ಜ. ೩೧ ಬೇಂದ್ರೆ ಜನ್ಮದಿನದ ನಿಮಿತ್ತ

ನೆನಪು

ವರಕವಿ ಅಂಬಿಕಾತನಯದತ್ತರ ಸನ್ನಿಧಿಯಲ್ಲಿ

ಬಾಲ್ಯದಿಂದಲೂ ಬೇಂದ್ರೆಯವರ ಭಾವಗೀತೆಗಳನ್ನು ಹಾಡುತ್ತ ಬೆಳೆದ ನನಗೆ ಆ ಮಹಾಕವಿಯನ್ನು ನೋಡುವ ಅವಕಾಶ ನನ್ನ ೧೮ ನೆಯ ವಯಸ್ಸಿಗೇ ಬಂತಲ್ಲದೇ ಅವರೇ ನನ್ನ ಸಂಪಾದಕತ್ವದ ಮೊದಲ ಪತ್ರಿಕೆ ” ಶೃಂಗಾರ ” ವನ್ನು ನಮ್ಮ ಮನೆಯಲ್ಲೇ ಬಿಡುಗಡೆ ಮಾಡಿದರೆಂಬುದು ನನಗೇ ನಂಬಲಸಾಧ್ಯವಾದ ಸಂಗತಿಯಾಗಿದೆ.
೧೯೬೨ ರ ಜನೆವರಿ ೨೬ ರಂದು ದ. ರಾ‌. ಬೇಂದ್ರೆಯವರು ತಮ್ಮ ಪತ್ನಿ ಮತ್ತು ಮಗಳ ಸಂಗಡ ಹೊನ್ನಾವರದ ನಮ್ಮ ಮನೆಗೆ ಬಂದರು. ಇಡೀ ದಿನ ನಮ್ಮ ಮನೆಯಲ್ಲೇ ಇದ್ದರು. ಮನೆಯ ಜಗುಲಿಯ ಮೇಲೇ ಪತ್ರಿಕೆ ಬಿಡುಗಡೆ ಮಾಡಿ ಆಶೀರ್ವದಿಸಿದರು. ಅವರ ಮಾರ್ಗದರ್ಶನದಲ್ಲಿ ಆಗ ಪಿಎಚ್ಡಿ ಮಾಡುತ್ತಿದ್ದ ಡಾ. ಬಿ. ಬಿ. ರಾಜಪುರೋಹಿತ ಅವರೂ ಸಂಗಡ ಬಂದಿದ್ದರು. ಅವರು ನಾಡಿನ ಬಹುದೊಡ್ಡ ಭಾಷಾಶಾಸ್ತ್ರಜ್ಞರು.
ಅದೇ ವರ್ಷ ಜೂನ್ ನಲ್ಲಿ ನಾನು ಧಾರವಾಡದ ಜೆ ಎಸ್. ಎಸ್. ಕಾಲೇಜು ಸೇರಿದಾಗ ನನ್ನ ಅದೃಷ್ಟದಿಂದ ಸಾಧನಕೇರಿಯ ಬೇಂದ್ರೆಯವರ ಮನೆಯ ಹಿಂಭಾಗದಲ್ಲೇ ಉಳಿಯುವಂತಾಯಿತು. ಇದರಿಂದಾಗಿ ಮತ್ತೆ ಹಲವು ವರ್ಷ ಬೇಂದ್ರೆಯವರ ಸಂಪರ್ಕ ಪಡೆಯುವಂತಾಯಿತು.
ಬೇಂದ್ರೆಯವರನ್ನು ನೋಡುವದು ಸುಲಭವಿರಬಹುದು, ಆದರೆ ಅವರನ್ನು ಅರ್ಥ ಮಾಡಿಕೊಳ್ಳುವದು ಸುಲಭ ಅಲ್ಲ. ಅವರ ಬಗ್ಗೆ ಸಾಹಿತ್ಯಿಕ ವಲಯದಲ್ಲಿ ಕೇಳಿ ಬರುವ ಒಂದು ಮಾತಿತ್ತು- ” ಅವರು ಬಹಳ ಸಿಟ್ಟಿನ ಸ್ವಭಾವದವರು, ಜಗಳಗಂಟರು.. ಇತ್ಯಾದಿ. ಕೆಲಮಟ್ಟಿಗೆ ಅದು ನಿಜವೂ ಆಗಿತ್ತು. ಅವರ ಮನೆಯ ಹತ್ತಿರವೇ ಇದ್ದ ಡಾ. ಶಂ. ಬಾ. ಜೋಶಿಯವರಿಗೂ ಅವರಿಗೂ ಕೂಡಿಬರುತ್ತಿರಲಿಲ್ಲ. ಏನೋ ಅಭಿಪ್ರಾಯ ಭೇದ. ದ್ವೇಷವಲ್ಲ. ಬೇಂದ್ರೆಯವರದು