ವಿಶೇಷ ಲೇಖನ
ಕೆ.ಎನ್. ಚಿದಾನಂದ .
ಜೂನ್ 21 : ಕಟಕಾಯನ ದಿನ
ಭೂಗೋಳದ ವಿಸ್ಮಯಗಳು ಯಾವಾಗಲೂ ವಿಶೇಷ , ವಿಭಿನ್ನ ಹಾಗೂ ವೈವಿಧ್ಯಮಯವಾಗಿ ರುತ್ತವೆ. ನಮ್ಮ ವಾಸದ ಮನೆ ಭೂಮಿಯು ಸೌರ ಕುಟುಂಬದ ಒಂದು ಸದಸ್ಯ ಗ್ರಹವಾಗಿದೆ. ವಿವಿಧ , ವಿಭಿನ್ನ , ವಿಶಿಷ್ಠ ಹಾಗೂ ವೈವಿಧ್ಯಮಯ ಜೀವಿಗಳನ್ನು ಒಳಗೊಂಡಿರು ಏಕೈಕ ಗ್ರಹವೆಂದರೆ ಅದು ಭೂಮಿ ಎಂದು ನಮೆಲ್ಲರಿಗೂ ತಿಳಿದಿದೆ. ಬ್ರಹ್ಮಾಂಡದಲ್ಲಿನ ನಕ್ಷತ್ರ ಪುಂಜಗಳು, ಸೂರ್ಯ , ಚಂದ್ರ , ನಕ್ಷತ್ರಗಳು, ಗ್ರಹಗಳು , ಉಪಗ್ರಹಗಳು, ಕ್ಷುದ್ರ ಗ್ರಹಗಳು, ಉಲ್ಕೆಗಳು, ಉಲ್ಕಾಪಾತಗಳು, ಧೂಮಕೇತುಗಳು, ಗ್ರಹಣಗಳು ಎಲ್ಲವೂ ಒಂದು ರೀತಿಯ ಅಚ್ಚರಿಯೇ ಸರಿ.
ಭೂಮಿ ಒಂದು ಅನನ್ಯ ಗ್ರಹವಾಗಿದ್ದು ವಿಶಿಷ್ಠ ಗುಣಲಕ್ಷಣಗಳನ್ನು ಹೊಂದಿದೆ. ಜೀವಿಗಳು ಬದುಕಲು ಬೇಕಾದ ಅಗತ್ಯ ಗಾಳಿ , ನೀರು , ಸೂಕ್ತ ರೀತಿಯ ಉಷ್ಣಾಂಶ, ಬೆಂಕಿ, ಆಹಾರ , ಮಣ್ಣು , ಸೂಕ್ತ ರೀತಿಯ ಪರಿಸರ ವ್ಯವಸ್ಥೆ ಭೂಮಿಯಲ್ಲಿದೆ. ಈ ಭೂಮಿಯೂ ಇತರೆಲ್ಲಾ ಗ್ರಹಗಳಂತೆ ಖಗೋಳದ ವಿದ್ಯಮಾನಗಳಿಗೆ ಒಳಪಟ್ಟಿದೆ. ಅಂತಹ ಪ್ರಮುಖ ವಿದ್ಯಮಾನಗಳಲ್ಲಿ ಭೂಮಿಯ ಭ್ರಮಣೆ ಅಥವಾ ಚಲನೆ ಒಂದಾಗಿದೆ. ಈ ಭೂಮಿ ಯಾವಾಗಲೂ ತನ್ನದೇ ವ್ಯೋಮಾ ಕಕ್ಷೆಯ ಪಥದಲ್ಲಿ ಸುತ್ತುತ್ತಿರುತ್ತದೆ. ಭೂಮಿಗೆ ಎರಡು ರೀತಿಯ ಚಲನೆಗಳಿವೆ. ಒಂದು ದೈನಂದಿನ ಚಲನೆ ಮತ್ತೊಂದು ವಾರ್ಷಿಕ ಚಲನೆ. ಭೂಮಿಯು ತನ್ನ ಅಕ್ಷದ ಸುತ್ತಲೂ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತದೆ. ಇದಕ್ಕೆ ಸರಾಸರಿ 24 ಗಂಟೆಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಇದನ್ನೆ ದೈನಂದಿನ ಚಲನೆ ಎಂದು ಕರೆಯುತ್ತೇವೆ. ಭೂಮಿಯ ದೈನಂದಿನ ಚಲನೆಯ ಪರಿಣಾಮವಾಗಿ ಹಗಲು ರಾತ್ರಿಗಳು ಸಂಭವಿಸುತ್ತವೆ. ಮಾರುತಗಳು ಬೀಸುವ ದಿಕ್ಕುಗಳಲ್ಲಿ ಬದಲಾವಣೆ ಕಂಡುಬರುತ್ತವೆ. ಸಮಯದ ಅರಿವು ನಮಗಾಗುತ್ತದೆ. ದಿಕ್ಕುಗಳ ಪರಿಕಲ್ಪನೆ ಮೂಡುತ್ತದೆ. ಭೂಮಿಯ ಆಕಾರವನ್ನು