ಅಂಕಣ ಸಂಗಾತಿ.

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿ

ಶಾಲಾ ಶಿಕ್ಷಣದ ಪ್ರಸಕ್ತ

ಸನ್ನಿವೇಶದಲ್ಲಿ ಶಿಕ್ಷಕರ ವೃತ್ತಿಪರ

ಬೆಳವಣೆಗೆಗೆ ಗುರುಚೇತನ ಕಾರ್ಯಕ್ರಮ

[ಪೀಠಿಕೆ
ಪ್ರಸ್ತುತ ಲೇಖನವು ಗುರುಚೇತನದ ಶಿಕ್ಷಕರ ವೃತ್ತಿ ಅಭಿವೃದ್ಧಿ ಕಾರ್ಯಾಗಾರವನ್ನು ಅರ್ಥೈಸಿಕೊಳ್ಳುವ ಉದ್ದೇಶವನ್ನು ಹೊಂದಿದೆ.
ಪ್ರತಿಯೊಂದು ದೇಶಕ್ಕೂ ಅದರದೇ ಆದ ಉತ್ತಮ ಸಮಾಜದ ಪರಿಕಲ್ಪನೆ ಇದ್ದೇ ಇರುತ್ತದೆ. ಹಾಗೆಯೇ ನಮ್ಮ ದೇಶಕ್ಕೂ ಸಹ ಉತ್ತಮ ಸಮಾಜದ ಪರಿಕಲ್ಪನೆ ಇದೆ. ಈ ಉತ್ತಮ ಸಮಾಜದ ಪರಿಕಲ್ಪನೆಯು, ಪ್ರಾಜೀನ ಕಾಲದಿಂದ ಪರಂಪರಾನುಗತವಾಗಿ ಸಾಗಿ ಬಂದ ಮೌಲ್ಯಗಳು ಮತ್ತು ಸಮಾಜದ ಆಶಯಗಳು ಹಾಗೂ ನೀರೀಕ್ಷೆಗಳನ್ನು ಒಳಗೊಂಡ ಸಂವಿಧಾನದ ಪೀಠಿಕೆಯಲ್ಲಿ ನಾವು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ಸಂವಿಧಾನದ ಪೂರ್ವ ಪೀಠಿಕೆಯನ್ನು ನೋಡಿದಾಗ, ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಲೋಕತಾಂತ್ರಿಕ ಗಣರಾಜ್ಯವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರö್ಯ, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ಗಳನ್ನು ದೊರಕಿಸಿ, ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರನ್ನೂ ಭ್ರಾತೃತ್ವತೆಯನ್ನು ಪ್ರೋತ್ಸಾಹಿಸಲು ನಿರ್ಧರಿಸಿದ್ದೇವೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಈ ಸಂವಿಧಾನದ ಆಶಯಗಳನ್ನು ಪೂರೈಸಲು ನಮ್ಮ ಶಿಕ್ಷಣದ ಗುರಿ ರೂಪಿತವಾಗಿರುತ್ತದೆ. ಶಿಕ್ಷಣದ ಗುರಿಯನ್ನು ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಪೂರೈಸುತ್ತಿರುತ್ತವೆ. ಹೀಗೆ ಒಟ್ಟಾರೆ ಈ ಸಂವಿಧಾನದ ಮೌಲ್ಯಗಳನ್ನು ಬಿತ್ತಲು “ಶಿಕ್ಷಣ ಕ್ಷೇತ್ರವನ್ನು” ಪ್ರಧಾನ ಮಾರ್ಗವನ್ನಾಗಿ ಆಯ್ಕೆ ಮಾಡಿಕೊಂಡಿದ್ದೇವೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ ಶಿಕ್ಷಣವು ಇಡೀ ಶಿಕ್ಷಣ ಕ್ಷೇತ್ರಕ್ಕೆ ಬುನಾದಿ ಆಗಿರುವದರಿಂದ ಅದಕ್ಕೆ ಹೆಚ್ಚು ಒತ್ತು ಕೊಡುವುದು ಅವಶ್ಯಕವಾಗಿದೆ.


ಇಲ್ಲಿ ಪ್ರಾಥಮಿಕ ಶಿಕ್ಷಣವನ್ನು ಔಪಚಾರಿಕ ನೆಲೆಗಟ್ಟಿನಲ್ಲಿ ನೋಡಿದಾಗ, ಅದು ಶಾಲಾ ತರಗತಿಗಳ ಕಲಿಕಾ ಪ್ರಕ್ರಿಯೆಗಳ ಮೂಲಕ ಗಟ್ಟಿಗೊಳ್ಳುವದನ್ನು ಕಾಣುತ್ತೇವೆ. ಶಾಲಾ ಹಂತದಲ್ಲಿ ಇದರ ಜವಾಬ್ದಾರಿ ಅನುಕೂಲಿಸುವವರ ಮೇಲಿದ್ದು, ಅವರು ಆ ಎಲ್ಲ ಸಂವಿಧಾನಿಕ ಮೌಲ್ಯಗಳನ್ನು ಹಾಗೂ ವಿಷಯದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ತರಗತಿ ಪ್ರಕ್ರಿಯೆ ನಡೆಸಿದರೆ ಮಾತ್ರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಆದ್ದರಿಂದ ಸುಗಮಕಾರರಿಗೆ ಪ್ರಜಾಪ್ರಭುತ್ವದ ಮೌಲ್ಯಗಳ ಅಳವಡಿಕೆಯ ಅರಿವು ಅಗತ್ಯ ಈ ಹಿನ್ನೆಲೆಯಲ್ಲಿ ಸುಗಮಕಾರರಿಗೆ ಕಾರ್ಯಾಗಾರಗಳು ಸಾಗಬೇಕಾಗಿರುವುದು ಅಗತ್ಯ ಮತ್ತು ಅವಶ್ಯಕವಾಗಿವೆ.
