ಅಂಕಣ ಸಂಗಾತಿ
ಸುಜಾತಾ ರವೀಶ್
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ಒಲ್ಲದ ಔತಣ _ ಕಾದಂಬರಿ
ಲೇಖಕಿ _ ಹೆಚ್ ಜಿ ರಾಧಾದೇವಿ
ಒಲ್ಲದ ಔತಣ _ ಕಾದಂಬರಿ
ಲೇಖಕಿ _ ಹೆಚ್ ಜಿ ರಾಧಾದೇವಿ
ಪ್ರಕಾಶಕರು _ ಶ್ರೀ ಲಕ್ಷ್ಮಿ ವೆಂಕಟೇಶ್ವರ ಪ್ರಕಾಶನ
ಮೊದಲ ಮುದ್ರಣ 1986
ಎರಡನೇ ಮುದ್ರಣ 2013
“ಯೌವನದ ಹೊಳೆಯಲ್ಲಿ ಈಜಾಟವಾಡಿದರೆ ಓ ಹೆಣ್ಣೇ ಸೋಲು ನಿನಗೆ” ಜನಪ್ರಿಯ ಚಲನಚಿತ್ರ ಗೀತೆಯೊಂದರ ಸಾಲು ಬದುಕಿನಲ್ಲಿ ಜಾರಿದ ಪ್ರತಿಯೊಂದು ಹೆಣ್ಣಿಗೂ ಅನ್ವಯವಾಗುವಂತಹುದು.
ಸುಂದರ ರಾಯರು ಹಾಗೂ ಶಾರದಮ್ಮ ಅವರ ಇಬ್ಬರು ಮಕ್ಕಳು ರತ್ನ ಮತ್ತು ಪದ್ಮ ಹಿರಿಯವಳು ರತ್ನ ಜಾಣೆ ಓದು ಮುಗಿಸಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರೆ ಚಿಕ್ಕವಳು ಪದ್ಮ ಕಷ್ಟಪಟ್ಟು ಡಿಗ್ರಿ ಮುಗಿಸಿದ್ದಳು. ಸಿರಿವಂತ ಗೆಳತಿಯರ ಪ್ರಭಾವ ಸಹವಾಸದಿಂದಾಗಿ ಕ್ಲಬ್ ಹಾಗೂ ಇನ್ನಿತರ ಗೆಳೆಯರ ಕೂಟದ ಸೆಳೆತಕ್ಕೆ ಒಳಗಾಗಿದ್ದಳು. ಸೇನೆಯಲ್ಲಿದ್ದ ಸುಂದರ ರಾಯರು ನಿವೃತ್ಹಿಯಾಗಿ ಬಂದ ಮೇಲೆ ರತ್ನಳಿಗೆ ಅನುರೂಪವಾದ ಗಂಡ ಗಂಡು ದೊರಕಿ ವಿದೇಶಕ್ಕೆ ಹೋಗಿ ನೆಲೆಸುತ್ತಾಳೆ. ಮೊದಲಿನಿಂದ ದೂರ ದೂರವೇ ಇದ್ದ ಶಾರದಮ್ಮ ಹಾಗೂ ಸುಂದರ ರಾಯರಿಗೆ ಈಗ ಜವಾಬ್ದಾರಿ ಕಳೆದು ಮತ್ತೆ ಯೌವನ ಮರುಕಳಿಸಿದಂತಾಗುತ್ತದೆ . ಅವರಿಬ್ಬರು ತಮ್ಮದೇ ಲೋಕದಲ್ಲಿ ಮುಳುಗಿದ್ದಾಗ ಪದ್ಮ ಮತ್ತೆ ತನ್ನ ಗೆಳತಿಯರ ಕೂಟಕ್ಕೆ ಮರಳುತ್ತಾಳೆ. ಅಲ್ಲಿ ರಾಬರ್ಟ್ ಎನ್ನುವವನ ಬಗ್ಗೆ ಪ್ರೀತಿ ಉಂಟಾಗುತ್ತದೆ. ಆದರೆ ಆತ ಇವಳ ಬಗ್ಗೆ ಅಷ್ಟೇನೂ ಗಮನ ಹರಿಸಿರುವುದಿಲ್ಲ. ಈ ಮಧ್ಯೆ ಪ್ರೇಮನಾಥ್ ಎಂಬ ಡಾಕ್ಟರ್ನಿಗೆ ಪದ್ಮಳ ಚೆಲುವಿನ ಬಗ್ಗೆ ಆಸಕ್ತಿಯಾಗಿ ಅವಳನ್ನು ಕೈ ಹಿಡಿಯುವ ಅಭಿಲಾಷೆ ವ್ಯಕ್ತಪಡಿಸುತ್ತಾನೆ. ಅವರ ವಿವಾಹವೂ ಆಗುತ್ತದೆ ಆದರೆ ರಾಬರ್ಟ್ನ ಮೋಹದಿಂದ ಕಳಚಿಕೊಳ್ಳದ ಪದ್ಮ ಗಂಡನನ್ನು ಬಿಟ್ಟು ಮುಂಬೈಗೆ ರಾಬರ್ಟ್ನನ್ನು ಸೇರಲು ಹೋಗುತ್ತಾಳೆ. ಆದರೆ ಈ ಬಗ್ಗೆ ರಾಬರ್ಟ್ ಮೊದಲೇ ಪ್ರೇಮನಾಥನಿಗೆ ತಿಳಿಸಿರುವುದರಿಂದ ಅಲ್ಲಿ ಅವಳು ಭೇಟಿಯಾಗುವುದು ರಾಬರ್ಟನನ್ನಲ್ಲ ಪ್ರೇಮನಾಥನನ್ನು. ಕೋಪಗೊಂಡಿದ್ದ ಪ್ರೇಮನಾಥ ಅವಳನ್ನು ಕರೆದುಕೊಂಡು ಬಂದು ಪುಟ್ಟದೊಂದು ಮನೆಯಲ್ಲಿ ಇರಿಸಿ ಅನಾದರದಿಂದ ಕಾಣುತ್ತಾನೆ .ಅದನ್ನು ಸಹಿಸಲಾರದೆ ತವರು ಮನೆಗೆ ವಾಪಸ್ಸು ಬಂದರೆ ಅಲ್ಲಿ ತಂದೆ ತಾಯಿಯರ ಲೋಲುಪ್ತತೆ. ತಂದೆಯ ಬಳಿ ಕೆಲಸಕ್ಕೆ ಇರುವ ರಘುವಿಗೆ ಪದ್ಮಳ ಬಗ್ಗೆ ಆಸಕ್ತಿ ಮೂಡುತ್ತದೆ .ಮತ್ತೆ ಅವನನ್ನು ನಂಬಿ ಅವನನ್ನು ವಿವಾಹವಾಗಿ ಅವನ ಜೊತೆ ವಾಸಿಸಲು ಆರಂಭಿಸುತ್ತಾಳೆ. ಅಲ್ಲಿಗೆ ಗಂಡನನ್ನು ಪೂರ್ತಿ ತೊರೆದಂತಾಗುತ್ತದೆ. ಆದರೆ ರಘು ಸಹ ಇವಳ ಹಣ ಒಡವೆಯ ಬಗ್ಗೆ ಆಸಕ್ತಿ ಹೊಂದಿದ್ದು ಇವಳನ್ನು ಬಿಟ್ಟು ಇವಳ ಒಡವೆ ಎಲ್ಲವನ್ನು ಕದ್ದು ಸಾವಿತ್ರಿ ಎನ್ನುವಳೊಡನೆ ಮುಂಬೈಗೆ ಹೋಗಿ ಬಿಡುತ್ತಾನೆ. ಆದರೆ ಅವನ ಚಲನವಲನದ ಬಗ್ಗೆ ಶಂಕೆ ಇದ್ದ ಪದ್ಮ ಅಸಲಿ ಆಭರಣಗಳನ್ನು ತೆಗೆದಿಟ್ಟು ಅಲ್ಲಿ ನಕಲಿ ಆಭರಣಗಳನ್ನು ಇಟ್ಟಿದ್ದರಿಂದ ಒಡವೆಗಳು ಕೈಬಿಡುವುದರಿಂದ ಬಚಾವಾಗುತ್ತಾಳೆ .