ಖಡಕ್ ಸ್ವಭಾವ. ಹೇಳಬೇಕಾದ್ದನ್ನು ಬಾಣದ ಹಾಗೆ ತೂರಿಬಿಡುವವರು. ಆದರೆ ಅವರ ವ್ಯಕ್ತಿತ್ವದ ಇನ್ನೊಂದು ಮಗ್ಗುಲಲ್ಲಿ ಅವರದು ಮುಗ್ಧ ಮಗುವಿನಂತಹ ಸ್ವಭಾವ. ಕಾವ್ಯ ಸಾಹಿತ್ಯ ಬಿಟ್ಟು ಬೇರೆ ಏನನ್ನೂ ಯೋಚಿಸಿದವರಲ್ಲ ಅವರು. ಸತತ ಅಭ್ಯಾಸಿ. ಅವರ ಮನೆಯ ಗ್ರಂಥಾಲಯದಲ್ಲಿದ್ದ ಅಮೂಲ್ಯ ಪುಸ್ತಕಗಳು ವಿಶ್ವವಿದ್ಯಾಲಯದಲ್ಲೂ ಸಿಗದಂತಹವು. ಮನೆಯಲ್ಲಿದ್ದಾಗ ಆ ಪುಸ್ತಕಗಳ ಸಾಲಿನ ಬಳಿ ನಿಂತು ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಪುಟಪುಟದ ಮೇಲೂ ಪೆನ್ಸಿಲಿನಿಂದ ಗುರುತು ಹಾಕುತ್ತ ಹೋಗುತ್ತಿದ್ದುದಿತ್ತು. ಅಗಾಧವಾದ ಓದು ಅವರದು. ಸಾಹಿತ್ಯವಷ್ಟೇ ಅಲ್ಲ, ವಿಜ್ಞಾನ, ತಂತ್ರಜ್ಞಾನ, ಗಣಿತ, ಅರ್ಥಶಾಸ್ತ್ರ, ಬಾಯೋಲಜಿ ,ಸ್ವಪ್ನಶಾಸ್ತ್ರ ಏನೆಲ್ಲ ವಿಷಯಗಳಲ್ಲೂ ಅವರ ಜ್ಞಾನ ಹರಡಿಕೊಂಡಿತ್ತು.
ತಲೆಯ ಮೇಲೊಂದು‌ ಮಂಕಿಕ್ಯಾಪ್, ಅಥವಾ ಕರಿಟೊಪ್ಪಿ, ಒಂದು ಕಪ್ಪು ಬಣ್ಣದ ಜಾಕೆಟ್, ಕೈಯಲ್ಲೊಂದು‌ ಹಳೆಯ ಕೊಡೆ ಇವು ಬೇಂದ್ರೆಯವರ ಟ್ರೇಡ್ ಮಾರ್ಕಗಳು. ಆ ಕೊಡೆ ಎಂದರೆ ಅವರಿಗೆ ಬಹಳ ಪ್ರೀತಿ. ಅದನ್ನು ಬೇರೆಯವರು ಮುಟ್ಟುವ ಹಾಗಿರಲಿಲ್ಲ. ಸಾಯಿಬಾಬಾ ಅವರು ಕೊಟ್ಟಿದ್ದು ಅದು ಎನ್ನುತ್ತಿದ್ದರು. ಮನೆಗೆ ವರಕವಿಯ ದರ್ಶನಕ್ಕೆ ಬರುವ ಹಿರಿಕಿರಿಯ ಸಾಹಿತಿಗಳು, ಅವರ ಕಾವ್ಯದ ಪ್ರೇಮಿಗಳು ಬಹಳ. ಮಾತು ಸಾಕು ಅನಿಸಿದಾಗ ಒಂದು ಚಮಚಾ ಸಕ್ಕರೆಯನ್ನು ಕೊಟ್ಟು ಇನ್ನು ಹೋಗಬಹುದು ಎನ್ನುವ ಸೂಚನೆ ನೀಡುತ್ತಿದ್ದರು.
