ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ ಅವರ ಲೇಖನಿಯಿಂದ

ಬಸವರಾಜ ಅವರ ಗಜಲ್ ಗಳಲ್ಲಿ ಭಾವಯಾನ..

..

‘ಗಜಲ್’ ಎನ್ನುವ ಶಬ್ದ ಕಿವಿಗೆ ಬೀಳುತ್ತಲೇ ಹೃದಯದ ಬಡಿತ ಜೋರಾಗುತ್ತದೆ. ಅಂಥಹ ಶಕ್ತಿ ಗಜಲ್ ಗೆ ಇದೆ. ಅಂತೆಯೇ ಪ್ರತಿ ಗುರುವಾರ ಒಬ್ಬೊಬ್ಬ ಶಾಯರ್ ಅವರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತ್ತಿರುವೆ. ವ್ಯಕ್ತಿ ಪರಿಚಯದೊಂದಿಗೆ ಗಜಲ್ ಲೋಕದಲ್ಲಿ ವಿಹರಿಸುತಿದ್ದರೆ ನನಗೆ ಈ ಸಂಸಾರದ ಅರಿವೆ ಇರುವುದಿಲ್ಲ.‌ ಬನ್ನಿ, ಗಜಲ್ ಪ್ರೇಮಿಗಳೇ; ನಿಮಗೂ ಇದೆ ಅನುಭವ ಆಗುತ್ತದೆ ಎಂದು ಪ್ರಾಮಿಸ್ ಮಾಡುವೆ..!

ಪ್ರೀತಿ ಬಹಳ ಸೂಕ್ಷ್ಮ ಮತ್ತು ನಿರಾಭರಣ 

ಬುದ್ಧಿವಂತಿಕೆಯ ಭಾರ ಹೊರಲು ಸಾಧ್ಯವಿಲ್ಲ”