ಹಾಗೆ ಹೇಗೋ ದಿನ ದೂಡುತ್ತಿದ್ದರೂ ಪ್ರಪಂಚದ ಕಣ್ಣಿಗೆ ಇವಳು ಶೀಲಗೆಟ್ಟವಳೆ! ಸಾಧ್ಯವಾದರೆ ಒಂದು ಕೈ ನೋಡುವ ಎನ್ನುವಂತಹ ಮನೆಯ ಮಾಲೀಕ ರಾಜಪ್ಪ, ಇವಳು ತಮ್ಮನಂತೆ ನೋಡುತ್ತಿದ್ದ ಅರವಿಂದ ಎಲ್ಲರೂ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲೇ ನೋಡುತ್ತಾರೆ. ಇದೆಲ್ಲದರಿಂದ ಬೇಸತ್ತ ಪದ್ಮಳಿಗೆ ಆಗ ತನ್ನ ತಪ್ಪಿನ ಅರಿವಾಗುತ್ತದೆ. ಇವಳನ್ನು ತ್ಯಜಿಸಿದ ಪ್ರೇಮನಾಥ ತನ್ನ ಬಳಿ ನರ್ಸ್ ಆಗಿದ್ದ ಜೂಲಿ ಎನ್ನುವವಳನ್ನು ವಿವಾಹವಾಗಿ ಅವರಿಗೆ ಒಂದು ಮಗುವೂ ಆಗಿರುತ್ತದೆ. ಮಗುವನ್ನು ಸೇವಕರ ಬಳಿ ಬಿಟ್ಟು ಅವರು ಬೇರೆ ಕಡೆ ತೆರಳಿದ್ದಾಗ ಕೆಲಸದವರು ಇಲ್ಲದೆ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಇವಳಿಗೆ ಬೀಳುತ್ತದೆ .ಮಗುವಿನೊಂದಿಗೆ ಒಂದು ರೀತಿಯ ಬಾಂಧವ್ಯ ಬೆಳೆದುಕೊಳ್ಳುತ್ತದೆ. ಮುಂದೆ ಪ್ರೇಮನಾಥ ಜೂಲಿ ವಾಪಸ್ಸು ಬಂದಮೇಲೂ ಮಗು ಇವಳನ್ನು ಹಚ್ಚಿಕೊಂಡಿರುವುದರಿಂದ ಇವಳೇ ಅದನ್ನು ನೋಡಿಕೊಳ್ಳಬೇಕಾಗುತ್ತದೆ. ಸಾಂಸಾರಿಕ ಬಂಧನ ಸುಖಗಳನ್ನೆಲ್ಲ ತೊರೆದು, ತನ್ನ ಕಣ್ಣೆದುರೇ ಪತಿಯ ಸಂಸಾರವನ್ನು ನೋಡಿಕೊಳ್ಳುತ್ತಾ ಅವರೆದುರಿಗೆ ಇರಬೇಕಾದರೂ ಮಗುವಿನ ಪ್ರೀತಿಯ ಮುಂದೆ ಅದನ್ನು ಒಪ್ಪಿಕೊಂಡು ಇರಬೇಕಾದ ಪರಿಸ್ಥಿತಿಗೆ ಅವಳು ಬರಬೇಕಾದದ್ದು ವಿಪರ್ಯಾಸವೇ ಸರಿ.
