ಬಸವ ಜಯಂತಿಯ ವಿಶೇಷ

ಪಾರ್ವತಿ ಜಗದೀಶ್

12 ನೇಯ ಶತಮಾನದಲ್ಲಿ ಸಾಮಾಜಿಕ ಸಮಾನತೆ ಕ್ರಾಂತಿಯ ಹರಿಕಾರ, ಮೂಢ ನಂಬಿಕೆ ಜಾತಿ, ಬೇಧದ ಮೌಢ್ಯವನ್ನೇ ಕಿತ್ತೆಸೆದ ಜಗವನ್ನೇ ಮೆಟ್ಟಿ ನಿಂತ ಜಗಜ್ಯೋತಿ ಬಸವಣ್ಣನವರ ವಚನಗಳು ಅಂದಿಗೂ, ಇಂದಿಗೂ, ಎಂದೆಂದಿಗೂ ಮಹತ್ವ ಪೂರ್ಣವಾದಂತವುಗಳು ಹಾಗೂ ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯ ಆಗುವಂತಹವು..

“ಎನಗಿಂತ ಕಿರಿಯರಿಲ್ಲ. ಶಿವ ಭಕ್ತರಿಗಿಂತ ಹಿರಿಯರಿಲ್ಲ “
ವಚನದಲ್ಲಿ ಎಷ್ಟೇ ಕಲಿತರೂ, ಏನೇ ಸಾಧನೆ ಮಾಡಿದರೂ ನಾನಿನ್ನೂ ಏನನ್ನೂ ಸಾಧಿಸಿಲ್ಲ ನಾನೇ ಚಿಕ್ಕವನು ಅನ್ನುವ ವಿನೀತ ಭಾವ. ಆ ವಚನದಲ್ಲಿ ಹಿರಿಯ, ಕಿರಿಯರು ಯಾರು ಅನ್ನುವುದನ್ನು ಅರ್ಥಪೂರ್ಣವಾಗಿ ಹೇಳಿದ್ದಾರೆ. ನನಗಿಂತ ಕಿರಿಯರಿಲ್ಲ ಅಂದರೆ ನಾನೇ ಎಲ್ಲರಿಗಿಂತ ಕಿರಿಯ ಶಿವನ ಭಕ್ತರೇ ಹಿರಿಯರು ಅನ್ನುವ ಅರ್ಥ. ಕಿರಿತನ, ಹಿರಿತನ ಕೇವಲ, ವಯಸ್ಸಿಗೆ, ಗಾತ್ರಕ್ಕೆ, ಬಾಹ್ಯ ರೂಪಕ್ಕೆ ಸಂಬಂಧ ಪಟ್ಟಿಲ್ಲ. ಇಲ್ಲಿ ಕಿರಿತನಕ್ಕೆ ವಿನಮ್ರ ಭಾವ ಇದ್ದರೇ, ಹಿರಿತನಕ್ಕೆ ಸ್ವಾರ್ಥ, ಸಂಕುಚಿತ, ಅಜ್ಞಾನ, ಅಹಂಕಾರ ಭಾವವಿದೆ. ಅದರ ಬದಲಾಗಿ ನಾನು ಎಲ್ಲರಿಗಿಂತ ಕಿರಿಯ ಎಂಬ ಭಾವನೆ ಬಂದಾಗ ನಯ, ವಿನಯ ಸಹಜವಾಗಿ ಬಂದು ಎಲ್ಲರೊಂದಿಗೆ ಸ್ನೇಹ, ಬಾಂಧವ್ಯ ವೃದ್ಧಿಯಾಗಿ, ಅಹಂಕಾರ ಅಡಗುತ್ತದೆ ಜ್ಞಾನ ಕಲಿಕೆ ಅಕ್ಷಯ ಅನ್ನುವುದು ಅರಿವಿಗೆ ಬರುತ್ತೆ.

ಬಸವಣ್ಣನವರ ಇನ್ನೊಂದು ವಚನ ಹೀಗಿದೆ. ಕರಿ ಘನ ಅಂಕುಶ ಕಿರಿದೆನ್ನಬಹುದೇ?
ಬಾರದಯ್ಯ!!
ಗಿರಿ ಘನ ವಜ್ರ ಕಿರಿದೆನ್ನಬಹುದೇ? ಬಾರದಯ್ಯ!!
ತಮಂದ ಘನ ಜ್ಯೋತಿ ಕಿರಿದೆನ್ನಬಹುದೇ?
ಬಾರದಯ್ಯ!
ಮರೆವು ಘನ ನಿಮ್ಮ ನೆನವ ಮನ ಕಿರಿದೆನ್ನಬಹುದೇ?
ಬಾರದಯ್ಯ!
ಕೂಡಲ ಸಂಗಮದೇವ.

ಇದೇ ವಚನವನ್ನೇ ವಿಶ್ಲೇಷಣೆ ಮಾಡಿ ನೋಡಿದಾಗ ಇಲ್ಲಿ ನಾವು ಕಾಣುವ ಪ್ರತಿಯೊಂದು ಬಾಹ್ಯ ನೋಟಕ್ಕೆ ಕಿರಿದಾಗಿಯೇ ಕಾಣಿಸುತ್ತವೆ. ಅಂಕುಶದ ಗಾತ್ರ ಆಕಾರದಲ್ಲಿ ಕಿರಿದೇ ಆದರೂ ಅದು ಮದಗಜವನ್ನೇ ಪಳಗಿಸುವಲ್ಲಿ ಅದರ ಪಾತ್ರ ಹಿರಿದು. ಕಿರು ಹಣತೆ ಕಿರಿದಾದರೇನು? ಗಾಢವಾದ ಕತ್ತಲೆಯನ್ನು ತೊಲಗಿಸುವಲ್ಲಿ ತನ್ನ ಹಿರಿಮೆ ತೋರುವುದಿಲ್ಲವೇ? ವಜ್ರ ಗಾತ್ರದಲ್ಲಿ ಘನ ಬಂಡೆಗಿಂತಲೂ ಕಿರಿದೆ ಆದರೂ ಘನ ಗಾತ್ರದ ಬಂಡೆಯನ್ನೂ ಸೀಳುವಲ್ಲಿ ವಜ್ರದ ಪಾತ್ರ ಹಿರಿದು. ಹೀಗಿದ್ದ ಮೇಲೆ ನಾವು ಯಾವುದು ಬಾಹ್ಯ ನೋಟ ಮಾತ್ರದಿಂದಲೇ ಕಿರಿದು ಅಂದು ಕೊಳ್ಳುತ್ತಿವೋ ಅದು ಯಾವುದು ಕಿರಿದಲ್ಲವೆಂದಾಯ್ತು. ಯಾವುದು ನಮ್ಮರಿವಿಗೆ ದಕ್ಕುವುದೋ ಅದೇ ಹಿರಿದು. ವಚನದ ಕೊನೆ ಸಾಲಲ್ಲಿ ಹೇಳ್ತಾರೆ ನಿಮ್ಮ ನೆನವ ನನ್ನ ಮನ ಕಿರಿದೆನ್ನಬಹುದೇ? ಬಾರದಯ್ಯ! ಖಂಡಿತ ಹೌದು ದೇವರಿಗಿಂತ ನಮ್ಮ ಮನಸು ಕಿರಿದಲ್ಲ ಕಾರಣ ಮನದ ಮಂದಿರವೇ ದೇವನ ನೆಲೆ ಆಗಿರುತ್ತೆ. ಆಗ ನಮ್ಮಲ್ಲಿ ದೈವತ್ವ ಭಾವ ಬಂದು ದೇವರಿಗಿಂತ ನೆನವ ಮನ ಹಿರಿದಾದ ಪಾತ್ರ ವಹಿಸುತ್ತದೆ. ಇದನ್ನೇ ಶಂಕರಾಚಾರ್ಯರು “ಅಹಂ ಬ್ರಹ್ಮಾಸ್ಮಿ ” ಎಂದದ್ದು ಮನದಲ್ಲಿ ಬ್ರಹ್ಮತ್ವ ಇದ್ದಾಗ ನಮಗಿಂತ ಬೇರೆ ದೈವವುಂಟೆ? ಮತ್ತೊಂದು ಕಡೆಯಲ್ಲಿ ಕವಿ ಜಿ. ಎಸ್. ಶಿವರುದ್ರಪ್ಪ ಹೇಳ್ತಾರೆ “ಎಲ್ಲೋ ಹುಡುಕಿದೆ ಕಾಣದ ದೇವರ ಕಲ್ಲು ಮಣ್ಣೋಳಗೆ
ಇಲ್ಲೇ ಇರುವ ಪ್ರೀತಿ, ಸ್ನೇಹಗಳ ಗುರುತಿಸದಾದೆನು ನನ್ನೊಳಗೆ..