ಸಮಸ್ಯೀಕರಣ
ಇತ್ತಿಚಿಗೆ ಪ್ರೋಬ್ ವರದಿಯಲ್ಲಿ ಮಕ್ಕಳ ಕಲಿಕೆಯ ಸಾಮರ್ಥ್ಯ ತೃಪ್ತಿಕರವಾಗಿಲ್ಲ ಎಂಬುದನ್ನು ಸಮೀಕ್ಷೆಯ ಮೂಲಕ ತಿಳಿಸಿದೆ ಅಲ್ಲದೇ ಆಸರ್ ರಿಪೋರ್ಟದ Inside primaryschools ಎಂಬ ವರದಿಯಲ್ಲಿ Teachers and Teaching Capability ಬಗ್ಗೆ ತಿಳಿಸುತ್ತಾ, ತರಗತಿಯಲ್ಲಿ ಅನುಕೂಲಿಸುವಿಕೆಯನ್ನು ನೋಡಿದಾಗ ತಾತ್ವಿಕ ಹಿನ್ನೆಲೆಯಲ್ಲಿ ಮಗುವಿಗೆ ಹೇಗೆ ಅನೂಕೂಲಿಸಬೇಕು ಎಂಬುದರ ಬಗ್ಗೆ ಸುಗಮಕಾರನಿಗೆ ಸ್ಪಷ್ಟತೆ ಬರಬೇಕಿದೆ ಎಂದು ತನ್ನ ವರದಿಯಲ್ಲಿ ಪ್ರಾಥಮಿಕ ಆಧಾರಗಳಿಂದ ದೃಢಪಡಿಸಿದೆ.


ಎನ್ ಸಿ ಎಫ್ ಆಶಯದಂತೆ ಸುಗಮಕಾರ ಕೇವಲ ಮಾಹಿತಿಗಳ ವರ್ಗಾವಣೆಗಾಗಿ ಅಲ್ಲ ಪರಿಕಲ್ಪನೆಗಳನ್ನು ಗಟ್ಟಿಗೊಳಿಸಲು ಪಠ್ಯ ಮೀರಿ ಸಾಗಬೇಕಿದೆ ಆದ್ದರಿಂದ ತರಗತಿಯಲ್ಲಿ ಮಕ್ಕಳನ್ನು ಅಭಿಪ್ರೇರಣೆ ಮಾಡುತ್ತಾ, ಶಿಶು ಕೇಂದ್ರಿತ ತರಗತಿಗಳ ಬಗ್ಗೆ ಹೆಚ್ಚು ಒತ್ತು ನೀಡವುದು ಅವಶ್ಯಕ ಎಂಬುದನ್ನು ವಿವರಿಸುತ್ತಾ, ಈ ಎಲ್ಲ ಅಂಶಗಳನ್ನು ಒಳಗೊಂಡAತೆ ಶಿಕ್ಷಕರಿಗೆ ಕಾರ್ಯಗಾರಗಳನ್ನು ಏರ್ಪಡಿಸುವುದು ಅವಶ್ಯಕ ಎಂದು ಒತ್ತಿ ಹೇಳಿದೆ.
Govt of India ದ MHRD ಯ ವರದಿಯಾದ Vision of Teacher in India Quality and Regulatory Perspective ದಲ್ಲಿ ಶಿಕ್ಷಕರ ಕಾರ್ಯಾಗಾರಗಳಲ್ಲಿ ಸಂವಾದ, ಬೋಧನಾ ಕ್ರಮ, ಹ್ಯಾಡ್ಸ ಆನ್ ಚಟುವಟಿಕೆ, ಚಟುವಟಿಕೆಗಳ ಆಯೋಜನೆ ಹಾಗೂ ವೃತ್ತಿ ಸಾಮರ್ಥ್ಯ ಬೆಂಬಲದ ಅವಶ್ಯಕತೆಯನ್ನು ತಿಳಿಸಲಾಗಿದೆ.
ಎನ್ ಸಿ ಎಫ್-೨೦೦೫, ಕಲಿಕೆ ಪಠ್ಯಮೀರಿ ಸಾಗಬೇಕು, ಮಗುಕೇಂದ್ರೀತ ಬೋಧನಾಕ್ರಮ, ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ, ಮತ್ತು ಕಂಠಪಾಠದಿAದ ಮುಕ್ತವಾದ ಕಲಿಕೆ, ಸಮಾಜದ ಜ್ಞಾನ ತರಗತಿಯ ಜ್ಞಾನದಲ್ಲಿ ಸಮ್ಮಿಳಿತದ ಬಗ್ಗೆ ಒತ್ತು ನೀಡುವ ಆಶಯವನ್ನು ಹೊಂದಿದೆ.
ಈ ಹಿನ್ನೆಲೆಯಲ್ಲಿ ಎನ್ ಸಿ ಎಫ್ ಟಿ ಇ -೨೦೦೯, ಶಿಕ್ಷಕರ ಶಿಕ್ಷಣದ ಬಗ್ಗೆ ತಿಳಿಸುತ್ತಾ, ಸೇವಾನಿರತ ಹಾಗೂ ಸೇವಾಪೂರ್ವ ತರಬೇತಿಗಳು ಹೇಗಿರಬೇಕು ಎಂಬ ಆಶಯಗಳನ್ನು ವ್ಯಕ್ತಪಡಿಸುತ್ತದೆ. ಶಿಕ್ಷಕನನ್ನು ಕಲಿಸಲು ಮಾತ್ರವಲ್ಲದೇ, ಅರ್ಥಮಾಡಿಕೊಳ್ಳಲು ಕೂಡಾ ಸಿದ್ದಪಡಿಸಬೇಕು. ದೃಷ್ಟಿಕೋನ, ಪರಿಕಲ್ಪನೆ, ಮತ್ತು ಅಂತರ್ಗತ ತಂತ್ರಗಳನ್ನು ಶಿಕ್ಷಕರ ಶಿಕ್ಷಣದಲ್ಲಿ ಸಮನ್ವಿತಗೊಳಿಸಬೇಕು ಎಂದು ತಿಳಿಸಿದೆ. ಹೀಗೆ ಈ ಎಲ್ಲ ಅಂಶಗಳ ಒಳಗೊಳ್ಳುವಂತೆ ಶಿಕ್ಷಕರಿಗೆ ತರಬೇತಿಗಳು ಅವಶ್ಯಕವಾಗಿವೆ ಎಂಬುದನ್ನು ಸ್ಪಷ್ಟಪಡಿಸಿದೆ.


ಈ ಮೇಲಿನ ಸಂಶೋಧನಾ ವರದಿಗಗಳು, ಯೋಜನೆಗಳನ್ನು ಗಮನಿಸಿದಾಗ, ಈ ಹಿನ್ನೆಲೆಯಲ್ಲಿ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರಗಳು ಅವಶ್ಯಕವಾಗಿವೆ ಎಂಬುದು ಮನದಟ್ಟಾಗುತ್ತದೆ.
ಹಾಗಾದರೆ ಶಿಕ್ಷಕರ ಸಾಮರ್ಥ್ಯ ಬೆಳವಣೆಗೆ ಹೇಗೆ ಸಾಧ್ಯ ? ತರಗತಿ ಪ್ರಕ್ರಿಯೆಗಳನ್ನು ಹೇಗೆ ಸುಧಾರಿಸಬಹುದು? ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಪರ್ಯಾಯ ಮಾರ್ಗಗಗಳಾವವು? ಎಂಬೆಲ್ಲಾ ಪ್ರಶ್ನೆಗಳಿಗೆ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಒಂದು ವಿನೂತನ ಪ್ರಯತ್ನವಾಗಿ ಗುರುಚೇತನದ ಶಿಕ್ಷಕರ ವೃತ್ತಿ ಅಭಿವೃದ್ಧಿ (ಟಿಪಿಡಿ) ಕರ‍್ಯಾಗಾರಗಳು ಪ್ರಾರಂಭವಾದವು. ಹಾಗಾದರೆ ಇದಕ್ಕಿಂತ ಮುಂಚೆ ಶಿಕ್ಷಕರಿಗೆ ತರಬೇತಿಗಳಿರಲಿಲ್ಲವೇ? ಇದ್ದರೆ, ಅವುಗಳಿಂದ ಶಿಕ್ಷಕರ ವೃತ್ತಿ ಸಾಮರ್ಥ್ಯ ಹೆಚ್ಚಾಗಲು ಸಹಕಾರಿಯಾಗಿರಲಿಲ್ಲವೇ? ಗುರುಚೇತನದ ತರಬೇತಿಗಳು ಮುಂಚಿನ ತರಬೇತಿಗಿಂತ ಹೇಗೆ ಭಿನ್ನ? ಇದರಿಂದ ಶಿಕ್ಷಕರ ಅಭಿವೃದ್ಧಿ ಹೇಗೆ ಸಾಧ್ಯ ? ತರಗತಿ ಪ್ರಕ್ರಿಯೆಯಲ್ಲಿ ಸಂವಿಧಾನಿಕ ಮೌಲ್ಯಗಳ ಬೆಳವಣೆಗೆಗೆ ಹೇಗೆ ಪೂರಕ? ಬೋಧನಾಕ್ರಮದ ವನ್ನು ಹೇಗೆ ಸಮನ್ವಯಗೊಳಿಸಿದೆ ? ಎಂಬ ಅನೇಕ ಮೂಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಹಾಗೂ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.
ಅಧ್ಯಯನದ ಉದ್ದೇಶಗಳು


೧. ಗುರುಚೇತನ ತರಬೇತಿ ಇತರ ಕಾರ್ಯಾಗಾರಕ್ಕಿಂತ ಹೇಗೆ ಭಿನ್ನ ಎಂದು ಅರ್ಥೈಸಿಕೊಳ್ಳುವುದು.
೨. ಗುರುಚೇತನ ಪಡೆದ ತರಬೇತಿ ಶಿಕ್ಷಕರು ತಮ್ಮ ತರಗತಿ ಪ್ರಕ್ರಿಯೆಯಲ್ಲಿ ಕಂಡುಕೊAಡ ಬದಲಾವಣೆಗಳನ್ನು ಅರ್ಥೈಸಿಕೊಳ್ಳುವುದು.