ಅಕ್ಬರ್ ಇಲಾಹಾಬಾದಿ

     ಮನುಷ್ಯನ ಜೀವನದಲ್ಲಿ ಎರಡು ಮೂಲಭೂತ ಪ್ರೇರಕ ಶಕ್ತಿಗಳಿವೆ. ಅವುಗಳೆಂದರೆ ಭಯ ಮತ್ತು ಪ್ರೀತಿ. ನಾವು ಭಯಗೊಂಡಾಗ ಜೀವನದಿಂದ ಹಿಂದೆ ಸರಿಯುತ್ತೇವೆ. ನಾವು ಪ್ರೀತಿಯಲ್ಲಿರುವಾಗ…ಜೀವನವು ಉತ್ಸಾಹ ಮತ್ತು ಸ್ವೀಕಾರದೊಂದಿಗೆ ನೀಡುವ ಎಲ್ಲದಕ್ಕೂ ನಾವು ತೆರೆದುಕೊಳ್ಳುತ್ತೇವೆ. ನಮ್ಮ ಎಲ್ಲ ವೈಭವ ಮತ್ತು ಅಪೂರ್ಣತೆಗಳಲ್ಲಿ ನಾವು ಮೊದಲು ನಮ್ಮನ್ನು ನಾವು ಪ್ರೀತಿಸಲು ಕಲಿಯಬೇಕು. ನಮ್ಮನ್ನು ನಾವು ಪ್ರೀತಿಸಲು ಸಾಧ್ಯವಾಗದಿದ್ದರೆ, ಇತರರನ್ನು ಪ್ರೀತಿಸುವ ನಮ್ಮ ಸಾಮರ್ಥ್ಯವು ಕಳೆಗುಂದುತ್ತದೆ. ವಿಕಸನ ಮತ್ತು ಉತ್ತಮ ಪ್ರಪಂಚದ ಎಲ್ಲಾ ಭರವಸೆಗಳು ಜೀವನ ಅಳವಡಿಸಿಕೊಳ್ಳುವ ನಿರ್ಭಯತೆ ಮತ್ತು ಮುಕ್ತ ಹೃದಯದ ದೃಷ್ಟಿಯಲ್ಲಿ ವಿಶ್ರಾಂತಿ ಪಡೆಯುತ್ತವೆ. ಮನುಷ್ಯ ಪರಿಸ್ಥಿತಿಯ ಕೈಗೊಂಬೆ ಎಂದು ಅನಾದಿ ಕಾಲದಿಂದ ಹೇಳುತ್ತ ಬರಲಾಗಿದೆಯಾದರೂ ಅದುವೇ ದಿಟವಲ್ಲ. ಅಮೇರಿಕನ್ ಶಿಕ್ಷಣತಜ್ಞ, ಲೇಖಕ, ಉದ್ಯಮಿ ಮತ್ತು ಮುಖ್ಯ ಭಾಷಣಕಾರ ಸ್ಟೀಫನ್ ರಿಚರ್ಡ್ಸ್ ಕೋವಿ ಹೇಳಿರುವ ”I am not a product of my circumstances. I am a product of my decisions.” ಈ ಮಾತು ಮನುಷ್ಯನ ಮನೋಬಲಕ್ಕೆ ಹಿಡಿದ ಕನ್ನಡಿಯಾಗಿದೆ. ಇದೆಲ್ಲ ನಮಗೆ ಮನನವಾಗುವುದು ಚಿಂತನೆ ಹೆಪ್ಪುಗಟ್ಟಿದ ಮೇಲೆ, ಸಾಹಿತ್ಯದ ಒಡನಾಟದಿಂದ. ಅಂತೆಯೇ ಸಾಹಿತ್ಯ ನಮಗೆ ಬದುಕುವುದನ್ನು ಕಲಿಸಿಕೊಡುತ್ತದೆ ಎನ್ನಲಾಗುತ್ತದೆ. ಈ ಕಲಿಕೆಯ ಪ್ರಕ್ರಿಯೆಯಲ್ಲಿ ಕಾವ್ಯದ ಪಾತ್ರ ಅವಿಚ್ಛಿನ್ನ. ಇನ್ನೂ ಕಾವ್ಯದ ಹಲವು ರೂಪಗಳಲ್ಲಿ ಒಂದಾದ ‘ಗಜಲ್’ ಬದುಕಿನ ದಾರಿ ತೋರುವ ಮಶಾಲ್ ಎಂದರೆ ತಪ್ಪಾಗಲಾರದು. ಈ ಕಾರಣಕ್ಕಾಗಿಯೋ ಏನೋ ಇಂದು ಅಸಂಖ್ಯಾತ ಬರಹಗಾರರು ‘ಗಜಲ್’ ಎಂಬ ಜ್ಯೋತಿಯ ಬೆಳಕಿನಲ್ಲಿ ತಮ್ಮ ಮನದ ಬಿಂಬವನ್ನು ಬಿಡಿಸುತಿದ್ದಾರೆ. ಅಂಥವರಲ್ಲಿ ಶ್ರೀ ಬಸವರಾಜ ಕಾಸೆ ಅವರೂ ಸಹ ಒಬ್ಬರು.

     ಶ್ರೀ ಬಸವರಾಜ ಕಾಸೆ ಅವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬವಲತ್ತಿ ಎಂಬ ಪುಟ್ಟ ಹಳ್ಳಿಯ ಕೃಷಿಕ ಕುಟುಂಬದ ಶೇಖಪ್ಪ ಹಾಗೂ ಯಶೋಧಾ ದಂಪತಿಗಳ ಮಗನಾಗಿ  ೦೧-೦೬-೧೯೮೭ ರಂದು ಜನಿಸಿದರು. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ವಿಜಯಪುರದಲ್ಲಿ ಪ್ರೌಢ ಶಿಕ್ಷಣವನ್ನು, ಪಿ.ಯು.ಸಿ-ಪದವಿ, ಸ್ನಾತಕೋತ್ತರ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿ ಸದ್ಯ, ಬೆಂಗಳೂರಿನ ಎಂಬಾಸಿಸ್ ಬಿಪಿಒ ಲಿಮಿಟೆಡ್ ನಲ್ಲಿ ಟೀಮ್ ಲೀಡರ್ ಹುದ್ದೆ ನಿರ್ವಹಿಸುತ್ತಿದ್ದಾರೆ.

