ಮಗಳ ಮೀಯಿಸುವ ಸುಖ-ನಿತ್ಯ ಜಗನ್ನಾಥ್ ನಾಯ್ಕ್

ಲಹರಿ

ನಿತ್ಯ ಜಗನ್ನಾಥ್ ನಾಯ್ಕ್

ಮಗಳ ಮೀಯಿಸುವ ಸುಖ

ಮೂಗಾಲು ಮಣೆಯಲ್ಲಿ ಮೂಗಣ್ಣಿನವನ

ಕುಳ್ಳಿರಿಸಿ ಪ್ರೀತಿಯೊತ್ತಿ

ಮೂಜಗದಲೋಡಾಡಿ ಎಂತು ದಣಿದವೋ ಪಾದ

ಎಂಬ ನೆಪತುದಿಯಿಂದ ಧೂಳನೆತ್ತಿ

ಯಾರ ಮನೆ ಬೀದಿಯದು ಪತ್ತೆ ಹಚ್ಚಿ

ನಗುವ ನಟರಾಜನನು ಕರೆವಳೋ ಸ್ನಾನಕ್ಕೆ

ದುಃಖ ಹತ್ತಿಕ್ಕಿ

ಮುಗಿಯಿತೇ ಬೇಟೆ? ಪ್ರಶ್ನೆ ಚುಚ್ಚಿ..”

ಈ ಸಾಲುಗಳು ಸಾಕ್ಷಾತ್ ಪರಶಿವನ ಮಜ್ಜನದ ಸಾಲುಗಳು ಜಗದೊಡೆಯ ಶಿವನನ್ನು ಪತ್ನಿ ಗಿರಿಜೆ ಸ್ನಾನ ಮಾಡಿಸುತ್ತಾ ಹಾಡುವ ಹಾಡಿನ ಸಾಲುಗಳಿವು.

ಈ ಪದ್ಯದಲ್ಲಿ ಗಿರಿಜೆ ತನ್ನ ಪತ್ನಿಯ ಮೇಲೆ ತೋರುವ ಕಾಳಜಿ,ಗಂಡನ ಕುರಿತು ಅನುಮಾನ,ಯಾರ ಮನೆಗೆ ತನ್ನ ಗಂಡ ಪಾದ ಬೇಳೆಸಿರಬಹುದು ಎನ್ನುವ ಅನುಮಾನದೊಂದಿಗೆ ಶಿವನ ಮುಂದೆ ಕೊಂಕು ನುಡಿಯುತ್ತಾ ಅದೆಲ್ಲವನ್ನು ಮೀರಿ ಮೀಯಿಸುವಿಕೆಯಲ್ಲಿ ಕಾಣುವುದು ಗಿರಿಜೆಯ ಮಾತೃಪ್ರೇಮ. ಗಂಡನನ್ನೇ ಮಗುವಂತೆ ತುಂಬು ಪ್ರೀತಿಯಿಂದ ಮೀಯಿಸುತ್ತಾಳೆ.

ಹಾಗೆಯೇ ಪ್ರತಿಯೊಂದು ತಾಯಿಗೂ ತನ್ನ ಮಗುವಿಗೆ ಮೀಯಿಸುವುದೊಂದು ಬಹು ಕಾಳಜಿಯ ಸನ್ನಿವೇಶವಾಗಿರುತ್ತದೆ. ಅಂತೆಯೇ ನನಗೂ ನನ್ನ ಮಗಳನ್ನು ಮೀಯಿಸುವುದೆಂದರೆ ಬಹಳ ಖುಷಿ. ಏಕೆಂದರೆ ಈ ಸಮಯ ನಾನು ಮತ್ತು ನನ್ನ ಮಗಳ ಆಪ್ತ ಕ್ಷಣವಾಗಿರುತ್ತದೆ.

