ಅಮರ್ತ್ಯ ಸೇನ್ ಒಂದು ಚಿಂತನೆ-ಆಶಾ.ಎಸ್.

ಚಿಂತನ ಸಂಗಾತಿ

ಆಶಾ.ಎಸ್.

ಅಮರ್ತ್ಯ ಸೇನ್ ಒಂದು ಚಿಂತನೆ

ಅಮರ್ತ್ಯ ಸೇನ್ ಅವರದು ಇಂದು ಜಗತ್ತಿನಾದ್ಯಂತ ಒಂದು ಚಿರಪರಿಚಿತ ಹೆಸರು. ಸೇನ್ ಅವರು ಒಬ್ಬ ಸಾಮಾಜಿಕ ಕಳಕಳಿಯ ಅರ್ಥಶಾಸ್ತ್ರಜ್ಞ, ಅರ್ಥಶಾಸ್ತ್ರದ ಆತ್ಮಸಾಕ್ಷಿ ಎಂದು ಬಣ್ಣಿತವಾಗಿರುವ ಸೇನ್ ಅವರು ಒಬ್ಬ ದಾರ್ಶನಿಕ ಅರ್ಥಶಾಸ್ತ್ರಜ್ಞ, ರಾಜಶಾಸ್ತ್ರ, ತತ್ವಶಾಸ್ತ್ರ ನೀತಿಶಾಸ್ತ್ರ ಮತ್ತು ಅರ್ಥಶಾಸ್ತ್ರಗಳ ಮಧುರ ಸಂಗಮ ಸದೃಶ ಅಮರ್ತರ ವ್ಯಕ್ತಿತ್ವ. ಶ್ರೀಸಾಮಾನ್ಯರ ಅರ್ಥಶಾಸ್ತ್ರಜ್ಞರೆಂಬ ಪ್ರಶಂಸೆಗೆ ಪಾತ್ರರಾಗಿರುವ ಸೇನ್ ಅವರಿಗೆ ಜನಹಿತವೇ ಅವರ ಚಿಂತನೆಯ ಸ್ವರೂಪ.

ಬೆಳವಣಿಗೆ ಒಂದು ಮಾರ್ಗ. ಅದೇ ಗುರಿಯಲ್ಲ, ಅಂತಿಮವಲ್ಲ. ಜನಕಲ್ಯಾಣವೇ ನಿಜವಾದ ಗುರಿ. ಅದನ್ನು ತಲುಪದೆ ವಿರುದ್ಧದಿಕ್ಕಿನಲ್ಲಿ ಪಯಣಿಸುವ ಚಿಂತನೆಯೆಲ್ಲ ಜನವಿರೋಧಿ ಎಂದು ಹೇಳುವ ಅಮರ್ತ್ಯ ಸೇನ್ ಅವರು ಸದಾ ಜೀವಂತವಾದ ಕಾಳಜಿಗಳನ್ನು ಉಳಿಸಿಕೊಂಡ ಒಬ್ಬ ಅಪರೂಪದ ಅರ್ಥಶಾಸ್ತ್ರಜ್ಞ,

