ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ ಅವರ ಲೇಖನಿಯಿಂದ
ಈಶ್ವರ ಸಂಪಗಾವಿಯವರ
ಗಜಲ್ ಗಳಲ್ಲಿ ಜೀವನಯಾನ
ಹಲೋ…. ನನ್ನ ಎಲ್ಲ ಗಜಲ್ ಪ್ರೀತಿಸುವ ಹೃದಯಗಳಿಗೆ ನಮಸ್ಕಾರಗಳು. ಬೇಸಿಗೆಯ ಬೇಗೆಯಲ್ಲಿ ಗಜಲ್ ಕಾರರ ಪರಿಚಯದೊಂದಿಗೆ ತಂಪನೆರೆಯಲು ಬರುತ್ತಿದ್ದೇನೆ, ಗುರುವಾರ ಬಂತಲ್ವಾ! ತಮ್ಮ ಓದುವ ಪ್ರೀತಿಗೆ ನಾನು ಯಾವತ್ತೂ ಪೂರಕವಾಗಿರುವೆ. ಮಲ್ಲಿ, ಬರೀ ಮಾತಿನ ಮಲ್ಲ ಅಲ್ಲ, ಮತ್ತೇಕೆ ತಡ, ಬನ್ನಿ… ಏಕ್ ಷೇರ್ ಅರ್ಜ್ ಹೈ…!!
“ಕರ್ಮದ ದೆಸೆಯಿಂದ ನಾನು ಎಂದಿಗೂ ಒಂಟಿಯಾಗಿರುವುದಿಲ್ಲ
ನೀನು ಬರದ ದಿನ ನಾನು ನಿನ್ನನ್ನು ತುಂಬಾ ನೆನೆಸಿಕೊಳ್ಳುತ್ತೇನೆ”
-ಜಲೀಲ್ ಮಾಣಿಕಪುರಿ
ಮನುಷ್ಯನ ಹಂಬಲ, ಬೇಕು-ಬೇಡಿಕೆಗಳಿಗೆ ಕೊನೆಯಿಲ್ಲ, ತೃಪ್ತಿ ಪಡುವ ಗುಣವಂತೂ ಇಲ್ಲವೇ ಇಲ್ಲ. ಆದರೆ ಬೇಡವೆಂದು ದೂರವಿರಿಸಿದಷ್ಟು ನೋವು ನಮ್ಮನ್ನು ಆವರಿಸುತ್ತಲೆ ಇರುತ್ತದೆ. ಬಯಸಿದ್ದು ಕೈಗೆ ಎಟಕುತ್ತದೆಯೋ ಇಲ್ಲವೋ ಬೇಡದ ಬೇಡಿ ನಮ್ಮನ್ನು ಆಲಂಗಿಸುತ್ತಲೆ ಇರುತ್ತದೆ. ಈ ಕಾರಣಕ್ಕಾಗಿಯೇ ಅನಿಸುತ್ತದೆ 'ಸಾಸಿವೆಯಷ್ಟು ಖುಷಿಗಾಗಿ ಸಾಗರದಷ್ಟು ದುಃಖ' ಎನ್ನಲಾಗುತ್ತಿದೆ. "ಕಣ್ಣೀರಿಗೆ ಎಂದಿಗೂ ಭಯಪಡಬೇಡ. ಕಣ್ಣೀರು ತುಂಬಿದ ಕಣ್ಣುಗಳು ಸತ್ಯವನ್ನು ನೋಡುವ ಸಾಮರ್ಥ್ಯ ಹೊಂದಿವೆ. ಕಣ್ಣೀರು ತುಂಬಿದ ಕಣ್ಣುಗಳು ಜೀವನದ ಸೌಂದರ್ಯವನ್ನು ನೋಡಲು ಸಮರ್ಥವಾಗಿವೆ" ಎಂಬ ಓಶೋ ಅವರ ಮಾತುಗಳು ಕಣ್ಣೀರಿನ ಪಾವಿತ್ರ್ಯತೆಯನ್ನು ಸಾರುತ್ತಿವೆ. ಅದು ಏನೇ ಇರಲಿ, ಎದೆಯಲ್ಲಿ ಮುಪ್ಪರಿಗೊಂಡ ನೋವು ಮಾತ್ರ ಬದುಕಿಗೆ ಒಂದು ಆಯಾಮವನ್ನು ನೀಡುತ್ತದೆ, ಹೇಗೆ ಬದುಕಬೇಕು ಎಂಬುದನ್ನು ಕಲಿಸಿಕೊಡುತ್ತದೆ. ದುಃಖವು ಸಮಯದ ರೆಕ್ಕೆಗಳ ಮೇಲೆ ಹಾರಿಹೋಗುತ್ತದೆ ಎಂಬಂತೆ ನಮಗೆ ಸಮಾಧಾನಿಸುತ್ತದೆ ಕೂಡ. ನಾವು ದುಃಖದೊಂದಿಗೆ ಹೆಜ್ಜೆ ಹಾಕದಿದ್ದರೆ, ನಮಗೆ ಸಂತೋಷವನ್ನು ಪ್ರಶಂಸಿಸಲೂ ಸಾಧ್ಯವಿಲ್ಲ. ಮೊದಲು ನಾವು ದುಃಖ ಸ್ವೀಕರಿಸುವುದನ್ನು ಕಲಿಯಬೇಕಿದೆ. ಸೋಲದೆ ಗೆಲ್ಲಲು ಸಾಧ್ಯವಿಲ್ಲ. ಒಳ್ಳೆಯ ಜೀವನವು ದುಃಖದಿಂದ ವಿಮುಖವಾಗಿರುವುದಿಲ್ಲ, ಬದಲಿಗೆ ದುಃಖವು ನಮ್ಮ ಬದುಕಿನ ಯಾನದಲ್ಲಿ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಈ ನೆಲೆಯಲ್ಲಿ ಚಾರ್ಲಿ ಚಾಪ್ಲಿನ್ ರವರ "ನಾನು ಯಾವಾಗಲೂ ಮಳೆಯಲ್ಲಿ ನಡೆಯಲು ಇಷ್ಟಪಡುತ್ತೇನೆ, ಆದ್ದರಿಂದ ನಾನು ಅಳುವುದನ್ನು ಯಾರೂ ನೋಡುವುದಿಲ್ಲ" ಎಂಬ ಮಾತು ನನ್ನನ್ನು ಯಾವಾಗಲೂ ಕಾಡುತ್ತಿರುತ್ತದೆ. ಸಂತೋಷ ಎಂಬ ಪದವು ದುಃಖದಿಂದ ಸಮತೋಲನಗೊಳ್ಳದಿದ್ದರೆ ಅದರ ಅರ್ಥವನ್ನೇ ಕಳೆದುಕೊಳ್ಳುತ್ತದೆ ಎಂಬಂತೆ ಸಾಹಿತ್ಯವು ಅನಾದಿಕಾಲದಿಂದಲೂ ನೋವಿಗೆ ಅಪ್ಪುಗೆಯ ಚಾದರ್ ಅನ್ನು ಹೊದಿಸುತ್ತಲೆ ಬಂದಿದೆ. ಈ ದಿಸೆಯಲ್ಲಿ ಗಮನಿಸಿದಾಗ 'ಗಜಲ್' ನೋವನ್ನು ಪ್ರೀತಿಸಿದಷ್ಟು, ಆಲಂಗಿಸಿ ಮುದ್ದಿಸಿದಷ್ಟು ಬೇರೆ ಯಾವ ಸಾಹಿತ್ಯ ಪ್ರಕಾರವೂ ಮಾಡಿರಲಿಕ್ಕಿಲ್ಲ! ಇಂಥಹ ಗಜಲ್ ಕಾವ್ಯ ರೂಪವನ್ನು ಕನ್ನಡಿಗರು ತುಂಬಾ ಪ್ರೀತಿಯಿಂದ ಆರಾಧಿಸುತ್ತಿದ್ದಾರೆ, ಹೆಚ್ಚು ಹೆಚ್ಚು ಕೃಷಿ ಕೂಡ ಮಾಡುತ್ತಿದ್ದಾರೆ. ಅವರುಗಳಲ್ಲಿ ಶ್ರೀ ಈಶ್ವರ ಸಂಪಗಾವಿಯವರೂ ಒಬ್ಬರು.