ಗೋಳಾಕಾರವಾಗಿದೆಯೆಂದು ಊಹಿಸಬಹುದು. ಸಾಗರ ಪ್ರವಾಹಗಳಲ್ಲಿ ಬದಲಾವಣೆ ಕಂಡುಬರುತ್ತದೆ. ಉಬ್ಬರವಿಳಿತಗಳು ಕಂಡುಬರುತ್ತವೆ. ಅಂತೆಯೇ ಭೂಮಿಯು ತನ್ನ ಅಕ್ಷದ ಸುತ್ತಾ ಸುತ್ತುತ್ತಾ ಸೂರ್ಯನ ಸುತ್ತಲೂ ಸುತ್ತುವುದಕ್ಕೆ ವಾರ್ಷಿಕ ಚಲನೆ ಎಂದು ಕರೆಯುತ್ತೇವೆ. ಇದಕ್ಕಾಗಿ ಭೂಮಿಯು ಸೂರ್ಯನ ಸುತ್ತಲೂ ಪರಿಭ್ರಮಣೆ ಮಾಡಲು 365 ದಿನಗಳು ಮತ್ತು 6 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹೀಗೆ ಭೂಮಿಯ ವಾರ್ಷಿಕ ಪರಿಭ್ರಮಣೆ (ಪರಿಚಲನೆ)ಯ ಪರಿಣಾಮವಾಗಿ ಋತುಮಾನಗಳು ಉಂಟಾಗುತ್ತವೆ. ಹಗಲು ರಾತ್ರಿಗಳಲ್ಲಿ ಪ್ರಮುಖವಾಗಿ ವ್ಯತ್ಯಾಸಗಳು ಕಂಡುಬರುತ್ತವೆ. ವಿಶೇಷ ಅಕ್ಷಾಂಶಗಳನ್ನು ಮತ್ತು ಉಷ್ಣಾಂಶ ವಲಯಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.
ಭೂಮಿಯ ವಾರ್ಷಿಕ ಪರಿಭ್ರಮಣೆಯಲ್ಲಿ ಜೂನ್ 21ನೇ ದಿನವು ಭೌಗೋಳಿಕ ವಿಸ್ಮಯದ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತದೆ. ಏಕೆಂದರೆ ಜೂನ್ 21, ವರ್ಷದ ಅತಿ ದೊಡ್ಡ ಹಗಲು ಇರುವ ದಿನವಾಗಿದೆ. ಜೂನ್ 21 ರಿಂದ ಸೆಪ್ಟೆಂಬರ್ 22 ರ ವರೆಗಿನ ಈ ಅವಧಿಯಲ್ಲಿ ಭೂಮಿಯ ಅಕ್ಷವು ಸೂರ್ಯನ ಕಡೆಗೆ ಓರೆಯಾಗಿರುತ್ತದೆ. ಇದರಿಂದ ಹೆಚ್ಚು ಸೂರ್ಯನ ಕಿರಣಗಳನ್ನು ಪಡೆಯುವ ಉತ್ತರಾರ್ಧಗೋಳದಲ್ಲಿ ಬೇಸಿಗೆಯ ಅವಧಿ ಕಂಡುಬರುತ್ತದೆ. ಜೂನ್ 21ರಂದು ಸೂರ್ಯನ ಕಿರಣಗಳು ಕರ್ಕಾಟಕ ಸಂಕ್ರಾಂತಿ ವೃತ್ತದ ( ಗೋಳದಲ್ಲಿನ ಸಮಭಾಜಕ ವೃತ್ತದ ಉತ್ತರಕ್ಕೆ 23.5 ಡಿಗ್ರಿ ಅಕ್ಷಾಂಶ ) ಮೇಲೆ ನೇರವಾಗಿ ಬೀಳುತ್ತವೆ. ಇದು ಬೇಸಿಗೆಯ ದೀರ್ಘಾವಧಿಯ ಹಗಲು ಇರುವ ದಿನವೆಂದು ಗುರುತಿಸಲ್ಪಟ್ಟಿದೆ. ಈ ದಿನವನ್ನು ” ಕಟಕಾಯನ ” ಅಥವಾ ಕರ್ಕ ಸಂಕ್ರಾಂತಿ (SUMMER SOLSTICE) ಎಂದು ಕರೆಯುವರು. ಈ ಅವಧಿಯಲ್ಲಿ ಉತ್ತರ ಧ್ರುವ 24 ಗಂಟೆಗಳ ಕಾಲ ಹಗಲನ್ನು ದಕ್ಷಿಣ ಧ್ರುವ 24 ಗಂಟೆಗಳ ಕಾಲ ರಾತ್ರಿಯನ್ನು ಹೊಂದಿರುತ್ತವೆ ಎಂಬ ಸಂಗತಿಯು ಅಧ್ಯಯನದಿಂದ ತಿಳಿದು ಬರುತ್ತದೆ.