       ಪರಿಶ್ರಮ ಜೀವಿಯಾದ ಬಸವರಾಜ ಕಾಸೆಯವರು ತಮ್ಮ ವಿದ್ಯಾಭ್ಯಾಸದೊಂದಿಗೆ ಸಾಹಿತ್ಯದ ಗೀಳನ್ನು ಹಚ್ಚಿಕೊಂಡಿರುವ ಶ್ರೀಯುತರು ಚುಟುಕು, ಹನಿಗವನ, ಶಾಯರಿ, ರುಬಾಯಿಗಳು, ಕಿರು ಕಥೆ, ನ್ಯಾನೋ ಕಥೆ, ಕಥೆ, ನಾಟಕ, ಪ್ರಬಂಧ, ಭಾವಗೀತೆ, ಕವನ ರಚನೆಯಲ್ಲಿ ಆಸಕ್ತಿ ಹೊಂದಿರುವ ಇವರು ‘ವಿಜಲ್ ವಿಜಲು ಗಜಲ್ ಘಮಲು’ ಎಂಬ ಗಜಲ್ ಸಂಕಲನವನ್ನು ಪ್ರಕಟಿಸುವ ಮೂಲಕ ಅಧಿಕೃತವಾಗಿ ಸಾರಸ್ವತ ಲೋಕದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇವರ ಹಲವು ಬರಹಗಳು ನಾಡಿನ ವಿವಿಧ ದಿನಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಿಶ್ವವಾಣಿ, ವಿನಯವಾಣಿ, ಪ್ರಜಾ ಸಮಯ, ಸಂಗಾತಿ ಪತ್ರಿಕೆಗಳಲ್ಲಿ ಇವರ ಹಲವು ಅಂಕಣಗಳು ಪ್ರಕಟವಾಗಿವೆ. ವಿಶೇಷವಾಗಿ ಶ್ರೀಯುತರ ಗಜಲ್ ಗಳು ‘ಸಂಯುಕ್ತ ಕರ್ನಾಟಕ’ ಏರ್ಪಡಿಸುವ ಸಂಕ್ರಾಂತಿ ಸ್ಪರ್ಧೆ, ಹೊಸ ದಿಗಂತ ದಿನಪತ್ರಿಕೆಯ ಯುಗಾದಿ ಸ್ಪರ್ಧೆ, ವಿಜಯ ಕರ್ನಾಟಕದ ದೀಪಾವಳಿ ಸ್ಪರ್ಧೆ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮಟ್ಟದ ಸ್ಪರ್ಧೆ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಗಮನ ಸೆಳೆದಿದ್ದು, ವಿವಿಧ ಬಹುಮಾನಗಳನ್ನು ಪಡೆದಿವೆ. ಹಲವಾರು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿದ ಕಾಸೆಯವರಿಗೆ ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ.

