ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ ಅವರ ಲೇಖನಿಯಿಂದ
ಸುರೇಶ್ ರಾಜಮಾನೆಯವರ ಗಜಲ್ ಗಳಲ್ಲಿ.ಸಾಮಾಜಿಕ ಸಂವೇದನೆ
ಗಜಲ್ ಪೂಜಿಸುವ ಹೃದಯಗಳಿಗೆ ಈ ಗಜಲ್ ಪ್ರೇಮಿಯ ನಮಸ್ಕಾರಗಳು..
‘ಗುರುವಾರ’ ಹತ್ತಿರ ಬರುತ್ತಲೇ ಗಜಲ್ ಅಂಕಣ ಬರಹ ‘ಗಜಲ್ ಲೋಕ’ ನನ್ನನ್ನು ಎಚ್ಚರಿಸುತ್ತದೆ, ಈ ವಾರ ಯಾರ ಕುರಿತು ಬರೆಯಬೇಕು ಎಂದು! ಆ ಎಚ್ಚರಿಕೆ ಗಂಟೆಯ ನಾದದಲ್ಲಿ ಈ ವಾರ ಶಾಯರ್ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತ್ತಿರುವೆ. ಗಜಲ್ ಜನ್ನತ್ ನಲ್ಲಿ ವಿಹರಿಸುತಿದ್ದರೆ ಮನಸ್ಸಿಗೇನೊ ಪುಳಕ, ಆನಂದ.
ಬನ್ನಿ, ಗಜಲ್ ಆರಾಧಕರೆ; ತಮಗೂ ಇದೆ ಅನುಭವ ಆಗುತ್ತದೆ ಎಂದು ಭರವಸೆ ನೀಡುವೆ..!
“ನನ್ನ ಹೃದಯದ ಯಾವುದೋ ಮೂಲೆಯಲ್ಲಿಯ ಮುಗ್ಧ ಮಗು
ಜಗತ್ತಿನ ಹಿರಿಯರನ್ನು ನೋಡಿ ಬೆಳೆಯಲು ಹೆದರುತ್ತದೆ”
- ರಾಜೇಶ್ ರೆಡ್ಡಿ
ಮನುಷ್ಯ ತನ್ನ ಭಾವನೆಗಳಿಂದ, ಆಲೋಚನಾ ಲಹರಿಯಿಂದ ಇನ್ನಿತರ ಪ್ರಾಣಿಗಳಿಗಳಿಗಿಂತಲೂ ಭಿನ್ನವಾಗಿದ್ದು; ಪ್ರಕೃತಿಯೊಂದಿಗೆ ಪೈಪೋಟಿಗೆ ಇಳಿದಿದ್ದಾನೆ! ಮನಸ್ಸು ಸದಾ ಸಲಹೆಗಳಿಗೆ ಒಳಗಾಗುತ್ತದೆ. ಅದಕ್ಕೆ ನಾವು ಏನು ಕಲಿಸುತ್ತೇವೆಯೊ ಅದು ಅದನ್ನೇ ಕಲಿಯುತ್ತದೆ. ಈ ದಿಸೆಯಲ್ಲಿ ಯೋಚಿಸಿದಾಗ ಯಾರ ಭಾವನೆಗಳಿಗೂ ನೋವುಂಟು ಮಾಡದ ಮನುಷ್ಯ ಸಿಗಲು ಸಾಧ್ಯವೇ ಎಂಬುದನ್ನು ಅವಲೋಕಿಸಬೇಕಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ, ಹೆಚ್ಚಿನ ಜನರು ತರ್ಕಕ್ಕಿಂತ ಪೂರ್ವಾಗ್ರಹಕ್ಕೆ ಹೆಚ್ಚು ಒಳಗಾಗುತ್ತಾರೆ. ಇಲ್ಲಿ ಡಚ್ ತತ್ವಜ್ಞಾನಿ ಡೆಸಿಡೆರಿಯಸ್ ಎರಾಸ್ಮಸ್ ರವರ "Man's mind is so formed that it is far more susceptible to falsehood than to truth" ಈ ಮಾತು