ಬೇಂದ್ರೆಯವರಿಗೆ ಮಾತು ಎಂದರೆ ಬಹಳ ಪ್ರೀತಿ. ಅವರ ಮಾತು ಕೇಳುತ್ತಿದ್ದರೆ ನಮಗೆ ಎಂದೂ ಸಾಕು ಅನಿಸುತ್ತಿರಲಿಲ್ಲ. ನಮ್ಮ ಶೃಂಗಾರ ಪತ್ರಿಕೆಯ ಪ್ರತಿ ಸಂಚಿಕೆಗೂ ಅವರು ಒಂದು ಕವನ ಕೊಡುತ್ತಿದ್ದರು. ಒಮ್ಮೆ ‘ಊಹೆ’ ಎಂಬ ಅವರ ಒಂದು ಕವನ ಕೊಟ್ಟಿದ್ದರು. ನನಗೆ ಅದು ಪೂರ್ತಿ ಅರ್ಥವಾಗಿರಲಿಲ್ಲ. ನಾನು ಅವರ ಮನೆಗೆ ಹೆಚ್ಚಾಗಿ ಸಂಜೆ ಹೋಗಿ ಅವರಿಗೆ ಬಿಡುವು ಇದ್ದರೆ ಮಾತನಾಡಿಸುತ್ತಿದ್ದೆ. ನಾನು ಊಹೆ ಕವನದ ಕುರಿತು ಅವರನ್ನು ಕೇಳಿದಾಗ ಅವರು ಸುಮಾರು ಒಂದೂವರೆ ಗಂಟೆ ಕಾಲ ಅದರ ಪ್ರತಿ ಸಾಲನ್ನೂ ಬಿಡಿಸಿ ಬಿಡಿಸಿ ಅರ್ಥವಿವರಣೆ ನೀಡಿದ್ದರು.
ಬೇಂದ್ರೆ ಒಬ್ಬ ದಾರ್ಶನಿಕ ಕವಿ, ಅವಧೂತ ಕವಿ. ಅವರ ಕಾವ್ಯ ಅನುಕರಣೆಗೆ ಸಿಗದಂತಹದು. ಏಕೆಂದರೆ ಕವನದಿಂದ ಕವನಕ್ಕೆ ಅವರು ಬೆಳೆಯುತ್ತ ಹೋದರು, ಬದಲಾಗುತ್ತ ಹೋದರು. ಅವರ ಕಾವ್ಯಜೀವನದ ಪೂರ್ವಾರ್ಧದಲ್ಲಿ ಒಲವಿನ ಕವನಗಳನ್ನು ಬರೆದರಾದರೆ, ಉತ್ತರಾರ್ಧದಲ್ಲಿ ಆಧ್ಯಾತ್ಮಿಕ ಚಿಂತನೆಯ ಕಡೆ ಸಾಗಿದರು. ಅವರು ೧೪೦೦ ಕ್ಕೂ ಹೆಚ್ಚು ಕವನ ಬರೆದರು. ಹಲವರು ಅವರ ನಾಕುತಂತಿಯ ಕವನಗಳು ಅರ್ಥಹೀನವೆಂಬಂತೆ ಟೀಕಿಸಿದರು. ಆದರೆ ಅರ್ಥ ನಮಗೆ ತಿಳಿಯದೇ ಇದ್ದಾಕ್ಷಣ ಅದರಲ್ಲಿ ಅರ್ಥವೇ ಇಲ್ಲ ಎಂದು ಹೇಳುವದು ಸರಿಯಲ್ಲ. ಪ್ರತಿಯೊಂದು ಶಬ್ದಕ್ಕೂ ಅವರು ಅರ್ಥ ವಿವರಣೆ ಕೊಡುತ್ತಿದ್ದರು. ಆ ಮಟ್ಟಕ್ಕೆ ಏರುವದು ನಮಗೆ ಸಾಧ್ಯವಾಗದೇ ಇದ್ದರೆ ಅದು ಬೇಂದ್ರೆಯವರ ತಪ್ಪಲ್ಲವಲ್ಲ.
ಬೇಂದ್ರೆಯವರನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಆದರೆ ಅವರನ್ನು ಪೂರ್ತಿ ಅರ್ಥ ಮಾಡಿಕೊಂಡಿದ್ದೇನೆನ್ನುವ ಧೈರ್ಯ ನನಗೆ ಇಲ್ಲ. ಅವರು ಹಿಮಾಲಯ. ನಾನು ಅದರ ತಳದಲ್ಲಿ ನಿಂತು ನೋಡಿದವನು. ನನ್ನ ಕಣ್ಣಿಗೆ ಎಷ್ಟು ಕಂಡಿದೆಯೋ ಅಷ್ಟೇ ಲಾಭ. ಅವರೊಂದಿಗೆ ಮಾತನಾಡುವಾಗೆಲ್ಲ ಅವರು ನನಗೆ ನೀಡಿದ ಮಾರ್ಗದರ್ಶನದ ಮಾತುಗಳು ಮಾತ್ರ ನನ್ನ ಬಳಿ ಇರುವ ಕಾದಿಟ್ಟ ಅಮೂಲ್ಯ ನಿಧಿ !


