ಅಂಕಣ ಸಂಗಾತಿ
ಆತ್ಮ ಸಖಿ
ಭಾರತಿ ಅಶೋಕ್ ಅವರು ಸಂಗಾತಿಯಲ್ಲಿ ಆತ್ಮಸಖಿ ಅಂಕಣವನ್ನು ಪ್ರತಿ ಸೋಮವಾರ ಬರೆಯಲಿದ್ದಾರೆ
“ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ”
“ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ” ಹಿರಿಯ ಕವಿ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಹಾಡು ಗುನುಗುತ್ತಾ ಮನದಲ್ಲಿ ಗಕ್ಕನೆ ಹರೆಯಕೆ ಜಾರಿದರೆ ಅಲ್ಲಿ ಬರೀ ಕನಸು ಬೆಚ್ಚಿ ಬೀಳಿಸುವ ಕನಸು. ಹರೆಯ ಅದೊಂದು ಮಾಯದ ಬೆರಗು. ಹೆಣ್ಣಿನ ಬದುಕಿನಲ್ಲಿ ಅದೊಂದು ಬಣ್ಣದ ಲೋಕ.ಸದಾ ಕನಸುಗಣ್ಣಿನ ನೋಟ ಎತ್ತ ನೋಡಿದರೆ ಅತ್ತ ಅವಳ ಕನಸು ಚಾಚುವುದು. ಮಿತಿಯಿಲ್ಲದ ಅವಳ ಕನಸಿಗೆ ಅಂತರಂಗವೇ ಮಿತಿ. ಬಹಿರಂಗದಲ್ಲಿ ಅವಳು ಹೇಳುವಂತಿಲ್ಲ, ಅವುಡುಗಚ್ಚಿ ನುಂಗುವುದುಷ್ಟೇ. ಸದಾ ತನ್ನ ಅಂತರಂಗದ ಪ್ರೇಮಿಯೋಂದಿಗೆ ಸಂವಾದದಲ್ಲಿ ತಲ್ಲೀನಳಾಗಿರುವ ಅವಳು ಏಕಾಂತವನ್ನೇ ಬಯಸುವಳು. ಕನ್ನಡಿಯ ಮುಂದೆ ನಿಂತಳೆಂದರೆ ಅವಳಿಗೆ ಜಗತ್ತು ಮಾಯ. ತನ್ನ ಸೌಂದರ್ಯಕೆ ತಾನೇ ಬೇರಗಾಗುವಳು. ತನ್ನ ಅಂತರಂಗದ ಪ್ರೇಮಿಯೊಡನೆ ಕಾಲ ಕಳೆಯುವಳು. ಮುಡಿಯನ್ನು ಎಷ್ಟು ಸಿಂಗರಿಸಿಸರೂ ಸಮಾಧಾನವಿಲ್ಲ.ಹೇಗೆ ಕಟ್ಟಿದರೂ ಸಮಾಧಾನವಿಲ್ಲ. ಉಡುಪು ಬದಲಿಸಿ, ಬದಲಿಸಿ ಮುಂಗುರಳನ್ನು ಸರಿಸಿ ಕೆನ್ನೆ ಮುಟ್ಟಿ ಮುಟ್ಟಿ ನೋಡಿಕೋಡು ತನ್ನ ಮೇಲೆ ತನಗೇ ವ್ಯಾಮೋಹ. ಎಷ್ಟಂತ ನೋಡುವುದು. ಕಣ್ಮುಚ್ಚಿ ಒಮ್ಮೊಮ್ಮೆ ನಿಂತಲ್ಲಿಯೇ ಕನಸಿಗೆ ಜಾರುವಳು.
