ವೀರ ವೀರಾಗಿಣಿ ಅಕ್ಕಮಹಾದೇವಿ
ವೀರ ವೀರಾಗಿಣಿ ಅಕ್ಕಮಹಾದೇವಿ
ಅಕ್ಕಮಹಾದೇವಿಯವರದು, ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ. ಕರ್ನಾಟಕವಷ್ಟೇ ಆಲ್ಲದೇ ಇಡೀ ಭಾರತ ದೇಶದ ಮಹಿಳಾ ಸಂಕುಲನದ ಗೌರವವನ್ನು ಹೆಚ್ಚಿಸಿದ ಅಕ್ಕಮಹಾದೇವಿ ಕನ್ನಡ ಸಾಹಿತ್ಯದ ಪ್ರಥಮ ಮಹಿಳಾ ಕವಿಯತ್ರಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಕ್ಕ ಅಧ್ಯಾತ್ಮದ ಮೇರುವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಸಮಾಜವನ್ನು ಪ್ರತಿಭಟಿಸಿದವರು. ಸಾಮಾಜಿಕ ಬದಲಾವಣೆಗೆ ಶ್ರಮಿಸಿದವರು. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಅನುಭವ ಮಂಟಪದಲ್ಲಿ ವಿಶಿಷ್ಟ ಸ್ಥಾನ ಪಡೆದ ಆಧ್ಯಾತ್ಮದ ಮೇರು ಪರ್ವ. ಹೀಗೆ ಹಲವು ರೀತಿ ಗುರುತಿಸಬಹುದಾಗಿದೆ. ಅಕ್ಕಮಹಾದೇವಿಯ ವಚನಗಳ ಅಂಕಿತ ನಾಮ “ಚನ್ನಮಲ್ಲಿಕಾರ್ಜುನ”. ಪ್ರಸ್ತುತ ಒಟ್ಟು 434 ವಚನಗಳು ದೊರಕಿವೆ.
ಅಕ್ಕಮಹಾದೇವಿಯ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದ್ದರೂ ಸಹ, ಅವರ ಬಗ್ಗೆ ಅವರ ಸಮಕಾಲೀನ ವಚನಕಾರರೂ, ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ ‘ಮಹಾದೇವಿಯಕ್ಕಗಳ ರಗಳೆ’ ಮತ್ತು ಸ್ವತಃ ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ, ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಎಲ್ಲವನ್ನೂ ಗಮನಿಸಿದಾಗ ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವಾದ, ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವ ಪೂರ್ಣವಾದ , ನುಡಿ,ನಡೆಗಳೊಂದಾದ ಪರಿಯಲ್ಲಿರುವುದು ಕಂಡುಬರುತ್ತದೆ. ವಚನ ಚಳುವಳಿಯ ಸಮಯದಲ್ಲಿ, ಸಾಹಿತ್ಯದ ದೃಷ್ಟಿಯಿಂದ ಗಮನಿಸುವುದಾದರೆ, ಅಲ್ಲಮ ಮತ್ತು ಅಕ್ಕ ಅಂದಿನ ಅತ್ಯಂತ ವಿಶಿಷ್ಟ ಸಂವೇದನೆಯ ವ್ಯಕ್ತಿತ್ವದವರಾಗಿ ಗಮನ ಸೆಳೆಯುತ್ತಾರೆ. ಅನುಭಾವಿಯೂ, ಕವಿಯೂ ಆಗಿದ್ದ ಅಕ್ಕಮಹಾದೇವಿಯವರ ವಚನಗಳು, ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಾಗಿವೆ.
ವಚನಕಾರರಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅನುಭಾವಿಯಾಗಿದ್ದರೂ ಸಹ, ವಿಶಿಷ್ಟ ಜೀವನಾನುಭವವನ್ನು ಹೊಂದಿದ ಕಾರಣದಿಂದ, ಅವರ ಬರಹಗಳು ಗಮನಾರ್ಹವಾಗಿವೆ. ಶೂನ್ಯ ಸಂಪಾದನೆಕಾರರು ‘ಮಹಾದೇವಿಯಕ್ಕಗಳ ಸಂಪಾದನೆ’ ಎಂಬ ಒಂದು ಅಧ್ಯಾಯವನ್ನೇ ರಚಿಸಿ, ಅವರಿಗೆ ಗೌರವ ತೋರಿದ್ದಾರೆ. ಹರಿ ಮಹಾಕವಿಯ ಮಹಾದೇವಿಯಕ್ಕನ ರಗಳೆ, ಇಪ್ಪತ್ತನೆಯೆ ಶತಮಾನದ ನವೋದಯ ಕಾಲದ ಸಾಹಿತಿ ಎಚ್.ತಿಪ್ಪೇರುದ್ರಸ್ವಾಮಿಯವರ ‘ಕದಳಿಯ ಕರ್ಪುರ’ ಅಕ್ಕನವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಸಮರ್ಥ ಬರಹಗಳು.
ಅಕ್ಕಮಹಾದೇವಿಯ ಸಂಕ್ಷೀಪ್ತ ಜೀವನ
ಅಕ್ಕಮಹಾದೇವಿ 12 ನೇಯ ಶತಮಾನದಲ್ಲಿ ಕರ್ನಾಟಕದ ಶಿವಮೊಗ್ಗೆ ಜಿಲ್ಲೆಯ ಉಡುತಡಿಯಲ್ಲಿ ಜನ್ಮ ತಾಳಿದಳು. ಇದನ್ನು ಇಂದಿನ ಉಡುಗಣಿಯೊಂದಿಗೆ ವಿದ್ವಾಂಸರು ಸಮೀಕರಿಸುತ್ತಾರೆ. ಉಡುತಡಿಯಲ್ಲಿ ಅಕ್ಕಮಹಾದೇವಿಗೆ ತಂದೆ ತಾಯಿಯಾಗುವ ಭಾಗ್ಯ ದೊರೆತುದು ಶಿವಭಕ್ತ – ಶಿವಭಕ್ತೆಯರೆಂಬ ಸತಿಪತಿಗಳಿಗೆಂದು ಹರಿಹರನೂ, ನಿರ್ಮಲ ಸುಮತಿಯರೆಂಬ ದಂಪತಿಗಳಿಗೆಂದು ಚಾಮರಸನೂ, ಓಂಕಾರಸೆಟ್ಟಿ – ಲಿಂಗಮ್ಮ ಎಂಬ ಪತಿ ಪತ್ನಿಯರಿಗೆಂದು “ಮಹಾದೇವಿಯಕ್ಕನ ಸಾಂಗತ್ಯ” ದ ರಾಚಯ್ಯ ಕವಿಯೂ ಹೇಳುತ್ತಾರೆ. ಯಾರೇನೇ ಹೇಳಲಿ, ಸದಾಚಾರ ಸಂಪನ್ನರಾಗಿದ್ದ ಶಿವಭಕ್ತ ಕುಟುಂಬವೊಂದರಲ್ಲಿ ಅಕ್ಕಮಹಾದೇವಿ ಜನಿಸಿದಳು ಎಂದು ಹೇಳಬಹುದು. ಸೌಂದರ್ಯ ರಾಣಿಯಾಗಿದ್ದ ಅಕ್ಕಮಹಾದೇವಿಯು ಗುಣದಲ್ಲಿಯೂ ತುಂಬಿದ ಗಣಿಯಾಗಿದ್ದಳು. ಚಿಕ್ಕವಳಿರುವಾಗಲೇ ಉಡುತಡಿಯ ವಿರಕ್ತಮಠದ ಪಟ್ಟಾಧ್ಯಕ್ಷರಾದ ಗುರುಲಿಂಗದೇವರಿಂದ ಶಿವದೀಕ್ಷೆಯನ್ನು ಪಡೆಯುತ್ತಾಳೆಂಬ ಉಲ್ಲೇಖವಿದೆ.