‘ವಾಸ್ತವ ವ್ಯಾವಹಾರಿಕತೆ’ಯೊಂದೇ ನಿಜ ಸಿದ್ಧಾಂತ ಅಥವಾ ತತ್ವ (Pragmatism is the only ‘ism’) ಎಂದು ಹೇಳುವ ಅಮರ್ತ್ಯ ಸೇನ್ ಅವರು ಅರ್ಥಶಾಸ್ತ್ರಕ್ಕೊಂದು ಮಾನವೀಯ ಮತ್ತು ನೈತಿಕ ಆಯಾಮ ನೀಡಿದವರಾಗಿದ್ದಾರೆ. ಅರ್ಥಶಾಸ್ತ್ರದಲ್ಲಿ ಕೇವಲ ಬಂಡವಾಳ ಹೂಡಿಕೆ, ಷೇರು ಮಾರುಕಟ್ಟೆ ಸೂಚ್ಯಂಕ, ಜಾಗತೀಕರಣದಂತಹ ಸಿರಿವಂತ ರಾಷ್ಟ್ರಗಳ ಫ್ಯಾಷನಬಲ್ ಕಾಳಜಿಗಳಿಂದ ದೂರವಿದ್ದು ತೃತೀಯ ಜಗತ್ತಿನ ಬಡವರ ಬದುಕಿನ ಬವಣೆಯನ್ನೇ ಶಾಸ್ತ್ರೀಯ ವಿಶ್ಲೇಷಣೆಗೊಳಪಡಿಸಿ ವಿಶಿಷ್ಟ ಒಳನೋಟಗಳನ್ನು ನೀಡುತ್ತಾ ಬಂದ ಅಮರ್ತರದ್ದು ಬಡರಾಷ್ಟ್ರಗಳ ಅರ್ಥಶಾಸ್ತ್ರಜ್ಞ’ ಎಂಬ ಹೆಗ್ಗಳಿಕೆ.

 ಕ್ಷಾಮ, ಹಸಿವು, ಬಡತನ, ಅಸಹಾಯಕತೆ ಮತ್ತು ಅಸಮತೆ ವಿಚಾರಗಳ ಬಗ್ಗೆ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಿರಂತರ ಚಿಂತನೆ, ಅಧ್ಯಯನ ಮತ್ತು ಸಂಶೋಧನೆ ನಡೆಸಿರುವ ಸೇನ್ ಅವರು ಬಡವರು ಮತ್ತು ನಿರ್ಗತಿಕರ ಬಗ್ಗೆ ವಿಶೇಷ ಅನುಕಂಪ ಮತ್ತು ಸಹಾನುಭೂತಿ ಹೊಂದಿದವರಾಗಿದ್ದಾರೆ. ಬಡತನ, ಕ್ಷಾಮ ಮತ್ತು ಅಸಮತೆ ವಿಚಾರಗಳ ಬಗ್ಗೆ ಸಮರ್ಥಪೂರ್ಣರಾಗಿ ಮಾತನಾಡುವ ಪ್ರಾವಿಣ್ಯತೆ ಹೊಂದಿರುವ ಸೇನ್ ಅವರು ಜಗತ್ತಿನ ಬಡಜನರ ಆಶಾಕಿರಣರಾಗಿದ್ದಾರೆ.

ಕೋಲ್ಕತ್ತದ ಶಾಂತಿನಿಕೇತನ ಸಮೀಪದ ಗುರುಪಲ್ಲಿ ಗ್ರಾಮದಲ್ಲಿ 1933ರ ನವೆಂಬರ್ 3 ರಂದು ಸೇನ್ ಅವರು ಜನಿಸಿದರು. ಅವರ ತಂದೆ ಅಶುತೋಷ್ ಸೇನ್ ಮತ್ತು ತಾಯಿ ಅಮಿತಾ ಸೇನ್, ಅಮರ್ತ ಸೇನ್ ಅವರದು ವಿದ್ವಾಂಸರ ವಂಶ, ಸೇನ್ ಅವರ ಅಜ್ಜ ಕ್ಷಿತಿಮೋಹನ್ ಸೇನ್ ಅವರು ಒಬ್ಬ ಹೆಸರಾಂತ ಸಂಸ್ಕೃತ ವಿದ್ವಾಂಸರು ಹಾಗು ಗುರುದೇವ ರವೀಂದ್ರನಾಥ ಟಾಗೋರರ ಸಹವರ್ತಿ, ಅಮರ್ತ್ಯ ಸೇನ್ ಜನನವಾದಾಗ ನಾಮಕರಣ ಮಾಡಲು ಟಾಗೋರರನ್ನು ಸೇನ್ ಅವರ ತಂದೆತಾಯಿಗಳು ಮನೆಗೆ ಆಹ್ವಾನಿಸಿದ್ದರು.