ಅಧ್ಯಯನದ ವಿಧಾನ
ಪ್ರಸ್ತುತ ಅಧ್ಯಯನವು ಮೂಲತಃ ದೃಷ್ಟಾಂತವಾದಿ(ಎಂಪೀರಿಕಲ್) ಅಧ್ಯಯನವಾಗಿದೆ. ಇದು ದೃಷ್ಟಾಂತವಾದಿಯಾಗಿದ್ದರೂ ಸಹ ವಿಶ್ಲೆಷಣೆಗೆ ಒಳಪಡುವ ಸಂದರ್ಭದಲ್ಲಿ ಸೈದ್ಧಾಂತಿಕ ಸಂಗತಿಗಳನ್ನು ಪರಿಗಣಿಸಲಾಗಿದೆ. ಅನುಷಂಗಿಕ ಮಾಹಿತಿ ಸಂಗ್ರಹಣೆಗೆ ಜಾಗತಿಕ ಹಾಗೂ ಭಾರತದ ಶಿಕ್ಷಣದ ವರದಿಗಳು, ಸಂಶೋಧನಾ ಲೇSನಗಳು,ವಿಶ್ಲೇಷಣಾ ವರದಿಗಳು, ವೆಬ್‌ಸೈಟ್‌ಗಳು, ಜರ್ನಲ್‌ಗಳು, ಹಾಗೂ ಗ್ರಂಥಗಳನ್ನು ಅವಲೋಕಿಸಲಾಗಿದೆ. ಪ್ರಾಥಮಿಕ ಮಾಹಿತಿಯನ್ನು ಈಗಾಗಲೇ ಕರ‍್ಯಾಗಾರದಲ್ಲಿ ಪಾಲ್ಗೊಂಡ ಶಿಕ್ಷಕರೊಂದಿಗೆ ಗುಂಪು ಚರ್ಚೆ ಮೂಲಕ ಅವರ ಅನುಭವವನ್ನು ಪಡೆಯವುದರ ಮೂಲಕ ಹಾಗೂ ರ‍್ಯಾಗಾರಗಳನ್ನು ವೀಕ್ಷಣೆ ಮಾಡುವುದರ ಮೂಲಕ ಸಂಗ್ರಹಿಸಲಾಗಿದೆ. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೆಷಣೆಗೆ ಒಳಪಡಿಸಲಾಗಿದೆ.

ಫಲಿತಗಳು
ಶಿಕ್ಷಕರ ವೃತ್ತಿ ಸಾಮರ್ಥ್ಯ ಅಭಿವೃದ್ಧಿಗಾಗಿ ಪ್ರಾರಂಭವಾದ ಗುರುಚೇತನ ಕಾರ್ಯಕ್ರವನ್ನು ಎರಡು ಉದ್ದೇಶಗಳನ್ನು ಇಟ್ಟುಕೊಂಡು ಕ್ಷೇತ್ರ ಭೇಟಿ ಕೈಗೊಳ್ಳಲಾಯಿತು. ಮೊದಲನೇಯದಾಗಿ ಈ ತರಬೇತಿಗಳು ಹೇಗೆ ಭಿನ್ನವಾಗಿದೆ ಎಂಬುದನ್ನು ನೋಡಲು, ಎಂ ಆರ್ ಪಿ ಆಯ್ಕೆ ಪ್ರಕ್ರಿಯೆ, ಟ್ರೈ ಔಟ್ ತರಬೇತಿ, ರಾಜ್ಯ ಮಟ್ಟದ ತರಬೇತಿ, ಶಿಕ್ಷಕರು ತರಬೇತಿಯ ಆಯ್ಕೆಗಾಗಿ ಬಳಸುವ ಟಿ ಟಿ ಎಂ ಎಸ್, ಶಿಕ್ಷಕರ ಅಭಿಪ್ರಾಯಗಳ ಸಂಗ್ರಹ, ಇತ್ಯಾದಿಗಳ ಮೂಲಕ ಕಾರ್ಯಾಗಾರದ ಭಿನ್ನತೆಯನ್ನು ಅರ್ಥೈಸಿಕೊಳ್ಳಲಾಯಿತು. ಎರಡನೇಯದಾಗಿ ಕಾರ್ಯಾಗಾರದ ವಿಷಯಗಳು ತರಗತಿಯ ಕೋಣೆಯಲ್ಲಿ ಹೇಗೆ ಸಮ್ಮಿಳಿತವಾಗುತ್ತಿವೆ ಎಂಬುದನ್ನು ತಿಳಿಯಲು ಕಾರ್ಯಾಗಾರದಲ್ಲಿ ಭಾಗವಹಿಸಿದ ಆಯ್ದ ಶಿಕ್ಷಕರೊಂದಿಗೆ ಚರ್ಚಿಸಿ ತಿಳಿದುಕೊಳ್ಳಲಾಯಿತು
೧. ಈ ಹಿಂದೆ ಇರುವ ತರಬೇತಿಗಳಲ್ಲಿ ಶಿಕ್ಷಕರಿಗೆ ಯಾವ ತರಬೇತಿ ಬೇಕೋ ಆ ತರಬೇತಿಯನ್ನು ಆಯ್ದುಕೊಳ್ಳಲು ಅವಕಾಶ ಇರಲಿಲ್ಲ. ಮೇಲಾಧಿಕಾರಿಗಳು ಯಾವ ತರಬೇತಿಗೆ ಕಳಿಸುತ್ತಾರೋ ಆ ತರಬೇತಿಗೆ ಕಡ್ಡಾಯವಾಗಿ ಹೋಗಬೇಕಿತ್ತು, ಎಷ್ಟೋ ಬಾರಿ ಎಲ್ಲ ತರಬೇತಿ ನೀಡಲು ಹಾಗೂ ತೆಗೆದುಕೊಳ್ಳಲು ಕೆಲವೇ ಶಿಕ್ಷಕರಿಗೆ ಮಾನ್ಯತೆ ದೊರೆಯುತ್ತಿತ್ತು ಹಾಗೂ ಹಲವರು ವಂಚಿತರಾಗುತ್ತಿದ್ದರು. ಆದರೆ ಗುರುಚೇತನದಲ್ಲಿ ಎಲ್ಲರಿಗೂ ತನಗೆ ಅವಶ್ಯಕವಿರುವ ವಿಷಯಗಳಲ್ಲಿ ತರಬೇತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ ಅಷ್ಟೇ ಅಲ್ಲದೇ ತರಬೇತಿಯ ದಿನಾಂಕ, ಸ್ಥಳ ಹೀಗೆ ಎಲ್ಲ ಮಾಹಿತಿ ನಮಗೆ ನಮ್ಮ ಮೊಬೈಲದಲ್ಲಿಯೇ ಎಸ್ ಎಂ ಎಸ್ ಮೂಲಕ ದೊರಕುವುದರಿಂದ ತುಂಬಾ ಖುಷಿ ಎನಿಸುತ್ತದೆ. ಎಂಬ ಅಭಿಪ್ರಾಯಗಳನ್ನು ಅನೇಕ ಶಿಕ್ಷಕರು ತಿಳಿಸಿದರು.
