ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು ಬರೆಯುತ್ತಿದ್ದಾರೆ

ಶಾಲಾ ಶಿಕ್ಷಣದಲ್ಲಿ

ಮೌಲ್ಯ ಶಿಕ್ಷಣದ ಅಗತ್ಯತೆ

ಅಂದು ಸಂಗೀತಾ ಮೇಡಂ ಲಗುಬಗೆಯಿಂದ ಶಾಲೆಗೆ ಹೋಗುತ್ತಿದ್ದಳು. ಅದನ್ನು ಕಂಡ ಅವಳ ಸ್ನೇಹಿತೆ ಏಕೆ ಇಂದು ತುಂಬಾ ಬೇಗ ಶಾಲೆಗೆ ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದಳು. ಆಗ ಸಂಗೀತಾ ಅವಳ ಸ್ನೇಹಿತೆಯ ಕಡೆಗೆ ತಿರುಗಿ, ಇಂದು ಶಾಲೆಯಲ್ಲಿ ಪಾಲಕರ ಸಭೆ ಇದೆ ಅದಕ್ಕಾಗಿ ಬೇಗನೇ ಹೋಗುತ್ತಿರುವೆ, ಎಲ್ಲ ತಯಾರಿ ಮಾಡಿಕೊಳ್ಳಬೇಕಿದೆ ಎಂದಳು. ಆಗ ಅವಳ ಸ್ನೇಹಿತೆ ಖಾಸಗಿ ಶಾಲೆಯಲ್ಲಿ ಪಾಲಕರ ಸಭೆ ಇರುವಂತೆ ನಿಮ್ಮ ಸರಕಾರಿ ಶಾಲೆಯಲ್ಲಿಯೂ ಇದೆಯೇ ಎಂದು ಕೇಳಿದಳು. ಆಗ ಸಂಗೀತಾ ನಮ್ಮ ಶಾಲೆಯಲ್ಲಿಯೂ ಸಹ ಪಾಲಕರ /ಪೋಷಕರ ಸಭೆಯನ್ನು ಪ್ರತಿ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಮಾಡುತ್ತೇವೆ. ಅಲ್ಲದೇ ಸಮುದಾಯದತ್ತ ಶಾಲೆ ಎಂದು ವರ್ಷದಲ್ಲಿ ಎರಡು ಬಾರಿ ಮಾಡಿದಾಗಲೂ ಸಹ ಪಾಲಕರ ಪೋಷಕರ ಮತ್ತು ಎಸ್‌ ಡಿ ಎಂ ಸಿ ಸಭೆ ಮಾಡುತ್ತೇವೆ. ಪಾಲಕರ/ಪೋಷಕರ ಸಭೆಯಲ್ಲಿ ಮುಕ್ತವಾಗಿ ಚರ್ಚೆ ನಡೆಯುತ್ತದೆ ಎಂದು ಉತ್ತರಿಸಿ, ಶಾಲೆ ಕಡೆಗೆ ಹೆಜ್ಜೆ ಹಾಕಿದಳು.