ಎಲ್ಲಾದರೂ ಹರಿಯುವ ಶುದ್ಧ ನೀರನ್ನು ಕಂಡರೆ ಹಿರಿಯರೇ ಎಳೆಯರಾಗಿ ಮೈಮರೆತು ನೀರಾಟವಾಡುವಾಗ ಪುಟ್ಟ ಮಕ್ಕಳ ನೀರಿನ ಆಟಕ್ಕೆ ಅಂಕೆಯಿಲ್ಲ ಬಿಡಿ .

ನಾನಂತೂ ಬೆಳಿಗ್ಗೆ ಬೇಗನೆ ಎದ್ದು ಕೆಲಸಕ್ಕೆ ಹೋಗುವ ತರಾತುರಿಯಲ್ಲಿ ಮನೆ ಕೆಲಸವನ್ನೆಲ್ಲಾ ಡಬಡಿಸಿ ಮುಗಿಸಿ, ಮಗಳು ನಿದ್ದೆಯಿಂದ ಏಳುವುದನ್ನು ಕಾದು, ಕಣ್ಣೊರೆಸಿ ಅಮ್ಮಾ .. ಎಂದು ಅಳುತ್ತಾ ಏಳುವ ಪುಟ್ಟ ಕಂದನಿಗೊಂದು ನಗುತ್ತಾ ಗುಡ್ ಮಾರ್ನಿಂಗ್ ಹೇಳಿ ಮುದ್ದಿನಿಂದ ಎತ್ತಿಕೊಂಡು ಮನೆಯ ಹೊರಗೆ ಕರೆದುಕೊಂಡು ಹೋಗಿ ಅವಳ ಪಪ್ಪಾ( ಅಪ್ಪಾ)ನ ಹೆಗಲರಿಸಿ

 ನಗಿಸಿ ನಿದ್ದೆಯೆಲ್ಲಾ ಸರಿದ ಮೇಲೆ ಮಗಳನ್ನು ಸ್ನಾನಕ್ಕೆ ಕರೆತರುವ ತಯಾರಿ. ಶುದ್ಧ ಎಣ್ಣೆಯನ್ನು ನೆತ್ತಿಯಿಂದ ಪಾದದವರೆಗೂ ಚೆನ್ನಾಗಿ ಸವರಿ, ಹದವಾಗಿ ಬೆರೆತ ಬಿಸಿನೀರಿನ ಬಕೆಟ್ ನ ಸಮೀಪ ಮಗಳನ್ನು ನಿಲ್ಲಿಸುತ್ತಿದ್ದಂತೆಯೇ ಮಗಳ ಆಟ ಶುರು. ನೀರಿನಲ್ಲಿ ಕೈ ಹಾಕಿ ಜೋರಾಗಿ ಬಡಿಯುತ್ತಾ, ಅಮ್ಮಾ ಎಂದು ಜೋರಾಗಿ ಹೇಳುತ್ತಾ ನೀರಾಟವಾಡುವಾಗ ಮಗಳ ತುಟಿಯಂಚಿನಲ್ಲಿ ಮೂಡುವ ನಗುವಿನ ನೋಟ ಮೈಮರೆಸುತ್ತದೆ . ಆದರೆ ತಾಯಿ ಕರುಳು ಅವಳ ಆಟವನ್ನು ಸುಖಿಸುತ್ತಲೇ ಆ ಆಟ ಕಂದಮ್ಮನಿಗೆ ತೊಂದರೆಯಾಗದಂತೆ ಕಾಯುತ್ತದೆ.