೨. ನಲಿ ಕಲಿ ಹೊರತು ಪಡಿಸಿ,ಇಲ್ಲಿಯವರೆಗೆ ನಡೆಯುತ್ತಿರುವ ಎಲ್ಲ ತರಬೇತಿಗಳೂ ಏಕಮುಖವಾಗಿದ್ದು, ಉಪನ್ಯಾಸ ಪದ್ಧತಿಯೇ ಪ್ರಧಾನವಾಗಿದ್ದವು. ಆದರೆ ಗುರುಚೇತನ ತರಬೇತಿಗಳು ತರಬೇತಿಗಳಾಗಿರದೇ ಕಾರ್ಯಾಗಾರಗಳಾಗಿದ್ದವು ಎಂಬುದನ್ನು ತಿಳಿಸುತ್ತಾ, ನಾವೆಲ್ಲರೂ ವಿಷಯಗಳ ಹಂಚಿಕೆಗೆ, ಅಭಿವ್ಯಕ್ತಗೊಳಿಸಲು ಸಾಕಷ್ಟು ಅವಕಾಶಗಳನ್ನು ಸೃಜನಿಸಿದವು ಎಂದು ವಿವರಿಸಿದರು.
೩. ಇಲ್ಲಿಯವರೆಗೆ ಕೇವಲ ಕೆಲವರಿಗೆ ಮಾತ್ರ ಎಂ ಆರ್ ಪಿ ಗಳಾಗಿ ಕಾರ್ಯ ನಿರ್ವಹಿಸಲು ಅವಕಾಶ ಸಿಗುತ್ತಿತ್ತು ಹಾಗೂ ಎಂ ಆರ್ ಪಿ ಆಗಲು ಯಾವುದೇ ನಿಗದಿತ ಮಾನದಂಡಗಳು ಇರಲಿಲ್ಲ ಅಧಿಕಾರಿಗಳಿಗೆ ಪರಿಚಯ ಇರುವವರಿಗೆ ಮಾತ್ರ ಅವಕಾಶಗಳು ದೊರೆಯುತ್ತಿದ್ದವು, ಆದರೆ ಈಗ ಎಂ ಆರ್ ಪಿ ಆಗಲು ಇಚ್ಚೆ ಇರುವ ಎಲ್ಲ ಶಿಕ್ಷಕರು ಮುಕ್ತವಾಗಿ ಲಿಖಿತ ಪ್ರಕ್ರಿಯೆ ಹಾಗೂ ಮೌಖಿಕ ಸಂವಾದಕ್ಕೆ ಪ್ರಕ್ರಿಯೆಗೆ ಹಾಜರಾಗಿ ಎಂ ಆರ್ ಪಿ ಆಗಲು ಮುಕ್ತ ಅವಕಾಶವಿದೆ. ಆದ್ದರಿಂದ ಗುರುಚೆತನದಲ್ಲಿ ಉತ್ತಮ ಎಂ ಆರ್ ಪಿ ಗಳ ಮೂಲಕ ಕಾರ್ಯಾಗಾರಗಳು ಯಶಸ್ವಿಯಾದವು ಎಂಬುದು ಹಲವಾರು ಶಿಕ್ಷಕರ ಅಭಿಪ್ರಾಯವಾಗಿತ್ತು.
೪. ಗುರುಚೇತನ ಕಾರ್ಯಾಗಾರಗಳಲ್ಲಿ ಲ್ಯಾಪ್ ಟಾಪ್,ಪ್ರೊಜೆಕ್ಟರ್, ಸೌಂಡ್ ಬಾಕ್ಸ, ಗಳ ಬಳಕೆ ಹಾಗೂ ವಿಡಿಯೋ ಕ್ಲಿಪಿಂಗ್ಸ, ಪಿ ಪಿ ಟಿ ಬಳಕೆ, ಹ್ಯಾಂಡ್ಸ ಅನ್ ರೀಡಿಂಗ್, ಆಪ್ ಫಾರ್ ದ ಡೇ, ಗೋಡೆ ಬರಹ ಹೀಗೆ ಅನೇಕ ನಾವಿನ್ಯ ಚಟುವಟಿಕೆಗಳು ಕಾರ್ಯಾಗಾರಗಳನ್ನು ವಿಭಿನ್ನವಾಗಿ ಮಾಡಿದವು ಎಂದು ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲ ಶಿಕ್ಷಕರೂ ಸಹ ವಿವರಿಸಿದರು.
೫. ಕಾರ್ಯಾಗಾರದಲ್ಲಿ ವಿಷಯದ ಆಳವಾದ ಪರಿಕಲ್ಪನೆಗಳು , ಆಲೋಚನೆಗೆ ಹಚ್ಚುವ ವಿಷಯಗಳು, ನಮಗೆ ವಿಷಯದ ಕುರಿತು ನಿರಂತರವಾಗಿ ಕುತೂಹಲವನ್ನು ಹುಟ್ಟಿಸುತ್ತಿದ್ದವು.
