ಬಸವ ಜಯಂತಿಯ ವಿಶೇಷ

ಡಾ.ದಾನಮ್ಮ ಝಳಕಿ

ಸಮ ಸಮಾಜದ ನಿರ್ಮಾತೃ ಬಸವಣ್ಣ

ಗುರು ವ್ಯಕ್ತಿಯಲ್ಲ, ಲಿಂಗ ವಸ್ತುವಲ್ಲ ಜಂಗಮ ಜಾತಿ ಅಲ್ಲ ಎಂದು ಹೇಳುವ ಮೂಲಕ ನವ ಧರ್ಮದ ಹೊಸ ಅಧ್ಯಾಯವನ್ನೇ ಪ್ರಾರಂಭಿಸಿದವರು ವಿಶ್ವಗುರು ಬಸವಣ್ಣನವರು. ವರ್ಣ, ವರ್ಗ, ಜಾತಿ, ಧರ್ಮ, ಹಾಗೂ ಲಿಂಗ ಆಧಾರದಲ್ಲಿ ಸಮಾಜದಲ್ಲಿ ಶ್ರೇಣೀಕೃತ ವ್ಯವಸ್ಥೆಯನ್ನು ಹುಟ್ಟು ಹಾಕಿ, ದೀನ ದಲಿತರ, ಬಡವರ, ಶೋಷಿತರ, ಮಹಿಳೆಯರ, ಅಲ್ಪಸಂಖ್ಯಾತರ ಹಾಗೂ ಕೆಳ ಅಂಚಿನಲ್ಲಿ ಇರುವ ಎಲ್ಲರನ್ನೂ ಉಸಿರುಗಟ್ಟಿಸುವ ಜಡ ವ್ಯವಸ್ಥೆಯಲ್ಲಿ ಬದುಕುವಂತೆ ಮಾಡಿದ ವೈದಿಕ ಆಚರಣೆಗಳನ್ನು ಮೆಟ್ಟಿನಿಂತು ಸಾಮಾಜಿಕ ಕ್ರಾಂತಿಗೆ ದಾರಿದೀಪವಾದರು ಬಸವಣ್ಣವರು.
ವಿಶ್ವ ಗುರು ಬಸವಣ್ಣನವರು ವಿರೋದಿಸುತ್ತಿರುವುದು ಬ್ರಾಹ್ಮಣ ರನ್ನಲ್ಲ, ಬ್ರಾಹ್ಮಣ್ಯವನ್ನು, ವೈದಿಕ ಆಚರಣೆಗಳನ್ನು ಮಾತ್ರ. ಯಾವುದೇ ಜಾತಿ, ಧರ್ಮ ಆಧಾರದಿಂದ ತಾರತಮ್ಯ ಮಾಡದೇ, ಲಿಂಗ ಧರಿಸಿದವರೆಲ್ಲರು ಲಿಂಗಾಯತರು . ಸಮಸಮಾಜದ, ಸಮಷ್ಠಿಭಾವದ ಆಶಯದ ಲಿಂಗಾಯತ ಧರ್ಮವು ದೀನ ದಲಿತರ, ಮಹಿಳೆಯರ, ನಿರ್ಗತಿಕರ ಮತ್ತು ಕೆಳ ಅಂಚಿನಲ್ಲಿದ್ದವರನ್ನು ಬಸವ ಧರ್ಮ ಮೇಲೆತ್ತುವ ಕಾರ್ಯ ಮಾಡಿದೆ. ಆದ್ದರಿಂದ ಆ ಜಾತಿ ಈ ಜಾತಿ ಎಂದು ಹೊರಗಿಡದೇ ಎಲ್ಲರನ್ನೂ ಒಳಗೊಳ್ಳುವ, ಕಾಯಕ ದಾಸೋಹ ಬಿತ್ತುವ, ಇಷ್ಟಲಿಂಗ ಪರಿಕಲ್ಪನೆಯ ಮಹಾ ಮಾನವತಾವಾದಿ ಧರ್ಮ ಬಸವ ಧರ್ಮ ಅಥವಾ ಲಿಂಗಾಯತ ಧರ್ಮ. ಶರಣರು ಸಮಸಮಾಜವನ್ನು ಹುಟ್ಟು ಹಾಕುವದರ ಮೂಲಕ ಎಲ್ಲರಿಗೂ ಆಧ್ಯಾತ್ಮದ ಪ್ರಸಾದವನ್ನು ನೀಡಿದರು. ವಿಶ್ವಧರ್ಮ, ಮಾನವತಾವಾದದ ಹರಿಕಾರರೂ ಸಂಸ್ಥಾಪಕರೂ ಆದ ಗುರು ಬಸವಣ್ಣನವರು ಅರಿವೇ ಗುರು ಆಚಾರವೇ ಲಿಂಗ ಅನುಭವವೇ ಜಂಗಮ ಎಂಬ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದರು. ದಯವೇ ಧರ್ಮದ ಮೂಲತವಯ್ಯ ಎಂದು ಹೇಳುವ ಮೂಲಕ ಸಕಲ ಜೀವಿಗಳ ಹಿತ ಬಯಸಿದವರು ಬಸವಣ್ಣನವರು.
ದಾನ ಎಂಬ ವೈದಿಕ ಪರಿಕಲ್ಪನೆಯನ್ನು ತಿರಸ್ಕರಿಸಿ ದಾಸೋಹ ಎಂಬ ಸಮಷ್ಠಿಭಾವವನ್ನು ಮೈಗೂಡಿಸಿದರು. ಕರ್ಮ ಎಂಬ ಬೇಡಿಗಳನ್ನು ಕಿತ್ತು ಹಾಕಿ, ಕಾಯಕ ಎಂಬ ಪರಿಕಲ್ಪನೆಯ ಮೂಲಕ ಶ್ರಮಗೌರವವನ್ನು, ವೃತ್ತಿ ಗೌರವವನ್ನು ಎತ್ತಿಹಿಡಿಯುವ ಮೂಲಕ ವ್ಯಕ್ತಿಗೌರವವನ್ನು ತಂದುಕೊಟ್ಟರು.
ಕಲ್ಲು ಮಣ್ಣು ಕಟ್ಟಿಗೆ ಇತ್ಯಾದಿಗಳ ಮೂರ್ತಿ ಪೂಜೆ, ಯಜ್ಞ-ಯಗಾದಿ ಹಾಗೂ ಸೂತಕಗಳ ನೆಪದಲ್ಲಿ ಶೋಷಣೆಗೆ ಬಲಿ ಪಶುವಾದ ಜನಕ್ಕೆ ಆಶಾ ಕಿರಣವಾಗಿ ಪರಿಣಮಿಸಿದರು ವಿಶ್ವಗುರು ಬಸವಣ್ಣನವರು. ಸ್ಥಾವರ ಲಿಂಗವನ್ನು ಅಲ್ಲಗೆಳೆದು ಚೈತನ್ಯದ ಸ್ವರೂಪಿ, ಅರುವಿನ ಕುರು ಆಗಿ ಇಷ್ಟ ಲಿಂಗ ಕೊಟ್ಟರು. ಎಲ್ಲರಿಗೂ ಆಧ್ಯಾತ್ಮದ ಅನುಭವವನ್ನು ಅತ್ಯಂತ ಸರಳವಾಗಿ ತಿಳಿಸಿಕೊಟ್ಟರು. ಅಷ್ಟಾವರಣ, ಪಂಚಾಚಾರ ಹಾಗೂ ಷಟಸ್ಥಲದ ಮೂಲಕ ಕೇವಲ ಬಹಿರಂಗ ಅಲ್ಲದೇ ಅಂತರಂಗದ ಶುದ್ಧೀಕರಣಕ್ಕೂ ಕಾರಣೀಕರ್ತರಾದರು.