ಅಂತರಂಗದಿ ಹೂ ಬನದಿ ಅರಳಿ ನಿಂತ ಸುಮ. ಸುತ್ತೆಲ್ಲಾ ತನ್ನ ಪರಿಮಳ ಹರಡಿ ಕಂಪ ಸೂಸಿದೆ. ಪರಿಮಳವ ಆಘ್ರಾಣಿಸಲು ದುಂಬಿಗಳ ದಂಡು ದಂಡಾಗಿ ಝೇಂಗರಿಸುತ್ತಿವೆ. ಆ ದುಂಬಿಗಳಲ್ಲಿ ಯಾವುದೋ ಒಂದು ದುಂಬಿ ಆ ಹೂವಿನದು. ಆದರೆ ಯಾವುದು? ಖಚಿತತೆ ಇಲ್ಲ. ಅಮೂರ್ತ ಬಿಂಬದೊಂದಿಗೆ ಸರಸ, ಸಲ್ಲಾಪ. ಮಧುರ ಮಾತಿನ ಸಂಭಾಷಣೆಗೆ ದುಂಬಿಯ ತನ್ಮಯತೆ ಹೇಳತೀರದು. ಹೂ ದುಂಬಿಗಳೊಂದಾಗಿ ಮುದ್ದಿಸಿ, ಆಲಂಗಿಸಿ ಕೈ ಕೈ ಹಿಡಿದು ಕಾಡು, ಮೇಡು, ಗಿರಿ, ಶಿಖರ ಎಲ್ಲೆಂದರಲ್ಲಿ ಸ್ವಚ್ಚಂದವಾಗಿ ಪ್ರಣಯ ಪಕ್ಷಿಗಳಂತೆ ಹಾರಿ ದಿಗಂತದ ತುತ್ತ ತುದಿಯ ಮುಟ್ಟಿವರು ದಣಿವರಿಯದ ಪ್ರೇಮ ಪಯಣದಲಿ ಮಿಂದೇಳುವ ಪರಿ ಅಮೋಘ. ಎದೆ ನೆಲವೇ ದಿಗಂತ ಅವುಗಳ ಕಲ್ಪನೆಯ ಮಿತಿ, ಪಯಣ ಮುಗಿದು ಅಂತರಂಗದ ಕದವ ತೆರಯಲು ಅವಳಿಗೆ ತನ್ನಿರುವಿಕೆಯ ಅರಿವಾಗಿ ನಾಚಿ ಕನಸಿಂದ ವಿರಮಿಸುವಳು ಕಾರಣ ಅವಳು ಬಹಿರಂಗದಲ್ಲಿ ತುಂಬಾ ಸಾಧು. ಹೀಗೇ ಇರಬೇಕೆಂಬ ಸಮಾಜದ ಕಟ್ಟಳೆಯನ್ನು ಅವಳೆಂದೂ ದಾಟುವುದುದಿಲ್ಲ. ಅದು ವಿಧಿಸಿದ ಬಂಧಗಳಲ್ಲೇ ಬದುಕುತ್ತಾಳೆ. ಆ ಮಿತೆಯೇ ತನ್ನ ಆಂತರ್ಯದ ತುಮುಲಗಳನ್ನು ತೆರೆಯದೇ ಅದನ್ನು ಭದ್ರವಾಗಿಸಿ ಸಾಧ್ಯವಾದರೆ ಒಳಗಿಂದ ಬೀಗ ಜಡಿದು ತನ್ನ ಕಲ್ಪನೆಯಲ್ಲಿ ತಾನು ಸುಖಿಸುತ್ತಾಳೆ. ಅವಳಿಗೆ ಅದು ಮಿತಿ, ವ್ಯಾಪ್ತಿಯೂ. ಆದರೆ ಅದನ್ನು ದಾಟುವ ಸಾಹಸವನ್ನಾಗಲಿ, ಪ್ರಯತ್ನವನ್ನಾಗಲೀ ಅವಳು ಎಂದೂ ಮಾಡಲಾರಳು. ಅವಳಿಗೆ ತನ್ನ ಮಿತಿಯ ಅರಿವಿದೆ. ಅದು ಸಾದ್ಯವಿಲ್ಲ ಎಂದು ಅದಕ್ಕಾಗಿಯೆ ಅವಳು ಯಾರು ತಡೆಯದ, ಯಾರ ಆತಂಕವೂ ಇಲ್ಲದ ಮನವೆಂಬ ವಿಶಾಲ ಬಯಲನ್ನೆ ತನ್ನ ಪ್ರೇಮಾಲಯನ್ನಾಗಿಸಿಕೊಂಡು ಅಲ್ಲಿ ತನ್ನ ಪ್ರೇಮ ಪೂಜೆಯನ್ನು ನಿರಾತಂಕವಾಗಿ ಮಾಡುವಳು ಅವಳದ್ದು ಏನಿದ್ದರೂ ಅಂತರಂಗದ ಮನೋವ್ಯಾಪಾರ. ಬಹಿರಂಗದಲ್ಲಿ ಇಂತಹ ಮನೋ ವ್ಯಾಪಾರಕ್ಕೆ ಜಾಗವಿಲ್ಲ, ಅವಕಾಶವು ಇಲ್ಲ. ಅವಳದೇನಿದ್ದರು ಮೌನ ದ್ಯಾನ. ಅಲ್ಲಿಯೇ ಅವಳ ಪ್ರೇಮ ತನನ.