ಹೆಚ್ಚು ಪ್ರಸ್ತುತವೆನಿಸುತ್ತದೆ. ಅಂದರೆ ಮನುಷ್ಯನ ಮನಸ್ಸು ಸತ್ಯಕ್ಕಿಂತ ಸುಳ್ಳಿಗೆ ಹೆಚ್ಚು ಒಳಗಾಗುತ್ತದೆ ಎಂಬುದು ನಮ್ಮ ಚಿಂತನೆಗೆ ಸವಾಲೆಸೆಯುತ್ತದೆ. ಭಾವದಲೆಗಳು ಬಾಳಿನ ಕಡಲನ್ನು ಮುನ್ನಡೆಸುತ್ತವೆ. ಈ ಕಡಲಿನ ಸ್ವರೂಪವನ್ನು ಆಲೋಚನೆಗಳು ನಿಯಂತ್ರಿಸುತ್ತಿರುತ್ತವೆ. ಈ ನೆಲೆಯಲ್ಲಿ ಗಮನಿಸಿದಾಗ ಭಾವನೆಗಳು ಹಾಗೂ ಆಲೋಚನೆಗಳು ಬೇರೆ ಬೇರೆಯಾಗಿದ್ದು ಪರಸ್ಪರ ಒಂದಕ್ಕೊಂದು ಪೂರಕವಾಗಿಯೊ, ಮಾರಕವಾಗಯೊ ಮನುಕುಲವನ್ನು ಆಶ್ರಯಿಸಿರುವುದು ಮನದಟ್ಟಾಗುತ್ತದೆ. ಆಲೋಚನೆಗಳು ನಮ್ಮ ಭಾವನೆಗಳ ನೆರಳುಗಳಾಗಿವೆ. ಆದಾಗ್ಯೂ ಭಾವನೆಗಳು ಆಲೋಚನೆಗಳಿಗಿಂತ ಹೆಚ್ಚು ಅಪಾಯಕಾರಿ. ಏಕೆಂದರೆ ಅವು ತರ್ಕಬದ್ಧ ಮೌಲ್ಯಮಾಪನಕ್ಕೆ ಒಳಗಾಗುವುದಿಲ್ಲ. ಅವು ಸದ್ದಿಲ್ಲದೆ ಬೆಳೆಯುತ್ತವೆ, ನೆಲದಡಿಯಲ್ಲಿ ಹರಡುತ್ತವೆ ಮತ್ತು ಇದ್ದಕ್ಕಿದ್ದಂತೆ ಎಲ್ಲಾ ಸ್ಥಳಗಳಲ್ಲಿ ಸ್ಫೋಟಗೊಳ್ಳುತ್ತವೆ. ಯಾರಿಗಾದರೂ ಭಾವುಕರಾಗಬೇಡಿ ಎಂದು ಹೇಳುವುದು ಅವರನ್ನು ಸಾಯಿಸಿದಂತೆಯೇ ಸರಿ!! ಹೃದಯವನ್ನು ಮುರಿಯುವ ಭಾವನೆಯು ಕೆಲವೊಮ್ಮೆ ಅದನ್ನು ಗುಣಪಡಿಸುತ್ತದೆ ಎಂಬುದನ್ನು ಮರೆಯಲಾಗದು. ಈ ಹಿನ್ನೆಲೆಯಲ್ಲಿ ಭಾವನೆಗಳ ಬೇರಿನೊಂದಿಗೆ ಚಿಗುರೊಡೆಯುವ ಸಾಹಿತ್ಯ ಪ್ರತಿ ಭಾಷೆಯ, ಪ್ರತಿ ಸಂಸ್ಕೃತಿಯ ಬೆನ್ನೆಲುಬಾಗಿದೆ. ಇಂಥಹ ಅನುಪಮ ಲೋಕದಲ್ಲಿ 'ಕಾವ್ಯ' ಪ್ರಕಾರವು ಹೃದಯವಂತಿಕೆಯ ಗುತ್ತಿಗೆ ಹಿಡಿದಿರುವುದು ಸಂತಸ ತಂದಿದೆ. ಕಾವ್ಯದ ವಿಭಿನ್ನ ಟೊಂಗೆಯಾದ 'ಗಜಲ್' ಇಂದು ಭಾಷೆಯ ಗಡಿಯನ್ನು ದಾಟಿ ಕನ್ನಡ ಕಸ್ತೂರಿಯಲ್ಲಿ ಬೆರೆತು ಹೋಗಿದೆ. ಅಸಂಖ್ಯಾತ ಕನ್ನಡಿಗರು ಗಜಲ್ ಬೇಗಂಳ ಪ್ರೀತಿಗೆ ಮನಸೋತು ಗಜಲ್ ಕೃಷಿಯಲ್ಲಿ ನಿರತರಾಗಿದ್ದಾರೆ. ಅವರುಗಳಲ್ಲಿ ಶ್ರೀ ಸುರೇಶ ಎಲ್.ರಾಜಮಾನೆಯವರೂ ಒಬ್ಬರು.