ಎಲ್ಲಾ ಸ್ತರದ ವ್ಯಕ್ತಿಗಳನ್ನು ಸಂಘಟಿಸಿ ಅವರಲ್ಲಿ ಹೊರಹೊಮ್ಮಿದ ಒಮ್ಮತದ ಶಕ್ತಿಯಿಂದ ಪರ್ಯಾಯ ಸಮಾಜ ನಿರ್ಮಾಣ ಮಾಡಿದ ಬಸವಣ್ಣನವರ ಕ್ರಾಂತಿಕಾರಕ ಹೆಜ್ಜೆ ಇಂದಿಗೂ, ಈ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಬೆರಗುಗೊಳಿಸುವಂಥದ್ದು. ಸಾಮಾನ್ಯರಾದ ಕಸಗೂಡಿಸುವ ಸತ್ಯಕ್ಕ, ಸೂಳೆ ಸಂಕವ್ವನಂತವರೂ ಸಹ ಅನುಭಾವಿಗಳಾದರು ಕೇವಲ ಬಾಯಿಂದ ಬಾಯಿಗೆ ಸಂಗತಿಗಳು ಪ್ರಚಾರಗೊಳ್ಳುತ್ತಿದ್ದ ಆ ಕಾಲದಲ್ಲಿ ಕೆಲವೇ ದಶಕಗಳಲ್ಲಿ ಒಂದು ಪರ್ಯಾಯ ಸಮಾಜ ಅಸ್ತಿತ್ವಕ್ಕೆ ಬಂದಿತೆಂದರೆ ಅದು ನಿಜಕ್ಕೂ ಪವಾಡವೇ ಸರಿ.
ಜನಾಂದೋಲನಕ್ಕೆ ಹೊಸ ವ್ಯಾಖ್ಯಾನ ಬರೆದ ರೀತಿಯಲ್ಲಿ ಸಮಾಜದ ಎಲ್ಲಾ ಕೋನಗಳಿ೦ದ ಜನರನ್ನು ಸೆಳೆದ ಕಲ್ಯಾಣ ಕ್ರಾಂತಿ, ಇಂದು ಜಗತ್ತು ಬಯಸುವ ಪರಿವರ್ತನೆಯ ಶಕ್ತಿಗೆ ಪರಮೋಚ್ಛ ಉದಾಹರಣೆ. ಅದು ಸಹಜವೊ ಎಂಬಂತೆ ಉತ್ತರದಾಯಿತ್ವ (accountability)ದ ನೆರಳಡಿಯಲ್ಲೇ ಅನೇಕ ಶರಣರು ಸಂದರ್ಭೋಚಿತ ನಾಯಕತ್ವದೊಂದಿಗೆ ಕೈ ಜೋಡಿಸಿದರು. ಅಸಾಧ್ಯವಾದುದನ್ನು ಸಾಧಿಸಿದರು. ಈ ಯಶೋಗಾತೆಯೇ ಕಲ್ಯಾಣ ಕ್ರಾಂತಿಯ ವ್ಯಾಕರಣವನ್ನು ಬಿಡಿಸುತ್ತದೆ.
ಇವೆಲ್ಲವನ್ನೂ ಸಾಧ್ಯಗೊಳಿಸಿದ ಬಸವಣ್ಣನವರ ಮುನ್ನಡೆಸುವ ಕಾರ್ಯಕ್ಷಮತೆ ಹೇಗಿತ್ತು ಎನ್ನುವುದೇ ನಮ್ಮ ಧರ್ಮದ ಅಂಗಳದಲ್ಲಿ ಕಾಣಸಿಗುವ ಒ೦ದು ಅದ್ಭುತ ಚಿಲುಮೆ. ಅವರು ಬೇರೆಯವರನ್ನು ಹುರಿದುಂಬಿಸುವ, ಯಾವ ಧಾರ್ಮಿಕ ಸ೦ಸ್ಕಾರವಿಲ್ಲದೇ ಇದ್ದವರನ್ನು ಮುಖ್ಯ ಆಧ್ಯಾತ್ಮಿಕ ಹಾದಿಗೆ ಕರೆತರುವ ವಿಧಾನ ಇಂದಿಗೂ ಜಾಗತಿಕ ಮಟ್ಟದಲ್ಲಿ ಸೈ ಎನಿಸಿಕೊಳ್ಳುತ್ತದೆ. ಯಾವುದೇ ಪ್ರಸಿದ್ಧ ನೇತಾರನೂ ದಂಗು ಬಡಿಯುವಂತೆ ಮಾಡುತ್ತದೆ.
“ಭಕ್ತಿಯಿಲ್ಲದ ಬಡವ ನಾನಯ್ಯ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ
ಚನ್ನಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ
ಎಲ್ಲಾ ಪುರಾತರು ನೆರೆದು ಭಕ್ತಿ ಬೀಜವನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ. “

