ಅಂಕಣ ಸಂಗಾತಿ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ನಾಳಿನ ನಂಬಿಕೆ
ನೆಮ್ಮದಿ. ಪ್ರತಿಯೊಬ್ಬ ಮಾನವನ ಬದುಕಿನ ಆಯ್ಕೆ ಮತ್ತು ಜೀವನದ ನಿತ್ಯದ ಹುಡುಕಾಟ ಇದೇ ಅಲ್ಲವೇ? ಕೌಟುಂಬಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ವೈಚಾರಿಕ, ಮಾನಸಿಕ ಎಲ್ಲಾ ವಿಷಯಗಳಲ್ಲೂ ಮಾನವನ ಗುರಿ ನೆಮ್ಮದಿ ಒಂದೇ. ಅದಕ್ಕಾಗಿ ನಿತ್ಯ ಹೋರಾಟ, ಬಡಿದಾಟ, ಹುಡುಕಾಟ, ಗುದ್ದಾಟ. ಮಾನವ ಜೀವನ ಕೇವಲ ಪ್ರಾಣಿ, ಪಕ್ಷಿಗಳ ಹಾಗೆ ಹುಟ್ಟು, ಬೆಳವಣಿಗೆ, ಆಹಾರ ಸೇವನೆ, ಸಾವು, ಇದಿಷ್ಟೇ ಅಲ್ಲ. ಬದಲಾಗಿ ಸಾಧನೆ, ಹುಡುಕಾಟ, ಗುರಿಯ ತಲುಪಲು ಸೆಣಸಾಟ. ಇದರಲ್ಲಿ ನೆಮ್ಮದಿಯ ಹುಡುಕಾಟ.
ಹುಟ್ಟಿದ ಮಾನವನಿಗೆ ನಿಂದನೆ, ಹಗೆತನದ ನೋವು, ಸಂಕಟ, ದೈಹಿಕ ತೊಂದರೆಗಳು, ಮಾನಸಿಕ ನೋವು, ಕಣ್ಣೀರು, ತುಳಿತ, ಕೀಳಾಗಿ ಕಂಡವರಿಂದ ಬೇಸರ, ಇತರರ ಹೊಟ್ಟೆಕಿಚ್ಚಿನಿಂದ ಮಾನಸಿಕವಾಗಿ ಬಳಲುವಿಕೆ, ಕಷ್ಟ ಕೊಡುವ ಬಂಧುಗಳು, ನೆರೆಹೊರೆ, ಗೆಳೆಯರು, ಕರುಬುವ ಪರಿಚಯಸ್ಥರ ಚುಚ್ಚು ಮಾತುಗಳ ನೋವು ಇದೆಲ್ಲಾ ಸಹಜ. ಆದರೆ ಇದನ್ನೆಲ್ಲ ಮನದಲ್ಲಿ ಹಾಕಿಕೊಳ್ಳದೆ ಏನೇ ಕಷ್ಟ ಬಂದರೂ ಮೆಟ್ಟಿ ನಿಂತು ಬಾಳುವೆ ಎಂಬ ಮಾನಸಿಕ ಸ್ಥಿತಿ ತಲುಪಿ ಅಲ್ಲಿ ನೆಮ್ಮದಿ ಕಾಣಬೇಕಿದೆ.
