ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್
ಅಲ್ಲಿ ನಿನ್ನ ನೆರಳಷ್ಟೇ ಇತ್ತು ನೀನಿರಲಿಲ್ಲ
ನಿನ್ನ ಹೆಜ್ಜೆಯ ಜಾಡಷ್ಟೇ ಇತ್ತು ನೀನಿರಲಿಲ್ಲ
ಅಲ್ಲಿಯ ಗಿಡ ಮರಕೆ ಏನು ಹೇಳಿದ್ದೆಯೋ
ನೀ ಉಸಿರುವ ಗಾಳಿಯಷ್ಟೇ ಇತ್ತು ನೀನಿರಲಿಲ್ಲ
ಉರಿ ಬಿಸಿಲಲ್ಲೂ ನಳನಳಿಸುವ ರಾಜೋದ್ಯಾನ
ಆದರಿಸುವ ಹಸಿರಷ್ಟೇ ಇತ್ತು ನೀನಿರಲಿಲ್ಲ
ಹಾಳಾದ ಅವಶೇಷ ಮತ್ತೆ ವಿಜೃಂಭಿಸಿದೆ
ಅರಮನೆ ವೈಭವವಷ್ಟೇ ಇತ್ತು ನೀನಿರಲಿಲ್ಲ
ಕಾವ್ಯ ಗೋಪುರ ಕಟ್ಟಿ ಕಳಸವಿಟ್ಟಿರುವಿ
ತಂಬೂರಿ ಶೃತಿಯಷ್ಟೇ ಇತ್ತು ನೀನಿರಲಿಲ್ಲ
ಬೆನ್ನ ಹಿಂದೆ ಬಚ್ಚಿಟ್ಟುಕೊಳ್ಳುವ ಖಯಾಲಿ ನಿನಗೆ
ಕಣ್ಣ ಮುಂದೆ ಬೆಳಕಷ್ಟೇ ಇತ್ತು ನೀನಿರಲಿಲ್ಲ
ಬೇರೇನು ಬೇಕಿಲ್ಲ ಹೊನ್ನ ಭಂಡಾರ ಸೂರಾಡಿರುವಿ
ಅಂತರಾತ್ಮದ ಒಲವಷ್ಟೇ ಇತ್ತು ನೀನಿರಲಿಲ್ಲ
ಒಂದೆಡೆಗೆ ನಿಲ್ಲದ ಜಗದ ಜಂಗಮ ನೀನು
ಹಾವುಗೆಯ ದೂಳಷ್ಟೇ ಇತ್ತು, ನೀನಿರಲಿಲ್ಲ
ಅರುಣಾಗೆ ಒಮ್ಮೆ ಮುಖಾಮುಖಿಯಾಗು ಕನಕ
ನಿನ್ನೆದೆಯ ಪ್ರೀತಿಯಷ್ಟೇ ಇತ್ತು ನೀನಿರಲಿಲ್ಲ