ಭಕ್ತಿ ಭಂಡಾರಿ ಬಸವಣ್ಣನವರು ಹೇಳುತ್ತಿದ್ದಾರೆ ‘ಭಕ್ತಿಯಿಲ್ಲದ ಬಡವ ನಾನಯ್ಯ’ ಎಂದು! ಒಬ್ಬ ನಿಜವಾದ ನಾಯಕನಿಗಿರಬೇಕಾದ ಮೂಲ ಗುಣವಿದು. ತನ್ನ ಸಾಮರ್ಥ್ಯವನ್ನು ಪ್ರದರ್ಶಿಸದೆ, ತನ್ನನ್ನು ತಾನು ಮೂಲೆಯವರಿಗಿಂತ ಮೂಲೆಯವನೆಂದು ಕರೆದುಕೊ೦ಡು, ಮೂಲೆಗುಂಪಾಗಿದ್ದವರ ಮನಸ್ಸನು ಅಣಿಗೊಳಿಸುವ ಚಾತುರ್ಯವನ್ನು ನಾವು ಈ ಸಾಲಿನಲ್ಲಿ ಗಮನಿಸಬೇಕು. “ನಾನು ಭಕ್ತಿಭಂಡಾರಿ ಬಸವಣ್ಣ” ಎಂದು ಕರೆದುಕೊಂಡು, “ಬನ್ನಿ ಎಲ್ಲರಿಗು ಭಕ್ತರಾಗುವುದು ಹೇಗೆಂಬುದನ್ನು ಕಲಿಸುತ್ತೇನೆ” ಎಂದು ಹೇಳಿದ್ದರೆ ಆ ಮೂಲೆಗುಂಪಾಗಿ ಮುದುಡಿಹೋಗಿದ್ದ ಜನರ ಮನಸ್ಸನ್ನು ಬಸವಣ್ಣನವರು ಮುಟ್ಟುತ್ತಿದ್ದರೇ? ಬದಲಿಗೆ ಅವರ ನಡುವೆ ಸಾಗರದಷ್ಟು ಅಂತರ ಬೆಳೆಯುತ್ತಿತ್ತು. ಅಲ್ಲಿಗೆ ದುರ್ಬಲರ ಮೇಲೆತ್ತುವ ಕಾರ್ಯ ತನಗೆ ತಾನೆ ಸೋತು (Self defeat) ಬಿಡುತ್ತಿತ್ತು.
ಬಸವಣ್ಣನವರ ‘ಭಕ್ತಿಯಿಲ್ಲದ ಬಡವ ನಾನಯ್ಯಾ’ ಸಾಲೇ ಮುಂದೆ ಜರುಗುವ ಭಾರೀ ಪರಿವರ್ತನೆಗೆ ಮುನ್ನುಡಿ. ಅವರು ಮತ್ತೇ ಹೇಳುತ್ತಾರೆ:
ಕಕ್ಕಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ’
.
ಬಸವಣ್ಣನವರು ತಮ್ಮ ಭಕ್ತಿ ಪಾತ್ರೆ ಹಿಡಿದು ಸಮಾಜದಲ್ಲಿ ನಿಕೃಷ್ಟಕ್ಕೆ ಒಳಗಾಗಿದ್ದ ಕಕ್ಕಯ್ಯನ ಮನೆಯ ಮುಂದೆ ಭಕ್ತಿಯ ಭಿಕ್ಷೆ ಬೇಡಿದರೆ ಕಕ್ಕಯ್ಯನವರಿಗೆ ಹೇಗಾಗಿರಬೇಡ? ಆಗಲೇ ಅಸಾಮಾನ್ಯವಾದ ಘಟನೆ ನಡೆಯಲು ಸಾಧ್ಯ. ಸುಪ್ತವಾಗಿ ಮಲಗಿದ್ದ ಆ ದೈತ್ಯ ಶಕ್ತಿ ಕಕ್ಕಯ್ಯನಲ್ಲಿ ಕೆಲಸ ಮಾಡಿಬಿಡುತ್ತದೆ. ತನ್ನ ಎಲ್ಲಾ ಬಡಬಡಿಕೆಯನ್ನು ಬದಿಗೊತ್ತಿ ಆಂತರಿಕ ಸಂಸ್ಕಾರಕ್ಕೆ ಮನಸು ಅಣಿಯಾಗುತ್ತದೆ. ಹಾಗೆಯೇ ದಾಸಯ್ಯನ ಮನಸ್ಸೂ ಚೇತೋಹಾರಿಯಾಗುತ್ತದೆ. ಆಗಲೇ ಇವರೀರ್ವರಲ್ಲಿ ಯುಗದ ಉತ್ಸಾಹ ಹೊಮ್ಮುವುದು.
ಒಂದು ಮೂರ್ಖ ಮನಸ್ಸು ಸಾಕು ವ್ಯವಸ್ಥೆಯನ್ನು ಕೆಡಿಸಲು, ಆದರೆ ಅದನ್ನು ಸರಿಪಡಿಸಲು ಒಬ್ಬ ಯುಗ ಪುರುಷನೇ ಬರಬೇಕು. ಅದಕ್ಕೇ ಹೆಸರಾಂತ ತತ್ವಜ್ಞಾನಿ ಹಾಗೂ ಆರ್ಥಿಕ ತಜ್ಞ ಪ್ರೊ ಶೂಮ್ಯಾಕರ ಹೇಳುತ್ತಾರೆ, “Any fool can make things complicated , but it requires a genius to make things simple” ಎಂದು. ಬಸವಣ್ಣನವರು ಮಾಡಿದ್ದೇ ಇದನ್ನು. ಹದಗೆಟ್ಟು ಕುಳಿತಿದ್ದ ಸಮಾಜವನ್ನು ಸರಿಪಡಿಸಲು ಸಾಧ್ಯವಾದದ್ದು ಅವರ ಈ ಅದ್ಭುತ ನಾಯಕತ್ವದ ನಡೆ!
ಮಾರ್ಟಿನ್ ಲೂಥರ್ ನಾಯಕತ್ವದ ಬಗ್ಗೆ ಹೇಳುತ್ತಾರೆ “Ultimately, a genuine leader is not a searcher for consensus but a moulder of consensus” ಬಸವಣ್ಣನವರು ಇದಕ್ಕಿಂತ ಮುಂದಕ್ಕೆ ಹೋಗಿ ಕೇವಲ ಒಮ್ಮತವಲ್ಲ, ಇರುವುದು ಇದೊಂದೇ ದಾರಿ ಎನ್ನುವ ಹಾಗೆ ಎಲ್ಲರನ್ನೂ ಬಡಿದೆಬ್ಬಿಸುತ್ತಾರೆ. ಒತ್ತಾಯದಿಂದಲ್ಲ ಅಥವಾ ಹೇರಿಕೆಯಿಂದಲ್ಲ ಆದರೆ ಮನವರಿಕೆ ಹಾಗೂ ನಂಬಿಕೆಗಳಿಂದ.