ಗುರುದೇವ ಟಾಗೋರರವರು ಮನೆಗೆ ಬಂದು ಮಗುವಿನ ಮುಖದಲ್ಲಿನ ತೇಜಸ್ಸನ್ನು ಗಮನಿಸಿ ಆ ಮಗುವಿಗೆ ‘ಅಮರ್ತ’ ಎಂದು ನಾಮಕರಣ ಮಾಡಿ, ತಾನು ಮಗುವಿಗೆ ಒಂದು ವಿಶಿಷ್ಟವಾದ ಹೆಸರಿಟ್ಟಿದ್ದೇನೆ. ಈ ಹೆಸರನ್ನು ಉಚ್ಚರಿಸುವಾಗ ಎಚ್ಚರವಹಿಸಬೇಕು. ಇಲ್ಲವಾದಲ್ಲಿ ಅದರ ಅರ್ಥ ಕೆಡುವುದೆಂದು ಎಚ್ಚರಿಸಿದ್ದರಂತೆ. ಏಕೆಂದರೆ ಅಮರ್ತ ಎಂದರೆ ಅವಿನಾಶಿ’ ಅಥವಾ ‘ನಾಶವಾಗದಂತಹ’ ಎಂಬ ವಿಶಿಷ್ಟವಾದ ಅರ್ಥವಿದೆ. ಮನೆಯಲ್ಲಿ ಅಮರ್ತ್ಯ ಸೇನ್ ಅವರ ಮುದ್ದಿನ ಹೆಸರು ‘ಬಬ್ಲು ಎಂಬುದಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತರಾಗಿದ್ದ ಗುರುದೇವ ಟಾಗೋರರವರು ಸೇನ್ ಅವರಿಗೆ ನಾಮಕರಣ ಮಾಡುವ ವೇಳೆ ಈ ಮಗೂ ಕೂಡ ತನ್ನ ಹಾಗೆ ಮುಂದೊಂದು ದಿನ ನೊಬೆಲ್ ಬಹುಮಾನ ಪಡೆದು ತನ್ನ ಹೆಸರಿಗೆ ತಕ್ಕಂತೆ ‘ಅವಿನಾಶಿ’ ಯಾಗುವನೆಂದು ಬಹುಶಃ ಊಹಿಸಿರುವುದೂ ಸಾಧ್ಯವಿಲ್ಲ. ಟಾಗೋರ್ ಅವರು ನೊಬೆಲ್ ಪಾರಿತೋಷಕ ಪಡೆದ 85 ವರ್ಷಗಳ ಅಂತರದಲ್ಲಿ ಸೇನ್ ಅವರಿಗೆ ನೊಬೆಲ್ ಪಾರಿತೋಷಕ ಬಂದಿದೆ. ಒಂದು ವ್ಯತ್ಯಾಸವೆಂದರೆ ಟಾಗೂರ್ ಅವರಿಗೆ ಸಾಹಿತ್ಯದಲ್ಲಿ ನೊಬೆಲ್ ಪುರಸ್ಕಾರ ದೊರೆತರೆ ಸೇನ್ ಅವರಿಗೆ ಅರ್ಥಶಾಸ್ತ್ರದಲ್ಲಿ ದೊರೆತಿದೆ.