ಬಾಲ್ಯದಲ್ಲಿ ಮಹಾದೇವಿಗೆ ಸಂಸಾರದ ಮೇಲೆ ಇಷ್ಟವಿಲ್ಲ ಅವಳ ಆಟಗಳೆಲ್ಲ ಧಾರ್ಮಿಕವಾದ ಆಟಗಳು. ಶರಣಸತಿ ಲಿಂಗಪತಿ ಎಂಬ ಭಾವವು ಅರಳಿ ಅಧ್ಯಾತ್ಮಸಂಸ್ಕಾರ ಆತ್ಮದಲ್ಲಿ ಬೆರೆತು ಸಂಸಾರ ಬೇಡವಾಯಿತು. ಹರನನ್ನೇ ವರನನ್ನಾಗಿಸಿಕೊಂಡಳು. ಲೌಕಿಕ ಗಂಡನಾಗಿ ಬದುಕಿಗೆ ಬರಲು ಇಚ್ಛಿಸಿದ ಕೌಶಿಕನನ್ನು ಮೂರು ಕರಾರುಗಳನ್ನು ವಿಧಿಸಿ ಅದರಲ್ಲಿ ಅವನು ಸೋಲಲು, ಅವನಿಂದ ಬಿಡುಗಡೆ ಹೊಂದಿ, ಸಾವಿಲ್ಲದ, ರೂಹಿಲ್ಲದ, ಕೇಡಿಲ್ಲದ ಚೆಲುವನಾದ ಚೆನ್ನಮಲ್ಲಿಕಾರ್ಜುನನ್ನು ಕೂಡಲು ಹೊರಟಳು. ಅಕ್ಕನಿಗೆ ಮತ್ತೆ ಮತ್ತೆ ಕಾಡುವ ಪ್ರಶ್ನೆ ಸತ್ಯಶೋಧನೆ, ದಿವ್ಯ ದರ್ಶನದ ಹುಡುಕಾಟ. ಜಗತ್ತಿನ ಪ್ರಾಣಿ ಪಕ್ಷಿ, ಕೀಟಗಳ ಮೂಲಕ ಕಾಣುವ ತವಕ,
ಚಿಲಿಮಿಲಿ ಎಂದು ಓದುವ ಗಿಳಿಗಳಿರಾ
ನೀವು ಕಾಣಿರೆ ನೀವು ಕಾಣಿರೆ.
ಸರವೆತ್ತಿ ಪಾಡುವ ಕೋಗಿಲೆಗಳಿರಾ
ನೀವು ಕಾಣಿರೆ ನೀವು ಕಾಣಿರೆ.
ಎರಗಿ ಬಂದಾಡುವ ತುಂಬಿಗಳಿರಾ
ನೀವು ಕಾಣಿರೆ ನೀವು ಕಾಣಿರೆ.
ಕೊಳನತಡಿಯೊಳಾಡುವ ಹಂಸೆಗಳಿರಾ
ನೀವು ಕಾಣಿರೆ ನೀವು ಕಾಣಿರೆ.
ಗಿರಿ ಗಹ್ವರದೊಳಗಾಡುವ ನವಿಲುಗಳಿರಾ
ನೀವು ಕಾಣಿರೆ ನೀವು ಕಾಣಿರೆ.
ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೆ. ಎಂದು ನಿಸರ್ಗದ ಮಡಿಲಿಗೆ ಹೋಗಿ ಪ್ರಶ್ನೆ ಮಾಡಿ ಸತ್ಯ ಬೇಧಿಸಲು ಪ್ರಯತ್ನಿಸಿದ ದಿಟ್ಟ ಮಹಿಳೆ ಅಕ್ಕಮಹಾದೇವಿ ಎನ್ನಬಹುದು. ಪಕ್ಷಿ ಪ್ರಾಣಿ ಸಸ್ಯಗಳ ಜೊತೆಗೆ ಸಂವಾದ ನಡೆಸಿದ ಎಕೈಕ ಅನುಭಾವಿ ಅಕ್ಕಮಹಾದೇವಿ. ತನ್ನೋಳಗಿರುವ ಚೈತನ್ಯ ಸ್ಪೂರ್ತಿ ಎಲ್ಲ ಜೀವ ಜಾಲದಲ್ಲಿ ಕಂಡವಳು ಅಕ್ಕ. ಅನುಭವ ಮಂಟಪದಲ್ಲಿ ಪ್ರಭುದೇವರು ಒಡ್ಡುವ ಪ್ರಶ್ನೆಗೆ ದಿಟ್ಟ ನಿಲುವಿನ ಉತ್ತರವನ್ನು ನೀಡಿ ಶರಣ ಸಂಕುಲನದಲ್ಲಿ ಸಂಚಲನ ಉಂಟು ಮಾಡುತ್ತಾಳೆ. ಎಲ್ಲ ಶರಣರು ನಮೋ ನಮೋ ಎನ್ನುವ ಭಾವ ತುಂಬುತ್ತಾಳೆ.