ನಮ್ಮ ರಾಜ್ಯದ ಅತೀ ದೊಡ್ಡ ಜಿಲ್ಲೆ, ವಾಯುಸೇನಾ ನೆಲೆ, ವೇಣುಗ್ರಾಮವೆಂಬ ಪುರಾತನ ಹೆಸರು, ಕದಂಬ, ಚಾಲುಕ್ಯ, ರಾಷ್ಟ್ರಕೂಟರ ಆಳಿದ ಜಿಲ್ಲೆ, ಕಿತ್ತೂರು ಚೆನ್ನಮ್ಮ, ರಾಯಣ್ಣನಂತಹ ಮಹಾಮಹಿಮರಿಗೆ ಜನ್ಮ ನೀಡಿದ ಜಿಲ್ಲೆ, ಸಹ್ಯಾದ್ರಿ ಬೆಟ್ಟದ ರಮಣೀಯ ಪರಿಸರ, ಬೆಟ್ಟ, ಬಯಲು, ಕಾಡುಗಳನ್ನು ಹೊಂದಿರುವ ಬೆಳ್ಳಗೆ + ಆವಿ ( ಬೆಳಗಿನ ಜಾವದ ಮಂಜು) ಬೆಳಗಾವಿ ಜಿಲ್ಲೆಯ ಮಹದಾಯಿ ನದಿಯ ಉಗಮ ಸ್ಥಾನ, ಭೀಮಗಡ ರಾಷ್ಟ್ರೀಯ ಉದ್ಯಾನವನದಿಂದ ಜಗತ್ಪ್ರಸಿದ್ಧವಾಗಿರುವ ಖಾನಾಪುರ ತಾಲೂಕಿನ ಶಿವ ಶರಣ 'ಕಕ್ಕಯ್ಯ' ನವರ ಸಮಾಧಿ ಸ್ಥಳವಿರುವ, ಕಕ್ಕಯ್ಯನ ಕೇರಿ ಎಂದು ಕರೆಯಲ್ಪಡುತ್ತಿದ್ದ ಮಹಾ ಶಿವರಾತ್ರಿಯ ಜಾತ್ರೆಗೆ ಅಪಾರ ಸಂಖ್ಯೆಯ ಜನ ಸೇರುವಂತಹ, ಮಹಾನವಮಿಯಿಂದ ೫ ದಿನಗಳ ಕಾಲ ಲಕ್ಷಾಂತರ ಭಕ್ತರು ಆಗಮಿಸುವ ಜಾಗೃತ ಸ್ಥಳ ಎಂದೇ ಜಗತ್ಪ್ರಸಿದ್ಧಿ ಪಡೆದಿರುವ 'ಕಕ್ಕೇರಿ' ಗ್ರಾಮದಲ್ಲಿ ೧೯೫೧ ರ ಜನವರಿ ೧೪ ರಂದು ಶ್ರೀ ಗಂಗಪ್ಪ ಸಂಪಗಾವಿ ಹಾಗೂ ಶ್ರೀಮತಿ ಬಸವಣ್ಣೆವ್ವ ಸಂಪಗಾವಿ ದಂಪತಿಗಳ ಸುತರಾಗಿ ಶ್ರೀ ಈಶ್ವರ ಸಂಪಗಾವಿಯವರು ಜನಿಸಿದರು. ಶ್ರೀಯುತರು ತಮ್ಮೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ತರುವಾಯ ಪ್ರೌಢ ಶಿಕ್ಷಣವನ್ನು ಬೆಳಗಾವಿಯ ಜಿ. ಎ ಹೈಸ್ಕೂಲ್ ನಲ್ಲಿ ಮಾಡಿ 'ಎಸ್ ಎಸ್ ಎಲ್ ಸಿ' ಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಮುಂದೆ ಬಿ.ಎ ಕನ್ನಡ ವಿಷಯದಲ್ಲಿ ಪದವಿಯನ್ನು ಧಾರವಾಡದ ಕರ್ನಾಟಕ ಪ್ರಥಮ ದರ್ಜೆ ಕಾಲೇಜಿನಲ್ಲೂ, ವೃತ್ತಿ ತರಬೇತಿಯಾದ ಬಿ.ಎಡ್ ಶಿಕ್ಷಣವನ್ನು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಡಿಸ್ಟಿಂಗ್ಷನ್ ನಲ್ಲಿ ಉತ್ತೀರ್ಣರಾದ ನಂತರ ಎಂ.ಎ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿದ್ಯಾಲಯ ಧಾರವಾಡ ಮತ್ತು ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ. ಶ್ರೀಯುತರು ತಮ್ಮ ಹುಟ್ಟೂರಿನ ಶ್ರೀಬಿಷ್ಟಾದೇವಿ ಪ್ರೌಢಶಾಲೆಯ ಶಿಕ್ಷಕರಾಗಿ ಮತ್ತು ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ನಿವೃತ್ತರಾಗಿ ಧಾರವಾಡದಲ್ಲಿ ಹೆಂಡತಿ, ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ವಿಶ್ರಾಂತಿ ಜೀವನವನ್ನು ನಡೆಸುತ್ತಿದ್ದಾರೆ.
ಶ್ರೀಯುತರು ರಾಜ್ಯ ಮಟ್ಟದ ವಿಜಯವಾಣಿ ಮತ್ತು ವಿಜಯಕರ್ನಾಟಕ ಪತ್ರಿಕೆಯ ವರದಿಗಾರರಾಗಿ ಐದು ವಸಂತಗಳ ಕಾಲ ಮತ್ತು ಕುಂದಾನಗರಿ, ಹಸಿರುಕ್ರಾಂತಿ, ಭಾರತ ವೈಭವ... ಮುಂತಾದ ಸ್ಥಳೀಯ ಪತ್ರಿಕೆಗಳ ವರದಿಗಾರರಾಗಿ ಈಗಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ 'ತಾಲ್ಲೂಕು ಘಟಕದ ಗೌರವಾಧ್ಯಕ್ಷ'ರಾಗಿಯೂ ಸೇವೆಯನ್ನೂ ಸಲ್ಲಿಸಿದ್ದಾರೆ. ತಮ್ಮ ಸ್ವಂತ ಭೂಮಿಯಲ್ಲಿ ಕೃಷಿ ಮಾಡುತ್ತ ಭೂಮಿ ತಾಯಿಯ ಚೊಚ್ಚಲ ಮಗನಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ, ಸಲ್ಲಿಸುತ್ತಿದ್ದಾರೆ. ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಓದು, ಬರಹದಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ವಿಶೇಷವಾಗಿ ಕಾವ್ಯದಲ್ಲಿ ಅತಿ ಹೆಚ್ಚಿನ ಕೃಷಿಯನ್ನು ಮಾಡುತ್ತ ಬಂದಿದ್ದಾರೆ. ಕಾವ್ಯದ ಹಲವು ರೂಪಗಳಲ್ಲಿ ಪ್ರಯೋಗ ಮಾಡಿದ್ದಾರೆ. ಮುಕ್ತಕ, ಭಾವಗೀತೆ, ಅಬಾಬಿ, ಲಿಮಿರಿಕ್, ಸಿಂಕೇನ್, ಭಕ್ತಿಗೀತೆ, ದೇಶಭಕ್ತಿಗೀತೆಗಳು, ಷಟ್ಪದಿ, ರಗಳೆ, ಸಾಂಗತ್ಯ, ಗಜಲ್.. ಮುಂತಾದ ಕಾವ್ಯ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಭಾವ ಭೃಂಗ' ಎಂಬ ಕವನ ಸಂಕಲನ, 'ಒಲವ ಚೈತ್ರವನ' ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸಂಪಗಾವಿಯವರು ಹಲವಾರು ಸಂಘ ಸಂಸ್ಥೆಗಳು ಆಯೋಜಿಸಿದ ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇವರ ಬರವಣಿಗೆಯ ಹಲವು ಝಲಕ್ ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಖಾನಾಪುರ ತಾಲೂಕಿನ ೮ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿರುವ ಈಶ್ವರ ಸಂಪಗಾವಿಯವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದು, ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
