ಅಕ್ಕಮಹಾದೇವಿ ಜಯಂತಿ ವಿಶೇಷ

ಗಜಲ್

ಸಾವಿಲ್ಲದ ರೂಹಿಲ್ಲದ ಚೆಲುವನಿಗೆ ಒಲಿದೆಯಲ್ಲ ಅಕ್ಕ
ಸಾವು ರೂಪಿನ ಲೌಕಿಕ ಗಂಡನೆ ದೈವ ನಮಗೆ ಎಂದರಲ್ಲ ಅಕ್ಕ

ಕುಹುಕಿನ ಮಾತುಗಳಿಗೆ ಅಂಜಿ ನಡೆಯುತ್ತಿದ್ದೆವೆ ನಾವೆಲ್ಲ ಇಂದು
ಬೆಟ್ಟದಲ್ಲಿ ಮನೆಮಾಡಿ ಮೃಗಗಳಿಗೆ ಅಂಜಿಕೆ ಏಕೆ ಎಂದೆಯಲ್ಲ ಅಕ್ಕ

ತುಂಬಿದುದು ತುಳುಕದು ನಂಬಿದುದು ಸಂದೇಹಿಸದು ಸತ್ಯ
ಹೆದರದೆ ಬೆದರದೆ ನಿಜವನರಿತು ನಿಶ್ಚಿಂತನಾಗಿರು ಎಂದೆಯಲ್ಲ ಅಕ್ಕ

ನಿದ್ರೆಗೆ ಸುಪತ್ತಿಗೆ ಹಾಸಿದರೂ ನಿದ್ದೆಯಾಗುತ್ತಿಲ್ಲ ಇಂದಿನವರಿಗೆ
ನಿರ್ಭಯದಿ ಶಯನಕೆ ಹಾಳು ದೇಗುಲಗಳುಂಟು ಎಂದೆಯಲ್ಲ ಅಕ್ಕ

ಯಾವ ಕ್ಷಣಕೆ ಏನು ಬರುವುದೊ ಏನಾಗುವುದೋ ಎಂಬ ಚಿಂತೆ
ನಾಳೆ ಬರುವುದು ಇಂದೇ, ಇಂದು ಬರುವುದು ಈಗಲೇ ಬರಲಿ ಎಂದೆಯಲ್ಲ ಅಕ್ಕ

ಕ್ಷಣಿಕ ಸುಖದ ಬೆನ್ನತ್ತಿ ಏನೇನೊಇ ಮಾಡುತಿರುವರಿಲ್ಲಿ ಮನುಜರು
ಶರಣರ ಅನುಭಾವ ಸಂಗದಿಂದ ಪರಮ ಸುಖಿಯಾದೆನು ಎಂದೆಯಲ್ಲ ಅಕ್ಕ

ನಾನಾ ತಾಣಗಳನ್ನು ಸುತ್ತಿ ಬಂದರೂ ತೃಪ್ತಿ ಸಿಗುತ್ತಿಲ್ಲ ಇಂದು
ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು ಎಂದೆಯಲ್ಲ ಅಕ್ಕ

ಎಲ್ಲವೂ ನನಗೆ ಗೊತ್ತು ಎಂದು ಅಹಂಕಾರದಲಿ ಬೀಗುವವರೆ ಹೆಚ್ಚಿರುವರು
ಎಲ್ಲವನರಿದು ಫಲವೇನು ತನ್ನ ತಾನರಿಯಬೇಕಲ್ಲ ಎಂದೆಯಲ್ಲ ಅಕ್ಕ

ದೇವನೊಬ್ಬನನ್ನು ಕಾಣಲು ತವಕಿಸಿ ಎಲ್ಲೆಲ್ಲೊ ಸುತ್ತುತಿಹರಿಲ್ಲಿ ಎಲ್ಲರೂ
ದೇಹಭಾವದ ಮೂಲಕ ಶಿವನನ್ನು ಕಾಣುವ ತವಕ ಎಂದೆಯಲ್ಲ ಅಕ್ಕ

ಜಡತೆಯ ಕಳೆಯಲು ಅನುಭಾವಗಳ ಸಂಗಕ್ಕೆ ಹಾತೊರೆಯುತಿಹೆವು ಅನುಭಾವಿಗಳ ಸಂಗದಲ್ಲಿ ಎನ್ನ ತನು ಶುದ್ದವಾಯಿತು ಎಂದೆಯಲ್ಲ ಅಕ್ಕ

ಎನ್ನಂತರಂಗದ ಸಾಕ್ಷಿಪ್ರಜ್ಞೆ ನೀನೇ ಎಂದಿರುವೆ ಅಕ್ಕ ನಾನು
ಆತ್ಮ ಸಂಗಾತಕೆ ನೀನೆನಗುಂಟು ಮಲ್ಲಿಕಾರ್ಜುನ ಎಂದೆಯಲ್ಲ ಅಕ್ಕ

ಹನ್ನೆರಡು ತಿರುವುಮುರುವಾದರೂ ಇನ್ನೊಬ್ಬ ಅಕ್ಕ ಹುಟ್ಟಲಿಲ್ಲವೆಂದಳು ರೋಹಿ
ಲೋಕದಲ್ಲಿ ಸ್ತುತಿ ನಿಂದೆಗಳು ಬಂದರೆ ಸಮಾಧಾನಿಯಾಗಿರಬೇಕು ಎಂದೆಯಲ್ಲ ಅಕ್ಕ.


ರೋಹಿಣಿ ಯಾದವಾಡ

One thought on “

Leave a Reply

Back To Top