ಬಡತನ ಮತ್ತು ಕ್ಷಾಮ (Poverty and Famines) : ಸೇನ್ ಅವರು 1981ರಲ್ಲಿ ಪ್ರಕಟಗೊಂಡ ತಮ್ಮ ಗ್ರಂಥ Poverty and Famines

An Essay on Entitlement and Deprivation ನಲ್ಲಿ ಬಡತನ ಮತ್ತು ಕ್ಷಾಮಗಳ ನಡುವಿನ ಸಂಬಂಧ, ಕ್ಷಾಮಗಳ ಕಾರಣ ಮತ್ತು ಪರಿಣಾಮಗಳ ಬಗ್ಗೆ ಮನೋಜ್ಞವಾಗಿ ವರ್ಣಿಸಿದ್ದಾರೆ. ಸೇನ್ ಒಂಬತ್ತು ವರ್ಷದ ಬಾಲಕನಾಗಿದ್ದಾಗ ತಮ್ಮ ತಾತ ಅವರೊಂದಿಗೆ ಕೋಲ್ಕತ್ತಾ ನಗರ ಹೋಗಿದ್ದಾಗ 1943ರ ಭೀಕರ ಬಂಗಾಲ ಕ್ಷಾಮದ ದುರಂತಮಯ ಸನ್ನಿವೇಶವನ್ನು ಕಣ್ಣಾರೆ ನೋಡಿದ್ದರು. ಸುಮಾರು 35 ಲಕ್ಷಕ್ಕೂ ಅಧಿಕ ಸಂಖ್ಯೆಯ ಜನರನ್ನು ಬಲಿತೆಗೆದುಕೊಂಡ  ಭೀಕರ ಕ್ಷಾಮದ ಕಾಲದಲ್ಲಿ ಕೋಲ್ಕತ್ತಾದ ಬೀದಿ ಬೀದಿಗಳಲ್ಲಿ ಜನರು ಸಾಯುತ್ತಿದ್ದ ಸನ್ನಿವೇಶ ಸೇನ್ ಅವರ ಮನಕಲುಕಿತ್ತು. ಮುಂದೆ ಸೇನ್ ಅವರು ಗ್ರಾಮಗಳ ಕಾರಣ ಮತ್ತು ಪರಿಣಾಮಗಳನ್ನು ಅರಿಯಲು ಸುಧೀರ್ಘವಾದ ಅಧ್ಯಯನ ನಡೆಸಿದರು.

ಕ್ಷಾಮಗಳು ನೈಸರ್ಗಿಕ ಕಾರಣಗಳು ಮತ್ತು ಆಹಾರದ ಕೊರತೆಯಿಂದಾಗಿ ಸಂಭವಿಸುತ್ತವೆ ಎಂಬ ಸಾಮಾನ್ಯ ಅಭಿಪ್ರಾಯ ಪ್ರಚಲಿತದಲ್ಲಿದೆ. ಆದರೆ 1943ರ ಬಂಗಾಲ ಕ್ಷಾಮ ಮತ್ತೆ ಜಗತ್ತಿನಾದ್ಯಂತ ಸಂಭವಿಸಿದ ಇತರೆ ಕ್ಷಾಮಗಳ ಬಗ್ಗೆ ಸುದೀರ್ಘವಾದ ಅಧ್ಯಯನ ನಡೆಸಿದ ಸೇನ್ ಅವರು “ಆಹಾರ ಕೊರತೆ ಇಲ್ಲದಿದ್ದಾಗ್ಯೂ ಕ್ಷಾಮಗಳು ಸಂಭವಿಸುತ್ತವೆ” ಎಂಬ ತೀರ್ಮಾನಕ್ಕೆ ಬಂದರು. ಅವರ ಪ್ರಕಾರ ಬಂಗಾಲದ ಕ್ಷಾಮ ನಿಸರ್ಗಜನ್ಯವಲ್ಲ, ಅದು ಮಾನವಕೃತ ಸನ್ನಿವೇಷ ಕ್ಷಾಮದ ಬಗ್ಗೆ ಅಮರ್ತಸೇನ್‌ರವರ ಅಭಿಪ್ರಾಯ (ಅವರ ಮಾತಿನಲ್ಲೇ) ಈ ಮುಂದಿನಂತಿದೆ.