*“ಅಂದು ಆಡದೇ ಉಳಿದ ಮಾತುಗಳೀಗ
ಮೌನವಾಗಿ ರೋದಿಸುತ್ತಿವೆ
ಅಂದಿಗೆ ಮಾತಾಗದೇ
ಇಂದಿಗೆ ಮೌನವೂ ಆಗದೇ
ಮಾತು ಮೌನಗಳ ತಾಕಲಾಟ”*
ಅಂದು ಆಡಲೇಬೇಕಾಗಿದ್ದ ಮಾತುಗಳು ತುಟಿ ತೆರೆಯದೇ ಮನಸ್ಸಿನ ಒಳಗೆ ಮಂಥನ ನಡೆಸಿಯೂ ಮಾತು ಆಡಲು ಸಾಧ್ಯವಾಗದೇ ಶಾಶ್ವತವಾಗಿ ಮನದಲ್ಲಿ ನೆಲೆ ನಿಲ್ಲುತ್ತವೆ. ಅಂದು ಮಾತಿಗೆ ತಡೆಯೊಡ್ಡಿದ್ದು ಒಳಗಿನ ಅಳುಕು. ಯಾರೊಂದಿಗಾದರೂ ಹೇಳಿಕೊಂಡರೆ ಎಲ್ಲಿ ಬಂಧಿಯಾಗುವೆ ಎನ್ನುವ ಅವ್ಯಕ್ತ ಭಯ ಮಾತು ಹೊರ ಬರದಂತೆ ಉಳಿಸಿಕೊಂಡ ಮಾತುಗಳೀಗ ಅನುಭವಿಸುತ್ತಿರುವುದು ಬರೀ ವೇದನೆ, ತನಗರಿವಿಲ್ಲದೇ ಎಷ್ಟೊ ಮಾತುಗಳು ಹಾಗೆ ಉಳಿದುದಕ್ಕೆ ಇಂದು ವಾಗ್ಯುದ್ದಕ್ಕೆ ಸಜ್ಜಾಗುತ್ತಿವೆ .ಅಂದಿನ ಮಾತು ಮೌನವಾಗಿ ಇಂದಿನ ಮೌನ ಬುಸುಗುಟ್ಟುತ್ತಿದೆ. ಅಂದೇ ಮಾತಾಗಿದ್ದರೆ ಇಂದು ಒಳಗೊಳಗೆ ಮೌನವಾಗಿ ರೋಧಿಸುವ ಅಗತ್ಯವಿರಲಿಲ್ಲ. ಹಾಗೆ ಎದೆಯೊಳಗೆ ಮೌನವಾಗೆ ಉಳಿದ ಮಾತುಗಳು ಈಗ ಮೌನದೊಡನೆ ಗುದ್ದಾಡುತ್ತಿವೆ.
ಮಾತು ಆಡದ್ದನ್ನು ಮೌನ ಮೌನವಾಗಿದ್ದಕೊಂಡು ಎಲ್ಲವನ್ನು ಸಾಧಿಸುತ್ತದೆ.. ಮಾತಿಗೆ ಆಡಿಬಿಡುವ ತವಕ. ಆದರೆ ಮೌನಕ್ಕೆ ತಾಳ್ಮೆ ಹೆಚ್ಚು. ಮಾತು ಮಾಡದ್ದು ಮೌನ ಮಾಡುತ್ತದೆ. ಮಾತಿಗೆ ಆಡಿದ್ದಷ್ಟೇ ಅರ್ಥ, ಮೌನಕ್ಕೆ ಹಾಗಲ್ಲ ಆಡದೇ ಉಳಿದ ಮಾತಿನ ಎಲ್ಲಾ ಅರ್ಥವನ್ನು ಸ್ಪುರಿಸುವ ಶಕ್ತಿ ಇದೆ. ಮಾತು ಆಡಲೇಬಾರದು ಎಂದು ವಿದಿಸಿಕೊಂಡ ನಿರ್ಬಂಧವೇನೂ ಅಲ್ಲ. ಆದರೆ ಪರಿಸ್ಥಿತಿ ಅಂಥಹ ಸಂದರ್ಭವನ್ನು ಅವಳಿಗೆ ತಂದೊಡ್ಡುತ್ತದೆ.