         ಅಧಿಕಾರವು ಮನುಷ್ಯನನ್ನು ಭಾಗಶಃ ದುರಹಂಕಾರದ ಕಡೆಗೆ ಕೊಂಡೊಯ್ಯುತ್ತದೆ. ಆದರೆ ಕಾವ್ಯ ಅವನ ಮಿತಿಗಳನ್ನು ನೆನಪಿಸುತ್ತದೆ. ಅಧಿಕಾರವು ಮನುಷ್ಯನ ಕಾಳಜಿಯ ಕ್ಷೇತ್ರವನ್ನು ಸಂಕುಚಿತಗೊಳಿಸಿದಾಗ, ಕಾವ್ಯವು ಅವನಿಗೆ ಅಸ್ತಿತ್ವದ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ನೆನಪಿಸುತ್ತದೆ. ಅಧಿಕಾರ ಕದಡಿದಾಗ ಕಾವ್ಯ ಶುದ್ಧವಾಗುತ್ತದೆ. ‘ಗಜಲ್’ ನಮಗೆ ಬದುಕಲು ಕಲಿಸುತ್ತದೆ, ಮೌಲ್ಯಗಳನ್ನು ಬಿತ್ತುತ್ತದೆ ಜೊತೆಗೆ ಸಮಾಜದಲ್ಲಿ ಸ್ವಾಸ್ಥ್ಯ ವಾತಾವರಣವನ್ನು ಕಾಯ್ದುಕೊಂಡು ಹೋಗಲು ಸಹಕಾರಿಯಾಗುತ್ತದೆ. ಈ ದಿಸೆಯಲ್ಲಿ ‘ಗಜಲ್’ ಇಂದು ಹೆಚ್ಚು ಹೆಚ್ಚು ಪ್ರಸ್ತುತವೆನಿಸುತ್ತ, ಸಹೃದಯ ಓದುಗರ ಮನವನ್ನು ಸೆಳೆಯುತ್ತಿದೆ. ಕೋಮಲವಾದ ‘ಗಜಲ್’ ತನ್ನ ಕೋಮಲತೆಯಿಂದಲೆ ನಮ್ಮೆಲ್ಲರ ಹೃದಯದರಸಿಯಾಗಿದ್ದಾಳೆ. ಸುಖನವರ್ ಬಸವರಾಜ ಕಾಸೆಯವರ ಗಜಲ್ ಗಳಲ್ಲಿ ಪ್ರೀತಿ, ಪ್ರೇಮ, ಪ್ರಣಯ, ಭಗ್ನ ಪ್ರೇಮ ಹಾಗೂ ವಿರಹ ಮುಪ್ಪರಿಗೊಂಡಿದೆ. ಇವುಗಳೊಂದಿಗೆ ಬದುಕಿನ ಒಳ ಹೊರ ಸಂಗತಿಗಳು, ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ತಾತ್ವಿಕ ಚಿಂತನೆ…. ಮುಂತಾದವುಗಳನ್ನು ಗಮನಿಸಬಹುದು. ‘ಪ್ರೀತಿ’ ಎಂದರೆ ಎರಡು ಹೃದಯಗಳ ನಡುವಿನ ನಂಬಿಕೆ, ವಿಶ್ವಾಸ, ಪರಸ್ಪರರನ್ನು ಅರಿತು ಗೌರವಿಸುವ ಭಾವದ ಗೊಂಚಲು. ಸಣ್ಣ ಅನುಮಾನದ ಹೊಗೆಯಾಡಿದರೂ ಪ್ರೀತಿಯ ತಾಜಮಹಲ್ ಇಸ್ಪೀಟ್ ಎಲೆಗಳಂತೆ ಕುಸಿದುಬಿಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.‌ ಹಾಗಂತ ಮರುಳಿನ ಗೂಡಿನಂತೆ ಬೇಗ ಉರುಳುತ್ತದೆ ಎಂದು ಭಾವಿಸಬೇಕಾಗಿಲ್ಲ. ಈ ನೆಲೆಯಲ್ಲಿ ಶಾಯರ್ ಕಾಸೆಯವರು ಗಜಲ್ ನಲ್ಲಿ ಪ್ರೀತಿಯಲ್ಲಿ ಉಂಟಾಗುವ ನಂಬಿಕೆ ದ್ರೋಹ ಕುರಿತು ತುಂಬಾ ಸರಳವಾಗಿ ದಾಖಲಿಸಿದ್ದಾರೆ.

ನಂಬಿಕೆ ದ್ರೋಹದಲ್ಲಿ ನೀ ಹುಟ್ಟಿಸಿದ ಆಸೆಗಳು ಪಲಾಯನಗೈದಿವೆ ಅಂದು

ನನಸುಗಳಿಗಾಗಿ ವ್ಯರ್ಥ ಪ್ರಯತ್ನ ಕನಸುಗಳೆ ಬೂದಿಯಾಗಿವೆ ಇಂದು”

ಪ್ರೀತಿಯಲ್ಲಿ ಆಸೆಗಳು ಬೇಗನೆ ಚಿಗುರೊಡೆಯುತ್ತವೆ. ಆದರೆ ನಂಬಿಕೆಗೆ ಚ್ಯುತಿ ಬಂದರೆ ಆಸೆಗಳೆಲ್ಲ ಕಮರಿ ಹೋಗುತ್ತವೆ. ಕಂಡ ಕನಸುಗಳೆಲ್ಲ ಗೋರಿ ಸೇರುತ್ತವೆ. ಆಗ ಆ ನಂಬಿಕೆ ದ್ರೋಹಕ್ಕೆ ಗುರಿಯಾದ ಹೃದಯದ ತಳಮಳ, ನೋವು ಈ ಷೇರ್ ನಲ್ಲಿ ಹೆಪ್ಪುಗಟ್ಟಿದೆ.