ಬದುಕು ನಿಂತ ನೀರಲ್ಲ. ಸದಾ ಪ್ರವಹಿಸುತ್ತಿರುವ ನದಿಯಂತೆ. ನಿಂತಲ್ಲಿ ನಿಲ್ಲದೆ ಓಡುತ್ತಾ ಇರಬೇಕು. ತರಗೆಲೆಗಳು, ಒಣ ಮರಗಳು, ಬೇಕಾದ ಬೇಡದ ಹಲವಾರು ವಸ್ತುಗಳು ಬಿದ್ದೋ, ಯಾರೋ ಬಿಸಾಕಿಯೋ ನಮ್ಮ ಜೊತೆ ಸೇರಿಕೊಳ್ಳುತ್ತವೆ. ನಮಗೆ ಬೇಡದಿದ್ದರೂ ನಮ್ಮೊಡನೆ ಬರುತ್ತವೆ. ಅದನ್ನೆಲ್ಲ ಬದಿಗಿರಿಸಲು ಸಾಧ್ಯ ಇಲ್ಲ. ಎಲ್ಲದರ ಜೊತೆಯೇ ಸಾಗುತ್ತಾ, ಬೇಡದ್ದನ್ನು ದಡಕ್ಕೆ ಸೇರಿಸಲು ಪ್ರಯತ್ನಿಸುತ್ತಾ ತನ್ನ ಪಯಣವನ್ನು ನಿಲ್ಲಿಸದೆ, ನೋವು – ನಲಿವುಗಳಲ್ಲಿ ಹಿಗ್ಗದೆ ಕುಗ್ಗದೆ ಕಳೆದ ಕ್ಷಣಗಳ ಹಿಂದೆ ಬಿಟ್ಟು ಒಂಟಿಯಾಗಿ ಮುನ್ನಡೆಯುವ ಸಾಹಸ ಮಾಡಬೇಕು. ನೆಮ್ಮದಿ ಸಮುದ್ರದ ಹಾಗೆ. ಎಲ್ಲಾ ನದಿಗಳೂ ಅದೇ ಸಮುದ್ರವನ್ನು ಸೇರಲು ಹಂಬಲಿಸುತ್ತಾ ಓಡುತ್ತಿರುತ್ತವೆ. ಆ ನೆಮ್ಮದಿಯ ಸಾಗರ ಸೇರುವುದು ಅಷ್ಟು ಸುಲಭ ಅಲ್ಲ. ಅಲ್ಲಿ ನಡು ನಡುವೆ ದಾರಿ ಇಲ್ಲದೆ ನಾವೇ ಕಲ್ಲು ಮುಳ್ಳುಗಳ ನಡುವೆ ದಾರಿ ಮಾಡಿಕೊಂಡು ನುಗ್ಗಬೇಕಾಗುತ್ತದೆ. ಅಲ್ಲಿ ಸಿಗುವ ಕಲ್ಲು, ಮರ, ಬೆಟ್ಟಗಳು ಮುಂದೆ ಸಾಗಲು ತಡೆ ಒಡ್ಡುತ್ತವೆ. ಅವುಗಳನ್ನು ಮೆಟ್ಟಿ ಮುಂದೆ ಸಾಗ ಬೇಕಿದೆ. ನೆಮ್ಮದಿಯ ಸಾಗರ ಸೇರಬೇಕಿದೆ.
ನೆಮ್ಮದಿ ಎಂಬ ಒಂದು ಪದಕ್ಕಾಗಿ ಹಿಂದಿನ ಕಾಲದಲ್ಲಿ ರಾಜರ ನಡುವೆ, ದೇಶಗಳ ನಡುವೆ ಯುದ್ಧ ಆಗುತ್ತಿತ್ತು. ಈಗಲೂ ದೇಶ, ರಾಜ್ಯ, ಜಿಲ್ಲೆ,. ಜನಾಂಗದ, ಧರ್ಮ, ಜಾತಿ, ಮನೆ, ಮನಗಳ ನಡುವೆ ಯುದ್ಧ ದೈಹಿಕವಾಗಿ ಹಾಗೂ ಅದಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ನಡೆಯುತ್ತಲೇ ಇದೆ. ಇದನ್ನು ಸರಿ ಮಾಡಿ ಎಲ್ಲರಿಗೂ ನೆಮ್ಮದಿ ಕೊಡುವ ದೇವರನ್ನು ಯಾರೂ ಇದುವರೆಗೂ ನೋಡಿಲ್ಲ. ಮೇಲೆ ಇದ್ದಾನೆ ಎಂದು ನಂಬಿ ಬದುಕುತ್ತಿದ್ದೇವೆ ಅಷ್ಟೇ. ದೇವರೇ ಇಲ್ಲ ಎನ್ನುವ ನಾಸ್ತಿಕನೂ ಬದುಕಿದ್ದಾನೆ. ನಮ್ಮ ಪ್ರಾರ್ಥನೆಯನ್ನು ದೇವರು ಆಲಿಸುತ್ತಾನೆ ಮತ್ತು ನಮಗೆ ಒಳ್ಳೆಯದನ್ನು ಮಾಡುತ್ತಾನೆ ಎಂದು ನಂಬುವ ನಾವು ನಮ್ಮ ಕೆಟ್ಟ ಕೆಲಸಗಳನ್ನು ದೇವರು ನೋಡುತ್ತಾನೆ ಮತ್ತು ಶಿಕ್ಷೆ ಕೊಡುತ್ತಾನೆ ಎಂಬ ಕಹಿ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ ಇದು ವಿಪರ್ಯಾಸ ಎಂದು ತಿಳಿದವರು ಹೇಳಿದ್ದಾರೆ. ಇಂದು ಬುದ್ಧಿ ಹೇಳುವವರು ಹೆಚ್ಚಾಗಿದ್ದಾರೆ, ಬರೆಯುವವರು ಹೆಚ್ಚಾಗಿದ್ದಾರೆ. ಆದರೆ ಓದುವವರು, ಹೇಳಿದಂತೆ ನಡೆಯುವವರು ಕಡಿಮೆ ಆಗಿದ್ದಾರೆ. ತಾವು ಹೇಳಿದ ಹಾಗೆ ಎಲ್ಲರೂ ನಡೆದುಕೊಂಡಿದ್ದರೆ ಇಂದು ಭಾರತ ಪ್ರಪಂಚದಲ್ಲೇ ಗ್ರೇಟ್ ಅನ್ನುವ ಸರ್ವ ಬಲಿಷ್ಠ ರಾಷ್ಟ್ರ ಆಗಿರುತ್ತಿತ್ತು. ಆದರೆ ನಾವಿನ್ನೂ ಮುಂದುವರಿಯುತ್ತಾ ಇರುವ ದೇಶದಲ್ಲಿ ಇದ್ದೇವೆ. ಇಲ್ಲಿ ಲಕ್ಷ ಲಕ್ಷ ಜನ ಇನ್ನೂ ಬಡತನ ರೇಖೆಗಿಂತ ಕೆಳಗೆ ಇದ್ದಾರೆ. ಪ್ರಪಂಚದ ಸಿರಿವಂತರು ಕೂಡಾ ಇಲ್ಲಿ ಇದ್ದಾರೆ. ಆದರೆ ಬಡವ ಶ್ರೀಮಂತ ಯಾರಿಗೂ ನೆಮ್ಮದಿ ಇಲ್ಲ. ಕಾರಣ ವಿದ್ಯೆ ಇದ್ದವನಿಗೆ ಬುದ್ಧಿ ಇಲ್ಲ, ಬುದ್ಧಿ ಇದ್ದವನಿಗೆ ವಿದ್ಯೆ ಇಲ್ಲ, ಎರಡೂ ಇರುವವರ ಬಳಿ ಹಣ ಇಲ್ಲ, ಹಣ ಇರುವವರಲ್ಲಿ ಗುಣ ಇಲ್ಲ. ಅವೆರಡೂ ಇರುವವರಲ್ಲಿ ಆರೋಗ್ಯ ಇಲ್ಲ. ಅದೂ ಇರುವ ಕಡೆ ನ್ಯಾಯ ಇಲ್ಲ! ಎಲ್ಲಾ ಇದ್ದರೂ ಯಾವುದಾದರೂ ಒಂದು ಕೊರತೆ ಇದ್ದು ಒಟ್ಟಾರೆ ಮಾನವ ಬದುಕಿಗೆ ನೆಮ್ಮದಿ ಇಲ್ಲ. ಅದೇ ನೆಮ್ಮದಿಗಾಗಿ ಮಾನವನ ಹುಡುಕಾಟ.