“ಕೆಲವು ಕ್ಷಾಮಗಳಿಗೆ ಆಹಾರ ಪೂರೈಕೆಯ ಅಭಾವವೇ ಮುಖ್ಯ ಕಾರಣವಲ್ಲ, ಆರ್ಥಿಕ ಸ್ಥಿತಿಯ ಪರಿಣಾಮಗಳು ಅವು. ಆಹಾರ ಪೂರೈಕೆ ಯಥೇಚ್ಛವಾಗಿದ್ದಾಗಲೂ ಕ್ಷಾಮ ಸಂಭವಿಸಬಹುದು. ಜನರ ಕೈಯಲ್ಲಿ ಹಣವಿಲ್ಲದೆ ಅವರು ಆಹಾರ ಕೊಳ್ಳುವುದು ಸಾಧ್ಯವಾಗುವದಿಲ್ಲ ಜನತಂತ್ರಾತ್ಮಕ ವ್ಯವಸ್ಥೆ ಇರುವ ದೇಶಗಳಲ್ಲಿ ಕ್ಷಾಮದ ಭೀಕರತೆ ಕಡಿಮೆಯಿರುತ್ತದೆ. ಏಕೆಂದರೆ ವಿರೋಧ ಪಕ್ಷದವರು ಮತ್ತು ಸುದ್ದಿಮಾಧ್ಯಮಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಾರೆ. ಇದರಿಂದಾಗಿ ಸರ್ಕಾರ ಜನರ ರಕ್ಷಣೆಗೆ ಧಾವಿಸಲೇ ಬೇಕಾಗುತ್ತದೆ. ಆದರೆ ಜನತಂತ್ರವಿಲ್ಲದ ದೇಶಗಳಲ್ಲಿ ಕ್ಷಾಮ ನಾಯಕರನ್ನು ಬಾಧಿಸುವುದೇ ಇಲ್ಲ. ಲಕ್ಷಗಟ್ಟಲೆ ಜನ ಸತ್ತರೂ ಅವರನ್ನು ಹೊಣೆಗಾರರನ್ನಾಗಿ ಮಾಡುವಂತಿಲ್ಲ”.

ಹೀಗೆ ಅಮರ್ತ್ಯ ಸೇನ್ ಅವರ ಪ್ರಕಾರ ಆಹಾರ ಪೂರೈಕೆ ಯಥೇಚ್ಚವಾಗಿದ್ದಾಗಲೂ ಕ್ಷಾಮ ಸಂಭವಿಸಬಹುದು. ಅಂದರೆ ಕ್ಷಾಮಪೀಡಿತ ಪ್ರದೇಶಗಳಲ್ಲಿ ಆಹಾರ ಪೂರೈಕೆ ಅಧಿಕವಿದ್ದರೂ ಸಹ ಆಹಾರ ವಿತರಣೆಯ ದೋಷದಿಂದಾಗಿ ಕ್ಷಾಮದಿಂದ ಜನರು ಸಾಯುವಂತಾಗುತ್ತದೆ ಸೇನ್ ವಾದಿಸಿದ್ದಾರೆ.

 ಅವರ ಪ್ರಕಾರ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿ ಕ್ಷಾಮದ ಪರಿಣಾಮ ಕಡಿಮೆಯಿರುತ್ತದೆ. ಅವರು ಹೇಳುವಂತೆ ಜನತಂತ್ರ ವ್ಯವಸ್ಥೆಯು ಎಲ್ಲಾ – ಅತ್ಯುತ್ತಮವಾದ ವ್ಯವಸ್ಥೆಯಾಗಿದೆ. ಕ್ಷಾಮದ ಕಾಲದಲ್ಲಿ ಗ್ರಾಮೀಣ ಬಡಜನರ ಕೊಳ್ಳುವ ಶಕ್ತಿ ಕನಿಷ್ಟವಿರುತ್ತದೆ.

