ಕಾವ್ಯ ಸಂಗಾತಿ
ಅರ್ಚನಾ ಯಳಬೇರು
ಗಜಲ್
ನಿನ್ನ ನಗುವಲಿ ಎನ್ನ ಹೃದಯವು ಅರಳುತಿದೆ
ನಿನ್ನ ಮೌನದಲಿ ಎನ್ನ ಜೀವವು ಸೊರಗುತಿದೆ
ಮೆಲ್ಲುವ ರಸಗವಳದಂತೆ ನಿನ್ನ ಪ್ರೀತಿಯ ತುತ್ತು
ನಿನ್ನ ಒಲವಲಿ ಎನ್ನ ಪ್ರೇಮವು ಸ್ತುತ್ಯವಾಗುತಿದೆ
ಕೆಂಡದ ಕೋಪದಲಿ ಕರಕಲಾಗದಿರಲಿ ಚೆಲುವು
ನಿನ್ನ ಸ್ನೇಹದಲಿ ಎನ್ನ ಭಾವವು ಭವ್ಯವಾಗುತಿದೆ
ನಿರಾಸೆಗಳ ಮೋಡ ಮುತ್ತದಿರಲಿ ನಗುವ ನಭಕೆ
ನಿನ್ನ ಸಖ್ಯದಲಿ ಎನ್ನ ವಿರಹವು ಮಂದವಾಗುತಿದೆ
ಗರ್ವದಲಿ ಮನವು ಮಬ್ಬಾಗದಿರಲಿ ‘ಅರ್ಚನಾ’
ನಿನ್ನ ಆಸ್ಥೆಯಲಿ ಎನ್ನ ಅಸುವು ಲಾಸ್ಯವಾಡುತಿದೆ