ಮೇಘದೂತ

ಕಾಳಿದಾಸನ ಪ್ರಸಿದ್ಧ ಮೇಘದೂತ ಕಾವ್ಯವನ್ನು ಆ ಮೂಲಕಾವ್ಯದ ಸತ್ವ ಸೌಂದರ್ಯಗಳಿಗೇನೂ ಕಡಿಮೆಯಿಲ್ಲದಂತೆ ಕನ್ನಡಕ್ಕಿಳಿಸಿದವರು ಅಂಬಿಕಾತನಯದತ್ತರು. ( ಡಾ. ದ. ರಾ. ಬೇಂದ್ರೆ)
ಕಾಳಿದಾಸನ ಮೂಲ ಕಾವ್ಯದಲ್ಲಿ ಮೇಘದೂತ ಮಾಡಿದ ಪ್ರವಾಸದ ದಾರಿಯನ್ನೂ ಗುರುತಿಸಲಾಗಿದ್ದು ಅದರಲ್ಲಿ ಪಂಚವಟಿ ( ರಾಮಗಿರಿ) , ಉಜ್ಜೈನಿ, ವಿದಿಶಾ, ದೇವಗಿರಿ, ಕುರುಕ್ಷೇತ್ರ, ಅಲಕಾಪುರ, ಮಾನಸ ಸರೋವರಗಳು ಸಿಗುತ್ತಿದ್ದು ರೇವತಿ, ನಿರ್ವಿಂದ್ಯಾ, ಗಂಗಾ, ಗಂಭೀರಾ, ಸರಸ್ವತಿ,ನೇತ್ರಾವತಿ ನದಿಗಳೂ ಸಿಗುತ್ತವೆ‌.
ಈ ಕಾವ್ಯದಲ್ಲಿ ಪೂರ್ವ ಮೇಘ, ಉತ್ತರ ಮೇಘಗಳೆಂಬ ಎರಡು ಭಾಗಗಳಿವೆ. ಒಬ್ಬ ಯಕ್ಷ ತನ್ನ ನಲ್ಲೆಯನ್ನು ನೆನಪಿಸಿಕೊಂಡು ಅವಳಿಗೆ ಮೇಘದ ಮೂಲಕ ಸಂದೇಶವನ್ನು ಕಳಿಸುವದೇ ಈ ಕಾವ್ಯದ ಸಾರಾಂಶ.
ಒಬ್ಬ ಯಕ್ಷ ತನ್ನೊಡೆಯನಿಂದ ನಲ್ಲೆಯನು ಅಗಲಿ ಬೆಂದು

ಶಪಿತ ವರುಷವನು ಕಳೆಯಲಾಗದೇ ಮಹಿಮೆ ಕಳೆದುಕೊಂಡು

ಜನಕತನಯೆ ಮಿಂದುದಕಗಳಲಿ ತಣ್ನೆಳಲ ಅಂಗಳಲ್ಲಿ

ವಸತಿ ನಿಂದನೋ ರಾಮಗಿರಿಯ ಪುಣ್ಯಾಶ್ರಮಂಗಳಲ್ಲಿ

ಹೀಗೆ ಆರಂಭವಾಗುವ ಈ ಕಾವ್ಯವನ್ನು ಈವರೆಗೆ ಓದದೇ ಇದ್ದವರು ಮೂಲವನ್ನಲ್ಲದಿದ್ದರೂ ಈ ಅನುವಾದವನ್ನು ಓದಿ ಅದರ ಸೊಗಸನ್ನು ಅರಿಯಬೇಕು.

ಎಲ್. ಎಸ್. ಶಾಸ್ತ್ರಿ

Leave a Reply

Back To Top