       ಮನುಷ್ಯ ಬುದ್ಧಿವಂತ ಪ್ರಾಣಿಯೆಂದು ಎನಿಸಿಕೊಂಡರೂ ಅವನ ಕಲಿಕೆಗೆ ಕೊನೆಯೆಂಬುದು ಇಲ್ಲ. ಕಲಿತವನು ಮಾತ್ರ ಉಳಿಯುತ್ತಾನೆ, ಉಳಿದವನು ಮಾತ್ರ ಬೆಳೆಯುತ್ತಾನೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಷೇರ್ ಮನುಷ್ಯನ ಎಡಬಿಡಂಗಿತನವನ್ನು ಸಾರುತ್ತಿದೆ. ಎರಡು ಮಿಸ್ರೈನ್ ಪರಸ್ಪರ ವಿರೋಧ ಆಯಾಮದಲ್ಲಿದ್ದು ಇಂದಿನ ಸಾಮಾಜಿಕ ವ್ಯವಸ್ಥೆಯ ಒಂದು ಭಾಗವಾಗಿರುವ ಮನುಷ್ಯನ ಚಿತ್ರಣವಿದೆ.

ಕಲಿಯಬೇಕು ಇನ್ನೂ ಏನೋ ಮೇಳೈಸಲು ಎಲ್ಲಾ ವಿದ್ಯೆಗಳು ನನ್ನಲ್ಲಿ

ಎಲ್ಲಿರುವನು ನನಗಿಂತ ಮಹಾಜ್ಞಾನಿ ಬಿಡದೆ ಹುಡುಕುವೆನು ಜಗದೊಳಗೆ

     ಆಧುನಿಕ ಜಾಲತಾಣಗಳ ಹಾದಿಯಲ್ಲಿ ಮನೋರಂಜನೆಗೇನೂ ಬರವಿಲ್ಲ. ಆದರೆ ಬರಹ, ಸಾಹಿತ್ಯ ಯಾವತ್ತೂ ಮನೋರಂಜನೆಯ ಸರಕಲ್ಲ. ಇದೊಂದು ಭಾವನೆಗಳನ್ನು ಬೆಸೆಯುವ, ಮನುಕುಲವನ್ನು ಮುನ್ನಡೆಸುವ ಸಾಧನವಾಗಿದೆ. ಈ ದಿಸೆಯಲ್ಲಿ ಗಜಲ್ ಗೋ ಬಸವರಾಜ ಕಾಸೆಯವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಕೃಷಿ ಆಗಲಿ, ಗಜಲ್ ಕ್ಷೇತ್ರ ಸಮೃದ್ಧವಾಗಲಿ ಎಂದು ಶುಭ ಹಾರೈಸುತ್ತೇನೆ. 

ಬಹಳ ಹಿಂದೆಯೇ ಆ ಹೆಜ್ಜೆಗಳ ಸದ್ದು ಗೊತ್ತಾಗುತ್ತದೆ

ಓ ಜೀವವೆ, ನಾನು ನಿನ್ನ ದೂರದಿಂದಲೆ ಗುರುತಿಸುತ್ತೇನೆ”

ಫಿರಾಕ್ ಗೋರಕಪುರಿ

ಮನುಷ್ಯನ ಮನಸು ಹಲವು ಏರಿಳಿತಗಳ ಝರಿ. ಶಾಂತಿ, ನೆಮ್ಮದಿ ನಮ್ಮನ್ನು ಆವರಿಸಬೇಕಾದರೆ ಗಜಲ್ ನ ಪಾತ್ರ ಅನನ್ಯ. ಇಂಥಹ ಗಜಲ್ ನಾಕದಲ್ಲಿ ಅಲೆದಾಡುತ್ತಿರಬೇಕಾದರೆ ದಿನದ ೨೪ ಗಂಟೆಗಳೂ ಕಡಿಮೆ ಅನಿಸುತ್ತವೆ. ಒಲ್ಲದ ಮನಸ್ಸಿನಿಂದಲೇ ಕಾಲದ ಮುಂದೆ ಮಂಡಿಯೂರಿರುವೆ.. ಅನಿವಾರ್ಯವಾಗಿ ಇಂದು ಇಲ್ಲಿಂದ ನಿರ್ಗಮಿಸಲೆಬೇಕಿದೆ, ಮುಂದಿನ ಗುರುವಾರ‌ ಮತ್ತೇ ಬರುವೆ..ಹೋಗಿ ಬರಲೆ….!!


ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top