ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ ಅವರ ಲೇಖನಿಯಿಂದ
ಹಳ್ಳಿಗದ್ದೆಯವರ ಗಜಲ್ ಗಳಲ್ಲಿ ಪ್ರೀತಿಯ ಸಿಂಚನ
ಎಲ್ಲರಿಗೂ ನಮಸ್ಕಾರಗಳು..
‘ಗಜಲ್’ ಎನ್ನುವ ಶಬ್ದ ಕಿವಿಗೆ ಬೀಳುತ್ತಲೇ ಹೃದಯದ ಬಡಿತ ಜೋರಾಗುತ್ತದೆ. ಅಂಥಹ ಶಕ್ತಿ ಗಜಲ್ ಗೆ ಇದೆ. ಅಂತೆಯೇ ಪ್ರತಿ ಗುರುವಾರ ಒಬ್ಬೊಬ್ಬ ಶಾಯರ್ ಅವರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತ್ತಿರುವೆ. ವ್ಯಕ್ತಿ ಪರಿಚಯದೊಂದಿಗೆ ಗಜಲ್ ಲೋಕದಲ್ಲಿ ವಿಹರಿಸುತಿದ್ದರೆ ನನಗೆ ಈ ಸಂಸಾರದ ಅರಿವೆ ಇರುವುದಿಲ್ಲ. ಬನ್ನಿ, ಗಜಲ್ ಪ್ರೇಮಿಗಳೇ; ನಿಮಗೂ ಇದೆ ಅನುಭವ ಆಗುತ್ತದೆ ಎಂದು ಪ್ರಾಮಿಸ್ ಮಾಡುವೆ..!
“ನಾಳೆಯ ಬಗ್ಗೆ ಹೆಚ್ಚು ಯೋಚಿಸುವುದು ಒಳ್ಳೆಯದಲ್ಲ
ಚಹಾದ ಕಫ್ ಮತ್ತು ತುಟಿಗಳ ನಡುವಿನ ಅಂತರವೆ ಜೀವನ”
– ವಿಜಯ್ ಬಾತೆ
‘ನಗು’ ಎನ್ನುವಂತದ್ದು ಪ್ರತಿ ಧರ್ಮದ ಜೀವಾಳ, ತಿರುಳು. ಗಂಭೀರತೆ ಯಾವತ್ತೂ ಯಾವ ಧರ್ಮದ ಭಾಗವಲ್ಲ, ಆಗುವುದು ಸಾಧ್ಯವೂ ಇಲ್ಲ. ಏಕೆಂದರೆ ಗಂಭೀರತೆ ಅಹಂನ ಅವತಾರ, ಕಾಯಿಲೆಯ ಮೂಲ ಕಾರಣ. ಆದರೆ ನಗು ಹಾಗಲ್ಲ, ಇದು ಅಹಂನಿಂದ ದೂರ. ಈ ಬದುಕಿನ ನಾಟಕ ಅನನ್ಯ ಹಾಗೂ ಅನುಪಮ. ಹಲವು ಬಾರಿ ಕೇವಲ ನಗು ಮಾತ್ರ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಬಲ್ಲದು. ಕೇವಲ ನಗು ಮಾತ್ರ ನಿಜವಾದ ಪ್ರಾರ್ಥನೆ, ಕೃತಜ್ಞತೆಯಾಗಬಲ್ಲದು. ಈ ಜಗತ್ತಿನಿಂದ ಗಂಭೀರತೆ ನಾಶವಾದರೆ ಯಾರಿಗೂ ಏನೂ ತೊಂದರೆ ಇಲ್ಲ, ಬದಲಾಗಿ ಜಗತ್ತು ಹೆಚ್ಚು ಆರೋಗ್ಯ ಹೆಚ್ಚೆಚ್ಚು ಪೂರ್ಣತೆಯಿಂದ ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ನಗು ಮರೆಯಾದರೆ.. ಊಹಿಸಲೂ ಸಾಧ್ಯವಿಲ್ಲ, ಎಲ್ಲವೂ ನಾಶವಾದಂತೆ. ಧಿಡೀರನೆ ಅಸ್ತಿತ್ವದ ಉತ್ಸವ ತನ್ನ ಮೂಲವನ್ನು ಕಳೆದುಕೊಳ್ಳುತ್ತದೆ. ಸಂಸಾರ ಬಣ್ಣರಹಿತವಾಗುತ್ತದೆ, ಏಕತಾನತೆ ಆವರಿಸಿಕೊಳ್ಳುತ್ತದೆ ಮತ್ತು ಸೂತಕ ನಮ್ಮನ್ನು ಮುನ್ನಡೆಸುತ್ತದೆ. ಅಂತರಂಗದ ಶಕ್ತಿಯು ತನ್ನ ಪ್ರವಾಹದ ಗತಿಯನ್ನ ಕಳೆದುಕೊಳ್ಳುತ್ತದೆ. ಈ ನೆಲೆಯಲ್ಲಿ ಕಾವ್ಯ ಎಂದರೆ ಬದುಕನ್ನು ಕಟ್ಟಿಕೊಡುವ, ಉಲ್ಲಾಸವನ್ನು ಬಿತ್ತುವ; ಬೆಳೆಯುವ ಫಲವತ್ತಾದ ಭೂಮಿ! ಇಂಥಹ ಭೂಮಿಯಲ್ಲಿ ಚಿಗುರಿದ ಪಾರಿಜಾತವೆ ‘ಗಜಲ್’. ಇಂದು ಕರುನಾಡಿನ ಕಪ್ಪು ಮಣ್ಣಿನಲ್ಲಿ ಗಜಲ್ ಹುಲುಸಾಗಿಯೆ ಬೆಳೆಯುತ್ತಿದೆ. ಇಂಥಹ ಬೆಳೆಗಾರರಲ್ಲಿ ಶ್ರೀ ಮಹೇಶ್ ಹೆಗಡೆ ಹಳ್ಳಿಗದ್ದೆಯವರೂ ಒಬ್ಬರು.
ಶ್ರೀಯುತ ಮಹೇಶ್ ಹೆಗಡೆ ಹಳ್ಳಿಗದ್ದೆಯವರು ಮೂಲತಃ ಶಿರಸಿ ತಾಲೂಕಿನ ನಕ್ಷೆ ಗ್ರಾಮದ ಹಳ್ಳಿಗದ್ದೆ ಊರಿನವರು. ತಮ್ಮ ನಾಲ್ಕನೇ ತರಗತಿ ವರೆಗಿನ ಶಿಕ್ಷಣವನ್ನು ಹಳ್ಳಿಗದ್ದೆಯಲ್ಲಿಯೇ ಮುಗಿಸಿರುವ ಇವರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಾರಗೋಡಿನಲ್ಲಿ ಹಾಗೂ ಭೈರುಂಬೆಯಲ್ಲಿ ಮುಗಿಸಿದ್ದಾರೆ. ಇನ್ನೂ ಇವರು ತಮ್ಮ ಬಿ ಎಸ್ಸಿ ಪದವಿಯನ್ನು ಕುಮಟಾದ ಡಾ. ಎ. ವಿ. ಬಾಳಿಗಾ ಕಾಲೇಜಿನಲ್ಲಿ ಮುಗಿಸಿ ನಂತರದ ದಿನಗಳಲ್ಲಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದರು ಎಂಬುದು ತಿಳಿದು ಬರುತ್ತದೆ. ಪ್ರಸ್ತುತ ಇವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಈಗ ನಾಲ್ಕೈದು ವರ್ಷಗಳಿಂದ ಹವ್ಯಾಸಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವ ಶ್ರೀಯುತರು ಗಜಲ್, ಕವಿತೆ, ರುಬಾಯಿ, ಚುಟುಕು, ಹನಿಗವನ, ತಂಕಾ, ಹೈಕು… ಹೀಗೆ ಅನೇಕ ಪ್ರಕಾರದ ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾಹಿತ್ಯದ ಹೊರತಾಗಿ ತಬಲಾ, ಕೊಳಲು, ವೀಣೆ, ಹೊಲಿಗೆ ಹಾಗೂ ಅಡುಗೆಯಲ್ಲಿಯೂ ಸಹ ಇವರು ಪ್ರವೀಣರು. ‘ಮಹತಿ’ ಎಂಬುದು ಇವರ ಮೊದಲ ಗಜಲ್ ಸಂಕಲನವಾಗಿದ್ದು ಇನ್ನೂ ಕೆಲವು ಪುಸ್ತಕಗಳನ್ನು ಹೊರತರುವ ತಯಾರಿಯಲ್ಲಿದ್ದಾರೆ.
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರುವ ಮಹೇಶ್ ಹೆಗಡೆ ಹಳ್ಳಿಗದ್ದೆಯವರ ಹಲವು ಸಾಹಿತ್ಯ ಪ್ರಕಾರಗಳು ಕನ್ನಡದ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇದರೊಂದಿಗೆ ಇವರು ಹಲವಾರು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ಸಹೃದಯಿಗಳ ಹೃದಯವನ್ನು ಗೆದ್ದಿದ್ದಾರೆ. ಇವರಿಗೆ ನಾಡಿನ ಹಲವಾರು ಸಂಘ ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ.
ಮನುಷ್ಯರು ಒಬ್ಬರ ಮೇಲೊಬ್ಬರು ಕೆಂಡ ಕಾರುತ್ತಿರುವಾಗ ಅವರ ಹೃದಯಗಳು ಪರಸ್ಪರರಿಂದ ಬಹಳ ದೂರ ಸಾಗಿರುತ್ತವೆ. ಸಿಟ್ಟು ಹೆಚ್ಚಾದಂತೆಲ್ಲ ಅವರ ಹೃದಯಗಳ ನಡುವಿನ ದೂರ ಹೆಚ್ಚಾಗುತ್ತ ಹೋಗುತ್ತದೆ. ಪ್ರೇಮಿಗಳು ಜೋರು ದನಿಯಲ್ಲಿ ಮಾತನಾಡುವುದಿಲ್ಲ, ತುಂಬಾ ಮೇಲುದನಿಯಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಪ್ರೇಮದಲ್ಲಿ ಅವರ ಹೃದಯಗಳು ತೀರ ಹತ್ತಿರದಲ್ಲಿವೆ. ಪ್ರೇಮ ಹೆಚ್ಚಾಗುತ್ತ ಹೋದಂತೆ ಪಿಸು ಮಾತಿನಲ್ಲಿ ಎಲ್ಲ ಸಂಭಾಷಣೆಗಳು ಮುಗಿದುಹೋಗುತ್ತವೆ. ಪ್ರೀತಿ ಇನ್ನೂ ಗಾಢವಾದಾಗ, ಅವರಿಬ್ಬರ ಹೃದಯಗಳು ಒಂದಾದಾಗ, ಮಾತುಗಳು ನಿಂತು ಹೋಗುತ್ತವೆ, ಕೇವಲ ಅವರ ಕಣ್ಣುಗಳು ಮಾತನಾಡುತ್ತವೆ. ಅವರು ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಗಂಟೆಗಟ್ಟಲೇ ಸುಮ್ಮನೇ ಕುಳಿತುಬಿಡಬಲ್ಲರು. ಆಗಲೂ ಅವರ ನಡುವೆ ಒಂದು ಸಂಭಾಷಣೆ ನಡೆಯುತ್ತದೆ. ಆವಾಗ ಅದಕ್ಕೆ ಮಾತಿನ ಅವಶ್ಯಕತೆ ಇರುವುದಿಲ್ಲ. ಈ ದಿಸೆಯಲ್ಲಿ ನಾವು ಗಜಲ್ ಅನ್ನು ವಿಶ್ಲೇಷಣೆ ಮಾಡಬಹುದಾಗಿದೆ. ಗಜಲ್ ಗೋ ಮಹೇಶ್ ಹೆಗಡೆ ಹಳ್ಳಿಗದ್ದೆ ಅವರ ಗಜಲ್ ಗಳ ವಸ್ತು ವೈವಿಧ್ಯತೆ, ನಿರೂಪಣಾ ಶೈಲಿಯಿಂದ ಓದುಗರ ಗಮನ ಸೆಳೆಯುತ್ತವೆ. ‘ಮಹತಿ’ ಗಜಲ್ ಸಂಕಲನದಲ್ಲಿರುವ ಗಜಲ್‌ಗಳು ಬರೀ ಪ್ರೀತಿ, ಪ್ರೇಮ, ಪ್ರಣಯ, ವಿರಹಕ್ಕೆ ಸೀಮಿತವಾಗಿರದೆ ಮನುಕುಲದ ನೋವು, ನಲಿವು, ಒಲವು, ಲೌಕಿಕ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ಸಮಷ್ಟಿಯಾಗಿ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿವೆ. ಅಂತರಾತ್ಮನೊಡನೆ ನಡೆಸುವ ಸಂವಾದ, ಮನದ ತಿರುಳನ್ನೇ ಕಾಡುವ ಸುಖಾಸುಮ್ಮನೆಯಲ್ಲದ ಹಲವು ಗಂಭೀರ ಪ್ರಶ್ನೆಗಳು, ಸಣ್ಣನೆಯ ತಣ್ಣನೆಯ ಕೋಪ, ದೇವನೊಡನೆ ಬಿನ್ನಹ, ಪೌರಾಣಿಕತೆಯ ಸೊಗಡು, ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ಮನಸುಗಳ ತಾಕಲಾಟ, ಸಮಸ್ಯೆಗಳ ವಿವಿಧ ಮುಖಗಳ ಅನಾವರಣ ಎಲ್ಲವನ್ನೂ ಇಲ್ಲಿ ಗುರುತಿಸಬಹುದು.
“ಬೀದಿಯಲಿ ಹಚ್ಚಿದ ದೀಪವು ದಾರಿ ತೋರಲು ಭೇದವ ಎಣಿಸುವುದೇನು
ಎದೆಯಲಿ ಹೊತ್ತಿದ ಉರಿಯು ಆರಬೇಕೆಂದರೆ ಅತ್ತುಬಿಡು ಒಮ್ಮೆ”
ನಮ್ಮನ್ನು, ನಮ್ಮ ಸಮಾಜವನ್ನು ಮುನ್ನಡೆಸುತ್ತಿರುವ ಗುರು ಎಂದರೆ ಅದು ಪ್ರಕೃತಿ. ಈ ಪ್ರಕೃತಿಯಲ್ಲಿಯ ಪ್ರತಿಯೊಂದು ವಸ್ತು, ಜೀವಕೋಶಗಳು ನಮಗೆ ಸದಾ ಪಾಟ ಕಲಿಸುತ್ತಲೆ ಇರುತ್ತವೆ, ಆದರೆ ನಾವುಗಳು ಕಲಿಯಬೇಕಿದೆ. ಅಂತೆಯೇ ಗಜಲ್ ಗೋ ಶ್ರೀ ಮಹೇಶ್ ಹೆಗಡೆ ಹಳ್ಳಿಗದ್ದೆಯವರು ‘ದೀಪ’ದ ನಿಸ್ವಾರ್ಥತೆಯನ್ನು ತುಂಬಾ ಸರಳವಾಗಿ ಸಾರಿದ್ದಾರೆ. ಮನುಷ್ಯ ದೀಪದಂತೆ ಬೆಳಕು ಚೆಲ್ಲುತ್ತ ಜೀವನವನ್ನು ಸಾಗಿಸಬೇಕು ಎಂದು ಹೇಳುತ್ತಲೆ ಮನವು ಸದಾ ಅಂತರ್ಮುಖಿಯಾಗಿರದೆ, ಬಹಿರ್ಮುಖಿಯಾಗಿದ್ದು ದುಃಖ ದುಮ್ಮಾನಗಳನ್ನು ಹೊರಗೆಡುವ ಬೇಕು ಎಂದಿದ್ದಾರೆ. ಈ ದಿಸೆಯಲ್ಲಿ ಮೇಲಿನ ಷೇರ್ ಮನದ ನೆಮ್ಮದಿಯ ಹಾದಿಯನ್ನು ಗುರುತಿಸುತ್ತದೆ.