*”ಮನವು ಹಂಬಲಿಸುತ್ತಿದೆ
ಮಾತಿನ ಪ್ರವಾಹ ಹರಿಸಲು
ಹಗುರಾಗಲು
ಮೌನದ್ದೇ ಪಾರುಪತ್ಯ
ಮಾತಿನ ಪ್ರವಾಹಕೆ ಕಟ್ಟೆ ಹಾಕಿ ತಡೆಯುತ್ತಿದೆ.
ಮೌನದಉದ್ಧಟತPನ
ಸಹಿಸಲಸಾಧ್ಯ, ಮೀರಿದರೆ ಮಿತಿ
ಮೌನದ್ದೆ ಮೆರವಣಿಗೆ
ಮೌನವೇ ನೀ ಸಹಿಸಿದಂತೆಲ್ಲಾ
ಎದೆಯಲಿ ನೋವಿನ ಕಾರ್ಮೋಡ ಕವಿದು
ಸಿಡಿಲು ಗುಡುಗು ಹೆಚ್ಚಿ ಹುಚ್ಚೆದ್ದು
ಭೊರ್ಗರೆವ ಮಳೆ ಸುರಿದು
ಪ್ರವಾಹದಲಿ ಕೊಚ್ಚೆ ಹೋದರೆ
ಮೌನಕ್ಕೆಲ್ಲಿ ಬೆಲೆ
ಮೌನ ಮುರಿಯದಿದ್ದರೆ
ಪ್ರಳಯಕೆ ಸಾಕ್ಷಿಯಾಗುವಿ
ಆಹಾಕಾರವ ತಡೆಯಲಾದರೂ
ಮೌನ ಮುರಿದುಬಿಡು*
ಹೀಗೆ ಮಾತು ಮೌನಕ್ಕು ವಾಗ್ವಾದ ನಡೆದರೂ ಮೌನ ಕಟ್ಟೆ ಒಡೆದು ಮಾತಾಗಿ ಹರಿಯದಿರುವುದು ಅವಳ ಬದುಕಿನ ವಿಪರ್ಯಾಸ. ಆಗ ಮೌನವಾಗಿದ್ದ ಮಾತಿಗೆ ಸಮಾಜದ ಪರಿಸ್ಥಿಯ ಅರಿವಿತ್ತು. ಅವಳ ಯಾವ ಮಾತಿಗೂ ಬೆಲೆ ಇಲ್ಲ ಎನ್ನುವುದು. ಆಡಿದರೂ ಮಾತಾಗುತ್ತಿತ್ತೇ ವಿನಃ ಮಾತಿಗೆ ಬೆಲೆ ಇರುತ್ತಿರಲಿಲ್ಲ. ಅದೊಂದು ಪ್ರತಿಭಟನೆ ಎನ್ನಿಸಿದರೆ ಅವಳ ಬದುಕು ಮತ್ತೊಂದು ತಿರುವನ್ನು ಪಡೆಯುತ್ತಿತ್ತು. ಆ ತಿರುವು ಏನೂ ಆಗಬಹುದಿತ್ತು.