೬. ಕಾರ್ಯಾಗಾರಕ್ಕಾಗಿ ಇರುವ ಸಾಹಿತ್ಯ ಕೇವಲ ಕಾರ್ಯಾಗಾರದಲ್ಲಿ ಮಾತ್ರ ಬಳಸಲು ಮಾತ್ರ ಇರದೇ, ಸದಾ ಸಂಪನ್ಮೂಲ ಪುಸ್ತಕವಾಗಿ ಬಳಕೆ ಮಾಡಲು ಬರುವಂತೆ ಇತ್ತು ಎಂದು ಅನೇಕರು ತಮ್ಮ ಅಭಿಪ್ರಾಯಗಳಲ್ಲಿ ವ್ಯಕ್ತಪಡಿಸಿದರು.
೭. ಪರಿಕಲ್ಪನೆಗಲನ್ನು ಅರ್ಥೈಸಲು ಮಾಡಿಕೊಂಡ ಚಟುವಟಿಕೆಗಳು ತುಂಬಾ ಉಪಯುಕ್ತ ಹಾಗೂ ತರಗತಿಯಲ್ಲಿ ಬಳಸಲು ಸಮರ್ಪಕವಾಗಿಯೂ ಇದ್ದವು ಎಂಬುದನ್ನು ಹಲವಾರು ಶಿಕ್ಷಕರು ತಿಳಿಸಿದರು.
೮. ಪ್ರಾಥಮಿಕ ಶಿಕ್ಷಕರ ಕಾರ್ಯಾಗಾರಗಳಲ್ಲಿ ಬಯೋ ಮೆಟ್ರಿಕ್ ಬಳಕೆ ಮೊಟ್ಟ ಮೊದಲು ಗುರುಚೇತನ ಕಾರ್ಯಾಗಾರದ ಮೂಲಕ ನಡೆದಿದ್ದು, ಶಿಕ್ಷಕರ ಕಡ್ಡಾಯ ಹಾಜರಾತಿಯಿಂದ ಶಿಕ್ಷಕರಿಗೆ ತಮ್ಮ ಜವಾಬ್ದಾರಿಯ ಅರಿವನ್ನು ಮೂಡಿಸಿತು ಅಲ್ಲದೇ ಕಾರ್ಯಾಗಾರ ಕ್ರೀಯಾಶೀಲವಾಗಿರುವಂತೆ ಮಾಡಿತು ಎಂದು ಅನೇಕ ಶಿಕ್ಷಕರು ತಮ್ಮ ಅನಿಸಿಕೆ ತಿಳಿಸಿದರು.
೯. ಕಾರ್ಯಾಗಾರವನ್ನು ವೀಕ್ಷಣೆ ಮಾಡಲು ಹೋದಾಗ, ಹೆಚ್ಚಿನ ಕಾರ್ಯಾಗಾರಗಳಲ್ಲಿ ಭೌತಿಕ ಸೌಲಭ್ಯಗಳ ಬಗ್ಗೆ ಸಾಕಷ್ಟು ಕಾಳಜಿ ಕಾರ್ಯಾಗಾರಗಳಲ್ಲಿ ಕಾಣಿಸುತ್ತಿತ್ತು. ಉದಾಹರಣೆಗೆ ಕಾರ್ಯಾಗಾರದ ವಿಶಾಲ ಕೋಣೆಗಳು, ಗಾಳಿ, ಬೆಳಕು, ಶುದ್ಧ ಕುಡಿಯುವ ನೀರಿನ ಪೂರೈಕೆ, ಉತ್ತಮವಾದ ಊಟದ ವ್ಯವಸ್ಥೆ, ಕಾರ್ಯಾಗಾರಕ್ಕೆ ಬೇಕಾಗುವ ಸಂಪನ್ಮೂಲಗಳ ( ಪ್ರೋಜೆಕ್ಟರ್,ಸೌಂಡ್ ಬಾಕ್ಸ, ರೀಡಿಂಗ್ ಪೇಪರ್, ಕಾರ್ಡಶೀಟ್, ಗಮ್,ಸ್ಕೇಚ್ ಪೆನ್, ಮಾರ್ಕರ್ ಪೆನ್ ಇತ್ಯಾದಿ) ಪೂರೈಕೆ ಎದ್ದು ಕಾಣಿಸುತ್ತಿತ್ತು.
೧೦. ಇಲ್ಲಿಯವರೆಗಿನ ತರಬೇತಿಗಳು ಕೇವಲ ವಿಷಯಾಧಾರಿತವೋ ಅಥವಾ ಬೋಧನಾಕ್ರವನ್ನು ಮಾತ್ರ ತಿಳಿಸುವ ರೀತಿಯಲ್ಲಿ ಇರುತ್ತಿದ್ದವು ಆದರೆ ಗುರುಚೇತನದ ಕಾರ್ಯಗಾರಗಳು ವಿಷಯವನ್ನು ಮತ್ತು ಬೋಧನಾ ಕ್ರಮವನ್ನು ಸಮನ್ವಗೊಳಿಸಿ ಅರ್ಥೈಸುವ ರೀತಿಯಲ್ಲಿ ಇದ್ದವು. ಸುಗಮಕಾರ ಹೇಗೆ ಅನುಕೂಲಿಸಬೇಕು ಎಂಬುದನ್ನು ಉಪನ್ಯಾಸ ಪದ್ಧತಿಯಲ್ಲಿ ಹೇಳದೇ, ಇಡೀ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿಷಯವನ್ನು ಅನುಕೂಲಿಸುವವರಾಗಿ ಇದ್ದದ್ದು ಕಂಡುಬAದಿತು ಇದು ಕಾರ್ಯಾಗಾರದಲ್ಲಿ ವಿಶೇಷವಾಗಿತ್ತು. ಎಂದು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಹಲವಾರು ಶಿಕ್ಷಕರು ವಿವರಿಸಿದರು.