‘ಎಲ್ಲಾರ್ ಸೂರ್ಯ’ ಎಂಬ ಕಾವ್ಯನಾಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾಗಿರುವ ಶ್ರೀ ಸುರೇಶ ಎಲ್.ರಾಜಮಾನೆಯವರು ಶ್ರೀ ಲಕ್ಷ್ಮಣ ಹಾಗೂ ಶ್ರೀಮತಿ ಬಾಗುಬಾಯಿ ದಂಪತಿಗಳ ಮಗನಾಗಿ ೧೯೮೮ ರ ಜೂನ್ ೦೧ ರಂದು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತೇರದಾಳ(ಹಿರೇಹಳ್ಳ) ಗ್ರಾಮದಲ್ಲಿ ಜನಿಸಿದ್ದಾರೆ. ಇವರು ೪ ನೇ ತರಗತಿವರೆಗೆ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ ಹಿರೇಹಳ್ಳ(ತೇರದಾಳ) ದಲ್ಲಿ, ೭ ನೇ ತರಗತಿವರೆಗೆ ತೇರದಾಳದ ಜಿನಸೇನಾಚಾರ್ಯ ಮಹಾವಿದ್ಯಾಲಯದಲ್ಲಿ, ೮ ನೇ ತರಗತಿಯನ್ನು ಅದೇ ತೇರದಾಳದ ಎಸ್.ಎಮ್.ಪ್ರೌಢಶಾಲೆಯಲ್ಲಿ, ಮುಂದಿನ ೯-೧೦ ನೇ ತರಗತಿಯನ್ನು ರನ್ನಬೆಳಗಲಿಯ ಬಿ.ವ್ಹಿ.ವ್ಹಿ.ಎಸ್ ಪ್ರೌಢಶಾಲೆಯಲ್ಲಿ, ಮುಧೋಳನ ಆರ್.ಎಮ್.ಜಿ ಕಾಲೇಜ್ ನಲ್ಲಿ ಪಿ.ಯು.ಸಿ ಮುಗಿಸಿ, ಸರಕಾರಿ ಶಿಕ್ಷಕರ ಶಿಕ್ಷಣ ತರಭೇತಿ ಕೇಂದ್ರ ಹುನಗುಂದದಲ್ಲಿ ಡಿ.ಇಡಿ ಪದವಿಯನ್ನು ಪೂರೈಸಿದ್ದಾರೆ. ಮುಂದೆ ಬಾಹ್ಯ ವಿದ್ಯಾರ್ಥಿಯಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ ಸ್ನಾತಕ ಪದವಿಯನ್ನು ಪಡೆದಿದ್ದಾರೆ. ಸದ್ಯ ಶ್ರೀಯುತರು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ದೇವಾಪುರದೊಡ್ಡಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಶಾಲಾ ದಿನಗಳಿಂದಲೇ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದ ಶ್ರೀ ಸುರೇಶ್ ರವರು ಕಾವ್ಯ, ವಿಮರ್ಶೆ, ಗಜಲ್.. ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ‘ಸುಡುವ ಬೆಂಕಿಯ ನಗು’ ಎಂಬ ಕವನಸಂಕಲನ, ‘ಮೌನಯುದ್ಧ'(ಮಾತಿಗೂ ಮನಸಿಗೂ), ‘ವಿಶ್ವಾಸದ ಹೆಜ್ಜೆಗಳು’ ಎಂಬ ಬೆಳಗುಗವಿತೆಗಳ ಸಂಕಲನ ಹಾಗೂ ‘ಕತ್ತಲ ಗರ್ಭದ ಬೆಳಕು’ ಎಂಬ ಗಜಲ್ ಸಂಕಲನ.. ಮುಂತಾದ ಹಲವು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವರ ಕಾವ್ಯ, ಗಜಲ್, ವಿಮರ್ಶೆ ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಗಳಿಸಿವೆ. ಶ್ರೀ ಸುರೇಶ್ ರಾಜಮಾನೆಯವರು ೬ನೇ ಅಖಿಲಭಾರತ ದಲಿತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಅಖಿಲ ಕರ್ನಾಟಕ ಸಾಂಸ್ಕತಿಕ ಕಲಾ ಕೇಂದ್ರ, ಹೊಸಪೇಟೆ ಹಮ್ಮಿಕೊಂಡ ರಾಜ್ಯಮಟ್ಟದ ಕವಿಗೋಷ್ಠಿ, ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡ ಕನ್ನಡ ನುಡಿಹಬ್ಬದ ಕವಿಗೋಷ್ಠಿ, ಮಾನಸ ಮಾಸಪತ್ರಿಕೆಯ ೧೦೦ನೇ ಸಂಚಿಕೆ ಬಿಡುಗಡೆ ಸಮಾರಂಭ ರಾಜ್ಯಮಟ್ಟದ ಕವಿಗೋಷ್ಠಿ, ಜಿಲ್ಲಾ ಯುವ ಬರಹಗಾರರ ಬಳಗ ಮಂಡ್ಯ ಹಮ್ಮಿಕೊಂಡ ರಾಜ್ಯಮಟ್ಟದ ಕವಿಕಾವ್ಯ ಮೇಳ, ವಿಜಯಪುರದಲ್ಲಿ ಮಾನಸ ಓದುಗರ ವೇದಿಕೆ ಹಮ್ಮಿಕೊಂಡ ರಾಯಚೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪರಿಸರ ಸಾಹಿತ್ಯ ಕವಿಗೋಷ್ಠಿ, ದೊಡ್ಡಬಳ್ಳಾಪುರದಲ್ಲಿ ಜರುಗಿದ ದ್ವಿತೀಯ ಅಖಿಲ ಕರ್ನಾಟಕ ಯುವಕವಿ ಸಮ್ಮೇಳನ, ಡಾ.ಅಂಬೇಡ್ಕರ್ ಅವರ ೧೨೫ ನೇ ಜನ್ಮದಿನೋತ್ಸವದ ಪ್ರಯುಕ್ತ ಹಮ್ಮಿಕೊಂಡ ರಾಯಚೂರು ಜಿಲ್ಲಾ ಪ್ರಥಮ ದಲಿತ ಕವಿಗೋಷ್ಠಿ, ಮುಧೋಳ ತಾಲೂಕ ೩ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಮುಧೋಳ ತಾಲೂಕ ೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ, ಮುಧೋಳ ತಾಲೂಕ ಯುವ ಕವಿಗೋಷ್ಠಿ… ಮುಂತಾದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅನೇಕ ಕವಿಗೋಷ್ಟಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ಸಾರಿದ್ದಾರೆ. ಇವುಗಳೊಂದಿಗೆ ಸರ್ಕಾರ, ಪ್ರತಿಷ್ಠಿತ ಸಂಘ, ಸಂಸ್ಥೆಗಳು ಆಯೋಜಿಸಿದ ವಿಚಾರ ಸಂಕಿರಣ, ಕಥಾ ಕಮ್ಮಟ, ಕಾವ್ಯ ಕಮ್ಮಟಗಳಲ್ಲಿ ಪಾಲ್ಗೊಂಡು ತಮ್ಮ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ಸದಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ‘ಗುರುಭೂಷಣ’, (ಗವಿಮಠ ಪ್ರತಿಷ್ಠಾನ ಇಲಕಲ್ ಇವರು ಕೊಡಮಾಡುವ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರ) ಬೆಳಕು ರಾಜ್ಯಮಟ್ಟದ ಪ್ರಶಸ್ತಿ, ಕರುನಾಡ ಚೇತನ (ಚೇತನ ಪ್ರಕಾಶನ ಹುಬ್ಬಳ್ಳಿ)… ದಂತಹ ಹಲವು ಪ್ರಶಸ್ತಿ ಪುರಸ್ಕಾರಗಳಿಂದ ಸನ್ಮಾನಿತರಾಗಿದ್ದಾರೆ. ಶ್ರೀಯುತರ ಬದುಕು ಬರಹ ಕುರಿತು ಗುಲ್ಬರ್ಗ ವಿಶ್ವವಿದ್ಯಾಲಯ, ಕಲಬುರಗಿಯ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳು ಸಂಶೋಧನ ಪ್ರಬಂಧ ಮಂಡಿಸಿರುವುದು ರಾಜಮಾನೆಯವರಿಗೆ ಸಂದ ಗೌರವವಾಗಿದೆ.ಭಾವನೆಗಳು ಅದ್ಭುತವಾದ ಅಲಂಕಾರಗಳಾಗಿವೆ. ಅವುಗಳಿಗೆ ಅಡಿಪಾಯದ ಅವಶ್ಯಕತೆ ಇಲ್ಲ. ನೊಂದವರ ಬಗ್ಗೆ ಸಹಾನುಭೂತಿ ಹೊಂದುವುದು ಪ್ರತಿಯೊಬ್ಬರೂ ಹೊಂದಿರಬೇಕಾದ ಮಾನವ ಗುಣವಾಗಿದೆ. ಇಂಥಹ ಗುಣವನ್ನು ಕಲಿಸುವ ಉಸ್ತಾದ್ ಎಂದರೆ ನಮ್ಮ ಗಜಲ್ ಗುಲ್ಜಾರ್! ಜಗತ್ತಿನಲ್ಲಿ ಅತ್ಯುತ್ತಮ ಮತ್ತು ಸುಂದರವಾದ ವಸ್ತುಗಳನ್ನು ನೋಡಲಾಗುವುದಿಲ್ಲ ಅಥವಾ ಸ್ಪರ್ಶಿಸಲಾಗುವುದಿಲ್ಲ. ಅವುಗಳನ್ನು ಹೃದಯದಿಂದ ಮಾತ್ರ ಅನುಭವಿಸಬೇಕು ಎಂಬುದನ್ನು ತನ್ನ ಅಶಅರ್ ಮೂಲಕ ಪ್ರಚುರಪಡಿಸುತ್ತದೆ. ಪ್ರೀತಿಗೆ ಹೆಚ್ಚು ಪ್ರೀತಿಸುವುದಕ್ಕಿಂತ ಬೇರೇನೂ ಬರುವುದಿಲ್ಲ. ಪ್ರೀತಿಯನ್ನು ವ್ಯಕ್ತಪಡಿಸುವುದು ಎಷ್ಟು ಸುಂದರವಾಗಿದೆಯೊ ಅದನ್ನು ಅನುಭವಿಸುವ ಭಾವ ಇನ್ನೂ ಸುಂದರವಾಗಿರುತ್ತದೆ ಎಂಬುದನ್ನು ಪ್ರಚುರಪಡಿಸುವ ಗಜಲ್ ಗಳನ್ನು ಗಜಲ್ ಗೋ ಶ್ರೀ ಸುರೇಶ್ ರಾಜಮಾನೆಯವರ ಸಂಕಲನದಲ್ಲಿ ಗುರುತಿಸಬಹುದು. ಪ್ರೀತಿ, ಪ್ರೇಮ, ಪ್ರಣಯ ಹಾಗೂ ವಿರಹದೊಂದಿಗೆ ಸಾಮಾಜಿಕ ಸಂವೇದನೆ ದಟ್ಟವಾಗಿದೆ. ರಾಜಕೀಯ ವ್ಯವಸ್ಥೆಯ ನಿರಂಕುಶ ಪ್ರಭುತ್ವ, ಸಾಮಾಜಿಕ ವ್ಯವಸ್ಥೆಯ ತಾರತಮ್ಯದ ಚಿತ್ರಣ, ಜಾತಿಯೆಂಬ ಪೆಡಂಭೂತದ ಅಟ್ಟಹಾಸ, ವಾಸ್ತವ ದುನಿಯಾದ ಹೂರಣ, ಮನುಷ್ಯನ ತೊಳಲಾಟ, ಮಾನಿನಿಯರ ಮನೋವೇದನೆ... ಎಲ್ಲವೂ ಇಲ್ಲಿ ಮುಪ್ಪರಿಗೊಂಡಿವೆ. ಪ್ರೀತಿಯೆ ಗಜಲ್ ಸ್ಥಾಯಿ ಭಾವ ಎಂಬಂತೆ ಇವರ ಗಜಲ್ ನ ಒಂದು ಷೇರ್ ಅನ್ನು ಇಲ್ಲಿ ಗಮನಿಸಬಹುದು.
“ಮನದೊಳಗಿನ ಹಾಡಿಗೆ ಮಧುರತೆ ಬಂದಿದ್ದೆ ನಿನ್ನಿಂದ
ಎದೆಯಲ್ಲಿ ಜೇನ ಮಳೆಸುರಿದು ಸುಧೆಯಾಗಿದೆ ಈಗ”
ಪ್ರತಿ ಮನುಷ್ಯನ ಜೀವನವನ್ನು ‘ಪ್ರೀತಿ’ ಎಂಬ ಎರಡಕ್ಷರದ ಚಿರಾಗ್ ಬೆಳಗುತ್ತದೆ, ರೂಪಿಸುತ್ತದೆ. ದ್ವೇಷವೆಂಬ ವಿಷಾನಿಲಕ್ಕೂ ಪ್ರೀತಿಯೇ ಕಾರಣ ಎಂಬುದು ಸೋಜಿಗವಾದರೂ ದಿಟ. ಪ್ರೀತಿಯ ವಿವಿಧ ಆಯಾಮಗಳಲ್ಲಿ ‘ನಲ್ಲ-ನಲ್ಲೆ’ಯರ ಪ್ರೀತಿ ಮುಖಮ್ಮಲ್ ಅನಿಸುವಂತದ್ದು. ಇಲ್ಲಿ ಸುಖನವರ್ ರಾಜಮಾನೆಯವರು ಪ್ರೇಮಿಯೊಬ್ಬನ ಹೃದಯದ ತಂತುವನ್ನು ಚೆನ್ನಾಗಿಯೇ ಮೀಟಿದ್ದಾರೆ. ಮಧುರತೆ, ಜೇನು, ಸುಧೆ… ಎನ್ನುವ ಅನುರಾಗದ ಪಾರಿಭಾಷಿಕ ಪದಪುಂಜಗಳು ಸಹೃದಯ ಓದುಗರನ್ನು ಪ್ರೇಮಲೋಕದತ್ತ ಕರೆದೊಯ್ಯುತ್ತವೆ. ಈ ನೆಲೆಯಲ್ಲಿ ‘ಪ್ರೀತಿ’ ಎಂಬುದು ಚಿರಭಾವವಾಗಿದೆ ಎಂಬುದನ್ನು ಅರಿಯಬಹುದಾಗಿದೆ.
ಮಾತುಗಳು ಎಂದರೆ ಬರಿಯ ಧ್ವನಿಯಲ್ಲ, ಕೇವಲ ಶಬ್ದಸಂಪತಲ್ಲ; ಆಡಂಬರದ ಗೋಪುರವಲ್ಲ. ಮಾತುಗಳು ಎಂದರೆ ಪರಸ್ಪರ ಹೃದಯಗಳನ್ನು ಬೆಸೆಯುವ ಸೇತುವೆ, ಮನಸುಗಳಿಗೆ ಮುದ ನೀಡುವ ಗುಲ್ಮೋಹರ್; ಸಮಾಜದ ಸ್ವಾಸ್ಥ್ಯ ಕಾಪಾಡುವ ಸಂಜೀವಿನಿ. ಆದರೆ ದುರಂತವೆಂದರೆ ಮಾತು ಬರುತ್ತದೆ ಎಂದು ಬೇಕಾಬಿಟ್ಟಿ ಮಾತಾಡುವುದೇ ಹೆಚ್ಚಾಗಿದೆ. ಮಾತಿನ ನಂತರದ ಪರಿಣಾಮ ಕುರಿತು ಕಿಂಚಿತ್ತೂ ಕಾಳಜಿವಹಿಸದೆ 'ಬಾಣ'ದಂತೆ ಬಿಡಲಾಗುತ್ತಿದೆ. ಇಲ್ಲಿ ಶಾಯರ್ ಸುರೇಶ್ ರವರು ಮಾತುಗಳಿಂದಾಗುವ ಪರಿಣಾಮ ಕುರಿತು ತಮ್ಮ ಷೇರ್ ಮುಖಾಂತರ ಸಹೃದಯ ಓದುಗರನ್ನು ಜಿಜ್ಞಾಸೆಗೆ ತಳ್ಳಿದ್ದಾರೆ. ಇದರೊಂದಿಗೆ ಮಾತು ಹೇಗಿರಬೇಕು, ಹೇಗಿದ್ದರೆ ಚಂದ ಎಂಬುದನ್ನು ತುಂಬಾ ಸೂಚ್ಯವಾಗಿ ಅರುಹಿದ್ದಾರೆ.