ಯಾವುದೋ ಒಂದು ಹಿರಿದಾದ ಶaಕ್ತಿ ಕಿರಿದಾದ ಮನದೊಳಗೆ ಆವಾಹನೆಯಾದರೇ ಕಿರಿದು ಹಿರಿದಾಗಿ ಮೆರೆದು ಶ್ರೇಷ್ಠವಾಗಲೂಬಹುದು. ಅದ್ರೆ ನಮ್ಮನದಲ್ಲಿ ನೆಲೆಗೊಳ್ಳುವ ಆ ಹಿರಿದಾದ ಶಕ್ತಿಯ ರೂಪ ಮಾತ್ರ ಮುಖ್ಯವಾದ ಸಂಗತಿ.
ಇಡೀ ಬ್ರಹಾಂಡದ ಸೃಷ್ಟಿಗೆ ಕಾರಣವಾದ ಒಂದು ಚಿಕ್ಕ ಅಣುವೆ ಪರ್ಯಾಪ್ತಗೊಂಡು ಅಣು ಬಾಂಬ್ ಆಗೀ ಜಗತ್ತನ್ನೇ ಲಯ ಮಾಡಬಹುದು. ಹಾಗಾದಾಗ ಇಲ್ಲಿ ಹಿರಿದ್ಯಾವುದು, ಕಿರಿಧ್ಯಾವುದು ಅನ್ನುವ ಗೊಂದಲ ಸಹಜವಲ್ಲವೇ?

ಭಾರತೀಯ ದಾರ್ಶನಿಕರು, ವಚನಕಾರರು, ದಾಸರು, ಶರಣರು ತತ್ವ ಮಿಮಾಂಸೆ ಕೂಡ ಅನುಮೋಧಿಸುವುದು ಅದನ್ನೇ. ಕಿರಿತನವೆನ್ನುವುದು ಬರೀ ಬಾಹ್ಯ ರೂಪಕ್ಕಲ್ಲ ಅಂತರಂಗದಿಂದ ಬಂದಾಗ ಕಿರಿತನ ಹಿರಿದಾಗಿ , ಹಿರಿತನ ತನ್ನ ಹಿರಿಮೆ ಕಳೆದುಕೊಂಡು ಸೌಮ್ಯ ಭಾವ ತಳೆಯುತ್ತದೆ.
ದಾಸರ ಒಂದು ಕೀರ್ತನೆಯಲ್ಲಿ ನೀನ್ಯಾಕೋ, ನಿನ್ನ ಹಂಗ್ಯಾಕೊ ರಂಗಾ? ನಿನ್ನ ನಾಮ ಬಲವೊಂದಿದ್ದರೆ ಸಾಕೋ ಅನ್ನುವ ಹಿರಿದೆನ್ನುವ ಸಾತ್ವಿಕತೆಯ ನಮ್ರ ಭಾವ ತೋರುತ್ತದೆ. ಜಗದ್ರಕ್ಷಕ ನಮ್ಮ ಕರಸ್ಥಲದಲ್ಲಿ ನೆಲೆಗೊಂಡು ಆತನ ನಾಮಬಲವೇ ಶಕ್ತಿ ರೂಪವಾಗಿ ಪರಿವರ್ತನೆ ಆಗುತ್ತದೆ ಅಲ್ಲಿಯವರೆಗೂ ದೇವ ಹಿರಿಯನಾಗಿದ್ದು ಕೊನೆಗೆ ಭಕ್ತನಿಗೆ ಹಿರಿಯ ಭಾವ ಬರುತ್ತದೆ..

ಮತ್ತೊಂದು ವಚನ ” ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ ಬ್ರಹ್ಮಾ0ಡದಿಂದತ್ತತ್ತ ನಿಮ್ಮ ಶ್ರೀ ಮುಕುಟ ಅಗಮ್ಯ, ಅಘೋಚರ ಅಪ್ರತಿಮ ಲಿಂಗವೇ ಕೂಡಲಸಂಗಮದೇವಯ್ಯ ನಿನ್ನ ಕರಸ್ಥಲಕ್ಕೆ ಬಂದು ಜುಳುಕಾದಿರಯ್ಯ..

ಇಡೀ ಬ್ರಹ್ಮಾ0ಡದ ಸ್ವರೂಪವೇ ಅಂಗೈಯಲ್ಲಿ ಲಿಂಗರೂಪಿಯಾಗಿ ನಿಲ್ಲುತ್ತದೆ. ಎಲ್ಲೆಲ್ಲಿಯೋ ಹುಡುಕಿ ಸಿಗದೇ ಬಸವಳಿದ ಶಕ್ತಿಯೊಂದು ಅಂಗೈಯಲ್ಲಿ ಲಿಂಗರೂಪಿಯಾಗಿ ನಿಲ್ಲುತ್ತದೆ ಅಂದರೆ ಅದಕ್ಕೆ ಪೂರಕವಾದ ಶಕ್ತಿಯೇ ಭಕ್ತಿ, ಶ್ರದ್ದೆ, ನಿಷ್ಠೆ ಅನ್ನುವ ಸದ್ಗುಣಗಳ ಸಂಗಮ ಶಕ್ತಿ. ಇಂತಹ ಅಗಮ್ಯ ಶಕ್ತಿ ಕೂಡ ಮೇಲ್ನೋಟಕ್ಕೆ ಕಿರಿದೇ. ಆದರೆ, ಬ್ರಹ್ಮಾ0ಡದ ಹಿರಿಮೆಯನ್ನೇ ಕಿರಿದಾಗಿಸುವ ಬೃಹತ್ ಗುಣ ಈ ಕಿರಿದಾದ ಭಾವಕ್ಕಿದೆ. ಏನಗಿಂತ ಕಿರಿಯರಿಲ್ಲ ನಿಜ ಆದರೆ ಹಿರಿತನವನ್ನೇ ಅಹಂಕಾರವಾಗಿಸಿಕೊಂಡವರ ಎದಿರು ನಾನು ಕಿರಿಯವನಾಗೆ ಹಿರಿತನದ ಅರ್ಥ ವಿವರಿಸುವೆ ಅನ್ನುವ ವಿನೀತ ಭಾವವಿದೆ ಅದರ ಜೊತೆ ಜೊತೆಗೆ ಒಂದು ರೀತಿಯಲ್ಲಿ ಸವಾಲು ಹಾಕುವಂತಿದೆ ಅದು ಅನುಭಾವಿಗಳಿಗೆ ಮಾತ್ರ ವೇದ್ಯವಾಗಲೂ ಸಾಧ್ಯ.