'ಗಜಲ್' ಅನ್ನು ಹೇಗೆ ಪ್ರೀತಿಸಬೇಕೆಂದು ನನಗೆ ತಿಳಿದಿದೆ. ಆದರೆ ಪ್ರೀತಿಸುವುದನ್ನು ಹೇಗೆ ನಿಲ್ಲಿಸಬೇಕೆಂದು ನನಗೆ ತಿಳಿದಿಲ್ಲ. ಪ್ರೀತಿಸದಿರುವುದು ದುಃಖ ನೀಡುತ್ತದೆ, ಜೊತೆ ಜೊತೆಗೆ ಪ್ರೀತಿಸಲು ಸಾಧ್ಯವಾಗದಿರುವುದು ಇನ್ನೂ ಹೆಚ್ಚು ದುಃಖ ನೀಡುತ್ತದೆ. "ಜಗತ್ತಿನಲ್ಲಿ ಎರಡು ವಿಧದ ಜನರಿದ್ದಾರೆ: ಇತರರ ನಡುವೆ ದುಃಖಿಸಲು ಇಷ್ಟಪಡುವವರು ಮತ್ತು ಏಕಾಂಗಿಯಾಗಿ ದುಃಖಿಸಲು ಇಷ್ಟಪಡುವವರು" ಎಂಬ ಅಮೇರಿಕನ್ ಲೇಖಕಿ ನಿಕೋಲ್ ಕ್ರಾಸ್ ರವರ ಮಾತನ್ನು ಗಜಲ್ ದುನಿಯಾದಲ್ಲಿ ಗುರುತಿಸಬಹುದು. ಗಜಲ್ ಎಂಬುದು ನಮ್ಮ ಬದುಕಿನ ಪಾಠಶಾಲೆಯಾಗಿದೆ. ಸಾವು ಜೀವನದಲ್ಲಿ ದೊಡ್ಡ ನಷ್ಟವಲ್ಲ. ನಾವು ಬದುಕಿರುವಾಗ ನಮ್ಮೊಳಗೆ ಸಾಯುವುದೇ ದೊಡ್ಡ ನಷ್ಟವಾಗುತ್ತದೆ ಎಂಬುದನ್ನು ಕಲಿಸಿಕೊಡುತ್ತದೆ. ಈಶ್ವರ ಸಂಪಗಾವಿಯವರ ಗಜಲ್ ಗಳನ್ನು ಗಮನಿಸಿದಾಗ ಅವರ ಗಜಲ್ ಗಳಲ್ಲಿ ಪ್ರೀತಿಯ ಸಿಂಚನದ ರೂಪದಲ್ಲಿ ಶೃಂಗಾರ, ವಿರಹ, ಭಗ್ನ ಪ್ರೇಮ, ನಿವೇದನೆ, ಮುನಿಸು, ಕಾಯುವಿಕೆ.. ಎಲ್ಲವೂ ನಮ್ಮ ಗಮನ ಸೆಳೆಯುತ್ತದೆ. ಅದರೊಂದಿಗೆ ಪ್ರಚಲಿತ ವಿದ್ಯಮಾನಗಳು, ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ಜಾಗತಿಕ ಸಮಸ್ಯೆಗಳು, ವೈಚಾರಿಕತೆ ಚಿಂತನೆ, ಭಕ್ತಿ, ಆಧ್ಯಾತ್ಮಿಕ ಬೆಳಗು, ಪರಂಪರೆಯ ಹೆಜ್ಜೆ ಗುರುತುಗಳು, ರಾಜಕೀಯ ಅರಾಜಕತೆ, ಧಾರ್ಮಿಕ ಡಾಂಭಿಕತೆ, ರೈತರ ತೊಳಲಾಟ, ಪ್ರಕೃತಿಯ ಮಹತ್ವ, ಮನುಷ್ಯನ ಸೋಗಲಾಡಿತನ, ಉಪದೇಶ, ಮೌಲ್ಯಗಳ ಹುಡುಕಾಟ.. ಎಲ್ಲವೂ 'ಒಲವ ಚೈತ್ರವನ'ದಲ್ಲಿ ಮುಪ್ಪರಿಗೊಂಡಿವೆ.
ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಅನ್ನ ಮತ್ತು ವಸತಿ ಅತ್ಯವಶ್ಯಕ. ಆದರೆ ಅನ್ನ ತಿನ್ನುವುದಾದರೂ ಎಷ್ಟು ಎಂದು ಪ್ರಶ್ನೆ ಮೂಡಿದಾಗ ಹೊಟ್ಟೆ ಹಿಡಿಯುವಷ್ಟು ಎನ್ನುವ ಉತ್ತರ ಬರುತ್ತದೆ. ಅಂದರೆ ನಾವು ಬದುಕಲು ತಿನ್ನಬೇಕೆ ಹೊರತು ತಿನ್ನಲು ಬದುಕಬಾರದು ಎಂಬುದು ಸಾಮಾನ್ಯ ಜ್ಞಾನ. ಆದರೆ ದುರಂತವೆಂದರೆ ಇಂದು ಮನುಷ್ಯ ಬೌದ್ಧಿಕ ಹಂತದಲ್ಲಿ ಗಗನಮುಖಿಯಾಗಿ ಚಲಿಸುತಿದ್ದನಾದರೂ ಸಾಮಾನ್ಯ ಜ್ಞಾನವನ್ನೇ ಕಳೆದುಕೊಳ್ಳುತಿದ್ದಾನೆ. ಇನ್ನೂ ಬೆತ್ತಲೆಯಾಗಿ ಈ ಭೂಮಿಗೆ ಬಂದ ಮನುಷ್ಯ ತಿರುಗಿ ಬೆತ್ತಲೆಯಾಗಿಯೇ ಹೋಗುತ್ತಾನೆ! ಈ ಬೆತ್ತಲೆಯ ಮೆರವಣಿಗೆಯಲ್ಲಿ 'ಸಂಪಾದನೆ' ಎನ್ನುವ ಸುಳಿಗೆ ಸಿಲುಕಿ ನೈತಿಕ ಅಧಃಪತನಕ್ಕೆ ಗುರಿಯಾಗುತಿದ್ದಾನೆ. ಇಲ್ಲಿ ಶಾಯರ್ ಈಶ್ವರ ಸಂಪಗಾವಿಯವರು 'ಮನುಜ' ಎಂಬ ರದೀಫ್ ಬಳಸಿಕೊಂಡು ನಾವು ಹೇಗೆ ಜೀವನ ಸಾಗಿಸಬೇಕು, ಹೇಗೆ ಸಾಗಿಸಬಾರದು ಎಂಬುದನ್ನು ತುಂಬಾ ಸೂಕ್ಷ್ಮವಾಗಿ ನಿರೂಪಿಸಿದ್ದಾರೆ.
“ಬದುಕಲು ಸಂಪಾದಿಸಬೇಕೆ ವಿನಹ ಸಂಪಾದಿಸಲಿಕ್ಕೆ ಬದುಕಬೇಡ ಮನುಜ
ಜೀವಿಸಲು ತಿನ್ನಲೇಬೇಕೆ ಹೊರತು ತಿನ್ನಲಿಕ್ಕಾಗಿಯೇ ಜೀವಿಸಬೇಡ ಮನುಜ”
'ದೇವರು' ಎನ್ನುವ ವಿಷಯ ಎಲ್ಲರನ್ನೂ ಒಂದಲ್ಲ ಒಂದು ಗಳಿಗೆಯಲ್ಲಿ ಕಾಡುತ್ತದೆ. ಕಾಡುವ ಬಗೆ ಭಿನ್ನ ಭಿನ್ನವಾಗಿರಲೂಬಹುದು. ಹಲವರು ಕಲ್ಲು, ಮಣ್ಣುಗಳ ಮೂರ್ತಿಯಲ್ಲಿ ದೇವರ ಅಸ್ತಿತ್ವವನ್ನು ಕಂಡರೆ, ಇನ್ನೂ ಕೆಲವರು ತಾವು ಮಾಡುವ ಕಾಯಕದಲ್ಲಿ, ತಾವು ಪ್ರೀತಿಸುವ ವ್ಯಕ್ತಿಗಳಲ್ಲಿ ಕಾಣುತ್ತಾರೆ. ಇದೊಂದು ಭಾವನೆಗಳ ವ್ಯಾಪಾರದ ಫಲಶೃತಿ. ದಾಖಲೆಗಳು ದಾಖಲಾಗದೆ ಉಳಿದಿರೋದೆ ಹೆಚ್ಚು. 'ದೇವರು' ನಂಬಿಕೆಯ ರೂಪವಾಗಿದ್ದು, ಹಲವು ಕಡೆ ಮೂಢನಂಬಿಕೆಗೆ ದಾಳವಾಗಿರುವುದನ್ನೂ ಗಮನಿಸಬಹುದು. ಇಲ್ಲಿ ಸುಖನವರ್ ಸಂಪಗಾವಿಯವರು ಮನುಷ್ಯ ಹೇಗೆ ತನ್ನ ಬೌದ್ಧಿಕ ದಾಸ್ಯದಿಂದ, ಜಾಗತೀಕರಣದ ಆಡಂಬರಕ್ಕೆ ಬಲಿಯಾಗಿ ತನಗೆ ತಾನೇ ಗೋರಿ ತೋಡಿಕೊಳ್ಳುತ್ತಿರುವುದನ್ನು ತುಂಬಾ ಸರಳವಾಗಿ ಹಾಗೂ ತೀಕ್ಷ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಅದಕ್ಕೆ ಈ ಕೆಳಗಿನ ಷೇರ್ ಒಂದನ್ನು ಗಮನಿಸಬಹುದು.