ಮನೆ ಇದೆ ಸ್ವಂತ, ವ್ಯಾಪಾರವೂ ಇದೆ. ಬೇಕಾದಷ್ಟು ಹಣವೂ ಇದೆ. ಮಕ್ಕಳಿದ್ದಾರೆ, ಮನೆಯಲ್ಲಿ ವಿದ್ಯೆ ಕಲಿತ ಹೆಣ್ಣು ಮಕ್ಕಳಿದ್ದಾರೆ. ಆದರೆ ಆರೋಗ್ಯ ಇಲ್ಲ. ಹೀಗೆ ಒಂದಲ್ಲಾ ಒಂದು ಸಮಸ್ಯೆ ನೆಮ್ಮದಿಯನ್ನು ಕೆಡಿಸಿ ಬದುಕನ್ನು ನೋವಿನ ಕಡೆ ತಳ್ಳಿ ಬಿಡುತ್ತದೆ. ಆಗ ಮನಸ್ಸು ದೇವರು, ದೈವಗಳನ್ನು ನೆನೆಯುತ್ತದೆ. ತನಗೆ ಬರದ ನೆಮ್ಮದಿ ಅವರಿಂದಲಾದರೂ ಬರುವ ಸಾಧ್ಯತೆ ಇದೆಯೇ ಎಂದು ನಂಬುವ ಮನಗಳು ಧ್ಯಾನ, ಪೂಜೆ, ಪುನಸ್ಕಾರದತ್ತ ವಾಲುತ್ತವೆ. ಇನ್ನು ಕೆಲವರು ಕರ್ತವ್ಯದಲ್ಲಿ ನಂಬಿಕೆ ಇಟ್ಟು ಅದರ ಹಿಂದೆಯೇ ಹೋಗುತ್ತವೆ. ನಂಬಿಕೆಯಿಂದ ಸ್ವಲ್ಪ ಮಟ್ಟಿನ ನೆಮ್ಮದಿ ಸಿಗುವ ಕಾರಣ ಮಾನವ ನಾಳಿನ ನಂಬಿಕೆಯ ಮೇಲೆ ಬದುಕುತ್ತಾನೆ.
ಸ್ವಲ್ಪ ಜನ ಪರರಲ್ಲಿ ನಂಬಿಕೆ ಇಟ್ಟು ಬದುಕಬೇಕು. ವ್ಯಾಪಾರೀ ಹಾಗೂ ಕೌಟುಂಬಿಕ ಬದುಕಲ್ಲಿ ಅದು ಬೇಕು. ಮಕ್ಕಳು ಪೋಷಕರನ್ನು, ಪೋಷಕರೂ ತಮ್ಮ ಮಕ್ಕಳನ್ನು ನಂಬಲೇ ಬೇಕಲ್ಲವೇ? ಆದರೂ ನಂಬಿಕೆಗೆ ದ್ರೋಹ ಎಸಗುವ ಸಮಯಗಳಲ್ಲಿ ನೆಮ್ಮದಿ ಕೆಡುತ್ತದೆ. ಆ ನಂಬಿಕೆ ಸತ್ತು ಹೋದಲ್ಲಿ ಬದುಕು ಶೂನ್ಯವಾಗುತ್ತದೆ. ಅಲ್ಲಿ ನೆಮ್ಮದಿಯೂ ಇರುವುದಿಲ್ಲ. ಮನಸ್ಸು ಭವಿಷ್ಯ ಹಾಗೂ ಭೂತದ ಬಗ್ಗೆ ಹೆಚ್ಚು ಆಲೋಚಿಸಿ ನೋವು ಪಡೆಯುತ್ತದೆ. ಕೈಯಲ್ಲಿ ಇರುವ ವರ್ತಮಾನವನ್ನು ನೆನೆಯದೆ ಅಲ್ಲಿನ ಸಂತಸವನ್ನು ಮರೆತು ಬಿಡುವವರೆ ಹೆಚ್ಚು. ಭವಿಷ್ಯ ಭೂತದ ಆಲೋಚನೆಯಲ್ಲಿ ವರ್ತಮಾನವನ್ನು ಕಳೆದುಕೊಳ್ಳಬಾರದು. ನಮ್ಮ ಕೈಯ್ಯಲ್ಲಿ ಇರುವುದು ಅದೊಂದೇ. ನಿನ್ನೆ ಜಾರಿ ಹೋಗಿದೆ, ನಾಳೆ ಬರಬೇಕಷ್ಟೇ. ಯಾವುದೇ ಕಾರಣಕ್ಕೂ ಇಂದಿನ ನೆಮ್ಮದಿಯನ್ನು ಕಳೆದುಕೊಳ್ಳ ಬಾರದು. ನಮ್ಮ ನೆಮ್ಮದಿಯನ್ನು ಬೇರೆಯವರಲ್ಲಿ ಹುಡುಕುವುದು ಕೂಡಾ ಆಗದ ಮಾತು. ನಮ್ಮ ನೆಮ್ಮದಿಯ ರೂವಾರಿಗಳು ನಾವೇ.