            ಅಷ್ಟರಲ್ಲಿ  ಶಾಲೆಯ ಮುಖ್ಯೋಪಾಧ್ಯಾಯರು ಎಲ್ಲ ಶಿಕ್ಷಕರಿಗೆ  ಸಭೆಯ ತಯಾರಿಯ ಬಗ್ಗೆ ಕೇಳಿದರು. ಎಲ್ಲ ತಯಾರಿಯನ್ನು ಸಂಗೀತಾ ಹಾಗೂ ಇತರ ಶಿಕ್ಷಕರು ಮಾಡಿಕೊಂಡಿದ್ದನ್ನು ಹಾಗೂ ಮಕ್ಕಳ ಪ್ರಗತಿಯ ಬಗ್ಗೆ  ವಿವರಿಸಿದರು. ಅಷ್ಟರಲ್ಲಿ  ಪಾಲಕರ/ಪೋಷಕರು ಬರಲು ಪ್ರಾರಂಭಿಸಿದರು. ಪಾಲಕರ/ಪೋಷಕರ ಹಾಜರಾತಿಯ ಪುಸ್ತಕ ಹಿಡಿದು ಎಲ್ಲರ ಸಹಿಯನ್ನು ಮಾಡಿಸುತ್ತಾ, ಪಾಲಕ/ಪೋಷಕರಿಗೆ ಆಸನವನ್ನು ತೋರಿಸಿ ಕುಳಿತುಕೊಳ್ಳಲು ದೈಹಿಕ ಶಿಕ್ಷಕರು ಹೇಳುತ್ತಿದ್ದರು. ಮುಖ್ಯೋಪಾಧ್ಯಾಯರು ಹಾಗೂ ಎಲ್ಲ ಶಿಕ್ಷಕರು ಸಭೆಗೆ ಆಗಮಿಸಿ ಪಾಲಕ/ಪೋಷಕರ ಸಭೆಯನ್ನು ಪಾರಂಭಿಸಿದರು. ಒಬ್ಬೊಬ್ಬ ಪಾಲಕರು ತಮ್ಮ ಸಮಸ್ಯೆಯನ್ನು ಹೇಳಲು ಪ್ರಾರಂಭಿಸಿದರು.