೧೧. ಕಾರ್ಯಾಗಾರದ ನಂತರ ಶಾಲೆಗಳಿಗೆ ಹೋದ ಶಿಕ್ಷಕರೊಂದಿಗೆ ಪುನಃ ಚರ್ಚೆ ಮಾಡಿ, ಕಾರ್ಯಾಗಾರದ ಯಾವೆಲ್ಲ ಅಂಶಗಳನ್ನು ನೀವು ನಿಮ್ಮ ತರಗತಿಯಲ್ಲಿ ಅಳವಡಿಕೊಂಡಿದ್ದೀರಿ ಎಂಬುದಾಗಿ ಕೇಳಿದಾಗ, ಅನೇಕ ಶಿಕ್ಷಕರ ಅಭಿಪ್ರಾಯಗಳು ಈ ಕೆಳಗಿನಂತಿದ್ದವು
೧. ಕಾರ್ಯಾಗಾರದ ವೇಳೆಯಲ್ಲಿಯೇ ನಮಗೆ ಶಾಲೆಗ ಹೋಗಿ ಯಾವಾಗ ನಮ್ಮ ಮಕ್ಕಳೊಂದಿಗೆ ಈ ಚಟುವಟಿಕೆಗಳನ್ನು ಹಂಚಿಕೊಳ್ಳಲಿ ಎಂದು ಅನಿಸುತ್ತಿತ್ತು. ಅಷ್ಟೊಂದು ಕಾತುರ ಹಾಗೂ ಕುತೂಹಲ ನಮಗೆ ಇತ್ತು. ಶಾಲೆಗೆ ಹೋದ ತಕ್ಷಣ ಈಗಾಗಲೇ ಆದ ಪಾಠವಾದರೂ ಸಹ ಪುನಃ ಅಕ್ಷಾಂಶ ಮತ್ತು ರೇಖಾಂಶವೆAಬ ಪಾಠವನ್ನು ಅರ್ಥೈಸಲು ಕಾರ್ಯಾಗಾರದಲ್ಲಿ ಮಾಡಿದ ಅಕ್ಷಾಂಶ ರೇಖಾಂಶಗಳ ರಚನೆ, ಸ್ಥಳೀಯ ವೇಳೆಯನ್ನು ಕಡುಹಿಡಿಯುವ ಚಟುವಟಿಕೆಯನ್ನು ಮಾಡಿ ಆನಂದಿಸಿದೆ ಎಂದು ಫುಲ್‌ಭಾಗ ಗಲ್ಲಿಯ ಶಿಕ್ಷಕರು ತಿಳಿಸಿದರು.
೨. ಇನ್ನೋರ್ವ ಶಿಕ್ಷಕರು ಪರಿಸರ ಬಗ್ಗೆ ಕಾರ್ಯಾಗಾರದಲ್ಲಿ ತಿಳಿಸಿರುವಂತೆ ಎಲೆಯಿಂದ ನಮಗೆ ಸಿಗುವ ಆಕ್ಸಿಜನ್ ಬಗ್ಗೆ ಲೆಕ್ಕ ಹಾಕಲು ತಿಳಿಸಿ, ಮರಗಳನ್ನು ಬೆಳೆಸುವ ಮಹತ್ವ ಹೇಳಿದಾಗ, ನಮ್ಮ ಶಾಲೆಯ ಅನೇಕ ಮಕ್ಕಳ ಕಣ್ಣಲ್ಲಿ ನೀರು ಬಂದಿತು ಹಾಗೂ ಪರಿಸರದ ಕಾಳಜಿ ಹುಟ್ಟಿತು ಎಂದು ಪೋಲೀಸ್ ಹೆಡ್ ಕ್ವಾಟರ್ಸ ಶಾಲೆಯ ಶಿಕ್ಷಕರು ತಿಳಿಸಿದರು.
೩. ಇನ್ನೊರ್ವ ಶಿಕ್ಷಕರು ಅಕ್ಷಾಂಶ ಮತ್ತು ರೇಖಾಂಶದ ಎಲ್ಲ ಚಟುವಟಿಕೆಗಳನ್ನು ನಾನು ೮ ನೇಯ ತರಗತಿಯ ವಿದ್ಯಾರ್ಥಿಗಳಿಗೆ ಮಾಡಿಸಿದಾಗ ನಮ್ಮ ಮಕ್ಕಳ ಖುಷಿಗೆ ಪಾರವೇ ಇರಲಿಲಲ್ಲ ಹಾಗೂ ಎಲ್ಲ ಪಾಠಗಳನ್ನು ಸಹ ಹೀಗೆಯೇ ಅನುಕೂಲಿಸಬೇಕೆಂದು ಬಯಸಿದರು.
೪. ಸಂವಿಧಾನದ ಪರಿಕಲ್ಪನೆ ಕಾರ್ಯಾಗಾರದಲ್ಲಿ ಮಾಡಿದ ಸಂವಿಧಾನದ ರಚನೆಯ ಮಹತ್ವವನ್ನು ತಿಳಿಸುವ ಚಟುವಟಿಕೆಯನ್ನು ಸಂವಿಧಾನ ಪಾಠವನ್ನು ಅರ್ಥೈಸುವಾಗ ಮಾಡಿಸಿದ ಮೇಲೆ ಮಕ್ಕಳು ಸಂವಿಧಾನ ನಮ್ಮದು, ನಾವೆಲ್ಲರೂ ಕೂಡಿ ಮಾಡಿರುವಂತಹದ್ದು ಎಂಬ ಅನುಭವ ಪಡೆದರು. ಎಂದು ತಿಳಿಸಿದರು.