ನೆಮ್ಮದಿಯನ್ನು ಹಣ ಕೊಟ್ಟು ಕೊಳ್ಳಲು ಸಾಧ್ಯ ಇಲ್ಲ. ಧನಿಕನಿಗೂ ಬಡವನಿಗೂ ಒಂದಲ್ಲಾ ಒಂದು ವಿಚಾರದಲ್ಲಿ ನೆಮ್ಮದಿ ಇಲ್ಲದೆ ನಿದ್ದೆ ಬಾರದು. ಮನೆಯಲ್ಲಿ ಇದ್ದ ಚಿನ್ನ ಹಣವನ್ನು ರಕ್ಷಿಸುವ ಚಿಂತೆ, ತಿಂದ ಊಟ ಅರಗಿಸಿಕೊಳ್ಳುವ , ಹೊಟ್ಟೆ ಕರಗಿಸಿ ಕೊಳ್ಳುವ ಚಿಂತೆ ಹಲವರದಾದರೆ ಹೊಟ್ಟೆ ತುಂಬಿಸುವ ಚಿಂತೆ, ಆರೋಗ್ಯದ ಚಿಂತೆ, ಓದಿನ ಚಿಂತೆ , ಹಣದ ಕೊರತೆಯ ಚಿಂತೆ ಇನ್ನು ಕೆಲವರದು. ಒಟ್ಟಿನಲ್ಲಿ ಕಾಣದ ದೇವರು ಚಿತೆಗೆ ಸೇರುವ ಮೊದಲು ಅನುಭವಿಸಲು ಹಲವಾರು ಚಿಂತೆ ಕೊಟ್ಟೇ ಕೊಡುತ್ತಾನೆ. ಅದನ್ನು ಮೆಟ್ಟಿ ನಾವು ನಿಲ್ಲಬೇಕು ಅಷ್ಟೇ.
ಚಿಂತೆಗಳು ಸರ್ವೇ ಸಾಮಾನ್ಯ. ಗುರಿ ಸೇರುವ ತವಕವೂ ಅಂತೆಯೇ. ಎಷ್ಟು ಸಿಕ್ಕಿದರೂ ಸಾಲದು ನಮಗೆ. Aim should be High ಅಲ್ವಾ? ಅಲ್ಲೂ ಒಂದು ನೆಮ್ಮದಿ ಕಾಣೋಣ ಅಷ್ಟೇ. ನಾಲ್ಕು ದಿನದ ಬದುಕು. ನೆಮ್ಮದಿಯಾಗಿ ಸ್ಸಾಯುವ ಮೊದಲು ನೆಮ್ಮದಿಯಿಂದ ಬದುಕೋಣ ಅಲ್ಲವೇ? ನೀವೇನಂತೀರಿ?
ಹನಿಬಿಂದು
ಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು. ವಿಳಾಸ – ಸ ಪ ಪೂರ್ವ ಕಾಲೇಜು ಮೂಲ್ಕಿ 574154