ಮನುಷ್ಯ ಬದುಕುತ್ತಿರುವ ಈ ಸಂಸಾರ ಒಳಿತು-ಕೆಡಕುಗಳ ಸಾಮಾನ್ಯವಾಗಿದೆ. ಆದರೆ ಮನಸು ಮಾತ್ರ ಒಳಿತಿಗಿಂತಲೂ ಕೆಡುಕಿನತ್ತಲೆ ಸದಾ ಚಲಿಸುತ್ತಿರುತ್ತದೆ. ಇದನ್ನು ಸಾಮಾನ್ಯ ಎಂದು ನಿರ್ಲಕ್ಷಿಸದೆ ಮನಸನ್ನು ನಿಗ್ರಹಿಸಬೇಕಾದ ಜರೂರಿ ಇದೆ ಎಂಬುದನ್ನು ಈ ಕೆಳಗಿನ ಷೇರ್ ಸಾರುತ್ತದೆ. ಇದರೊಂದಿಗೆ ಇಂದಿನ ಬಣ್ಣದ ಮಾತುಗಳ ಮುಖವಾಡ ಕುರಿತು ಎಚ್ಚರವಹಿಸಬೇಕು ಎಂಬುದನ್ನು ಅರುಹಿದ್ದೋರೆ.
“ಬಣ್ಣದ ಹೂಗಳ ಘಮಕೆ ನಡೆವ ಹಾದಿಯ ಮರೆಯದಿರು
ಬಣ್ಣನೆ ಮಾಡುವ ಮನಕೆ ನೀಡಿದ ಮಾತನು ಮುರಿಯದಿರು”
‘ಗಜಲ್’ ಎಂಬುದು ಹಾಡುಗಬ್ಬ. ಇದು ಸಂಗೀತದೊಂದಿಗೆ ಮೇಳೈಸಿದಾಗಲೆ ಜನಸಾಮಾನ್ಯರ ಮನಸನ್ನು ತಲುಪಲು ಸಾಧ್ಯ. ಇದಕ್ಕೆ ಸರಳತೆಯೇ ಮೂಲ ಸ್ಥಾಯಿ ಭಾವ. ಈ ಹಿನ್ನೆಲೆಯಲ್ಲಿ ಸುಖನವರ್ ಶ್ರೀ ಮಹೇಶ್ ಹೆಗಡೆ ಹಳ್ಳಿಗದ್ದೆಯವರು ಹೆಚ್ಚು ಹೆಚ್ಚು ಗಜಲ್ ಕೃಷಿ ಮಾಡಲಿ, ಅವುಗಳು ಸಂಕಲನ ರೂಪದಲ್ಲಿ ಬಂದು ನಮಗೆ ಓದಲು ಲಭ್ಯವಾಗಲು ಎಂದು ಶುಭ ಕೋರುತ್ತೇನೆ.
“ಒಪ್ಪಿಕೊಳ್ಳುವೆ ಜೀವನ ನಾಲ್ಕು ದಿನದೆಂದು
ಆ ನಾಲ್ಕು ದಿನಗಳೆ ಬಹಳ ಆಗುತ್ತವೆ ಗೆಳೆಯರೆ”
–ಫಿರಾಕ್ ಗೋರಕಪುರಿ
ಮನುಷ್ಯನ ಮನಸು ಹಲವು ಏರಿಳಿತಗಳ ಝರಿ. ಶಾಂತಿ, ನೆಮ್ಮದಿ ನಮ್ಮನ್ನು ಆವರಿಸಬೇಕಾದರೆ ಗಜಲ್ ನ ಪಾತ್ರ ಅನನ್ಯ. ಇಂಥಹ ಗಜಲ್ ನಾಕದಲ್ಲಿ ಅಲೆದಾಡುತ್ತಿರಬೇಕಾದರೆ ದಿನದ ೨೪ ಗಂಟೆಗಳೂ ಕಡಿಮೆ ಅನಿಸುತ್ತವೆ. ಒಲ್ಲದ ಮನಸ್ಸಿನಿಂದಲೇ ಕಾಲದ ಮುಂದೆ ಮಂಡಿಯೂರಿರುವೆ.. ಅನಿವಾರ್ಯವಾಗಿ ಇಂದು ಇಲ್ಲಿಂದ ನಿರ್ಗಮಿಸಲೆಬೇಕಿದೆ, ಮುಂದಿನ ಗುರುವಾರ ಮತ್ತೇ ಬರುವೆ..ಹೋಗಿ ಬರಲೆ….!!
ರತ್ನರಾಯಮಲ್ಲ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