ಕಾವ್ಯ ಸಂಗಾತಿ
ಚೆಂಬೆಳಕ ಚೆನ್ನಚಂದಿರ- ಚನ್ನವೀರ ಕಣವಿ
ಇಂದಿರಾ ಮೋಟೆಬೆನ್ನೂರ.
ಮರಳಿ ಬಾರದ ಮುಗಿಲೂರಿಗೆ ತೆರಳಿ ಅರಳಿ
ಮಿನುಗಿದರು ಚೆಂಬೆಳಕ ಚೆನ್ನಚಂದಿರ
ಹೊರಳಿ ನೋಡಲಾಗದ ಹಾದಿಯಲಿ ಕರಗಿ
ಕರ್ಪೂರವಾದರು ಚೆಂಬೆಳಕ ಚೆನ್ನಚಂದಿರ
ಕಾವ್ಯ ಕಣಿವೆಯಲ್ಲಿ ಸವಿ ಜೇನ ಹಾಲ ಹೊಳೆ
ಹರಿಸಿ ಕವಿ ಕಣವಿ ಮನದಂಗಳದ ಬೆಳದಿಂಗಳಾದರು
ಶತಕೋಟಿ ತಾರೆಗಳ ಕಾವ್ಯ ತೊಟ್ಟಿಲಲ್ಲಿ ತೂಗಿ
ಭೂತಾಯ ಮಡಿಲಲ್ಲಿ ಪವಡಿಸಿದರು ಚೆಂಬೆಳಕ ಚೆನ್ನಚಂದಿರ
ಹಾದಾಡುವ ಹೊಸಿಲಲ್ಲಿ ಹೊಯ್ದಾಡದ ದೀಪ
ನೀಲಾಂಬಿಕೆ ನೆನೆದು ನೀಲಾಂಬರದಿ ಮರೆಯಾದರು
ಕಾರ್ತೀಕದ ಕತ್ತಲಲಿ ಬಸವ ಪ್ರಭೆ ಕಾಣುತಲಿ
ಬೆಳಕಿನಲಿ ಬೆಳಕಾದರು ಚೆಂಬೆಳಕ ಚೆನ್ನಚಂದಿರ
ಆಕಾಶ ಬುಟ್ಟಿಯಲಿ ಚೈತನ್ಯ ನಗೆ ತುಂಬಿ ಬೆಳಕಿಗೆ ಬೆಳಕು
ಮುತ್ತು ಕೊಟ್ಟ ಸವಿಗೆ ಬಣ್ಣ ಸುರಿದವರು
ನೆಲ ಮುಗಿಲ ಬಂಧದಲಿ ಬೆಸೆಯುತ ಕಾವ್ಯಚಂದವನು
ಹೆಣೆದವರು ಚೆಂಬೆಳಕ ಚೆನ್ನಚಂದಿರ
ಸಾಹಿತ್ಯ ಸಾಧನೆಯಾಕಾಶ ಮಂದಿರದ ಕವಿ ಚಂದಿರನು
ತಂಬೆಳಕ ಸೂಸುತ ಚಿರನಿದ್ರೆಗೆ ಜಾರಿದರು
ಮರಣದಲಿ ಮಹಾನವಮಿ ಕಂಡ ಶರಣ ಕವಿ ಶಶಿಕಿರಣ
ಕಾವ್ಯದಲ್ಲಿ ಜೀವಿಸಿದರು ಚೆಂಬೆಳಕ ಚೆನ್ನಚಂದಿರ.
ಹಾಡುಹಗಲಿದು ಚೆಂಬೆಳಕ ನುಂಗಿ ನೀರು ಕುಡಿಯಲು
ಧಾರವಾಡ ಕಣ್ಣ ಬೆಳಕು ನಾಡೋಜ ಮರೆಯಾದರು
ವಿಶ್ವ ಭಾರತಿಗೆ ಕನ್ನಡದಾರತಿ ಬೆಳಗಿ ಪರಿಪಕ್ವ ಹಣ್ಣಾಗಿ
ಬೆಳಕ ಬೀಜವಾದರು ಚೆಂಬೆಳಕ ಚೆನ್ನಚಂದಿರ..
ಇಂದಿರಾ ಮೋಟೆಬೆನ್ನೂರ.
ಚೆಂದದ ಕವಿತೆ
ಅಭಿನಂದನೆಗಳು ಇಂದಿರಾ