆ.
‘ಓದುವಾಗ ಮನಸ್ಸು ಮಾರ್ಕತಾವಾಗುತ್ತದೆ ‘ಎನ್ನುತ್ತಾರೆ ಕೆಲವರು. ಮನಸ್ಸನ್ನು ಮರ್ಕಟವಾಗಲೂ ಬಿಟ್ಟು ಅವರು ಓದುತ್ತಿದ್ದಾರೆ ಎನ್ನುವದಂತೂ ಸತ್ಯವಾದ ಮಾತು. ಬೇರೆಲ್ಲೋ ದೃಷ್ಟಿ ಇಟ್ಟುಕೊಂಡು, ಬರೀ ಅಕ್ಷರಗಳನ್ನು ನೋಡುತ್ತಿದ್ದರೆ ಓದು ಹೇಗೆ ತಲೆಗೆ ಹತ್ತುತ್ತದೆ?
‘ಈಗ ನಾನು ಓದಿನಲ್ಲಿ ತೊಡಗಲಿದ್ದೇನೆ, ಬೇರೆ ಯಾವ ವಿಷಯವಾದರೂ ಅದನ್ನು ಯೋಚಿಸುವ ಸಮಯ ಇದಲ್ಲ ‘ಎಂದು ಮನಸ್ಸಿನಲ್ಲಿ ದೃಢನಿರ್ಧಾರ ತಳೆಯಬೇಕು. ಬೇರೆ ಯೋಚನೆಗಳು ಬಂದರೆ ಅವುಗಳನ್ನು ಅಟ್ಟಿ, ಮೆಟ್ಟಿ ನಿಲ್ಲಬೇಕು. ಇಲ್ಲದಿದ್ದರೆ ಆ ಯೋಚನೆಗಳನ್ನೇ ದೊಡ್ಡದು ಮಾಡಿ ತೋಳಲಾಡುವುದರಿಂದ ಅವು ನಮ್ಮ ಮೇಲೆ ಸವಾರಿ ನಡೆಸುತ್ತವೆ.
ನಮಗೆ ಇಷ್ಟವಾದ ಪಾಠವನ್ನು ಓದುವಾಗ ಮಾತ್ರ ಮನಸ್ಸು ಗಟ್ಟಿಯಾಗಿರುತ್ತದೆ ಅಲ್ಲವೇ? ಮೊಬೈಲ ಅನ್ನು ನೋಡುವಾಗ, ದೂರದರ್ಶನದಲ್ಲಿ ಕಾರ್ಟೂನ್ ನೋಡುವಾಗ ಬೇರೆ ಯೋಚನೆ ಬರುತ್ತದೆಯೇ? ಆದ್ದರಿಂದ ಮನಸ್ಸನ್ನು ಗಟ್ಟಿಯಾಗಿಸುವುದಕ್ಕಾಗಿ ನಾವು ಓದುವ ವಿಷಯವನ್ನು ಪ್ರೀತಿಸಬೇಕು, ಅದರ ಸವಿಯನ್ನು, ಅಂದವನ್ನು ಅರಿತು ಕಲಿತರೆ ಬಾಳೇ ಚನ್ನ!
ಮನಸ್ಸಿಗೆ ಬೇಸರವಿಲ್ಲದ ಕಾಲದಲ್ಲಿ ಓದಬೇಕು. ಶಾಂತವಾದ, ಗಾಳಿ ಬೆಳಕು ಬರುವ ಸ್ಥಳದಲ್ಲಿ ಕುಳಿತು ಓದಬೇಕು.
ಬೆಳಗಿನ ಝಾವ ಓದಲು ಪ್ರಶಸ್ತವಾದ ಸಮಯ. ಹಿಂದಿನ ಕಾಲದಲ್ಲಿ ನಮ್ಮ ಗುರುಕುಲಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಯೋಗಾಸನ, ಪ್ರಾಣಾಯಾಮದ ಅಭ್ಯಾಸಗಳನ್ನು ಕಲಿಸುತ್ತಿದ್ದರು. ಆಗ ಮನಸ್ಸು ಚಂಚಲವಾಗದಿರುವುದು ಅತ್ಯಂತ ಸಹಜವಾಗುವುದು. ಧ್ಯಾನ ಕೂಡ ಮನಸ್ಸನ್ನು ಪ್ರಸನ್ನಗೊಳಿಸುತ್ತದೆ.
ಬಿಡದ ಪ್ರಯತ್ನ ಗೆಲುವನ್ನು ಕೊಡುತ್ತದೆ. ಅವಸರಪಟ್ಟು, ತ್ವರಿತವಾಗಿ ಫಲವನ್ನು ಎದುರು ನೋಡಿ ಅದು ದೊರಕದಿದ್ದಾಗ ಪ್ರಯತ್ನವನ್ನೇ ಕೈ ಬಿಡುವ ಅಭ್ಯಾಸ ಇರುವವರು ಆರಂಭಿಸದೆ ಕೂಡ ಇರಬಹುದು.ಮನದ ಮುದಕ್ಕೆ ಕಲೆ, ಸಂಗೀತ, ಸಾಹಿತ್ಯ, ತೋಟಗಾರಿಕೆ, ಪರಿಸರ ಪ್ರೇಮ, ಕಥೆ ಪುಸ್ತಕ ಓದುವದು ಹೀಗೆ ಹತ್ತು ಹಲವಾರು ಉತ್ತಮ ಹವ್ಯಾಸಗಳ ಸಂಸ್ಕಾರ ಕೂಡ ಮಕ್ಕಳಿಗೆ ಅವಶ್ಯ ಮತ್ತು ಅನಿವಾರ್ಯವಾಗಿದೆ.
ದೃಢ ಸಂಕಲ್ಪದಿಂದ ಅಧ್ಯಯನಶೀಲತೆಯಿಂದ, ತರಬೇತಿಯಿಂದ, ಕಷ್ಟದೊಂದಿಗೆ ಇಷ್ಟ ಪಟ್ಟು ಅಂದುಕೊಂಡ ಸಮಯದಲ್ಲಿ ಮನ:ಪೂರ್ವಕವಾಗಿ ಮಾಡುವ ಅವಿರತದ ಚೈತನ್ಯ ನಮದಾಗಬೇಕು ಅಲ್ಲವೇ?.
ಭಾರತಿ ನಲವಡೆ
ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