ಸಲಹೆಗಳು
ಕಾರ್ಯಾಗಾರದಲ್ಲಿ ಬಂದ ಸಲಹೆಗಳನ್ನು ಕೂಡಾ ವೀಕ್ಷಣೆಯ ಕಾಲದಲ್ಲಿ ಕೆಳಿ ಕ್ರೋಡೀಕರಿಸಲಾಯಿತು ಅವುಗಳೆಂದರೆ,
೧. ಕಾರ್ಯಗಾರಗಳು ರಜೆಯಲ್ಲಿ ಅಥವಾ ಜೂನ್ ದಲ್ಲಿಯೇ ಆಗಬೇಕು
೨. ಕಾರ್ಯಾಗಾರದ ಸಾಹಿತ್ಯವನ್ನು ಕಾರ್ಯಾಗಾರಗಳಲ್ಲಿಯೇ ದೊರೆಯುವಂತೆ ಮಾಡಬೇಕು.
೩. ಎಲ್ಲರಿಗೂ ಒಂದೇ ರೀತಿಯ ದಿನಭತ್ಯೆ, ಪ್ರವಾಸ ಭತ್ಯೆ ನೀಡದೇ ನಾವು ಎಷ್ಟು ದೂರದಿಂದ ಬರುತ್ತೇವೆ ಎಂಬುದನ್ನೂ ಪರಿಗಣಿಸಬೇಕು.
೪. ಕಾರ್ಯಾಗಾರಗಳನ್ನು ಉರ್ದು, ಮರಾಠಿ, ಇಂಗ್ಲೀಷ, ಹೀಗೆ ಎಲ್ಲ ಭಾಷೆಗಳಿಗೆ ಸಂಬAಧಿಸಿದ ಶಿಕ್ಷಕರಿಗೆ ಅವರ ಭಾಷೆಯಲ್ಲಿಯೇ ದೊರೆಯುವಂತೆ ಮಾಡಬೇಕು
೫. ಕಾರ್ಯಾಗಾರದ ಸಾಹಿತ್ಯ ಇತರ ಎಲ್ಲ ಭಾಷೆಗಳಲ್ಲಿ ತುರ್ಜುಮೆ ಮಾಡಬೇಕು.

ಉಪಸಂಹಾರ
ಒಟ್ಟಾರೆಯಾಗಿ ವಿಶಿಷ್ಟ ವಿನೂತನವಾದ ಗುರುಚೇತನದ ಕಾರ್ಯಾಗಾರಗಳು ಕರ್ನಾಟಕದ ಪ್ರಾಥಮಿಕ ಶಿಕ್ಷಕರಲ್ಲಿ ಸಂಚಲನ ಉಂಟುಮಾಡಿರುತ್ತವೆ. ಕಾರ್ಯಾಗಾರಗಳಲ್ಲಿ ಸೃಜನಾತ್ಮಕತೆ, ವಿಭಿನ್ನತೆಯನ್ನು ಎಲ್ಲ ಹಂತಗಳಲ್ಲಿ ಗುರುತಿಸಬಹುದಾಗಿದೆ. ಕಾರ್ಯಾಗಾರದ ನಂತರ ತರಗತಿಗಳಲ್ಲಿ, ಚಟುವಟಿಕೆಯ ಮೂಲಕ ಪರಿಕಲ್ಪನೆಗಳನ್ನು ಗಟ್ಟಿಗೊಳಿಸುವ ಪ್ರಕ್ರಿಯೆಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಾದ ಸಮಾನತೆ, ಸಹಕಾರ, ಅಭಿವ್ಯಕ್ತಿ ಸ್ವಾತಂತ್ರ್ಯ, ಇತ್ಯಾದಿ ಮೌಲ್ಯಗಳನ್ನು ಸಹ ಕಾಣಬಹುದಾಗಿದೆ. ಸಹ ಶಿಕ್ಷಕ ಸುಗಮಕಾರನಾಗಿ ಅನುಕೂಲಿಸುವ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳುವುದನ್ನು ಈ ಕಾರ್ಯಾಗಾರಗಳಲ್ಲಿ ಕಾಣಬಹುದಾಗಿದೆ. ಈ ಪ್ರಕ್ರಿಯೆಯಿಂದ ನಮ್ಮ ಸಂವಿಧಾನದ ಆಶಯಗಳನ್ನು ಈಡೇರಿಸಿ ಉತ್ತಮ ಸಮಾಜವನ್ನು ಕಟ್ಟಬಹುದು. ಶಿಕ್ಷಕರಿಲ್ಲದೇ ಇನ್ನಾರಿಗೂ ಸದೃಢ ಸಮಾಜ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಲು ಸಾಧ್ಯವಾಗದು. ಶಿಕ್ಷಕರು ಕೇವಲ ಅಕ್ಷರ ಕಲಿಸುವವರಲ್ಲ ಬದಲಾಗಿ ಈ ದೇಶದ ಭವಿಷ್ಯಕ್ಕೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ರೂಪಿಸುವವರು.
“ಯಾವುದೇ ಒಂದು ದೇಶ ಹಾಗೂ ಸಮಾಜ ಅಲ್ಲಿನ ಶಿಕ್ಷಕರ ಮಟ್ಟವನ್ನು ಮೀರಿರಲು ಸಾಧ್ಯವಿಲ್ಲ” ಎಂಬ ಹೇಳಿಕೆಯಂತೆ ಸಮಾಜದ ನಿರೀಕ್ಷೆಗಳನ್ನು ಈಡೇರಿಸುವ ಶಿಕ್ಷಕರ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಕಾರ್ಯಾಗಾರಗಳು ಅತ್ಯಂತ ಪೂರಕವಾಗುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

Leave a Reply

Back To Top