“ಮೂಗಿನ ನೇರಕ್ಕೆ ಮಾತಾಡಬೇಡ ಮನಸ್ಸಿನ ಮನೆ ಒಡೆದು ಹೋಗುತ್ತದೆ
ಮನಸ್ಸಿಗೆ ಇರಿಯುವ ಮಾತಾಗಬೇಡ ಮನುಷ್ಯತ್ವದ ಎದೆ ಒಡೆದು ಹೋಗುತ್ತದೆ”
ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಅದರಿಂದ ಪ್ರೀತಿಯೆಂಬ ಗುಲ್ಜಾರ್ ಅನ್ನು ರೂಪಿಸಲು ಆಗಿಲ್ಲ, ಆಗಲಾರದು; ಆಗಬಾರದು ಸಹ!! ಅನಾದಿ ಕಾಲದಿಂದಲೂ ಇದನ್ನು ಸಾಹಿತ್ಯ ಸದ್ದಿಲ್ಲದೆ ಮಾಡುತ್ತ ಬಂದಿದೆ. ಇದರಲ್ಲಿ ಕಾವ್ಯದ ಪಾಲು, ಗಜಲ್ ನ ಪಾತ್ರ ಅನುಪಮವಾದದ್ದು. ಇಂಥಹ ಪ್ರೀತಿಯ ಪಾರಿಜಾತವಾದ ಗಜಲ್ ಜನ್ನತ್ ನಲ್ಲಿ ಗಜಲ್ ಗೋ ಸುರೇಶ್ ರಾಜಮಾನೆಯವರು ಹೆಚ್ಚು ಹೆಚ್ಚು ಗಜಲ್ ಗಳನ್ನು ಬರೆಯಲಿ, ನಮಗೆ ಓದುವ ಸೌಭಾಗ್ಯ ದೊರೆಯುವಂತಾಗಲಿ ಎಂದು ಶುಭ ಹಾರೈಸುತ್ತೇನೆ.
“ಆಕಾಶವು ಎಷ್ಟು ಎತ್ತರದಲ್ಲಿದೆ ಎಂದು ಹೆಮ್ಮೆಪಡುತ್ತದೆ
ಮರೆತೇ ಹೋಗುತ್ತದೆ ಅದು ನೆಲದಿಂದಲೆ ಗೋಚರಿಸುತ್ತದೆ”
- ವಾಸಿಂ ಬರೇಲ್ವಿ
ಮನುಷ್ಯ ಇಂದು ಎಷ್ಟೆಲ್ಲ ಪ್ರಗತಿ ಸಾಧಿಸಿದರೂ, ವೈಭವದ ಜೀವನ ಕಳೆಯುತಿದ್ದರೂ ದಿನದ ಕೊನೆಗೆ ಹಂಬಲಿಸುವುದು ಮಾತ್ರ ಶಾಂತಿ, ನೆಮ್ಮದಿಯನ್ನು. ಅಂಥಹ ಶಾಂತಿ ನಮ್ಮನ್ನು ಆಳಬೇಕಾದರೆ ಗಜಲ್ ನ ಪಾತ್ರ ಅನನ್ಯ. ದಿನದ ೨೪ ಗಂಟೆ ಗಜಲ್ ಕುರಿತು ಮಾತಾಡಿದರೂ ದಣಿವಾಗದು. ಆದರೆ ಏನು ಮಾಡುವುದು, ಸಮಯ ಎಂಬುದೊಂದು ಇದೆಯಲ್ವಾ, ಅದರ ಮುಂದೆ ಮಂಡಿಯೂರಲೇ ಬೇಕು.. ಮತ್ತೇ ಮುಂದಿನ ಗುರುವಾರ ತಮ್ಮ ಗಜಲ್ ಪ್ರೀತಿಯನ್ನು ಹೊತ್ತು ಬರುವೆ.….!!
ನಮಸ್ಕಾರಗಳು..
ರತ್ನರಾಯಮಲ್ಲ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