 ಕಾಳಸಂತೆ ದಾಸ್ತಾನು, ಹಣದುಬ್ಬರದ ಕಾರಣದಿಂದಾಗಿ ಮಿತಿಮೀರಿದ ಬೆಲೆಗಳು ಸುದ್ದಿಸಂಪರ್ಕದ ಅಭಾವ, ವಿತರಣೆಯಲ್ಲಿನ ದೋಷಗಳು, ಬಡಜನರ ಆಹಾರ ಕೊಳ್ಳುವ ಶಕ್ತಿಯ ಅಭಾವ ಮುಂತಾದ ಕಾರಣಗಳಿಂದಾಗಿ ಕ್ಷಾಮಗಳು ಅಧಿಕ ಜನರ ಸಾವಿಗೆ ಕಾರಣವಾಗುತ್ತವೆಂದು ಸೇನ್ ತಿಳಿಯುತ್ತಾರೆ.

 ಸೇನ್ ಅವರು ಸಾಕಷ್ಟಿಲ್ಲದ ಉತ್ಪಾದನೆ, ಅಲ್ಪ ಆಮದು ಮುಂತಾದ ಸಮಗ್ರ ಆರ್ಥಿಕ ವಿಚಾರಗಳು ಕ್ಷಾಮಕ್ಕೆ ಕಾರಣಗಳು ಎಂದು ತಿಳಿಯುವುದಿಲ್ಲ. ಹೀಗೆ ಸೇನ್ ಅವರು ಬಡತನ ಮತ್ತು ಕ್ಷಾಮಗಳ ನಡುವಿನ ಸಂಬಂಧವನ್ನು ತುಂಬಾ ಮನೋಜ್ಞವಾಗಿ ವಿವರಿಸಿದ್ದಾರೆ.

ಸೇನ್ ಅವರು ಜನರ ಕ್ಷೇಮಾಭ್ಯುದಯವನ್ನು ನಿರ್ಧರಿಸುವ ಅಂಶಗಳತ್ತ ಹೆಚ್ಚು ಗಮನ ಹರಿಸುತ್ತಾರೆ. ಅವರ ಪ್ರಕಾರ ಕೇವಲ ಸರಕುಗಳು ಮಾತ್ರ ಜನರ ಯೋಗಕ್ಷೇಮವನ್ನು ಹೆಚ್ಚಿಸುವುದಿಲ್ಲ. ಆದರೆ ಅವುಗಳನ್ನು ಗಳಿಸಲು ತೊಡಗುವ ಚಟುವಟಿಕೆಗಳೂ ಮುಖ್ಯವಾಗುತ್ತವೆ. ಆದ್ದರಿಂದ ಅವಕಾಶಗಳನ್ನು ಸೃಷ್ಟಿಸುವ ಆದಾಯವೂ ಮುಖ್ಯವಾಗುತ್ತದೆ. ಆದರೆ ಜನರ ಸಾಮರ್ಥ್ಯ ಅಥವಾ ಅವಕಾಶಗಳು ಆದಾಯ ಮಾತ್ರವಲ್ಲದೆ ಶಿಕ್ಷಣ, ಆರೋಗ್ಯ ಮುಂತಾದ ಅಂಶಗಳನ್ನೂ ಅವಲಂಬಿಸಿರುತ್ತದೆ. ಆದ್ದರಿಂದ ಜನರ ಕ್ಷೇಮಾಭ್ಯುದಯವನ್ನು ಮಾಪನ ಮಾಡುವಾಗ ಈ ಅಂಶಗಳಿಗೂ ಆದ್ಯತೆ ನೀಡಬೇಕಾಗುತ್ತದೆ ಎನ್ನುತ್ತಾರೆ.


ಆಶಾ ಎಸ್.

One thought on “ಅಮರ್ತ್ಯ ಸೇನ್ ಒಂದು ಚಿಂತನೆ-ಆಶಾ.ಎಸ್.

Leave a Reply

Back To Top