ಲ್ಯಾಟಿನ್ ಭಾಷೆಯಲ್ಲಿ, ‘ಆಯನ ಸಂಕ್ರಾಂತಿ’ (SOLSTICE) ಎಂದರೆ “ಸೂರ್ಯನ ಸ್ಥಿರ ಅವಸ್ಥೆ” (SUN STANDS STILL) (‘ಸೂರ್ಯ ಇನ್ನೂ ನಿಂತಿದ್ದಾನೆ’) ಎಂದಾಗುತ್ತದೆ. ಕಟಕಾಯನ ಅಥವಾ ‘ ಆಯನ ಸಂಕ್ರಾಂತಿ’ ಯು, ಭೂಮಿಯ ಅಕ್ಷವು ಓರೆಯಾಗಿದ್ದು ಮತ್ತು ಅದು ಸೂರ್ಯನ ಸುತ್ತ ಕಕ್ಷೆಯಲ್ಲಿ ಸುತ್ತುವಾಗ ಸಂಭವಿಸುವ ಒಂದು ಖಗೋಳ ಘಟನೆಯಾಗಿದೆ. ಜೂನ್ ಆಯನ ಅಥವಾ ಕಟಕಾಯನ ಸಂಕ್ರಾಂತಿಯ ದಿನದಂದು, ನಮ್ಮ ಪ್ರಪಂಚದ ಉತ್ತರ ಧ್ರುವವು ಸೂರ್ಯನ ಕಡೆಗೆ ಹೆಚ್ಚು ಓರೆಯಾಗಿರುವ ರೀತಿಯಲ್ಲಿ ಭೂಮಿಯು ತನ್ನ ಕಕ್ಷೆಯಲ್ಲಿ ಸ್ಥಿರವಾಗಿರುತ್ತದೆ.
ಈ ದಿನದಂದು ಅತಿ ಹೆಚ್ಚು ಸಮಯ ಹಗಲು ಇರುತ್ತದೆ. ಅತಿ ಕಡಿಮೆ ಸಮಯ ರಾತ್ರಿ ಇರುತ್ತದೆ. ಭೂಮಿಯ ಉತ್ತರ ಗೋಳಾರ್ಧದಲ್ಲಿರುವ ಕೆಲವು ದೇಶಗಳಲ್ಲಿ ಜೂನ್ 21 ರಂದು ಸುದೀರ್ಘ ಹಗಲನ್ನು ಕಾಣಬಹುದು. ಈ ದಿನವನ್ನು ಆ ದೇಶಗಳಲ್ಲಿ “ಮಿಡ್ ಸಮ್ಮರ್” ಎಂದೂ ಕರೆಯುತ್ತಾರೆ. ಭಾರತದಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ಇರುವುದಿಲ್ಲ. ಅಂದರೆ ಅಷ್ಟು ಸುದೀರ್ಘ ಹಗಲು ಭಾರತದಲ್ಲಿ ಕಾಣಸಿಗುವುದಿಲ್ಲ. ಸ್ವೀಡನ್, ನಾರ್ವೆ, ಫಿನ್ಲೆಂಡ್, ಡೆನ್ಮಾರ್ಕ್ ಮೊದಲಾದ ದೇಶಗಳಲ್ಲಿ ಜೂನ್ 21ರ ಸಮ್ಮರ್ ಸಾಲ್ಸ್ ಟೈಸ್ ದಿನವನ್ನು ಹಬ್ಬವಾಗಿ ಆಚರಿಸುತ್ತಾರೆಂದು ಹೇಳಲಾಗುತ್ತದೆ. ಕೆಲವು ದೇಶಗಳಲ್ಲಿ ಜೂನ್ 21ರಂದು ಬೆಳಗ್ಗೆ 5:14 ಕ್ಕೆ ಸೂರ್ಯೋದಯ ಆಗುತ್ತದೆ. ಸೂರ್ಯಾಸ್ತದ ಸಮಯವೂ ವಿಳಂಬವಾಗಿರುತ್ತದೆ. ಹೀಗಾಗಿ ಈ ದಿನದಂದು ಹಗಲಿನ ಅವಧಿ ಅತಿಹೆಚ್ಚು ಇರುತ್ತದೆ.