ಅಪ್ಪನು ನಮ್ಮ ಮಾದಾರ ಚೆನ್ನಯ್ಯ,ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,ಚಿಕ್ಕಯ್ಯ ನೆಮ್ಮಯ್ಯ ಕಾಣಯ್ಯ, ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,
ಎನ್ನನೇತಕ್ಕರಿಯಿರಿ ಕೂಡಲಸಂಗಯ್ಯ ?

ಎಲ್ಲರನ್ನೂ ಅಪ್ಪ, ಅಣ್ಣ ಎಂದು ಕರೆದು ಬಸವಣ್ಙನವರು ಲೋಕವೇ ಒಂದು ಮನೆ ಎಂಬ ತತ್ವ ಆಚರಣೆಗೆ ತಂದರು

ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ. / 1143

ಈ ವಚನದ ಮೂಲಕ ವೈಯಕ್ತಿಕ ಸುಧಾರಣೆಯಿಂದ ಸಮಾಜ ಸುಧಾರಣೆ ಸಾಧ್ಯ ಎಂಬ ಮೌಲ್ಯಗಳನ್ನು ಇದು ಹೊಂದಿದೆ
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. / 493

ಪ್ರತಿಯೊಬ್ಬ ಕಾಯಾ ವಾಚಾ ಮನಸಾ ಶುದ್ಧನಾಗಿ ಬಾಳಿದರೆ ಮಾತ್ರ ಆ ಚೈತನ್ಯ ಸ್ವರೂಪಿ ದೇವರನ್ನು ಒಲಿಸಿ ಕೊಳ್ಳಲು ಸಾಧ್ಯ ಎಂಬುದನ್ನು ವಚನಕಾರರು ಈ ಸಪ್ತಸೂತ್ರಗಳನ್ನು ನೀಡಿದ್ದಾರೆ.
ದೇವಲೋಕ ಮತ್ರ್ಯಲೋಕವೆಂಬುದು ಬೇರಿಲ್ಲ ಕಾಣಿರೋ !
ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮತ್ರ್ಯಲೋಕ. ಆಚಾರವೆ ಸ್ವರ್ಗ, ಅನಾಚಾರವೆ ನರಕ. ಕೂಡಲಸಂಗಮದೇವಾ, ನೀವೆ ಪ್ರಮಾಣು. / 753
ಸ್ವರ್ಗ ನರಕಗಳನ್ನು ಸಾವಿನ ಅನಂತರ ಅಧ್ಯಾಯವಾಗಿ ಎಂದೂ ಭಾವಿಸದೇ ಅವೆರಡೂ ಇಲ್ಲೇ ನಮ್ಮ ನಡೆ ನುಡಿಯಲ್ಲಿ ಎಂದು ಹೇಳಿದರು
ಕಂಡ ಭಕ್ತರಿಗೆ ಕೈಮುಗಿಯುವಾತನೆ ಭಕ್ತ,
ಮೃದುವಚನವೆ ಸಕಲ ಜಪಂಗಳಯ್ಯಾ,
ಮೃದುವಚನವೆ ಸಕಲ ತಪಂಗಳಯ್ಯಾ,
ಸದುವಿನಯವೆ ಸದಾಶಿವನ ಒಲುಮೆಯಯ್ಯಾ.
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. / 450

ಸದಾ ಎಲ್ಲರಿಗೂ ಹಿತವಾಗುವಂತೆ ಆಡುವ ಮಾತು ಜಪ,ತಪಕ್ಕೆ ಸಮಾನವಾದದ್ದು, ದೇವರ ಸಾಕ್ಷಾತ್ಕಾರಕ್ಕೆ ಏನೆಲ್ಲಾ ಕಷ್ಟಪಡುತ್ತೇವೆ. ಉಪವಾಸ, ವನವಾಸ, ಕಠಿಣವಾದ ತಪಸ್ಸು ಎಲ್ಲಾ ಮಾಡುತ್ತೇವೆ. ವಿನಯವಂತಿಕೆ, ಪ್ರೀತಿ ತುಂಬಿದ ಮಾತಿನ ಮುಂದೆ ಕಠಿಣ ಮಾರ್ಗಗಳ ಅವಶ್ಯಕತೆ ಇಲ್ಲ. ದೇವರ ಒಲುಮೆಗೆ ಮೃದುವಾಗಿ, ವಿನಯಪೂರಿತವಾಗಿ ಬೇರೆಯವರಿಗೆ ನೋವಾಗದ ರೀತಿಯಲ್ಲೇ ನುಡಿದರೆ ಸಾಕು ಇದೇ ವಿಚಾರಧಾರೆಯನ್ನು ಈ ಕೆಳಗಿನ ವಚನವೂ ಪುಷ್ಠೀಕರಿಸುತ್ತದೆ.
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು”