ಅದೇ ಸವಾಲು ರೂಪಕ್ಕೆ ಶಿಶುನಾಳ ಶರೀಫರ ತತ್ವ ಪದದ ತಾತ್ಪರ್ಯ ಹೀಗಿದೆ. ಕೊಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ ಕೊಡಗನ ಕೋಳಿ ನುಂಗಿತ್ತಾ, ಆಡು ಆನೆಯ ನುಂಗಿ, ಗೋಡೆ, ಸುಣ್ಣವ ನುಂಗಿ ಆಡಲು ಬಂದ ಪಾತರದವಳ ಮದ್ದಳೆ ನುಂಗಿತ್ತಾ ತಂಗಿ ಕೊಡಗನ್ನ ಕೋಳಿ ನುಂಗಿತ್ತಾ.
ಇದೇ ತತ್ವ ಪದದ ಸಾಲುಗಳನ್ನೂ ಅವಲೋಕನ ಮಾಡಿದರೇ ಕೊಡಗನ್ನ ಕೋಳಿ ನುಂಗೋದು, ಆಡು ಆನೆ ನುಂಗೋದು ಗೋಡೆ ಸುಣ್ಣ ನುಂಗೋದು ಪಾತರದವಳನ್ನು ಮದ್ಧಲೇ ನುಂಗೋದು ಎಂದಿಗಾದರೂ ಸಾಧ್ಯವಾ?.
ಹೌದು ಇದು ಲೌಕಿಕ ಜನರಿಗೆ ಆಸಾಧ್ಯವಾದರೂ ಅನುಭಾವಿಗಳಿಗೆ ಮಾತ್ರ ಸಾಧ್ಯವಾಗುವಂತಹದು. ಕಾರಣ ಕಿರಿದೆನ್ನುವುದು ಕುಬ್ಜವಾಗಿದ್ದರೂ ಸವಾಲೊಡ್ದುವ ಹಿರಿತನದೆದುರು ಆಂತರ್ಯದಲ್ಲೇ ಆಪಾರವಾದ ಹಿರಿತನ ತೋರುತ್ತದೆ.

ಇದಕ್ಕೆ ಇನ್ನೊಂದು ಪ್ರಚಲಿತ ಘಟನೆ ಅಂದರೆ ಕುಬ್ಜ ವಾಮನನು ಬಲಿ ಚಕ್ರವರ್ತಿತಿಯಿಂದ ದಾನ ಪಡೆಯುವಾಗ ಮೂರು ಲೋಕವನ್ನೇ ತನ್ನ ಪುಟ್ಟ ಪಾದಗಳಿಂದಲೇ ಆಕ್ರಮಿಸಿಕೊಂಡದ್ದಲ್ಲವೇ? ಬಾಹ್ಯರೂಪದಲ್ಲಿ ಕುಬ್ಜನಾದ ವಾಮನ ಇವನೇನು ಬೇಡಿಯಾನು ನನ್ನಿಂದ ಅನ್ನುವ ಉಪೇಕ್ಷ ಭಾವ ಮೊದಲು ಬಲಿಗಿತ್ತು. ನಂತರ ಕಾಣಿಸಿದ ಬ್ರಹತ್ ಆಕೃತಿಯಿಂದ ಭವ್ಯ ರೂಪಿಯಾದ ಬಲಿ ಚಕ್ರವರ್ತಿ ತಾನೇ ತಾನಾಗಿ ಕಿರಿದಾದನು ಅಹಂಕಾರ ಬಿಟ್ಟು ವಾಮನನಿಗೆ ತಲೆ ಬಾಗಿದ ಅದರರ್ಥ ಹಿರಿದೆನ್ನುವ ಅಹಂಕಾರ ಅಳಿದು ಕಿರಿದೆನ್ನುವ ವಿನೀತಭಾವವಾಯ್ತು. ಹಾಗೆಯೇ, ಹಿರಿದಾದುದು ಎಂದಿಗೂ ಹಿರಿದಲ್ಲ ಕಿರಿದೆಂದಿಗೂ ಕಿರಿದಾಗೆ ಉಳಿಯುವುದಿಲ್ಲ. ಕಾಲಕ್ಕನುಗುಣವಾಗಿ ಹಿರಿದಾಗಿ ಮೆರೆದ ಭಾವ ತನ್ನಷ್ಟಕ್ಕೆ ತಾನೇ ಕಿರಿದಾಗಲೂಬಹುದು.


Leave a Reply

Back To Top