ಭೂಮಿಯಿಂದ ನೋಡಿದಾಗ, ಮಧ್ಯಾಹ್ನ ಸೂರ್ಯನು ಸಮಭಾಜಕದ ಉತ್ತರಕ್ಕೆ ಕರ್ಕಾಟಕ ಸಂಕ್ರಾಂತಿ ವೃತ್ತದ ಮೇಲಿರುತ್ತಾನೆ. ಕರ್ಕಾಟಕ ಸಂಕ್ರಾಂತಿ ವೃತ್ತವು ( TROPIC OF CANCER ) ಒಂದು ಕಾಲ್ಪನಿಕ ರೇಖೆಯಾಗಿದ್ದು, ಪ್ರಪಂಚದಾದ್ಯಂತ 23.5 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ ವೃತ್ತವನ್ನು ರೂಪಿಸುತ್ತದೆ ಇದಕ್ಕೆ ಕರ್ಕ ( CONSTELLATION CANCER ) ನಕ್ಷತ್ರಪುಂಜದ ಹೆಸರನ್ನು ಇಡಲಾಗಿದೆ. ಇದು ಸೂರ್ಯನ ಗರಿಷ್ಠ ಉತ್ತರ ಸ್ಥಾನವಾಗಿದೆ, ಅಂದರೆ ಸೂರ್ಯನು ಈ ರೇಖೆಯನ್ನು ದಾಟಿ ಮತ್ತಷ್ಟು ಉತ್ತರಕ್ಕೆ ಹೋಗುವುದಿಲ್ಲ. ಸಮಭಾಜಕದ ಉತ್ತರದ ಎಲ್ಲಾ ಸ್ಥಳಗಳಲ್ಲಿ, ಜೂನ್ ಆಯನ ಅಥವಾ ಕಟಕಾಯನ ಅಥವಾ ಕರ್ಕಾಟಕ ಸಂಕ್ರಾಂತಿಯ ಸಂದರ್ಭದಲ್ಲಿ ಹಗಲಿನ ಅವಧಿಯು 12 ಗಂಟೆಗಳಿಗಿಂತ ಅಧಿಕವಾಗಿರುತ್ತದೆ ಮತ್ತು ರಾತ್ರಿಯ ಅವಧಿ ಕಡಿಮೆಯಾಗಿರುತ್ತದೆ. ಅದೇ ಸಮಯದಲ್ಲಿ, ಸಮಭಾಜಕದ ದಕ್ಷಿಣಕ್ಕೆ ಎಲ್ಲಾ ಸ್ಥಳಗಳಲ್ಲಿ ದಿನದ ಗರಿಷ್ಠ ಅವಧಿ 12 ಗಂಟೆಗಳಿಗಿಂತ ಕಡಿಮೆಯಿರುತ್ತದೆ.
ಈ ದಿನ, ಭೂಮಿಯು ಸೂರ್ಯನಿಂದ ಹೆಚ್ಚಿನ ಶಕ್ತಿಯನ್ನು ಪಡೆಯುತ್ತದೆ. ಅಮೇರಿಕಾದ ನಾಸಾ ಸಂಸ್ಥೆಯು, ಈ ದಿನ ಭೂಮಿಯು ಸೂರ್ಯನಿಂದ ಪಡೆಯುವ ಶಕ್ತಿಯ ಪ್ರಮಾಣವು ಸಮಭಾಜಕ ವೃತ್ತಕ್ಕಿಂತ ಉತ್ತರ ಧ್ರುವದಲ್ಲಿ 30 ಪ್ರತಿಶತ ಹೆಚ್ಚಾಗಿರುತ್ತದೆ ಎಂದು ಹೇಳಿದೆ. ಜೂನ್ 21 ನೇ ದಿನವು ವರ್ಷದ ಇತರೆಲ್ಲಾ ದಿನಗಳಿಗಿಂತ ಭಿನ್ನವಾದುದು ಮತ್ತು ಅತೀ ಹೆಚ್ಚು ಹಗಲು ಇರುವ ದಿನವೆಂದು ಗುರುತಿಸಲ್ಪಟ್ಟಿರುವುದು ಖಗೋಳದಲ್ಲಿನ ವಿಸ್ಮಯಕರ ವಿದ್ಯಮಾನವಾಗಿದೆ ಎನ್ನುತ್ತಾ ಈ ದಿನದಂದು ಸೂರ್ಯೋದಯದ ಸಮಯ ಮತ್ತು ಸೂರ್ಯಾಸ್ತದ ಸಮಯವನ್ನು ಗುರುತಿಸುವ ಮೂಲಕ ಭೂಗೋಳದ ಅರಿವು ಪಡೆಯೋಣ.
———————–
ಕೆ.ಎನ್. ಚಿದಾನಂದ
ತುಂಬು ಹೃದಯದ ಧನ್ಯವಾದಗಳು ಸರ್