ಹದವಾಗಿ ಬೆರೆತ ಬಿಸಿನೀರನ್ನು ತಂಬಿಗೆಯಲ್ಲಿ ಮಗೆದು ನೀರೆರೆಯುವಾಗ ಮಗಳು ಖುಷಿಯಲ್ಲಿ ಕುಣಿಯುವಾಗ ಅವಳ ಪುಟ್ಟ ಕಾಲಿಗೆ ಹಾಕಿದ ಕಾಲ್ಗೆಜ್ಜೆಯ ಸದ್ದು ಅವಳಿಗೆ ಕುಣಿಯಲು ಇನ್ನಷ್ಟು ಪ್ರೋತ್ಸಾಹಿಸುತ್ತದೆ. ಅದೇ ಖುಷಿಯಲ್ಲಿ ಆಗಾಗ ಅಮ್ಮನ ಕೆನ್ನೆಯನ್ನು ತನ್ನ ಸೋಪಿನ ನೊರೆತುಂಬಿದ ಕೈಗಳಿಂದಾನೇ  ಸವರುತ್ತಾ, ಮತ್ತೊಮ್ಮೆ ಪಪ್ಪಾ ಬಾ…ಎಂದು ಕರೆಯುತ್ತಾ, ತನ್ನದೇ ಲೋಕದಲ್ಲಿ ಸಂಭ್ರಮಿಸುತ್ತಿರುವಾಗ ನನಗೆ ಅವಳ ಖುಷಿಯ ಜೊತೆಗೆ ನೆತ್ತಿಗೆ ಹಚ್ಚಿದ ಎಣ್ಣೆಯ ಪಸೆ ನೀರಲ್ಲಿ ನೀರಾಗಬೇಕು, ಮೈಗೆ ಅಂಟಿದ ಮಣ್ಣು ಮಣ್ಣ ಸೇರಬೇಕು ಎಂಬ ಯೋಚನೆ. ಆದರೆ ಮಜ್ಜನ ಮುಗಿಯುವ ತನಕವೂ ಮಗಳ ಮನಸ್ಸು ಹೂವಾಗಿ ಅವಳದೇ ಪ್ರೀತಿಯ ಭಾಷೆಯಲ್ಲಿ ಗುನುಗುವ ಹಾಡಿನ ಆಲಾಪ ಕೇಳಲು ಚೆಂದ ಚೆಂದ.

ಮಗುವಿನ  ದಣಿವಿನ ಭಾರ ಕಳೆಯುವಷ್ಟು ನೀರೆರೆದು ಇನ್ನೂ ನೀರನ್ನೇ ದಿಟ್ಟಿಸಿ ನೋಡುತ್ತಾ ಇನ್ನೊಂದಿಷ್ಟು ಸಮಯ ನೀರಾಡುತ್ತೇನೆ ಬಿಡು ಎಂಬ ಮಗಳ ಅಳು , ಮುಗ್ದ ಭಾವ  ಅವಳೊಂದಿಗೆ ನಾನು ಎಲ್ಲವನ್ನೂ ಮರೆತು ಮಗುವಿನಂತೆ ವರ್ತಿಸಿದ ಕ್ಷಣ ಹೊತ್ತು ಎಲ್ಲವೂ ನನ್ನ ಬದುಕಿನ ಜೀವಂತಿಕೆಯನ್ನು ಹೆಚ್ಚಿಸುತ್ತವೆ.  ನನ್ನ ಬಾಲ್ಯವನ್ನು ನೆನಪಿಸುತ್ತವೆ.

ನಾನೂ ಮಿಂದಂತೆ , ಅಮ್ಮ ನನ್ನನ್ನು ಮೀಯಿಸಿದಂತೆ, ಅಮ್ಮನಿಗೂ ನಾನು ಇವಳ ಹಾಗೆ ಕೀಟಲೆ ಮಾಡಿದಂತೆ , ಆಗತಾನೆ ಭೂಮಿಗೆ ಸ್ಪರ್ಶಿಸುವ ಮಳೆಮಾಯಿ ನನ್ನ ತೋಯಿಸಿದಂತೆ  ಮಗಳ ಮೀಯಿಸುವುದೇ ಒಂದು ಖುಷಿಯ ಗಳಿಗೆ . ಈ ಆರ್ದ್ರ ಭಾವಗಳು ಸದಾ ಭಾವಲೋಕದಲ್ಲಿ ನನ್ನನ್ನು ತೇಲಿಸುತ್ತವೆ.


ನಿತ್ಯ ಜಗನ್ನಾಥ್ ನಾಯ್ಕ್

Leave a Reply

Back To Top