“ಕಲ್ಲು ಮಣ್ಣುಗಳ ಗುಡಿಯಲ್ಲಿ ದೇವರ ಹುಡುಕಿದೆ
ಬಲ್ಲ ಸಂಬಂಧಗಳ ಗೂಡನ್ನು ಮರೆತರೆ ಕೆಡುಕಿದೆ”
ಚಿಂತೆಯು ನಾಳೆಯ ದುಃಖವನ್ನು ಎಂದಿಗೂ ಕಸಿದುಕೊಳ್ಳುವುದಿಲ್ಲ, ಬದಲಿಗೆ ಅದು ಇಂದು ಅದರ ಸಂತೋಷವನ್ನು ಕಳೆದುಕೊಳ್ಳುತ್ತದೆ. ದುಃಖ ಎಂಬುದು ನಮಗೆ ನೋವು ಉಂಟು ಮಾಡುತ್ತದೆಯಾದರೂ ಇದೊಂದು ಆರೋಗ್ಯಕರ ಭಾವನೆ ಎಂಬುದನ್ನು ಮರೆಯಲಾಗದು. ಇದು ಅನುಭವಿಸಲು ಅಗತ್ಯವಾದ ವಿಷಯ. ಅಂತೆಯೇ "ದುಃಖವು ಎರಡು ಉದ್ಯಾನಗಳ ನಡುವಿನ ಗೋಡೆಯಾಗಿದೆ" ಎನ್ನುತ್ತಾರೆ ಖಲೀಲ್ ಗಿಬ್ರಾನ್. ಈ ಮಾರ್ಗದಲ್ಲಿ ಗಜಲ್ ಗೋ ಶ್ರೀ ಈಶ್ವರ ಸಂಪಗಾವಿಯವರಿಂದ ಹೆಚ್ಚು ಹೆಚ್ಚು ಗಜಲ್ ಗಳು ರಚನೆಯಾಗಲಿ, ಸಹೃದಯಿಗಳ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ.
“ಮುಂಚಿತವಾಗಿಯೇ ಆ ಹೆಜ್ಜೆಯ ಸದ್ದು ಅರಿವಾಗುತ್ತದೆ
ಓ ಜೀವನವೇ, ನಾನು ನಿನ್ನನ್ನು ದೂರದಿಂದಲೆ ಗುರುತಿಸುaತ್ತೇನೆ”
-ಫಿರಾಕ್ ಗೋರಕಪುರಿ
ಗಜಲ್ ಗೋ ಅವರ ಹೆಜ್ಜೆ ಗುರುತುಗಳನ್ನು ದಾಖಲಿಸುತಿದ್ದರೆ ಗಡಿಯಾರದ ಮುಳ್ಳುಗಳು ಚಲಿಸುವುದು ಗೊತ್ತೇ ಆಗಲ್ಲ, ಆ ಮುಳ್ಳುಗಳಿಗೆ ಗೋಡೆ ಕಟ್ಟಬೇಕು ಅನಿಸುತ್ತದೆ. ಆದರೆ ಮರುಕ್ಷಣದಲ್ಲಿಯೇ ನನ್ನ ಮಿತಿಯನ್ನು ಅರಿತು ಮೌನವಾಗುತ್ತೇನೆ. ಬೇಸರ ಬೇಡ, ಮತ್ತೇ ಮುಂದಿನ ಗುರುವಾರದಂದು ತಮ್ಮ ಮುಂದೆ ಬರುವೆ, ಅಲ್ಲಿಯವರೆಗೆ ಟಾಟಾ, ಬಾಯ್, ಟೇಕ್ ಕೇರ್…!!
ಧನ್ಯವಾದಗಳು..
ಡಾ. ಮಲ್ಲಿನಾಥ ಎಸ್. ತಳವಾರ