ವಚನ ವಿಶ್ಲೇಷಣೆ
ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ?
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ?
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ?
ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ?
ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ?
ನಾನಿದ್ದು ಫಲವೇನು ನಿಮ್ಮ ಜ್ನಾನವಿಲ್ಲದನ್ನಕ್ಕ,
ಚೆನ್ನ ಮಲ್ಲಿಕಾರ್ಜುನ?
ಜಗತ್ತಿನಲ್ಲಿರುವ ಅನೇಕ ವಸ್ತುಗಳು, ಪಶುಪಕ್ಷಿ ಮುಂತಾದ ಜೀವಿಗಳು ತಮ್ಮಲ್ಲಿರುವ ಕೆಲವು ಗುಣವಿಶೇಷಗಳಿಂದ ಸಾರ್ಥಕತೆಯನ್ನು ಪಡೆಯುತ್ತವೆ. ಹಾಗೆಯೇ ಶ್ರೇಷ್ಠವಾದ ಮನುಷ್ಯ ಜನ್ಮದಲ್ಲಿ ಹುಟ್ಟಿ ಪರಮಾತ್ಮ ಸಂಬಂಧವಾದ ಜ್ಞಾನವನ್ನು ಪಡೆಯಬೇಕಾದುದು ಅತ್ಯವಶ್ಯಕ. ಮನುಷ್ಯ ಜನ್ಮದ ಸಾರ್ಥಕತೆ ಅಂತಹ ಜ್ಞಾನವನ್ನು ಪಡೆಯುವುದರಲ್ಲಿ ನಿಹಿತವಾಗಿದೆ ಎಂದು ಸೂಚಿಸುವ ಈ ವಚನ ಅತ್ಯಂತ ಆಳವಾದ ಅನುಬಾವವನ್ನು ಹೊಂದಿದೆ.
ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ?
ಮನುಷ್ಯನಿಗೆ ಗಿಡಮರಗಳಿಂದಾಗುವ ಪ್ರಯೋಜನ ಅಷ್ಟಿಷ್ಟಲ್ಲ. ಪ್ರಾಣಕ್ಕಾಧಾರವಾದ ಆಮ್ಲಜನಕ, ತಿನ್ನಲು ರುಚಿ ರುಚಿಯಾದ ಹಣ್ಣುಗಳು ಮನೆಬಳಕೆ ವಸ್ತುಗಳು ಗಿಡಮರಗಳಿಂದಲೇ ಪ್ರಾಪ್ತವಾಗುತ್ತವೆ. ಕೊನೆಯ ಪಕ್ಷ ಬಿಸಿಲಿನಲ್ಲಿ ಬಸವಳಿದ ಪ್ರಾಣಿಗಳಿಗೆ ನೆರಳನ್ನಾದರೂ ಕೊಟ್ಟು ಗಿಡಮರಗಳು ತಮ್ಮ ಬದುಕಿನ ಸಾರ್ಥಕತೆಯನ್ನು ಪಡೆಯುತ್ತವೆ. ಆದರೆ ಅದೇ ಮರಗಳ ರಂಬೆ ಕೊಂಬೆಗಳು ಕತ್ತರಿಸಲ್ಪಟ್ಟಿದ್ದರೆ, ನೆರಳಿಲ್ಲದಂತಾದರೆ ಅದರಿಂದ ಏನು ಪ್ರಯೋಜನ? ಅದು ಇದ್ದು ನಿರರ್ಥಕ.