ಹೀಗೆ ಶೈಕ್ಷಣಿಕ ಮೌಲ್ಯಗಳ ಭಕ್ತಿಭಂಡಾರವನ್ನೇ ನಮ್ಮ ಶರಣರ ವಚನದಲ್ಲಿ ನೋಡಲು ಸಾಧ್ಯ. ನುಡಿದಂತೆ ನಡೆದು ತೋರಿಸಿ ಶೈಕ್ಷಣಿಕ ಮೌಲ್ಯಗಳನ್ನು ತಮ್ಮ ವಚನದ ಮೂಲಕ ತೋರಿಸಿದ್ದಾರೆ ಇಂದು ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆ ಇರುವದರಿಂದ ಇವೇ ನಮಗೆ ದಾರಿದೀಪವಾಗಲಿವೆ.
ಮಹಿಳೆ ಪುರುಷರಿಗಾಗಿ ಜಗತ್ತಿಲ್ಲಿಯೇ ಮೊದಲು ವಯಸ್ಕರ ಶಿಕ್ಷಣ ಅನುಭವ ಮಂಟಪದ ಮೂಲಕ ಸಿಗುತ್ತಿತ್ತು.
12 ನೇ ಶತಮಾನಕ್ಕೂ ಮೊದಲು ಪ್ರಜಾಪ್ರಭುತ್ವದ ಬೃಹತ್‌ ಪ್ರಯೋಗ ಜಗತ್ತಿನ ಯಾವ ಮೂಲೆಯಲ್ಲೂ ನಡೆದಿಲ್ಲ. ಉತ್ತಂಗಿ ಚನ್ನಪ್ಪನವರು ಹೇಳಿದಂತೆ “ಅನುಭವ ಮಂಟಪ” ಜಗತ್ತಿನ ಮೊದಲ ಪ್ರಜಾಪ್ರಭುತ್ವ.
ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವವೆಂದು ಬೀಗುವ ನಾವು ನಿಜವಾಗಿಯೂ ಆ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದೇವೆಯೇ? ನಮ್ಮಲ್ಲಿ ಸಮಾನತೆ, ಸಹೋದರತೆ ಭಾವ ನಿಜವಾಗಿಯೂ ಇದೆಯೇ? ಎಂಬ ಪ್ರಶ್ನೆಯ ಉತ್ತರಕ್ಕೆ ತಡಕಾಡಬೇಕಾಗಬಹುದು. ಇಂತಹ ಗೊಂದಲಕ್ಕೆ ಉತ್ತರ ವಚನಗಳಲ್ಲಿದೆ.
ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಗಿಂತ ಕರಕಷ್ಟ
ಕೂಡಲಸಂಗಮದೇವಾ. / 498

ಮಾನವನ ಸ್ವಾರ್ಥಗುಣ ಕಂಡು ವೇದನೆಯೊಂದಿಗೆ ಆಪ್ತವಾಗಿ ತಿಳಿಹೇಳುವಂತಿದೆ ಈ ಸಾಲುಗಳು
ಒಟ್ಟಿನಲ್ಲಿ ಹೇಳಬೇಕೆಂದರೆ ಈ ಎಲ್ಲ ವಿಷಯಗಳನ್ನು ಅವಲೋಕಿಸಿದರೆ ನಮ್ಮ ಶರಣರು ಪ್ರಭಾವಬೀರದೇ ಇರುವ ಕ್ಷೇತ್ರಗಳೇ ಇಲ್ಲ. ಆ ಕಾಲಘಟ್ಟದಲ್ಲಿಯೇ ಮೌಲ್ಯಗಳನ್ನು ಒಳಗೊಂಡ ಸಮಸಮಾಜದ ನಿರ್ಮಾಣವನ್ನು ಮಾಡಿದ್ದನ್ನು ಕಾಣಬಹುದು. ಉದಾತ್ತೀಕರಣಕ್ಕೆ ಶರಣರು ಕಾರಣೀಕರ್ತರಾದರು.
ಹೀಗೆ ಶರಣರು ಅಸ್ಪಶ್ಯತೆಯನ್ನು ನಿರ್ಮೂಲನಗೊಳಿಸಿ, ಜಾತೀಯತೆಯನ್ನು ತೊಡೆದುಹಾಕಿ, ಸ್ತ್ರೀ ಪುರುಷ ಬೇದವನ್ನಳಿಸಿ, ವರ್ಗ, ವರ್ಣ, ಜಾತಿ ರಹಿತ, ಸಾಂಸ್ಥಿಕವಲ್ಲದ ಸಮಾಜವನ್ನು ಕಟ್ಟುವ ಮೂಲಕ ಸಮಾಜದ ಪರಿವರ್ತನೆಯ ಹರಿಕಾರರಾದರು
ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಶರಣ ತತ್ವಗಳನ್ನು ಸಮರ್ಥವಾಗಿ ಅರ್ಥೈಸಿಕೊಂಡು ಅವುಗಳನ್ನು ನಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಂಡು ಶರಣರ ಆಶಯಗಳಂತೆ ಬದುಕೋಣ ನಮ್ಮ ಬದುಕನ್ನು ಹಸನಗೊಳಿಸೋಣ.


Leave a Reply

Back To Top