ಒಲ್ಲದ ಔತಣ ಶೀರ್ಷಿಕೆ ಕಥೆಗೆ ಅದೆಷ್ಟು ಚೆನ್ನಾಗಿ ಪೂರಕವಾಗುತ್ತದೆ ಎಂದರೆ ಸುಸಂಸ್ಕೃತ ಡಾಕ್ಟರ್ ಪ್ರೇಮನಾಥ ಪತಿಯಾಗಿದ್ದರು ಅವನ ಸಹವಾಸ ಪದ್ಮಳಿಗೆ ಒಲ್ಲದ ಔತಣವಾಗಿ ರಾಬರ್ಟ್ ನ ಹಿಂದೆ ಹೋಗಲು ಉದ್ಯುಕ್ತಳಾಗುತ್ತಾಳೆ. ಹಾಗೆಯೇ ಮುಂದೆ ತನ್ನ ತಪ್ಪು ಅರಿತು ಕ್ಷಮೆ ಕೇಳಿ ಬಾಳಲು ಬಂದಾಗ ಪ್ರೇಮನಾಥನಿಗೆ ಪದ್ಮ ಒಲ್ಲದ ಔತಣವಾಗುತ್ತಾಳೆ . ಮತ್ತೆ ತನ್ನೊಂದಿಗೆ ಬಾಳಲು ಬಂದ ಪದ್ಮಳನ್ನು ಒಲ್ಲದ ಔತಣವನ್ನಾಗಿ ಕಂಡು ರಘು ಸಾವಿತ್ರಿ ಯ ಜೊತೆ ಹೋಗಿಬಿಡುತ್ತಾನೆ .ಹಾಗಾಗಿ ಇಲ್ಲಿ ಸಮಯಕ್ಕೆ ಒದಗದ ಬೇರೆ ಯಾವುದೂ ಬೇಡದ ಔತಣವಾಗುವುದು ಒಂದು ರೀತಿಯ ವಿಪರ್ಯಾಸವಾಗಿ ಪರಿಣಮಿಸುತ್ತದೆ.
ಸಹವಾಸ ಹಾಗೂ ಸಂದರ್ಭಗಳು ಮನುಷ್ಯನ ಜೀವನದಲ್ಲಿ ಎಷ್ಟೊಂದು ಬದಲಾವಣೆ ಉಂಟುಮಾಡುತ್ತದೆ ಎನ್ನುವುದಕ್ಕೆ ಪದ್ಮಳೇ ಸಾಕ್ಷಿ. ಶಾಲಿನಿ ಗಿರಿಜಾ ಮೊದಲಾದವರ ಸಹವಾಸಕ್ಕೆ ಬೀಳದಿದ್ದರೆ ಸಾತ್ವಿಕ ಮನೋಭಾವದಲ್ಲಿ ತಂದೆ ತಾಯಿ ನೋಡಿದ ಗಂಡಿನ ಜೊತೆ ಆರಾಮವಾಗಿ ಜೀವನ ಸಾಗಿಸಬಹುದಿತ್ತು. ಅವಳ ಅದೃಷ್ಟ ಎಂಬಂತೆ ಪ್ರೇಮನಾಥ ಕೈಹಿಡಿದ ಮೇಲೆ ತನ್ನ ಪಾಡಿಗೆ ತಾನು ಸುಖವಾಗಿಯೇ ಇರಬಹುದಾದ ಅವಕಾಶವನ್ನು ಮತ್ತೆ ರಾಬರ್ಟ್ನ ಹಿಂದೆ ಹೋಗುವ ಪ್ರಯತ್ನ ಮಾಡಿ ಕಳೆದುಕೊಂಡಳು. ಹಾಗಾಗಿ ಉತ್ತಮ ಸಹವಾಸ ಹಾಗೂ ಯೋಜನೆಗಳು ಜೀವನದಲ್ಲಿ ಎಷ್ಟು ಅವಶ್ಯ ಎನ್ನುವುದು ತಿಳಿಯುತ್ತದೆ ಅವಳು ಪತಿಯ ಮನೆಯಿಂದ ಬಂದಾಗ ಅವರು ತಮ್ಮ ಪಾಡಿಗೆ ತಾವು ಆರಾಮವಾಗಿ ಇರದೆ ಪ್ರೇಮನಾಥನನ್ನು ಕರೆಸಿ ಮಾತನಾಡಿ ಅವರ ಸಂಸಾರದಲ್ಲಿ ಒಂದು ಸಂಧಾನವನ್ನು ಮಾಡುವ ಪ್ರಯತ್ನ ಮಾಡಬಹುದಿತ್ತು ಆದರೆ ಅವರು ತಮ್ಮ ಜವಾಬ್ದಾರಿಯನ್ನು ಇಲ್ಲಿಯೂ ಸರಿಯಾಗಿ ನಿರ್ವಹಿಸಲೇ ಇಲ್ಲ.