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ?
ಧನವೂ ಕೂಡ ಮನುಷ್ಯನ ದೈನಂದಿನ ಬದುಕಿನಲ್ಲಿ ಮಹತ್ವದ ಸ್ಥಾನ ಪಡೆದಿದೆ. “ ಸರ್ವೇ ಗುಣಾಃ ಕಾಂಚಾನಮಾಶ್ರಯಂತಿ” ಎಂಬ ಸುಭಾಷಿತ ನುಡಿಯೊಂದಿದೆ. ಇಂದಿನ ಕಾಲದಲ್ಲಿ ಹಣವುಳ್ಳವರೇ ಸ್ರೇಷ್ಠಕುಲದವರು, ಪಂಡಿತರು, ಜ್ಞಾನಿಗಳು ಹಾಗೂ ಗುಣವಂತರು ಎಂಬುವಂತಾಗಿದೆ. ಆದರೆ ಶರಣರ, ಜ್ಞಾನಿಗಳ ದೃಷ್ಠಿಯಲ್ಲಿ ಇದೊಂದು ಸಂತೆಯ ಮಂದಿಯಂತೆ ಕ್ಷಣಿಕವಾದುದು. ಇದನ್ನು ನಂಬಿ ಕೆಡಬೇಡಿ ಎಂಬುದು ಅವರ ಕಟ್ಟೆಚ್ಚರದ ಆದೇಶವಾಗಿದೆ. ಅಂತಹ ಧನವನ್ನು ವೈಯಕ್ತಿಕ ಸುಖಬೋಗಗಳಿಗೆ ಅತಿಯಾಗಿ ಬಳಸದೇ, ದಾಸೋಹಗಳಿಗೆ, ಅವಶ್ಯಕವಿದ್ದವರಿಗೆ ವಿನಿಯೋಗಿಸಿದಾಗ ಕ್ಷಣಕವಾದ ಧನಸಂಪತ್ತು ಕೂಡ ಸಾರ್ಥಕತೆಯನ್ನು ಪಡೆಯುತ್ತದೆ. ದೀನ ದಲಿತರು, ಬಡವರು ಹಾಗೂ ಅನ್ನಕ್ಕೆ ಗತಿಯಿಲ್ಲದವರ ನಿರ್ಗತಿಕರ ಮೇಲೆ ದಯೆತೋರಿ ಅವರ ಹಿತಕ್ಕಾಗಿ ನಮ್ಮಲ್ಲಿರುವ ಧನವನ್ನು ವಿನಿಯೋಗಿಸಬೇಕು. ಹಾಗಾದಾಗಲೇ ನಮ್ಮಲ್ಲಿರುವ ಧನ ಪ್ರಯೋಜನಕಾರಿಯಾಗುವುದು. ಫಲಪ್ರದವಾಗುವುದು.
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ?
ಹಸುಗಳಿಂದಲೂ ಮನುಷ್ಯನಿಗೆ ಅನೇಕ ಪ್ರಯೋಜನಗಳುಂಟು. ಹಿಂದೆ ವ್ಯಕ್ತಿಯ ಸಂಪತ್ತನ್ನು ಅವನಲ್ಲಿರುವ ಗೋವುಗಳ ಸಂಖ್ಯೆಯ ಮೇಲೇಯೇ ನಿರ್ಧರಿಸಲಾಗುತ್ತಿತ್ತು. ಅದಕ್ಕೆ ಗೋ ಸಂಪತ್ತು ಎಂದು ಹೆಸರಿರುವುದನ್ನು ಕೇಳಿದ್ದೇವೆ. ಗೋವುಗಳ ಅಥವಾ ಹಸುವಿನ ಮುಖ್ಯ ಪ್ರಯೋಜನ ಅವುಗಳಿಂದ ಪ್ರಾಪ್ತವಾಗುವ ಹಯನ(ಹೈನು). ಹಸುಗಳಿಂದ ಹಾಲು ಕರೆದು ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇತ್ಯಾದಿ ಪಡೆಯುತ್ತೇವೆ. ಹಾಲನ್ನು ಕರೆಯದ ಬರಡು ಆಕಳುಗಳಿಂದ ಮನುಷ್ಯನಿಗೆ ಹೇಳಿಕೊಳ್ಳುವಂತಹ ಲಾಭವಾಗಿವುದಿಲ್ಲ. ಆಗ ಅವುಗಳಿದ್ದೂ ನಿಷ್ಪ್ರಯೋಜನವೆನಿಸುತ್ತದೆ.
ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ?
ರೂಪ ಅಥವಾ ಸೌಂದರ್ಯ ಎಲ್ಲರಿಗೂ ಪ್ರೀಯವಾದುದು. ಸುಂದರ ರೂಪವುಳ್ಳವರು ಎಲ್ಲರ ದೃಷ್ಟಿಗೂ ಆಕರ್ಷಕವಾಗಿ ಕಾಣುತ್ತಾರೆ. ಆದರೆ ಇದು ಶಾಶ್ವತವಾಗಿ ಇರುವಂತಹದಲ್ಲ ಎಂಬುದು ಎಲ್ಲರಿಗೂ ಅನುಭವವೇಧ್ಯ. ರೂಪಿನೊಂದಿಗೆ ಇಳ್ಳೆಯ ಗುಣಗಳು ಅಡಕವಾಗಿದ್ದರೆ ಆ ರೂಪಿಗೆ ಇನ್ನೂ ಹೆಚ್ಚಿನ ಬೆಲೆ ಬರುತ್ತದೆ. ಸುಂದರವಾದ ಹೂವಿಗೆ ಸುವಾಸನೆ ಇದ್ದರೆ ಅದು ಎಲ್ಲರಿಗೂ ಇನ್ನಷ್ಟು ಮೆಚ್ಚಿಗೆಯಾಗುತ್ತದೆ. ಬರೀ ಸೌಂದರ್ಯವಿದ್ದು, ಒಳ್ಳೆಯ ಗುಣಗಳಿಲ್ಲದ್ದಿದ್ದರೆ ಅಥವಾ ದುರ್ಗುಣಗಳಿದ್ದರೆ ಆ ಸೌಂರ್ಯಕ್ಕೆ ಏನು ಅರ್ಥ? ಅದು ಕಳ್ಳ ತಾ ಕೆಂಪಿರ್ದಡೇನು ಸರ್ವಜ್ಞ ಎಂಬ ಸರ್ವಜ್ಞನ ವಚನದಂತೆ ನಿರರ್ಥಕವಾಗುತ್ತದೆ.
ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ?
ಮನುಷ್ಯನಿಗೆ ಹಸಿವನ್ನು ಹಿಂಗಿಸಿಕೊಳ್ಳಲು ಅನ್ನ, ಆಹಾರ ಮುಖ್ಯವಾಗಿ ಬೇಕು. ಅನ್ನವನ್ನು ಉಣ್ಣಲು ಊಟದ ತಟ್ಟೆಯೂ ಬೇಕು. ಆದರೆ ನಮ್ಮ ಹತ್ತಿರ ಊಟ ತಟ್ಟೆ ಇದೆ. ಅನ್ನ ಇಲ್ಲ ಎಂದರೆ ನಮ್ಮ ಹೊಟ್ಟೆ ತುಂಬುವುದು ಸಾಧ್ಯವಿಲ್ಲ. ಊಟದ ತಟ್ಟೆ ಬಂಗಾರ ಬೆಳ್ಳಿಗಳಿಂದ ಮಾಡಿದುದಾಗಿದ್ದರೂ ಉಣ್ಣಲು ಅನ್ನವಿಲ್ಲದಿದ್ದರೆ ಆ ತಟ್ಟೆಯಿಂದ ಏನು ಪ್ರಯೋಜನ. ಬೆಳ್ಳಿ ಬಂಗಾರದ ತಟ್ಟೆ ಇದ್ದ ಮಾತ್ರಕ್ಕೆ ನಮ್ಮ ಹಸಿವನ್ನು ಹಿಂಗಿಸಿಕೊಳ್ಳಲು ಸಾಧ್ಯವೇ? ಎಂದಿಗೂ ಸಾಧ್ಯವಿಲ್ಲ. ಆದ್ದರಿಂದ ಊಟದ ತಟ್ಟೆ ಅಥವಾ ತಾಟು ಸಾರ್ಥಕತೆಯನ್ನು ಪಡೆಯುವುದೂ ಕೂಡ ಅದರಲ್ಲಿರುವ ಅನ್ನದಿಂದ ಅಥವಾ ಭಕ್ಷ್ಯಬೋಜ್ಯಗಳಿಂದ ಮಾತ್ರ.
ನಾನಿದ್ದು ಫಲವೇನು ನಿಮ್ಮ ಜ್ನಾನವಿಲ್ಲದನ್ನಕ್ಕ,
ಚೆನ್ನ ಮಲ್ಲಿಕಾರ್ಜುನ?
ಹೀಗೆ ಮರ, ಧನ, ಹಸು, ರೂಪ, ಅಗಲು(ತಟ್ಟೆ) ಇವೆಲ್ಲವೂ ಕ್ರಮವಾಗಿ ನೆರಳು, ದಯ(ದಾಸೋಹ), ಹಯನ, ಗುಣ ಹಾಗೂ ಬಾನ(ಅನ್ನ), ಗಳನ್ನೂ ಹೊಂದಿ ಸಾರ್ಥಕತೆಯನ್ನು ಪಡೆಯುವಂತೆ ಮನುಷ್ಯನಾದರೂ ಚೈತನ್ಯ (ಆತ್ಮ-ಪರಮಾತ್ಮ) ಸಂಬಂಧವಾದ ಜ್ಞಾನವನ್ನು ಹೊಂದಿ ತನ್ನ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ಇದನ್ನೇ ಅಕ್ಮಹಾದೇವಿ “ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ” ಎಂಬ ಮಾತಿನಲ್ಲಿ ಅನೇಕ ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿದ್ದಾಳೆ. ನಾನು ಎಂಬುದು ಅಹಂಕಾರ. ಈ ಅಹಂಕಾರ ನಮ್ಮ ಅಂತಃಕರಣ ಚತುಷ್ಟಯಗಳಲ್ಲಿ ಒಂದು. ನಮ್ಮ ಅಂತಃಕರಣಗಳನ್ನು ಪರಿಶುದ್ಧಗೊಳಿಸಬೇಕು. ಅಂದಾಗ ಅವು ಆತ್ಮಜ್ಞಾನಕ್ಕೆ ದಾರಿ ಮಾಡಿಕೊಡುತ್ತದೆ. ಇಲ್ಲದಿದ್ದರೆ ನಮ್ಮ ಅಧ್ಯಾತ್ಮ ಸಾಧನೆಯಲ್ಲಿ ಬಹುದೊಡ್ಡ ಅಡ್ಡಗೋಡೆಯನ್ನು ನಿರ್ಮಿಸುತ್ತದೆ. ಆದ್ದರಿಂದ ನಮ್ಮೆಲ್ಲರಲ್ಲಿ ಅಂತಸ್ಥವಾಗಿರುವ “ನಾನು” ಪರಿಶುದ್ಧಗೊಳ್ಳಬೇಕು. ಅದು ಪರಮಾತ್ಮನಿಗೆ ಸಮರ್ಪಿತವಾಗಬೇಕು. ಹಾಗಾದಾಗಲೇ ಈ “ನಾನು” ಅಥವಾ ಮನುಷ್ಯರೂಪದ “ನಾನು” ಪರಮಾತ್ಮ ಜ್ಞಾನವನ್ನು ಪಡೆದುಕೊಂಡು ಸಾರ್ಥಕವಾಗುತ್ತದೆ. ಇಲ್ಲಿ ಜ್ಞಾನಕ್ಕೆ ವಿಶೇಷವಾದ ಮಹತ್ವವನ್ನು ಕೊಡಲಾಗಿದೆ. ಜ್ಞಾನವಿಲ್ಲದೇ ಮಾಡುವ ನಮ್ಮ ಸಾಧನೆಗಳೆಲ್ಲವೂ ನಿಷ್ಪ್ರಯೋಜಕವೆನಿಸುತ್ತದೆ.. ಆದ್ದರಿಂದ ಜ್ಞಾನವು ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದುದು. ಭಕ್ತಿಯೂ ಕೂಡ ಈ ಜ್ಞಾನದಿಂದಲೇ ಅರ್ಥವಂತಿಕೆಯನ್ನು ಪಡೆದುಕೊಳ್ಳುತ್ತದೆ. ಜ್ಞಾನವಿಲ್ಲದ ಭಕ್ತಿಯು ಮೂಢ ಅಥವಾ ಅಂಧಶ್ರದ್ಧೆ ಎನಿಸಿಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಆತ್ಮ- ಪರಮಾತ್ಮ ಸಂಬಂಧ ಜ್ಞಾನವನ್ನು ಅಂದರೆ ಚೈತನ್ಯ ಸ್ವರೂಪ ಜ್ಞಾನವನ್ನು ಪಡೆದುಕೊಂಡು ತಮ್ಮ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂಬ ಆಶಯ ಈ ವಚನದಲ್ಲಿದೆ.
ಒಟ್ಟಿನಲ್ಲಿ ಅಕ್ಕಮಹಾದೇವಿಯ ಜೀವನ, ಬೋದನೆಗಳು ಅವಳ ವಚನಗಳಲ್ಲಿ ಕಂಡುಬರುವ ಭಾವ ಇಂದಿಗೂ ನಮಗೆಲ್ಲ ಆದರ್ಶಪ್ರಾಯವಾಗಿದೆ. 800 ವರ್ಷಗಳ ಹಿಂದೆ ಸ್ತ್ರೀಯರಿಗೆ ಯಾವುದೇ ಸ್ವಾತಂತ್ರ್ಯವಿರದ ಸಂದರ್ಭದಲ್ಲಿ ಮನೆ, ಪತಿ, ರಾಜ್ಯ, ತಂದೆ, ತಾಯಿ ಎಲ್ಲವನ್ನೂ ತ್ಯಜಿಸಿ ಕಲ್ಯಾಣದೆಡೆಗೆ ಹೋಗಿ ಅಲ್ಲಿ ಎಲ್ಲರಿಗೂ ತನ್ನ ಜ್ಞಾನದಿಂದ ಚಕಿತಗೊಳಿಸಿದ ಮಹಾನ್ ಮಹಾಶರಣೆಯಾಗಿದ್ದಾಳೆ. ಕನ್ನಡದ ಪ್ರಥಮ ಕವಿಯತ್ರಿಯಾಗಿ ಅವಳ ಆದರ್ಶಗಳು ಇಂದಿನ ಸ್ತ್ರೀಯರಿಗೆ ಅನುಕರಣೀಯವಾಗಿವೆ.
ಆಧಾರ ಗ್ರಂಥಗಳು
- ಬಸವೇಶ್ವರರ ಸಮಕಾಲೀನರು – ಬಸವ ಸಮಿತಿ, ಬೆಂಗಳೂರು.
- ವಚನಾರ್ಥ ಚಿಂತನ – ಸಿದ್ಧರಾಮ ಸ್ವಾಮಿಗಳು, ಬೆಳಗಾವಿ
- ಎತ್ತ ಹೋದರು ಶರಣರು – ಡಾ ಶಶಿಕಾಂತ ಪಟ್ಟಣ
- ಶರಣೆಯರ ಅನುಭಾವ ಸಂಪದ – ಸಂತೋಷಕುಮಾರ ಹೂಗಾರ5.ಮಹಾದೇವಿಯಕ್ಕನ ವಚನ – ಚಿಂತನ – ಜಗದ್ಗುರು ಶ್ರೀಅನ್ನದಾನೀಶ್ವರ ಮಹಾಸ್ವಾಮಿಗಳ
ಡಾ ದಾನಮ್ಮ ಚ ಝಳಕಿ