            ಒಬ್ಬ ಪಾಲಕ ಎದ್ದು ನಿಂತು ಗುರುಗಳೇ, ಇತ್ತೀಚಿಗೆ ಮಕ್ಕಳಲ್ಲಿ ಶಿಸ್ತು, ಸಂಯಮ ಇಲ್ಲ ಅನಿಸುತ್ತಿದೆ. ಗಂಡುಮಕ್ಕಳ ಕೂದಲನ್ನು ನೋಡಿದಾಗ ತುಂಬಾ ಬೇಜಾರಾಯಿತು. ಎಷ್ಟೊಂದು ಕೂದಲನ್ನು ಬಿಟ್ಟುಕೊಂಡು ಅದಕ್ಕೆ ಯಾದ್ಯಾವುದೋ ಬಣ್ಣ ಬಳಿದುಕೊಂಡು ಬರುತ್ತಿದ್ದಾರೆ. ಅಲ್ಲದೇ ಹೆಣ್ಣು ಮಕ್ಕಳು ಸಹ ವಿಚಿತ್ರವಾಗಿ ಕೂದಲನ್ನು ಬಾಚಿಕೊಂಡು ಬರುತ್ತಾರೆ. ಅಲ್ಲದೇ ಹಿರಿಯರು ಮುಂದೆ ಬಂದರೂ ಅವರಿಗೆ ಗೌರವ ಕೊಡುತ್ತಿಲ್ಲ ಏನು ಮಾಡುವುದು ಎಂದು ಕೇಳಿದರು. ಇನ್ನೊಬ್ಬ ಪಾಲಕ ಎದ್ದು ನಿಂತು ಹೌದು ಗುರುಗಳೇ ನನ್ನ ಮಗಳು ಎಷ್ಟು ಹೇಳಿದರೂ ಕೇಳುತ್ತಿಲ್ಲ ಈ ವರ್ಷ ಅವಳು ಹತ್ತನೇಯ ತರಗತಿಯಲ್ಲಿದ್ದಾಳೆ. ಅವಳ ಪರೀಕ್ಷೆ ಸಮೀಪಿಸುತ್ತಿವೆ ಆದರೂ ಟಿವಿ ಮೋಬೈಲ್‌ ಬಿಡುತ್ತಿಲ್ಲ. ಹೇಳಿದರೆ ನಮ್ಮ ಮಾತನ್ನೂ ಕೇಳುತ್ತಿಲ್ಲ ನೀವಾದರೂ ತಿಳಿಸಿ ಹೇಳಿ ಎಂದರು. ಅಲ್ಲಿಯೇ ಇದ್ದ ಮತ್ತೋರ್ವ ಪಾಲಕ ಎದ್ದು ನಿಂತು ಇಂದಿನ ಮಕ್ಕಳಿಗೆ ಪ್ರಾಮಾಣಿಕತೆ, ಇತರರಿಗೆ ಸಹಾಯ ಮಾಡುವ ಗುಣವೇ ಇಲ್ಲ ಅಲ್ಲದೇ ಗುರುಗಳಿಗೆ ಹಿರಿಯರಿಗೆ ಗೌರವ ಕೊಡುವ ಗುಣವೂ ಇಲ್ಲ. ಶಿಕ್ಷಕರಿಗೆ ಎದುರು ಮಾತನಾಡುವುದು, ತಂದೆ ತಾಯಿಯರ ಮಾತನ್ನು ಸಹ ಕೇಳುತ್ತಿಲ್ಲ ಏನು ಮಾಡುವುದು ನಮಗೂ ಸಹ ಯಕ್ಷ ಪ್ರಶ್ನೆಯಾಗಿದೆ ಅದಕ್ಕೆ ಏನು ಮಾಡುವುದು ತಿಳಿಸಿ ಎಂದರು. ಇನ್ನೋರ್ವ ಪಾಲಕ ಎದ್ದು ನಮ್ಮ ಹಳ್ಳಿಯಲ್ಲಿಯೂ ಸಹ ಪಾಶ್ಚಿಮಾತ್ಯರ ಪ್ರೇಮಿಗಳ ದಿನಾಚರಣೆಯಲ್ಲಿ ಮಕ್ಕಳು ತೊಡುಗುತ್ತಿದ್ದಾರೆ ಎಂಬುದನ್ನು ಕೇಳಿ ತುಂಬಾ ಬೇಸರವಾಗಿದೆ ಅಲ್ಲದೇ ಕೆಲವು ಮಕ್ಕಳು ಶಾಲೆಗೆ ಮೋಬೈಲ್‌ ಸಹ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬುದು ಸಹ ಕೇಳಿ ಬಂತು. ಇದರಿಂದ ಶಿಕ್ಷಕರು ಪಾಲಕರನ್ನು ಕರೆಯಿಸಿ ತಿಳಿಹೇಳಿದ್ದಾರೆ ಎಂಬುದು ಗೊತ್ತಾಯಿತು. ಇದಕ್ಕೇಲ್ಲಾ ಪರಿಹಾರ ಏನು ಮೇಷ್ಟ್ರೇ? ಎಂದರು. ಅಲ್ಲಿಯೇ ಇದ್ದ ಒಬ್ಬ ಅಜ್ಜನು ಇಂದಿನ ಮಕ್ಕಳು ಒಂದಕ್ಷರವನ್ನು ಕಡಿಮೆ ಕಲಿತರೂ ನಡೆಯುತ್ತವೆ ಆದರೆ ಒಳ್ಳೆಯ ನೈತಿಕ ಮೌಲ್ಯಗಳನ್ನು ಬೆಳಸಿಕೊಳ್ಳಬೇಕಿದೆ ಮೇಷ್ಟ್ರೇ ಎಂದರು.

ಇದನ್ನೆಲ್ಲಾ ಆಲಿಸಿದ ಅಲ್ಲಿದ್ದ ಮುಖ್ಯೋಪಾಧ್ಯಾಪಕರು ಎದ್ದು ನಿಂತು ಹೌದು ತಾವು ಹೇಳುತ್ತಿದ್ದ ಎಲ್ಲ ವಿಷಯಗಳೂ ಸತ್ಯ, ಇತ್ತೀಚಿಗೆ ಮೊಬೈಲ್‌, TV, ಸಿನೀಮಾ ದಲ್ಲಿಯ ಪ್ರಭಾವದಿಂದ ಪಾಶ್ಚಿಮಾತ್ಯರ ಅನುಕರಣೆ, ಜಾಗತೀಕರಣದ ಪ್ರಭಾವದಿಂದ ಮೌಲ್ಯಗಳು ಕುಸಿಯುತ್ತಿವೆ. ಮಗು ನಾವು ಹೇಳುವದನ್ನು ಕೇಳುವದಕ್ಕಿಂತ ಮಾಡುವದನ್ನು ನೋಡಿ ಕಲಿಯುತ್ತದೆ ಆದ್ದರಿಂದ ಮೌಲ್ಯ ಶಿಕ್ಷಣವನ್ನು ನೀಡುವ ಜವಾಬ್ದಾರಿ ಕುಟುಂಬ ಹಾಗೂ ಶಾಲೆಗಳು ಮಾಡಬೇಕಾಗಿದೆ.

ಮೌಲ್ಯ ಶಿಕ್ಷಣ ಎಂದರೆ ಮನುಷ್ಯ, ಮನುಷ್ಯರ ಗುಂಪು ಅಥವಾ ಸಮುದಾಯ ಸರಿಯೆಂದು ನಂಬಿ ಸರ್ವರಿಗೂ ಸರ್ವೋದಯವನ್ನು ಉಂಟು ಮಾಡುತ್ತದೆ ಎಂದು ಅನುಸರಿಸುವ ಜೀವನ ಶೈಲಿಯ ನೀತಿಸಂಹಿತೆಗಳೇ ಮೌಲ್ಯಗಳು. ಮೌಲ್ಯಗಳನ್ನು ಮೂರು ರೀತಿಯಲ್ಲಿ ವರ್ಗೀಕರಿಸಬಹುದು.

1. ವೈಯಕ್ತಿಕ ಹಾಗೂ ಸಾಮಾಜಿಕ ಮೌಲ್ಯಗಳು

2. ನೈತಿಕ ಮತ್ತು ಧಾರ್ಮಿಕ ಮೌಲ್ಯಗಳು

3. ಪ್ರಜಾಸತ್ತಾತ್ಮಕ ಮತ್ತು ಜ್ಯಾತ್ಯಾತೀತ ಮೌಲ್ಯಗಳು

ಈ ಮೇಲಿನವುಗಳಲ್ಲಿ ತಾವೆಲ್ಲರೂ ಕೇಳುತ್ತಿರುವ ಪ್ರಶ್ನೆ ನೈತಿಕ ಮೌಲ್ಯಗಳಿಗೆ ಸಂಬಂಧಿಸಿದೆ. ಮಕ್ಕಳಲ್ಲಿ ನಾವು ಬೆಳಿಸಬೇಕಾದ ಉತ್ತಮ ಸಂಸ್ಕಾರಗಳೇ ನೈತಿಕ ಮೌಲ್ಯಗಳಾಗಿವೆ. ಹೃದಯ ಶ್ರೀಮಂತಿಕೆ ಮತ್ತು ನಡತೆಯ ಶ್ರೇಯಸ್ಸನ್ನು ನೀಡುವ ನೈತಿಕತೆಯೇ ಬದುಕಿಗೆ ದಾರಿದೀಪವಾಗುತ್ತದೆ. ಸದ್ವರ್ತನೆ, ಸದ್ಭಾವನೆ, ಪ್ರಾಮಾಣಿಕತೆ, ಶಿಷ್ಟಾಚಾರ ಮತ್ತು ಗೌರವ ಮನೋಭಾವದಿಂದ ನಡೆಯುವುದೇ ನೈತಿಕ ಮೌಲ್ಯವಾಗಿದೆ. ಈ ದಿಸೆಯಲ್ಲಿ ಪಾಲಕರು ಹಾಗೂ ಶಿಕ್ಷಕರು ಶಿಸ್ತು, ಕರ್ತವ್ಯಪಾಲನೆ, ರಾಷ್ಟ್ರಪ್ರೇಮ, ಪರಸ್ಪರ ಸಹಯೋಗ, ಸಹನಶೀಲತೆ, ಸಹಕಾರ ಮನೋಭಾವ, ದುಡಿಮೆಯ ಮಹತ್ವ, ಸರ್ವಧರ್ಮಗಳ ಬಗ್ಗೆ ಗೌರವ, ಸತ್ಯ, ಪ್ರಾಮಾಣಿಕತೆ, ಸಹಿಷ್ಣುತೆ, ಸಹಾನುಭೂತಿ, ತಾಳ್ಮೆ, ಕೃತಜ್ಞತೆ, ಜವಾಬ್ದಾರಿ, ಸಾಮರಸ್ಯ, ನಮ್ರತೆ, ಸ್ವಯಂ ನಿಯಂತ್ರಣ,ಉದಾತ್ತತೆ, ಸಮಯಪ್ರಜ್ಞೆ,ಔದಾರ್ಯ, ಗೌರವ, ಪರಹಿತ ಚಿಂತನೆ, ಅನುಭೂತಿ,ಸಹೋದರತ್ವ ಇತ್ಯಾದಿ ಗುಣಗಳನ್ನು ಬೆಳೆಸಲು ಧನಾತ್ಮಕವಾದ ಸಲಹೆ ಸೂಚನೆಯೊಂದಿಗೆ ಪ್ರಯತ್ನಿಸಬೇಕು. ಅಲ್ಲದೇ ನಾವೆಲ್ಲರೂ ಅದೇ ರೀತಿಯನ್ನು ಬದುಕಿದರೆ ಅದನ್ನು ನೋಡಿ ಮಕ್ಕಳು ರೂಢಿಸಿಕೊಳ್ಳುತ್ತಾರೆ. ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ನೀಡದಿದ್ದರೆ ಮುಂದೆ ಅದರ ಪರಿಣಾಮ ಗಂಭೀರವಾಗುತ್ತದೆ ಅದರ ಪ್ರಬಾವವನ್ನು ಈಗಲೇ ತಮ್ಮ ಮಾತುಗಳಲ್ಲಿ ಎದ್ದು ಕಾಣುತ್ತಿದೆ. ಇದನ್ನು ನಾವೆಲ್ಲರೂ ಕೂಡಿ ಸರಿಪಡಿಸುವ ಅಗತ್ಯತೆ ಇದೆ. ಈ ಮೂಲಕ ಉತ್ತಮ ಮೌಲ್ಯಗಳುಳ್ಲ ನಾಗರಿಕ ಸಮಾಜವನ್ನು ಕಟ್ಟುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಹೇಳಿದರು.

ಇದನ್ನು ಆಲಿಸಿದ ಪಾಲಕರೆಲ್ಲರೂ ಚಪ್ಪಾಳೆಯ ಮೂಲಕ ಸಮ್ಮತಿಯನ್ನು ಸೂಚಿಸಿದರು.

ಆದ್ದರಿಂದಲೇ ಅನೇಕ ಶಿಕ್ಷಣ ನೀತಿಗಳು ಸಹ ಮೌಲ್ಯ ಶಿಕ್ಷಣದ ಬಗ್ಗೆ,  ನೈತಿಕ ಮೌಲ್ಯಗಳ ಬೆಳವಣಿಗೆಯ ಬಗ್ಗೆ ಒತ್ತಿ ಹೇಳುತ್ತಿವೆ. ಆದ್ದರಿಂದ ನಮ್ಮ ಶಾಲಾ ಶಿಕ್ಷಣ ಮೂಲಕ ಮೌಲ್ಯ ಶಿಕ್ಷಣವನ್ನು ಅಳವಡಿಸಿಕೊಂಡು ಮಾನವೀಯ ಮೌಲ್ಯಗಳುಳ್ಳ ಪ್ರಜೆಗಳ ನಿರ್ಮಾಣದಲ್ಲಿ ನಾವೆಲ್ಲರೂ ಅಣಿಗೊಳ್ಳಬೇಕಾಗಿದೆ.


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

2 thoughts on “

  1. ನಿಜ, ಶಿಕ್ಷಣದಲ್ಲಿ ವಿದ್ಯೆಯ ಜೊತೆಗೆ ನೈತಿಕತೆಯ ಮೌಲ್ಯ ಅತ್ಯವಶ್ಯಕ. ಚೆನ್ನಾಗಿ ಬರೆದಿದ್ದೀರಿ ಮೇಡಂ.

Leave a Reply

Back To Top