ಹರೆಯ’ ಅದು ನಿತ್ಯ ವಸಂತ
ಹರೆಯ ಎನ್ನುವುದು ನಿಜಕ್ಕು ವಸಂತವೇ. ಮೈ ಮನ ಚಿಗುರುವ ಕಾಲ. ಸದಾ ಹೊಸತನ ಯಾವುದನ್ನು ಮನಸ್ಸಿಗೆ ತಂದುಕೊಳ್ಳದ ವಯಸ್ಸು ಎಲ್ಲವನ್ನು ಬೆರಗುಗಣ್ಣಿನಿಂದ ನೋಡುವ ಸೂಕ್ಷ್ಮ ಮನಸ್ಥಿತಿ ಅದು. ಎಲ್ಲವು ಅವಳ ಬದುಕಿನ ಭಾಗವೆ. ಎನೋಂದು ನಿರ್ಧಾರವೂ ಅವಳ ಬದುಕಿನ ಭಾಗವಲ್ಲ ಎನ್ನುವುದು ಅವಳ ಅರಿವಿನ ಭಾಗ ಆಗುವಂತೆ ಪರಂಪರೆ ಸಿದ್ಧಗೊಳಿಸಿದೆ.ಅದನ್ನು ಗಮನಿಸುತ್ತಾ ಬೆಳೆದ ಅವಳಿಗೆ ಎಲ್ಲವೂ ಸ್ವೀಕೃತವೆ.ಹಾಗೆ ನೋಡಿದರೆ ಗಂಡು ಮಕ್ಕಳನ್ನು ನೆಲ ಗುದ್ದಿ ನೀರು ತರಿಸಿಯೇ ಬಿಡುವೆ ಎನ್ನುವಂತೆ ಬೆಳೆಸುವುದು ಅದೇ ಸಮಾಜಿಕ ಪರಂಪರೆ. ಹೆಣ್ಣು ಮಕ್ಕಳು ಇದೆಲ್ಲವನ್ನು ನೋಡಿ ನೋಡದಂತೆ ಇದ್ದುಬಿಡುವ ಸ್ಥಿತಿಗೆ, ಹಾಗೆ ಬದುಕನ್ನು ಎದುರಿಸುವ ಸ್ಥಿತಿಗೆ ಸಿದ್ಧತೆ ನಡೆಸಿರುತ್ತಾಳೆ. ಅವಳು ಒಂದು ವೇಳೆ ಪ್ರತಿಭಟಿಸಲು ಸಜ್ಜಾದಳೆಂದರೆ ತನ್ನೊಳಗೆ ಒಂದು ಸಿದ್ಧ ಉತ್ತರ ಸಿಕ್ಕು ಸುಮ್ಮನಾಗುತ್ತಾಳೆ. ಇದೆಲ್ಲವನ್ನು ಮೀರಿ ಅವಳು ಚೈತ್ರದ ವಸಂತವಾಗುತ್ತಾಳೆ.
ಮೈತುಂಬಾ ಚಿಗುರು ಒಗರು ಹೂ ಕಾಯಿ ಗೊಂಚಲು
ತನು ಮನಕ್ಕೆಲ್ಲಾ ಹಸುರಿನ ಸಿಂಚನ
ಮತ್ತೆ ಮತ್ತೆ ಹೊಸ ಜೀವ ಹೊಸ ಭಾವದಿ ಹರೆಯಕೆ ವರವಿತ್ತ ಅನುಭಾವ
ಕಾಣುವ ನೋಟ ಮಾಟ ಕೂಟವೆಲ್ಲಾ
ಹೊಸತು ಹೊಸತನ ಹೊಸತರಲ್ಲೇ ತಲ್ಲೀನ
ಪ್ರಕೃತಿ ಪುರುಷನಿಗೆ ತಾನೊಂದು ವಧುವಾಗಿ
ಮೈಯೆಲ್ಲ ಸಿಂಗರಿಸಿ ತಿದ್ದಿ ತೀಡಿದ ಗೊಂಚಲು
ಸೊಕ್ಕಿದ ಗಜಗಮನೆಯ ಒನಪು ವೈಯಾರಕೆ ತಾರುಣ್ಯ
ಬಾಗಿ ಸೋತು ಶರಣಾದಂತೆ
ಏನಾದರೂ ಹರೆಯ ಮತ್ತೆ ಬಾರದು. ಕವಿ ವಾಣಿಯಂತೆ “ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ” ಆದರೆ ಅದರ ಮಾಧುರ್ಯವನ್ನು ಬೇಕಾದಾಗ ಬೇಕಾದಂತೆ ಅನುಕೂಲಿಸುವ ಮನಸ್ಸಿದೆಯಲ್ಲ. ಅಲ್ಲಿದೆ ಕನಸುವ ತಾಣ ಮನಸ್ಸಿಗೆ ಪ್ರಾಶಸ್ತ್ಯ ಕೊಟ್ಟರೆ ಸಾಕು ಮತ್ತೆ ಅಲ್ಲಿಗೆ ಅದೇ ಆ ಹರೆಯಕೆ ಕೊಂಡೊಯ್ಯುವ ಎಲ್ಲಾ ಸೌಲಭ್ಯಗಳು ಅಲ್ಲುಂಟು ಒಮ್ಮೆ ಮನಸ್ಸು ಮಾಡಿ ಮನಸ್ಸಿಗೆ ಮನಸ್ಸ ಕೊಟ್ಟು ಕಣ್ಮುಚ್ಚಿಬಿಡು ಗೆಳತಿ ಮತ್ತದೆ ವಸಂತದಿ ನೀನಿರುವೆ. ಸುಖಿಸಿಬಿಡು ಕಳೆದುಕೊಂಡ ಆ ಚಣವನು. ಅದು ನಿನ್ನದೇ. ನಿನ್ನ ನೋವ ಮರೆಸುವ ಚಣ ಎಲ್ಲವನ್ನು ಕಟ್ಟಿಕೊಡುವ ತಾಣ. “ಎಂಥಾ ಹದವಿತ್ತು ಹರೆಯಕೆ ಏನು ಮುದವಿತ್ತೇ” ಅಂತ ಮತ್ತೆ ಮತ್ತೆ ಹಾಡಬೇಕನ್ನಿಸುತ್ತೆ ಅಲ್ಲವೇ ಗೆಳತಿ. ಸಾಕೆನಿಸಿದರೆ. ಮತ್ತೆ ಬಾ ಮರಳಿ, ಇಲ್ಲಿದೆ ಮತ್ತೆ ಅದೇ ಆ ಗಡಿಬಿಡಿ ಗಂಡಾಗುಂಡಿ ಬದುಕು. ಇದೂ ಹಿತವೇ ಬದಲೀ ಆಯ್ಕೆಗಳಿಲ್ಲ ಅನುಭವಿಸುವಾ.
ಭಾರತಿ ಅಶೋಕ್
ಅವಿಭಜಿತ ಬಳ್ಳಾರಿ( ಈಗ ವಿಜಯನಗರ) ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಸೋಗಿ ಗ್ರಾಮದಲ್ಲಿ (ಜುಲೈ1ರಂದು )ಜನಿಸಿದ ಇವರು, ಪ್ರಸ್ತುತ ಹೊಸಪೇಟೆಯಲ್ಲಿ ವಾಗಿರುವ ಇವರು ಕನ್ನಡ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು , ಅಲ್ಲಿಯೇ “ಕನ್ನಡ ಹಾಸ್ಯ ಸಾಹಿತ್ಯದಲ್ಲಿ ವಿಡಂಬನೆಯ ತಾತ್ವಿಕ ನೆಲೆಗಳು” ಎನ್ನುವ ವಿಷಯದ ಮೇಲೆ ಸಂಶೋಧನೆಯನ್ನು ಕೈಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಸ್ಥಳೀಯ ಖಾಸಗೀ ಹೈಸ್ಕೂಲಿನಲ್ಲಿ ಮುಖ್ಯ ಶಿಕ್ಷಕಿಯಾಗಿ ಮಕ್ಕಳ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿದರು, ಪದವಿಪೂರ್ವ ನಂತರ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಾ ತನ್ನಿಷ್ಟದ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಕಾವ್ಯದ ವಸ್ತುವೆಂದರೆ ಹೆಣ್ಣಿನ ಬದುಕನ್ನು ತಲ್ಲಣಗೊಳಿಸುವ, ಸಮಾಜಕ್ಕೆ ಮಾರಕ ಎನ್ನುವ ಸೂಕ್ಷ್ಮ ವಿಷಯಗಳು, ಹೆಣ್ತನಕ್ಕಾಗಿ ಕೃತಜ್ಞತೆ ಹೊಂದಿರುವ ಈಕೆ ಅದನ್ನು ಅದ್ಬುತವಾಗಿ ಅನುಭವಿಸುವ ಸಂವೇದನಾಶೀಲೆ.
ತುಂಬಾ ಚೆನ್ನಾಗಿ ಮೂಡಿಬಂದಿದೆ ಅಕ್ಕ ತುಂಬಾ ಸಂತೋಷವಾಯಿತು ಹೀಗೆ ಬರೆಯುತ್ತಾ ಇರಿ ಒಳಿತಾಗಲಿ ಅಕ್ಕ ತಮಗೆ
ಹರೆಯದ ಕನಸು ಕನವರಿಕೆಗಳ ಹದವಾದ ಮಿಶ್ರಣದ ಲೇಖನ ರಸವತ್ತಾಗಿದೆ…. ಅಭಿನಂದನೆಗಳು ಮೆಡಂ