ಜೀವನದಲ್ಲಿ ಗಂಡು ತಪ್ಪು ಮಾಡಿದರೆ ಕ್ಷಮೆ ಉಂಟು ಆದರೆ ಹೆಣ್ಣಿಗೆ ಎಂದಿಗೂ ಕ್ಷಮೆಯೇ ಇಲ್ಲ ಎನ್ನುವುದು ಇಲ್ಲಿ ಮತ್ತೆ ಮತ್ತೆ ನಿರೂಪಿತವಾಗುತ್ತದೆ. ಪತಿಯನ್ನು ಬಿಟ್ಟು ರಾಬರ್ಟನನ್ನು ಸೇರಲು ಹೊರಟವಳು ಎಂಬುದೊಂದು ಅವಳ ಮೇಲಿನ ಅಪವಾದ. ದೈಹಿಕವಾಗಿ ಅವಳು ಪರಿಶುದ್ಧಳಾಗೇ ಇದ್ದಳು. ಅವಳ ಮಾನಸಿಕ ಈ ಒಂದು ತಪ್ಪನ್ನು ಕ್ಷಮಿಸಿದ್ದರೆ ಪ್ರೇಮನಾಥ ನಿಜಕ್ಕೂ ದೊಡ್ಡವನಾಗುತ್ತಿದ್ದ. ಆದರೆ ಅದನ್ನು ಮಾಡದೆ ಅದೊಂದೇ ತಪ್ಪನ್ನು ಹಿಡಿದು ಅವಳನ್ನು ಶಿಕ್ಷಿಸುತ್ತಾ ಬಂದ. ಆದರೆ ತಾನು ಮಾಡಿದ್ದೇನು ಬೇರೆಯವಳನ್ನು ಮದುವೆ ಮಾಡಿಕೊಳ್ಳಲೇ ಇಲ್ಲವೇ? ಇವಳಿಗೂ ಒಂದು ಅವಕಾಶ ಕೊಟ್ಟಿದ್ದರೆ ಪದ್ಮಳ ಬಾಳು ಹಾಳಾಗುತ್ತಿರಲಿಲ್ಲ ಆದರೆ ಈ ಪುರುಷ ನಿರ್ಮಿತ ಸಮಾಜದಲ್ಲಿ ಹೆಣ್ಣಿಗೆ ಎಂದಿಗೂ ಶೋಷಣೆಯೇ…….
ರಘುವಿನ ಜೊತೆ ಮತ್ತೆ ಮದುವೆ ಮಾಡಿಕೊಂಡರೂ ಪ್ರೇಮನಾಥ ಹೇಳಿದ ಮಾತಿನಿಂದ ರಘುವಿಗೆ ಪದ್ಮಳ ಬಗ್ಗೆ ಅಸಡ್ಡೆ ಬೆಳೆಯುತ್ತದೆ. ಅವಳನ್ನು ಬಿಟ್ಟು ಹೋಗುತ್ತಾನೆ. ಇಲ್ಲಿಯೂ ಅಷ್ಟೇ ಪದ್ಮಳ ತಪ್ಪುಗಳಷ್ಟೇ ಮೇಲೆ ಬರುತ್ತದೆ ಬೇರೆಯವರೆಲ್ಲ ಬಹಳ ಸಾಚಾ ಸಂಭಾವಿತರು ಎಂಬ ಸೋಗು.
ಈ ಕಾದಂಬರಿಯ ಮುಖ್ಯ ಪಾಠವೆಂದರೆ ಹೆಣ್ಣು ಮಕ್ಕಳು ಮನಸ್ಸನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಪದ್ಮ “ಇರುವುದೆಲ್ಲವ ಬಿಟ್ಟು ಇಲ್ಲದ ನೆನೆವುದೇ ಜೀವನ” ಎಂದು ಹೇಳಿ ತನ್ನ ಪತಿಯನ್ನು ಬಿಟ್ಟು ರಾಬರ್ಟ್ನ ಹಿಂದೆ ಹೋಗಲು ಪ್ರಯತ್ನಪಟ್ಟಿದ್ದೇ ಅವಳ ಎಲ್ಲ ದುರಂತಗಳಿಗೆ ಮೂಲ . ಸಮಾಜದಲ್ಲಿ ನಿರ್ಮಿತ ಕಟ್ಟುಪಾಡುಗಳಿಗೆ ಒಳಗಾಗದೆ ಇದ್ದಲ್ಲಿ ಹೆಣ್ಣು ಮಕ್ಕಳಿಗೇ ಹೆಚ್ಚಿನ ತೊಂದರೆ .ಬಟ್ಟೆ ಮುಳ್ಳಿನ ಮೇಲೆ ಬಿದ್ದರೂ ಮುಳ್ಳು ಬಟ್ಟೆಯ ಮೇಲೆ ಬಿದ್ದರೂ ತೊಂದರೆಯಾಗುವುದು ಬಟ್ಟೆಗೆ ಮಾತ್ರ .ಹಾಗಾಗಿ ನಡವಳಿಕೆಯಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು.
ತನ್ನ ಪತಿ ತ್ಯಜಿಸಿ ಹೋದರು ಅವನಿಗೆ ಬೇರೊಂದು ಪತ್ನಿಯಿಂದ ಹುಟ್ಟಿದ ಮಗುವಿನ ಬಗ್ಗೆ ನಿಜವಾದ ಪ್ರೀತಿ ಕಾಳಜಿ ತೋರಿಸಿ ಪ್ರೇಮ ಬೆಳೆಸಿ ಕೊಂಡು ಮಮತಾಮಯಿಯಾಗುವ ಪದ್ಮ ನಿಜಕ್ಕೂ ಅಗ್ನಿ ದಿವ್ಯದಲ್ಲಿ ಬೆಂದ ಪಾರಿಜಾತದಂತೆ ಕಂಗೊಳಿಸುತ್ತಾಳೆ . ಮುಂದೆ ಯಾವುದೇ ವಿಕಾರವಿಲ್ಲದೆ ಸಮ ಚಿತ್ತದಿಂದ ತನ್ನ ಪತಿಯ ಸಂಸಾರದಲ್ಲೇ ಅವನ ಮಗುವನ್ನು ನೋಡಿಕೊಂಡು ಕಾಲ ಕಳೆಯುವ ಅವಳ ಮನಃಸ್ಥಿತಿ ಹಾಗೂ ಧಾರ್ಡ್ಯ ನಿಜಕ್ಕೂ ಮೆಚ್ಚುವಂತದ್ದೇ. ಆದರೆ ಇದೇ ಮನೋಭಾವ ಸ್ವಲ್ಪ ಮುಂಚೆಯೇ ತೋರಿದ್ದಿದ್ದರೆ ಅವಳ ಬದುಕು ಹಸನಾಗುತ್ತಿತ್ತಲ್ಲವೇ ಎನ್ನುವ ಕನಿಕರದ ಭಾವವೂ ಮೂಡುತ್ತದೆ.
ಸಮಾಜದ ದ್ವಿಮುಖ ನೀತಿ, ನಿತ್ಯ ಜೀವನದಲ್ಲಿ ನಡೆಯುವ ವಿವಿಧ ವರ್ತನೆಗಳ ಮಗ್ಗಲುಗಳನ್ನು ಲೇಖಕಿಯವರು ತುಂಬಾ ಸಹಜವಾಗಿ ಚಿತ್ರಿಸಿದ್ದಾರೆ. ನಮ್ಮ ಸುತ್ತಮುತ್ತಲೇ ಇರುವ ವ್ಯಕ್ತಿಗಳನ್ನು ನಾವು ಈ ಪಾತ್ರಗಳಲ್ಲಿ ಕಾಣಬಹುದು. ಆದರೆ ಕಥೆಯಲ್ಲಿ ನಾವು ಕನಿಕರಿಸುವ ಪಾತ್ರಗಳನ್ನು ನಮ್ಮ ನಿಜ ಜೀವನದಲ್ಲಿ ಕಂಡರೆ ಅದೇ ಮನೋಭಾವನೆಯನ್ನು ವ್ಯಕ್ತಪಡಿಸುತ್ತೇವೆಯೇ ಎಂಬುದು ನಿಜಕ್ಕೂ ಪ್ರಶ್ನಾಸ್ಪದ.
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು